Monday, January 24, 2011

0

ಪಂಪನ ಆದಿಪುರಾಣ - 2

 • Monday, January 24, 2011
 • ಡಾ.ಶ್ರೀಧರ ಎಚ್.ಜಿ.
 • ರಾಜಾ ಪ್ರತ್ಯಕ್ಷ ದೇವತಾ ಎಂಬುದು ಜನಪ್ರಿಯ ಮಾತು. ಆಳುವ ವರ್ಗದ ಬದುಕಿನ ಮಾದರಿಗಳು ಅನುಕರಣೀಯವಾಗಿರಬೇಕು ಎಂಬಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಹದಿನಾಲ್ಕು ಜನ ಮನುಗಳ ವ್ಯವಸ್ಥಿತ ಆಡಳಿತದ ಕಾರ್ಯವೈಖರಿಯನ್ನು ನೀಡುವಲ್ಲಿ ಕವಿ ಆದರ್ಶ ರಾಜನ ಮಾದರಿಯೊಂದನ್ನು ನೀಡಿರುವಂತಿದೆ. ಈ ಬಗೆಯ ವಿವರಣೆಯ ಮೂಲಕ ತನ್ನ ಕಾಲದ ರಾಜಪ್ರಭುತ್ವದ ಕರ್ತವ್ಯಗಳನ್ನು ಪಂಪ ಎಚ್ಚರಿಸುವಂತಿದೆ.
  ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಮುಂ ಎಂಬ ಘೋಷಿತ ನಿಲುವಿನಲ್ಲಿ, ಪಂಪನ ಕಾವ್ಯ ಪ್ರಜ್ಞೆ ದ್ವಿಮುಖವಾಗಿದೆ ಎಂದು ಹೊರನೋಟಕ್ಕೆ ಅನಿಸುವುದು ಸಹಜ. ಆದರೆ ಪಂಪನ ಕೃತಿಗಳನ್ನು ಇಡಿಯಾಗಿ ಗಮನಿಸಿದರೆ ಲೌಕಿಕ ಮತ್ತು ಜಿನಾಗಮ ಪರಸ್ಪರ ಪೂರಕವಾಗಿ ನಿಂತಂತೆ ಕಾಣುತ್ತದೆ. ಇಲ್ಲಿನ ಪಾತ್ರಗಳು ಸಂಸಾರದ ಸಾರಸರ್ವಸ್ವವನ್ನು ಅನುಭವಿಸಿದ ಅನಂತರವೇ ಜಿನಾಗಮದ ಕಡೆಗೆ ಚಲಿಸುವುದನ್ನು ನೋಡಬಹುದು. ಧರ್ಮ ಒಂದು ಸಾಮಾಜಿಕ ಜವಾಬ್ದಾರಿ ಎಂದು ಗ್ರಹಿಸಿದರೆ, ಆದಿಪುರಾಣದ ಪಾತ್ರಗಳು ಈ ನಿಲುವನ್ನು ಹೆಚ್ಚು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಲೌಕಿಕದ ಬದುಕಿನಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ ನಂತರವೇ ಮುಂದಿನ ಹಂತಕ್ಕೆ ಚಲಿಸುತ್ತವೆ. ಹೀಗಾಗಿ ಪಂಪ ಹೇಳುವ ಲೌಕಿಕ ಮತ್ತು ಜಿನಾಗಮ ಕ್ರಮವಾಗಿ ಧರ್ಮ ಮತ್ತು ಮೋಕ್ಷದ ಅರ್ಥವನ್ನು ಪಡೆಯುತ್ತವೆ. ಲೌಕಿಕದಲ್ಲಿ ಮುಳುಗಿದ ವ್ಯಕ್ತಿಗಳಿಗೆ ಇದು ಬಿಡುಗಡೆಯ ತಾಣವೂ ಆಗುತ್ತದೆ. ತನ್ನ ಕಾಲದ ಅರಸು ಮಕ್ಕಳ ಲೌಕಿಕದ ವೈಭವ, ಭೋಗಜೀವನವನ್ನು ಹತ್ತಿರದಿಂದ ನೋಡಿದ ಪಂಪನಿಗೆ ಲೌಕಿಕವೇ ಅಂತಿಮ ಸತ್ಯವಲ್ಲ, ಅದರಾಚೆಗೆ ಇನ್ನೊಂದು ಬದುಕಿದೆ ಎಂದು ಹೇಳುವ ತುಡಿತ ಇರುವಂತೆ ಕಾಣುತ್ತದೆ. ಹೀಗಾಗಿ ಈ ಎರಡು ಬದುಕನ್ನು ಬೆಳಗುವ ಪ್ರಕ್ರಿಯೆ ಇಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.

  ಯಾಜ್ಞವಲ್ಕ್ಯರು ಎಲ್ಲ ವರ್ಣದವರೂ ಅನುಸರಿಸಬೇಕಾದ ನಿಜವಾದ ಧರ್ಮವನ್ನು ಕುರಿತು ಹೀಗೆ ಹೇಳಿದ್ದಾರೆ :

  ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯ ನಿಗ್ರಹ:
  ದಾನಂ ದಮೋ ದಯಾ ಕ್ಷಾಂತಿ: ಸರ್ವೇಷಾಂ ಧರ್ಮ ಸಂಗ್ರಹ:
  ಅಹಿಂಸೆ, ಸತ್ಯ, ಅಸ್ತೇಯ(ಕದಿಯದಿರುವುದು) ಶುಚಿಜೀವನ, ಇಂದ್ರಿಯ ನಿಗ್ರಹ, ದಾನ, ದಮ(ಆಸೆಗಳ ಮೇಲೆ ಹತೋಟಿ) ದಯೆ, ಕ್ಷಾಂತಿ (ಕ್ಷಮೆ) ಇವುಗಳನ್ನು ಆಚರಿಸುವುದೇ ಧರ್ಮ. ಈ ಬಗೆಯ ಆಶಯಗಳ ಇನ್ನೊಂದು ರೂಪ ಪಂಪನಲ್ಲಿ ಕಾಣಿಸಿಕೊಳ್ಳುತ್ತದೆ. ಆತನೇ ಹೇಳುವಂತೆ ಧರ್ಮಮಂ ಘಳಿಯಿಸಿಕೊಳ್ವುದೊಂದೆ ಚದುರಿಂತುಟು ಸಂಸೃತಿ ಧರ್ಮಮೇಕೆ ಬಾಯಳಿವುದೇಕೆ (ಆದಿಪು ೩.೫೩) ಧರ್ಮವನ್ನು ಗಳಿಸಿಕೊಳ್ಳುವುದೇ ಜಾಣತನ. ಇದು ಸಂಸಾರ ಧರ್ಮದ ಸ್ವರೂಪ. ಇಂತಹ ಸಂಸಾರ ಸಮುದ್ರವನ್ನು ದಾಟಲು ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯಗಳೇ ದೋಣಿಗಳು. ಇವು ಮುಕ್ತಿಯನ್ನು ಬಯಸುವ ಜೀವಿಗಳಿಗೆ ಸೋಪಾನಗಳು. (ಆದಿಪು ೫.೬೦) ಆದ್ದರಿಂದ ಆ ಮುನೀಂದ್ರರ ಚರಣಗಳಿಗೆ ಶರಣಾಗಬೇಕು. (೫.೬೬) ಎಂಬಲ್ಲಿ ಲೌಕಿಕದಲ್ಲಿ ಮುಳುಗಿದ ವ್ಯಕ್ತಿ ಮಾಡಬೇಕಾದ ಕರ್ತವ್ಯದ ಸ್ಪಷ್ಟ ಚಿತ್ರಣವಿದೆ.
  ಪುಸಿಯದುದು ಪರಾಂಗನೆಗಾ
  ಟಿಸದುದು ಕೊಲ್ಲದುದು ಮೋಹಮಿಲ್ಲದುದರಿವಂ
  ಪೊಸಯಿಸುವುದು ವೈರಾಗ್ಯದ
  ದೆಸೆಗೆಸಪುದು ಧರ್ಮಮದರ ತಡೆವುದಧರ್ಮಂ (ಆದಿಪು ೫.೭೯)

  ಸುಳ್ಳು ಹೇಳದಿರುವುದು, ಪರಸ್ತ್ರೀಯನ್ನು ಬಯಸದಿರುವುದು, ಕೊಲ್ಲದಿರುವುದು, ಮೋಹವಿಲ್ಲದಿರುವುದು, ಜ್ಞಾನವನ್ನು ವಿಶಾಲವಾಗಿಸುವುದು, ವೈರಾಗ್ಯದ ಕಡೆಗೆ ಮನವನ್ನೊಯ್ಯುವುದು ಧರ್ಮ. ಅದನ್ನು ತಡೆಯುವುದು ಅಧರ್ಮ ಎಂಬ ಪಂಪನ ಮಾತು ಎಲ್ಲ ಕಾಲಕ್ಕೂ ಎಲ್ಲ ಧರ್ಮಕ್ಕೂ ಅನ್ವಯವಾಗಬಲ್ಲದು. ಸರ್ವಧರ್ಮ ತತ್ವವಿದು. ಮಹಾಬಲನ ಮಂತ್ರಿ ಸ್ವಯಂಬುದ್ಧ ಹೇಳುವ ದಯೆ ದಮಂ ದಾನಂ ತಪಂ ಶೀಲಮೆಂಬಿವೆ ಮೆಯ್ಯಾಗಿರೆ ಸಂದ ಧರ್ಮಮೆ ವಲಂ ಪೊತ್ತೆತ್ತುಗುಂ ಮುಕ್ತಿಪರ್ಯವಸಾನಂಬರಂ (ಆದಿಪು. ೨.೭) ಎಂಬ ಮಾತಿನಲ್ಲಿ ಧರ್ಮವನ್ನು ಅನುಸರಿಸಿದರೆ ಸಿಗುವ ಫಲಸ್ವರೂಪದ ಚಿತ್ರವಿದೆ. ಆತ ಇದನ್ನು ಜೈನಧರ್ಮದ ತತ್ವ ಎಂದು ಹೇಳಿಲ್ಲದಿರುವುದು ಗಮನಾರ್ಹ. ಈ ಅಂಶವು ಜಿನಸೇನರಲ್ಲಿ ವಿದ್ಯೆ ನಿಪುಣತೆ ಪರಾಕ್ರಮ ದಾನ ಬುದ್ಧಿ, ಕ್ಷಮೆ, ದಯೆ ಧೈರ್ಯ ಸತ್ಯ ಲೋಭವಿಲ್ಲದಿರುವಿಕೆ ಇವು ಮೊದಲಾದವು ಆ ಮಹಾಬಲನ ಸ್ವಾಭಾವಿಕವಾದ ಗುಣಗಳಾಗಿದ್ದವು(ಪೂರ್ವಪು.೪.೧೩೪) ಎಂದಿದೆ. ವ್ಯಕ್ತಿಗತ ನೆಲೆಯ ಗುಣಗಳು ಪಂಪನಲ್ಲಿ ಲೋಕಸಾಧಾರಣಗೊಳ್ಳುವುದು ಗುರುತಿಸಬೇಕಾದ ಆಂಶ. ತನ್ಮೂಲಕ ಭಾರತೀಯ ಸಂಸ್ಕೃತಿಯ ಜೀವನ ಮೌಲ್ಯಗಳನ್ನು ಆದಿಪುರಾಣ ಎತ್ತಿಹಿಡಿಯುತ್ತದೆ. ಹೀಗಾಗಿ ಪಂಪನ ಆದಿಪುರಾಣ, ಕೇವಲ ಜೈನಕಾವ್ಯ ಎಂಬ ಸೀಮಿತ ಚೌಕಟ್ಟುಗಳನ್ನು ಮೀರಿ ನಿಲ್ಲುತ್ತದೆ. ಉದಾರ ಮಾನವತಾ ವಾದದ ಕಡೆಗೆ ಅದರ ದೃಷ್ಟಿಯಿದೆ.

  ಜಿನಸೇನರಿಗಿಂತ ಮೊದಲು ಜೈನಪುರಾಣಗಳು ಇದ್ದಿರಬಹುದು. ಈ ಬಗೆಗೆ ಜಿನಸೇನರಲ್ಲಿಯೇ ಸೂಚನೆಗಳು ದೊರೆಯುತ್ತವೆ. ಆದರೆ ಮಹಾಪುರಾಣ ಉಪಲಬ್ದ ಜೈನಪುರಾಣಗಳಲ್ಲಿ ಮೊದಲಿನದು. ಕನ್ನಡದ ನೆಲದಲ್ಲಿ ಅರಳಿದ ಈ ಕೃತಿ ಆದಿಪುರಾಣಕ್ಕೆ ಭಿತ್ತಿಯನ್ನು ಒದಗಿಸಿದೆ. ಭಾರತದಲ್ಲಿ ಎಲ್ಲ ಮತ, ಧರ್ಮದವರೂ ತಮ್ಮದೇ ಆದ ಪುರಾಣ ಪ್ರಪಂಚವನ್ನು ಸೃಷ್ಟಿಸುತ್ತಿದ್ದ ಕಾಲದಲ್ಲಿ ಜಿನಸೇನರು ಮತ್ತು ಗುಣಭದ್ರಾಚಾರ್ಯರು ಜೈನರಿಗೆ ಪುರಾಣ ಲೋಕವೊಂದನ್ನು ಮಹಾಪುರಾಣದ ಮೂಲಕ ತೆರೆದರು. ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಗುರುಗಳಾದ ವೀರಸೇನ ಆಚಾರ್ಯರ ಶಿಷ್ಯರಾದ ಜಿನಸೇನಾಚಾರ್ಯರು ಮಹಾಪುರಾಣದ ಮೊದಲ ನಲವತ್ತೆರಡು ಸರ್ಗಗಳನ್ನು ರಚಿಸಿದರು. ಈ ಭಾಗವನ್ನು ಪೂರ್ವಪುರಾಣವೆಂದು ಗುರುತಿಸುವರು. ಅಪೂರ್ಣವಾಗಿದ್ದ ಈ ಕೃತಿಯನ್ನು ಪೂರ್ಣಗೊಳಿಸಿದ ಯಶಸ್ಸು ಗುಣಭದ್ರಾಚಾರ್ಯರಿಗೆ ಸಲ್ಲುತ್ತದೆ. ಆದಿನಾಥನ ಕಥೆಯ ಕೊನೆಯ ಐದು ಸರ್ಗ ಹಾಗೂ ಉಳಿದ ತೀರ್ಥಂಕರರ ಚರಿತ್ರೆಗಳನ್ನು ಅವರು ಬರೆದರು. ಈ ಭಾಗವನ್ನು ಉತ್ತರ ಪುರಾಣವೆಂದು ಕರೆಯುವುದು ಪದ್ದತಿ. ಈ ಎರಡೂ ಭಾಗಗಳನ್ನು ಒಟ್ಟು ಸೇರಿಸಿ ಮಹಾಪುರಾಣವೆಂದು ಹೇಳಿದೆ.

