Sunday, July 25, 2010

1

ಎಂ.ಆರ್.ಐ. ಯಂತ್ರದೊಳಗೆ . . . .

 • Sunday, July 25, 2010
 • ಡಾ.ಶ್ರೀಧರ ಎಚ್.ಜಿ.
 • ಮೇ ೨೭ರ ಮುಂಜಾನೆ ಏಳು ಗಂಟೆಗೆ ರಾಮಣ್ಣನ ಕಾರಿನಲ್ಲಿ ಮಂಗಳೂರಿನ ಕಡೆಗೆ ಹೊರಟೆವು. ಸರಿಯಾಗಿ ೮.೩೦ಕ್ಕೆ ಬಲ್ಮಠ ಸ್ಕ್ಯಾನಿಂಗ್ ಸೆಂಟರ್‌ ತಲುಪಿದೆವು. ೮.೪೫ ಆಗುವಾಗ ಬಂದ ವ್ಯಕ್ತಿಯೊಬ್ಬರು ನಮ್ಮ ಪ್ರವರವನ್ನೆಲ್ಲ ವಿಚಾರಿಸಿ ಅದ್ಯಾವುದೋ ರಿಜಿಸ್ಟರ್‌ನಲ್ಲಿ ಒಂದೈದು ನಿಮಿಷ ತಲೆ ಹುದುಗಿಸಿ ಕುಳಿತ. ಅನಂತರ 'ನಿಮಗೆ ಸ್ಕ್ಯಾನ್ ಮಾಡಲು ಇಲ್ಲಿ ಸಮಯ ನಿಗದಿಯಾಗಿಲ್ಲ' ಎಂದು ಹೊಸ ರಾಗವನ್ನು ಆರಂಭಿಸಿದ. ನಿನ್ನೆ ಸಂಜೆ ನನ್ನ ಎದುರೇ ಡಾ. ಪ್ರದೀಪ್‌ರು ಮಾತನಾಡಿ ಮುಂಜಾನೆ ೯ ಗಂಟೆಗೆ ಸಮಯವನ್ನು ನಿಗದಿ ಪಡಿಸಿದ್ದರು. ಈತ ೧೨.೩೦ರ ನಂತರ ನಿಮಗೆ ಸಮಯ ಸಿಗಬಹುದು ಎಂದು ಹೇಳಿ ಒಳಗೆಲ್ಲೋ ಮಾಯವಾದ. ಇದಾಗಿ ಒಂದೈದು ನಿಮಿಷವಾಗುವಾಗ ಹೊರಗೆ ಪ್ರತ್ಯಕ್ಷನಾದ ಆ ವ್ಯಕ್ತಿ ಅದ್ಯಾರಲ್ಲಿಯೋ ಮೊಬೈಲಿನಲ್ಲಿ ಮಾತನಾಡಿದ. ಅನಂತರ '೯ ಗಂಟೆಗೆ ಬರಬೇಕಾದವರು ಬಂದಿಲ್ಲ. ನೀವು ಬನ್ನಿ' ಎಂದು ಒಳಗೆ ಕರೆದ. ರಾತ್ರಿ ನಾವು ಸಮಯ ನಿಗದಿ ಪಡಿಸಿದ್ದು ಆತನಿಗೆ ಗೊತ್ತಿರಲಿಲ್ಲವೆಂದು ಕಾಣುತ್ತದೆ. ಈಗ ಮುಖವುಳಿಸಿಕೊಳ್ಳಲು ಏನೋ ನೆಪ ಹೇಳಿದಂತೆ ಕಂಡಿತು. ಅಂತೂ ಬದುಕಿದೆಯಾ ಬಡಜೀವವೇ ಎಂದು ಕಾಲೆಳೆದುಕೊಂಡು ಒಳಗೆ ಹೋದೆ.

  ಇಡಿಯ ಕೊಠಡಿಯ ನಡುವೆ ಒಂದು ದೊಡ್ಡ ಯಂತ್ರವಿತ್ತು. ಅದರಿಂದ ಹೊರಗೆ ಹಾಸಿಗೆಯಂತೆ ಎಂದು ಟ್ರಾಲಿ ಹೊರಬಂದಿತ್ತು. ಅವರು ಸೂಚಿಸಿದಂತೆ ಅದರ ಮೇಲೆ ಕಾಲು ನೀಡಿ ಮಲಗಿದೆ. ಅನಂತರ ನನ್ನ ಕಾಲುಗಳನ್ನು ಬೆಲ್ಟಿನಿಂದ ಬಂಧಿಸಿದರು. ಸ್ವಲ್ಪವೂ ಅಲ್ಲಾಡಬಾರದು ಎಂದು ತಾಕೀತು ಮಾಡಿದರು. ನನ್ನ ಮಗ ಚಂದನ್‌ಗೆ ಅಲ್ಲಿಯೇ ನಿಂತು ಸ್ಕ್ಯಾನ್ ಆಗುವುದನ್ನು ನೋಡಬೇಕೆಂಬ ಅಪೇಕ್ಷೆ ಇತ್ತು. ಆದರೆ ಇಲ್ಲಿ ಯಾರೂ ಇರುವುದಿಲ್ಲವೆಂದು ಹೇಳಿ ಆತ ಎಲ್ಲರನ್ನೂ ಹೊರಗೆ ಕಳಿಸಿದ. ಆತನೂ ಬಾಗಿಲು ಹಾಕಿ ಹೊರನಡೆದ. ಕೊಠಡಿಯಲ್ಲಿ ಯಂತ್ರಗಳ ನಡುವೆ ನಾನೊಬ್ಬನೇ! ಒಂದೆರಡು ನಿಮಿಷದ ನಂತರ ನಾನು ಮಲಗಿದ ಬೆಡ್ ನಿಧಾನವಾಗಿ ಯಂತ್ರದ ಒಳಗೆ ಚಲಿಸಲಾರಂಭಿಸಿತು. ಒಂದು ರೀತಿ ಗುಹೆಯ ಒಳಗೆ ಹೋಗುತ್ತಿರುವ ಅನುಭವ. ನನಗೆ ಪಕ್ಕನೆ ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರ ಕಥೆಯಲ್ಲಿ ಬರುವ ಗುಹೆಯ ನೆನಪಾತು. ಆದರೆ ಆ ಗುಹೆಗೆ ಬಂಡೆಯ ಬಾಗಿಲಿತ್ತು. ಇಲ್ಲಿ ಇದು ತೆರೆದ ಯಂತ್ರ. ಕಾಲು, ಮೊಳಕಾಲು, ಸೊಂಟ, ಎದೆ, ಕುತ್ತಿಗೆಯವರೆಗೆ ಹೋಗಿ ಟ್ರಾಲಿ ನಿಂತಿತು. ತಲೆಯೊಂದು ಹೊರಗೆ ಉಳಿತು. ಅಬ್ಬ, ತಲೆಯಾದರೂ ಉಳಿಯಿತಲ್ಲ ಎಂದುಕೊಂಡೆ.

  ನಾನು ಮಲಗಿದಲ್ಲಿಂದಲೇ ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಯಂತ್ರದ ಒಳಗೆ ಲೈಟ್ ಉರಿಯುತ್ತಿತ್ತು. ಸುತ್ತಲೂ ನಾಲ್ಕಾರು ವಿವಿಧ ಬಣ್ಣದ ದೀಪಗಳು. ಒಂದಷ್ಟು ವೈರುಗಳು. ಎ.ಸಿ. ಹಾಕಿದ್ದರ ಪರಿಣಾಮವಾಗಿ ಕೊಠಡಿ ತಂಪಾಗಿತ್ತು. ಇಷ್ಟಾಗುವಾಗ ದಡ್ ಎಂದು ಒಂದು ಸದ್ದಾಯಿತು. ಏನಿರಬಹುದು ಎಂದು ಆಲೋಚಿಸುವಷ್ಟರಲ್ಲಿ 'ಕರ್ ಕೊರ್' ಎಂಬ ಶಬ್ದ ಆರಂಭವಾತು. ನಡು ನಡುವೆ ಮಲಗಿದ ಬೆಡ್ ತುಸು ಹಿಂದೆ ಮುಂದೆ ಚಲಿಸುತ್ತಿತ್ತು. ಒಂದಷ್ಟು ಹೊತ್ತು ಇದರದೇ ಪುನರಾವರ್ತ. ಮುಕ್ಕಾಲು ಗಂಟೆ ಆಗಿರಬಹುದು.ನನಗೆ ಯಾವಾಗ ಇದು ಮುಗಿಯುತ್ತದೆ ಎಂದು ಅನಿಸತೊಡಗಿತು. ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ಯಂತ್ರದ ಒಳಗೆ ಮಲಗಿ ಕಾಲ ಕಳೆಯುವುದು ಸುಲಭವಲ್ಲ. ಅಲ್ಲಾಡುವಂತಿಲ್ಲ. ಜನರ ಸುಳಿವಿಲ್ಲ. ಈ ನಡುವೆ ಕರೆಂಟು ಹೋದರೆ ಏನು ಗತಿ? ಶಾರ್ಟ್ ಸರ್ಕ್ಯೂಟ್ ಆದರೆ ನನ್ನ ಕತೆ ಹೇಗೆ? ಎಂಬ ಬೇಡದ ಸಂಗತಿಗಳು ತಲೆಯಲ್ಲಿ ಹೊಕ್ಕು ಕೊರೆಯತೊಡಗಿದ್ದವು. ಸ್ಕ್ಯಾನ್ ಮಾಡುವ ವ್ಯಕ್ತಿ ಹೊರಗೆ ಏನು ಮಾಡುತ್ತಿರಬಹುದು ಎಂಬ ಆಲೋಚನೆ ಎಡೆಯಲ್ಲಿ ಬಂತು. ಬಹುತೇಕ ಆತ ಕಂಪ್ಯೂಟರ್ ಮೂಲಕವೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದನೆಂದು ಕಾಣುತ್ತದೆ. ಸ್ಕ್ಯಾನಿಂಗ್ 'ವರದಿ ಸಕಾರಾತ್ಮಕವಾಗಿರಲಿ. ಆಪರೇಶನ್ ಆಗುವ ಸಂದರ್ಭ ಬರದಿರಲಿ' ಎಂದು ಧ್ಯಾನಿಸುತ್ತಾ ಮಲಗಿದೆ.

