Wednesday, March 23, 2011

0

ಆದಿಪುರಾಣ - 4

  • Wednesday, March 23, 2011
  • ಡಾ.ಶ್ರೀಧರ ಎಚ್.ಜಿ.
  • Share

  • ಪಂಪನ ಎರಡೂ ಕೃತಿಗಳಲ್ಲಿ ಗೆಲುವಿನ ತುದಿಯಲ್ಲಿ ರಾಜ್ಯತ್ಯಾಗದ ಚಿತ್ರವಿದೆ. ಈ ತ್ಯಾಗ ಅಣ್ಣ ತಮ್ಮಂದಿರ ನಡುವೆ ನಡೆಯುವುದು ಗಮನಾರ್ಹ. ವಿಕ್ರಮಾರ್ಜುನ ವಿಜಯದಲ್ಲಿ ಧರ್ಮರಾಯನು ಅರ್ಜುನನಿಗೆ ಪ್ರಾಯದ ಪೆಂಪೆ ಪೆಂಪೆಮಗೆ ಮೀರಿದರಂ ತವೆ ಕೊಂದ ಪೆಂಪು ಕಟ್ಟಾಯದ ಪೆಂಪು (ಪಂಪಭಾ ೧೪.೧೭) ಎಂದು ಅರ್ಜುನನಿಗೆ ಅಧಿಕಾರವನ್ನು ಬಿಟ್ಟುಕೊಡುವನು. ಅದೇ ರೀತಿ ಆದಿಪುರಾಣದಲ್ಲಿ ಬಾಹುಬಲಿಯು ಗೆಲುವಿನ ಔನ್ನತ್ಯದಲ್ಲಿ ಭರತನಿಗೆ ತನ್ನ ಹಕ್ಕಿನ ಅಧಿಕಾರವನ್ನು ತ್ಯಾಗ ಮಾಡುವುದರ ಹಿಂದೆ ನಿರ್ದಿಷ್ಟ ಉದ್ದೇಶಗಳಿರುವಂತಿದೆ. ಅಧಿಕಾರದಾಹ, ಅಹಂಕಾರ, ಭೋಗದ ಬದುಕಿಗಾಗಿ ಹಂಬಲಿಸುವ, ಸಿಂಹಾಸನಕ್ಕಾಗಿ ತಿಕ್ಕಾಟಗಳು ನಡೆಯುತ್ತಿರುವ ಕಾಲದಲ್ಲಿ ಬರುವ ಈ ಬಗೆಯ ಚಿತ್ರಗಳನ್ನು ಕೇವಲ ಆದರ್ಶದ ಚಿತ್ರಗಳು ಎನ್ನಬಹುದೇ? ಅಥವಾ ತನ್ನ ಕಾಲದ ಚರಿತ್ರೆಯ ಒಳಗೆ ಇದ್ದಿರಬಹುದಾದ ರಾಜಕೀಯದ ಗೊಂದಲಗಳಿಗೆ ಧ್ವನಿಪೂರ್ಣವಾಗಿ ಪಂಪನ ಪ್ರತಿಕ್ರಿಯೆಯಾಗಿ ಇವು ಬಂದಿರಬಹುದೇ? ಎಂಬ ಅನುಮಾನಗಳು ಕಾಡುತ್ತವೆ.

    ಸೋದರರೊಳ್ ಸೋದರರಂ
    ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು
    ತ್ಪಾದಿಸುವುದು ಕೋಪಮನಳ
    ವೀದೊರೆತೆನೆ ತೊಡರ್ವುದೆಂತು ರಾಜ್ಯಶ್ರೀಯೊಳ್ (ಆದಿಪು.೧೪.೧೨೨)