  ಜಿನಸೇನರ ಕೃತಿ ರಚನೆಯಾದ ಒಂದು ಶತಮಾನದೊಳಗೆ ಪಂಪ ಪೂರ್ವಪುರಾಣದ ಭಾಗವನ್ನು ಆಧರಿಸಿ ಅದನ್ನು ಕನ್ನಡದಲ್ಲಿ ಮರುಸೃಷ್ಠಿಸಿದ್ದು ಗಮನಾರ್ಹ ಅಂಶ. ಕವಿಯೇ ಹೇಳುವಂತೆ ನೆಗಳ್ದಾದಿ ಪುರಾಣದೊಳರಿವುದು ಕಾವ್ಯಧರ್ಮಮುಂ ಧರ್ಮಮುಮಂ (ಆದಿಪು ೧.೩೮) ಅಂದರೆ ಸಂಸ್ಕೃತದಲ್ಲಿ ಧರ್ಮಾನುಬಂಧಿನಿಯಾದ ಜಿನಸೇನರ ಕಥೆ ಕಾವ್ಯಧರ್ಮದಲ್ಲಿ ರಸಪಾಕಗೊಂಡು ಮರುಹುಟ್ಟು ಪಡೆಯುವ ಪ್ರಕ್ರಿಯೆ ಇಲ್ಲಿ ನಡೆದಿದೆ. ವ್ಯಕ್ತಿಯ ಬದುಕಿನ ಮೇಲೆ ಧರ್ಮ ತನ್ನ ಪಾರಮ್ಯವನ್ನು ಸ್ಥಾಪಿಸಿದ್ದ ಕಾಲವದು. ಹೀಗಾಗಿ ಆದಿಪುರಾಣದಂತಹ ಧಾರ್ಮಿಕ ಕೃತಿಗೆ ಬದುಕು ಮತ್ತು ಸಾಹಿತ್ಯ ಸಮನ್ವಯದ ನೆಲೆಯನ್ನು ಒದಗಿಸಿದೆ.
  ಮೃದುಪದಗತಿಯಿಂ ರಸಭಾ
  ವದ ಪೆರ್ಚಿಂ ಪುಣ್ಯವನಿತೆವೋಲ್ (ಆದಿಪು. ೧.೧೭)
  ಕಿವಿಯಿಂ ಬಗೆವುಗುವೊಡೆ ಕೊಂ
  ಕುವೆತ್ತ ಪೊಸನುಡಿಯೆ ಪುಗುಗುಂ (ಆದಿಪು. ೧.೧೮)
  ಮೃದು ಮಧುರ ವಚನ ರಚನೆ (ಆದಿಪು. ೧-೧೯)
  ಇದು ನಿಚ್ಚಂ ಪೊಸತರ್ಣವಂಬೊಲತಿ ಗಂಭೀರಂ (ಆದಿಪು ೧.೨೭)

  ಎಂಬ ಮಾತುಗಳಲ್ಲಿ ಜಿನಸೇನರ ಪ್ರಭಾವಲಯದಿಂದ ಬಿಡುಗಡೆ ಪಡೆಯುವ ಪ್ರಯತ್ನವಿದೆ. ಹೀಗಾಗಿ ಪಂಪನ ಆದಿಪುರಾಣ ಜಿನಸೇನರ ನೆರಳಲ್ಲ; ಮರುಸೃಷ್ಠಿ; ಮರು ನಿರೂಪಣೆ. ಸಂಸ್ಕೃತ ಭಾಷೆ, ಶೈಲಿ, ವಸ್ತು, ನಿರೂಪಣೆ, ಸಂಸ್ಕೃತಿಯೊಂದಿಗೆ ಕನ್ನಡದ ಮನಸ್ಸು ನಡೆಸಿದ ಸೃಜನ ಶೀಲತೆಯ ಸಂಘರ್ಷ ಕವಿ ನಡೆಸುವ ಸಾಂಸ್ಕೃತಿಕ ಮುಖಾಮುಖಿ ಇಲ್ಲಿದೆ. ’ಬಗೆ ಪೊಸತಪ್ಪುದು’, ’ಇದು ನಿಚ್ಚಂ ಪೊಸತು’, ’ಕೊಂಕುವೆತ್ತ ಪೊಸನುಡಿ’ ಎಂಬಲ್ಲಿ ತನ್ನ ಕೃತಿ ಹೊಸದಾಗಬೇಕು ಎಂಬ ಪೂರ್ವನಿರ್ಧಾರಿತ ಕಲ್ಪನೆಯಿದೆ. ಆದ್ದರಿಂದ ’ಇದು ಕನ್ನಡದ ಆದಿಪುರಾಣ’. ಕನ್ನಡದ ದೇಸಿಯಲ್ಲಿ ರೂಪುಗೊಂಡ ಅಪೂರ್ವ ಪುರಾಣ.
  ಗುರುದೇವೇಂದ್ರ ಮುನೀಂದ್ರನಿಂದ್ರನಮಿತಂ ದೇವಂ ಕಥಾನಾಯಕಂ
  ಪುರುದೇವಂ ಕಥೆಯುಂ ತದಾದಿಪುರುಷಪ್ರಸ್ತುತ್ಯ ಜನ್ಮಾಳಿ ಬಂ
  ಧುರಮೆಂದಂದೆ ಮದೀಯವಾಗ್ವಿಭವ ವಿನ್ಯಾಸಂ ಬಲಂಬೆತ್ತುದು (ಆದಿಪು. ೧.೨೫)

  ಎಂದು ತನ್ನ ಕೃತಿಯ ಬಗೆಗೆ ಹೇಳಿದ್ದಾನೆ. ಅವನ ಪ್ರಕಾರ ಆದಿನಾಥನ ಚರಿತ್ರೆಯೇ ಆದಿಪುರಾಣದ ಕಥಾವಸ್ತು. ವೃಷಭನಾಥ, ಆದಿದೇವ, ಆದಿನಾಥ, ಆದಿಬ್ರಹ್ಮ, ಪುರುದೇವ ಇತ್ಯದಿ ಹೆಸರುಗಳು ಆದಿನಾಥನಿಗಿದೆ. ಇದರಲ್ಲಿ ವೃಷಭನಾಥನಲ್ಲದೆ, ಭರತ, ಭಾಹುಬಲಿ, ಶ್ರೇಯಾಂಸ ಮುಂತಾದವರ ಪೂರ್ವ ಹಾಗೂ ವರ್ತಮಾನ ಜನ್ಮದ ಕಥೆಗಳು ಚಿತ್ರಣಗೊಂಡಿವೆ. ಪಂಪನು ಜಿನಸೇನರ ಪೂರ್ವ ಪುರಾಣ ಅಥವಾ ಪುರುದೇವ ಮತ್ತು ಆತನ ಮಕ್ಕಳ ಕಥೆಯ ಭಾಗವನ್ನು ಮಾತ್ರ ತನ್ನ ಕೃತಿಗೆ ವಸ್ತುವಾಗಿ ಆರಿಸಿಕೊಂಡು ಎಲ್ಲಿಯೂ ಮೂಲಕಥೆಯ ಮೆಯ್ಗೆಡದಂತೆ ಎಚ್ಚರ ವಹಿಸಿದ್ದಾನೆ.

  ಸಂಸ್ಕೃತ ಭಾಷೆಯಲ್ಲಿ ಬಂದ ಕ್ರಿ.ಪೂ.ದ ಕಾಲಘಟ್ಟದ ಆದಿತೀರ್ಥಂಕರನ ಕಥೆಯನ್ನು ಕನ್ನಡದಲ್ಲಿ ಹೇಳಹೊರಟಿರುವುದೇ ಪಂಪನ ದೇಸಿಯ ಬಗೆಗಿನ ಪ್ರೀತಿಯನ್ನು ಸೂಚಿಸುತ್ತದೆ. (ದೇಸಿಯೊಳ್ ಪುಗುವುದು) ಪಂಪ ತಾನು ರಚಿಸಿದ ಎರಡೂ ಕೃತಿಗಳನ್ನು ಅವುಗಳ ಮೂಲ ಹೆಸರಿನಿಂದ ಕರೆದಿಲ್ಲದಿರುವುದು ಗಮನಾರ್ಹ. ಪೂರ್ವ ಪುರಾಣದ ಕಥೆಯನ್ನು ತನ್ನ ಕಾವ್ಯದ ಚೌಕಟ್ಟಿಗೆ ಅಳವಡಿಸುವಾಗ ಆದಿಪುರಾಣ, ಪುರುದೇವ ಚರಿತ ಎಂದರೆ ಮಹಾಭಾರತವನ್ನು ವಿಕ್ರಮಾರ್ಜುನ ವಿಜಯಂ ಎಂದು ಕರೆದಿರುವನೇ ಹೊರತು ಅವುಗಳ ಮೂಲ ಹೆಸರಿನಿಂದ ಕರೆಯಲಿಲ್ಲ. ಎರಡೂ ಕೃತಿಗಳನ್ನು ಆತ ಪೂರ್ಣವಾಗಿ ಕನ್ನಡಕ್ಕೆ ತಂದಿಲ್ಲವೆನ್ನುವುದೂ ಕುತೂಹಲದ ಸಂಗತಿ. ಜಿನಸೇನರ ಕೃತಿಯನ್ನು ಕನ್ನಡದ ಚೌಕಟ್ಟಿಗೆ ಮರುಹೊಂದಿಸುವಲ್ಲಿ ಪಂಪ ತೋರುವ ಸ್ವೋಪಜ್ಞತೆಯ ಕಾರಣದಿಂದ ಆದಿಪುರಾಣಕ್ಕೆ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಲಭ್ಯವಾಗಿದೆ. ಅದರ ಧಾರ್ಮಿಕ ಮೌಲ್ಯ ಇಂದಿಗೂ ಪ್ರಸ್ತುತವಾಗಿದೆ.
  ಕೃತಿಯ ಆರಂಭದಲ್ಲಿ ಬರುವ ಮಹಾಬಲನ ಒಡ್ಡೋಲಗದಲ್ಲಿ ನಡೆಯುವ ಧಾರ್ಮಿಕ ವಾಗ್ವಾದ ನಿರ್ದಿಷ್ಟ ಉದ್ದೇಶದಿಂದಲೇ ನಡೆಯುತ್ತದೆ. ಜಿನಧರ್ಮದ ಮಹತ್ವವನ್ನು ಹೇಳಲು ಕವಿ ಪೂರ್ವಪಕ್ಷವಾಗಿ ಈ ಧಾರ್ಮಿಕ ಜಿಜ್ಞಾಸೆಯನ್ನು ತರುವನು.
  ಮಹಾಬಲನಿಗೆ ಮಹಾಮತಿ, ಸಂಭಿನ್ನಮತಿ, ಶತಮತಿ, ಸ್ವಯಂಬುದ್ಧ ಈ ನಾಲ್ಕು ಜನ ಮಂತ್ರಿಗಳು ರಾಜ್ಯಕ್ಕೆ ಮೂಲಸ್ತಂಭಗಳಂತೆ ದೃಢವಾಗಿದ್ದರು.(ಪೂರ್ವಪು. ೪.೧೯೧) ಇವರಲ್ಲಿ ಸ್ವಯಂಬುದ್ಧನು ಸಮ್ಯಗ್ದರ್ಶನದಿಂದ ಶುದ್ಧವಾದ ಬುದ್ಧಿಯುಳ್ಳವನು. ಉಳಿದ ಮೂವರು ಮಿಥ್ಯಾದೃಷ್ಟಿಯವರಾಗಿದ್ದರು. ಮಹಾಬಲನ ಜನ್ಮದಿವಸದ ಉತ್ಸವ ಸಂದರ್ಭದಲ್ಲಿ ಸ್ವಯಂಬುದ್ಧನು. ’ದಯಾಮೂಲೋ ಭವೇದ್ಧರ್ಮೋ’ (ಪೂರ್ವಪು.೫.೨೧) ದಯಾಮೂಲವಾದುದು ಧರ್ಮ, ಹಿಂಸೆ ಮತ್ತು ಕಳ್ಳತನ ಮಾಡದಿರುವುದು, ಸತ್ಯವನ್ನು ನುಡಿಯುವುದು, ಸ್ತ್ರೀ ವಿಷಯಾಸಕ್ತಿಯನ್ನು ಬಿಡುವುದು, ಪರಿಗ್ರಹಗಳಿಲ್ಲದಿರುವುದು ಧರ್ಮ, ಈ ರಾಜ್ಯ ಮೊದಲಾದವು ಧರ್ಮದ ಫಲಗಳು ಎಂದು ಮುಂತಾಗಿ ಉಪದೇಶವನ್ನು ಮಾಡಿದನು. ಇದನ್ನು ಸಹಿಸದ ಮಹಾಮತಿಯು ಚಾರ್ವಾಕ ವಾದವನ್ನು, ಸಂಭಿನ್ನಮತಿಯು ವಿಜ್ಞಾನಾದ್ವೈತವಾದನ್ನು ಮತ್ತು ಶತಮತಿಯು ಶೂನ್ಯವಾದವನ್ನು ಕುರಿತು ಮಾತನಾಡಿದರು. ಜಿನಸೇನರ ಕೃತಿಯ ಐದನೆಯ ಅಧ್ಯಾಯದಲ್ಲಿ ಈ ಬಗ್ಗೆ ವಿವರಗಳಿವೆ. ಅಂತಿಮವಾಗಿ ಸ್ವಯಂಬುದ್ಧನು ಅನ್ಯ ವಾದಗಳನ್ನು ನಿರಾಕರಿಸಿ ಅರಸನಿಂದ ಜಯಪತ್ರವನ್ನು ಪಡೆದನು. ಈ ಸಂದರ್ಭದಲ್ಲಿ ಸ್ವಯಂಬುದ್ಧನು ಹೇಳುವ ಒಂದು ಮಾತು ಗಮನ ಸೆಳೆಯುತ್ತದೆ.:

  ಪುಸಿಯ ಪರಂಗನಾರತದ ಮದ್ಯದ ಮಾಂಸದ ಮೆಯ್ಗೊಱಲ್ದ ದು
  ರ್ವ್ಯಸನಿಯ ಮಾಡಿದೋದೆ ನಿಮಗಾಗಮಮಾಗಿರಸತ್ಯವಾದಮಂ
  ಪೊಸಯಿಸಿ ಜೀವನಿಲ್ಲ ಮೊಱೆಯಿಲ್ಲಱನಿಲ್ಲ ಪರತ್ರೆಯಿಲ್ಲೆನ
  ಲ್ಕಸಕಳಿಯಂತು ನಾಲಗೆ ಪೊರಳ್ವುದು ರಾಜಸಭಾಂತರಾಳದೊಳ್ (ಆದಿಪು. ೨.೧೧)

  ಸುಳ್ಳು, ಪರಾಂಗನಾರತ, ಮದ್ಯ, ಮಾಂಸ, ದುರ್ವ್ಯಸನಗಳನ್ನು ಕಲಿಸಿಕೊಡುವ ಓದೇ ನಿಮಗೆ ಆಗಮ. ಅಸತ್ಯವಾದವನ್ನು ಬಲಗೊಳಿಸಿ ಜೀವನಿಲ್ಲ, ಪ್ರಾರ್ಥನೆಯಿಲ್ಲ, ಧರ್ಮವಿಲ್ಲ, ಪರವಿಲ್ಲ ಎಂದು ಹೇಳಿದರೆ ಕಸಬರಿಗೆಯಂತೆ ರಾಜಸಭೆಯಲ್ಲಿ ನಾಲಗೆ ಹೊರಳುವುದು ಎಂಬ ಮಾತು ಇಂದಿಗೂ ಪ್ರಸ್ತುತ. ತನ್ನ ಕಾಲದ ರಾಜಸಭೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಚರ್ಚೆಯ ಮಾದರಿಯೊಂದನ್ನು ಪಂಪ ಇಲ್ಲಿ ನೀಡಿದಂತೆ ತೋರುತ್ತದೆ. ಅಂತಿಮವಾಗಿ ಜೈನ ತತ್ವದ ಹಿರಿಮೆಯನ್ನು ಸ್ವಯಂಬುದ್ಧ ಸ್ಥಾಪಿಸುವನು. ಇದು ಕೃತಿಯ ಆರಂಭದಲ್ಲಿಯೇ ಕವಿಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.

  Read more...

  Sunday, January 16, 2011

  0

  ಪಂಪನ ಆದಿಪುರಾಣಂ - ಧಾರ್ಮಿಕ ಮೌಲ್ಯ

 • Sunday, January 16, 2011
 • ಡಾ.ಶ್ರೀಧರ ಎಚ್.ಜಿ.

 • ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪಂಪನ ಎರಡೂ ಕೃತಿಗಳನ್ನು ಎಂ.ಎ. ತರಗತಿಯಲ್ಲಿ ಪಠ್ಯವಾಗಿ ಓದುವ ಕಾಲಕ್ಕೆ ಇಡಿಯಾಗಿ ಆದಿಪುರಾಣವನ್ನು ಅನಿವಾರ್ಯವಾಗಿ ಓದಿದ್ದೆ. ಅನಂತರ ಡಾಕ್ಟರೇಟ್ ಪದವಿಯ ಅಧ್ಯಯನದ ಸಂದರ್ಭದಲ್ಲಿ ಓದಿದ್ದೆ. ಈಗ ಮತ್ತೊಮ್ಮೆ ಓದಿದೆ. ಆದರೆ ಈ ಮೂರೂ ಓದುಗಳು ಬೇರೆಬೇರೆಯಾಗಿ ನಿಂತವು. ಮೊದಲ ಸಲ ಅದಾಗಲೇ ಬಂದಿದ್ದ ವಿಮರ್ಶೆಯ ಮಾರ್ಗದರ್ಶನದಲ್ಲಿ, ಎರಡನೆಯ ಸಲ ನಿರ್ದಿಷ್ಟ ಭಾಗಗಳನ್ನು ಕೇಂದ್ರೀಕರಿಸಿದ ಓದುಗಳಾಗಿದ್ದವು. ಮೂರನೆಯ ಸಲದ ಈ ಓದು ನನ್ನೊಳಗೆ ಸೃಷ್ಟಿಸಿದ ಆಲೋಚನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅಪೇಕ್ಷೆ ನನ್ನದು.

  ಅವೈದಿಕ ದರ್ಶನಗಳಲ್ಲಿ ಬರುವ ಜೈನಧರ್ಮ ಪಾಪ ಪುಣ್ಯ ಮೋಕ್ಷಗಳನ್ನು ನಿರಾಕರಿಸುವುದಿಲ್ಲ. ಹೀಗಾಗಿ ಇದು ವೈದಿಕ ಧರ್ಮಕ್ಕೆ ಹೆಚ್ಚು ಸಮೀಪವಾಗಿದೆ. ಎಲ್ಲ ಧರ್ಮಗಳಲ್ಲಿಯೂ ಇರುವ ಸತ್ಯಾಂಶಗಳನ್ನು ಗೌರವಿಸುವ ಜೈನಧರ್ಮ ಸಾಕಷ್ಟು ಪ್ರಾಚೀನ. ಯಜುರ್ವೇದದಲ್ಲಿ ವೃಷಭನಾಥ, ಅಜಿತನಾಥ ಮತ್ತು ಅರಿಷ್ಟನೇಮಿಯರ ಉಲ್ಲೇಖವಿದೆ.೧ ಇವರಲ್ಲಿ ವೃಷಭನಾಥ ಜೈನಧರ್ಮವನ್ನು ಪ್ರತಿಷ್ಠೆ ಮಾಡಿದ ವ್ಯಕ್ತಿ ಎಂದು ಗ್ರಹಿಸಲಾಗಿದೆ. ಈತನನ್ನು ಆದಿತೀರ್ಥಂಕರನೆಂದು ಜೈನಧರ್ಮ ಗುರುತಿಸಿದೆ. ಇಂತಹ ಆದಿತೀರ್ಥಂಕರನ ಬದುಕಿನ ಕಥೆಯನ್ನು ಆಧರಿಸಿ ಬಂದಿರುವ ಕೃತಿ ಪಂಪನ ಆದಿಪುರಾಣ.

  ಪ್ರಾಚೀನ ಕನ್ನಡ ಸಾಹಿತ್ಯವನ್ನು ಇಡಿಯಾಗಿ ನೋಡಿದರೆ ಅದರೊಳಗೆ ಧರ್ಮ, ಅಧರ್ಮದ ವಿವೇಚನೆ ಇದೆ. ಆತ್ಮದ ಉದ್ದಾರಕ್ಕೆ ಮನುಷ್ಯ ಸ್ವೀಕರಿಸಬೇಕಾದ ಜೀವನ ಮೌಲ್ಯಗಳ ಗುರುತುಗಳು ಹಲವು ಬಗೆಯಲ್ಲಿ ವ್ಯಕ್ತವಾಗಿವೆ. ಈ ಸಂಸೃತಿಯೊಳ್ ಧರ್ಮಾಧರ್ಮ ಸ್ಥಿತಿಯೆ ವಲಂ ಸ್ವರ್ಗನರಕ ಸುಖದು:ಖಕರಂ (ಆದಿಪು. ೫.೭೭) ಎಂಬ ಪಂಪನ ಮಾತಿನಲ್ಲಿ ಧರ್ಮ ಮತ್ತು ಅಧರ್ಮದ ಆಚರಣೆಯಿಂದ ಜೀವಿ ಪಡೆದುಕೊಳ್ಳುವ ಸ್ಥಿತಿಯ ಸೂಚನೆಯಿದೆ. ಈ ಗ್ರಂಥವು ಸತ್ಯಾರ್ಥವನ್ನು ಹೇಳುವುದರಿಂದ ಸೂಕ್ತವೆಂದೂ ಧರ್ಮವನ್ನು ಹೇಳುವುದರಿಂದ ಧರ್ಮಶಾಸ್ತ್ರವೆನಿಸಿದೆ (ಪೂರ್ವಪು. ೧.೨೪) ಎಂಬಲ್ಲಿ ಇದು ಧಾರ್ಮಿಕ ಕೃತಿ ಎಂಬ ನಿಲುವು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪಂಪ ತನ್ನ ಕೃತಿ ಆದಿಪುರಾಣವನ್ನು ’ಧಾರ್ಮಿಕ ಕಾವ್ಯ’ ಎಂದು ಕರೆದುಕೊಂಡಂತೆ ಕಾಣುತ್ತದೆ.

  ಸಾಮಾನ್ಯವಾಗಿ ಧರ್ಮ ಎಂದರೆ ಪರಂಪರಾಗತವಾಗಿ ಬಂದ ನಿಷ್ಠೆಯಿಂದ ಪಾಲಿಸಬೇಕಾದ ವಿಧಿ, ಸಂಪ್ರದಾಯ, ಆಚರಣೆ ಎಂದು ಗುರುತಿಸುತ್ತೇವೆ. ಧರ್ಮ: ಪುಣ್ಯಂ ವೃಷ: ಶ್ರೇಯ: ಸುಕೃತಂ - ಈ ೫ ಪುಣ್ಯದ ಪೆಸರ್ (ಹಲಾಯು. ೨೧.೧೨೫) ಎಂಬಲ್ಲಿ ಧರ್ಮವು ಪುಣ್ಯದ ಭಾಗವಾಗಿ ಬಂದಿದೆ. ಆದ್ದರಿಂದ ಸದ್ಗತಿಗೆ ಸಾಧನವಾದ ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮಕ್ಕೆ ಮೊದಲ ಸ್ಥಾನ. ಧರ್ಮವನು ಬಿಟ್ಟಿಹುದು ಬದುಕಲ್ಲ (ಕುವ್ಯಾಉ.೪.೫೯) ಎಂಬಲ್ಲಿಯೂ ಇದು ಬದುಕಿನ ಅನಿವಾರ್ಯ ಸ್ವಭಾವಗಳಲ್ಲಿ ಒಂದು ಎಂಬ ಅಂಶವೇ ಬಂದಿದೆ. ಧರ್ಮ: ಸ್ವಭಾವ: ಆತ್ಮಾ - ಈ ೩ ಸ್ವಭಾವಂ (ಹಲಾಯು ೧೨೯-೯೭) ಎಂಬ ಮಾತಿನಲ್ಲಿ ಮಾನವ ಸ್ವಭಾವದಲ್ಲಿ ಧರ್ಮವನ್ನು ಗುರುತಿಸಿದೆ. ಮಹಾಪುರಾಣದಲ್ಲಿ ಧರ್ಮದ ಮಹತ್ವವನ್ನು ಕೃತಿಯ ಆರಂಭದಲ್ಲಿಯೇ ಹೇಳಿದೆ. ಅರ್ಥಕಾಮಗಳು ಧರ್ಮದ ಫಲರೂಪವಾದ ಸ್ವರ್ಗಸುಖಕ್ಕೆ ಅಂಗರೂಪವಾಗಿರುವುದರಿಂದ ಆ ಅರ್ಥಕಾಮಗಳ ಕಥನವು ಧರ್ಮಕಥೆಯೆನಿಸುವುದು. (ಪೂರ್ವಪು. ೧.೧೧೯) ಯಾವುದರಿಂದ ಸ್ವರ್ಗ ಮೋಕ್ಷಸುಖ ಪ್ರಾಪ್ತಿಯು ನಿಶ್ಚಯವಾಗಿ ಆಗುವುದೋ ಅದು ಧರ್ಮವೆನಿಸುವುದು. ಅಂತಹ ಧರ್ಮ ಸಂಬಂಧವಾದ ಕಥೆಯು ಸದ್ದರ್ಮಕಥೆ ಎನಿಸುವುದು. (ಪೂರ್ವಪು.೧.೧೨೦) ಆದ್ದರಿಂದ ಮಹಾಪುರಾಣವನ್ನು ಆಧರಿಸಿ ರಚನೆಯಾದ ಆದಿಪುರಾಣಕ್ಕೆ ಪಂಪನ ದೃಷ್ಠಿಯಲ್ಲಿ ’ಸದ್ದರ್ಮಕಥೆ’ಯ ಸ್ಥಾನವಿದೆ.

  ಭಾರತೀಯವಾದ ವಿವಿಧ ಮತ, ದರ್ಶನ, ಸಿದ್ಧಾಂತಗಳೆಲ್ಲವೂ ಧರ್ಮದ ವಿಶಾಲ ಚೌಕಟ್ಟಿನಲ್ಲಿ ಅಡಕವಾಗಿಬಿಡುತ್ತವೆ. ಧರ್ಮದಿಂದ ಅರ್ಥವೂ ಕಾಮವೂ ಸ್ವರ್ಗವೂ ಉಂಟಾಗುತ್ತದೆ. ಅರ್ಥಕಾಮಗಳಿಗೆ ಆ ಧರ್ಮವೇ ಉತ್ಪತ್ತಿ ಸ್ಥಾನ. ಧರ್ಮವು ಇಚ್ಚಿಸಿದ್ದನ್ನು ಕೊಡುವ ಕಾಮಧೇನು. ಧರ್ಮವು ಮಹಾಚಿಂತಾಮಣಿ ರತ್ನ. ಧರ್ಮವು ಸ್ಥಿರವಾದ ಕಲ್ಪವೃಕ್ಷ. ಧರ್ಮವು ನಾಶವಾಗದಿರುವ ನಿಧಿಯಾಗಿದೆ. ಧರ್ಮವು ಅಪಾಯದಿಂದ ತಪ್ಪಿಸಿ ಮನುಷ್ಯನನ್ನು ಕಾಪಾಡುತ್ತದೆ. (ಪೂರ್ವಪು.೨-೩೨,೩೪,೩೫) ಈ ಕಾರಣಕ್ಕಾಗಿಯೇ ಪಂಪನು :

  ಪ್ರಾಣಿಹಿತಮಂ ವಿನೇಯ
  ಪ್ರೀಣನಕರಮಂ ಜಗತ್ತ್ರಯ ಪ್ರಕಟಿತಕ
  ಲ್ಯಾಣಮನೀನೆಗ ದಿಪು
  ರಾಣಮನಪರಿಮಿತ ಭಕ್ತಿಯಿಂ ವಿರಚಿಸುವೆಂ (ಆದಿಪು. ೧.೪೨)

  ಎಂದಿರಬೇಕು. ಇದು ಪ್ರಾಣಿಗಳಿಗೆ ಹಿತಕರವಾದುದು. ಶಿಷ್ಟಜನರಿಗೆ ಸಂತೋಷಪ್ರದವಾದುದು. ಇದು ಮೂರು ಲೋಕಗಳಿಗೂ ಕಲ್ಯಾಣವನ್ನೇ ಬಯಸುವುದು. ಆದ್ದರಿಂದ ನಾನು ಈ ಆದಿಪುರಾಣವನ್ನು ಅತಿಭಕ್ತಿಯಿಂದ ರಚಿಸುವೆನು ಎಂಬ ಪಂಪನ ಮಾತಿನಲ್ಲಿ ಆದಿಪುರಾಣವನ್ನು ರಚಿಸುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಹೀಗಾಗಿ ಧರ್ಮವೆಂದರೆ ನಿಸರ್ಗ - ಮನುಷ್ಯರ ಸಂಬಂಧ, ಮನುಷ್ಯ - ಸಮಾಜದ ಸಂಬಂಧ, ಮನುಷ್ಯ - ಮನುಷ್ಯರ ನಡುವಣ ಸಂಬಂಧವನ್ನು ಗುರುತಿಸುವುದು ಧರ್ಮದ ವ್ಯಾಖ್ಯಾನವೇ ಆಗುತ್ತದೆ. ಪಂಪನ ಆದಿಪುರಾಣದ ಆವರಣದಲ್ಲಿ ಈ ಬಗೆಯ ಮಾನವನ ವಿವಿಧ ಗುಣಸ್ವಭಾವಗಳ ಶೋಧನೆ ಇರುವುದನ್ನು ಗಮನಿಸಬಹುದು.