  ಅಂತೂ ೪೫ ನಿಮಿಷದ ಯಂತ್ರದೊಳಗಿನ ವಾಸ ಮುಗಿತು. ಅರ್ಧ ಗಂಟೆಯಲ್ಲಿ ವರದಿ ನಮ್ಮ ಕೈಗೆ ಬಂತು. ಇದನ್ನು ಹಿಡಿದುಕೊಂಡು ೧೧ ಗಂಟೆಗೆ ಪುತ್ತೂರಿನ ಕಡೆಗೆ ಹೊರಟೆವು. ದಾರಿಯಲ್ಲಿ ಕುತೂಹಲಕ್ಕೆ ವರದಿಯನ್ನು ಬಿಡಿಸಿ ಓದಿದರೆ ಒಂದಕ್ಷರವೂ ಅರ್ಥವಾಗಲಿಲ್ಲ. ಇಡೀ ವರದಿಯಲ್ಲಿ ನನಗೆ ಅರ್ಥವಾಗಿದ್ದು 'ನಾರ್ಮಲ್' ಮತ್ತು 'ಚೇಂಜ್' ಎಂಬ ಎರಡು ಶಬ್ದಗಳು ಮಾತ್ರ.


  ೧೨.೩೦ರ ಹೊತ್ತಿಗೆ ನಾವು ಮಹಾವೀರ ಮೆಡಿಕಲ್ ಸೆಂಟರ್‌ಗೆ ತಲುಪಿದೆವು. ಪುನ: ನಿನ್ನೆ ಮಲಗಿದ ಮೈನರ್ ಒ.ಟಿ.ಯಲ್ಲಿ ಮಲಗಿಸಿದರು. ಅದೇ ಲೀಸ ಸಿಸ್ಟರ್ ಮತ್ತು ದೀನ ಇದ್ದರು. ಸುಮಾರು ಒಂದೂವರೆಯ ಹೊತ್ತಿಗೆ ಬಂದ ಡಾ. ಪ್ರದೀಪ್ ಸ್ಕ್ಯಾನ್‌ನ ವರದಿಯನ್ನು ನೋಡಿ ಆಪರೇಶನ್ ಮಾಡುವ ಅಗತ್ಯವನ್ನು ವಿವರಿಸಿದರು. ಸಂಜೆ ಡಾ. ಅರವಿಂದರು ಬಂದ ನಂತರ ಆಪರೇಶನ್‌ನ ದಿನ ಮತ್ತು ಸಮಯವನ್ನು ನಿಗದಿಗೊಳಿಸುವ. ನೀವು ಆಸ್ಪತ್ರೆಗೆ ಸೇರ್ಪಡೆಯಾಗಿ ಎಂದು ಸೂಚಿಸಿ ಹೋದರು. ಆದರೆ ಇಡೀ ಆಸ್ಪತ್ರೆಯಲ್ಲಿ ಅಂದು ಒಂದೇ ಒಂದು ಕೊಠಡಿ ಖಾಲಿಯಿರಲಿಲ್ಲ. ಸಂಜೆಯವರೆಗೂ ಮೈನರ್ ಒ.ಟಿ.ಯಲ್ಲಿ ಮಲಗಿ ಸಮಯವನ್ನು ತಳ್ಳಿದೆ. ೫ ಗಂಟೆಯ ಹೊತ್ತಿಗೆ ಬಂದ ಡಾ. ಅರವಿಂದರು ನಾಳೆ ಶಸ್ತ್ರಚಿಕಿತ್ಸೆ ಮಾಡುವ. ಸಮಯವನ್ನು ಮತ್ತೆ ಹೇಳುತ್ತೇನೆ ಎಂದರು. ಇಲ್ಲಿಂದ ಅಪಘಾತದ ಪರಿಣಾಮದ ಇನ್ನೊಂದು ಘಟ್ಟ ಆರಂಭವಾತು. ಅದುವರೆಗೂ ನಾವು ಊರಿನಿಂದ ಯಾರೂ ಬರುವ ಅಗತ್ಯವಿಲ್ಲವೆಂದು ಭಾವಿಸಿದ್ದೆವು. ಈಗ ಊರಿಗೆ ಸಂಪರ್ಕಿಸಿದ ನನ್ನ ಪತ್ನಿ ಸತೀಶ ಭಾವನನ್ನು ಬರಲು ಸೂಚಿಸಿದಳು. ಅಂತೂ ಸಂಜೆ ೫.೩೦ರ ಹೊತ್ತಿಗೆ ೧೧೦ರ ಕೊಠಡಿಗೆ ನನ್ನನ್ನು ವರ್ಗಾಸಿದರು. ಸಣ್ಣಪುಟ್ಟ ಕಾರಣಗಳಿಗಾಗಿ ಆಸ್ಪತ್ರೆಗೆ ಹೋಗಿದ್ದರೂ ನಾನೇ ರೋಗಿಯಾಗಿ ಎಂದೂ ಮಲಗಿರಲಿಲ್ಲ. ನಾನು ೧೫ ವರ್ಷ ವಿವೇಕಾನಂದ ಹಾಸ್ಟೆಲ್‌ನ ವಾರ್ಡನ್ ಆಗಿರುವಾಗ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಸೇರಿಸಿ ರಾತ್ರಿ ಅಲ್ಲಿಯೇ ಕಾಲಹರಣ ಮಾಡಿದ್ದಿತ್ತು. ಆದರೆ ನಾನೇ ರೋಗಿಯಾಗಿ ಮಲಗುವ ಸಂದರ್ಭ ಬಂದಿರಲಿಲ್ಲ. ಹೀಗಾಗಿ ಜೀವನದಲ್ಲಿ ಮೊದಲ ಸಲ ರೋಗಿಯಾಗಿ ನಾನು ಆಸ್ಪತ್ರೆಯಲ್ಲಿ ಮಲಗಿದ್ದೆ!.

  ಮುಂದಿನ ಭಾಗ ಕೊಠಡಿ 110 . . . .
  Read more...

  Thursday, July 15, 2010

  3

  ಅಜ್ಞಾತವಾಸಕ್ಕೆ ಮುನ್ನುಡಿ . . . .

 • Thursday, July 15, 2010
 • ಡಾ.ಶ್ರೀಧರ ಎಚ್.ಜಿ.
 • ಆಸ್ಪತ್ರೆಯ ಹೊರಗಡೆ ಕುಳಿತು ಅರ್ಧ ಗಂಟೆಯಾಗುತ್ತಾ ಬಂದರೂ ವೈದ್ಯರನ್ನು ಭೇಟಿಯಾಗುವ ಅವಕಾಶ ಬರಲಿಲ್ಲ. ಮತ್ತೊಮ್ಮೆ ಅರುಣ್ ಪ್ರಕಾಶ್ ಹೋಗಿ ವಿಚಾರಿಸಿದ ಮೇಲೆ ಮೈನರ್ ಓ.ಟಿ.ಗೆ ಬರಲು ತಿಳಿಸಿದರು. ನಾನು ಕಾಲೆಳೆದುಕೊಂಡು ಹೋಗಿ ಬೆಡ್ಡಿನ ಮೇಲೆ ಮಲಗಿದೆ. ಡಾ. ಪ್ರದೀಪರು ಬಂದು ಕಾಲನ್ನು ಒಮ್ಮೆ ಮಡಚಿದರು. ಮೊಳಕಾಲಿನ ಕೆಳಗೆ ನಾಲ್ಕಾರು ಸಲ ಒತ್ತಿದರು. ಅನಂತರ ಎಕ್ಸ್‌ರೇ ತೆಗೆಸಲು ಸೂಚಿಸಿ ಹೋದರು. ತುಸು ಹೊತ್ತಿನ ನಂತರ ಮತ್ತೆ ಬಂದು ಎಕ್ಸ್‌ರೇ ಪರೀಕ್ಷಿಸಿ ಕಾಲಿನಲ್ಲಿ ವ್ಯತ್ಯಯವಾಗಿರುವುದನ್ನು ಸೂಚಿಸಿ ಆಪರೇಶನ್ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸೂಚಿಸಿದರು. ಸಂಜೆ ಡಾ. ಅರವಿಂದ್ ಬರುತ್ತಾರೆ. ಅವರ ಅಭಿಪ್ರಾಯವನ್ನು ಒಮ್ಮೆ ಕೇಳಿ ನೋಡುವ ಎಂದು ಅವರೇ ಸೂಚಿಸಿದರು. ಇಷ್ಟಾಗುವಾಗ ಇಳಿಹಗಲು ೩.೩೦ ರ ಸಮಯ. ಇಷ್ಟರವರೆಗೂ ಮನೆಗೆ ಸುದ್ದಿ ಹೇಳಿರಲಿಲ್ಲ. ಯಾವುದೇ ಸಮಸ್ಯೆ ಇಲ್ಲವೆಂದಾದರೆ ಸೀದಾ ಮನೆಗೆ ಹೋಗಬಹುದಲ್ಲ ಎಂಬ ಅಪೇಕ್ಷೆ ನನ್ನದಾಗಿತ್ತು. ಆದರೆ ನನ್ನ ಲೆಕ್ಕಾಚಾರವನ್ನೆಲ್ಲ ತಲೆಕೆಳಗು ಮಾಡುವಂತೆ ಪರಿಸ್ಥಿತಿ ತಿರುವುಗಳನ್ನು ಪಡೆಯತೊಡಗಿತ್ತು. ಡಾ. ಅರವಿಂದರು ಸಂಜೆ ಬರುವವರೆಗೆ ನನಗೆ ಕಾಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಮನೆಗೆ ಮೊಬೈಲ್‌ನಲ್ಲಿ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿ ನನ್ನ ಪತ್ನಿ ಸವಿತಳಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಿ ತಣ್ಣಗೆ ಬೆಡ್ಡಿನ ಮೇಲೆ ಮಲಗಿದೆ.

