Tuesday, March 1, 2011

0

ಆದಿಪುರಾಣ - 3

  • Tuesday, March 1, 2011
  • ಡಾ.ಶ್ರೀಧರ ಎಚ್.ಜಿ.
  • Share
  • ಆದಿಪುರಾಣವನ್ನು ಇಡಿಯಾಗಿ ಗಮನಿಸಿದರೆ ಪೂರ್ಣತೆಯ ಕಡೆಗೆ ಹೊರಟ ಆತ್ಮವೊಂದು ತನಗಂಟಿದ ಕರ್ಮಬಂಧನಗಳನ್ನು ಕಳೆದುಕೊಳ್ಳುತ್ತ ಹೋಗುವ ದೀರ್ಘ ಯಾತ್ರೆ ಇಲ್ಲಿದೆ. ಆದರೆ ಪಂಪನಂತಹ ಕವಿ ಬದುಕಿನ ಬಗೆಗೆ ಏಕಮುಖಿಯಾಗಿ ಚಿಂತಿಸಲಾರ. ಆತನ ತುಡಿತ, ಒಳದನಿ ಬೇರೆಯದೇ ಆಗಿದೆ. ಭೋಗಜೀವನ, ಯುದ್ಧವನ್ನು ಪಂಪ ವೈಭವೀಕರಿಸಿದ್ದರೂ ಕೃತಿ ಅಂತಿಮವಾಗಿ ವಿಷಾಧ ಭಾವದ ಕಡೆಗೆ ಹೊರಳಿಬಿಡುತ್ತದೆ. ಧರ್ಮದಲ್ಲಿ ನೆಲೆಯಾಗುತ್ತದೆ. ಇಲ್ಲಿನ ಪಾತ್ರಗಳು ಅಂತಿಮವಾಗಿ ಮಾನವ ಧರ್ಮದ ಕಡೆಗೆ ಚಲಿಸುತ್ತವೆ. ಆದ್ದರಿಂದ ಆದಿಪುರಾಣದಲ್ಲಿ ಧರ್ಮ ಮತ್ತು ಕಾವ್ಯಧರ್ಮದ ಸಮನ್ವಯದ ಬಗೆಗಿನ ಪಂಪನ ನಿಲುವಿನಲ್ಲಿ ಭಿನ್ನ ಸಾಧ್ಯತೆಯ ಎಳೆಯೊಂದು ಹೊಳೆಯುತ್ತದೆ. ಕೃತಿಯ ಪ್ರಬಂಧ ಧ್ವನಿ ಧರ್ಮವೇ ಕಾವ್ಯದ ಕಥಾನಾಯಕ ಎಂಬಂತಿದೆ. ಮಾನವ ಸಂಬಂಧಗಳ ವಿವಿಧ ನೆಲೆಗಳನ್ನು ಶೋಧಿಸಿ ಅಂತಿಮವಾಗಿ ’ಅರಿವಂ ಪೊಸಯಿಸುವುದು ಧರ್ಮ’ ಎಂಬ ನಿಲುವಿಗೆ ಕವಿ ತಲುಪುತ್ತಾನೆ. ಹೀಗಾಗಿ ಆತನಿಗೆ ಅರಿವನ್ನು ಬೆಳಗಿಸುವ ಧರ್ಮವೇ ಮುಖ್ಯ. ಹೀಗಾಗಿ ಅರಿವಿನಲ್ಲಿ ಮೂಡಿದ ತಿಳಿವನ್ನು ವ್ಯಕ್ತಪಡಿಸಲು ಕವಿಗೆ ಜೈನಧರ್ಮ ಒಂದು ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಕೆಯಾಗಿದೆ.

    ಪಂಪನ ನಿಲುವಿನಲ್ಲಿ ಲೋಕದೃಷ್ಟಿ ಕೆಡದೆ ಧರ್ಮ ಸಂತತಿ ನಿಲ್ಲಬೇಕು. ಅವಸರ್ಪಿಣಿ ಕಾಲದಲ್ಲಿ ಹುಟ್ಟಿದ ಪಂಪನ ಕೃತಿ ನಿರ್ದಿಷ್ಟ ಮೌಲ್ಯಗಳ ಕಡೆಗೆ ಚಲಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಸಮಾಜವು ನೀತಿಯ ಕಡೆಗೆ ಗಮನ ಕೊಡದೆ ವೈಭವ, ಭೋಗಜೀವನದ ಕಡೆಗೆ ಸಮಾಜ ಹೋಗುತ್ತಿದೆಯೆಂಬ ಆತಂಕ ಕೃತಿಯ ಹಿಂದಿರುವಂತಿದೆ. ಆದ್ದರಿಂದ ಧರ್ಮವನ್ನು ಸ್ಥಿರಗೊಳಿಸಬೇಕೆಂಬ ಅಪೇಕ್ಷೆ, ಆದರ್ಶ ಇಲ್ಲಿನದು. ಸೃಷ್ಟಿಯು ಕೆಟ್ಟು ಪೋಗದೇ (ಆದಿಪು ೮.೧೧) ಎಂಬ ಮಾತಿನ ಹಿನ್ನೆಲೆಯಲ್ಲಿ ಈ ಬಗೆಯ ಆತಂಕವಿರುವಂತಿದೆ. ಜೀವ ಸಂಕುಲದ ಬದುಕು ಸಹಜವಾಗಿ ಮುನ್ನಡೆಯಬೇಕು ಎಂಬ ಅಕಾಂಕ್ಷೆ ಕವಿಯದು. ಇದಕ್ಕೆ ಆಡಳಿತ ವರ್ಗದ ನೈತಿಕನೆಲೆ ಸರಿಯಾಗಿರಬೇಕು. ವ್ಯಕ್ತಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ತಿಳಿದು ಮುನ್ನಡೆಯಬೇಕು. ಅದೇ ಧರ್ಮ ಎಂಬ ನಿಲುವು ಕೃತಿಯಲ್ಲಿ ಅಲ್ಲಲ್ಲಿ ಮೂಡಿ ಬಂದಿದೆ. ಇದಕ್ಕೆ ಎರಡು ಮಾದರಿಗಳನ್ನು ಕವಿ ನೀಡುತ್ತಾನೆ. ಇವೆರಡೂ ಸರಿಯಾಗಿ ನಡೆಯಬೇಕು. ಅದಾಗದಿದ್ದರೆ ಸೃಷ್ಠಿಯು ಕೆಟ್ಟು ಹೋಗುವುದು. ಈ ಬಗೆಯ ಎರಡೂ ಅತಿಗಳು ನಡೆಯದಂತೆ ತಡೆಯುವುದು ಅತ್ಯಂತ ಮುಖ್ಯ. ಅದೇ ಧರ್ಮ. ಮಾದರಿ ಒಂದು :
    ವ್ಯಕ್ತಿ ಭೋಗವನ್ನು ಅನುಭವಿಸಿ ತಮ್ಮ ಉತ್ತರಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿ ತಪಸ್ಸಿಗೆ ಹೋಗಬೇಕು. ಇದಕ್ಕೆ ವಜ್ರದಂತ ಅಮಿತ ತೇಜನಿಗೆ ಹೇಳುವ ಮಾತುಗಳನ್ನು ಗಮನಿಸಬಹುದು.

    ನೀನೆಮ್ಮಂ ಮೀರದೆ ರಾ
    ಜ್ಯಾನುಷ್ಠಾನಮನೊಡಂಬಡೀಗಳ್ ನಿಜಸಂ
    ತಾನಕ್ಕೆ ಮಗಂಬಡೆಯೆ ತ
    ಪೋನಿಯಮಂ ಮಗನೆ ಕಡೆಯೊಳಿರ್ದಪುದಲ್ತೇ (ಆದಿಪು ೪.೮೦)

