Saturday, January 30, 2010

2

ಜೋಗಿಗೆ ಸನ್ಮಾನದ ಹಿರಿಮೆ !

  • Saturday, January 30, 2010
  • ಡಾ.ಶ್ರೀಧರ ಎಚ್.ಜಿ.
  • ಉಪ್ಪಿನಂಗಡಿಯ ಗಿರೀಶ್ ರಾವ್‌ಗೆ ಸನ್ಮಾನ ! ಹೀಗೆಂದರೆ ಹಲವರಿಗೆ ಪರಿಚಯವಾಗಲಿಕ್ಕಿಲ್ಲ.
    ಬರಹಗಾರ ಜೋಗಿಗೆ ಸನ್ಮಾನ ಎಂದರೆ ಹಲವರಿಗೆ ಪರಿಚಯಸಿಗಬಹುದು.
    ಸುಮಾರು ನಾಲ್ಕು ವರ್ಷಗಳ ಹಿಂದೆ, ಗಿರೀಶ್ ರಾವ್ ಅವರನ್ನು ಕನ್ನಡ ಪ್ರಭದ ಕಛೇರಿಯಲ್ಲಿ ಭೇಟಿಯಾಗಿದ್ದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿದ್ದ ನನ್ನ ವಿದ್ಯಾರ್ಥಿನಿ ವಿದ್ಯಾರಶ್ಮಿ ಜೋಗಿಯವನ್ನು ಭೇಟಿ ಮಾಡಿಸಿದ್ದರು. ಅವರು ಪುತ್ತೂರಿನವರು ಎಂಬ ಕಾರಣಕ್ಕೆ ನನಗೆ ಆ ಭೇಟಿ ಸಂತೋಷವನ್ನು ನೀಡಿತ್ತು. ಮೊದಲ ಭೇಟಿಯಾದ್ದರಿಂದ ನನಗೆ ಆಗ ಮುಕ್ತವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಅನಂತರ ಎರಡು ವರ್ಷದ ಹಿಂದೆ ಜೋಗಿ ಪುತ್ತೂರಿಗೆ ಬಂದರು. ಗೆಳೆಯ ಗೋಪಾಲಕೃಷ್ಣ ಕುಂಟಿನಿಯ ಕಥಾಸಂಕಲನ 'ಆಮೇಲೆ ಇವನು' ಕೃತಿ ಬಿಡುಗಡೆಗೆ ಬಂದಿದ್ದರು. ಆ ಸಂದರ್ಭದಲ್ಲಿಯೇ ಅವರ ‘ಕಾಡ ಬೆಳದಿಂಗಳ" ಚಲನ ಚಿತ್ರದ ಪ್ರದರ್ಶನವನ್ನು ಪುತ್ತೂರಿನ ಅನುರಾಗದಲ್ಲಿ ಏರ್ಪಡಿಸಲಾಗಿತ್ತು. ಆಗ ಸ್ಥಳದ ಕೊರತೆಯಿಂದ ನಮ್ಮ ಕಾಲೇಜಿನ "ವಿದ್ಯಾರ್ಥಿಗಳಿಗೆ ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಚಲನ ಚಿತ್ರವನ್ನು ತೋರಿಸುವುದಾಗಿ ಹೇಳಿದೆವು. ಆಗ ಜೋಗಿಯವರ ಹೃದಯ ವೈಶಾಲ್ಯತೆಯ ಪರಿಚಯವಾಗಿತ್ತು.
    " ಸರ್. ನಿಮ್ಮ ಸಿ.ಡಿ.ಯನ್ನು ಒಂದು ವಾರದ ನಂತರ ಕಳಿಸಿಕೊಡುತ್ತೇನೆ. ವಿದ್ಯಾರ್ಥಿಗಳಿಗೆ ಇಲ್ಲಿ ಚಲನ ಚಿತ್ರವನ್ನು ತೋರಿಸಲು ಸಾಧ್ಯವಾಗುತ್ತಿಲ್ಲ" ಎಂದು ತುಸು ಅಳುಕುತ್ತಲೇ ಜೋಗಿಯವರಲ್ಲಿ ಕೇಳಿದೆ.
    "ಅಯ್ಯೋ, ಅದಕ್ಕೇನಂತೆ. ಹಾಗೇ ಮಾಡಿ" ಎಂದು ಬಿಟ್ಟರು. ನನಗೆ ಬೆಟ್ಟದಷ್ಟು ಇದ್ದ ಭಾರ ಒಮ್ಮೆಲೆ ಇಳಿಯಿತು. ಜೋಗಿಯ ಸರಳತೆ ನನಗೆ ಇಷ್ಟವಾಯಿತು. ಇದಾಗಿ ಒಂದು ವಾರದ ನಂತರ ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ 'ಕಾಡ ಬೆಳದಿಂಗಳು' ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಿಲಾಗಿತ್ತು. ಚಲನಚಿತ್ರವನ್ನು ನೋಡಿದ ನಂತರ ಸುಮಾರು ಒಂದೂವರೆ ಗಂಟೆಯಷ್ಟು ಚರ್ಚೆ ನಡೆಯಿತು. ಅದರ ಕಥೆ ಎಲ್ಲರಿಗೂ ಇಷ್ಟವಾಗಿತ್ತು. ಈ ಘಟನೆಯ ಅನಂತರ ನಾನು ಜೋಗಿಯವರ ಬರಹಗಳ ಅಭಿಮಾನಿಯಾಗಿ ಬದಲಾದೆ.
    ಅವರ ಕೃತಿಗಳಲ್ಲಿ ಬರುವ ನವಿರಾದ ನಿರೂಪಣೆ, ತೆಳುವಾದ ಹಾಸ್ಯ, ವಸ್ತು ಪಡೆಯುವ ತಿರುವುಗಳು ಆಕರ್ಷಕವಾಗಿರುತ್ತವೆ.
    ಇದೀಗ ಜೋಗಿ ಗೆಳೆಯರು ಉಪ್ಪಿನಂಗಡಿ ಮತ್ತು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಜೋಗಿಯವರನ್ನು ಗೌರವಿಸುವ ಕಾರ್ಯಕ್ರಮ ದಿನಾಂಕ ೩೧.೦೧.೨೦೧೦ರಂದು ನಡೆಯುತ್ತಿದೆ. ಹುಟ್ಟಿದೂರಿನ ಗೌರವ ಅವರಿಗೆ ಸಲ್ಲುತ್ತಿದೆ.
