Sunday, July 25, 2010

1

ಎಂ.ಆರ್.ಐ. ಯಂತ್ರದೊಳಗೆ . . . .

  • Sunday, July 25, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಮೇ ೨೭ರ ಮುಂಜಾನೆ ಏಳು ಗಂಟೆಗೆ ರಾಮಣ್ಣನ ಕಾರಿನಲ್ಲಿ ಮಂಗಳೂರಿನ ಕಡೆಗೆ ಹೊರಟೆವು. ಸರಿಯಾಗಿ ೮.೩೦ಕ್ಕೆ ಬಲ್ಮಠ ಸ್ಕ್ಯಾನಿಂಗ್ ಸೆಂಟರ್‌ ತಲುಪಿದೆವು. ೮.೪೫ ಆಗುವಾಗ ಬಂದ ವ್ಯಕ್ತಿಯೊಬ್ಬರು ನಮ್ಮ ಪ್ರವರವನ್ನೆಲ್ಲ ವಿಚಾರಿಸಿ ಅದ್ಯಾವುದೋ ರಿಜಿಸ್ಟರ್‌ನಲ್ಲಿ ಒಂದೈದು ನಿಮಿಷ ತಲೆ ಹುದುಗಿಸಿ ಕುಳಿತ. ಅನಂತರ 'ನಿಮಗೆ ಸ್ಕ್ಯಾನ್ ಮಾಡಲು ಇಲ್ಲಿ ಸಮಯ ನಿಗದಿಯಾಗಿಲ್ಲ' ಎಂದು ಹೊಸ ರಾಗವನ್ನು ಆರಂಭಿಸಿದ. ನಿನ್ನೆ ಸಂಜೆ ನನ್ನ ಎದುರೇ ಡಾ. ಪ್ರದೀಪ್‌ರು ಮಾತನಾಡಿ ಮುಂಜಾನೆ ೯ ಗಂಟೆಗೆ ಸಮಯವನ್ನು ನಿಗದಿ ಪಡಿಸಿದ್ದರು. ಈತ ೧೨.೩೦ರ ನಂತರ ನಿಮಗೆ ಸಮಯ ಸಿಗಬಹುದು ಎಂದು ಹೇಳಿ ಒಳಗೆಲ್ಲೋ ಮಾಯವಾದ. ಇದಾಗಿ ಒಂದೈದು ನಿಮಿಷವಾಗುವಾಗ ಹೊರಗೆ ಪ್ರತ್ಯಕ್ಷನಾದ ಆ ವ್ಯಕ್ತಿ ಅದ್ಯಾರಲ್ಲಿಯೋ ಮೊಬೈಲಿನಲ್ಲಿ ಮಾತನಾಡಿದ. ಅನಂತರ '೯ ಗಂಟೆಗೆ ಬರಬೇಕಾದವರು ಬಂದಿಲ್ಲ. ನೀವು ಬನ್ನಿ' ಎಂದು ಒಳಗೆ ಕರೆದ. ರಾತ್ರಿ ನಾವು ಸಮಯ ನಿಗದಿ ಪಡಿಸಿದ್ದು ಆತನಿಗೆ ಗೊತ್ತಿರಲಿಲ್ಲವೆಂದು ಕಾಣುತ್ತದೆ. ಈಗ ಮುಖವುಳಿಸಿಕೊಳ್ಳಲು ಏನೋ ನೆಪ ಹೇಳಿದಂತೆ ಕಂಡಿತು. ಅಂತೂ ಬದುಕಿದೆಯಾ ಬಡಜೀವವೇ ಎಂದು ಕಾಲೆಳೆದುಕೊಂಡು ಒಳಗೆ ಹೋದೆ.