  ಪಂಪನ ಆದಿಪುರಾಣ, ಪುರಾಣವಾಗುವ ಬಗೆಯನ್ನು ಈ ಸಂದರ್ಭದಲ್ಲಿ ಗಮನಿಸುವುದು ಔಚಿತ್ಯಪೂರ್ಣ. ಪ್ರಾಚೀನ ಕಾಲಕ್ಕೆ ಸಂಬಂಧಿಸಿದ ನಡೆದುಹೋದ ಕಥೆಯನ್ನು ಹೇಳುವ ಕಾವ್ಯ ಪ್ರಕಾರಕ್ಕೆ ಪುರಾಣವೆಂದು ಹೆಸರು.

  ಪುರಾತನಂ ಪುರಾಣಂಸ್ಯಾತ್ ತನ್ಮಹನ್ಮಹದಾಶ್ರಯಾತ್
  ಮಹದ್ಬಿರುಪದಿಷ್ಟತ್ವಾನ್ಮಹಾಶ್ರೇಯೋನುಶಾಸನಾತ್ (ಪೂರ್ವಪು. ೧.೨೧)

  ಎಂದು ಪೂರ್ವಪುರಾಣದಲ್ಲಿದೆ. ಅಂದರೆ ಪುರಾತನವಾದುದು ಪುರಾಣವೆನಿಸುವುದು. ಆ ಪುರಾಣವು ತಿರ್ಥಂಕರರು ಮೊದಲಾದ ಮಹಾಪುರುಷರ ಸಂಬಂಧದಿಂದಲೂ ಮಹಾಪುರುಷರಿಂದ ಉಪದೇಶಿಸಲ್ಪಟ್ಟಿರುವುದರಿಂದ ಮಹಾಶ್ರೇಯಸ್ಸನ್ನು ಪ್ರತಿಪಾದಿಸುವುದರಿಂದ ಮಹಾಪುರಾಣವೆನಿಸುವುದು. ಪುರಾತನ ಕವಿಯನ್ನಾಶ್ರಯಿಸಿ ಉಂಟಾಗಿರುವುದರಿಂದ ಇದಕ್ಕೆ ಪುರಾಣತ್ವ ಉಂಟಾಗುವುದು. ಹಳೆಯದಕ್ಕೆ ಪುರಾಣ ಎಂದು ಹಲಾಯುಧ ಮತ್ತು ಮಂಗರಾಜರಲ್ಲಿ ಉಲ್ಲೇಖವಿದೆ. ಜೀರ್ಣಂ ಜರತ್ ಪುರಾಣಂ ಪ್ರತ, ಪ್ರತನಂ ಪುರಾತನಂ - ಈ ೬ ಪಳದು (ಹಲಾಯು ೧೧೯-೨೬) ಜೀರ್ಣಮಾ ಜರತ್ಪ್ರತನಮರ್ಣವಮನವ್ಯಂ ಪುರಾಣಂ ಪುರಾತನಮೆನಲು ಹಳಂತಿಗೆ ನಾಮಮಕ್ಕುಂ (ಮಂಗರಾ. ೧೨೯-೧೩) ಎಂಬಲ್ಲಿ ಈ ಅಂಶ ಸ್ಪಷ್ಟವಾಗಿದೆ.

  ಭಾರತೀಯ ಸಂಸ್ಕೃತಿಯಲ್ಲಿ ಪುರಾಣಗಳಿಗೆ ಸಾಕಷ್ಟು ದೀರ್ಘ ಇತಿಹಾಸವಿದೆ. ಕ್ರಿ. ಶ. ೩೦೦ರ ಹೊತ್ತಿಗೆ ಪುರಾಣದ ಯುಗ ಆರಂಭವಾಯಿತೆಂದು, ಇಲ್ಲಿಂದ ಮುಂದೆ ಕ್ರಿ.ಶ. ೧೦೦೦ದವರೆಗೂ ವೈವಿಧ್ಯಮಯ ಪುರಾಣಗಳು ರಚನೆಯಾಗಿವೆ ಎಂದು ಹೇಳಲಾಗಿದೆ. ಇವುಗಳಲ್ಲಿ ಸಾಮಾನ್ಯವಾಗಿ ದೇವಪುರುಷನ ಏಳುಬೀಳುಗಳ ಕಥನವಿದೆ. ಹಾಗೆಯೇ ರಾಜರು ಸ್ತ್ರೀಯರು, ಇತರ ಜಾತಿಗಳ ಜನರಿಗೆ ವಿಧಿನಿಷೇಧ, ಶಿಷ್ಟಾಚಾರ, ನಡವಳಿಕೆ, ಸಂಪ್ರದಾಯವನ್ನು ತಿಳಿಸಲಾಗಿದೆ.೨ ಇದರೊಂದಿಗೆ ಚತುರ್ವಿಧ ಪುರುಷಾರ್ಥದ ಪ್ರತಿಪಾದನೆ ಪುರಾಣದಲ್ಲಿದೆ. ಇವು ಧರ್ಮ ಮತ್ತು ಮೋಕ್ಷವೆಂಬ ಮೌಲ್ಯಗಳ ಸಮನ್ವಯವನ್ನು ಒಪ್ಪಿಕೊಳ್ಳುತ್ತವೆ. ಹಾಗೆಯೇ ಮೋಕ್ಷಕ್ಕಿಂತಲೂ ಮಾನವನಿಗೆ ಧರ್ಮಾಚರಣೆಯೇ ಮುಖ್ಯವೆಂಬುದನ್ನು ಒತ್ತಿ ಹೇಳುತ್ತವೆ. ಪುರಾಣದ ಅರ್ಥವು ಯಾವುದೋ ಅದೇ ಧರ್ಮ (ಪೂರ್ವಪು.೨.೩೮) ಎಂಬ ಮಾತು ಈ ಸಂದರ್ಭದಲ್ಲಿ ಗಮನಾರ್ಹ. ಧರ್ಮ - ಸಾಮಾಜಿಕ ಕರ್ತವ್ಯ, ಅರ್ಥ-ಲೌಕಿಕ ಸಾಧನೆ, ಕಾಮ-ಗಂಡು ಹೆಣ್ಣಿನ ಪ್ರಣಯ, ಮೋಕ್ಷ- ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆ ಇವು ಪುರಾಣಗಳು ಪ್ರತಿಪಾದಿಸುವ ಚತುರ್ವಿಧ ಪುರುಷಾರ್ಥಗಳು. ಆದಿಪುರಾಣ ಈ ದಿಸೆಯಲ್ಲಿ ಪುರಾಣದ ಅಂಶಗಳನ್ನು ನಿಚ್ಚಳವಾಗಿ ಅಂತರ್ಗತಮಾಡಿಕೊಂಡಿದೆ.

  ಅಮರಕೋಶದಲ್ಲಿ :
  ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿಚ
  ವಂಶಾನುಚರಿತಂ ಚಾಪಿ ಪುರಾಣಂ ಪಂಚಲಕ್ಷಣಂ

  ಎಂದು ಭಾರತೀಯ ಪುರಾಣದ ಲಕ್ಷಣವಿದೆ. ಸರ್ಗ, ಪ್ರತಿಸರ್ಗ, ವಂಶ, ಮನ್ವಂತರ, ವಂಶಾನುಚರಿತ ಎಂಬ ಐದು ಲಕ್ಷಣಗಳಿಂದ ಕೂಡಿದುದು ಪುರಾಣ ಎಂದು ಇದರ ಅರ್ಥ. ಇಲ್ಲಿ ಸರ್ಗ, ಪ್ರತಿಸರ್ಗವೆಂದರೆ ಪ್ರಥಮ ಸೃಷ್ಠಿ ಮತ್ತು ಪುನರ್ ಸೃಷ್ಠಿ ಅಥವಾ ವಿಶ್ವದ ವಿಕಾಸ; ವಂಶವೆಂದರೆ ರುಷಿಗಳ ಮತ್ತು ಅವರ ಪೂರ್ವಜರ ಚರಿತೆಗಳು; ಮನ್ವಂತರವೆಂದರೆ ವಿವಿಧ ಮನುಗಳ ಕಾಲಾವಧಿ; ವಂಶಾನುಚರಿತವೆಂದರೆ ರಾಜರುಗಳ ವಂಶಾವಳಿಯನ್ನು ನಿರೂಪಿಸುವುದು. ಪೂರ್ವಪುರಾಣದಲ್ಲಿಯೂ ಇದಕ್ಕೆ ಸಂವಾದಿಯಾದ ಮಾಹಿತಿಗಳಿವೆ. ಈ ಆದಿಪುರಾಣದಲ್ಲಿ ಕಾಲದ ವರ್ಣನೆ, ಮನುಗಳ ಉತ್ಪತ್ತಿ, ವಂಶಗಳ ಉತ್ಪತ್ತಿ, ವೃಷಭತೀರ್ಥಂಕರರ ರಾಜ್ಯಭಾರ, ಅವರ ಅರ್ಹಂತ್ಯಾವಸ್ಥೆ, ನಿರ್ವಾಣ, ಯುಗಗಳ ಪರಿವರ್ತನೆಯ ವಿವರಗಳಿವೆ. (ಪೂರ್ವಪೂ. ೨.೧೫೮) ಎರಡು ಮತ್ತು ಮೂರನೆಯ ಅಧ್ಯಾಯದಲ್ಲಿ ಲೋಕದ ಉತ್ಪತ್ತಿ ಕಥನ, ಹದಿನಾಲ್ಕು ಮನುಗಳ ವಿವರಗಳು ಸಾಕಷ್ಟು ದೀರ್ಘವಾಗಿ ಬಂದಿವೆ. ಪಂಪನ ಆದಿಪುರಾಣದಲ್ಲಿ ಈ ಅಂಶಗಳು ಅಡಕವಾಗಿ ಬಂದಿವೆ. ಆದರೆ ಪಂಪನಲ್ಲಿ ಹದಿನಾಲ್ಕು ಮನುಗಳ ವಿವರವು ಆರನೆಯ ಅಧ್ಯಾಯದಲ್ಲಿ ಬಂದಿದೆ.(ಆದಿಪು. ೬.೫೨ ರಿಂದ ೬.೭೯) ಇದರೊಂದಿಗೆ ತುಸು ಭಿನ್ನವಾಗಿರುವ ಜೈನಪುರಾಣದ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. ಪಂಪನೇ ಗುರುತಿಸುವಂತೆ
  ಆ ಪುರಾಣಕ್ಕಂ ಲೋಕಾಕಾರ ಕಥನಮುಂ ದೇಶನಿವೇಶೋಪದೇಶಮುಂ ನಗರ ಸಂಪತ್ಪರಿವರ್ಣನಮುಂ ರಾಜ್ಯರಮಣೀಯತಾಖ್ಯಾನಮುಂ ತೀರ್ಥಮಹಿಮ ಸಮರ್ಥನಮುಂ ಚತುರ್ಗತಿ ಸ್ವರೂಪ ನಿರೂಪಣಮುಂ ತಪೋದಾನ ವಿಧಾನ ವರ್ಣನಮುಂ ತತ್ಫಳ ಪ್ರಾಪ್ತಿ ಪ್ರಕಟನಮುಮೆಂದಿಂತವಯವಂಗಳೆಂಟಕ್ಕುಂ (ಆದಿಪು ೧.೪೨ವ), ಅಂದರೆ ಲೋಕಾಕಾರ ಕಥನ, ದೇಶ ನಿವೇಶ ವರ್ಣನ, ನಗರ ವರ್ಣನ, ರಾಜ್ಯವರ್ಣನ, ತೀರ್ಥಮಹಿಮೆ, ಚತುರ್ಗತಿ ಸ್ವರೂಪ ವಿವರಣೆ, ತಪೋದಾನ ವಿಧಾನ, ತಪ: ಫಲವರ್ಣನೆ ಇವು ಎಂಟು ಜೈನಪುರಾಣದ ನಿರ್ದಿಷ್ಟ ಲಕ್ಷಣಗಳು. ಈ ಎಲ್ಲಾ ಲಕ್ಷಣಗಳನ್ನು ಹೊಂದಿಯೂ ಆದಿಪುರಾಣ ಕಾವ್ಯವಾಗುವ ರೀತಿ ಬೆರಗು ಮೂಡಿಸುತ್ತದೆ. ಮಾತ್ರವಲ್ಲ, ಕಾವ್ಯ ಮತ್ತು ಪುರಾಣ ಒಂದರೊಡನೊಂದು ಬೆಸೆದುಕೊಳ್ಳುವ ಚಿತ್ರವನ್ನು ಆದಿಪುರಾಣ ಸಮರ್ಥಿಸುವಂತಿದೆ.