  ತಲೆಯೊಳಗೆ ನೂರೆಂಟು ಆಲೋಚನೆಗಳು ಬಂದು ಆತಂಕವನ್ನು ಸ್ಟೃಸುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಸಿಸ್ಟರ್ ಲೀಸಾ ನನ್ನ ಆರೋಗ್ಯವನ್ನು ವಿಚಾರಿಸುತ್ತಾ ಧೈರ್ಯವನ್ನು ಹೇಳುತ್ತಿದ್ದರು. ಅವರೊಂದಿಗಿದ್ದ ದೀನಾ ಸಿಸ್ಟರ್ ನನ್ನ ಗಾಯವನ್ನು ಶುಚಿಗೊಳಿಸಿ ಸಣ್ಣದಾಗಿ ಒಂದು ಬ್ಯಾಂಡೇಜ್ ಕಟ್ಟಿದರು. ಇದರಿಂದಾಗಿ ನನಗೆ ರೋಗಿಯ ಕಳೆ(ಲಕ್ಷಣ) ಬಂತು. ಈ ಹೊತ್ತಿಗೆ ಅವರು ನನ್ನ ಪ್ರವರವನ್ನೆಲ್ಲ ವಿಚಾರಿಸಿದ್ದರು. ನಾನು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕನೆಂದು ಗೊತ್ತಾದ ಮೇಲೆ ನನ್ನ ಬಗೆಗೆ ಮತ್ತಷ್ಟು ಆಸಕ್ತಿ ವಹಿಸಿ ಸಾಂತ್ವನದ ಮಾತುಗಳನ್ನು ಹೇಳಿದರು. ಈ ನಡುವೆ ರೋಗಿಗಳು ಬರುವುದು, ಬ್ಯಾಂಡೇಜ್ ಹಾಕಿಸಿಕೊಂಡು ಹೋಗುವುದು ನಿರಂತರವಾಗಿ ನಡೆದಿತ್ತು.

  ಸುಮಾರು ನಾಲ್ಕೂವರೆಯ ಹೊತ್ತಿಗೆ ವಿವೇಕಾನಂದದ ಎಂ.ಬಿ.ಎ.ವಿದ್ಯಾರ್ಥಿನಿಯೊಬ್ಬಳು ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ಬಂದು ಸೇರಿದಳು. ಇದಾಗಿ ಸ್ವಲ್ಪ ಹೊತ್ತಿಗೆ ಐವತ್ತಕ್ಕಿಂತ ಹೆಚ್ಚು ಮಂದಿ ವಿದ್ಯಾರ್ಥಿಗಳು, ಒಂದಿಬ್ಬರು ಅಧ್ಯಾಪಕರು ಅಲ್ಲಿಗೆ ಬಂದು ತಲುಪಿದರು. ಈ ಹೊತ್ತಿಗೆ ಸರಿಯಾಗಿ ನನ್ನ ಮನೆಯಾಕೆ ಅಲ್ಲಿಗೆ ಬಂದಳು. ಈ ಜನ ಸಂದಣಿಯನ್ನು ನೋಡಿ ಆಕೆಗೆ ಆತಂಕ, ಕಳವಳ. ಕಣ್ಣಲ್ಲಿ ನೀರು ತುಂಬಿಕೊಂಡು ಒಳಗೆ ಬಂದು 'ಎಂತ ಆಗಿದೆ' ಎಂದು ವಿಚಾರಿಸಿದಳು. ಆದ ಎಲ್ಲಾ ಸಂಗತಿಯನ್ನು ಹೇಳಿ ಸಂಜೆಯವರೆಗೆ ಕಾಯುವ ಅನಿವಾರ್ಯತೆಯನ್ನು ಹೇಳಿದೆ. ಆಕೆಯ ಜೊತೆಗೆ ನನ್ನ ಮಗ ಚಂದನ್ ಸಹ ಬಂದಿದ್ದ. ಆತನಿಗೆ ಇದೆಲ್ಲ ಹೊಸತು. ಆಸ್ಪತ್ರೆಯಲ್ಲಿ ಈ ರೀತಿ ಇರುವುದನ್ನು ಆತ ಇದುವರೆಗೆ ನೋಡಿರಲಿಲ್ಲ. ಹೀಗಾಗಿ ಆತನ ಮುಖದಲ್ಲಿಯೂ ತುಸು ಆತಂಕವಿತ್ತು.

  ಮದುವೆ ಮನೆಗೆ ಹೊರಟವನು ನಡು ದಾರಿಯಲ್ಲಿಯೇ ಬಿದ್ದು ಆಸ್ಪತ್ರೆ ಸೇರಿದ್ದರಿಂದ ಮಧ್ಯಾಹ್ನದ ಊಟವೂ ಆಗಿರಲಿಲ್ಲ. ಸಂಜೆ ಐದು ಗಂಟೆಯಾಗಿತ್ತು. ಬೆಳಗ್ಗೆ ತಿಂಡಿ ತಿಂದ ನಂತರ ಇಷ್ಟು ಹೊತ್ತು ಹೇಗೆ ಉಪವಾಸ ಇದ್ದೆನೆಂಬುದು ನನಗೀಗಲೂ ಚೋದ್ಯದ ವಿಷಯ. ಹಸಿವನ್ನು ತಡೆದುಕೊಳ್ಳುವುದು ನನ್ನಿಂದ ಸಾಧ್ಯವಾಗದ ಸಂಗತಿ. ಅಲ್ಲಿಯೇ ಇದ್ದ ಕ್ಯಾಂಟಿನ್‌ನಿಂದ ಅವಲಕ್ಕಿ ತರಿಸಿ ಅದರ ಮೇಲೆ ಒಂದಷ್ಟು ಕಾಫಿಯನ್ನು ಸುರಿದು ತಿಂದೆ. ಅದಕ್ಕೊಂದು ವಿಚಿತ್ರ ರುಚಿ ಬಂತು. ಹಸಿವಿನ ಸಂಕಟ ತುಸು ಕಡಿಮೆಯಾತು.

  ಸ್ವಲ್ಪ ಹೊತ್ತು ಕುಳಿತೆ. ಮತ್ತೆ ಸ್ವಲ್ಪ ಹೊತ್ತು ಮಲಗಿದೆ. ಏನು ಮಾಡಿದರೂ ಹೊತ್ತು ಹೋಗುವುದಿಲ್ಲ. ನಿಧಾನವಾಗಿ ಸಂಜೆಯಾಗ ತೊಡಗಿತ್ತು. ಸಂಜೆ ಆರು ಗಂಟೆಯ ಹೊತ್ತಿಗೆ ಡಾ. ಅರವಿಂದರು ಬಂದರು. ನನಗೆ ಅವರ ಪರಿಚಯವಿರಲಿಲ್ಲ. ಆ ಹೊತ್ತಿಗೆ ಅವರು ನನ್ನ ಪಾಲಿಗೆ ದೇವರಾಗಿದ್ದರು. ಅವರಿಂದ ಬರುವ ಅಮೃತ ಸಮಾನವಾದ ದೇವವಾಕ್ಯವನ್ನು ಕೇಳಲು ಕಾತುರನಾಗಿದ್ದೆ. ಅವರು ನಾಲ್ಕಾರು ಸಲ ಕಾಲನ್ನು ಮಡಚಿ, ಬಿಚ್ಚಿ ಪರಿಶೀಲಿಸಿದರು. ಅನಂತರ ಅಲ್ಲಿಯೇ ಇದ್ದ ಎಕ್ಸ್‌ರೇಯನ್ನು ಪರಿಶೀಲಿಸಿ ಆಪರೇಶನ್ ಮಾಡಿಕೊಳ್ಳುವುದು ಅನಿವಾರ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರಸ್ವರೂಪವನ್ನು ಪಡೆಯುತ್ತದೆ ಎಂದು ಎಕ್ಸ್‌ರೇಯನ್ನು ನನಗೆ ತೋರಿಸಿ ವಿವರಿಸಿದರು. ನಿಜವಾದ ಸಮಸ್ಯೆ ಮೊಳಕಾಲು ಚಿಪ್ಪಿನ ಹಿಂಬದಿಯಲ್ಲಿತ್ತು. ಬೀಳುವ ರಭಸದಲ್ಲಿ ಎಲುಬಿಗೆ ಅಂಟಿದ ನರವೊಂದು ಎದ್ದು ಬಂದಿತ್ತು. ಬರುವಾಗ ಎಲುಬಿನ ಸಣ್ಣ ಚಕ್ಕಳಿಕೆಯನ್ನು ಕಿತ್ತುಕೊಂಡು ಬಂದಿತ್ತು. ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಸ್ಕ್ರೂ ಹಾಕಿ ಕೂರಿಸಿದರೆ ಸಮಸ್ಯೆ ಪರಿಹಾರವಾಗಬಲ್ಲದು. ಆದರೆ ಈ ಬಗೆಗೆ ಇನ್ನಷ್ಟು ಸ್ಪಷ್ಟವಾಗಬೇಕಿದ್ದರೆ ಮಂಗಳೂರಿಗೆ ಹೋಗಿ ಎಂ.ಆರ್.ಐ ಸ್ಕ್ಯಾನ್ ಮಾಡಿಸಿ ಬರುವಂತೆ ಸಲಹೆ ನೀಡಿದರು. ಇದು ನನ್ನ ಮಟ್ಟಿಗೆ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು.