    ೧೯೮೦ರ ಕಾಲಘಟ್ಟದಲ್ಲಿ ಬದುಕನ್ನರಸಿ ಗೊತ್ತು ಗುರಿಯಿಲ್ಲದೆ ಬೆಂಗಳೂರಿನ ಬಸ್ಸು ಹತ್ತಿದಾಗ ಅವರ ಕಿಸೆಯಲ್ಲಿ ಬಸ್ಸಿಗಾಗುವಷ್ಟೇ ದುಡ್ಡಿತ್ತು. ಬೆಂಗಳೂರು ಅವರನ್ನು ಕೈಹಿಡಿದು ಮುನ್ನಡೆಸಿತು. ಸಾಕಷ್ಟು ಬವಣೆಯ ಅನಂತರ ಅವರು ಕನ್ನಡ ಪ್ರಭ ದಿನಪತ್ರಿಕೆಯನ್ನು ಸೇರಿದರು. ಬದುಕಿನ ಅನಿವಾರ್ಯತೆ ಪೆನ್ನು ಹಿಡಿಸಿತು. ಅವರು ರೂಪಿಸುತ್ತಿದ್ದ ಸಾಪ್ತಾಹಿಕದಲ್ಲಿ ಒಂದು ಹೊಸತನವಿತ್ತು ; ಲವಲವಿಕೆಯಿತ್ತು. ಇಲ್ಲಿಂದ ಮುಂದೆ ಅವರು ಹಿಂದಿರುಗಿ ನೋಡಿದ್ದಿಲ್ಲ. ಅವರೇ ಹೇಳುವಂತೆ
    "ಓದುಗನಾಗಲು ಹೊರಟವನು ಕಥೆ ಬರೆದೆ. ಮೆಚ್ಚಿಕೊಂಡರು. ಮತ್ತೊಂದಿಷ್ಟು ಕಥೆಗಳನ್ನು ಬರೆದು ಪ್ರಕಟಿಸಿದೆ. ಮದುವೆಯಾಯಿತು. ಕತೆಯೊಂದು ಸಿನಿಮಾ ಆಯಿತು. ರಾಜ್ಯ ಪ್ರಶಸ್ತಿಯೂ ಬಂತು. ಸೀರಿಯಲ್ಲು ಸಿನೆಮಾಗಳಿಗೆ ಸಂಭಾಷಣೆ ಬರೆದೆ. ಬರೆಯುವುದಿಲ್ಲ ಎಂದು ಕುಳಿತಾಗಲೆಲ್ಲ ಕತೆಗಳು ಹುಡುಕಿಕೊಂಡು ಬಂದು ಕಾಡಿವೆ". ಎಂದು ಅತ್ಯಂತ ವಿನಯದಿಂದ ಹೇಳುವ ಜೋಗಿ ಬರೆದ ಕೃತಿಗಳು ಹಲವು.
    ಕಾದಂಬರಿ : ಊರ್ಮಿಳಾ, ನದಿಯನೆನಪಿನ ಹಂಗು, ಯಾಮಿನಿ, ಹಿಟ್ ವಿಕೆಟ್, ಚಿಟ್ಟೆ ಹೆಜ್ಜೆ ಜಾಡು
    ಸಣ್ಣಕಥೆ : ಜೋಗಿ ಕಥೆಗಳು, ಸೀಳುನಾಲಿಗೆ (ಮರುಮುದ್ರಣದಲ್ಲಿ ಕಾಡುಹಾದಿಯ ಕಥೆಗಳು) ರಾಯಭಾಗದ ರಹಸ್ಯ ರಾತ್ರಿ,
    ಕಥಾಸಮಯ,
    ಲೇಖನ ಸಂಕಲನಗಳು ಮೂರು ಸಂಪುಟ, ಜಾನಕಿ ಕಾಲಂ ಮೂರು ಸಂಪುಟವಲ್ಲದೆ
    ಕಿರುತೆರೆಯಲ್ಲಿ ಶಿಕಾರಿ, ಶಕ್ತಿ, ಜೀವನ, ಬೆಳ್ಳಿತೆರೆ, ಶರಪಂಜರ, ಕಲ್ಯಾಣಿ,ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ ಧಾರವಾಹಿಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಒದಗಿಸಿದ ಗೌರವ ಜೋಗಿಯವರದು.
    ಚಲನಚಿತ್ರ : ಕಾಡಬೆಳದಿಂಗಳು. ಇದಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೋಗಿಯವರದೇ.
    ಮೌನಿ ಮತ್ತು ಕೇರ್ ಆಫ್ ಫುಟ್ ಪಾತ್ ಚಲನಚಿತ್ರಕ್ಕೆ ಚಿತ್ರಕಥೆ ಒದಗಿಸಿದ್ದು ಇದೇ ಜೋಗಿ.
    ಪ್ರಶಸ್ತಿ : ಜೋಗಿ ಕಥೆಗಳು ಸಂಕಲನಕ್ಕೆ ವಿಶ್ವೇಶ್ವರಯ್ಯ ಪ್ರಶಸ್ತಿ
    ಜಾನಕಿ ಕಾಲಂ ಕೃತಿಗೆ ಹಾಮಾನಾಯಕ ಪ್ರಶಸ್ತಿ
    ಕಾಡಬೆಳದಿಂಗಳು ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ .
    ಜೋಗಿ ಚಿತ್ರಕಥೆ ನೀಡಿದ ಕೇರ್ ಆಫ್ ಫುಟ್ ಪಾತ್ ಚಲನಚಿತ್ರವೂ ಪ್ರಶಸ್ತಿಯ ಗೌರವ ಪಡೆಯಿತು.
    ಇಂದು ಜೋಗಿ ನಿರಂತರ ಬರವಣಿಗೆಯ ಸಂಕೇತ. ಆತ್ಮವಿಶ್ವಾಸದ ಪ್ರತೀಕ.
    ಬರಹದಲ್ಲಿ ಸದಾ ಹೊಸತನ ಜೋಗಿಯ ವಿಶೇಷತೆ.
    ಜೋಗಿಯ ಲೇಖನಿಯ ಮಸಿ ಅಕ್ಷಯವಾಗಲಿ.
    ಜೋಗಿ ಸದಾ ಬರೆಯುತ್ತಿರಲಿ ಎಂಬುದೇ ಎಲ್ಲರ ಹಾರೈಕೆ.
    Read more...