  ಪಂಪ ಜಿನಸೇನರ ಕೃತಿಯನ್ನು ಭಕ್ತಿಯಿಂದ ಅನುಸರಿಸುವನು. ಲೋಕಾಕಾರ ಕಥನದಿಂದ ತೊಡಗಿ ತನ್ನ ಕೃತಿಯ ಕೊನೆಯವರೆಗೂ ಕವಿ ಪುರಾಣದ ಎಲ್ಲೆಗಳನ್ನು ಮೀರಲು ಹೋಗುವುದಿಲ್ಲ. ನಿರೂಪಣೆಯ ಸಂದರ್ಭದಲ್ಲಿ ತುಸು ಹಿಂದುಮುಂದಾಗಬಹುದು. ಉದಾಹರಣೆಗೆ ಜೈನರಾಣದ ಆರಂಭದಲ್ಲಿ ಬರುವ ಲೋಕಾಕಾರ ಕಥನದ ಸಂದರ್ಭವನ್ನು ಇದಕ್ಕೆ ಗಮನಿಸಬಹುದು. ಜಿನಸೇನರಲ್ಲಿ ಅಧೋ ಮಧ್ಯ ಊರ್ಧ್ವ ಈ ಮೂರು ಭೇದಗಳಿಂದ ಕೂಡಿಕೊಂಡಿರುವ ಈ ಲೋಕವನ್ನು ಈಶ್ವರನು ಸೃಷ್ಟಿಸುವುದೂ ಇಲ್ಲ. ಸಂಹಾರ ಮಾಡುವುದೂ ಇಲ್ಲ. ಇದು ಸ್ವಭಾವದಿಂದಲೇ ನಿಶ್ಚಿತ ಸ್ಥಿತಿಯುಳ್ಳುದು. ಬೆತ್ತದ ಕುರ್ಚಿಯ ಕೆಳಭಾಗದಂತೆ ಅಧೋಲೋಕದ ಆಕಾರವೂ, ಚಕ್ರತಾಳದಂತೆ ವರ್ತುಲಾಕಾರವಾಗಿ ಮಧ್ಯಲೋಕದ ಆಕಾರವೂ, ಮದ್ದಳೆಯಂತೆ ಊರ್ಧ್ವಲೋಕದ ಆಕಾರವೂ ಇವೆ.

  ವೈಶಾಖಸ್ಥ: ಕಟಿನ್ಯಸ್ತಹಸ್ತ: ಸ್ಯಾದ್ಯಾದೃಶ: ಪುಮಾನ್
  ತಾದೃಶಂ ಲೋಕಸಂಸ್ಥಾನಮಾಮನಂತಿ ಮನೀಷಿಣ:

  ಕಾಲುಗಳನ್ನು ವಿಸ್ತರಿಸಿ ಕೈಗಳನ್ನು ಸೊಂಟದಲ್ಲಿರಿಸಿ ನಿಂತಿರುವ ಪುರುಷನ ಆಕಾರದಂತೆ ಈ ಲೋಕದ ಆಕಾರವಾಗಿದೆಯೆಂದು ಪ್ರಾಜ್ಞರು ಹೇಳುತ್ತಾರೆ ಎಂದಿದೆ. (ಪೂರ್ವಪು. ೪-೪೦,೪೧,೪೨) ಪಂಪನಲ್ಲಿ ಈ ಲೋಕವು ಅನಂತವೂ ವಿಭುವೂ ಆಗಿದ್ದು ಆಕಾಶ ಮಧ್ಯದಲ್ಲಿ ಬೆಳಗುತ್ತದೆ. ಇದು ಅನಾದಿ ಮತ್ತು ನಾಶವಿಲ್ಲದುದು, ಸ್ವತ: ಸಿದ್ಧವಾದುದು.

  ಸ್ಫುಟವೈಶಾಖಸ್ಥಾನಂ
  ಕಟಿತಟವಿನ್ಯಸ್ತಹಸ್ತಯುಗನಾಗಿ ಮಹಾ
  ಲಟಹಂಬೆರಸಿರ್ದೊಪ್ಪುವ
  ನಟನಾಕೃತಿ ತಾನೆ ಲೋಕದೊಂದಾಕಾರಂ(ಆದಿಪು. ೧.೪೫)

  ವೈಶಾಖ ಸ್ಥಾನದ ಹಾಗೆ ನಿಂತು ತನ್ನ ಎರಡೂ ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು ಎದ್ದು ನಿಂತಿರುವ ನಟನ ಆಕೃತಿಯಂತಿದೆ ಈ ಲೋಕದ ಆಕಾರ. ಅದು ಸೃಷ್ಟಿ, ಲಯಗಳ ಗೊಡವೆಯಿಂದ ದೂರವಾದುದು. ಸಹಜವೂ ನಿಯತವೂ ಆದ ಸ್ಥಿತಿಯುಳ್ಳದ್ದು, ನಾಡಾಡಿ ಜನರಿಂದ ತಿಳಿಯಲಾಗದ್ದು. ಅದು ಅಧೋಲೋಕ, ತಿರ್ಯಗ್ಲೋಕ ಮತ್ತು ಊರ್ಧ್ವಲೋಕಗಳಿಂದ ಯುಕ್ತವಾದುದು. ಜಿನೇಶ್ವರನಿಗೆ ಗೋಚರವಾಗುವ ಈ ಲೋಕತ್ರಯವು ವೇತ್ರಾಸನ, ಝಲ್ಲರೀ ಮತ್ತು ಮೃದಂಗಗಳಿಗೆ ಸಮಾನವಾಗಿದೆ ಎಂಬ ವಿವರಣೆಯಿದೆ. ಜಿನಸೇನರಲ್ಲಿ ’ಪುರುಷ’ ಎಂದಿರುವುದನ್ನು ಪಂಪ ’ನಟ’ನೆಂದು ಪರಿವರ್ತಿಸುವನು. ’ನಾಡಾಡಿಯ ನರರ್ಗದು ಬಗೆಯಲ್ ಕೂಡದು’ ಎಂಬ ಮಾತು ’ಪ್ರ್ರಾಜ್ಞರು’ ಎಂಬುದಕ್ಕೆ ಪರ್ಯಾಯವಾಗಿ ಬಂದಂತಿದೆ. ಉಳಿದ ವಿವರಣೆಗಳಲ್ಲಿ ಕವಿ ಬಹುತೇಕ ಮೂಲವನ್ನು ಅನುಸರಿಸುವನು.

  ಪೂರ್ವಪುರಾಣದಲ್ಲಿ ಹದಿನಾಲ್ಕು ಮನುಗಳ ವಿವರವು ಕೃತಿಯ ಮೂರನೆಯ ಅಧ್ಯಾಯದಲ್ಲಿ ಬಂದಿದ್ದರೆ ಪಂಪನಲ್ಲಿ ಇದು ಆರನೆಯ ಆಶ್ವಾಸದಲ್ಲಿ ಬಂದಿದೆ. (ಆದಿಪು. ೬.೫೨ರಿಂದ ೬.೭೯) ಹದಿನಾಲ್ಕನೆಯ ಮನುವಾದ ನಾಭಿರಾಜನು ಮನುವೂ ಹೌದು; ಚಕ್ರವರ್ತಿಯೂ ಹೌದು. ಈ ಮನುಗಳ ಅವಧಿಯಲ್ಲಿ ಮಾನವ ಜನಾಂಗದ ಬದುಕಿನ ವಿಕಾಸ ಪಥದ ದಾಖಲೆಯಿದೆ. ಇವರು ಜನರ ಜೀವನ ಕ್ರಮವನ್ನು ನಿಯತಗೊಳಿಸಿದ ಮಹಾಪುರುಷರು. ತಮ್ಮ ಕಾಲದ ಸಾಮಾಜಿಕ ಬದುಕಿಗೆ ಅಗತ್ಯವಿದ್ದ ವ್ಯವಸ್ಥೆಗಳನ್ನು ಮಾಡುವುದರ ಮೂಲಕ ಇವರು ಕುಲಧರರೆಂದು ಕರೆಸಿಕೊಂಡರು. ಹದಿನಾಲ್ಕನೆಯ ಮನುವಾದ ನಾಭಿರಾಜನು ಮಗು ಮತ್ತು ತಾಯಿಯ ಶಾರೀರಿಕ ಸಂಬಂಧವನ್ನು ಬೇರ್ಪಡಿಸಲು ಹೊಕ್ಕಳ ಬಳ್ಳಿಯನ್ನು ಕತ್ತರಿಸುವ ಬಗೆಯನ್ನು ಲೋಕಕ್ಕೆ ಹೇಳಿಕೊಟ್ಟನು. ನಿಸರ್ಗದಲ್ಲಿ ತಾವಾಗಿಯೇ ಬೆಳೆದು ನಿಂತಿದ್ದ ಬತ್ತ, ಗೋಧಿ, ನವಣೆ, ಎಳ್ಳು, ಜೀರಿಗೆ, ಕಡಲೆ, ಹುರುಳಿ ಮೊದಲಾದ ಕಾಳುಕಡ್ಡಿಯನ್ನು ಬಳಸುವ ವಿಧಾನವನ್ನು ಜನತೆಗೆ ತಿಳಿಸಿ ಜನತೆಯ ಹಾಹಾಕಾರವನ್ನು ಹೋಗಲಾಡಿಸಿದನು. ಹದಿನೈದನೆಯ ಮನುವಾದ ವೃಷಭದೇವನು ಪ್ರಥಮ ತೀರ್ಥಂಕರನೂ ಆಗಿದ್ದರಿಂದ ಐಹಿಕ ಮತ್ತು ಪಾರಮಾರ್ಥಿಕ ಬದುಕಿನ ಬಗೆಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ನಿಭಾಯಿಸುವನು. ವಿವಿಧ ಶಾಸ್ತ್ರ, ವಿದ್ಯೆಗಳನ್ನು ತನ್ನ ಮಕ್ಕಳಿಗೆ ತಿಳಿಸುವನು. ಮುಖ್ಯವಾಗಿ ತನ್ನ ಮಗಳಾದ ಬ್ರಾಹ್ಮಿಯನ್ನು ನೆಪಮಾಡಿಕೊಂಡು ಲಿಪಿಶಾಸ್ತ್ರವನ್ನು ಹಾಗೂ ಸುಂದರಿಯನ್ನು ಕುರಿತು ಗಣಿತಶಾಸ್ತ್ರವನ್ನು ಅನುಗ್ರಹಿಸಿರುವುದು ಗಮನಾರ್ಹ.

  Read more...

  Tuesday, January 4, 2011

  0

  ಪ್ರಾಚೀನ ಕಾಲದ ಜನತಾನ್ಯಾಯಾಲಯದ ಆಧುನಿಕ ರೂಪ ಲೋಕದಾಲತ್

 • Tuesday, January 4, 2011
 • ಡಾ.ಶ್ರೀಧರ ಎಚ್.ಜಿ.
 • ಸಂಚಾರಿ ನ್ಯಾಯಾಲಯ ಅತ್ಯುತ್ತಮವಾದ ಕಲ್ಪನೆ. ಬದುಕಿನಲ್ಲಿ ಕಾನೂನಿನ ವ್ಯಾಪ್ತಿಗೆ ಬರದ ಯಾವ ಸಂಗತಿಯೂ ಇಲ್ಲ. ಆದ್ದರಿಂದ ಜನಸಾಮಾನ್ಯರೆಲ್ಲರೂ ಕಾನೂನಿನ ಅರಿವನ್ನು ಪಡೆದುಕೊಳ್ಳಬೇಕು. ಪ್ರಾಚೀನ ಕಾಲದ ಜನತಾ ನ್ಯಾಯಾಲಯಕ್ಕೆ ಆಧುನಿಕ ರೂಪವನ್ನು ಲೋಕ ಅದಾಲತ್‌ನಲ್ಲಿ ನೀಡಲಾಗಿದೆ ಎಂದು ಶ್ರೀಮತಿ ಅನಿತ ಎನ್. ಪಿ. ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಪುತ್ತೂರು ಇವರು ಹೇಳಿದರು.

  ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ತಾಲೂಕುಕಾನೂನು ಸೇವಾ ಸಮಿತಿ ಪುತ್ತೂರು ಮತ್ತು ಜಿಲ್ಲಾಡಳಿತ, ವಕೀಲರ ಸಂಘ ಪುತ್ತೂರು, ಪುತ್ತೂರು ತಾಲೂಕಿನ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ತಾಲೂಕು ಪಂಚಾಯತ್, ಪ್ರಾದೇಶಿಕ ಸಾರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಪುರಸಭೇ, ಜೆಸಿಐ ಉಪ್ಪಿನಂಗಡಿ, ಸಮಾಜ ಕಲ್ಯಾಣ ಇಲಾಖೆ ಇವುಗಳ ಸಹಯೋಗದಲ್ಲಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ಸಂಚಾರಿ ಲೋಕದಾಲತ್ ಮತ್ತು ಸಾಕ್ಷರತಾ ರಥ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ವಿವೇಕಾನಂದ ಕಾಲೇಜಿನಲ್ಲಿ ಮಾತನಾಡುತ್ತಿದ್ದರು.

  ಪಟ್ಟಣ ಕೇಂದ್ರಿತವಾಗಿದ್ದ ನ್ಯಾಯಾಲಯ ಲೋಕ ಅದಾಲತ್‌ನ ಮೂಲಕ ಇಂದು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಲು ಸಾಧ್ಯವಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಅವರು ಅಭಿಪ್ರಾಯಪಟ್ಟರು.

