Sunday, August 7, 2011

0

ಚಂದ್ರಭಟ್ಟರ ಮನೆಯಲ್ಲಿ ಒಂದು ವರ್ಷ

 • Sunday, August 7, 2011
 • ಡಾ.ಶ್ರೀಧರ ಎಚ್.ಜಿ.

 • ಚಂದ್ರಭಟ್ಟರದು ಆ ಕಾಲಕ್ಕೆ ಪುಟ್ಟ ಸಂಸಾರ. ಇವರಿಗೆ ಒಬ್ಬಳು ಮಗಳಿದ್ದಳು. ಅನಂತರ ಮತ್ತಿಬ್ಬರು ಗಂಡು ಮಕ್ಕಳು ಹುಟ್ಟಿದರು. ಮುಂಜಾನೆ ಆರು ಗಂಟೆಗೆಲ್ಲ ಎದ್ದು ಮುಖ ತೊಳೆದು ದನಗಳ ಕೊಟ್ಟಿಗೆಗೆ ಹೋಗಿ ಸಗಣಿ ತೆಗೆದು ಅಕ್ಕಚ್ಚು ನೀಡಿ ಹುಲ್ಲನ್ನು ಹಾಕಬೇಕಿತ್ತು. ಅನಂತರ ಹಸು ಮತ್ತು ಎಮ್ಮೆಯ ಹಾಲು ಕರೆಯುವ ಕಾರ್ಯಕ್ರಮ. ಈ ಹೊತ್ತಿಗೆ ಅವರ ಪತ್ನಿ ಬರುತ್ತಿದ್ದರು. ನಾನು ಅವರನ್ನು ಚಿಕ್ಕಿ ಎಂದು ಕರೆಯುತ್ತಿದ್ದೆ. ನಾನೊಂದು ಹಸುವಿನ ಹಾಲು ಕರೆದರೆ ಅವರು ಇನ್ನೊಂದು ಹಸುವಿನ ಹಾಲು ಕರೆಯುತ್ತಿದ್ದರು. ನನಗೆ ಎಮ್ಮೆಯ ಹಾಲು ಕರೆಯುವುದು ಆರಂಭದಲ್ಲಿ ತುಸು ಕಷ್ಟವಾಗುತ್ತಿತ್ತು. ಕಾಲ ಕ್ರಮೇಣ ಇದನ್ನು ರೂಢಿಸಿಕೊಂಡೆ. ಅನಂತರ ತಿಂಡಿ ತಿಂದು ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಬೇಕಿತ್ತು. ತಿಂಗಳಿಗೊಮ್ಮೆ ಚಿಕ್ಕಿಗೆ ನಾಲ್ಕು ದಿನಗಳ ರಜ. ಆಗ ಪೂಜೆಯ ಜೊತೆಗೆ ಮಜ್ಜಿಗೆ ಕಡೆಯುವುದು, ಮುಂಜಾನೆ ತಿಂಡಿ ಮಾಡುವುದು, ಮಧ್ಯಾಹ್ನದ ಊಟಕ್ಕೆ ಅನ್ನ, ಆಸೆ (ಆಸೆ ಎಂದರೆ ಸಾರು, ಸಾಂಬಾರು, ತಂಬಳಿ, ಗೊಜ್ಜು ಮುಂತಾದ ವ್ಯಂಜನಗಳನ್ನು ಹೇಳುವ ಪದ) ಸಿದ್ಧಪಡಿಸಿ ಒಂಬತ್ತು ಗಂಟೆಗೆಲ್ಲ ಶಾಲೆಗೆ ಹೋಗುವುದಕ್ಕೆ ತಯಾರಾಗಬೇಕಿತ್ತು.