    ಅದಿಪುರಾಣದಲ್ಲಿ ಬರುವ ಈ ಪದ್ಯ ತೀರ ಸರಳವಾದ ಮನಸ್ಥಿತಿಯಲ್ಲಿ ಬಂದಿದೆ ಎಂದು ಅನಿಸುವುದಿಲ್ಲ. ತನ್ನ ಕಾಲದ ರಾಜಕೀಯ ತಿಕ್ಕಾಟಗಳಿಗೆ ಕವಿ ಇಲ್ಲಿ ಧ್ವನಿ ನೀಡಿದಂತಿದೆ. ಅಪ್ಪ ಮಕ್ಕಳು, ಸಹೋದರರ ನಡುವೆ ರಾಜ್ಯಕ್ಕಾಗಿ ನಡೆಯುತ್ತಿದ್ದ ಅಧಿಕಾರದ ಅಹಂಗೆ ಬೀಸಿದ ಚಾಟಿಏಟಿನಂತೆ ಕಾಣುತ್ತದೆ. ಇದಕ್ಕೆ ಪೂರಕವಾಗಿ ಪಿರಿಯಣ್ಣಂ ಗುರು ತಂದೆಯೆಂದೆರಗುವೆಂ, ಆಳರಸಂಬೊಂದು ವಿಭೇದಮಾದೊಡೆರಕಂ ಚಿ: ಕಷ್ಟಮಲ್ತೇ ಎಂಬ ಮಾತುಗಳು ಬಂದಿವೆ. ಬಂಧುತ್ವದ ಯಾವ ಅಂಶಗಳನ್ನೂ ಪರಿಗಣಿಸದೆ, ರಾಜ್ಯವನ್ನು ಕಿತ್ತುಕೊಳ್ಳುವ ಸಂಘರ್ಷಕ್ಕೆ ಪಂಪನ ಮನಸ್ಸಿನ ಆತಂಕ ಇಲ್ಲಿ ಆಕಾರಪಡೆದಂತೆ ಕಾಣುತ್ತದೆ. ನ್ಯಾಯವಾಗಿ ಕೊಡಬೇಕಾದ ಅರ್ಧ ರಾಜ್ಯದಲ್ಲಿ ಐದು ಗ್ರಾಮಗಳನ್ನು ಕೊಡದ ಕೌರವನ ವ್ಯಕ್ತಿತ್ವದ ಎದುರು ಧರ್ಮರಾಯ ಮತ್ತು ಬಾಹುಬಲಿಯ ತ್ಯಾಗಕ್ಕೆ ಹೊಸ ಅರ್ಥ ಸಾಧ್ಯತೆಗಳು ತಾನಾಗಿ ಬಂದು ಬಿಡುತ್ತವೆ.

    ಪಂಪ ಯುದ್ಧದ ಅನಾಹುತಗಳನ್ನು ಹತ್ತಿರದಿಂದ ಕಂಡವನು. ಅದರಿಂದಾಗುವ ಜನಕ್ಷಯ ಕವಿಯ ಮನಸ್ಸನ್ನು ತಲ್ಲಣಗೊಳಿಸಿರಬೇಕು. ಪೂರ್ವಪುರಾಣದಲ್ಲಿ ಬರುವ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧದಂತಹ ಪರಿಕಲ್ಪನೆಯೇ ಹೊಸತು. ಪ್ರಪಂಚದಲ್ಲಿ ಈ ಬಗೆಯ ಅಹಿಂಸಾ ಯುದ್ಧದ ಕಲ್ಪನೆ ನೀಡಿದವರಲ್ಲಿ ಜಿನಸೇನರೇ ಮೊದಲಿಗರಾಗಿರಬೇಕು. ಹೀಗಾಗಿ ಜಿನಸೇನರ ನೆರಳಿನಲ್ಲಿ ಬರುವ ಕನ್ನಡದ ಆದಿಪುರಾಣು ನೀಡುವ ಅಹಿಂಸಾಯುದ್ಧದ ಪರಿಕಲ್ಪನೆಗೆ ಆ ಕಾಲದ ಹಿನ್ನೆಲೆಯಲ್ಲಿ ಮಹತ್ವವಿದೆ.

    ಚಕ್ರರತ್ನವನ್ನು ಮುಂದಿಟ್ಟುಕೊಂಡು ದಿಗ್ವಿಜಯಕ್ಕೆ ಹೊರಟ ಭರತನಿಗೆ ರಕ್ತಪಾತವನ್ನು ಸೃಷ್ಟಿಸುವ ಯುದ್ಧವನ್ನು ಮಾಡುವ ಅಗತ್ಯವೇ ಬರುವುದಿಲ್ಲ. ಭರತ ಮತ್ತು ಬಾಹುಬಲಿಯ ನಡುವೆ ಯುದ್ಧದ ಅನಿವಾರ್ಯತೆ ಎದುರಾದಾಗ ಉಭಯ ಪಕ್ಷದ ಮಂತ್ರಿಗಳು ಸಮಸ್ತಜನಸಂಹರಣಮಪ್ಪ ರಣದೊಳೇವಂದಪುದೆಂದು ಧರ‍್ಮಯುದ್ಧಮನೆ ತಮ್ಮೊಳ್ ಸಮಕಟ್ಟಿ (ಆದಿಪು.೧೪.೧೦೦ವ) ಇಬ್ಬರೂ ಅರಸರನ್ನು ದೃಷ್ಟಿಯುದ್ಧ, ಜಲಯದ್ಧ, ಮಲ್ಲಯುದ್ಧಕ್ಕೆ ಒಪ್ಪಿಸುವರು. ವಿಕ್ರಮಾರ್ಜುನ ವಿಜಯದಲ್ಲಿ ಬರುವ ಸಂಧಾನದ ಪ್ರಕ್ರಿಯೆಗಳು ಯುದ್ಧವನ್ನು ತಪ್ಪಿಸುವ ನೆಲೆಯಲ್ಲಿಯೇ ಬರುತ್ತವೆ. ಸಮಕಾಲೀನ ಭಾರತದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಹಿಂಸಾತ್ಮಕ ಯುದ್ಧಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಅಹಿಂಸಾತ್ಮಕ ಯುದ್ಧವನ್ನು ಪಂಪ ಮುಂದಿಡುತ್ತಿರುವಂತಿದೆ. ಆಂಗ್ಲರ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ಸಂಘಟಿಸಿದ ಮಹಾತ್ಮಾ ಗಾಂಧೀಜಿಯ ಹೋರಾಟವನ್ನು ಕಂಡ ಭಾರತೀಯರಿಗೆ ಪಂಪನ ಈ ಬಗೆಯ ನಿಲುವು ಅರ್ಥಪೂರ್ಣವಾಗಿ ಕಾಣುತ್ತದೆ.