  ಈ ಸಂದರ್ಭದಲ್ಲಿ ರ್ರ್ಯಾಗಿಂಗ್ ತಡೆ ಕಾಯ್ದೆ ಹಾಗೂ ಮಾಹಿತಿ ಹಕ್ಕು ಅಧಿನಿಯಮ ಎಂಬ ವಿಷಯದ ಮೇಲೆ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮಹೇಶ್ ಕಜೆ ಇವರು ಮಾಹಿತಿ ನೀಡುತ್ತಾ, ರ‍್ಯಾಗಿಂಗ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿ ಮಾತ್ರವಲ್ಲ, ಆತನ ಹೆತ್ತವರು ಮತ್ತು ಆತ ಕಲಿಯುತ್ತಿರುವ ವಿದ್ಯಾ ಸಂಸ್ಥೆಯೂ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಇದರಿಂದ ಇವರೆಲ್ಲರೂ ತೀವ್ರತರವಾದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದೇ ರೀತಿ ಮಾಹಿತಿ ಹಕ್ಕು ಅಧಿನಿಯಮವು ಜನಸಾಮಾನ್ಯರಿಗೆ ಸಿಕ್ಕಿದ ಬ್ರಹ್ಮಾಸ್ತ್ರವಾಗಿದೆ. ಅಧಿಕಾರ ಶಾಹಿಯ ವಿರುದ್ಧ ಹೋರಾಡಲು, ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಇದರಿಂದ ಸಾಧ್ಯವಾಗಿದೆ. ಮಾಹಿತಿ ಹಕ್ಕು ಅಧಿನಿಯಮ ಪ್ರತಿಯೊಬ್ಬ ಸಾಮಾಜಿಕನ ಜನ್ಮಸಿದ್ಧ ಹಕ್ಕು ಎಂದು ಅವರು ಹೇಳಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಿನ್ಸಿಪಾಲರಾದ ಡಾ. ಎಚ್. ಮಾಧವ ಭಟ್ ಮಾತನಾಡುತ್ತಾ ಕಾನೂನು ಸಾಕ್ಷರತೆ ಇಂದಿನ ತುರ್ತು ಅಗತ್ಯವಾಗಿದೆ. ಕಾನೂನಿನ ಒಳಗೆ ಇರುವ ದುರ್ಬಲ ಎಳೆಗಳನ್ನು ಗುರುತಿಸಿ ಸುಧಾರಿಸುವ ಅಗತ್ಯವಿದೆ. ಪ್ರತಿಯೊಂದು ವಿದ್ಯಾ ಸಂಸ್ಥೆಗೂ ಸಾಮಾಜಿಕ ಜವಾಬ್ದಾರಿಯಿದ್ದು ನ್ಯಾಯಾಂಗದ ಬಗೆಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಬಗೆಯ ಕಾರ್ಯಕ್ರಮಗಳು ಉಪಯುಕ್ತ ಎಂದು ಹೇಳಿದರು.

  ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಶೇಷಶಯನ, ಪುತ್ತೂರು ಬಾರ್ ಕೌನ್ಸಿಲ್‌ನ ಕಾರ್ಯದರ್ಶಿ ಜಗನ್ನಾಥ ರೈ, ಸಹಾಯಕ ಸರ್ಕಾರಿ ಅಭಿಯೋಜಕರಾದ ತಮ್ಮಣ್ಣ, ಶ್ರೀರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀಧರ ರೈ ಉಪಸ್ಥಿತರಿದ್ದರು.

  ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾಲಕ್ಷ್ಮಿ ಪ್ರಾರ್ಥಿಸಿದರು. ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿ ಡಾ. ಶ್ರೀಧರ ಎಚ್. ಜಿ. ವಂದಿಸಿದರು.
  Read more...
  0

  ವಿವೇಕಾನಂದ ಕಾಲೇಜಿಗೆ ನ್ಯಾಕ್ ತಂಡದ ಭೇಟಿ - ಜನವರಿ 28 ಮತ್ತು 29

 • ಡಾ.ಶ್ರೀಧರ ಎಚ್.ಜಿ.
 • ಜನವರಿ ೨೮ ಮತ್ತು ೨೯ರಂದು ಬಹುನಿರೀಕ್ಷಿತ ನ್ಯಾಕ್ ತಂಡ ಕಾಲೇಜಿಗೆ ಭೇಟಿ ನೀಡಲಿದೆ. ಈ ಬಗೆಗೆ ಅಧಿಕೃತವಾಗಿ ದಿನಾಂಕ ಪ್ರಕಟವಾಗಿದೆ.

  ೨೦೦೪ರಲ್ಲಿ ವಿವೇಕಾನಂದ ಕಾಲೇಜು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗಿ ಬಿ + + ಶ್ರೇಯಾಂಕವನ್ನು ಪಡೆದಿತ್ತು. ಇದಾಗಿ ಆರು ವರ್ಷಗಳು ಸಂದಿವೆ. ನೇತ್ರಾವತಿಯಲ್ಲಿ ನೀರು ಸಾಕಷ್ಟು ಹರಿದಿದೆ. ೨೦೦೪ರಲ್ಲಿ ಪ್ರಿನ್ಸಿಪಾಲರಾಗಿದ್ದ ಡಾ. ಬಿ. ಶ್ರೀಧರ ಭಟ್ ನಿವೃತ್ತರಾಗಿದ್ದಾರೆ. ಅನಂತರ ಪ್ರಿನ್ಸಿಪಾಲರಾದ ಪ್ರೊ. ಆರ್. ವೇದವ್ಯಾಸ ಇವರೂ ನಿವೃತ್ತರಾಗಿದ್ದಾರೆ. ಪ್ರಸ್ತುರ ಡಾ. ಎಚ್. ಮಾಧವ ಭಟ್ ಪ್ರಿನ್ಸಿಪಾಲರಾಗಿದ್ದು ಕಾಲೇಜು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗುತ್ತಿದೆ. ಕಾಲೇಜಿನಲ್ಲಿ ಈ ಬಗೆಗೆ ವ್ಯಾಪಕ ತಯಾರಿಯು ನಡೆಯುತ್ತಿದೆ.

  ನ್ಯಾಕ್ ತಂಡವು ಬಂದಾಗ ಕಾಲೇಜಿನ ಸಮಗ್ರವಾದ ಪ್ರಗತಿಯನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಇದರೊಂದಿಗೆ ಸಾರ್ವಜನಿಕರು, ಹಿರಿಯ ವಿದ್ಯಾರ್ಥಿಗಳು, ಹೆತ್ತವರನ್ನು ಭೇಟಿಯಾಗಿ ಅಭಿಪ್ರಾಯವನ್ನು ಸಂಗ್ರಹಿಸುತ್ತಾರೆ. ಸುತ್ತಲಿನ ಸಾಮಾಜಿಕ, ಶೈಕ್ಷಣಿಕ ಮತ್ತು ಇಲ್ಲಿನ ಪರಿಸರದ ಒಟ್ಟೂ ಪ್ರಗತಿಗೆ ಕಾಲೇಜಿನ ಕೊಡುಗೆಯನ್ನು ಗಮನಿಸುವರು. ಮೌಲ್ಯಮಾಪನದ ಸಂದರ್ಭದಲ್ಲಿ ಈ ಆಂಶವು ಮುಖ್ಯವಾಗಿ ಪರಿಗಣನೆಗೆ ಬರುವುದು. ಆದ್ದರಿಂದ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಲ್ಲಿ ನಮ್ಮದೊಂದು ಮನವಿ.

  ನ್ಯಾಕ್ ತಂಡವು ದಿನಾಂಕ ೨೮ರಂದು ಸಂಜೆ ೩.೩೦ರಿಂದ ಹಿರಿಯ ವಿದ್ಯಾರ್ಥಿಗಳನ್ನು ಭೇಟಿಮಾಡುವ ಕಾರ್ಯಕ್ರಮವಿದೆ. ಕಾಲೇಜಿಗೆ ನ್ಯಾಕ್ ತಂಡವು ಭೇಟಿನೀಡುವ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಬಿಡುವು ಮಾಡಿಕೊಂಡು ಕಾಲೇಜಿಗೆ ಬಂದರೆ ನಮಗೆ ಸಂತೋಷವಾಗುತ್ತದೆ. ಅಲ್ಲದೆ ಹಿರಿಯ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಭೇಟಿ ನೀಡಲು ಇದೊಂದು ಸುವರ್ಣಾವಕಾಶ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ಕಾಲೇಜಿನ ಬಗೆಗೆ ನಿಮ್ಮ ಪ್ರಾಮಾಣಿಕವಾದ ಸಕಾರಾತ್ಮಕವಾದ ಅನಿಸಿಕೆಯನ್ನು ವ್ಯಕ್ತಪಡಿಸಿ ಕಾಲೇಜಿನ ಪ್ರಗತಿಗೆ ಸಹಕರಿಸಿ.

  ಹಿರಿಯ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸವೇ ಕಾಲೇಜಿನ ಅಡಿಗಲ್ಲು. ಅದುವೇ ಭದ್ರವಾದ ಬುನಾದಿ. ಪ್ರೀತಿಯಿಂದ ಬನ್ನಿ. ನಿಮ್ಮ ಬರುವಿಕೆಯನ್ನು ಎದುರು ನೋಡುತ್ತಿದ್ದೇವೆ.

  ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.

  ಮಾಹಿತಿಗಾಗಿ ನನ್ನನ್ನು ಈ ಕೆಳಗಿನ ದೂರವಾಣಿಗಳಲ್ಲಿ ಸಂಪರ್ಕಿಸಬಹುದು
  ಸಂಚಾರಿ : ೯೪೪೯೨ ೬೮೪೪೨
  ಸ್ಥಿರದೂರವಾಣಿ : ೦೮೨೫೧ ೨೩೪೩೪೨
  ಇಮೇಲ್ ವಿಳಾಸ : sreedharahg63@gmail.com
  Read more...
  1

  ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿ ಡಾ| ಎಚ್.ಮಾಧವ ಭಟ್

 • ಡಾ.ಶ್ರೀಧರ ಎಚ್.ಜಿ.

 • ಹಲವು ಸಮಯದಿಂದ ಹೇಳಬೇಕೆಂದುಕೊಂಡ ಸುದ್ದಿಯೊಂದು ಹೇಳದೇ ಉಳಿದುಹೋಗಿದೆ. ಹೀಗಾಗಿ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ, ಅಭಿಮಾನಿಗಳಿಗೆ ತಡವಾಗಿ ಒಂದು ಸುದ್ದಿಯನ್ನು ಹೇಳುತ್ತಿದ್ದೇನೆ.

  ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ| ಎಚ್. ಮಾಧವ ಭಟ್ ಇವರು ಜುಲೈ ೩೧ ರಿಂದ ಅಧಿಕಾರವನ್ನು ಸ್ವೀಕರಿಸಿದ್ದಾರೆ.

  ಮೂಲತ: ಉಡುಪಿ ಜಿಲ್ಲೆಯ ಹಂದಾಡಿಯವರಾದ ಭಟ್ ಎಂ.ಜಿ.ಎಂ. ಕಾಲೇಜಿನಲ್ಲಿ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಎಂ.ಎ. ಮುಗಿಸಿದರು. ನಂತರ ಡಾ. ಸರೋಜಿನಿ ಇವರ ಮಾರ್ಗದರ್ಶನದಲ್ಲಿ ಶಿವರಾಮ ಕಾರಂತ ಮತ್ತು ಚಿನುವಾಯಿ ಅಚಿಬೆ ಇವರ ಕಾದಂಬರಿಗಳಲ್ಲಿ ಸಾಮಾಜಿಕ ಬದಲಾವಣೆಯ ದರ್ಶನ - ಒಂದು ವಿಮರ್ಶಾತ್ಮಕ ಅಧ್ಯಯನ ಎಂಬ ವಿಷಯದ ಮೇಲೆ ಸಲ್ಲಿಸಿದ ಪ್ರೌಢಪ್ರಬಂಧಕ್ಕೆ ಧಾರವಾಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಅಂತೆಯೇ ದೆಹಲಿಯ ಇಂದಿರಾಗಾಂಧಿ ಮುಕ್ತವಿಶ್ವವಿದ್ಯಾನಿಲಯದಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಗಳಿಸಿದ್ದಾರೆ. ಅಲ್ಲದೆ ರಾಜ್ಯಾದ್ಯಂತ ಮಾನವ ಸಂಪನ್ಮೂಲ ತರಬೇತಿಯನ್ನೂ ನಡೆಸಿಕೊಟ್ಟಿದ್ದಾರೆ.

  ೧೯೭೭ರಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ತಮ್ಮ ಸೇವೆಯನ್ನು ಆರಂಭಿಸಿದ ಮಾಧವ ಭಟ್ ಸಾಹಿತ್ಯ, ಕಲೆ, ಸಂಗೀತ, ನಾಟಕ, ಮಕ್ಕಳ ಕೌನ್ಸಿಲಿಂಗ್, ಸ್ಕೌಟ್‌ನಲ್ಲಿ ವಿಶೇಷ ಪರಿಣತಿಯನ್ನು ಪಡೆದಿರುವ ಬಹುಮುಖ ಪ್ರತಿಭೆ. ೨೦೦೬ರಲ್ಲಿ ಸ್ಕೌಟ್‌ನ ವಿಷಯವಾಗಿ ಮಾಲ್ಡೀವ್ಸ್ ಹಾಗೂ ೨೦೧೦ ರಲ್ಲಿ ಮಾನವ ಸಂಪನ್ಮೂಲ ವಿಷಯದ ಮೇಲೆ ಜಪಾನ್‌ನಲ್ಲಿ ಉಪನ್ಯಾಸ ನೀಡಿಬಂದಿರುವುದು ಕೇವಲ ಮಾಧವ ಭಟ್‌ಗೆ ಮಾತ್ರವಲ್ಲ ಕಾಲೇಜಿಗೇ ಸಂದ ಗೌರವ.

  ಶೈಕ್ಷಣಿಕ ವಲಯದಲ್ಲಿ ಇವರು ಸಲ್ಲಿಸಿದ ಅಪೂರ್ವ ಸೇವೆಗೆ ಸೃಜನಶೀಲ ಅಧ್ಯಾಪಕ ಪ್ರಶಸ್ತಿಯೂ ಸಂದಿದೆಯೆನ್ನುವುದು ಗಮನಾರ್ಹ ಸಂಗತಿ.

  ಡಾ. ಎಚ್. ಮಾಧವ ಭಟ್ ಇವರು ತರ್ಕಶಿರೋಮಣಿ, ವೇದಾಂತ ವಿದ್ವಾಂಸ ಎ. ರಾಮಕೃಷ್ಣ ಭಟ್ ಮತ್ತು ಜಾನಕಿ ಇವರ ಸುಪುತ್ರ.
  Read more...