  ಚಳಿಗಾಲದಲ್ಲಿ ಮಜ್ಜಿಗೆ ಕಡೆಯಲು ಕುಳಿತರೆ ಎಷ್ಟು ಹೊತ್ತಾದರೂ ಬೆಣ್ಣೆ ಬರುತ್ತಿರಲಿಲ್ಲ. ಮಜ್ಜಿಗೆ ಕಡೆದು ಕೈ ಬಿದ್ದುಹೋಗುತ್ತಿತ್ತು. ಅಡಿಕೆ ಕೊಲಿನ ಸಂದರ್ಭದಲ್ಲಿ ಇದಕ್ಕೆ ಬೇರೆ ಒಂದಿಷ್ಟು ಕೆಲಸಗಳು ಸೇರ್ಪಡೆಯಾಗುತ್ತಿದ್ದವು. ತೋಟದಲ್ಲಿ ಮರದಿಂದ ಹಣ್ಣಾಗಿ ಬಿದ್ದ ಅಡಿಕೆಯನ್ನು ಹೆಕ್ಕುವುದು, ಅಡಿಕೆ ಕೊಯ್ಯುವಾಗ ಬಿದ್ದ ಉದುರು ಅಡಿಕೆಯನ್ನು ಹೆಕ್ಕುವುದು, ಅಡಿಕೆ ಸುಲಿದ ಮೇಲೆ ಬರುವ ಸಿಪ್ಪೆಯನ್ನು ಆರಿಸಿ ಅದನ್ನು ನಿಗದಿತ ಸ್ಥಳದಲ್ಲಿ ಚೆಲ್ಲುವುದು, ಹೀಗೆ ಒಂದಷ್ಟು ಕೆಲಸಗಳು. ನನಗೆ ಈ ಯಾವ ಕೆಲಸವೂ ಆಯಾಸವನ್ನು ಉಂಟುಮಾಡಿದ್ದಿಲ್ಲ. ಬೆಳಗಿನಿಂದ ರಾತ್ರಿಯವರೆಗೆ ನಿರಂತರವಾಗಿ ಕೆಲಸಮಾಡುವಷ್ಟು ಚೈತನ್ಯವಿತ್ತು. ಚಿಕ್ಕಮ್ಮ ರಜೆಯಲ್ಲಿದ್ದಾಗ ಅಡಿಗೆ ಮನೆಯಲ್ಲಿ ನನ್ನದೇ ದರ್ಬಾರು. ಒಮ್ಮೊಮ್ಮೆ ಚಿಕ್ಕಮ್ಮ ತಿಂಡಿ, ತಿನಿಸುಗಳನ್ನು ಮಾಡಲು ಮಾರ್ಗದರ್ಶನ ಮಾಡುತ್ತಿದ್ದರು. ಜೀವನದಲ್ಲಿ ಮೊದಲ ಸಲ ನಾನು ಗಟ್ಟಿಯಾದ ಕೆನೆ ಮೊಸರನ್ನು ನನಗೆ ಬೇಕಾದಷ್ಟು ತಿಂದದ್ದು ಈ ಮನೆಯಲ್ಲಿ.


  ಸಾಮಾನ್ಯವಾಗಿ ಹಸುವಿನ ಹಾಲಿನ ಮೊಸರು ತುಸು ತೆಳ್ಳಗಿರುತ್ತದೆ. ಆದರೆ ಎಮ್ಮೆ ಹಾಲಿನಿಂದ ಮಾಡಿದ ಮೊಸರು ಅತ್ಯಂತ ಗಟ್ಟಿಯಾಗಿರುತ್ತದೆ ; ಕೆನೆ ಭರಿತವಾಗಿರುತ್ತದೆ. ಈ ಮೊಸರನ್ನು ಅನ್ನಕ್ಕೆ ಹಾಕಿಕೊಂಡು ತುಸು ಉಪ್ಪನ್ನು ಬೆರಸಿ, ಒಳ್ಳೆ ಅಪ್ಪೆಮಿಡಿಯನ್ನು ಕಚ್ಚಿಕೊಂಡು ಊಟಮಾಡಿದರೆ ಅದರಂತಹ ರುಚಿ ಇನ್ನೊಂದಿಲ್ಲ. ಹಾಗೆಯೇ ಕೆನೆಮೊಸರನ್ನು ದಪ್ಪ ಅವಲಕ್ಕಿಗೆ ಬೆರೆಸಬೇಕು. ಇದಕ್ಕೆ ಆಲೆಮನೆ ಬೆಲ್ಲವನ್ನು ಹಾಕಿಕೊಂಡು ಕಲಸಬೇಕು. ಅನಂತರ ಅಪ್ಪೆಮಿಡಿ ಕಾಂಬಿನೇಷನ್ ರುಚಿಯನ್ನು ಹೇಳಿದರೆ ಅರ್ಥವಾಗುವಂಥದ್ದಲ್ಲ. ಬಿಡಿ. ಅದನ್ನು ಸವಿದೇ ನೋಡಬೇಕು. ಈ ಮನೆಯಲ್ಲಿ ನನಗೆ ಇತರ ಮಕ್ಕಳ ಕಿರಿಕಿರಿ ಇರಲಿಲ್ಲ. ಹೀಗಾಗಿ ಒಂದಷ್ಟು ದಿನಗಳು ನೆಮ್ಮದಿಂದ ಕಳೆದವು.