    ನೀನು ನಮ್ಮ ಮಾತನ್ನು ಮೀರದೆ ರಾಜ್ಯಭಾರವನ್ನು ಮಾಡು. ನಿನಗೆ ಮಗನು ಹುಟ್ಟಿ ಅವನು ಬೆಳೆಯಲಿ ಮಗನೆ ! ತಪೋನುಷ್ಠನಕ್ಕಾಗಿ ಕಾಡಿಗೆ ಹೋಗುವುದು ಕಡೆಯಲ್ಲಿದ್ದೇ ಇದೆ. ಇಲ್ಲಿ ನಿಚ್ಚಳವಾಗಿ ವೈದಿಕ ಸಂಸ್ಕೃತಿಯ ನೆರಳು ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು. ಅಮಿತತೇಜ ಇಲ್ಲಿ ಭೋಗವನ್ನು ಮಾತ್ರವಲ್ಲ, ಕರ್ತವ್ಯವನ್ನೂ ನಿರಾಕರಿಸುತ್ತಿದ್ದಾನೆ. ಹೀಗಾದರೆ ರಾಜ್ಯ ಅರಾಜಕವಾಗುವ ಸ್ಥಿತಿ ಬರುತ್ತದೆ. ಆದ್ದರಿಂದ ವೈರಾಗ್ಯವೆಂದರೆ ವ್ಯಕ್ತಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಲ್ಲ. ಈ ಹಿನ್ನೆಲೆಯಲ್ಲಿ

    ಶಾಂತಾತ್ಮ ಮದುವೆ ನಿಲ್ ನೀ
    ನಿಂತೆನ್ನ ಗೃಹಸ್ಥಧರ್ಮದಿಂದಂ ನೀನೆಂ
    ತಂತೆ ಸಲೆ ನೆಗಳೆ ಜಗತೀ
    ಸಂತತಿ ನಿಲೆ ನಿನ್ನ ಧರ್ಮ ಸಂತತಿ ನಿಲ್ಕುಂ(ಆದಿಪು ೮.೧೩)

    ಶಾತಾತ್ಮ, ಮದುವೆಯಾಗು. ನನ್ನಂತೆಯೇ ನೀನು ಗೃಹಸ್ಥ ಧರ್ಮವನ್ನು ಪರಿಗ್ರಹಿಸಿದರೆ ಜಗತ್ತಿಗೂ ಸಂತತಿಯು ನಿಲ್ಲುವುದು. ನಿನಗೂ ಧರ್ಮ ಸಂತತಿಯು ನಿಲ್ಲುವುದು ಎಂಬ ಮಾತಿಗೆ ವಿಶೇಷ ಅರ್ಥ ಬರುತ್ತದೆ. ಇದನ್ನು ವ್ಯಕ್ತಿ ಪಾಲನೆ ಮಾಡದಿದ್ದರೆ ಅಧರ್ಮ ಸಂತತಿಯೊಂದು ಮೊಳಕೆಯೊಡೆಯುತ್ತದೆ ಎಂಬ ಆತಂಕ ಇಲ್ಲಿ ವ್ಯಕ್ತವಾಗಿದೆ. ಕವಿ ನೀಡುವ ಈ ಬಗೆಯ ಮಾದರಿಗೆ ವ್ಯತಿರಿಕ್ತ ಮಾದರಿಯೂ ಆದಿಪುರಾಣದಲ್ಲಿದೆ. ಹೀಗಾಗಿ ವಿಭಿನ್ನ ಆಯಾಮಗಳಲ್ಲಿ ಬದುಕಿನ ಶೋಧನೆಯನ್ನು ಕವಿ ನಡೆಸಿರುವುದನ್ನು ಎರಡನೆಯ ಮಾದರಿಯಲ್ಲಿ ನೋಡಬಹುದು. ಮಾದರಿ ಎರಡು :
    ವ್ಯಕ್ತಿ ಭೋಗವನ್ನು ಅನುಭವಿಸಿದ ಅನಂತರ ಸದಾಕಾಲ ಭೋಗದ ಬದುಕಿಗೆ ಅಂಟಿಕೊಂಡಿರಬಾರದು.
    ಮಹಾಬಲನಿಗೆ ಸಾಕಷ್ಟು ವಯಸ್ಸಾಗಿದೆ. ಆದರೂ ಭೋಗಕ್ಕೆ ಅಂಟಿಕೊಂಡು ನರಳುತ್ತಿರುವ ಚಿತ್ರವನ್ನು ಇಲ್ಲಿ ಗಮನಿಸಬಹುದು.
    ಮುಸುಮುತ್ತಂತೆ ತೆರಳ್ದ ತನ್ನ ಮೊಗಮಂ ಕಂಡಳ್ಕನೋ ಕೂಡೆ ಜೋ
    ಲ್ದು ಸಡಿಲ್ದಿರ್ದೊಡಲಳ್ಳೆ ಜೊಳ್ಳೆತನಮಂ ಮೇಣ್ಕಾಣನೋ ಸಂತತ
    ವ್ಯಸನೋದ್ರೇಕದ ಕುಂದನೇನೊಣರನೋ ಶಕ್ತಿ ಕ್ಷಯಂಗಾಣನೋ
    ಬಿಸುಡಂ ಮುನ್ನಿನ ತನ್ನ ಲಂಪಳಿಕೆಯಂ ಮತ್ತಂ ಜರಾಜರ್ಜರಂ (ಆದಿಪು ೨.೪೫)

