Tuesday, March 1, 2011

0

ನೆನಪಿನಂಗಳ - ಚೌಡಿಪುರಾಣ

  • Tuesday, March 1, 2011
  • ಡಾ.ಶ್ರೀಧರ ಎಚ್.ಜಿ.
  • Share

  • ೧೯೬೩ ಜುಲೈ ೧೩ರಂದು ಶನಿವಾರ ಸಂಜೆ ೬.೨೦ರ ಹೊತ್ತಿಗೆ ಅಮ್ಮನ ತವರು ಮನೆ ಕಲ್ಮಕ್ಕಿಯಲ್ಲಿ ನಾನು ಈ ಜಗತ್ತಿಗೆ ಕಣ್ಣು ಬಿಟ್ಟೆ. ನಾನು ಹುಟ್ಟಿದ ಮೂರು ತಿಂಗಳಿಗೆ ಅಮ್ಮ ನನ್ನನ್ನು ಕಟ್ಟಿಕೊಂಡು ಮುಂಡಿಗೆ ಹಳ್ಳಕ್ಕೆ ಬಂದರು. ಗದ್ದೆಯ ಒಂದು ಬದಿಯಲ್ಲಿ ಅಡಿಕೆ ಗಿಡವನ್ನು ನೆಟ್ಟರು. ಮಳೆಗಾಲದಲ್ಲಿ ಭತ್ತ ಬೇಸಿಗೆಯಲ್ಲಿ ತರಕಾರಿ ಬೆಳೆದರು. ಬೆಲ್ಲ ತಯಾರಿಸಲು ಕಬ್ಬು ಬೆಳೆಯುತ್ತಿದ್ದರು. ಮಳೆಗಾಲದಲ್ಲಿ ಹಂದಿ ಬಂದು ಕಬ್ಬನ್ನು ನಾಶಮಾಡದಂತೆ ರಾತ್ರಿಯ ಕಾವಲು ಮಾಡಬೇಕಾಗಿತ್ತು. ಮನೆಕೆಲಸ, ಗದ್ದೆಯ ವ್ಯವಸಾಯದ ಕೆಲಸ ಎಂದು ಬಿಡುವಿಲ್ಲದ ದುಡಿಮೆಯ ದಿನಗಳವು. ಇಂತಹ ದಿನಗಳಲ್ಲಿ ಒಂದು ದಿನ ರಾತ್ರಿ ಗದ್ದೆಗೆ ದನಗಳು ಬಂದು ನಿಂತವು. ಬೆಳೆದ ಪೈರನ್ನು ತಿನ್ನತೊಡಗಿದವು. ಅಪ್ಪ ಹೇಳುವಂತೆ ಇಂತಹ ಸಂದರ್ಭದಲ್ಲಿ ’ ಗದ್ದೆಗೆ ದನ ಬಂದಿದೆ’ ಎಂದು ಚೌಡಿ ಬಂದು ಅಪ್ಪನನ್ನು ಎಬ್ಬಿಸುತ್ತಿತ್ತು.!

    ನಮ್ಮ ಊರಿಗೆ ೧೯೬೦ರ ದಶಕದಲ್ಲಿ ಕುಂದಾಪುರದ ಕಡೆಯಿಂದ ಶೆಟ್ಟಿ ಸಮುದಾಯದವರು ಕೂಲಿ ಕೆಲಸಕ್ಕೆಂದು ಬರುತ್ತಿದ್ದರು. ಇವರನ್ನು ಕರೆತರುಲು ಒಬ್ಬ ಸೇರೆಗಾರ ಇರುತ್ತಿದ್ದ. ಸೇರೆಗಾರ ಕಳಿಸಿದಲ್ಲಿಗೆ ಅವರು ಕೆಲಸಕ್ಕೆ ಹೋಗಬೇಕಿತ್ತು. ಇವರು ಕೆಲಸವಿರುವ ಕಡೆ ಹೋಗಿ ಗುತ್ತಿಗೆ ತೆಗೆದುಕೊಂಡು ಬರುತ್ತಿದ್ದರು. ಕೆಲವೊಮ್ಮೆ ದಿನಗೂಲಿಗೂ ತಮ್ಮ ಅಡಿಯಲ್ಲಿರುವ ಕೆಲಸದವರನ್ನು ಕಳಿಸುತ್ತಿದ್ದರು. ಹೀಗೆ ಬಂದ ಒಂದು ಕುಟುಂಬ ನಮ್ಮ ಮನೆಯ ಆಶ್ರಯಕ್ಕೆ ಬಂತು. ಲಕ್ಷ್ಮಣ ಮತ್ತು ಯಂಕಿ ಎಂದು ಅವರ ಹೆಸರು. ನಾನು ಸಣ್ಣವನಿದ್ದಾಗ ಇವರನ್ನು ನೋಡಿದ ನೆನಪಿದೆ. ಅವರು ನಮ್ಮ ಮನೆಯಿಂದ ತುಸು ದೂರದಲ್ಲಿ ಸಣ್ಣ ಸೋಗೆಯಿಂದ ಮಾಡಿದ ಮನೆಯಲ್ಲಿ ವಾಸಮಾಡುತ್ತಿದ್ದರು.