  ನನಗೆ ಎಂ.ಆರ್.ಐ ಸ್ಕ್ಯಾನ್ ಎಂಬುದು ಹೊಸ ಸಂಗತಿ. ಅದನ್ನು ಮಾಡಿಸಲು ಮಾಡಬೇಕಾದ ಪೂರ್ವತಯಾರಿಯ ಬಗೆಗೆ ಮಾಹಿತಿಯಿರಲಿಲ್ಲ. ಹೀಗಾಗಿ ಡಾ. ಪ್ರದೀಪ್ ಅವರೇ ಆಸಕ್ತಿ ವಹಿಸಿ ಮಂಗಳೂರಿನಲ್ಲಿ ಎಂ.ಆರ್.ಐ ಸ್ಕ್ಯಾನ್ ಮಾಡುವ ಸಂಸ್ಥೆಯನ್ನು ಸಂಪರ್ಕಿಸಿ ಸಮಯವನ್ನು ನಿಗದಿ ಮಾಡಿ ಕೊಟ್ಟರು. ಇದಾದ ತಕ್ಷಣ ನಾನು ಕಾರಿನ ರಾಮಣ್ಣನಿಗೆ ಸಂಪರ್ಕಿಸಿ ಮುಂಜಾನೆ ಏಳು ಗಂಟೆಗೆ ಬರಲು ತಿಳಿಸಿದೆ.

  ಈ ಹೊತ್ತಿಗೆ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ನನ್ನನ್ನು ನೋಡಲು ಬಂದರು. ಅವರಲ್ಲಿ ವಿ.ಜಿ. ಭಟ್, ಹರೀಶ್ ಶಾಸ್ತ್ರಿ, ಮನಮೋಹನ ಮೊದಲಾದವರಿದ್ದರು. ನನ್ನಲ್ಲಿ ಮಂಗಳೂರಿಗೆ ಹೋಗಲು ಬೇಕಾದಷ್ಟು ಹಣವಿರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ ಹರೀಶ್ ಶಾಸ್ತ್ರಿ ಮೆಲ್ಲನೆ ಕಿಸೆಂದ ತೆಗೆದು ಎಷ್ಟು ಬೇಕೆಂದು ಕೇಳಿದ. ೧೦ ಸಾವಿರ ಇದ್ದರೆ ಕೊಡು ಎಂದಾಕ್ಷಣ ಹಿಂದೆ ಮುಂದೆ ನೋಡದೆ ಎಣಿಸಿ ಕೊಟ್ಟದ್ದು ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬ್ಯಾಂಕಿನ ನನ್ನ ಅಕೌಂಟಿನಲ್ಲಿ ಹಣವಿದ್ದರೂ ಅಲ್ಲಿಗೆ ಹೋಗುವುದು ಹೇಗೆ ? ವ್ಯಕ್ತಿ ಅಸಹಾಯಕನಾಗಿ ಮಲಗಿದ ಹೊತ್ತಿನಲ್ಲಿ ನಮ್ಮ ಅಪ್ತರೇ ಸಹಾಯ ಮಾಡಬೇಕಷ್ಟೆ.

  ವೈದ್ಯರು ರಾತ್ರಿ ಮನೆಗೆ ಹೋಗಿ ಮರುದಿನ ಬರಲು ಅನುಮತಿ ನೀಡಿದರು. ಮೈನರ್ ಒ.ಟಿ.ಯಿಂದ ಹೊರಬಂದು ನನ್ನ ಚಪ್ಪಲಿ ಹುಡುಕಿದರೆ ಕಾಣುವುದಿಲ್ಲ.! ಒಂದಷ್ಟು ಹುಡುಕಿದ ಮೇಲೆ ಎಡದ ಕಾಲಿನದು ಸಿಕ್ಕಿತು. ಗಾಯಗೊಂಡ ಬಲಕಾಲಿನದು ಕಾಣೆಯಾಗಿತ್ತು.! ಅಸ್ಪತ್ರೆಗೆ ಬಂದವರಲ್ಲಿ ಯಾರೋ ಅವಸರದಲ್ಲಿ ಬದಲಿಸಿ ಬಿಟ್ಟಿದ್ದರು. ನನ್ನ ಬಲಗಾಲಿನ ಚಪ್ಪಲಿಯನ್ನು ಹಾಕಿಕೊಂಡು ಹೋಗಿದ್ದರು. ಅವರದನ್ನು ಅಲ್ಲಿ ಉಳಿಸಿದ್ದರು. ಯಾವ ರೀತಿಯಲ್ಲಿ ನೋಡಿದರೂ ನನ್ನ ಚಪ್ಪಲಿ ಅವರದಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಅದು ಹೇಗೆ ಬದಲಾಯಿತೆನ್ನುವುದು ಬಗೆಹರಿಯದ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.

  ಮನೆಗೆ ಬರುವಾಗ ೮ಗಂಟೆ ಕಳೆದಿತ್ತು. ಈ ಹೊತ್ತಿಗಾಗುವಾಗ ಬಲಕಾಲಿನಲ್ಲಿ ಏನೋ ಆಗಿದೆ ಎಂಬ ಅನುಭವ ಆಗತೊಡಗಿತ್ತು.

  ಮುಂದಿನ ಭಾಗ ಎಂ.ಆರ್.ಐ. ಯಂತ್ರದೊಳಗೆ . . . .
  Read more...

  Sunday, July 11, 2010

  1

  ವಾಹನದಿಂದ ಬಿದ್ದ ನೆನಪು. . . . .

 • Sunday, July 11, 2010
 • ಡಾ.ಶ್ರೀಧರ ಎಚ್.ಜಿ.
 • ಕಾಲೇಜಿನಲ್ಲಿ ಮಾಡಬೇಕಾದ ನ್ಯಾಕ್ ತಯಾರಿಯ ಕೆಲಸ ಸಾಕಷ್ಟಿದೆ ಎಂದು ಏಪ್ರಿಲ್ ೨೫ರಂದು ಮಂಗಳವಾರ ಪುತ್ತೂರಿಗೆ ಹಿಂದಿರುಗಿದೆವು. ಬರುವಾಗಲೇ ಸಂಜೆಯಾದದ್ದರಿಂದ ಎಲ್ಲಿಗೂ ಹೊರಗೆ ಹೋಗಲಿಲ್ಲ. ಮರುದಿನ ೨೬ ರಂದು ಮುಂಜಾನೆ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿಯಾಗಿ ೨೭ ರಿಂದ ನ್ಯಾಕ್ ತಯಾರಿಯ ಕೆಲಸವನ್ನು ಆರಂಭಿಸುವುದಾಗಿಯೂ, ಕಛೇಯಿಂದ ಒಬ್ಬರನ್ನು ಸಹಾಯಕ್ಕೆ ಕೊಡಬೇಕೆಂದು ವಿನಂತಿ ಮಾಡಿದೆ. ಅದಕ್ಕವರು ಬಿಡುವಿನ ಸಮಯದಲ್ಲಿ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದೆಂದು ಸೂಚಿಸಿದರು. ಅದೇ ರೀತಿ ನ್ಯಾಕ್ ವರದಿಯನ್ನು ತಯಾರಿಸುವಲ್ಲಿ ಸಹಾಯ ಮಾಡಿದ ಮುರಳಿಯಲ್ಲಿ ಮಧ್ಯಾಹ್ನದ ನಂತರ ನ್ಯಾಕ್ ಫೈಲುಗಳ ಪರಿಶೀಲನೆಗೆ ಬರುವುದಾಗಿ ತಿಳಿಸಿ ಕಾಲೇಜಿನಿಂದ ಹೊರಡುವಾಗ ಇಂದು ಡಾ. ದುರ್ಗಾಪ್ರವೀಣನ ಮದುವೆ ಎಂದು ಸ್ನೇಹಿತರು ನೆನಪಿಸಿದರು.

