Thursday, July 15, 2010

3

ಅಜ್ಞಾತವಾಸಕ್ಕೆ ಮುನ್ನುಡಿ . . . .

 • Thursday, July 15, 2010
 • ಡಾ.ಶ್ರೀಧರ ಎಚ್.ಜಿ.
 • Share
 • ಆಸ್ಪತ್ರೆಯ ಹೊರಗಡೆ ಕುಳಿತು ಅರ್ಧ ಗಂಟೆಯಾಗುತ್ತಾ ಬಂದರೂ ವೈದ್ಯರನ್ನು ಭೇಟಿಯಾಗುವ ಅವಕಾಶ ಬರಲಿಲ್ಲ. ಮತ್ತೊಮ್ಮೆ ಅರುಣ್ ಪ್ರಕಾಶ್ ಹೋಗಿ ವಿಚಾರಿಸಿದ ಮೇಲೆ ಮೈನರ್ ಓ.ಟಿ.ಗೆ ಬರಲು ತಿಳಿಸಿದರು. ನಾನು ಕಾಲೆಳೆದುಕೊಂಡು ಹೋಗಿ ಬೆಡ್ಡಿನ ಮೇಲೆ ಮಲಗಿದೆ. ಡಾ. ಪ್ರದೀಪರು ಬಂದು ಕಾಲನ್ನು ಒಮ್ಮೆ ಮಡಚಿದರು. ಮೊಳಕಾಲಿನ ಕೆಳಗೆ ನಾಲ್ಕಾರು ಸಲ ಒತ್ತಿದರು. ಅನಂತರ ಎಕ್ಸ್‌ರೇ ತೆಗೆಸಲು ಸೂಚಿಸಿ ಹೋದರು. ತುಸು ಹೊತ್ತಿನ ನಂತರ ಮತ್ತೆ ಬಂದು ಎಕ್ಸ್‌ರೇ ಪರೀಕ್ಷಿಸಿ ಕಾಲಿನಲ್ಲಿ ವ್ಯತ್ಯಯವಾಗಿರುವುದನ್ನು ಸೂಚಿಸಿ ಆಪರೇಶನ್ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸೂಚಿಸಿದರು. ಸಂಜೆ ಡಾ. ಅರವಿಂದ್ ಬರುತ್ತಾರೆ. ಅವರ ಅಭಿಪ್ರಾಯವನ್ನು ಒಮ್ಮೆ ಕೇಳಿ ನೋಡುವ ಎಂದು ಅವರೇ ಸೂಚಿಸಿದರು. ಇಷ್ಟಾಗುವಾಗ ಇಳಿಹಗಲು ೩.೩೦ ರ ಸಮಯ. ಇಷ್ಟರವರೆಗೂ ಮನೆಗೆ ಸುದ್ದಿ ಹೇಳಿರಲಿಲ್ಲ. ಯಾವುದೇ ಸಮಸ್ಯೆ ಇಲ್ಲವೆಂದಾದರೆ ಸೀದಾ ಮನೆಗೆ ಹೋಗಬಹುದಲ್ಲ ಎಂಬ ಅಪೇಕ್ಷೆ ನನ್ನದಾಗಿತ್ತು. ಆದರೆ ನನ್ನ ಲೆಕ್ಕಾಚಾರವನ್ನೆಲ್ಲ ತಲೆಕೆಳಗು ಮಾಡುವಂತೆ ಪರಿಸ್ಥಿತಿ ತಿರುವುಗಳನ್ನು ಪಡೆಯತೊಡಗಿತ್ತು. ಡಾ. ಅರವಿಂದರು ಸಂಜೆ ಬರುವವರೆಗೆ ನನಗೆ ಕಾಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಮನೆಗೆ ಮೊಬೈಲ್‌ನಲ್ಲಿ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿ ನನ್ನ ಪತ್ನಿ ಸವಿತಳಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಿ ತಣ್ಣಗೆ ಬೆಡ್ಡಿನ ಮೇಲೆ ಮಲಗಿದೆ.

  ತಲೆಯೊಳಗೆ ನೂರೆಂಟು ಆಲೋಚನೆಗಳು ಬಂದು ಆತಂಕವನ್ನು ಸ್ಟೃಸುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಸಿಸ್ಟರ್ ಲೀಸಾ ನನ್ನ ಆರೋಗ್ಯವನ್ನು ವಿಚಾರಿಸುತ್ತಾ ಧೈರ್ಯವನ್ನು ಹೇಳುತ್ತಿದ್ದರು. ಅವರೊಂದಿಗಿದ್ದ ದೀನಾ ಸಿಸ್ಟರ್ ನನ್ನ ಗಾಯವನ್ನು ಶುಚಿಗೊಳಿಸಿ ಸಣ್ಣದಾಗಿ ಒಂದು ಬ್ಯಾಂಡೇಜ್ ಕಟ್ಟಿದರು. ಇದರಿಂದಾಗಿ ನನಗೆ ರೋಗಿಯ ಕಳೆ(ಲಕ್ಷಣ) ಬಂತು. ಈ ಹೊತ್ತಿಗೆ ಅವರು ನನ್ನ ಪ್ರವರವನ್ನೆಲ್ಲ ವಿಚಾರಿಸಿದ್ದರು. ನಾನು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕನೆಂದು ಗೊತ್ತಾದ ಮೇಲೆ ನನ್ನ ಬಗೆಗೆ ಮತ್ತಷ್ಟು ಆಸಕ್ತಿ ವಹಿಸಿ ಸಾಂತ್ವನದ ಮಾತುಗಳನ್ನು ಹೇಳಿದರು. ಈ ನಡುವೆ ರೋಗಿಗಳು ಬರುವುದು, ಬ್ಯಾಂಡೇಜ್ ಹಾಕಿಸಿಕೊಂಡು ಹೋಗುವುದು ನಿರಂತರವಾಗಿ ನಡೆದಿತ್ತು.

  ಸುಮಾರು ನಾಲ್ಕೂವರೆಯ ಹೊತ್ತಿಗೆ ವಿವೇಕಾನಂದದ ಎಂ.ಬಿ.ಎ.ವಿದ್ಯಾರ್ಥಿನಿಯೊಬ್ಬಳು ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ಬಂದು ಸೇರಿದಳು. ಇದಾಗಿ ಸ್ವಲ್ಪ ಹೊತ್ತಿಗೆ ಐವತ್ತಕ್ಕಿಂತ ಹೆಚ್ಚು ಮಂದಿ ವಿದ್ಯಾರ್ಥಿಗಳು, ಒಂದಿಬ್ಬರು ಅಧ್ಯಾಪಕರು ಅಲ್ಲಿಗೆ ಬಂದು ತಲುಪಿದರು. ಈ ಹೊತ್ತಿಗೆ ಸರಿಯಾಗಿ ನನ್ನ ಮನೆಯಾಕೆ ಅಲ್ಲಿಗೆ ಬಂದಳು. ಈ ಜನ ಸಂದಣಿಯನ್ನು ನೋಡಿ ಆಕೆಗೆ ಆತಂಕ, ಕಳವಳ. ಕಣ್ಣಲ್ಲಿ ನೀರು ತುಂಬಿಕೊಂಡು ಒಳಗೆ ಬಂದು 'ಎಂತ ಆಗಿದೆ' ಎಂದು ವಿಚಾರಿಸಿದಳು. ಆದ ಎಲ್ಲಾ ಸಂಗತಿಯನ್ನು ಹೇಳಿ ಸಂಜೆಯವರೆಗೆ ಕಾಯುವ ಅನಿವಾರ್ಯತೆಯನ್ನು ಹೇಳಿದೆ. ಆಕೆಯ ಜೊತೆಗೆ ನನ್ನ ಮಗ ಚಂದನ್ ಸಹ ಬಂದಿದ್ದ. ಆತನಿಗೆ ಇದೆಲ್ಲ ಹೊಸತು. ಆಸ್ಪತ್ರೆಯಲ್ಲಿ ಈ ರೀತಿ ಇರುವುದನ್ನು ಆತ ಇದುವರೆಗೆ ನೋಡಿರಲಿಲ್ಲ. ಹೀಗಾಗಿ ಆತನ ಮುಖದಲ್ಲಿಯೂ ತುಸು ಆತಂಕವಿತ್ತು.