    ನನ್ನ ರಾಜನು ಕೋಡಗದಂತೆ ಮುದಿಯಾಗಿ ಮುದ್ದೆಯಾದ ತನ್ನ ಮುಖವನ್ನು ಕಂಡು ಅಳುಕನಲ್ಲ. ಜೋತುಬಿದ್ದ ಒಡಲಳ್ಳೆಗಳ ಜೊಳ್ಳುತನವನ್ನು ಗಮನಿಸನೆ ! ವ್ಯಸನೋದ್ರೇಕದಿಂದ ಕುಂದನೇನನ್ನೂ ಕಾಣನೇ. ಶಕ್ತಿ ಕ್ಷಯವನ್ನನುಭವಿಸನೆ! ಮುಪ್ಪಿನಿಂದ ತರತರನೆ ಕಂಪಿಸುತ್ತಿದ್ದರೂ ಲಂಪಟತೆಯನ್ನು ಮಾತ್ರ ಬಿಸುಡನು ಇಂದು ಮಹಾಬಲನ ಬಗೆಗೆ ಸ್ವಯಂಬುದ್ಧನು ಹೀಗೆ ಆಲೋಚಿಸುವುದು ಆತನ ಭೋಗಾಸಕ್ತಿಯ ಟೀಕೆಯಾಗುತ್ತದೆ. ಈ ಬಗೆಯ ವಿವರಗಳು ಜಿನಸೇನರ ಕೃತಿಯಲ್ಲಿಲ್ಲ ಎಂಬುದು ಗಮನೀಯ ಅಂಶ. ಪಂಪ ಉದ್ದೇಶ ಪೂರ್ವಕವಾಗಿ ಈ ಬಗೆಯ ಮಾತುಗಳನ್ನು ಸೇರಿಸುವುದರ ಹಿಂದೆ ನಿರ್ದಿಷ್ಟ ಕಾರಣವಿರಬೇಕು. ವಯಸ್ಸಾದರೂ ಅಧಿಕಾರಲಾಲಸೆ, ಭೋಗಕ್ಕೆ ಅಂಟಿ ಕುಳಿತ ರಾಜತ್ವದ ಬಗೆಗೆ ಕವಿಗಿರುವ ತಿರಸ್ಕಾರ ಇಲ್ಲಿ ಮೂಡಿದಂತಿದೆ. ಹೀಗಾಗಿ ಇದು ಭೋಗಜೀವನದಲ್ಲಿ ಮುಳುಗಿದ ಸಮಕಾಲೀನ ಪ್ರಭುತ್ವದ ವಿಡಂಬನೆಯೂ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಪಂಪನ ಧರ್ಮದ ಅಮೃತಧಾರೆ ಹನಿಹನಿಯಾಗಿ ಹಿತವಾಗಿ ಒಸರುತ್ತದೆ. ನಿನ್ನ ಮುನ್ನಿನ ಚರಿತಂಗಳಂ ನೆನೆಯದಿರ್ ನೆನೆ ಜೈನಪದಾಂಬುಜಂಗಳಂ (ಆದಿಪು ೨.೪೬) ಶರಣಂ ಜಿನೇಂದ್ರ ಚರಣಂ ವಿದ್ಯಾಧರಾಧೀಶ್ವರ ಜಿನೇಂದ್ರ ಚರಣವೇ ನಿನಗೆ ಶರಣು (ಆದಿಪು ೨.೪೮) ಧರ್ಮಕ್ಕಿಂತ ಬೇರಾವ ಶರಣಿಲ(ಆದಿಪು.೩.೬) ಎಂಬ ಸಾಂತ್ವನದ ಮಾತುಗಳು ಹಿತವಾಗಿ ಮೂಡಿಬರುತ್ತವೆ. ಈ ಬಗೆಯ ಚಿತ್ರಗಳನ್ನು ನೀಡುತ್ತಲೇ ಆದಿಪುರಾಣ ಭಿನ್ನರೀತಿಯ ಪುರಾಣವಾಗಿ ನಿಲ್ಲುತ್ತದೆ. ಹಾಗೆಯೇ ಲೌಕಿಕದ ನೆಲೆಯಿಂದ ಕಾವ್ಯ ಧರ್ಮದ ನೆಲೆಗೆ ಸದ್ದಿಲ್ಲದೆ ಜಾರುತ್ತದೆ.