    Tuesday, January 12, 2010

    1

    ತಿಂಗಳ ತರಂಗ ೪. - ಚರಿತ್ರೆ ಕಟ್ಟುವ ಬಗೆ

  • Tuesday, January 12, 2010
  • ಡಾ.ಶ್ರೀಧರ ಎಚ್.ಜಿ.
  • ಇಂದು ಚರಿತ್ರೆಯನ್ನು ಹೊಸ ದ್ಟೃಂದ ನೋಡುವ ಅಗತ್ಯವಿದೆ. ಹಾಗೆಯೇ ಚರಿತ್ರೆ ಕಟ್ಟುವ ವಿಧಾನವನ್ನು ಮರುಚಿಂತನೆಗೆ ಗುರಿಪಡಿಸುವ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ನೆಲೆಂದ ರಚನೆಗೊಂಡ ಚರಿತ್ರೆಯನ್ನು ತಲುಪಿಸುವ ಅಗತ್ಯವಿದೆ ಎಂದು ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎನ್. ವೆಂಕಟೇಶ್ ಹೇಳಿದರು.

    ಅವರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಯಾವುದು ಚರಿತ್ರೆ ? ಚರಿತ್ರೆ ಕಟ್ಟುವ ಬಗೆ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

    ಇಂದು ನಾವು ಓದುತ್ತಿರುವ ಚರಿತ್ರೆಯನ್ನು ನಿರ್ಲಿಪ್ತವಾಗಿ ಕಟ್ಟಲಾಗಿದೆಯೇ ? ನಿಜ ಅರ್ಥದಲ್ಲಿ ಪ್ರಸಕ್ತ ಭಾರತದ ಚರಿತ್ರೆಯನ್ನು ಕಟ್ಟಲು ಸಮರ್ಥವಾಗಿದೆಯೇ? ಹೊರಗಿನಿಂದ ಬಂದವರ ದ್ಟೃಂದ ನಿರ್ಮಾಣಗೊಂಡ ಚರಿತ್ರೆಯನ್ನು ಓದುತ್ತಾ ಬಂದಿದ್ದೇವೆ. ಈ ಪ್ರವೃತ್ತಿ ಬದಲಾಗಬೇಕು. ಚರಿತ್ರೆಯ ಪುಟಗಳಲ್ಲಿ ಜನಸಾಮಾನ್ಯರ ಕಲರವ ಕೇಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
    ಚಾರಿತ್ರಿಕ ಮಾಹಿತಿಗಳನ್ನು ಸರಿಯಾಗಿ ಸಂಗ್ರಹಿಸಿ ವಿಶ್ಲೇಷಿಸಿ ಇತಿಹಾಸವನ್ನು ಕಟ್ಟಬೇಕು. ವ್ಯಕ್ತಿಯ ವೈಯಕ್ತಿಕ ದೃಷ್ಟಿಕೋನ ಚರಿತ್ರೆಯ ವಿನ್ಯಾಸವನ್ನು ಬದಲಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದರು.