  ಮದುವೆ ಮನೆಗೆ ಹೊರಟವನು ನಡು ದಾರಿಯಲ್ಲಿಯೇ ಬಿದ್ದು ಆಸ್ಪತ್ರೆ ಸೇರಿದ್ದರಿಂದ ಮಧ್ಯಾಹ್ನದ ಊಟವೂ ಆಗಿರಲಿಲ್ಲ. ಸಂಜೆ ಐದು ಗಂಟೆಯಾಗಿತ್ತು. ಬೆಳಗ್ಗೆ ತಿಂಡಿ ತಿಂದ ನಂತರ ಇಷ್ಟು ಹೊತ್ತು ಹೇಗೆ ಉಪವಾಸ ಇದ್ದೆನೆಂಬುದು ನನಗೀಗಲೂ ಚೋದ್ಯದ ವಿಷಯ. ಹಸಿವನ್ನು ತಡೆದುಕೊಳ್ಳುವುದು ನನ್ನಿಂದ ಸಾಧ್ಯವಾಗದ ಸಂಗತಿ. ಅಲ್ಲಿಯೇ ಇದ್ದ ಕ್ಯಾಂಟಿನ್‌ನಿಂದ ಅವಲಕ್ಕಿ ತರಿಸಿ ಅದರ ಮೇಲೆ ಒಂದಷ್ಟು ಕಾಫಿಯನ್ನು ಸುರಿದು ತಿಂದೆ. ಅದಕ್ಕೊಂದು ವಿಚಿತ್ರ ರುಚಿ ಬಂತು. ಹಸಿವಿನ ಸಂಕಟ ತುಸು ಕಡಿಮೆಯಾತು.

  ಸ್ವಲ್ಪ ಹೊತ್ತು ಕುಳಿತೆ. ಮತ್ತೆ ಸ್ವಲ್ಪ ಹೊತ್ತು ಮಲಗಿದೆ. ಏನು ಮಾಡಿದರೂ ಹೊತ್ತು ಹೋಗುವುದಿಲ್ಲ. ನಿಧಾನವಾಗಿ ಸಂಜೆಯಾಗ ತೊಡಗಿತ್ತು. ಸಂಜೆ ಆರು ಗಂಟೆಯ ಹೊತ್ತಿಗೆ ಡಾ. ಅರವಿಂದರು ಬಂದರು. ನನಗೆ ಅವರ ಪರಿಚಯವಿರಲಿಲ್ಲ. ಆ ಹೊತ್ತಿಗೆ ಅವರು ನನ್ನ ಪಾಲಿಗೆ ದೇವರಾಗಿದ್ದರು. ಅವರಿಂದ ಬರುವ ಅಮೃತ ಸಮಾನವಾದ ದೇವವಾಕ್ಯವನ್ನು ಕೇಳಲು ಕಾತುರನಾಗಿದ್ದೆ. ಅವರು ನಾಲ್ಕಾರು ಸಲ ಕಾಲನ್ನು ಮಡಚಿ, ಬಿಚ್ಚಿ ಪರಿಶೀಲಿಸಿದರು. ಅನಂತರ ಅಲ್ಲಿಯೇ ಇದ್ದ ಎಕ್ಸ್‌ರೇಯನ್ನು ಪರಿಶೀಲಿಸಿ ಆಪರೇಶನ್ ಮಾಡಿಕೊಳ್ಳುವುದು ಅನಿವಾರ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರಸ್ವರೂಪವನ್ನು ಪಡೆಯುತ್ತದೆ ಎಂದು ಎಕ್ಸ್‌ರೇಯನ್ನು ನನಗೆ ತೋರಿಸಿ ವಿವರಿಸಿದರು. ನಿಜವಾದ ಸಮಸ್ಯೆ ಮೊಳಕಾಲು ಚಿಪ್ಪಿನ ಹಿಂಬದಿಯಲ್ಲಿತ್ತು. ಬೀಳುವ ರಭಸದಲ್ಲಿ ಎಲುಬಿಗೆ ಅಂಟಿದ ನರವೊಂದು ಎದ್ದು ಬಂದಿತ್ತು. ಬರುವಾಗ ಎಲುಬಿನ ಸಣ್ಣ ಚಕ್ಕಳಿಕೆಯನ್ನು ಕಿತ್ತುಕೊಂಡು ಬಂದಿತ್ತು. ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಸ್ಕ್ರೂ ಹಾಕಿ ಕೂರಿಸಿದರೆ ಸಮಸ್ಯೆ ಪರಿಹಾರವಾಗಬಲ್ಲದು. ಆದರೆ ಈ ಬಗೆಗೆ ಇನ್ನಷ್ಟು ಸ್ಪಷ್ಟವಾಗಬೇಕಿದ್ದರೆ ಮಂಗಳೂರಿಗೆ ಹೋಗಿ ಎಂ.ಆರ್.ಐ ಸ್ಕ್ಯಾನ್ ಮಾಡಿಸಿ ಬರುವಂತೆ ಸಲಹೆ ನೀಡಿದರು. ಇದು ನನ್ನ ಮಟ್ಟಿಗೆ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು.

