Sunday, July 11, 2010

1

ವಾಹನದಿಂದ ಬಿದ್ದ ನೆನಪು. . . . .

  • Sunday, July 11, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಕಾಲೇಜಿನಲ್ಲಿ ಮಾಡಬೇಕಾದ ನ್ಯಾಕ್ ತಯಾರಿಯ ಕೆಲಸ ಸಾಕಷ್ಟಿದೆ ಎಂದು ಏಪ್ರಿಲ್ ೨೫ರಂದು ಮಂಗಳವಾರ ಪುತ್ತೂರಿಗೆ ಹಿಂದಿರುಗಿದೆವು. ಬರುವಾಗಲೇ ಸಂಜೆಯಾದದ್ದರಿಂದ ಎಲ್ಲಿಗೂ ಹೊರಗೆ ಹೋಗಲಿಲ್ಲ. ಮರುದಿನ ೨೬ ರಂದು ಮುಂಜಾನೆ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿಯಾಗಿ ೨೭ ರಿಂದ ನ್ಯಾಕ್ ತಯಾರಿಯ ಕೆಲಸವನ್ನು ಆರಂಭಿಸುವುದಾಗಿಯೂ, ಕಛೇಯಿಂದ ಒಬ್ಬರನ್ನು ಸಹಾಯಕ್ಕೆ ಕೊಡಬೇಕೆಂದು ವಿನಂತಿ ಮಾಡಿದೆ. ಅದಕ್ಕವರು ಬಿಡುವಿನ ಸಮಯದಲ್ಲಿ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದೆಂದು ಸೂಚಿಸಿದರು. ಅದೇ ರೀತಿ ನ್ಯಾಕ್ ವರದಿಯನ್ನು ತಯಾರಿಸುವಲ್ಲಿ ಸಹಾಯ ಮಾಡಿದ ಮುರಳಿಯಲ್ಲಿ ಮಧ್ಯಾಹ್ನದ ನಂತರ ನ್ಯಾಕ್ ಫೈಲುಗಳ ಪರಿಶೀಲನೆಗೆ ಬರುವುದಾಗಿ ತಿಳಿಸಿ ಕಾಲೇಜಿನಿಂದ ಹೊರಡುವಾಗ ಇಂದು ಡಾ. ದುರ್ಗಾಪ್ರವೀಣನ ಮದುವೆ ಎಂದು ಸ್ನೇಹಿತರು ನೆನಪಿಸಿದರು.

    ಡಾ. ದುರ್ಗಾಪ್ರವೀಣ ನಮ್ಮ ಕಾಲೇಜಿನಲ್ಲಿ ಕನ್ನಡ ಐಚ್ಚಿಕ ಬಿ.ಎ. ಓದಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಿಎಚ್.ಡಿಯನ್ನು ಮುಗಿಸಿ ಇದೀಗ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ತುಳು ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ಊರಿಗೆ ಬಂದಾಗಲೆಲ್ಲ ನನ್ನ ಮನೆಗೆ ಬಂದು ಹೋಗುವುದು ಆತನ ಕ್ರಮ. ಈಗ ವಿದ್ಯಾರ್ಥಿ ಎನ್ನುವುದಕ್ಕಿಂತ ಸಮಾನ ಮನಸ್ಕನಾಗಿ ಯೋಚಿಸಬಲ್ಲ; ಕೆಲವೊಮ್ಮೆ ನಮ್ಮನ್ನು ಮೀರಿ ಮುನ್ನಡೆಯಬಲ್ಲ. ವಿದ್ಯಾರ್ಥಿಗಳು ಈ ಹಂತವನ್ನು ತಲುಪಿದರೆ ನಮಗದು ಅತ್ಯಂತ ಹೆಮ್ಮೆಯ ವಿಷಯ. ಆತನ ನಿಶ್ಚಿತಾರ್ಥಕ್ಕೂ ನಾನು ಪತ್ನಿಯೊಂದಿಗೆ ಹೋಗಿದ್ದೆ. ಹೀಗಾಗಿ ಮದುವೆಗೆ ಹೋಗದಿದ್ದರೆ ಹೇಗೆ ? ಹೀಗಾಗಿ ಮಧ್ಯಾಹ್ನ ಹನ್ನೆರಡೂವರೆಗೆ ಮನೆಂದ ಹೊರಟೆ. ಹೊರಡುವ ಕಾಲಕ್ಕೆ ಒಮ್ಮೆ ಸಂಜೆ ಹೋದರಾಗಬಹುದಲ್ಲ ಎಂಬ ಆಲೋಚನೆ ಬಂತು. ಸಂಜೆ ಮಳೆ ಬಂದರೆ ಕಷ್ಟ ಎಂದು ಈಗಲೇ ಹೊರಡಲು ನಿರ್ಧರಿಸಿದೆ. ಮಗನಲ್ಲಿ ಹೆಲ್ಮೆಟ್ ಕೊಡಲು ಹೇಳಿ ಹಾಕಿಕೊಂಡು ಹೊರಟೆ. ಸಾಮಾನ್ಯವಾಗಿ ಕಾಲೇಜಿಗೆ ಹೋಗುವಾಗ ಹೆಲ್ಮೆಟ್ ಹಾಕುವುದಿಲ್ಲ.