    ಕರ್ನಾಟಕ ಸಂಘದ ಅಧ್ಯಕ್ಷ ಬಿ. ಬಿ ಪುರಂದರ ಭಟ್ ಸ್ವಗತಿಸಿದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು. ರೋಹಿಣಾಕ್ಷ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿವೇಕಾನಂದ ಕಾಲೇಜಿನ ಕನ್ನಡ ಸಂಘ ಮತ್ತು ಡಾ. ದುರ್ಗಾಪ್ರವೀಣ ಇವರ ಸಹಯೋಗದಲ್ಲಿ ದಿನಾಂಕ ೧೦.೦೧.೨೦೧೦ರಂದು ಈ ಕಾರ್ಯಕ್ರಮ ನಡೆಯಿತು.

    Read more...
    0

    ಮಂಕುತಿಮ್ಮನ ಕಗ್ಗದ ಬಗೆಗೆ ಉಪನ್ಯಾಸ ಮಾಲಿಕೆ ಆರಂಭ :

  • ಡಾ.ಶ್ರೀಧರ ಎಚ್.ಜಿ.
  • ಪುತ್ತೂರಿನ ಲಕ್ಷ್ಮೀಶ ತೋಳ್ಪಾಡಿಯವರದು ಅತ್ಯುತ್ತಮ ಚಿಂತಕರಲ್ಲಿ ಒಬ್ಬರು. ಭಗವದ್ಗೀತೆ, ಮಹಾಭಾರತ, ರಾಮಾಯಣ, ಭಾಗವತ, ವೇದ, ಉಪನಿಷತ್ತು, ಸೌಂದರ್ಯಲಹರಿ, ಯೋಗವಾಸಿಷ್ಠ - ಹೀಗೆ ಹಲವು ವಿಷಯದ ಮೇಲೆ ನಿರಂತರವಾಗಿ ಉಪನ್ಯಾಸಗಳನ್ನು ನೀಡುತ್ತಾ ಬಂದ ಹಿರಿಮೆ ಇವರದು. ಇದಕ್ಕೆಲ್ಲ ವೇದಿಕೆಯನ್ನು ಕಲ್ಪಿಸಿದ್ದು ಪುತ್ತೂರಿನ ಪುರಂದರಭಟ್ಟರ ಅನುರಾಗ. ಇದೀಗ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಬಗೆಗೆ ಉಪನ್ಯಾಸ ಮಾಲಿಕೆ ದಿನಾಂಕ ೦೯.೦೧.೨೦೧೦ರಿಂದ ಆರಂಭವಾಗಿದೆ.
    ಮಂಕುತಿಮ್ಮನ ಕಗ್ಗ ಕನ್ನಡ ಸಂಸ್ಕೃತಿಯ ಒಂದು ಅಶ್ವತ್ಥವೃಕ್ಷ. ಡಿ.ವಿ.ಜಿ.ಯವರ ಕೃತಿಯಲ್ಲಿ ಕಲಿತದ್ದರ ಚೆಲುವಿದೆ. ಹಾಗೆಯೇ ಕಲಿತದ್ದನ್ನು ಮೀರುವ ತುಡಿತವಿದೆ. ವ್ಯಕ್ತಿ ತನ್ನ ಮಹತ್ವವನ್ನು ಕಳೆದುಕೊಂಡಾಗ ತಾನು ಕಂಡ ಸತ್ಯವನ್ನು ಹಂಚುವ ಹಂಬಲವಿದೆ. ಬದುಕಿನ ಬಗೆಗೆನ ವ್ಯಾಮೋಹವನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮನಸ್ಸು ಮಾತನಾಡಿದ ಸ್ಥಿತಿ ಇಲ್ಲಿದೆ ಎಂಬ ಅವರ ಆರಂಭದ ಮಾತುಗಳು ಕಗ್ಗಕ್ಕೊಂದು ಚೌಕಟ್ಟನ್ನು ಕಲ್ಪಿಸಿತು.
    ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ ಪುರಂದರಭಟ್ಟರು ಆರಂಭದಲ್ಲಿ ಸಂಪ್ರದಾಯದಂತೆ ಫಲವಸ್ತುಗಳನ್ನು ನೀಡಿ ಉಪನ್ಯಾಸ ನೀಡುವಂತೆ ಲಕ್ಷ್ಮೀಶ ತೋಳ್ಪಾಡಿಯವರನ್ನು ವಿನಂತಿ ಮಾಡಿದರು. ಈ ಉಪನ್ಯಾಸ ಮಾಲಿಕೆ ಪ್ರತಿ ಶುಕ್ರವಾರ ಸಂಜೆ ೫.೩೦ ರಿಂದ ೭ ಗಂಟೆಯವರೆಗೆ ನಡೆಯುತ್ತದೆ.
    Read more...
    0

    ವಿಜೃಂಭಣೆಯ ವಿವೇಕಾನಂದ ಜಯಂತಿ 2010

  • ಡಾ.ಶ್ರೀಧರ ಎಚ್.ಜಿ.
  • ಪುತ್ತೂರು: ಸ್ವಾಮಿ ವಿವೇಕಾನಂದರು ತಾರುಣ್ಯಕ್ಕೊಂದು ಜೀವಂತ ಹಾಗೂ ಸಾರ್ವಕಾಲಿಕ ಆದರ್ಶ. ಯುವಜನರಿಗೆ ಆತ್ಮದರ್ಶನ ಮಾಡಿಸಿ ಸಾವಿನೆಡೆಗೆ ಮುಖ ಮಾಡಿನಿಂತ ದೇಶಕ್ಕೆ ಜೀವ ತುಂಬಿ ಹೊಸ ಪಥವನ್ನು ತೋರಿದ, ದೇಶವನ್ನೇ ಬದಲಾಸಿದ ಮಹಾನ್ ಧೀಮಂತ. ಅವರ ವ್ಯಕ್ತಿತ್ವ ಇಡೀ ಜಗತ್ತಿಗೇ ಸ್ವೀಕೃತವಾಗಿತ್ತು ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯ ಸು.ರಾಮಣ್ಣ ಹೇಳಿದರು.

    ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕಾಲೇಜಿನ ಬಯಲು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದ ಭವಿಷ್ಯ ಮಾತ್ರವಲ್ಲದೆ ವರ್ತಮಾನವೂ ಯುವಕರ ಕೈಯಲ್ಲಿದೆ. ವರ್ತಮಾನದ ಅವಮಾನವನ್ನು ಗುರುತಿಸಿ ಅದಕ್ಕೆ ಸಡ್ಡು ಹೊಡೆದು ಬೆಳೆಯುವ ಛಾತಿ ಯುವಕರಲ್ಲಿ ಮೂಡಬೇಕು ಎಂದರಲ್ಲದೆ ಭಾರತದ ವೈಶಿಷ್ಟ್ಯವೇ ಇಲ್ಲಿನ ಕುಟುಂಬ ಪದ್ಧತಿ. ಇಂಥ ಘನ ವಿಶೇಷತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಉದಾತ್ತ ಮನೋಭಾವನೆ ಬೆಳೆಯಬೇಕು ಎಂದವರು ಹೇಳಿದರು. ನಮ್ಮ ದೇಶ ಭಾರತವೇ ಹೊರತು 'ಇಂಡಿಯಾ' ಅಲ್ಲ. ಅದು ಆಂಗ್ಲರು ನಮ್ಮತನದ ಮೇಲೆ ಮಾಡಿದ ಸವಾರಿ. ಆದ್ದರಿಂದ ನಾವು ಭಾರತೀಯರು ಎಂಬುದೇ ಸರ್ವವಿಧಿತ. ಈ ಹಿನ್ನೆಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಮಾತಾಡುವಾಗ ನಾವು ಇಂಡಿಯನ್ಸ್ ಅನ್ನುವುದರ ಬದಲು ಭಾರತಿಯನ್ಸ್ ಎಂದೇ ಪರಿಚಯಿಸಿಕೊಳ್ಳಬೇಕು. ಬಂಗಾರಪ್ಪ ಅನ್ನುವ ಹೆಸರು ಆಂಗ್ಲ ಭಾಷೆಯಲ್ಲಿ ಗೋಲ್ಡ್ ಫಾದರ್ ಎಂದಾಗದು. ಹೀಗಿರುವಾಗ ಭಾರತ ಅನ್ನುವ ಹೆಸರು ಇಂಡಿಯಾ ಆಗುವುದು ಹೇಗೆ? ಎಂದು ತಾರ್ಕಿಕವಾಗಿ ಪ್ರಶ್ನಿಸಿದರು .

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ವಿನಯ ಹೆಗ್ಡೆ ಹಿರಿಯರು ಮಕ್ಕಳಿಗೆ ಆದರ್ಶವಾಗಬೇಕು. ದುರದೃಷ್ಟವೆಂದರೆ ಇಂದು ಯುವಕರಿಗೆ ಉದಾಹರಣೆಗಳಾಗಬಹುದಾದ ವ್ಯಕ್ತಿಗಳೇ ಕಾಣಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಹಿರಿಯರು ಯೋಚಿಸಿ ಸಾಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ಶುಭ ಹಾರೈಸಿದರು.

    ಇದೇ ಸಂದರ್ಭದಲ್ಲಿ ವಿಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿ.ವಿ.ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ಪೈ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ಹಾಗೂ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ.ಶ್ರೀಶಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

    ಸುಮಾರು ಆರು ಸಾವಿರಕ್ಕೂ ಮಿಕ್ಕಿ ಸೇರಿದ ವಿದ್ಯಾರ್ಥಿ ಹಾಗೂ ಹೆತ್ತವರ ಸಮೂಹ.

    ನೆರೆದಿದ್ದವರೆಲ್ಲವರಿಗೂ ಶುಚಿ ರುಚಿಯಾದ ಭೋಜನ ವ್ಯವಸ್ಥೆ .

    Read more...

    Monday, January 4, 2010

    6

    ಶ್ರೀಧರ ಸ್ವಾಮೀಜಿಗೆ ನಮನ !