    ಇಡಿಯ ಕೊಠಡಿಯ ನಡುವೆ ಒಂದು ದೊಡ್ಡ ಯಂತ್ರವಿತ್ತು. ಅದರಿಂದ ಹೊರಗೆ ಹಾಸಿಗೆಯಂತೆ ಎಂದು ಟ್ರಾಲಿ ಹೊರಬಂದಿತ್ತು. ಅವರು ಸೂಚಿಸಿದಂತೆ ಅದರ ಮೇಲೆ ಕಾಲು ನೀಡಿ ಮಲಗಿದೆ. ಅನಂತರ ನನ್ನ ಕಾಲುಗಳನ್ನು ಬೆಲ್ಟಿನಿಂದ ಬಂಧಿಸಿದರು. ಸ್ವಲ್ಪವೂ ಅಲ್ಲಾಡಬಾರದು ಎಂದು ತಾಕೀತು ಮಾಡಿದರು. ನನ್ನ ಮಗ ಚಂದನ್‌ಗೆ ಅಲ್ಲಿಯೇ ನಿಂತು ಸ್ಕ್ಯಾನ್ ಆಗುವುದನ್ನು ನೋಡಬೇಕೆಂಬ ಅಪೇಕ್ಷೆ ಇತ್ತು. ಆದರೆ ಇಲ್ಲಿ ಯಾರೂ ಇರುವುದಿಲ್ಲವೆಂದು ಹೇಳಿ ಆತ ಎಲ್ಲರನ್ನೂ ಹೊರಗೆ ಕಳಿಸಿದ. ಆತನೂ ಬಾಗಿಲು ಹಾಕಿ ಹೊರನಡೆದ. ಕೊಠಡಿಯಲ್ಲಿ ಯಂತ್ರಗಳ ನಡುವೆ ನಾನೊಬ್ಬನೇ! ಒಂದೆರಡು ನಿಮಿಷದ ನಂತರ ನಾನು ಮಲಗಿದ ಬೆಡ್ ನಿಧಾನವಾಗಿ ಯಂತ್ರದ ಒಳಗೆ ಚಲಿಸಲಾರಂಭಿಸಿತು. ಒಂದು ರೀತಿ ಗುಹೆಯ ಒಳಗೆ ಹೋಗುತ್ತಿರುವ ಅನುಭವ. ನನಗೆ ಪಕ್ಕನೆ ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರ ಕಥೆಯಲ್ಲಿ ಬರುವ ಗುಹೆಯ ನೆನಪಾತು. ಆದರೆ ಆ ಗುಹೆಗೆ ಬಂಡೆಯ ಬಾಗಿಲಿತ್ತು. ಇಲ್ಲಿ ಇದು ತೆರೆದ ಯಂತ್ರ. ಕಾಲು, ಮೊಳಕಾಲು, ಸೊಂಟ, ಎದೆ, ಕುತ್ತಿಗೆಯವರೆಗೆ ಹೋಗಿ ಟ್ರಾಲಿ ನಿಂತಿತು. ತಲೆಯೊಂದು ಹೊರಗೆ ಉಳಿತು. ಅಬ್ಬ, ತಲೆಯಾದರೂ ಉಳಿಯಿತಲ್ಲ ಎಂದುಕೊಂಡೆ.

    ನಾನು ಮಲಗಿದಲ್ಲಿಂದಲೇ ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಯಂತ್ರದ ಒಳಗೆ ಲೈಟ್ ಉರಿಯುತ್ತಿತ್ತು. ಸುತ್ತಲೂ ನಾಲ್ಕಾರು ವಿವಿಧ ಬಣ್ಣದ ದೀಪಗಳು. ಒಂದಷ್ಟು ವೈರುಗಳು. ಎ.ಸಿ. ಹಾಕಿದ್ದರ ಪರಿಣಾಮವಾಗಿ ಕೊಠಡಿ ತಂಪಾಗಿತ್ತು. ಇಷ್ಟಾಗುವಾಗ ದಡ್ ಎಂದು ಒಂದು ಸದ್ದಾಯಿತು. ಏನಿರಬಹುದು ಎಂದು ಆಲೋಚಿಸುವಷ್ಟರಲ್ಲಿ 'ಕರ್ ಕೊರ್' ಎಂಬ ಶಬ್ದ ಆರಂಭವಾತು. ನಡು ನಡುವೆ ಮಲಗಿದ ಬೆಡ್ ತುಸು ಹಿಂದೆ ಮುಂದೆ ಚಲಿಸುತ್ತಿತ್ತು. ಒಂದಷ್ಟು ಹೊತ್ತು ಇದರದೇ ಪುನರಾವರ್ತ. ಮುಕ್ಕಾಲು ಗಂಟೆ ಆಗಿರಬಹುದು.ನನಗೆ ಯಾವಾಗ ಇದು ಮುಗಿಯುತ್ತದೆ ಎಂದು ಅನಿಸತೊಡಗಿತು. ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ಯಂತ್ರದ ಒಳಗೆ ಮಲಗಿ ಕಾಲ ಕಳೆಯುವುದು ಸುಲಭವಲ್ಲ. ಅಲ್ಲಾಡುವಂತಿಲ್ಲ. ಜನರ ಸುಳಿವಿಲ್ಲ. ಈ ನಡುವೆ ಕರೆಂಟು ಹೋದರೆ ಏನು ಗತಿ? ಶಾರ್ಟ್ ಸರ್ಕ್ಯೂಟ್ ಆದರೆ ನನ್ನ ಕತೆ ಹೇಗೆ? ಎಂಬ ಬೇಡದ ಸಂಗತಿಗಳು ತಲೆಯಲ್ಲಿ ಹೊಕ್ಕು ಕೊರೆಯತೊಡಗಿದ್ದವು. ಸ್ಕ್ಯಾನ್ ಮಾಡುವ ವ್ಯಕ್ತಿ ಹೊರಗೆ ಏನು ಮಾಡುತ್ತಿರಬಹುದು ಎಂಬ ಆಲೋಚನೆ ಎಡೆಯಲ್ಲಿ ಬಂತು. ಬಹುತೇಕ ಆತ ಕಂಪ್ಯೂಟರ್ ಮೂಲಕವೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದನೆಂದು ಕಾಣುತ್ತದೆ. ಸ್ಕ್ಯಾನಿಂಗ್ 'ವರದಿ ಸಕಾರಾತ್ಮಕವಾಗಿರಲಿ. ಆಪರೇಶನ್ ಆಗುವ ಸಂದರ್ಭ ಬರದಿರಲಿ' ಎಂದು ಧ್ಯಾನಿಸುತ್ತಾ ಮಲಗಿದೆ.