    ಕವಿಯ ಪ್ರಕಾರ ಧರ್ಮವೇ ಮುಖ್ಯ. ಧರ್ಮ, ಅರ್ಥ, ಕಾಮಗಳು ಧರ್ಮಾರ್ಥಿ ಜನರ ವಿಶ್ವಾಸಕ್ಕೆ ಪಾತ್ರವಾದವು.

    ಧರ್ಮಂ ಪ್ರಧಾನಂಮರ್ಥಂ
    ಧರ್ಮಾಂಘ್ರಿಪ ಫಳಮದರ್ಕೆ ರಸಮದು ಕಾಮಂ (ಆದಿಪು.೧೦.೫೦)

    ಆದ್ದರಿಂದ ಭೋಗದಿಂದ ಪಡೆಯಲಾಗದ ಮುಕ್ತಿಯನ್ನು ದೊರಕಿಸಿಕೊಳ್ಳಲು ಇರುವ ಸಾಧ್ಯತೆಯೆಂದರೆ ಜೈನದೀಕ್ಷೆಯಂ ಕೊಂಡಡಿಗೆರಗಿಸುವೆಂ ಸಮಸ್ತ ಸುರಸಮುದಯಮಂ (ಆದಿಪು.೧೪.೧೨೭)ಎಂದು ಹೇಳಿದೆ. ಹೇಯಂ ಸಾಮ್ರಾಜ್ಯಮುಪಾದೇಯಂ ಪ್ರವ್ರಜ್ಯಂ (ಆದಿಪು.೧೬.೬೨) ಸಾಮ್ರಾಜ್ಯವು ಹೇಯವಾದುದು, ಸನ್ಯಸನವು ಸ್ವೀಕಾರ್ಯವಾದುದು ಎಂದು ಪರಿಭಾವಿಸಿ ಭರತನು ಮುಕ್ತಿಶ್ರೀಯನ್ನು ಬಯಸಿದನು. ಹೀಗೆ ಅಂತಿಮವಾಗಿ ಇಲ್ಲಿ ಬರುವ ಪಾತ್ರಗಳು ಲೌಕಿಕವನ್ನು ಕಳೆದುಕೊಂಡು ತಪಸ್ಸು ಮಾಡಿ ದೈವತ್ವಕ್ಕೆ ಏರುತ್ತವೆ; ಮುಕ್ತಿ ಹೊಂದುತ್ತವೆ.

    ಧರ್ಮದಂತೆಯೇ ಕಾವ್ಯವೂ ಓದುಗರಿಗೆ ಅರಿವನ್ನು ಮೂಡಿಸುತ್ತದೆ. ಆದ್ದರಿಂದ ಧರ್ಮ ಮತ್ತು ಕಾವ್ಯಧರ್ಮವನ್ನು ಸಮನ್ವಯಗೊಳಿಸಿದಂತಿದೆ. ತನ್ನ ಇಡೀ ಕೃತಿಯನ್ನು ಕಟ್ಟುವ ಸಂದರ್ಭದಲ್ಲಿ ಪಂಪ ನೀಡುವ ನಿಸರ್ಗ, ಪೂಜೆ, ವಿವಾಹ, ನರ್ತನ, ಉತ್ಸವ, ವೈರಾಗ್ಯ ಮುಂತಾದ ಚಿತ್ರಣಗಳು ಧರ್ಮದ ನೆಲೆಗಳನ್ನು ವಿಸ್ತರಿಸುತ್ತಾ ಹೋಗುತ್ತವೆ. ಧರ್ಮದ ಮುಖ್ಯ ಲಕ್ಷಣವೆಂದರೆ ಎಲ್ಲವನ್ನೂ ಒಳಗೊಂಡಿರುವುದು. ಹೀಗಾಗಿ ಜೈನಧರ್ಮವನ್ನು ಮೀರಿ ಮಾನವ ಧರ್ಮದ ಕಡೆಗೆ ಚಲಿಸುತ್ತಾನೆ. ಆದಿಪುರಾಣ, ಪುರಾಣ ಕಾವ್ಯವಾಗಿ ಧಾರ್ಮಿಕ ಮೌಲ್ಯಗಳನ್ನು ಅಚ್ಚುಕಟ್ಟಾಗಿ ನೆಲೆಗೊಳಿಸಲು ಯತ್ನಿಸುತ್ತದೆ. ಅದೇ ಹೊತ್ತಿನಲ್ಲಿ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳ ಚಿತ್ರಣ, ವ್ಯಕ್ತಿಯ ಅಂತರಂಗದ ಶೋಧನೆ, ಸಂಘರ್ಷದ ಸೂಕ್ಷ್ಮಗಳನ್ನು ತೆರೆಯುವುದರ ಮೂಲಕ ಪುರಾಣದ ಚೌಕಟ್ಟುಗಳನ್ನು ಮೀರಿ ನಿಲ್ಲುತ್ತದೆ.