  • Monday, January 4, 2010
  • ಡಾ.ಶ್ರೀಧರ ಎಚ್.ಜಿ.
  • ಸ್ವಾಮೀಜಿಗಳ ಬಗೆಗೆ ವಿವಾದಗಳು ಆರಂಭವಾದಾಗಲೆಲ್ಲ ನನಗೆ ನೆನಪಾಗುವುದು ಶ್ರೀಧರ ಸ್ವಾಮಿಗಳು. ಮಹಾರಾಷ್ಟ್ರದ ಸಜ್ಜನಗಡದಿಂದ ಸಾಗರಕ್ಕೆ ಸಮೀಪದ ವರದಹಳ್ಳಿಗೆ ಆಗಮಿಸಿ ಅಲ್ಲೊಂದು ಆಶ್ರಮವನ್ನು ಸ್ಥಾಪಿಸಿ ಸದಾ ಸಮಾಜಮುಖಿಯಾಗಿ ಬದುಕಿದ ಅವರದು ಸದಾ ತಪೋಮುಖಿಯಾದ ಬದುಕು. ಬದುಕಿನಲ್ಲಿ ಯಾವುದೇ ವಿವಾದಗಳನ್ನು ಅಂಟಿಸಿಕೊಳ್ಳದೆ ಪರಿಶುದ್ಧ ಬದುಕನ್ನು ಬಾಳಿದವರು. ತಮ್ಮ ಸುತ್ತಲಿನ ಎಲ್ಲ ವರ್ಗದ ಜನ ಮತ್ತು ಸಮಾಜವನ್ನು ನಿಷ್ಕಲ್ಮಷವಾಗಿ ಪ್ರೀತಿಸಿದವರು. ಅಂತಹ ಸ್ವಮೀಜಿಯನ್ನು ಮತ್ತೆ ನೋಡಲು ಸಾಧ್ಯವೇ ಎಂಬ ಆತಂಕ ಸದಾ ಕಾಡುತ್ತದೆ. ಮೊನ್ನೆ ಊರಿಗೆ ಹೋದಾಗ ನನ್ನ ಅಮ್ಮ ತಾವು ನೋಡಿದ ಒಂದು ಘಟನೆಯನ್ನು ಹೇಳಿದರು. ಇದು ಸುಮಾರು ಐವತ್ತು ವರ್ಷಗಳ ಹಿಂದೆ ನಡೆದ ಘಟನೆ. ಸಸರವಳ್ಳಿ ದೇವಸ್ಥಾನಕ್ಕೆ ಶ್ರೀಧರ ಸ್ವಾಮಿಗಳು ಬರುವುದಿತ್ತು. ಅವರನ್ನು ನೋಡಲೆಂದು ನನ್ನ ಅಮ್ಮ ತನ್ನ ಸ್ನೇಹಿತೆ ಗಿರಿಜಕ್ಕಳೊಂದಿಗೆ ಹೋಗಿದ್ದರು. ಇವರನ್ನು ಹಿಂಬಾಲಿಸಿಕೊಂಡು ನಮ್ಮ ಅಜ್ಜ ಪ್ರೀತಿಂದ ಸಾಕುತ್ತಿದ್ದ ಒಂದು ನಾಯಿಯೂ ಹೋಯಿತು. ದಾರಿಯಲ್ಲಿ ಸಿಗುವ ತೊರೆಯೊಂದರಲ್ಲಿ ನಾಯಿ ಮುಳುಗೆದ್ದು ಸ್ನಾನಮಾಡಿತು !. ಅಮ್ಮ ದೇವಸ್ಥಾನ ತಲುಪಿದಾಗ ಶ್ರೀಧರ ಸ್ವಾಮಿಗಳು ಆಗಲೇ ಬಂದಿದ್ದರು. ಅಮ್ಮ ನಮಸ್ಕರಿಸಿ ಆಶೀರ್ವಾದ, ಅಕ್ಷತೆಯನ್ನು ಪಡೆದರು. ಸಮಯವಾಗುತ್ತಿದ್ದಂತೆ ಸ್ವಾಮಿಗಳು ಎದ್ದು ಹೊರಟರು. ದೇವಸ್ಥಾನದ ಹೆಬ್ಬಾಗಿಲಿಗೆ ಸ್ವಾಮಿಗಳು ಬರುತ್ತಿದ್ದಂತೆ ಅಮ್ಮನ ಜೊತೆಯಲ್ಲಿ ಬಂದ ನಾಯಿ ಅದೆಲ್ಲಿತ್ತೊ ಗೊತ್ತಿಲ್ಲ. ಸೀದಾ ಬಂದು ಸ್ವಾಮಿಗಳ ಕಾಲಿಗೆ ಅಡ್ಡಬಿತ್ತು. ಒಂದು ಕ್ಷಣ ಮೌನವಾದ ಸ್ವಾಮೀಜಿ " ನೀನೂ ನನ್ನ ಕಾಲಿಗೆ ಬಿದ್ದೆಯೇನೋ" ಎಂದು ಉದ್ಗರಿಸಿದರು. ಕಣ್ಮುಚ್ಚಿ ಒಂದು ಕ್ಷಣ ಧ್ಯಾನಿಸಿದರು. ಅದರ ತಲೆಯ ಮೇಲೆ ತೀರ್ಥ ಮತ್ತು ಅಕ್ಷತೆಯನ್ನು ಹಾಕಿ ಮುನ್ನಡೆದರು. ಅಮ್ಮ ಮನೆಗೆ ಬಂದರು. ನಾಯಿಯೂ ಇವರನ್ನು ಹಿಂಬಾಲಿಸಿಕೊಂಡು ಬಂದಿತು. ಮರುದಿನ ನೋಡಿದರೆ ಬಚ್ಚಲ ಮನೆಯ ಬಾವಿಕಟ್ಟೆಯ ಬಳಿ ಮಲಗಿದ್ದ ನಾಯಿ ದೇಹವನ್ನು ತ್ಯಜಿಸಿತ್ತು !.