  Sunday, January 2, 2011

  1

  ನಮ್ಮ ತಂದೆ ಮುಂಡಿಗೆಹಳ್ಳಕ್ಕೆ ವಲಸೆ ಬಂದದ್ದು

 • Sunday, January 2, 2011
 • ಡಾ.ಶ್ರೀಧರ ಎಚ್.ಜಿ.
 • ಹಿರಿಯ ಮಗ ನಾರಾಯಣಪ್ಪನಿಗೆ ಕೌಲಕೋಡಿನಿಂದ ಮದುವೆಯಾಯಿತು. ಇದಾಗಿ ಒಂದೆರಡು ವರ್ಷಕ್ಕೆ ಎರಡನೆಯ ಮಗ ಗಣಪತಿಗೆ ಖಂಡಿಕದ ದಾರಿಯಲ್ಲಿ ಸಿಗುವ ಕಲ್ಮಕ್ಕಿಯ ಹೊಸೊಕ್ಕಲು ನಾರಾಯಣಪ್ಪನ ಮಗಳು ಸರೋಜಳೊಂದಿಗೆ ವಿವಾಹವಾಯಿತು. ಇಲ್ಲಿ ಹೊಸೊಕ್ಕಲು ಎಂದರೆ ಹೊಸದಾಗಿ ಬಂದವರು ಎಂದರ್ಥ. ಕಲ್ಮಕ್ಕಿಗೆ ಇವರು ದೂರದ ಹೊನ್ನಾವರ ಸಮೀಪದ ಶರಾವತಿ ನದಿ ದಂಡೆಯಲ್ಲಿರುವ ಹಡಿನಬಾಳದಿಂದ ವಲಸೆ ಬಂದಿದ್ದರು. ಜೀವನೋಪಾಯಕ್ಕೆ ಖಂಡಿಕದ ರಾಮಭಟ್ಟರ ತೋಟವನ್ನು ಗೇಣಿಗೆ ಮಾಡಿಕೊಂಡಿದ್ದರು.

  ನನ್ನ ಅಪ್ಪ ಗಣಪತಿಗೆ ಮದುವೆಯಾದಾಗ ಹದಿನಾರು ವರ್ಷ. ಅದೇ ರೀತಿ ಅಮ್ಮ ಸರೋಜಂಗೆ ಹದಿಮೂರು ವರ್ಷ. ಇದೇ ಸಮಯಕ್ಕೆ ಸಾಲೆಕೊಪ್ಪದಿಂದ ಸುಮಾರು ನಾಲ್ಕು ಮೈಲಿ ದೂರದಲ್ಲಿರುವ ಮುಂಡಿಗೆ ಹಳ್ಳದಲ್ಲಿ ಆಸ್ತಿಯೊಂದನ್ನು ಖರೀದಿಸಿದರು. ಅಲ್ಲಿಗೆ ವ್ಯವಸಾಯ ಮಾಡಲು ಯಾರು ಹೋಗುವುದೆಂದು ಸಾಕಷ್ಟು ಚರ್ಚೆಯಾಗಿ ಅಂತಿಮವಾಗಿ ಗಣಪತಿ (ನನ್ನ ತಂದೆ) ಅಲ್ಲಿಗೆ ಹೋಗಿ ಸಾಗುವಳಿ ಮಾಡುವುದೆಂದು ನಿರ್ಧಾರವಾಯಿತು. ೧೯೬೦ರ ಹೊತ್ತಿಗೆ ನವದಂಪತಿಗಳು ಸಂಸಾರವನ್ನು ಆರಂಭಿಸಲು ಮುಂಡಿಗೆಹಳ್ಳಕ್ಕೆ ತೆರಳಿದರು.

  ಇಂದು ಮುಂಡಿಗೆಹಳ್ಳ ಒಂದು ಪರಿಚಿತ ಸ್ಥಳ. ರಾಷ್ಟ್ರೀಯ ಹೆದ್ದಾರಿ ೨೦೬ ಈ ಊರಿನ ಮೂಲಕ ಹಾದು ಹೋಗುತ್ತದೆ. ಶಿವಮೊಗ್ಗದ ಕಡೆಯಿಂದ ಜೋಗ ಜಲಪಾತವನ್ನು ನೋಡಲು ಹೋಗುವ ಪ್ರವಾಸಿಗರು ಸಮ್ಮ ಊರಿನ ಮೂಲಕವೇ ಹೋಗಬೇಕು. ವಿಕಿಮ್ಯಾಪಿಯಾದಲ್ಲಿ ನಿಮಗೆ ಮುಂಡಿಗೆಹಳ್ಳವನ್ನು ಗುರುತಿಸಲು ಸಾಧ್ಯ. ಈ ಊರಿಗೆ ಅಪಘಾತದ ಸ್ಥಳ ಎಂಬ ಹಣೆಪಟ್ಟಿ ಬೇರೆ ಇದೆ. ಇಲ್ಲಿ ನಡೆಯುವ ಅಪಘಾತಗಳಿಗೆ ಚಾಲಕರ ಅಜಾಗರೂಕತೆಯೇ ಕಾರಣ. ತುಸು ಇಳಿಜಾರಾದ ರಸ್ತೆಯಲ್ಲಿ ವೇಗವಾಗಿ ಬಂರುವ ವಾಹನ ಚಾಲಕರು ಸೇತುವೆಯನ್ನು ದಾಟುತ್ತಿದ್ದಂತೆ ಬಲಕ್ಕೆ ತಿರುಗಬೇಕು. ಈ ಸ್ಥಳದಲ್ಲಿ ಹಿಡಿತ ಸಿಗದೆ ವಾಹನಗಳು ಪಲ್ಟಿಯಾಗುತ್ತವೆ. ಈ ಬಗೆಯ ಅಪಘಾತಗಳಿಗೆ ಇನ್ನೊಂದು ಕಾರಣವನ್ನು ಕೆಲವರು ಗುರುತಿಸುತ್ತಾರೆ. ಮುಂಡಿಗೆಹಳ್ಳದ ಈ ಪ್ರದೇಶದಲ್ಲಿ ಒಂದು ಭೂತವಿದೆ. ಅದರ ಉಪಟಳವಿದು ಎಂದು ಕಥೆ ಹೇಳುವವರಿಗೇನೂ ಕಡಿಮೆಯಿಲ್ಲ. ಈ ಭೂತಪ್ಪನ ಕಥೆಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ.
  ೧೯೬೦ರ ಹೊತ್ತಿಗೆ ಮುಂಡಿಗೆ ಹಳ್ಳ ಹೇಗಿತ್ತು ಎಂದು ಗಮನಿಸುವ ಅಗತ್ಯವಿದೆ. ನಮ್ಮ ಮನೆಯ ಪರಿಸರದಲ್ಲಿ ಇದ್ದದ್ದು ಇದೊಂದೇ ಮನೆ. ಕರೆದರೆ, ಕೂಗಿದರೆ ಮರುದನಿ ಕೊಡುವುದಕ್ಕೆ ಇನ್ನೊಬ್ಬರಿಲ್ಲ. ಸರಿಸುಮಾರು ಪಶ್ಚಿಮಕ್ಕೆ ಮುಖಮಾಡಿದ ಒಂದು ಸಣ್ಣ ಹಂಚಿನ ಮನೆ. ಅದಕ್ಕೆ ತಾಗಿ ದನಗಳನ್ನು ಕಟ್ಟಲು ಒಂದು ಕೊಟ್ಟಿಗೆ. ಮನೆಯ ಹಿಂಬದಿಯಲ್ಲಿ ಸ್ನಾನಕ್ಕೆಂದು ನಿರ್ಮಿಸಿದ ಬಚ್ಚಲು. ಇದರೊಂದಿಗೆ ಕುಡಿಯುವ ನೀರಿನ ಬಾವಿ. ಬಚ್ಚಲು ಮತ್ತು ವಾಸದ ಮನೆಯ ನಡುವೆ ಒಂದು ಸಣ್ಣ ಅಂಗಳ. ಇದರಲ್ಲಿ ಒಂದು ತುಳಸಿ ಕಟ್ಟೆ.
  ಮನೆಯ ಮುಂಭಾಗದಲ್ಲಿ ಬತ್ತ ಬೆಳೆಯುವ ಗದ್ದೆ. ಗದ್ದೆಯ ನಡುವೆ ಹರಿದು ಹೋಗುವ ಮುಂಡಿಗೆಹಳ್ಳದ ಹೊಳೆ. ಹೊಳೆ ಎಂದರೆ ತೋಡಿಗಿಂತ ದೊಡ್ಡದು. ಆದರೆ ನದಿಗಿಂತ ಸಣ್ಣದು. ಮನೆಯ ಹಿಂಭಾಗ ದಟ್ಟವಾದ ಅರಣ್ಯ. ದಟ್ಟವಾದ ಬಿದಿರಿನ ಪೊದೆಗಳು. ಮನೆಗೆ ಹೋಗಲು ಇರುವುದು ಒಂದು ಕಾಲುದಾರಿ. ಸಂಜೆಯಾಗುತ್ತಿದ್ದಂತೆ ಮನೆಯ ಹಿಂಬದಿಯ ಕಾಡಿನಲ್ಲಿ ಹುಲಿ ಕೂಗುವ ಸದ್ದು ನಿರಂತರವಾಗಿ ಕೇಳುತ್ತಿತ್ತು. ಕೆಲವೊಮ್ಮೆ ಮನೆಯ ಸಮೀಪ ಹುಲಿರಾಯ ಬರುವುದಿತ್ತು. ಹಂದಿ, ನರಿ, ನವಿಲು ಮುಂತಾದವು ಮನೆಯ ಸಮೀಪದ ನಿತ್ಯ ಅತಿಥಿಗಳು. ಮನೆಯ ಹಿಂದೆ ತುಸು ದೂರದಲ್ಲಿ ಒಂದು ಚೌಡಿಯ ಮರವಿತ್ತು.! ಚೌಡಿ ಮರವೆಂದರೆ ಗ್ರಾಮೀಣ ಪರಿಭಾಷೆಯಲ್ಲಿ ಒಂದು ಸಾತ್ವಿಕ ದೇವತೆ ವಾಸವಾಗಿರುವ ಮರ ಎಂದರ್ಥ. ನಮ್ಮ ಮನೆಯಲ್ಲಿ ಇಂದಿಗೂ ಈ ಚೌಡಿಗೆ ನಡೆದುಕೊಳ್ಳುವ ಪದ್ಧತಿ ಇದೆ.

  ಅಮ್ಮ ಮುಂಡಿಗೆ ಹಳ್ಳಕ್ಕೆ ಬರುವಾಗ ಮದುವೆಯ ಸಂದರ್ಭದಲ್ಲಿ ಬಳುವಾರಿಗೆಂದು ಹಾಕಿದ ದನವನ್ನು ಜೊತೆಗೇ ತಂದಿದ್ದರು.
  ಲಿಂಗನಮಕ್ಕಿ ಆಣೆಕಟ್ಟನ್ನು ಕಟ್ಟುತ್ತಿದ್ದ ಸಮಯವಿದು. ಆಣೆಕಟ್ಟು ಮೇಲೆದ್ದಂತೆ ಒಂದೊಂದೇ ಊರುಗಳು ಮುಳುಗತೊಡಗಿದವು. ಇದರ ಪರಿಣಾಮವಾಗಿ ಗಾಲಿಮನೆಯಿಂದ ಒಂದು ಕುಟುಂಬ ಮುಂಡಿಗೆ ಹಳ್ಳಕ್ಕೆ ಬಂದಿತು. ಸರ್ಕಾರ ನೀಡಿದ ನೆಲದಲ್ಲಿ ಮನೆಕಟ್ಟಿಕೊಂಡರು. ಒಂದಷ್ಟು ನೆಲವನ್ನು ಖರೀದಿಸಿದರು. ರಸ್ತೆಯ ಇನ್ನೊಂದು ಬದಿಗೆ ಶರಾವತಿ ಹಿನ್ನೀರಿನಲ್ಲಿ ಮುಳುಗಿದ ಇನ್ನೊಂದು ಕುಟುಂಬ ಬಂದು ನೆಲೆಸಿತು. ಒಂದಿದ್ದ ಮನೆ ಮೂರಾಯಿತು.


  ಶಬ್ದಲೋಕ : ಬಳುವಾರಿ
  ಈ ಲೇಖನದ ಸಂದರ್ಭದಲ್ಲಿ ಈ ಶಬ್ದ ನಡುವೆ ಬಂದಿದೆ. ಇಂದಿನವರಿಗೆ ಇದರ ವಿವರಗಳನ್ನು ತಿಳಿಸುವ ಅಗತ್ಯವಿದೆ. ಈ ಶಬ್ದಕ್ಕೆ ಪರ್ಯಾಯವಾಗಿ ಬಳುವಳಿ ಎಂಬ ರೂಪವೂ ಬಳಕೆಯಲ್ಲಿದೆ. ಉಡುಗೊರೆ ಎಂದು ಇದಕ್ಕೆ ಅರ್ಥವನ್ನು ಹೇಳಬಹುದು. ಆದರೆ ಇಷ್ಟನ್ನೇ ಹೇಳಿದರೆ ಇದರ ಅರ್ಥ ಪೂರ್ಣವಾಗುವುದಿಲ್ಲ.

  ಮದುವೆಯ ಸಂದರ್ಭದಲ್ಲಿ ಬಳಕೆಯಾಗುವ ಪದವಿದು. ಮದುವೆಯಾಗುವ ಹುಡುಗಿಯ ಮನೆಯವರು ಒಂದು ಟ್ರಂಕಿನಲ್ಲಿ ಅಗತ್ಯ ವಸ್ತುಗಳನ್ನು ತುಂಬಿಸಿ ಕೊಡುವ ಪದ್ಧತಿಯಿತ್ತು. ಈಗಲೂ ಇದೆ.

  ಸಾಮಾನ್ಯವಾಗಿ ಬಳುವಾರಿ ಟ್ರಂಕನ್ನು ಸಿದ್ಧಪಡಿಸುವ ಜವಾಬ್ದಾರಿ ಮನೆಯ ಅಳಿಯನದು. ಈ ಟ್ರಂಕಿನಲ್ಲಿ ಸ್ವಲ್ಪ ಅಕ್ಕಿ, ತರಕಾರಿ, ಬೇಳೆ ಕಾಳುಗಳು, ಪೂಜಾ ಸಾಮಗ್ರಿ, ಪೂಜಿಸುವ ದೇವರು, ಅಡಿಗೆಯ ಪಾತ್ರೆ ಮುಂತಾದ ದಿನಬಳಕೆಯ ಸಾಮಗ್ರಿಗಳಿರುತ್ತವೆ. ನನ್ನ ಅಮ್ಮನಿಗೆ ಅಜ್ಜ ಒಂದು ಹಿತ್ತಾಳೆ ಚೊಂಬು ಮತ್ತು ಒಂದು ಹಸುವನ್ನು ಬಳುವಾರಿಗೆ ಕೊಟ್ಟ್ಟಿದ್ದರು.