    ಸಾಮಾನ್ಯವಾಗಿ ೩೦ - ೪೦ ಕಿ.ಮೀ. ವೇಗದಲ್ಲಿ ಹೋಗುವುದು ನನ್ನ ಕ್ರಮ. ಕಬಕ ದಾಟಿ, ಕೂವೆ "ತ್ತಿಲು ದಾಟಿ ತುಸು ಮುಂದೆ ಹೋಗುವಾಗ ಹಿಂದೆ ಯಾರಿದ್ದಾರೆ ಎಂದು ಕನ್ನಡಿಯಲ್ಲಿ ನೋಡಿದೆ. ಒಂದು ಅಂಬುಲೆನ್ಸ್, ಅದರ ಹಿಂದೆ ಒಂದು ಬಿಳಿ ಕಾರು ಮತ್ತು ಒಂದು ಟಾಟಾ ಸುಮೋ ರೀತಿಯ ವಾಹನ ಬರುತ್ತಿತ್ತು. ನಾನು ಅಂಬುಲೆನ್ಸ್ ವಾಹನಕ್ಕೆ ದಾರಿ ಬಿಡಲೆಂದು ವಾಹನವನ್ನು ತುಸು ನಿಧಾನಿಸಿದೆ. ಅಂಬುಲೆನ್ಸ್ ದಾಟಿ ಮುಂದೆ ಹೋತು. ಎದುರಿನಿಂದ ಮಿತ್ತೂರಿನ ರೈಲ್ವೆ ಸೇತುವೆ ಕಾಣುತ್ತಿತ್ತು. ಮಾಣಿ ಕಡೆಂದ ಒಂದು ವಾಹನ ಎದುರಿನಿಂದ ಬರುತ್ತಿತ್ತು. ಈ ಹೊತ್ತಿಗೆ ಹಿಂದಿನ ಬಿಳಿ ಕಾರಿನವನು ನನ್ನನ್ನು ಓವರ್‌ಟೇಕ್ ಮಾಡುವ ಸಲುವಾಗಿ ಒಮ್ಮೆಲೆ ನುಗ್ಗಿ ಬಂದ. ಕಾರು ಸಾಕಷ್ಟು ವೇಗವಾಗಿತ್ತು. ಅಲ್ಲದೆ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸ ಬೇಕಿತ್ತು. ಈ ಅವಸರದಲ್ಲಿ ಕಾರಿನವನು ನನ್ನ ಕಡೆಗೆ ಒಮ್ಮೆಲೆ ಬಂದ. ನಾನು ಆ ಹೊತ್ತಿಗೆ ರಸ್ತೆಯ ಅತ್ಯಂತ ಎಡಭಾಗದಲ್ಲಿದ್ದೆ. ಕಾರಿನವನು ತೀರ ಪಕ್ಕಕ್ಕೆ ಬಂದಾಗ ರಸ್ತೆಂದ ಕೆಳಗೆ ಇಳಿಸುವುದೇ ಕ್ಷೇಮ ಎನಿಸಿತು. ಆ ಹೊತ್ತಿಗೆ ಆತ ಪಕ್ಕದಲ್ಲಿ ಸುಮಾರು ಒಂದೆರಡು ಇಂಚು ಅಂತರದಲ್ಲಿ ಚಲಿಸಲಾರಂಭಿಸಿದ. ತುಸು ವ್ಯತ್ಯಾಸವಾಗಿ ನನಗೆ ತಾಗಿದರೆ ನಾನು ಎಲ್ಲಿಯೋ ಹೋಗಿ ಬೀಳುತ್ತಿದ್ದೆ. ಆದ್ದರಿಂದ ಹಿಂದೆ ಮುಂದೆ ನೋಡದೆ ನನ್ನ ವಾಹನವನ್ನು ರಸ್ತೆಯಿಂದ ಕೆಳಗೆ ಇಳಿಸಿದೆ. ಆ ಸ್ಥಳದಲ್ಲಿ ರಸ್ತೆ ಮತ್ತು ನೆಲದ ನಡುವೆ ಸುಮಾರು ಮುಕ್ಕಾಲು ಅಥವಾ ಒಂದು ಅಡಿ ಅಂತರವಿತ್ತು.(ಚಡಿ) ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ನಾನು ಬಿದ್ದಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಜೋಪಾನವಾಗಿ ನನ್ನ ವಾಹನ ನಡೆಸಿ ಹೊಸದೆಂಬತ್ತಿತ್ತು. ಮೊದಲ ಸಲ ವಾಹನ ನನ್ನ ಆಯತಪ್ಪಿ ನೆಲಕ್ಕೆ ಒರಗಿತ್ತು. ನಾನು ನೆಲಕ್ಕೆ ಬಿದ್ದವನು ರಸ್ತೆಯ ಅಂಚಿನಲ್ಲಿ ಟಾರು ರಸ್ತೆಗೆ ಕೊನೆಕ್ಷಣದಲ್ಲಿ ತುಸು ಜಾರಿ ಹೋಗಿ ಬಿದ್ದೆ. ಬಿದ್ದ ತಕ್ಷಣ ತಲೆ ಎತ್ತಿ ನೋಡಿದರೆ, ನಾನು ಬೀಳಲು ಕಾರಣವಾದ ಕಾರು ಶರವೇಗದಲ್ಲಿ ಮುಂದೆ ಹೋಗುತ್ತಿತ್ತು. ಆ ಕಾರಿನಲ್ಲಿದ್ದವರು ಮನುಷ್ಯತ್ವವಿಲ್ಲದವರಂತೆ ಹೋಗಿಬಿಟ್ಟರು. ಇಂತವರೆಲ್ಲ ಒಂದು ದಿನ ನೋವನ್ನು ಅನುಭವಿಸುತ್ತಾರೆ ಎಂಬ ಭರವಸೆ ನನಗಿದೆ. ಭಗವಂತ ಅವರನ್ನು ಅಷ್ಟು ಸುಲಭವಾಗಿ ಕ್ಷಮಿಸಲಾರ!
    ನನ್ನ ಹಿಂದೆ ಬರುತ್ತಿದ್ದ ಟಾಟಾ ಸುಮೋ ವಾಹನದ ವ್ಯಕ್ತಿ ತಕ್ಷಣ ನಿಲ್ಲಿಸಿ ಕೇಳಿದ ಮೊದಲ ಮಾತು "ಕಾರಿನವನು ನಿಮಗೆ ತಾಗಿಸಿ ಹೋದನೆ ?" ಎಂದು. ಕಾರಿನವನು ಹೋಗುವ ಅವತಾರವನ್ನು ನೋಡಿ ಅವರು ನನಗೆ ತಾಗಿಸಿ ಹೋದನೆಂದೇ ಎಣಿಸಿದ್ದರಂತೆ. ಎದುರಿನಿಂದ ಬರುತ್ತಿದ್ದ ವಾಹನದವರು ನಿಲ್ಲಿಸಿ ನನ್ನ ಯೋಗಕ್ಷೇಮವನ್ನು ವಿಚಾರಿಸಿದರು. ನಾನು ಬೀಳುವಾಗ ನನ್ನ ಅಂಗಿಯ ಜೇಬಿನಲ್ಲಿದ್ದ ಕನ್ನಡಕ ರಸ್ತೆಗೆ ಬಿದ್ದಿತ್ತು. ಅದನ್ನು ಅವರೇ ಹೆಕ್ಕಿ ಕೊಟ್ಟರು. ಆ ಹೊತ್ತಿಗೆ ನಾನು ಎದ್ದು ನಿಂತಿದ್ದೆ. ಬಲಕಾಲು ಮತ್ತು ಬಲಕೈಗೆ ತರಚಿದ ಗಾಯವಾಗಿತ್ತು. ಹಾಕಿದ ಪ್ಯಾಂಟ್ ಹರಿದಿತ್ತು. ನಾನು ಹೆಲ್ಮೆಟ್ ತೆಗೆದು ತುಸು ಉಸಿರೆಳೆದುಕೊಂಡೆ. ನನ್ನ ತಲೆಗೆ ಏನಾದರೂ ಪೆಟ್ಟಗಿದೆಯೇ ಎಂದು ಹಿಂದಿನ ವಾಹನದವರು ಪರಿಶೀಲಿಸಿದರು. ನಾನು ಏನೂ ತೊಂದರೆಲ್ಲ, ಸರಿಯಾಗಿದೇನೆ ಎಂದ ನಂತರ ಅವರು ತೆರಳಿದರು. ಈ ಹೊತತಿಗೆ ಅಲ್ಲಿಯೇ ರಸ್ತೆಯ ಪಕ್ಕದಲ್ಲಿದ್ದ ಮಸೀದಿಂದ ಒಬ್ಬ ವ್ಯಕ್ತಿ ಓಡಿ ಬಂದು ನೆಲದಲ್ಲಿ ಮಲಗಿದ್ದ ನನ್ನ ವಾಹನವನ್ನು ಎತ್ತಿ ನಿಲ್ಲಿಸಿದರು. 'ವಾಹನ ಹೊಸದಾ' ಎಂದು ಕೇಳಿದರು. ನಾನು ನಾಲ್ಕು ವರ್ಷವಾಯಿತು ಎಂದೆ. ಅವರು 'ಹೌದಾ' ಎಂದು ಆಶ್ಚರ್ಯ ವ್ಯಕ್ತಪಡಿಸಿದರು. 'ನೀರು ಕುಡಿಯುತ್ತೀರಾ' ಎಂದು ವಿಚಾರಿಸಿದರು. ನಾನು ಅಗತ್ಯವಿಲ್ಲವೆಂದು ಹಿಂದಿರುಗಿ ಹೊರಡಲು ಸಿದ್ದನಾದೆ. ಆಗ ಮಸೀದಿಂದ ಬಂದ ವ್ಯಕ್ತಿ ಸ್ವಲ್ಪ ನೀರು ಕುಡಿರಿ, ಮುಖ ತೊಳೆದುಕೊಳ್ಳಿ ಎಂದು ಹಿತವಚನ ನೀಡಿದರು. ಅದರಂತೆ ನೀರು ಕುಡಿದು, ಮುಖತೊಳೆದು ನನ್ನ ವಾಹನದಲ್ಲಿ ಹಿಂದಿರುಗಿ ಹೊರಟೆ.