    ನಾನು ಶ್ರೀಧರ ಸ್ವಾಮಿಗಳ ಹರಕೆಯಿಂದ ಹುಟ್ಟಿದ್ದಾಗಿ ನನ್ನಜ್ಜಿ ಯಾವಾಗಲೂ ಹೇಳುತ್ತಿದ್ದರು. ಅವರೇ ನನ್ನನ್ನು ವರದಳ್ಳಿಗೆ ಒಮ್ಮೆ ಕರೆದುಕೊಂಡು ಹೋಗಿದ್ದರು. ಆಗ ನಾನು ಶ್ರೀಧರಸ್ವಾಮಿಗಳ ಪಾದಗಳಿಗೆ ಶಿರಭಾಗಿ ವಂದಿಸಿದ್ದೆ. ಅವರು ನನ್ನ ತಲೆಯ ಮೇಲೆ ಅಕ್ಷತೆ ಹಾಕಿ ಹರಸಿದ್ದು ಈಗಲೂ ನೆನಪಿದೆ. ಅವರ ಮಂದ ಸ್ಮಿತ ಮರೆಯಲಾಗದ ಅನುಭವ.

    ಕೊನೆಯ ಮಾತು : ಈಗ ಮನುಷ್ಯರಿಗೇ ಸ್ವಾಮಿಗಳನ್ನು ಭೇಟಿ ಮಾಡುವುದು ಕಷ್ಟ. ಇನ್ನು ಪ್ರಾಣಿಗಳಿಗೆಲ್ಲಿ ಸಾಧ್ಯ. ಇದಕ್ಕು ಮಿಗಿಲಾಗಿ ಮನುಷ್ಯರು ಭೇಟಿ ಮಾಡಬಹುದಾದ ಸ್ವಾಮಿಗಳನ್ನು ಹುಡುಕುವ ಪರಿಸ್ಥಿತಿ ಬಂದಿರುವುದು ವರ್ತಮಾನದ ದುರಂತ.

    Read more...
    0

    ಹೇಮಂತ ಹಬ್ಬ

  • ಡಾ.ಶ್ರೀಧರ ಎಚ್.ಜಿ.
  • ಡಾ. ತಾಳ್ತಜೆ ವಸಂತಕುಮಾರ ಇವರ ಪತ್ನಿ ಮಣಿಮಾಲಿನಿ ಇವರ ಹೆಸರಿನಲ್ಲಿ ಆರಂಭವಾಗಿರುವ ಉಪ್ಪಿನಂಗಡಿಯ ವಸುಧಾ ಪ್ರತಿಷ್ಠಾನದ ಆಶ್ರಯದಲ್ಲಿ ೨೭.೧೨.೧೦೦೯ರಂದು ಹೇಮಂತ ಹಬ್ಬ ಕಾರ್ಯಕ್ರಮ ನಡೆಯಿತು. ತಾಳ್ತಜೆಯವರ ನೆಂಟರು, ಬಂಧುಗಳು, ಸ್ನೇಹಿತರು ಆಗಮಿಸಿದ್ದರಿಂದ ಒಂದು ಕೌಟುಂಬಿಕ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಚಿನ್ನಪ್ಪಗೌಡ ಮಾತನಾಡುತ್ತ, ಕನಸುಗಳಿಲ್ಲದ ಸಮಾಜದಲ್ಲಿ ಬದುಕುವುದು ಕಷ್ಟ. ಪ್ರೀತಿ, ಸಂಬಂಧಗಳ ಬೆಸುಗೆರುವ ಬದುಕನ್ನು ಇಂದು ಕಟ್ಟಬೇಕಾದ ಸವಾಲು ನಮ್ಮ ಮುಂದಿದೆ. ಇಂತಹ ಮನೆಹಬ್ಬಗಳ ಮೂಲಕ ಕನಸುಗಳನ್ನು ತುಂಬುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ವಿಶ್ವವಿದ್ಯಾನಿಲಯದ ವಲಯದ ಸಂಬಂಧಗಳಲ್ಲಿ ಸಾಮೀಪ್ಯದ ಕೊರತೆದೆ. ನಾವು ಬಾಲ್ಯದ ನೆನಪು, ಮುಗ್ದತೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವ್ಯಕ್ತಿಗಳ ಬದುಕಿಗೆ ಸಕಾರಾತ್ಮಕ ಚಿಂತನೆಲ್ಲದಿದ್ದರೆ ಸಮಾಜ ಮುನ್ನಡೆಯುವುದಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಸುರೇಂದ್ರರಾವ್ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಟೈಂಸ್ ಆಫ್ ಇಂಡಿಯಾದ ವರದಿಗಾರ್ತಿ ದೀಪಾಬಾಸ್ತಿ ಇವರು `ಸರಹದ್ದಿನ ಸದ್ದುಗಳು' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಭಾರತೀಯ ಸೈನಿಕರ ಬದುಕಿನ ಜೀವನ ಚಿತ್ರ ಅವರ ಈ ಉಪನ್ಯಾಸದಲ್ಲಿ ಆತ್ಮೀಯವಾಗಿ ಮೂಡಿಬಂತು. ಹೇಮಂತ ಹಬ್ಬದ ಅಂಗವಾಗಿ ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಗೌರಿಪೈ ಮತ್ತು ಹಿರಿಯ ವಿದ್ವಾಂಸ ಯದುರ್ಕಳ ಶಂಕರನಾರಾಯಣ ಭಟ್ಟ ಇವರನ್ನು ಸನ್ಮಾನಿಸಲಾತು. ವಸುಧಾ ಪ್ರತಿಷ್ಠಾನದ ನಿರ್ದೇಶಕರಾದ ಡಾ. ತಾಳ್ತಜೆ ವಸಂತಕುಮಾರ ಸ್ವಾಗತಿಸಿದರು. ಶ್ರೀಮತಿ ಇಂದಿರಾ ವಂದಿಸಿದರು. ಶ್ರೀಮತಿ ದುರ್ಗಾಮಣಿ ಕಾರ್ಯಕ್ರಮ ನಿರ್ವ"ಸಿದರು. ಸಭಾಕಾರ್ಯಕ್ರಮದ ಅನಂತರ ಯಕ್ಷಗಾನ ಬಯಲಾಟವಿತ್ತು. ಆಗಮಿಸಿದ ಅತಿಥಿಗಳಿಗೆ ಭರ್ಜರಿಯಾಗಿ ಉಪಾಹಾರ, ಊಟದ ವ್ಯವಸ್ಥೆಯಿತ್ತು. ಮುಂದಿನಸಲ ನೀವೂ ಬನ್ನಿ.
    Read more...
    0