  ಸುಮಾರು ಫೆಬ್ರವರಿ ತಿಂಗಳಿರಬಹುದು. ಈ ಸಂದರ್ಭದಲ್ಲಿ ಒಂದು ಘಟನೆ ನಡೆತು. ಹೊರಗೆ ಸಾಕಷ್ಟು ಚಳಿತ್ತು. ಅಂಗಳದಲ್ಲಿರುವ ಗೋಟನ್ನು ಕೈಮಗುಚಿ ಮುಗಿಸುವಷ್ಟರಲ್ಲಿ ಕತ್ತಲಾತು. ಶರೀರಕ್ಕೆ ವಿಪರೀತ ಆಯಾಸವಾತು. ನಾನು ಕೈಕಾಲು ತೊಳೆದುಕೊಂಡು ಬಂದು ಹೊಸ್ತಿಲಿನ ಒಳಭಾಗದಲ್ಲಿ ಕಂಬಳಿಹಾಸಿ ಮಲಗಿದೆ. ಅಲ್ಲಿಯೇ ನಿದ್ರೆ ಬಂದಿರಬೇಕು. ಊಟದ ಹೊತ್ತಿಗೆ ಚಿಕ್ಕಮ್ಮ ಕರೆದಿರಬೇಕು. ನನಗೆ ಎಚ್ಚರವಾಗಲಿಲ್ಲ. ಇದು ಚಿಕ್ಕಪ್ಪ ಚಂದ್ರಭಟ್ಟರಿಗೆ ತುಸು ಕೋಪಬರಿಸಿತು. ನನ್ನನ್ನು ಗದರಿಸಿ ಎಬ್ಬಿಸಿದರು. ನಾನು ಸಂಜೆಯ ಹೊತ್ತು ಮಲಗಿದ್ದು ಅವರ ಕೋಪವನ್ನು ನೆತ್ತಿಗೇರಿಸಿತ್ತು. ಅವರಿಗೆ ಏನನ್ನಿಸಿತೋ ಗೊತ್ತಿಲ್ಲ. ಮುಂದಿನ ವರ್ಷ ನೀನು ನಿನ್ನ ಮನೆಗೆ ಹೋಗು. ಇಲ್ಲಿ ಇರುವ ಅಗತ್ಯವಿಲ್ಲ ಎಂದುಬಿಟ್ಟರು. ನನಗೆ ಹೇಳುವುದಕ್ಕೆ ಏನೂ ಇರಲಿಲ್ಲ. ಏನಾದರೂ ಹೇಳಿದರೆ ಅವರಿಗೆ ಮತ್ತಷ್ಟು ಸಿಟ್ಟು ಬರುತ್ತಿತ್ತು. ಹೀಗಾಗಿ ನಾನು ಮಾತನಾಡಲಿಲ್ಲ. ಆ ವರ್ಷವನ್ನು ಮುಗಿಸಿ ನನ್ನ ಎರಡು ಜೊತೆ ಬಟ್ಟೆಗಳನ್ನು ಕಟ್ಟಿಕೊಂಡು ಊರಿಗೆ ಹೊರಟೆ. ಚಿಕ್ಕಪ್ಪ ೧೦ ರೂಪಾಗಳನ್ನು ನೀಡಿ ಕಳಿಸಿಕೊಟ್ಟರು. ನಾನು ಮಹೇಶ ಬಸ್ ಹತ್ತಿ ಮುಂಡಿಗೆ ಹಳ್ಳದಲ್ಲಿ ಬಂದಿಳಿದೆ. ಇಲ್ಲಿಗೆ ಪುರಪ್ಪೆಮನೆ ಶಾಲೆಯ ಋಣ ಮುಗಿದಿತ್ತು.