    ನೇರವಾಗಿ ಮುರದಲ್ಲಿರುವ ಡಾ. ಆಳ್ವರಲ್ಲಿಗೆ ಬಂದೆ. ರಸ್ತೆಯ ಎಡಭಾಗದಲ್ಲಿ ವಾಹನ ನಿಲ್ಲಿಸಿ ರಸ್ತೆಯನ್ನು ದಾಟುವಾಗ ಮೊಳಕಾಲಿನ ಚಿಪ್ಪಿನ ಹಿಂದೆ ಹಿಡಿದುಕೊಳ್ಳುತ್ತಿರುವ ಅನುಭವ ಆಯಿತು. ಹಾಗೆಯೇ ಮೊಳಕಾಲು ಚಿಪ್ಪು ತುಸು ದಪ್ಪವಾಗಿತ್ತು. ಆಳ್ವರಲ್ಲಿ ಒಳಗೆ ರೋಗಿಗಳಿದ್ದರು. ನಾನು ತುಸು ಕಾದು ಒಳಗೆ ಹೋದಾಗ ಅವರಿಗೆ ನನ್ನ ಗುರುತು ಸಿಕ್ಕಿತು. ಏನಾತೆಂದು ಅವರಿಗೂ ಗಾಬರಿ. ನನ್ನನ್ನು ಪರಿಶೀಲಿಸಿ ನನ್ನ ತರಚಿದ ಗಾಯಕ್ಕೆ ಪ್ರಥಮ ಚಿಕಿತ್ಸೆಯನ್ನು ಮಾಡಿದ ನಂತರ ಕಾಲನ್ನು ಡಾ. ಪ್ರದೀಪ ಅವರಲ್ಲಿ ತೋರಿಸುವುದು ಒಳ್ಳೆಯದೆಂದು ಸಲಹೆ ನೀಡಿದರು. ಅವರೇ ಡಾಕ್ಟರನ್ನು ಸಂಪರ್ಕಿಸಿ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ಹೊತ್ತಿಗೆ ನಾನು ಅವರ ಟೇಬಲ್ ಎದುರಿಗೆ ಬಂದು ಕುಳಿತಿದ್ದೆ. ಆ ಕಡೆಯಿಂದ ಆಳ್ವರು ಮಾತನಾಡುತ್ತಿರುವುದು ಕೇಳುತ್ತಿತ್ತು. ಅದೇ ಹೊತ್ತಿಗೆ ನಾನು ನಿಧಾನವಾಗಿ ಪ್ರಜ್ಞೆ ಕಳೆದುಕೊಳ್ಳತೊಡಗಿದೆ. ಕುರ್ಚಿಯಲ್ಲಿ ಕುಳಿತವನಿಗೆ ಸುತ್ತಲಿನ ಜಗತ್ತು ಒಮ್ಮೆಲೆ ತಿರುಗತೊಡಗಿತು. ನಾನು ಕುಯಿಂದ ಬೀಳುವ ಹಾಗೆ ಆದದ್ದು ನೆನಪಿದೆ. ಮತ್ತೆಲ್ಲವೂ ಕತ್ತಲೆ.