  ನನಗೆ ಎಂ.ಆರ್.ಐ ಸ್ಕ್ಯಾನ್ ಎಂಬುದು ಹೊಸ ಸಂಗತಿ. ಅದನ್ನು ಮಾಡಿಸಲು ಮಾಡಬೇಕಾದ ಪೂರ್ವತಯಾರಿಯ ಬಗೆಗೆ ಮಾಹಿತಿಯಿರಲಿಲ್ಲ. ಹೀಗಾಗಿ ಡಾ. ಪ್ರದೀಪ್ ಅವರೇ ಆಸಕ್ತಿ ವಹಿಸಿ ಮಂಗಳೂರಿನಲ್ಲಿ ಎಂ.ಆರ್.ಐ ಸ್ಕ್ಯಾನ್ ಮಾಡುವ ಸಂಸ್ಥೆಯನ್ನು ಸಂಪರ್ಕಿಸಿ ಸಮಯವನ್ನು ನಿಗದಿ ಮಾಡಿ ಕೊಟ್ಟರು. ಇದಾದ ತಕ್ಷಣ ನಾನು ಕಾರಿನ ರಾಮಣ್ಣನಿಗೆ ಸಂಪರ್ಕಿಸಿ ಮುಂಜಾನೆ ಏಳು ಗಂಟೆಗೆ ಬರಲು ತಿಳಿಸಿದೆ.

  ಈ ಹೊತ್ತಿಗೆ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ನನ್ನನ್ನು ನೋಡಲು ಬಂದರು. ಅವರಲ್ಲಿ ವಿ.ಜಿ. ಭಟ್, ಹರೀಶ್ ಶಾಸ್ತ್ರಿ, ಮನಮೋಹನ ಮೊದಲಾದವರಿದ್ದರು. ನನ್ನಲ್ಲಿ ಮಂಗಳೂರಿಗೆ ಹೋಗಲು ಬೇಕಾದಷ್ಟು ಹಣವಿರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ ಹರೀಶ್ ಶಾಸ್ತ್ರಿ ಮೆಲ್ಲನೆ ಕಿಸೆಂದ ತೆಗೆದು ಎಷ್ಟು ಬೇಕೆಂದು ಕೇಳಿದ. ೧೦ ಸಾವಿರ ಇದ್ದರೆ ಕೊಡು ಎಂದಾಕ್ಷಣ ಹಿಂದೆ ಮುಂದೆ ನೋಡದೆ ಎಣಿಸಿ ಕೊಟ್ಟದ್ದು ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬ್ಯಾಂಕಿನ ನನ್ನ ಅಕೌಂಟಿನಲ್ಲಿ ಹಣವಿದ್ದರೂ ಅಲ್ಲಿಗೆ ಹೋಗುವುದು ಹೇಗೆ ? ವ್ಯಕ್ತಿ ಅಸಹಾಯಕನಾಗಿ ಮಲಗಿದ ಹೊತ್ತಿನಲ್ಲಿ ನಮ್ಮ ಅಪ್ತರೇ ಸಹಾಯ ಮಾಡಬೇಕಷ್ಟೆ.