    ವೈರಾಗ್ಯಕ್ಕೆ ಕಾರಣವಾಗುವ ಅಂಶಗಳು ಕಾವ್ಯದಲ್ಲಿ ಒಂದೇ ತೆರನಾಗಿಲ್ಲ. ಕೆನ್ನೆಮೇಲೆ ನೆರಿಗೆ ಮೂಡುವುದು, ನೋಡುತ್ತಿರುವಂತೆಯೇ ಮೋಡ ಕರಗುವುದು, ಮಧುವನ್ನು ಹೀರಲೆಂದು ಹೂವನ್ನರಸಿ ಬಂದ ದುಂಬಿ ಸಾಯುವುದು, ಚೈತನ್ಯದ ಚಿಲುಮೆಯಾಗಿದ್ದ ನೀಲಾಂಜನೆ ರಂಗದಲ್ಲಿಯೇ ಅದೃಶ್ಯಳಾಗುವುದು, ಬಾಹುಬಲಿಗೆ ಗೆಲುವಿನ ತುದಿಯಲ್ಲಿ ವೈರಾಗ್ಯ ಬರುವುದನ್ನು ಗಮನಿಸಬಹುದು. ವೈದಿಕ ಸಂಸ್ಕೃತಿಯಲ್ಲಿ ಬದುಕಿನ ಕೊನೆಯಲ್ಲಿ ವಾನಪ್ರಸ್ಥಕ್ಕೆ ಹೋಗುವ ಏಕಾಕೃತಿಯನ್ನು ಕವಿ ಇಲ್ಲಿ ನಿರಾಕರಿಸುತ್ತಾನೆ ; ಖಚಿತ ಮಾದರಿಯನ್ನು ಭಗ್ನಗೊಳಿಸುತ್ತಾನೆ. ನೀಲಾಂಜನೆಯ ಪಾತ್ರದ ನಿರ್ಗಮನ ಜೀವನದ ನಶ್ವರತೆಯ ಅರಿವನ್ನು ಮೂಡಿಸಿತು. ಆಗಲೇ ಪುರುದೇವ ಭೋಗದ ಬದುಕಿನಿಂದ ನಿರ್ಗಮಿಸಬೇಕೆಂದು ನಿಶ್ಚಯಿಸಿದನು. ಜಿನಸೇನರಲ್ಲಿ ಅತ್ಯಂತ ಸರಳವಾಗಿ ಬಂದಿರುವ ನೀಲಾಂಜನೆಯ ನೃತ್ಯದ ಸಂದರ್ಭವು ಪಂಪನಲ್ಲಿ ಅಪೂರ್ವ ರೀತಿಯಲ್ಲಿ ಒಡಮೂಡಿರುವುದನ್ನು ಹಲವರು ಗುರುತಿಸಿದ್ದಾರೆ. ಈ ಸಂದರ್ಭ ಪಂಪನ ಪ್ರತಿಭೆಗೆ ಹಿಡಿದ ಕನ್ನಡಿ. ಜಿನಸೇನರನ್ನು ಅನುಸರಿಸಿಯೂ ಅವರನ್ನು ಮೀರುವ ಕವಿಪ್ರತಿಭೆ, ದೇಸೀ ಬದುಕಿನ ವಿವರಗಳನ್ನು ಪುರಾಣದೊಳಗೆ ಸಮನ್ವಯಗೊಳಿಸಿದ ರೀತಿ ಅಪೂರ್ವವಾಗಿದೆ. ಅರಮನೆ, ಆಸ್ಥಾನ, ವೈಭವ, ಭೋಗದ ಬದುಕು ಒಮ್ಮೆಲೆ ನಶ್ವರವಾಗಿ ಕಳಚಿ ಬೀಳುವ ಚಿತ್ರ ಇಲ್ಲಿದೆ. ತನ್ನ ಸಮಕಾಲೀನ ಪ್ರಭುತ್ವ ಅಳವಡಿಸಿಕೊಂಡ ಭೋಗಜೀವನಕ್ಕೆ ಕವಿಪ್ರತಿಭೆ ತೋರುವ ಪ್ರತಿಕ್ರಿಯೆ ಇದಾಗಿರಬಹುದೇ ಎಂಬ ಸಂಶಯ ಕಾಡುತ್ತದೆ.