    ತಿಂಗಳ ತರಂಗ - ೦೩

  • ಡಾ.ಶ್ರೀಧರ ಎಚ್.ಜಿ.
  • ೨೦೧೨ ಡಿಸೆಂಬರ್ ೨೧ಕ್ಕೆ ಪ್ರಳಯ ! ಎಂಬ ಸುದ್ದಿ ಮಾಧ್ಯಮಗಳಲ್ಲಿ, ಜನರಬಾಯಲ್ಲಿ ಹರಿದಾಡುತ್ತಿರುವಾಗಲೇ ಜ್ಯೋತಿಷ್ಯದ ಬಗೆಗೊಂದು ಉಪನ್ಯಾಸ ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ೨೦.೧೨.೨೦೦೯ರಂದು ನಡೆಯಿತು. ಮನುಷ್ಯನನ್ನು ತಿದ್ದಿ, ತೀಡಿ ಪ್ರೀತಿಯನ್ನು ಬೆಳೆಸಬೇಕಾದ ಜ್ಯೋತಿಷ್ಯ ಇಂದು ಆತನನ್ನು ಅಧ:ಪತನದ ಕಡೆಗೆ ತಳ್ಳುತ್ತಿದೆ. ವಾಸ್ತವದ ನೆಲೆಯಲ್ಲಿ ನೋಡುವುದಕ್ಕೆ ಬದಲಾಗಿ ಈ ಶಾಸ್ತ್ರ ಇಂದು ಪರಿಹಾರೋದ್ಯಮವಾಗಿ ರೂಪುಗೊಂಡಿದೆ. ಜ್ಯೋತಿಷ್ಯ ಎಂದರೆ ಕಾಲವಿಜ್ಞಾನ. ಸೂರ್ಯಮಂಡಲದಲ್ಲಿ ಆಗುವ ಚಲನೆಗಳು ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ. ಅನಂತ ಸಾಧ್ಯತೆಗಳಲ್ಲಿ ಒಂದು ಸಾಧ್ಯತೆಯನ್ನು ಗುರುತಿಸುವ ಪ್ರಯತ್ನ ಜ್ಯೋತಿಷ್ಯ. ಸಂಖ್ಯಾಶಾಸ್ತ್ರದ ಬಲದಲ್ಲಿ ಈ ಶಾಸ್ತ್ರವನ್ನು ಬೆಳೆಸಿದರೆ ಇದು "ಜ್ಞಾನವಾಗಬಲ್ಲದು ಎಂದು ಸುಕುಮಾರ ಆಲಂಪಾಡಿ ಹೇಳಿದ್ದಾರೆ. ಅವರು `ತಿಂಗಳ ತರಂಗ' ಕಾರ್ಯಕ್ರಮದಲ್ಲಿ `ಜ್ಯೋತಿಷ್ಯದ ಬೆಳವಣಿಗೆ ಮತ್ತು ವೈಜ್ಞಾನಿಕ ಪರಿಕಲ್ಪನೆಗಳು' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರಾಜಪೇಟೆ ಕಾರ್ಪೊರೇಶನ್ ಬ್ಯಾಂಕಿನ ಉದ್ಯೋಗಿ ಈ. ಗೋಪಾಲಕೃಷ್ಣಭಟ್ ವಹಿಸಿ ಮಾತನಾಡುತ್ತ ಜ್ಯೋತಿಷ್ಯ ಆತ್ಮದ ವಿಕಾಸಕ್ಕೆ ಇರುವ ದಾರಿ ಎಂದು ಗ್ರಹಿಸಬೇಕು. ಈ ದಾರಿಯಲ್ಲಿ ಪ್ರಕೃತಿ ರಹಸ್ಯವನ್ನು ನಮ್ಮದನ್ನಾಗಿ ಮಾಡಿಕೊಳ್ಳಲು ಯತ್ನಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಜ್ಯೋತಿಷಿ ಜಯಶಂಕರ ಭಟ್ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ. ಪುರಂದರ ಭಟ್ ಸ್ವಾಗತಿಸಿದರು. ಡಾ. ಶ್ರೀಧರ ಎಚ್. ಜಿ. ಕಾರ್ಯಕ್ರಮ ನಿರ್ವಹಿಸಿದರು.
    Read more...

    Subscribe