  ವೈದ್ಯರು ರಾತ್ರಿ ಮನೆಗೆ ಹೋಗಿ ಮರುದಿನ ಬರಲು ಅನುಮತಿ ನೀಡಿದರು. ಮೈನರ್ ಒ.ಟಿ.ಯಿಂದ ಹೊರಬಂದು ನನ್ನ ಚಪ್ಪಲಿ ಹುಡುಕಿದರೆ ಕಾಣುವುದಿಲ್ಲ.! ಒಂದಷ್ಟು ಹುಡುಕಿದ ಮೇಲೆ ಎಡದ ಕಾಲಿನದು ಸಿಕ್ಕಿತು. ಗಾಯಗೊಂಡ ಬಲಕಾಲಿನದು ಕಾಣೆಯಾಗಿತ್ತು.! ಅಸ್ಪತ್ರೆಗೆ ಬಂದವರಲ್ಲಿ ಯಾರೋ ಅವಸರದಲ್ಲಿ ಬದಲಿಸಿ ಬಿಟ್ಟಿದ್ದರು. ನನ್ನ ಬಲಗಾಲಿನ ಚಪ್ಪಲಿಯನ್ನು ಹಾಕಿಕೊಂಡು ಹೋಗಿದ್ದರು. ಅವರದನ್ನು ಅಲ್ಲಿ ಉಳಿಸಿದ್ದರು. ಯಾವ ರೀತಿಯಲ್ಲಿ ನೋಡಿದರೂ ನನ್ನ ಚಪ್ಪಲಿ ಅವರದಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಅದು ಹೇಗೆ ಬದಲಾಯಿತೆನ್ನುವುದು ಬಗೆಹರಿಯದ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.

  ಮನೆಗೆ ಬರುವಾಗ ೮ಗಂಟೆ ಕಳೆದಿತ್ತು. ಈ ಹೊತ್ತಿಗಾಗುವಾಗ ಬಲಕಾಲಿನಲ್ಲಿ ಏನೋ ಆಗಿದೆ ಎಂಬ ಅನುಭವ ಆಗತೊಡಗಿತ್ತು.

  ಮುಂದಿನ ಭಾಗ ಎಂ.ಆರ್.ಐ. ಯಂತ್ರದೊಳಗೆ . . . .

  3 Responses to “ಅಜ್ಞಾತವಾಸಕ್ಕೆ ಮುನ್ನುಡಿ . . . .”

  Anonymous said...
  July 22, 2010 at 5:23 PM

  so sorry!
  Nice narration.


  Anonymous said...
  July 22, 2010 at 5:26 PM

  kannige kattida haage heliddiraa...
  wish you speedy recovery.

  ---- your beloved student.


  ಸುಶಾಂತ್ ಬನಾರಿ said...
  July 26, 2010 at 9:16 AM

  ಬಹುಶಃ ಒಬ್ಬ ಮೇಷ್ಟ್ರಿಗೆ ಇರುವ ದುರಾದೃಷ್ಟವೇ ಇದು. ಬರೆಹಕ್ಕೆ ಪ್ರತಿಕ್ರಿಯಿಸುವಾಗಲೂ ವಿದ್ಯಾರ್ಥಿ ಓದುಗರು ಹಿಂದಿನ ಬೆಂಚಿನ ಮಕ್ಕಳಂತೆ ಅನಾಮಿಕರಾಗಿಯೇ ಇರಲು ಬಯಸುತ್ತಾರೆ.
  ಪಾಠದ ನಡುವೆ ಇದ್ದಕ್ಕಿದ್ದಂತೆ ಬರುವ ಕೋಳಿ ಕೂಗಿದ ಸದ್ದಿನಂತೆ ಈ ಪ್ರತಿಕ್ರಿಯೆಗಳೂ ಯಾರದ್ದೆಂದು ಗೊತ್ತಾಗದಷ್ಟು ಗೌಪ್ಯತೆ. "ಪಾಲಿಗೆ ಬಂದದ್ದು ಪಂಚಾಮೃತ"
  -http://sushanthbanari.blogspot.com


  Subscribe