  ಡಾ. ದುರ್ಗಾಪ್ರವೀಣ ನಮ್ಮ ಕಾಲೇಜಿನಲ್ಲಿ ಕನ್ನಡ ಐಚ್ಚಿಕ ಬಿ.ಎ. ಓದಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಿಎಚ್.ಡಿಯನ್ನು ಮುಗಿಸಿ ಇದೀಗ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ತುಳು ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ಊರಿಗೆ ಬಂದಾಗಲೆಲ್ಲ ನನ್ನ ಮನೆಗೆ ಬಂದು ಹೋಗುವುದು ಆತನ ಕ್ರಮ. ಈಗ ವಿದ್ಯಾರ್ಥಿ ಎನ್ನುವುದಕ್ಕಿಂತ ಸಮಾನ ಮನಸ್ಕನಾಗಿ ಯೋಚಿಸಬಲ್ಲ; ಕೆಲವೊಮ್ಮೆ ನಮ್ಮನ್ನು ಮೀರಿ ಮುನ್ನಡೆಯಬಲ್ಲ. ವಿದ್ಯಾರ್ಥಿಗಳು ಈ ಹಂತವನ್ನು ತಲುಪಿದರೆ ನಮಗದು ಅತ್ಯಂತ ಹೆಮ್ಮೆಯ ವಿಷಯ. ಆತನ ನಿಶ್ಚಿತಾರ್ಥಕ್ಕೂ ನಾನು ಪತ್ನಿಯೊಂದಿಗೆ ಹೋಗಿದ್ದೆ. ಹೀಗಾಗಿ ಮದುವೆಗೆ ಹೋಗದಿದ್ದರೆ ಹೇಗೆ ? ಹೀಗಾಗಿ ಮಧ್ಯಾಹ್ನ ಹನ್ನೆರಡೂವರೆಗೆ ಮನೆಂದ ಹೊರಟೆ. ಹೊರಡುವ ಕಾಲಕ್ಕೆ ಒಮ್ಮೆ ಸಂಜೆ ಹೋದರಾಗಬಹುದಲ್ಲ ಎಂಬ ಆಲೋಚನೆ ಬಂತು. ಸಂಜೆ ಮಳೆ ಬಂದರೆ ಕಷ್ಟ ಎಂದು ಈಗಲೇ ಹೊರಡಲು ನಿರ್ಧರಿಸಿದೆ. ಮಗನಲ್ಲಿ ಹೆಲ್ಮೆಟ್ ಕೊಡಲು ಹೇಳಿ ಹಾಕಿಕೊಂಡು ಹೊರಟೆ. ಸಾಮಾನ್ಯವಾಗಿ ಕಾಲೇಜಿಗೆ ಹೋಗುವಾಗ ಹೆಲ್ಮೆಟ್ ಹಾಕುವುದಿಲ್ಲ.

  ಸಾಮಾನ್ಯವಾಗಿ ೩೦ - ೪೦ ಕಿ.ಮೀ. ವೇಗದಲ್ಲಿ ಹೋಗುವುದು ನನ್ನ ಕ್ರಮ. ಕಬಕ ದಾಟಿ, ಕೂವೆ "ತ್ತಿಲು ದಾಟಿ ತುಸು ಮುಂದೆ ಹೋಗುವಾಗ ಹಿಂದೆ ಯಾರಿದ್ದಾರೆ ಎಂದು ಕನ್ನಡಿಯಲ್ಲಿ ನೋಡಿದೆ. ಒಂದು ಅಂಬುಲೆನ್ಸ್, ಅದರ ಹಿಂದೆ ಒಂದು ಬಿಳಿ ಕಾರು ಮತ್ತು ಒಂದು ಟಾಟಾ ಸುಮೋ ರೀತಿಯ ವಾಹನ ಬರುತ್ತಿತ್ತು. ನಾನು ಅಂಬುಲೆನ್ಸ್ ವಾಹನಕ್ಕೆ ದಾರಿ ಬಿಡಲೆಂದು ವಾಹನವನ್ನು ತುಸು ನಿಧಾನಿಸಿದೆ. ಅಂಬುಲೆನ್ಸ್ ದಾಟಿ ಮುಂದೆ ಹೋತು. ಎದುರಿನಿಂದ ಮಿತ್ತೂರಿನ ರೈಲ್ವೆ ಸೇತುವೆ ಕಾಣುತ್ತಿತ್ತು. ಮಾಣಿ ಕಡೆಂದ ಒಂದು ವಾಹನ ಎದುರಿನಿಂದ ಬರುತ್ತಿತ್ತು. ಈ ಹೊತ್ತಿಗೆ ಹಿಂದಿನ ಬಿಳಿ ಕಾರಿನವನು ನನ್ನನ್ನು ಓವರ್‌ಟೇಕ್ ಮಾಡುವ ಸಲುವಾಗಿ ಒಮ್ಮೆಲೆ ನುಗ್ಗಿ ಬಂದ. ಕಾರು ಸಾಕಷ್ಟು ವೇಗವಾಗಿತ್ತು. ಅಲ್ಲದೆ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸ ಬೇಕಿತ್ತು. ಈ ಅವಸರದಲ್ಲಿ ಕಾರಿನವನು ನನ್ನ ಕಡೆಗೆ ಒಮ್ಮೆಲೆ ಬಂದ. ನಾನು ಆ ಹೊತ್ತಿಗೆ ರಸ್ತೆಯ ಅತ್ಯಂತ ಎಡಭಾಗದಲ್ಲಿದ್ದೆ. ಕಾರಿನವನು ತೀರ ಪಕ್ಕಕ್ಕೆ ಬಂದಾಗ ರಸ್ತೆಂದ ಕೆಳಗೆ ಇಳಿಸುವುದೇ ಕ್ಷೇಮ ಎನಿಸಿತು. ಆ ಹೊತ್ತಿಗೆ ಆತ ಪಕ್ಕದಲ್ಲಿ ಸುಮಾರು ಒಂದೆರಡು ಇಂಚು ಅಂತರದಲ್ಲಿ ಚಲಿಸಲಾರಂಭಿಸಿದ. ತುಸು ವ್ಯತ್ಯಾಸವಾಗಿ ನನಗೆ ತಾಗಿದರೆ ನಾನು ಎಲ್ಲಿಯೋ ಹೋಗಿ ಬೀಳುತ್ತಿದ್ದೆ. ಆದ್ದರಿಂದ ಹಿಂದೆ ಮುಂದೆ ನೋಡದೆ ನನ್ನ ವಾಹನವನ್ನು ರಸ್ತೆಯಿಂದ ಕೆಳಗೆ ಇಳಿಸಿದೆ. ಆ ಸ್ಥಳದಲ್ಲಿ ರಸ್ತೆ ಮತ್ತು ನೆಲದ ನಡುವೆ ಸುಮಾರು ಮುಕ್ಕಾಲು ಅಥವಾ ಒಂದು ಅಡಿ ಅಂತರವಿತ್ತು.(ಚಡಿ) ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ನಾನು ಬಿದ್ದಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಜೋಪಾನವಾಗಿ ನನ್ನ ವಾಹನ ನಡೆಸಿ ಹೊಸದೆಂಬತ್ತಿತ್ತು. ಮೊದಲ ಸಲ ವಾಹನ ನನ್ನ ಆಯತಪ್ಪಿ ನೆಲಕ್ಕೆ ಒರಗಿತ್ತು. ನಾನು ನೆಲಕ್ಕೆ ಬಿದ್ದವನು ರಸ್ತೆಯ ಅಂಚಿನಲ್ಲಿ ಟಾರು ರಸ್ತೆಗೆ ಕೊನೆಕ್ಷಣದಲ್ಲಿ ತುಸು ಜಾರಿ ಹೋಗಿ ಬಿದ್ದೆ. ಬಿದ್ದ ತಕ್ಷಣ ತಲೆ ಎತ್ತಿ ನೋಡಿದರೆ, ನಾನು ಬೀಳಲು ಕಾರಣವಾದ ಕಾರು ಶರವೇಗದಲ್ಲಿ ಮುಂದೆ ಹೋಗುತ್ತಿತ್ತು. ಆ ಕಾರಿನಲ್ಲಿದ್ದವರು ಮನುಷ್ಯತ್ವವಿಲ್ಲದವರಂತೆ ಹೋಗಿಬಿಟ್ಟರು. ಇಂತವರೆಲ್ಲ ಒಂದು ದಿನ ನೋವನ್ನು ಅನುಭವಿಸುತ್ತಾರೆ ಎಂಬ ಭರವಸೆ ನನಗಿದೆ. ಭಗವಂತ ಅವರನ್ನು ಅಷ್ಟು ಸುಲಭವಾಗಿ ಕ್ಷಮಿಸಲಾರ!
  ನನ್ನ ಹಿಂದೆ ಬರುತ್ತಿದ್ದ ಟಾಟಾ ಸುಮೋ ವಾಹನದ ವ್ಯಕ್ತಿ ತಕ್ಷಣ ನಿಲ್ಲಿಸಿ ಕೇಳಿದ ಮೊದಲ ಮಾತು "ಕಾರಿನವನು ನಿಮಗೆ ತಾಗಿಸಿ ಹೋದನೆ ?" ಎಂದು. ಕಾರಿನವನು ಹೋಗುವ ಅವತಾರವನ್ನು ನೋಡಿ ಅವರು ನನಗೆ ತಾಗಿಸಿ ಹೋದನೆಂದೇ ಎಣಿಸಿದ್ದರಂತೆ. ಎದುರಿನಿಂದ ಬರುತ್ತಿದ್ದ ವಾಹನದವರು ನಿಲ್ಲಿಸಿ ನನ್ನ ಯೋಗಕ್ಷೇಮವನ್ನು ವಿಚಾರಿಸಿದರು. ನಾನು ಬೀಳುವಾಗ ನನ್ನ ಅಂಗಿಯ ಜೇಬಿನಲ್ಲಿದ್ದ ಕನ್ನಡಕ ರಸ್ತೆಗೆ ಬಿದ್ದಿತ್ತು. ಅದನ್ನು ಅವರೇ ಹೆಕ್ಕಿ ಕೊಟ್ಟರು. ಆ ಹೊತ್ತಿಗೆ ನಾನು ಎದ್ದು ನಿಂತಿದ್ದೆ. ಬಲಕಾಲು ಮತ್ತು ಬಲಕೈಗೆ ತರಚಿದ ಗಾಯವಾಗಿತ್ತು. ಹಾಕಿದ ಪ್ಯಾಂಟ್ ಹರಿದಿತ್ತು. ನಾನು ಹೆಲ್ಮೆಟ್ ತೆಗೆದು ತುಸು ಉಸಿರೆಳೆದುಕೊಂಡೆ. ನನ್ನ ತಲೆಗೆ ಏನಾದರೂ ಪೆಟ್ಟಗಿದೆಯೇ ಎಂದು ಹಿಂದಿನ ವಾಹನದವರು ಪರಿಶೀಲಿಸಿದರು. ನಾನು ಏನೂ ತೊಂದರೆಲ್ಲ, ಸರಿಯಾಗಿದೇನೆ ಎಂದ ನಂತರ ಅವರು ತೆರಳಿದರು. ಈ ಹೊತತಿಗೆ ಅಲ್ಲಿಯೇ ರಸ್ತೆಯ ಪಕ್ಕದಲ್ಲಿದ್ದ ಮಸೀದಿಂದ ಒಬ್ಬ ವ್ಯಕ್ತಿ ಓಡಿ ಬಂದು ನೆಲದಲ್ಲಿ ಮಲಗಿದ್ದ ನನ್ನ ವಾಹನವನ್ನು ಎತ್ತಿ ನಿಲ್ಲಿಸಿದರು. 'ವಾಹನ ಹೊಸದಾ' ಎಂದು ಕೇಳಿದರು. ನಾನು ನಾಲ್ಕು ವರ್ಷವಾಯಿತು ಎಂದೆ. ಅವರು 'ಹೌದಾ' ಎಂದು ಆಶ್ಚರ್ಯ ವ್ಯಕ್ತಪಡಿಸಿದರು. 'ನೀರು ಕುಡಿಯುತ್ತೀರಾ' ಎಂದು ವಿಚಾರಿಸಿದರು. ನಾನು ಅಗತ್ಯವಿಲ್ಲವೆಂದು ಹಿಂದಿರುಗಿ ಹೊರಡಲು ಸಿದ್ದನಾದೆ. ಆಗ ಮಸೀದಿಂದ ಬಂದ ವ್ಯಕ್ತಿ ಸ್ವಲ್ಪ ನೀರು ಕುಡಿರಿ, ಮುಖ ತೊಳೆದುಕೊಳ್ಳಿ ಎಂದು ಹಿತವಚನ ನೀಡಿದರು. ಅದರಂತೆ ನೀರು ಕುಡಿದು, ಮುಖತೊಳೆದು ನನ್ನ ವಾಹನದಲ್ಲಿ ಹಿಂದಿರುಗಿ ಹೊರಟೆ.