    ಜಿನಸೇನರಲ್ಲಿ ಯೌವ್ವನವು, ವನದಲ್ಲಿರುವ ಲತೆಗಳ ಪುಷ್ಪದಂತೆ ನಾಶ ಸ್ವಭಾವವಾದುದು. ಭೋಗಸಂಪತ್ತುಗಳು ವಿಷದ ಬಳ್ಳಿಗೆ ಸಮಾನವಾದುವು. ಜೀವನವು ನಾಶ ಸ್ವಭಾವವುಳ್ಳುದು. ನಿಸ್ಸಾರವಾದ ಸಂಸಾರದಲ್ಲಿ ಸುಖದ ಲೇಶವು ದುರ್ಲಭವಾಗಿದೆ. ದು:ಖವೇ ಅಧಿಕವಾಗಿದೆ. ಅಂತಹ ಸಂಸಾರದಲ್ಲಿ ಅಜ್ಞಾನಿಯು ಸುಖವನ್ನಿಚ್ಚಿಸುತ್ತಾನೆ. (ಪೂರ್ವಪು.೧೭-೧೫,೧೭)

    ನಾರೀ ರೂಪಮಯಂ ಯಂತ್ರಮಿದಮತ್ಯಂತ ಪೇಲವಮ್
    ಪಶ್ಯತಾಮೇವ ನ: ಸಾಕ್ಷತ್ಕಥಮೇತದಗಾಲ್ಲಯಮ್ (ಪೂರ್ವಪು.೧೭.೩೬)

    ಹೊರಗೆ ಪ್ರಕಾಶಮಾನವಾದ ಈ ಸ್ತ್ರೀರೂಪವು ರಮಣೀಯವಾದುದೆಂದು ತಿಳಿದು ಕಾಮುಕರು ದೀಪದಲ್ಲಿ ಪತಂಗಗಳು ಬಿದ್ದು ನಾಶವಾಗುವಂತೆ ಆ ಸ್ತ್ರೀರೂಪದಲ್ಲಿ ಬಿದ್ದು ನಾಶವಾಗುತ್ತಾರೆ (ಪೂರ್ವಪು.೧೭.೩೭) ಎಂಬ ರೀತಿಯ ವಿವರಗಳು ಪೂರ್ವಪುರಾಣದಲ್ಲಿದೆ. ಪಂಪ ಇದನ್ನು ಮರುನಿರೂಪಿಸುವ ರೀತಿ ಹೊಸತನದಿಂದ ಕೂಡಿದೆ. ಕಣ್ಣೆದುರೇ ಮೃತ್ಯು ಸಂಭವಿಸಿದ್ದನ್ನು ನೋಡಿದಾಗ ಆದಿದೇವನಿಗಾದ ವಿಸ್ಮಯ, ತಲ್ಲಣಗಳು ಮೋಕ್ಷಗಾಮಿಯಾದ ಎಲ್ಲ ಜೀವಿಗಳೂ ಅನುಭವಿಸುವಂಥದ್ದೇ ಆಗಿದೆ.