    ಅದು ಹೇಗೆ ಆಯಿತೋ ಗೊತ್ತಿಲ್ಲ. ಪ್ರತೀ ಸೋಮವಾರ ಚೌಡಿ ಯಂಕಿಯ ಮೈಮೇಲೆ ಆವೇಶವಾಗತೊಡಗಿತು. ಸುತ್ತಲಿನ ಊರುಗಳಿಗೆ ಸುದ್ದಿ ಹರಡಿತು. ಸೋಮವಾರ ಸಂಜೆ ನಮ್ಮ ಮನೆಯ ಅಂಗಳದಲ್ಲಿ ಜನ ಸೇರತೊಡಗಿತು. ಸಂಜೆಯಾಗುತ್ತಿದ್ದಂತೆ ಯಂಕಿ ತಣ್ಣೀರಿನಲ್ಲಿ ಸ್ನಾನ ಮಾಡಿ ನೇರವಾಗಿ ತುಳಸಿ ಕಟ್ಟೆಯ ಮುಂದೆ ಇರುತ್ತಿದ್ದ ಮಣೆಯ ಮೇಲೆ ಕೂರುತ್ತಿದ್ದಳು. ಇದಾಗಿ ಒಂದೆರಡು ಕ್ಷಣದಲ್ಲಿ ಆಕೆಗೆ ಆವೇಶವಾಗುತ್ತಿತ್ತು. ಅಲ್ಲಿಯೇ ಇದ್ದ ಮುಳ್ಳಿನ ಚಪ್ಪಲಿಯ ಮೇಲೆ ಕಾಲನ್ನಿಟ್ಟು ನಡೆಯುತ್ತಿದ್ದಳು. ಬಾರುಕೋಲಿನಿಂದ ಹೊಡೆದುಕೊಳ್ಳುತ್ತಿದ್ದಳು. ವಿಚಿತ್ರವಾಗಿ ಆರ್ಭಟಿಸುತ್ತಿದ್ದಳು. ಇದನ್ನು ನೋಡಿ ನನಗೆ ಮೊದಮೊದಲು ಭಯವಾಗುತ್ತಿತ್ತು.

    ಬಂದ ಜನರು ಚೌಡಿಯಲ್ಲಿ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿದ್ದರು. ದನ ಕಳೆದು ಹೋದದ್ದು, ಮೇಯಲು ಹೋದ ಎಮ್ಮೆ ಒಂದು ವಾರವಾದರೂ ಪತ್ತೆಯಾಗದ್ದು, ಕಳವಾದದ್ದು ಹೀಗೆ ಹತ್ತಾರು ಸಮಸ್ಯೆಗಳನ್ನು ಕೇಳಿ ಉತ್ತರ ಪಡೆದು ಹೋಗುತ್ತಿದ್ದರು. ಆಕೆಯ ಮೈಯಿಂದ ಚೌಡಿಯ ಆವೇಶ ಇಳಿದ ಮೇಲೆ ಯಂಕಿ ಮೊದಲಿನಂತೆಯೇ ಇರುತ್ತಿದ್ದಳು. ಯಂಕಿ ನಮ್ಮ ಊರು ಬಿಟ್ಟು ಹೋಗುವವರೆಗೂ ಇದು ಹೀಗೆಯೇ ನಡೆಯುತ್ತಿತ್ತು. ಕೊನೆಗೊಮ್ಮೆ ಯಂಕಿ ತನ್ನ ಸ್ವಂತ ಊರಿಗೆ ಹೋದಳು. ಅಲ್ಲಿಂದ ಮುಂದೆ ಚೌಡಿಯ ಕಥೆ ಮೌನಕ್ಕೆ ತಿರುಗಿತು. ಆದರೆ ನಮ್ಮಲ್ಲಿಗೆ ಬಂದ ಜೋಯಿಸರು ಚೌಡಿಯ ಇಲ್ಲಿಯೇ ಇದೆ. ಅದಕ್ಕೆ ಸರಿಯಾಗಿ ನಡೆದುಕೊಳ್ಳಿ. ನಿಮಗೆ ಒಳ್ಳೆಯದಾಗುತ್ತದೆ ಎಂದು ಅದರ ಇರುವಿಕೆಯ ಬಗೆಗೆ ನಿರಂತರವಾಗಿ ಹೇಳುತ್ತಿದ್ದರು. ಅಲ್ಲದೆ ನಮ್ಮ ಮನೆಯಲ್ಲಿ ಎಮ್ಮೆ ಅಥವಾ ಹಸು ಕರುಹಾಕಿದರೆ ಮೊದಲ ಹಾಲನ್ನು ಚೌಡಿಗೆ ಹಾಕುವ ಕ್ರಮ ಈಗಲೂ ಇದೆ. ದೀಪಾವಳಿ, ಯುಗಾದಿ ಮುಂತಾದ ವಿಶೇಷ ಸಂದರ್ಭದಲ್ಲಿ ಚೌಡಿಗೆ ಪ್ರಾರ್ಥನೆ ಸಲ್ಲಿಸಿ ಕೆಲಸವನ್ನು ಆರಂಭಿಸುವರು.
    ಅಪ್ಪನ ಅನುಭವಕ್ಕೆ ಬಂದ ಚೌಡಿಯ ಬಗೆಗೆ ಒಂದೆರಡು ಘಟನೆಯನ್ನು ಇಲ್ಲಿ ಹೇಳಬೇಕು.