  ನೇರವಾಗಿ ಮುರದಲ್ಲಿರುವ ಡಾ. ಆಳ್ವರಲ್ಲಿಗೆ ಬಂದೆ. ರಸ್ತೆಯ ಎಡಭಾಗದಲ್ಲಿ ವಾಹನ ನಿಲ್ಲಿಸಿ ರಸ್ತೆಯನ್ನು ದಾಟುವಾಗ ಮೊಳಕಾಲಿನ ಚಿಪ್ಪಿನ ಹಿಂದೆ ಹಿಡಿದುಕೊಳ್ಳುತ್ತಿರುವ ಅನುಭವ ಆಯಿತು. ಹಾಗೆಯೇ ಮೊಳಕಾಲು ಚಿಪ್ಪು ತುಸು ದಪ್ಪವಾಗಿತ್ತು. ಆಳ್ವರಲ್ಲಿ ಒಳಗೆ ರೋಗಿಗಳಿದ್ದರು. ನಾನು ತುಸು ಕಾದು ಒಳಗೆ ಹೋದಾಗ ಅವರಿಗೆ ನನ್ನ ಗುರುತು ಸಿಕ್ಕಿತು. ಏನಾತೆಂದು ಅವರಿಗೂ ಗಾಬರಿ. ನನ್ನನ್ನು ಪರಿಶೀಲಿಸಿ ನನ್ನ ತರಚಿದ ಗಾಯಕ್ಕೆ ಪ್ರಥಮ ಚಿಕಿತ್ಸೆಯನ್ನು ಮಾಡಿದ ನಂತರ ಕಾಲನ್ನು ಡಾ. ಪ್ರದೀಪ ಅವರಲ್ಲಿ ತೋರಿಸುವುದು ಒಳ್ಳೆಯದೆಂದು ಸಲಹೆ ನೀಡಿದರು. ಅವರೇ ಡಾಕ್ಟರನ್ನು ಸಂಪರ್ಕಿಸಿ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ಹೊತ್ತಿಗೆ ನಾನು ಅವರ ಟೇಬಲ್ ಎದುರಿಗೆ ಬಂದು ಕುಳಿತಿದ್ದೆ. ಆ ಕಡೆಯಿಂದ ಆಳ್ವರು ಮಾತನಾಡುತ್ತಿರುವುದು ಕೇಳುತ್ತಿತ್ತು. ಅದೇ ಹೊತ್ತಿಗೆ ನಾನು ನಿಧಾನವಾಗಿ ಪ್ರಜ್ಞೆ ಕಳೆದುಕೊಳ್ಳತೊಡಗಿದೆ. ಕುರ್ಚಿಯಲ್ಲಿ ಕುಳಿತವನಿಗೆ ಸುತ್ತಲಿನ ಜಗತ್ತು ಒಮ್ಮೆಲೆ ತಿರುಗತೊಡಗಿತು. ನಾನು ಕುಯಿಂದ ಬೀಳುವ ಹಾಗೆ ಆದದ್ದು ನೆನಪಿದೆ. ಮತ್ತೆಲ್ಲವೂ ಕತ್ತಲೆ.

  ನನಗೆ ಎಚ್ಚರವಾದಾಗ ಆಳ್ವರು ಯಾರದೋ ಸಹಾಯದಿಂದ ನನ್ನನ್ನು ಎತ್ತಿಕೊಂಡು ಬಂದು ಹೊರಗಿನ ಬೆಂಚಿನ ಮೇಲೆ ಮಲಗಿಸುತ್ತಿದ್ದರು. ಕಣ್ಣು ಮುಚ್ಚಿಯೇ ಇರಿ, ನೀರು ಹಾಕುತ್ತೇನೆ ಎಂದು ಹೇಳುತ್ತಿದ್ದರು. ಅವರು ಮುಖದ ಮೇಲೆ ನೀರು ಹಾಕಿದಾಗ ತುಸು ನೆಮ್ಮದಿಯ ಭಾವ ಬಂತು. ನನಗೆ ಏನೋ ಆಗಬಾರದ್ದು ಆಗಿದೆ ಎಂದು ಅನಿಸಿತು. ಆಳ್ವರು ನನಗೆ ಏನೂ ಆಗಿಲ್ಲ, ಹೀಗೆ ಬಿದ್ದಾಗ ಒಮ್ಮೆ ಎಚ್ಚರ ತಪ್ಪುತ್ತದೆ. ಗಾಬರಿಯಾಗುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು. ನನ್ನನ್ನು ಆಸ್ಪತ್ರೆಗೆ ಸಾಗಿಸುವುದರ ಕಡೆಗೆ ಗಮನ ಹರಿಸಿದರು. ಅವರ ಅಳಿಯ ಅರುಣ್ ಪ್ರಕಾಶ್ ನನ್ನ ಜೊತೆಯಲ್ಲಿ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಅವರನ್ನು ಸಂಪರ್ಕಿಸಿ ಬರುವಂತೆ ಹೇಳುತ್ತಿರುವುದು ನನಗೆ ಮಲಗಿದಲ್ಲಿಂದಲೇ ಕೇಳುತ್ತಿತ್ತು. ಒಂದೈದು ನಿಮಿಷದಲ್ಲಿ ಅವರು ಪ್ರತ್ಯಕ್ಷರಾದರು. ಅರುಣ್ ಪ್ರಕಾಶರಿಗೆ ಬೈಕ್‌ನಿಂದ ಬಿದ್ದು ಸಾಕಷ್ಟು ಅನುಭವವಿದೆ. ಅವರೂ ಏನೂ ಆಗುವುದಿಲ್ಲವೆಂದು ಸಮಾಧಾನ ಮಾಡಿದರು. ಈ ಹೊತ್ತಿಗೆ ನನಗೆ ಮಂಪರು ಹೋಗಿ ಎಚ್ಚರವಾಗಿದ್ದೆ. ಸಹಜ ಸ್ಥಿತಿಗೆ ಬಂದಿದ್ದೆ. ಕಾಲು ಮಾತ್ರ ಕಿರಿಕಿರಿ ಮಾಡುತ್ತಿತ್ತು. ಡಾ. ಆಳ್ವರು ಸ್ವತ: ತಮ್ಮ ಕಾರಿನಲ್ಲಿ ನಮ್ಮನ್ನು ಮಹಾವೀರ ಆಸ್ಪತ್ರೆಗೆ ಬಿಟ್ಟರು. ಆಳ್ವರ ಈ ಉಪಕಾರ ಸದಾ ಸ್ಮರಣೀಯ. ಅವರ ಈ ವಿಶ್ವಾಸದ ಋಣ ದೊಡ್ಡದು. ನಾನು ಆಸ್ಪತ್ರೆಯ ಹೊರಗಿನ ಕುರ್ಚಿಯಲ್ಲಿ ಕುಳಿತೆ. ಅರುಣ್ ಪ್ರಕಾಶ್ ವೈದ್ಯರನ್ನು ಹುಡುಕಿಕೊಂಡು ಹೋದರು.
  Read more...