    ದೇಹಾನಿತ್ಯತೆಗಿಂತು ನಾಡೆ ಚೋದ್ಯಂಬಟ್ಟಂ (ಆದಿಪು.೮.೪೩)
    ನಾರೀರೂಪದ ಯಂತ್ರಂ
    ಚಾರುತರಂ ನೋಡೆ ನೋಡೆ ಕರಗಿದುದೀ ಸಂ
    ಸಂಸಾರದನಿತ್ಯತೆ ಮನದೊಳ್
    ಬೇರೂರಿದುದೀಗಳೆಂತಿದಂ ಕಡೆಗಣಿಪೆಂ (ಆದಿಪು. ೯.೪೪)
    ಸಂಸೃತಿ ನಾಟಕಮುಮನೆನಗೆ ನೆರೆಯೆ ತೋರಿದಳೀಗಳ್ (ಆದಿಪು. ೯.೪೫)

    ದೇಹಕ್ಕೆ ವಸ್ತ್ರಾಭರಣಗಳೇ ಹೊರೆ. ಸುಗಂಧಾದಿ ದ್ರವ್ಯಗಳನ್ನು ಹಚ್ಚಿಕೊಳ್ಳುವುದೇ ಮಲ. ಗೀತವು ಗೋಳಾಟ. ನೃತ್ಯವೂ ನಗೆಯೂ ನಿಶ್ಚಯವಾಗಿ ಹುಚ್ಚರಾಟ. ಇವುಗಳೊಂದರಲ್ಲಿಯೂ ಹುರುಳಿಲ್ಲ(ಆದಿಪು. ೯.೫೫) ಎಂಬ ಮಾತುಗಳು ಸ್ವತ: ಅನುಭವಜನ್ಯವಾದವು. ಎರವಲಾಗಿ ಬಂದ ಉಪದೇಶವಲ್ಲ. ಈ ಬಗೆಯ ಆತ್ಮಾವಲೋಕನವೇ ಮನುಷ್ಯನ ವ್ಯಕ್ತಿತ್ವದ ಪರಿವರ್ತನೆಗೆ ಕಾರಣವಾಗಬಲ್ಲದು. ಇದಕ್ಕೆ ಜಯವರ್ಮನಿಂದ ಆದಿನಾಥನವರೆಗಿನ ಎಲ್ಲ ಹಂತಗಳಲ್ಲಿಯೂ ಅನುಭವದ ಹಿನ್ನೆಲೆಯಿದೆ. ಆತ್ಮದ ಮಾಗುವಿಕೆಯ ಚಿತ್ರವಿದೆ. ತೀರ್ಥಂಕರ ಸ್ಥಿತಿಯ ಪಕ್ವತೆ ಅಂತಿಮ ಸತ್ಯ. ಆದಿನಾಥನ ಅನಂತರವೂ ಭರತ, ಬಾಹುಬಲಿಯರಲ್ಲಿ ಈ ಕ್ರಿಯೆ ಮುಂದುವರಿಯುತ್ತದೆ. ಇಲ್ಲಿನ ಪಾತ್ರಗಳು ಸ್ವಯಮಾನುಭವಗಳನ್ನು ಪಡೆಯುವುದರ ಮೂಲಕ ಜೀವಂತಿಕೆಯನ್ನು ಪಡೆಯುತ್ತವೆ. ಆದ್ದರಿಂದ ಇದರ ತೀವ್ರತೆ ಹೆಚ್ಚು. ಇದುವರೆಗೆ ಭೋಗದಲ್ಲಿಯೇ ಮುಳುಗಿದ್ದ ಜೀವವೊಂದು ಈ ಬಗೆಯ ಬದುಕನ್ನು ನಿಜವೆಂದೇ ಭ್ರಮಿಸಿತ್ತು. ಆದರೆ ಶಾಶ್ವತವೆಂದು ನಂಬಿದ್ದೆಲ್ಲವೂ ಒಮ್ಮೆಲೆ ಅಪ್ರಸ್ತುತವಾಗಿ ನಿಂತ ನೆಲವೇ ಕುಸಿದು ಬಿಡುತ್ತದೆ. ತನ್ನ ಮಕ್ಕಳಿಗೆ ರಾಜ್ಯವನ್ನು ಹಂಚಿಕೊಟ್ಟು ಆಧ್ಯಾತ್ಮಿಕ ಬದುಕಿನ ಕಡೆಗೆ ಆದಿದೇವ ಹೊರಳುವನು. ಭೋಗದ ಬದುಕಿನಿಂದ ನಿರ್ಗಮಿಸುವ ನಿರ್ಧಾರವನ್ನು ಸ್ವತ: ಕೈಗೊಳ್ಳುವನು. ಮನುಷ್ಯ ತನ್ನ ಪಾತ್ರದ ಅಂತ್ಯವನ್ನು ತಾನೇ ನಿರ್ಧರಿಸುವ ಹಂತಕ್ಕೆ ಏರಬೇಕೆಂಬ ಸೂಚನೆ ಇಲ್ಲಿರುವಂತಿದೆ. ವಿಕ್ರಮಾರ್ಜುನ ವಿಜಯದಲ್ಲಿ ಭೀಷ್ಮನ ಪಾತ್ರ ಬಹುತೇಕ ಈ ಬಗೆಯ ಪಾತ್ರಕ್ಕೆ ಮಾದರಿಯಾಗಬಲ್ಲದು.