  ಆರನೆಯ ತರಗತಿಗೆ ನನ್ನನ್ನು ಸಿರಿವಂತೆ ಶಾಲೆಗೆ ಸೇರಿಸಿದರು. ಸಿರಿವಂತೆ ಒಂದು ಸಣ್ಣ ಹಳ್ಳಿ. ನಾನು ಓದುವ ಕಾಲಕ್ಕೆ ಎರಡು ಜೀನ್ಸಿ ಅಂಗಡಿ, ಎರಡು ಚಹದ ಹೋಟೆಲ್, ಲಕ್ಷ್ಮಣ ಮತ್ತು ವಾಸುವಿನ ಕೌರದ ಅಂಗಡಿ, ಅಂಚೆಕಛೇರಿ, ಹಿಟ್ಟಿನಗಿರಣಿ, ಹತ್ತರಿಂದ ಹದಿನೈದು ಮಡಿವಾಳರ ಮನೆಗಳಿದ್ದವು. ಎರಡು ಕೊಂಕಣಿ ಮನೆಗಳಿದ್ದವು. ಬೂಬಮ್ಮನ ಮನೆ ಹೆದ್ದಾರಿಯ ಬುಡದಲ್ಲಿ ಈ ಎಲ್ಲ ಮನೆಗಳಿಗಿಂತ ದೂರದಲ್ಲಿ ಪ್ರತ್ಯೇಕವಾಗಿತ್ತು. ಬೂಬಮ್ಮನ ಮನೆಗಿಂತ ಸ್ವಲ್ಪ ಮುಂದೆ ರಸ್ತೆಯ ಇನ್ನೊಂದು ಭಾಗದಲ್ಲಿ ಒಂದು ಐನೋರ ಮನೆತ್ತು. ಬೂಬಮ್ಮ ಸೂಲಗಿತ್ತಿಯ ಕೆಲಸವನ್ನು ಹಳ್ಳಿಯ ಕಡೆಗೆ ಮಾಡುತ್ತಿದ್ದಳು. ಹಾಗೆಯೇ ಉಳುಕು ತೆಗೆಯುವುದು ಮುಂತಾದ ಮಾಂತ್ರಿಕ ವಿದ್ಯೆಯ ಕೆಲಸಗಳನ್ನು ಮಾಡುತ್ತಿದ್ದಳು. ಐನೋರು ವೀರಶೈವರ ಮೆಗಳಲ್ಲಿ ಪೌರೋಹಿತ್ಯವನ್ನು ಮಾಡಿ ಜೀವನ ನಡೆಸುತ್ತಿದ್ದರು. ಸ್ವಲ್ಪ ಸಮಯದ ನಂತರ ಸಾಗರದ ಪಂಡಿತರ ಔಷದಾಲಯ ಸಿರಿವಂತೆಗೆ ಬಂತು. ಕರೆದಲ್ಲಿಗೆ ಹೋಗಿ ಔಷದಿ ಕೊಟ್ಟುಬರುತ್ತಿದ್ದರು. ಹಳ್ಳಿಗಳಿಗೆ ಹೋಗುವುದಕ್ಕೆ ವೈದ್ಯರ ವಾಹನವೆಂದರೆ ಒಂದು ಬಾಡಿಗೆ ಸೈಕಲ್ಲು. ಸುಮಾರು ೮-೧೦ ಕಿಲೋಮೀಟರ್‌ವರೆಗೂ ಅವರೂ ಬಿಸಿಲು ಮಳೆ ಎನ್ನದೆ ಸೈಕಲ್ಲಿನಲ್ಲಿ ಹೋಗಿ ಬರುತ್ತಿದ್ದರು. ನಿಜಕ್ಕೂ ಸುತ್ತಲಿನ ಸುತ್ತಮುತ್ತಲಿನ ಊರವರಿಗೆ ಇವರು ಧನ್ವಂತರಿಯಾದರು.


  ಮೇ ತಿಂಗಳ ಕೊನೆಯ ವಾರದಲ್ಲಿ ನನ್ನನ್ನು ಈ ಶಾಲೆಗೆ ಸೇರಿಸಿದರು. ಮನೆಯಿದ ಶಾಲೆಗೆ ನಡೆದುಕೊಂಡು ಹೋಗಬೇಕಿತ್ತು. ಸುಮಾರು ಎರಡು ಮೈಲಿ ದೂರ. ಒಂದಷ್ಟು ದೂರ ಮಣ್ಣಿನ ರಸ್ತೆಯಲ್ಲಿ ನಡೆದರೆ, ಅನಂತರ ಡಾಮರು ಮಾರ್ಗ ಸಿಗುತ್ತಿತ್ತು. ಸಾಗರದಿಂದ ಜೋಗಕ್ಕೆ ಹೋಗುವ ರಸ್ತೆದು. ಉತ್ತರ ಕನ್ನಡದ ಶಿರಸಿಗೂ ಇದೇ ರಸ್ತೆಯ ಮೂಲಕ ಪ್ರಯಾಣ ಮಾಡಬೇಕಿತ್ತು. ಹೀಗಾಗಿ ನಿಗದಿತ ಸಮಯದಲ್ಲಿ ಒಂದಷ್ಟು ಬಸ್ಸುಗಳು, ಆಗಾಗ ಲಾರಿಗಳು ಓಡಾಡುತ್ತಿದ್ದವು. ಕಾರುಗಳ ಸಂಖ್ಯೆ ತುಂಬಾ ಕಡಿಮೆ. ಇನ್ನು ದ್ವಿಚಕ್ರ ವಾಹನಗಳೆಂದರೆ ಸೈಕಲ್ಲುಗಳು. ಅಪರೂಪಕ್ಕೆ ರಾಜದೂತ ಬೈಕುಗಳು. ಶಾಲೆಗೆ ಹೋದ ಮೊದಲ ದಿನ ಇದೇ ಶಾಲೆಗೆ ಹೋಗುತ್ತಿದ್ದ ನಮ್ಮೂರಿನ ಇತರ ಮಕ್ಕಳ ಪರಿಚಯವಾತು. ಅನಂತರದ ದಿನಗಳಲ್ಲಿ ನಾವೆಲ್ಲ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದವು. ಹಿಂದುರುಗಿ ಬರುವಾಗಲೂ ಒಟ್ಟಿಗೆ ಬರುತ್ತಿದ್ದವು.