    ಮನೆಯ ಹಿಂದುಗಡೆ ನಮ್ಮ ಬಚ್ಚಲು ಮನೆಯಿತ್ತು. ಅದಕ್ಕೆ ಬಾಗಿಲು ಇರಲಿಲ್ಲ. ಒಮ್ಮೆ ಕಳ್ಳರು ಬಂದು ಬಚ್ಚಲು ಮನೆಯಲ್ಲಿದ್ದ ನೀರು ಕಾಯಿಸುವ ಹಂಡೆಯನ್ನು ಒಯ್ದರು. ಆದರೆ ಅವರು ನಮ್ಮ ಮನೆಯ ಬೌಂಡರಿಯನ್ನು ದಾಟಲಿಲ್ಲ. ಚೌಡಿ ಅವರನ್ನು ಅಡ್ಡಗಟ್ಟಿತು. ಕಳ್ಳರು ಹಂಡೆಯನ್ನು ಅಲ್ಲಿಯೇ ಒಗೆದು ಓಡಿ ಹೋದರು. ಅಪ್ಪನಿಗೆ ಮರುದಿನ ಬೆಳಿಗ್ಗೆಯೇ ಈ ಸಂಗತಿ ಗೊತ್ತಾದದ್ದು.
    ನಮ್ಮ ತಂದೆಯವರು ಹಳೆ ಮನೆಯನ್ನು ಕೆಡಗಿ ಹೊಸ ಮನೆ ಕಟ್ಟುವಾಗ ಒಂದು ಘಟನೆ ನಡೆಯಿತು. ಮನೆಯ ಕೋಳಿನ ಮೇಲೆ ಕುಳಿತ ಕೆಲಸಗಾರನೊಬ್ಬ ಒಮ್ಮೆಲೆ ಆಯತಪ್ಪಿ ಬೀಳತೊಡಗಿದ. ಬೀಳುತ್ತಿದ್ದ ಆತನಿಗೆ ಒಂದು ಆಧಾರ ಸಿಕ್ಕಿ ನಡುವೆ ನೇತಾಡತೊಡಗಿದ. ಅನಂತರ ಆತನನ್ನು ಕೆಳಗೆ ಇಳಿಸಿದರು. ಆತ ಹೇಳೆದ ಪ್ರಕಾರ ಕೆಳಗೆ ಉರುಳುತ್ತಿದ್ದ. ಇದ್ದಕ್ಕಿದ್ದಂತೆ ಅವನನ್ನು ಯಾರೋ ಎತ್ತಿ ಹಿಡಿದಂತಾಯಿತು. ಆಗ ಅವನಿಗೆ ನೇತಾಡಲು ಒಂದು ತೊಲೆ ಸಿಕ್ಕಿತು.