    ಅಂತೂ ೪೫ ನಿಮಿಷದ ಯಂತ್ರದೊಳಗಿನ ವಾಸ ಮುಗಿತು. ಅರ್ಧ ಗಂಟೆಯಲ್ಲಿ ವರದಿ ನಮ್ಮ ಕೈಗೆ ಬಂತು. ಇದನ್ನು ಹಿಡಿದುಕೊಂಡು ೧೧ ಗಂಟೆಗೆ ಪುತ್ತೂರಿನ ಕಡೆಗೆ ಹೊರಟೆವು. ದಾರಿಯಲ್ಲಿ ಕುತೂಹಲಕ್ಕೆ ವರದಿಯನ್ನು ಬಿಡಿಸಿ ಓದಿದರೆ ಒಂದಕ್ಷರವೂ ಅರ್ಥವಾಗಲಿಲ್ಲ. ಇಡೀ ವರದಿಯಲ್ಲಿ ನನಗೆ ಅರ್ಥವಾಗಿದ್ದು 'ನಾರ್ಮಲ್' ಮತ್ತು 'ಚೇಂಜ್' ಎಂಬ ಎರಡು ಶಬ್ದಗಳು ಮಾತ್ರ.


    ೧೨.೩೦ರ ಹೊತ್ತಿಗೆ ನಾವು ಮಹಾವೀರ ಮೆಡಿಕಲ್ ಸೆಂಟರ್‌ಗೆ ತಲುಪಿದೆವು. ಪುನ: ನಿನ್ನೆ ಮಲಗಿದ ಮೈನರ್ ಒ.ಟಿ.ಯಲ್ಲಿ ಮಲಗಿಸಿದರು. ಅದೇ ಲೀಸ ಸಿಸ್ಟರ್ ಮತ್ತು ದೀನ ಇದ್ದರು. ಸುಮಾರು ಒಂದೂವರೆಯ ಹೊತ್ತಿಗೆ ಬಂದ ಡಾ. ಪ್ರದೀಪ್ ಸ್ಕ್ಯಾನ್‌ನ ವರದಿಯನ್ನು ನೋಡಿ ಆಪರೇಶನ್ ಮಾಡುವ ಅಗತ್ಯವನ್ನು ವಿವರಿಸಿದರು. ಸಂಜೆ ಡಾ. ಅರವಿಂದರು ಬಂದ ನಂತರ ಆಪರೇಶನ್‌ನ ದಿನ ಮತ್ತು ಸಮಯವನ್ನು ನಿಗದಿಗೊಳಿಸುವ. ನೀವು ಆಸ್ಪತ್ರೆಗೆ ಸೇರ್ಪಡೆಯಾಗಿ ಎಂದು ಸೂಚಿಸಿ ಹೋದರು. ಆದರೆ ಇಡೀ ಆಸ್ಪತ್ರೆಯಲ್ಲಿ ಅಂದು ಒಂದೇ ಒಂದು ಕೊಠಡಿ ಖಾಲಿಯಿರಲಿಲ್ಲ. ಸಂಜೆಯವರೆಗೂ ಮೈನರ್ ಒ.ಟಿ.ಯಲ್ಲಿ ಮಲಗಿ ಸಮಯವನ್ನು ತಳ್ಳಿದೆ. ೫ ಗಂಟೆಯ ಹೊತ್ತಿಗೆ ಬಂದ ಡಾ. ಅರವಿಂದರು ನಾಳೆ ಶಸ್ತ್ರಚಿಕಿತ್ಸೆ ಮಾಡುವ. ಸಮಯವನ್ನು ಮತ್ತೆ ಹೇಳುತ್ತೇನೆ ಎಂದರು. ಇಲ್ಲಿಂದ ಅಪಘಾತದ ಪರಿಣಾಮದ ಇನ್ನೊಂದು