  ಹಿಂದಿನ ಕಾಲದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಕಲ್ನಡಿಗೆ ಅಥವಾ ಎತ್ತಿನ ಗಾಡಿಯಲ್ಲಿ ಹೋಗಬೇಕಾಗಿತ್ತು. ಹೀಗಾಗಿ ಮದುಮಕ್ಕಳಿಗೆ ದಾರಿಯಲ್ಲಿ ಅಡಿಗೆ ಮಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಅಗತ್ಯ ಸಾಮಗ್ರಿಗಳನ್ನು ಕಳಿಸುತ್ತಿದ್ದರೆಂದು ಕಾಣುತ್ತದೆ. ಈ ಪದ್ಧತಿ ಸಾಂಕೇತಿಕ ರೂಪವನ್ನು ಪಡೆದು ಈಗಲೂ ಮಲೆನಾಡಿನಲ್ಲಿ ಭಾಗದಲ್ಲಿ ಆಚರಣೆಯಲ್ಲಿದೆ. ಆದರೆ ಇಂದು ಟ್ರಂಕಿನ ಬದಲು ಸೂಟ್‌ಕೇಸ್ ಬಳಸುತ್ತಾರೆ.

  ಹಳಗನ್ನಡ ಕಾವ್ಯಗಳಲ್ಲಿಯೂ ಬಳುವಳಿಯ ಪ್ರಸ್ತಾಪವಿದೆ. ಕೃಷ್ಣನು ಸುಭದ್ರೆಗೆ ಬಳುವಳಿಯನ್ನು ಕೊಟ್ಟ ಉಲ್ಲೇಖ ಪಂಪಭಾರತದಲ್ಲಿದೆ. ವಡ್ಡಾರಾಧನೆಯಲ್ಲಿ ಸುಮತಿಗೆ ಬಳುವಳಿ ನೀಡಿದ ವಿವರಗಳಿವೆ. ಕಾವ್ಯಗಳಲ್ಲಿ ಆನೆ, ಕುದುರೆ, ರಥ, ಪದಾತಿ, ಲಲನೆಯರು, ವಸ್ತ್ರಾಭರಣ, ವಾಹನ ಮುಂತಾದ ವಸ್ತುಗಳನ್ನು ಬಳುವಳಿಯಾಗಿ ನೀಡಿದ ವಿವರಗಳಿವೆ.
  Read more...
  0

  ಪುತ್ತೂರಿನಲ್ಲಿ ಕಾಲು ಶತಮಾನದ ಕನ್ನಡದ ಸಣ್ಣಕಥೆಗಳು - ವಿಚಾರ ಸಂಕಿರಣ

 • ಡಾ.ಶ್ರೀಧರ ಎಚ್.ಜಿ.

 • ಕರಾವಳಿ ಲೇಖಕಿ - ವಾಚಕಿಯರ ಸಂಘ ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂಘವು ಜನವರಿ ೮ ಮತ್ತು ೯ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದೊಂದಿಗೆ ವಿವೇಕಾನಂದ ಕಾಲೇಜಿನ ಬೈಂದೂರು ಪ್ರಭಾಕರರಾವ್ ಸಭಾಭವನದಲ್ಲಿ ಕಾಲು ಶತಮಾನದ ಕನ್ನಡದ ಸಣ್ಣಕಥೆಗಳು ಎಂಬ ವಿಚಾರ ಸಂಕಿರಣವನ್ನು ಆಯೋಜಿಸಿವೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ಈ ವಿಚಾರ ಸಂಕಿರಣದಲ್ಲಿ ನಾಡಿನ ಹಲವು ಖ್ಯಾತ ಸಾಹಿತಿಗಳು ಮತ್ತು ಚಿಂತಕರು ಭಾಗವಹಿಸಲಿದ್ದಾರೆ.

  ೧೯೮೭ರಲ್ಲಿ ಸ್ಥಾಪನೆಯಾದ ಕರಾವಳಿ ಲೇಖಕಿ - ವಾಚಕಿಯರ ಸಂಘವು ೧೯೯೪ ರಲ್ಲಿ ಪ್ರಥಮ ಮಹಿಳಾ ಸಮ್ಮೇಳನ ಮಂಗಳೂರಿನಲ್ಲಿ ನಡೆಸಿದೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಕನ್ನಡ ಸಂಘಗಳು, ಕರ್ನಾಟಕ ಸಂಘ ಮುಂತಾದವುಗಳ ಸಹಯೋಗದಲ್ಲಿ ಮತ್ತು ಹಲವಾರು ಸಾಹಿತ್ಯಿಕ, ಶೈಕ್ಷಣಿಕ, ದತ್ತಿನಿಧಿಗಳ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಸಂಘದ ಮೊದಲ ಅಧ್ಯಕ್ಷೆಯಾದವರು ಖ್ಯಾತ ಸಾಹಿತಿ ಪದ್ಮಾಶೆಣೈ. ಅನಂತರದ ವರ್ಷಗಳಲ್ಲಿ ಆನಂದಿ ಸದಾಶಿವರಾವ್, ಕೆ.ವಿ.ಜಲಜಾಕ್ಷಿ, ಸಾರಾ ಅಬೂಬಕರ್, ಮನೋರಮಾಭಟ್ಟ, ಡಾ.ಸಬೀಹಾ ಭೂಮಿಗೌಡ, ಲೀಲಾವತಿರಾವ್, ಸಾವಿತ್ರಿಭಟ್ಟ, ರತ್ನಾಶೆಟ್ಟಿ, ಚಂದ್ರಕಲಾನಂದಾವರ ಸಂಘದ ಅಧ್ಯಕ್ಷರಾದವರು. ಶ್ರೀಮತಿ ಎ.ಪಿ.ಮಾಲತಿ ಈಗಿನ ಅಧ್ಯಕ್ಷೆ .
  ಹುಬ್ಬಳ್ಳಿಯ ಮೂರುಸಾವಿರ ಮಠದ ಪೂಜ್ಯ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳ ಆಶೀರ್ವಚನದಲ್ಲಿ ೧೯೮೫ರಲ್ಲಿ ಅಸ್ತಿತ್ವಕ್ಕೆ ಬಂದ ಉತ್ತರ ಕರ್ನಾಟಕ ಲೇಖಕಿಯರ ಸಂಘಕ್ಕೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. ಆ ಪ್ರಯುಕ್ತ ರಾಜ್ಯದ ಬೇರೆ ಬೇರೆ ಕಡೆ ನಡೆಸಲಿರುವ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಒಂದು ಕಾರ್ಯಕ್ರಮವನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಹಯೋಗದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

  ವಿಚಾರ ಸಂಕಿರಣವನ್ನು ಖ್ಯಾತ ಸಾಹಿತಿ ಶ್ರೀಮತಿ ವೈದೇಹಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಕಾದಂಬರಿಗಾರ್ತಿ ಡಾ ಸಾರಾ ಅಬೂಬಕ್ಕರ್ ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾಮಧು ವೆಂಕಾ ರೆಡ್ಡಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣದ ಕುರಿತು ಡಾ.ಶಾಂತಾ ಇಮ್ರಾಪೂರ ಪ್ರಾಸ್ತಾವನೆ ಮಾಡಲಿದ್ದು, ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಆಡಳಿತ ಮಂಡಲಿಯ ಅಧ್ಯಕ್ಷರಾದ ಪ್ರೊ.ಎ.ವಿ.ನಾರಾಯಣ ವಹಿಸಲಿದ್ದಾರೆ.

  ಎರಡು ದಿನಗಳ ವಿಚಾರ ಸಂಕಿರಣದಲ್ಲಿ ೧೯೮೫ರಿಂದ - ೨೦೧೦ ರ ಕಾಲಾವಧಿಯಲ್ಲಿ ಕನ್ನಡ ಸಣ್ಣಕಥೆ, ಜಾಗತೀಕರಣದ ಸುಳಿಯಲ್ಲಿ ಕುಟುಂಬದ ಪರಿಕಲ್ಪನೆ, ಧರ್ಮ - ಸಂಸ್ಕೃತಿಯ ಪ್ರಶ್ನೆಗಳು, - ಎಂಬ ವಿಷಯಗಳ ಮೇಲೆ ಗೋಷ್ಠಿಗಳು ನಡೆಯಲಿವೆ. ಡಾವಿನಯಾ ಒಕ್ಕುಂದ ಧಾರವಾಡ, ಶ್ರೀಮತಿ ಜ್ಯೋತಿ ಚೇಳ್ಯಾರು, ಡಾ.ಕವಿತಾ ರೈ, ಡಾ.ಮಹಾಲಿಂಗ ವಿವಿಧ ವಿಷಯಗಳ ಕುರಿತು ತಮ್ಮ ಚಿಂತನಶೀಲ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

  ಹೊಸ ಶತಮಾನದಲ್ಲಿ ಸಣ್ಣಕಥೆ - ಎಂಬ ವಿಷಯದ ಕುರಿತು ಸಂವಾದ ಗೋಷ್ಟಿಯನ್ನು ಏರ್ಪಡಿಸಿದ್ದು ಡಾ ಸಬಿತಾ ಬನ್ನಾಡಿ, ಡಾ.ಗೀತಾ ವಸಂತ, ಡಾ.ಸುಲತಾವಿದ್ಯಾಧರ, ಡಾ.ಸಿದ್ಧಗಂಗಮ್ಮ, ಶ್ರೀಮತಿ ಅನುಪಮಾ ಪ್ರಸಾದ್, ಶ್ರೀ.ಗೋಪಾಲಕೃಷ್ಣ ಕುಂಟಿನಿ, ಡಾ.ಬಸವರಾಜ ಡೋಣೂರು, ಡಾ.ಗಿರೀಶ ಭಟ್ ಅಜಕ್ಕಳ ಮತ್ತು ಡಾ.ಡಿಎಮ್ ಹಿರೇಮಠ ಈ ಸಂವಾದದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ. ವಿವಿಧ ಗೋಷ್ಠಿಗಳ ಅಧ್ಯಕ್ಷತೆಯನ್ನು ಪ್ರೊ.ಮಾಲತಿ ಪಟ್ಟಣ ಶೆಟ್ಟಿ, ಡಾ.ಸಬಿಹಾ ಭೂಮಿ ಗೌಡ, ಡಾ.ಪಾರ್ವತಿ ಐತಾಳ ವಹಿಸಲಿದ್ದಾರೆ.

  ಒಂಬತ್ತನೇ ತಾರೀಕು ನಡು ಮಧ್ಯಾಹ್ನ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಲಿದೆ. ನಾಡಿನ ಖ್ಯಾತ ಚಿಂತಕರು ಮತ್ತು ಕಥಗಾರರಾದ ಡಾ.ಎಸ್.ದಿವಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಖ್ಯಾತ ಕಥೆಗಾರ್ತಿ ಡಾ.ವೀಣಾ ಶಾಂತೇಶ್ವರ ವಹಿಸಲಿದ್ದಾರೆ.

  ಅದೇ ವೇದಿಕೆಯಲ್ಲಿ ಅಪರಾಹ್ನ ೨.೩೦ರಿಂದ ಖ್ಯಾತ ಕವಯಿತ್ರಿ ಪ್ರೊ.ಮಾಲತಿ ಪಟ್ಟಣ ಶೆಟ್ಟಿ ಅವರಿಗೆ ನಿರಂಜನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
  Read more...
  0

  ತಿಂಗಳ ತರಂಗ - ಜನವರಿ ೨೦೧೧

 • ಡಾ.ಶ್ರೀಧರ ಎಚ್.ಜಿ.
 • ೧೪ನೆಯ ಶತಮಾನದಿಂದಲೇ ತುಳು ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿದೆ. ಆದರೆ ರಾಜಕೀಯಬಲ ಇಲ್ಲದಿರುವುದರಿಂದ ತುಳು ಲಿಪಿಗೊಂದು ಅಸ್ತಿತ್ವ ಸಿಗಲಿಲ್ಲ. ಅರುಣಾಬ್ಜನ ತುಳು ಭಾರತ ತುಳು ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಮಹತ್ವದ ಕೃತಿ. ತುಳು ಭಾರತದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮರಳಿ ಕಟ್ಟಲು ಬೇಕಾದ ಅಂಶಗಳಿವೆ ಎಂದು ಉಪನ್ಯಾಸಕ ಡಾ. ಧನಂಜಯ ಕುಂಬ್ಳೆ ಹೇಳಿದರು.

  ಅವರು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಅರುಣಾಬ್ಜನ ತುಳು ಭಾರತೋ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

  ತುಳು ಭಾರತವು ಕುಮಾರ ವ್ಯಾಸ ಭಾರತದ ನೆರಳಲ್ಲ. ಅನುಸಂಧಾನದ ಪ್ರಕ್ರಿಯೆ ಇಲ್ಲಿದೆ. ಅರುಣಾಬ್ಜನ ವಿಶಿಷ್ಟ ಕಥನ ಶೈಲಿ, ಛಂದೋ ವೈವಿಧ್ಯ, ಕೃತಿಯೊಳಗೆ ಸಿಗುವ ಕರಾವಳಿಯ ಪ್ರಾದೇಶಿಕ ವಿವರಗಳು, ದೈವಾರಾಧನೆಯ ಚಿತ್ರಗಳು, ಇಲ್ಲಿನ ಸಸ್ಯ ಸಂಪತ್ತು, ಜನಪದೀಯವಾದ ಅಂಶಗಳು ಈ ಕೃತಿಯ ಸ್ವೋಪಜ್ಞತೆಗೆ ಕಾರಣವಾಗಿದೆ. ತುಳು ಭಾರತ ತುಳುನಾಡಿನ ಸಾಂಸ್ಕೃತಿಕ ಕಣಜ ಎಂದು ಡಾ. ಧನಂಜಯ ಹೇಳಿದರು.

  ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿದರು. ಐ.ಕೆ. ಬೊಳುವಾರು ಕಾರ್ಯಕ್ರಮ ನಿರ್ವಹಿಸಿದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು. ದಿನಾಂಕ ೦೨.೦೧.೨೦೧೧ ರಂದು ಅನುರಾಗ ವಠಾರದಲ್ಲಿ ಈ ಕಾರ್ಯಕ್ರಮವು ನಡೆಯಿತು.
  Read more...

  Subscribe