    ನನಗೆ ಎಚ್ಚರವಾದಾಗ ಆಳ್ವರು ಯಾರದೋ ಸಹಾಯದಿಂದ ನನ್ನನ್ನು ಎತ್ತಿಕೊಂಡು ಬಂದು ಹೊರಗಿನ ಬೆಂಚಿನ ಮೇಲೆ ಮಲಗಿಸುತ್ತಿದ್ದರು. ಕಣ್ಣು ಮುಚ್ಚಿಯೇ ಇರಿ, ನೀರು ಹಾಕುತ್ತೇನೆ ಎಂದು ಹೇಳುತ್ತಿದ್ದರು. ಅವರು ಮುಖದ ಮೇಲೆ ನೀರು ಹಾಕಿದಾಗ ತುಸು ನೆಮ್ಮದಿಯ ಭಾವ ಬಂತು. ನನಗೆ ಏನೋ ಆಗಬಾರದ್ದು ಆಗಿದೆ ಎಂದು ಅನಿಸಿತು. ಆಳ್ವರು ನನಗೆ ಏನೂ ಆಗಿಲ್ಲ, ಹೀಗೆ ಬಿದ್ದಾಗ ಒಮ್ಮೆ ಎಚ್ಚರ ತಪ್ಪುತ್ತದೆ. ಗಾಬರಿಯಾಗುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು. ನನ್ನನ್ನು ಆಸ್ಪತ್ರೆಗೆ ಸಾಗಿಸುವುದರ ಕಡೆಗೆ ಗಮನ ಹರಿಸಿದರು. ಅವರ ಅಳಿಯ ಅರುಣ್ ಪ್ರಕಾಶ್ ನನ್ನ ಜೊತೆಯಲ್ಲಿ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಅವರನ್ನು ಸಂಪರ್ಕಿಸಿ ಬರುವಂತೆ ಹೇಳುತ್ತಿರುವುದು ನನಗೆ ಮಲಗಿದಲ್ಲಿಂದಲೇ ಕೇಳುತ್ತಿತ್ತು. ಒಂದೈದು ನಿಮಿಷದಲ್ಲಿ ಅವರು ಪ್ರತ್ಯಕ್ಷರಾದರು. ಅರುಣ್ ಪ್ರಕಾಶರಿಗೆ ಬೈಕ್‌ನಿಂದ ಬಿದ್ದು ಸಾಕಷ್ಟು ಅನುಭವವಿದೆ. ಅವರೂ ಏನೂ ಆಗುವುದಿಲ್ಲವೆಂದು ಸಮಾಧಾನ ಮಾಡಿದರು. ಈ ಹೊತ್ತಿಗೆ ನನಗೆ ಮಂಪರು ಹೋಗಿ ಎಚ್ಚರವಾಗಿದ್ದೆ. ಸಹಜ ಸ್ಥಿತಿಗೆ ಬಂದಿದ್ದೆ. ಕಾಲು ಮಾತ್ರ ಕಿರಿಕಿರಿ ಮಾಡುತ್ತಿತ್ತು. ಡಾ. ಆಳ್ವರು ಸ್ವತ: ತಮ್ಮ ಕಾರಿನಲ್ಲಿ ನಮ್ಮನ್ನು ಮಹಾವೀರ ಆಸ್ಪತ್ರೆಗೆ ಬಿಟ್ಟರು. ಆಳ್ವರ ಈ ಉಪಕಾರ ಸದಾ ಸ್ಮರಣೀಯ. ಅವರ ಈ ವಿಶ್ವಾಸದ ಋಣ ದೊಡ್ಡದು. ನಾನು ಆಸ್ಪತ್ರೆಯ ಹೊರಗಿನ ಕುರ್ಚಿಯಲ್ಲಿ ಕುಳಿತೆ. ಅರುಣ್ ಪ್ರಕಾಶ್ ವೈದ್ಯರನ್ನು ಹುಡುಕಿಕೊಂಡು ಹೋದರು.

    1 Responses to “ವಾಹನದಿಂದ ಬಿದ್ದ ನೆನಪು. . . . .”

    ಸುಶಾಂತ್ ಬನಾರಿ said...
    July 26, 2010 at 9:10 AM

    ಅರುಣ್ ಪ್ರಕಾಶರಿಗೆ ಇರುವ ಅಗಾಧ ಅನುಭವದ ವಿಚಾರ ತಿಳಿದು ಅಚ್ಚರಿಯಾಯಿತು. ಮುನುಷ್ಯರು ಹೇಗೆಲ್ಲಾ ಇರಬಹುದು, ಅವರನ್ನು ನೋಡುವಾಗ ಈ ಕ್ಷೇತ್ರದಲ್ಲಿ ಇಷ್ಟೊಂದು ಅನುಭವ ಇರುವವರಂತೆ ಕಾಣುವುದಿಲ್ಲ!
    ಇರಲಿ, ಇಂಥ ಅನುಭವಸ್ಥರು ನಮ್ಮ ಕಾಲೇಜಿನಲ್ಲಿ ಇರುವುದು ನಮಗೆಲ್ಲ ಹೆಮ್ಮೆಯ ಸಂಗತಿ.
    -http://sushanthbanari.blogspot.com


    Subscribe