  Saturday, July 3, 2010

  0

  ಸ್ವರ್ಣವಲ್ಲಿಗೆ ನನ್ನ ಮೊದಲ ಭೇಟಿ

 • Saturday, July 3, 2010
 • ಡಾ.ಶ್ರೀಧರ ಎಚ್.ಜಿ.
 • ತಮ್ಮನ ಮಗ ಚೇತನ್‌ನ ಉಪನಯನದ ನಿಮಿತ್ತ ಮೇ ೧೩ರಂದು ಊರಿನ ಕಡೆಗೆ ಮುಖಮಾಡಿದೆ. ಮೇ ೧೬ ರಂದು ಕಾರ್ಯಕ್ರಮವು ಚೆನ್ನಾಗಿ ನಡೆತು. ತುಂಬಾ ವರ್ಷಗಳಿಂದ ಭೇಟಿಯಾಗಲು ಸಾಧ್ಯವಾಗದೇ ಇದ್ದ ನೆಂಟರಿಷ್ಟರನ್ನು ನೋಡಲು ಸಾಧ್ಯವಾತು. ಕಾರ್ಯದ ಮನೆ ಎಂದರೆ ಹಾಗೇ. ಅಪರೂಪದ ವ್ಯಕ್ತಿಗಳೆಲ್ಲರೂ ಸಿಗುತ್ತಾರೆ. ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಸಡಗರ, ಸಂಭ್ರಮವನ್ನು ಹೆಚ್ಚಿಸುತ್ತಾರೆ. ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡುವ ಈ ಬಗೆಯ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು.
  ಇದಾಗಿ ಎರಡು ದಿನಕ್ಕೆ ಅಂದರೆ ಮೇ ೧೮ ರಂದು ಶಿರಸಿ ಬಳಿಯ ಸ್ವರ್ಣವಳ್ಳಿ ಮಠಕ್ಕೆ ಭೇಟಿನೀಡುವ ಅಪೂರ್ವ ಅವಕಾಶವೊಂದು ಒದಗಿ ಬಂತು. ಹಲವು ಸಮಯದಿಂದ ನನಗೂ ಈ ಮಠವನ್ನು ನೋಡಬೇಕೆಂಬ ಅಪೇಕ್ಷೆ ಮನಸ್ಸಿನಲ್ಲಿತ್ತು. ಇದಕ್ಕೆ ನೆಪವಾದದ್ದು ಕುಸುಮಚಿಕ್ಕಿಯ ನಿವೇದನೆ ಪುಸ್ತಕ ಬಿಡುಗಡೆ ಸಮಾರಂಭ.
  ಮುಂಜಾನೆ ನಮ್ಮ ಮನೆ ಮುಂಡಿಗೆ ಹಳ್ಳದಿಂದ ಹೊರಟು ಮೊದಲು ನಾವೆಲ್ಲ ಶಿರಸಿಗೆ ಹೋದೆವು. ಶಿರಸಿಯಲ್ಲಿ ನಮ್ಮ ಕುಟುಂಬದ ಸ್ನೇಹಿತರೂ, ನನ್ನ ಸಹೋದ್ಯೋಗಿಯೂ ಆಗಿದ್ದ ಪ್ರೊ. ಜಿ.ಟಿ. ಭಟ್ ಮತ್ತು ಜಯಕ್ಕನ ಮನೆಗೆ ನಮ್ಮ ಮೊದಲ ಭೇಟಿ. ಶಿರಸಿವರೆಗೆ ಹೋಗಿ ಜಯಕ್ಕನ ಮನೆಗೆ ಹೋಗದಿದ್ದರೆ ಹೇಗೆ ? ನಾನು ಶಿರಸಿ ಕಾರ್ಯಕ್ರಮದ ಸುದ್ದಿಯನ್ನು ಕೇಳಿ ನನ್ನ ಅಮ್ಮ ಸರೋಜ, ಪತ್ನಿ ಸವಿತ, ಈಕೆಯ ತಂಗಿ ಕವಿತಾ ಜೊತೆಯಲ್ಲಿ ಹೊರಟರು. ಅವರಿಗೆ ಜಯಕ್ಕನ ಮನೆಗೆ ಭೇಟಿ ನೀಡುವುದು ಮುಖ್ಯ ಕಾರ್ಯಕ್ರಮ. ಜಯಕ್ಕನಲ್ಲಿ ಆಸ್ರಿಗೆ ಕುಡಿದು ಅಲ್ಲಿಂದ ಶಿರಸಿಯ ದೇವತೆ ಮಾರಿಯಮ್ಮ ದೇವಾಲಯ ಮತ್ತು ಗಣಪತಿ ದೇವಾಲಯಕ್ಕೆ ಜಯಕ್ಕನ ಮಾರ್ಗದರ್ಶನದಲ್ಲಿ ಭೇಟಿ ನೀಡಿದೆವು. ಜಯಕ್ಕನ ಮನೆಯ ಸ"ಪದಲ್ಲಿರುವ ಪಾದುಕಾಶ್ರಮಕ್ಕೂ ನಾನು, ಅಮ್ಮ ಮತ್ತು ಚಿಕ್ಕಿ ಒಂದು ರೌಂಡ್ ಹೋಗಿಬಂದೆವು. ಪಾದುಕಾಶ್ರಮದ ಪರಿಸರವೇನೋ ಚೆನ್ನಾಗಿತ್ತು. ಆದರೆ ಒಬ್ಬ ವ್ಯಕ್ತಿ ನಮ್ಮ ಹಿಂದೆ ಗೂಢಚಾರನಂತೆ ಹಿಂಬಾಲಿಸಿಕೊಂಡು ಬಂದಿದ್ದು ನನಗೇನೂ ಹಿತವಾಗಲಿಲ್ಲ. ಆಶ್ರಮಕ್ಕೆ ಬಂದವರನ್ನು ಈ ರೀತಿ ಹಿಂಬಾಲಿಸುವುದು ಒಳ್ಳೆಯ ಲಕ್ಷಣವಲ್ಲ. ಬರುವ ಭಕ್ತರು ಅಥವಾ ಪ್ರವಾಸಿಗರೇನು ಭಯೋತ್ಪಾದಕರೇ? ಅಲ್ಲಿದ್ದವರೂ ಸಹ ನಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರಿಸಲೂ ಇಲ್ಲ. ಹೀಗಾಗಿ ಆಶ್ರಮದ ಒಳಗಿನ ವಾತಾವರಣ ನನಗೆ ಹಿತವಾಗಲಿಲ್ಲ.
  ಜಯಕ್ಕನ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿ ನಾವು ಸ್ವರ್ಣವಲ್ಲೀ ಮಠದ ಕಡೆಗೆ ಹೊರಟೆವು. ಇದಕ್ಕೆ ಪ್ರೊ. ಜಿ.ಟಿ. ಭಟ್ಟರು ನಮ್ಮ ಮಾರ್ಗದರ್ಶಕರು. ಈ ಹೊತ್ತಿಗಾಗಲೇ ಕುಸುಮ ಚಿಕ್ಕಿ ಸಂಭ್ರಮ ಹೇಳತೀರದು. ಈ ಹೊತ್ತಿಗೆ ಸವಿತಂಗೆ ಜ್ವರ ಬಂದಿತ್ತು. ಹೀಗಾಗಿ ಆಕೆ ಮಠಕ್ಕೆ ಬರಲಿಲ್ಲ. ಇನ್ನು ಕವಿತ ಸಹ ಜಯಕ್ಕನ ಮನೆಯಲ್ಲಿಯೇ ಉಳಿದಳು. ಹೀಗಾಗಿ ನಾನು, ಅಮ್ಮ, ಚಿಕ್ಕಿ ಮತ್ತು ಜಿ.ಟಿ. ಭಟ್ಟರು ಮಠದ ಕಡೆಗೆ ಹೊರಟೆವು.