    ನಮ್ಮ ಮನೆ ಈಗ ಇರುವ ಸ್ಥಳದಲ್ಲಿ ಯಾವಾಗಲೂ ಕುಡಿಯುವ ನೀರಿನ ಸಮಸ್ಯೆ. ಇಲ್ಲಿ ಬಾವಿ ತೆಗೆದರೂ ನೀರು ಸರಿಯಾಗಿ ಬರುತ್ತಿರಲಿಲ್ಲ. ನೀರುಬಂದರೂ ಬಾವಿ ಕುಸಿಯುತ್ತಿತ್ತು. ನೀರು ಚೆನ್ನಾಗಿರುತ್ತಿರಲಿಲ್ಲ. ಹೀಗೆ ಏನಾದರೂ ಒಂದು ಸಮಸ್ಯೆ. ಆದ್ದರಿಂದ ಗದ್ದೆಯ ನಡುವೆ ಹರಿಯುವ ಹೊಳೆಯಿಂದ ನಾವು ನೀರು ತರುತ್ತಿದ್ದವು. ನಿತ್ಯಯ ಬಳಕೆಗೆ ಬೇಕಾಗುವ ನೀರನ್ನು ಹೊಳೆಯಿಂದ ಹೊತ್ತು ತರಬೇಕಾಗಿತ್ತು. ೧೯೯೦ರ ಹೊತ್ತಿಗೆ ಗದ್ದೆಯಲ್ಲಿಯೇ ಒಂದು ಸಣ್ಣ ಬಾವಿಯನ್ನು ತೋಡಿ ಅಲ್ಲಿಂದ ಪಂಪಿನ ಮೂಲಕ ಮನೆಗೆ ನೀರಿನ ವ್ಯವಸ್ಥೆಯಾಗಿತ್ತು. ಆದರೆ ಕುಡಿಯಲು ಹೊಳೆಯ ನೀರು ಒಳ್ಳೆಯದಲ್ಲ. ಒಂದು ಬಾವಿ ಇದ್ದರೆ ಚೆನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಈಗ ಒಂದು ಹತ್ತು-ಹದಿನೈದು ವರ್ಷದ ಹಿಂದೆ ಜಲನೋಡುವ ವ್ಯಕ್ತಿಯೊಬ್ಬರು ನನ್ನ ತಮ್ಮನಿಗೆ ಪರಿಚಯವಾದರು. ಅವರನ್ನು ಬಾವಿಯ ಜಲನೋಡಲೆಂದು ಮನೆಗೆ ಕರೆದುಕೊಂಡು ಬಂದು ಪ್ರಾಥಮಿಕ ಉಪಚಾರವನ್ನು ಮಾಡಿದರು. ವ್ಯಕ್ತಿ ಪರ ಊರಿನವನು. ನಮ್ಮ ಮನೆಯ ಪರಿಸರಕ್ಕೆ ಬಂದದ್ದು ಇದೇ ಮೊದಲು. ಅನಂತರ ಆತ ಜಲನೋಡಲು ಹೊರಟು ನಿಂತ. ಆದರೆ ಹೊಸಿಲು ದಾಟದೆ ಅಲ್ಲಿಯೇ ನಿಂತ. ಒಂದು ತೆಂಗಿನ ಕಾಯಿ ಕೊಡಿ ಎಂದು ಕೇಳಿದ. ಕಾಯನ್ನು ತಂದು ಕೊಟ್ಟರು. ಕಾಯನ್ನು ಕೈಯ್ಯಲ್ಲಿ ಹಿಡಿದು ಪ್ರಾರ್ಥನೆ ಮಾಡಿದ. ನೇರವಾಗಿ ಮನೆಯ ಹಿಂಭಾಗಕ್ಕೆ ಹೋಗಿ ಒಂದು ಸ್ಥಳವನ್ನು ತೋರಿಸಿ ಇಲ್ಲಿ ಬಾವಿಯನ್ನು ತೋಡಬಹುದು ಎಂದುಬಿಟ್ಟ. ಮನೆಯವರಿಗೆಲ್ಲ ಆಶ್ಚರ್ಯ. ಮತ್ತೆ ಆತನೇ ಹೇಳಿದನಂತೆ. ನಿಮ್ಮ ಮನೆಯ ಆವರಣದಲ್ಲಿ ಒಂದು ಚೌಡಿ ಇದೆ. ನಾನು ಜಲ ನೋಡಲೆಂದು ಹೊರಟಾಗ ಅದೇ ನನ್ನನ್ನು ತಡೆದು ನಿಲ್ಲಿಸಿತು. ತೆಂಗಿನ ಕಾಯಿ ನೀಡಿ ಪ್ರಾರ್ಥನೆ ಮಾಡಿದ ಬಳಿಕ ನನ್ನನ್ನು ಅದೇ ಈ ಸ್ಥಳಕ್ಕೆ ಕರೆದುಕೊಂಡು ಬಂದು ನಿಲ್ಲಿಸಿದೆ. ಇಲ್ಲಿಯೇ ಬಾವಿಯನ್ನು ತೋಡಿ. ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಹೊರಟು ಹೋದ. ಅದರಂತೆ ತೆರೆದ ಬಾವಿಯನ್ನು ತೋಡಿದರು. ನೀರು ಸಾಕಷ್ಟಿದೆ. ಇಲ್ಲಿಯವರೆಗೆ ಬಾವಿಯಲ್ಲಿ ನೀರು ಖಾಲಿಯಾಗಿಲ್ಲ. ಈ ಘಟನೆ ನಮಗೆ ಈಗಲೂ ಒಂದು ಬಿಡಿಸಲಾಗದ ಒಗಟಾಗಿಯೇ ಉಳಿದಿದೆ.

    0 Responses to “ನೆನಪಿನಂಗಳ - ಚೌಡಿಪುರಾಣ”

    Subscribe