    ಅಡಿಟಿಪ್ಪಣಿ :
    ೧. ಜೈನಧರ್ಮ ದರ್ಶನ : ಜಿ. ಹನುಮಂತರಾವ್, ಪು.೪, ಡಿವಿಕೆ ಮೂರ್ತಿ, ಮೈಸೂರು ೨೦೦೪
    ೨. ಪುರಾಣ : ಡಾ. ಕೆ. ಎಲ್. ಗೋಪಾಲಕೃಷ್ಣಯ್ಯ, ಪು. ೧೬, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೮

    ಸಂಕ್ಷೇಪ ಸೂಚಿ :
    ಆದಿಪು : ಆದಿಪುರಾಣಂ
    ಪಂಪಭಾ : ಪಂಪಭಾರತ
    ಪೂರ್ವಪು : ಪೂರ್ವಪುರಾಣ
    ಹಲಾಯು : ಅಭಿಧಾನ ರತ್ನಮಾಲಾ ಕರ್ಣಾಟಕ ಟೀಕೆ
    ಮಂಗರಾ : ಮಂಗರಾಜನ ಅಭಿನವಾಭಿಧಾನಂ
    ಪರಾಮರ್ಶನ ಗ್ರಂಥಗಳು :
    -ಪಂಪಮಹಾಕವಿ ವಿರಚಿತ ಆದಿಪುರಾಣಂ : ಗದ್ಯಾನುವಾದ ಶ್ರಿ ಕೆ.ಎಲ್. ನರಸಿಂಹಶಾಸ್ತ್ರಿ
    ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೦
    -ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ : ಡಾ. ಕೆ. ಎಲ್. ಗೋಪಾಲಕೃಷ್ಣಯ್ಯ,
    ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೭
    -ಮಹಾಪುರಾಣ : ಶ್ರಿ ಭಗವಜ್ಜಿನಸೇನಾಚಾರ್ಯ - ಗುಣಭದ್ರಾಚಾರ್ಯ, ಸಂಪುಟ ೧,
    ಸಂಪಾದಕರು ಮತ್ತು ಅನುವಾದಕರು: ಶ್ರೀಮಾನ್ ಎರ್ತೂರು ಶಾಂತಿರಾಜ ಶಾಸ್ತ್ರಿಗಳವರು
    ಪ್ರಕಾಶಕರು : ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ಬೆಂಗಳೂರು, ೧೯೯೨
    -ಜೈನ ಮಹಾಪುರಾಣ ಮತ್ತು ವೈದಿಕ ಪುರಾಣಗಳ ತೌಲನಿಕ ಅಧ್ಯಯನ : ಜಿ. ಬ್ರಹ್ಮಪ್ಪ
    ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು -೦೬, ೨೦೦೪
    -ಪಂಪ ಸಂಪುಟ
    (ಆದಿಪುರಾಣಂ, ವಿಕ್ರಮಾರ್ಜುನ ವಿಜಯಂ) : ಸಂ. ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ
    ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬
    -ಕನ್ನಡ ಸಾಹಿತ್ಯ ಪರಂಪರೆ ಮತ್ತು ಅಭಿವ್ಯಕ್ತಿ : ಸಂ. ಡಾ. ಎಸ್. ಡಿ. ಶೆಟ್ಟಿ,
    ಕನ್ನಡ ಸಂಘ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ದ.ಕ., ೨೦೦೬

    (ಪ್ರೊ. ಕೆ. ಇ. ರಾಧಾಕೃಷ್ಣ ಇವರು ಸಂಪಾದಿಸಿದ ಪಂಪಾಧ್ಯಯನ ಕೃತಿಯಲ್ಲಿ ಈ ಪ್ರಬಂಧ ಪ್ರಕಟವಾಗಿದೆ.)

    0 Responses to “ಆದಿಪುರಾಣ - 4”

    Subscribe