  ನಾವು ಸ್ವರ್ಣವಲ್ಲಿಯನ್ನು ತಲುಪಿದಾಗ ಸುಮಾರು ೩.೩೦ರ ಸಮಯ. ಹಸಿರ ಹೊದಿಕೆಯ ನಡುವೆ ಕಂಗೊಳಿಸುವ ಆಶ್ರಮ. ಪ್ರಶಾಂತವಾದ ಪರಿಸರ. ಪೇಟೆಯ ಅವಸರವಿಲ್ಲ. ವಾಹನಗಳ ಗದ್ದಲವಿಲ್ಲ. ಇದರೆಡೆಯಲ್ಲಿ ಶ್ರೀ ಶಂಕರ ಜಯಂತಿಯ ಸಂಭ್ರಮ. ಇಲ್ಲಿ ಹಿರಿಯ ಸಾಹಿತಿ ನಾ.ಸು. ಭರತನಳ್ಳಿಯವರನ್ನು ಭೇಟಿ ಮಾಡಿದ್ದು ದೇವರ ದರ್ಶನವನ್ನು ಮಾಡಿದಷ್ಟೇ ಸಂತಸವನ್ನು ನೀಡಿತು. ಅವರ ಸರಳತೆ, ಸಜ್ಜನಿಕೆ ಮೊದಲ ನೋಟಕ್ಕೆ ನನ್ನನ್ನು ಆರ್ಕಸಿತು. ನಂತರ ಸ್ವಾಮಿಗಳನ್ನು ದರ್ಶನ ಮಾಡಬೇಕೆಂದು ಮಹಡಿಯ ಮೇಲೆ ಹೋದೆವು. ಆದರೆ ನಾವು ಹೋಗುವುದು ತುಸು ತಡವಾದ್ದರಿಂದ ಸ್ವಾಮಿಗಳು ಶಂಕರ ಜಯಂತಿ ಕಾರ್ಯಕ್ರಮಕ್ಕೆ ಬಂದ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳನ್ನು ಸ್ವಾಗತಿಸಲು ಕೆಳಗೆ ಇಳಿದುಬಂದರು. ಅನಂತರ ನಮಗೆ ಅವರನ್ನು ಭೇಟಿಯಾಗಲು ಸಾಧ್ಯವೇ ಆಗಲಿಲ್ಲ.
  ಭರತನಳ್ಳಿಯವರ ಪ್ರೀತಿಗೆ ಕಟ್ಟುಬಿದ್ದು ಮಠದಲ್ಲಿ ಚಹವನ್ನು ಸೇವಿಸಿದೆವು. ಅವರ ಪ್ರೀತಿಗೆ ಯಾರನ್ನಾದರೂ ಕಟ್ಟಿಹಾಕುವ ಶಕ್ತಿದೆ. ಶ್ರೀ ಶಂಕರ ಜಯಂತಿ ಕಾರ್ಯಕ್ರಮ ಸುಮಾರು ಅರ್ಧಗಂಟೆ ತಡವಾಗಿ ಆರಂಭವಾತು. ಕಾರ್ಯಕ್ರಮದ ಪ್ರಯುಕ್ತ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ವೈ.ಎಸ್.ವಿ. ದತ್ತ, ಶ್ರೀ ಮಾರ್ಕಂಡೇಯ ಅವಧಾನಿಗಳು, ಮತ್ತೂರು, ಜಿ.ಎಂ. ಹೆಗಡೆ ಹುಳಗೋಳ ಮತ್ತು ಶ್ರೀಮತಿ ಕೀರ್ತಿ ಮಹೇಶ ಹೆಗಡೆ ಬಳ್ಳಾರಿ ಇವರನ್ನು ಮಠದ ವತಿಂದ ಗೌರವಿಸಲಾತು. ಈ ಸಂದರ್ಭದಲ್ಲಿ ಐದಾರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಅನಂತರ ಲೋಕಾರ್ಪಣೆಯಾದ ಕೃತಿಗಳ ಬಗೆಗೆ ೩-೪ ನಿಮಿಷ ಪರಿಚಯದ ಮಾತುಗಳನ್ನಾಡಬೇಕಾಗಿತ್ತು. ಕುಸುಮ ಚಿಕ್ಕಿಯ 'ನಿವೇದನೆ' ಯನ್ನು ಪರಿಚುಸುವ ಅವಕಾಶ ನನಗೆ ಸಿಕ್ಕಿತು. ಹೀಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. ಚಿಕ್ಕಿಯ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಯೋಗವೂ ನನ್ನದೇ. ಎಷ್ಟು ಮಂದಿಗೆ ಹೀಗೆ ಚಿಕ್ಕಮ್ಮನ ಪುಸ್ತಕಕ್ಕೆ ಮುನ್ನುಡಿ ಬರೆಯುವ, ಬಿಡುಗಡೆಯ ಸಂದರ್ಭದಲ್ಲಿ ಅದನ್ನು ಪರಿಚುಸುವ ಅವಕಾಶ ಸಿಗುತ್ತದೆ? ಸುಮಾರು ನಾಲ್ಕು ನಿಮಿಷ ಮಾತನಾಡಿದೆ.
  " ಹವ್ಯಕ ಸಂಸ್ಕೃತಿ ಇಂದು ಆಹಾರ, ಉಡುಗೆ, ತೊಡುಗೆ, ಶಿಕ್ಷಣ ಹೀಗೆ ಎಲ್ಲಾ ರಂಗಲ್ಲಿಯೂ ತೀವ್ರ ಸ್ವರೂಪದಲ್ಲಿ ಬದಲಾಗುತ್ತಿದೆ. ತಂತ್ರ ಜ್ಞಾನವನ್ನು ಅಪ್ಪಿಕೊಳ್ಳುವ ಭರದಲ್ಲಿ ನಾವು ಮೂಲ ಸಂಸ್ಕೃತಿಂದ ದೂರ ಸರಿಯುತ್ತಿದ್ದೇವೆ. ಧರ್ಮದ ಪ್ರಜ್ಞೆಯ ಅರಿವು ಮೊದಲು ಮನೆಂಯಿದ ಆರಂಭವಾಗಬೇಕು. ಚಿಕ್ಕಮ್ಮನ ಈ ಬಗೆಯ ಅರಿವು ಇಲ್ಲಿ ಹಾಡಾಗಿ ಮೂಡಿಬಂದಿದೆ. ಮಹಿಳೆಯರು ತಮ್ಮ ಅನುಭವಗಳನ್ನು ಬರೆಯುತ್ತಿರುವುದು ಒಳ್ಳೆಯ ಲಕ್ಷಣ. ಆಶ್ಚರ್ಯದ ಸಂಗತಿಯೆದರೆ ೧೮೮೬ರಲ್ಲಿಯೇ ಲಕ್ಷ್ಮೀ ಹೆರೀಗಂಗೆ ಗೋಕರ್ಣ ಎಂಬ ಮಹಿಳೆ 'ಬಾಗಿಲು ತಡೆಯವ ಪದಗಳು' ಎಂಬ ಕೃತಿಯನ್ನು ಪ್ರಕಟಿಸಿದ್ದು ನಮ್ಮ ಗಮನಕ್ಕೆ ಬರುತ್ತದೆ. ಈ ಪರಂಪರೆಯನ್ನು ಕುಸುಮ ಎಸ್. ರಾವ್ ಮುಂದುವರಿಸಿದ್ದಾರೆ" ಎಂಬ ಅಂಶಗಳನ್ನು ಕೇಂದ್ರೀಕರಿಸಿ ಮಾತನಾಡಿದೆ. ನನಗೆ ಆಶ್ಚರ್ಯ ಮೂಡಿಸಿದ ಸಂಗತಿಯೆಂದರೆ ಕೃತಿ ಬಿಡುಗಡೆಯ ಸಂದರ್ಭದಲ್ಲಿ ಮಠದ ವತಿಂದ ಫೋಟೋಗಳನ್ನು ತೆಗೆಯುತ್ತಿರಲಿಲ್ಲ. ದಾಖಲೆಗಾಗಿಯಾದರೂ ಫೋಟೋ ತೆಗೆದಿದ್ದರೆ ಚೆನ್ನಾಗಿತ್ತು ಅನಿಸಿತು. (ಅಥವಾ ನನಗೆ ಗೊತ್ತಿಲ್ಲದಂತೆ ತೆಗೆದಿದ್ದಾರೋ ಎನೋ!) ನಾವು ಹೊರಟಾಗ ೭.೩೦ರ ಸಮಯ. ಕಾರ್ಯಕ್ರಮ ಇನ್ನೂ ಮುಗಿದಿರಲಿಲ್ಲ. ಸ್ವರ್ಣವಲ್ಲಿಯ ಭೇಟಿಯ ನೆನಪು ಮನದಲ್ಲಿ ಉಳಿತು. ಹಾಗೆಯೇ ಸ್ವಾಮಿಗಳನ್ನು ಭೇಟಿಯಾಗಲು ಸಾಧ್ಯವಾಗದ ಕೊರತೆಯೊಂದು ಮನಸ್ಸಿನಲ್ಲಿ ಉಳಿತು. ಯಾವುದಕ್ಕೂ ಸಮಯ ಬರಬೇಕಲ್ಲ!
  Read more...

  Subscribe