ಘಟ್ಟ ಆರಂಭವಾತು. ಅದುವರೆಗೂ ನಾವು ಊರಿನಿಂದ ಯಾರೂ ಬರುವ ಅಗತ್ಯವಿಲ್ಲವೆಂದು ಭಾವಿಸಿದ್ದೆವು. ಈಗ ಊರಿಗೆ ಸಂಪರ್ಕಿಸಿದ ನನ್ನ ಪತ್ನಿ ಸತೀಶ ಭಾವನನ್ನು ಬರಲು ಸೂಚಿಸಿದಳು. ಅಂತೂ ಸಂಜೆ ೫.೩೦ರ ಹೊತ್ತಿಗೆ ೧೧೦ರ ಕೊಠಡಿಗೆ ನನ್ನನ್ನು ವರ್ಗಾಸಿದರು. ಸಣ್ಣಪುಟ್ಟ ಕಾರಣಗಳಿಗಾಗಿ ಆಸ್ಪತ್ರೆಗೆ ಹೋಗಿದ್ದರೂ ನಾನೇ ರೋಗಿಯಾಗಿ ಎಂದೂ ಮಲಗಿರಲಿಲ್ಲ. ನಾನು ೧೫ ವರ್ಷ ವಿವೇಕಾನಂದ ಹಾಸ್ಟೆಲ್‌ನ ವಾರ್ಡನ್ ಆಗಿರುವಾಗ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಸೇರಿಸಿ ರಾತ್ರಿ ಅಲ್ಲಿಯೇ ಕಾಲಹರಣ ಮಾಡಿದ್ದಿತ್ತು. ಆದರೆ ನಾನೇ ರೋಗಿಯಾಗಿ ಮಲಗುವ ಸಂದರ್ಭ ಬಂದಿರಲಿಲ್ಲ. ಹೀಗಾಗಿ ಜೀವನದಲ್ಲಿ ಮೊದಲ ಸಲ ರೋಗಿಯಾಗಿ ನಾನು ಆಸ್ಪತ್ರೆಯಲ್ಲಿ ಮಲಗಿದ್ದೆ!.

    ಮುಂದಿನ ಭಾಗ ಕೊಠಡಿ 110 . . . .

    1 Responses to “ಎಂ.ಆರ್.ಐ. ಯಂತ್ರದೊಳಗೆ . . . .”

    ನರೇಂದ್ರ ಪೈ said...
    July 27, 2010 at 10:37 PM

    ನೋವು, ಅಸಹಾಯಕತೆ ಮತ್ತು ಒಂಟಿತನದ ಅಸಹನೀಯ ‘ಹಾಸಿಗೆ ಹಿಡಿದ ಸ್ಥಿತಿ’ಯನ್ನೂ ನೀವು ಲಘುವಾದ ಹಾಸ್ಯದ ಲೇಪದೊಂದಿಗೆ ಬರೆಯುತ್ತಿದ್ದೀರಿ....ನಿಮ್ಮ ಜೀವನಪ್ರೀತಿ ದೊಡ್ಡದು. ದೇವರು ನಿಮಗೆ ಆಯುರಾರೋಗ್ಯ ಸಮೃದ್ಧವಾದ ಸುಖವನ್ನೀಯಲಿ.
    -ನರೇಂದ್ರ


    Subscribe