  ಮುಂಡಿಗೆ ಹಳ್ಳದ ಸೇತುವೆಯ ಸಮೀಪ ನಮ್ಮ ತಂಡ ಎಂಟೂವರೆಯ ಹೊತ್ತಿಗೆ ಜೊತೆಯಾಗುತ್ತಿತ್ತು. ಶಿರೂರು ಕೊಡ್ಲಗದ್ದೆ ಮನೆಯ ನಟರಾಜ ಮತ್ತು ರತ್ನಮಾಲ, ಇವರ ಮನೆಯಲ್ಲಿ ಓದಲು ಇದ್ದ ಅಮೃತವಳ್ಳಿ, ನಮ್ಮ ಮನೆಯ ಸಮೀಪದಲ್ಲಿದ್ದ ಗಾಲಿಮನೆ ಶ್ರೀಧರ ಹೀಗೆ ನಾಲ್ಕು ಮಂದಿಯ ತಂಡ ನಮ್ಮದು. ಇದರಲ್ಲಿ ನಾವು ಹುಡುಗರು ಮೂರೂ ಜನ ಆರನೇ ತರಗತಿಯಲ್ಲಿದ್ದೆವು. ರತ್ನಮಾಲ ಮತ್ತು ಅಮೃತವಳ್ಳಿ ಏಳನೇ ತರಗತಿಯಲ್ಲಿದ್ದರು. ಮಧ್ಯಾಹ್ನಕ್ಕೆ ನಾವೆಲ್ಲರೂ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆವು. ಮನೆಯಲ್ಲಿ ಮುಂಜಾನೆ ಮಾಡಿದ ತಿಂಡಿಯೇ ಮಧ್ಯಾಹ್ನಕ್ಕೂ ಮುಂದುವರಿಯುತ್ತಿತ್ತು. ನಾವು ಶಾಲೆಯಲ್ಲಿ ತಿಂಡಿ ತಿನ್ನುತ್ತಿರಲಿಲ್ಲ. ಶಾಲೆಂದ ಒಂದು ಫರ್ಲಾಂಗು ದೂರದಲ್ಲಿ ಸಾಕಷ್ಟು ಹಳೆಯದಾದ ಶ್ರೀ ತ್ರಿಪುರಾಂತಕೇಶ್ವರ ದೇವಾಲಯವಿತ್ತು. ಇದರ ಕೈಸಾಲೆಯಲ್ಲಿ ಒಂದು ಮರದ ಕಪಾಟಿತ್ತು. ಎಲ್ಲರೂ ಅದರಲ್ಲಿ ತಿಂಡಿಯನ್ನು ಇಟ್ಟು ಹೋಗುತ್ತಿದ್ದರು. ಮಧ್ಯಾಹ್ನ ಎಲ್ಲರೂ ಬಂದು ತಿಂಡಿ ತಿಂದು ಕೈತೊಳೆದುಕೊಂಡು ಹೋಗುತ್ತಿದ್ದವು. ಕೆಲವು ದಿನ ನಮ್ಮ ತಿಂಡಿ ಕಾಣೆಯಾಗುತ್ತಿತ್ತು. ಯಾರೋ ಆಸುಪಾಸಿನಲ್ಲಿದ್ದವರು ನಮ್ಮ ತಿಂಡಿಯನ್ನು ತಿಂದು ಬಿಡುತ್ತಿದ್ದರು. ಆಗೆಲ್ಲ ನಾವು ತಂದ ತಿಂಡಿಯನ್ನು ಹಂಚಿಕೊಂಡು ತಿನ್ನುತ್ತಿದ್ದವು.

  Read more...

  Subscribe