    ಆದಿಪುರಾಣ, ಜೈನಧರ್ಮದ ಚೌಕಟ್ಟಿನಲ್ಲಿ ಮಾನವಧರ್ಮವನ್ನು ಹೇಳುವ ಕೃತಿ. ಹೀಗಾಗಿ ಅಧರ್ಮಿಗಳು ಹಾಗೂ ಬದುಕಿನಲ್ಲಿ ನಿರಾಕರಣೀಯ ಮಾದರಿಗಳನ್ನು ಅಳವಡಿಸಿಕೊಂಡವರು ಅನುಭವಿಸಬೇಕಾದ ಶಿಕ್ಷೆಯ ಸ್ವರೂಪವನ್ನು ಕವಿ ವಿವರಿಸಿ ಭಯವನ್ನು ಮೂಡಿಸಿದ್ದಾನೆ.(ಆದಿಪು ೫.೮೧) ವ್ಯಕ್ತಿಯ ಬದುಕಿನಲ್ಲಿ ಸಂಸಾರ ಮತ್ತು ವೈರಾಗ್ಯ ಬದುಕಿನ ಎರಡು ಮುಖ್ಯ ಘಟ್ಟಗಳು. ಇದನ್ನು ಕವಿ ಯೌವನವನಕ್ರೀಡಾ ವಿಲಾಸ ಮತ್ತು ತಪೋವನ ಕ್ರೀಡಾಸುಖ (ಆದಿಪು ೨.೪೭) ಎಂದು ಗುರುತಿಸಿದ್ದಾನೆ. ಭೋಗಪ್ರಧಾನವಾದ ದೇಹಸುಖ ಮತ್ತು ತ್ಯಾಗ ಪ್ರಧಾನವಾದ ಮಾನಸಿಕ ಸುಖಗಳು ವ್ಯಕ್ತಿತ್ವದ ಒಳಗೇ ನಿರ್ಮಾಣಗೊಳ್ಳುವ ಪ್ರಕ್ರಿಯಗಳು. ಸಂಸೃತಿಯೊಳ್ ಧರ್ಮಾಧರ್ಮ ಸ್ಥಿತಿಯೆ ವಲಂ ಸ್ವರ್ಗನರಕಸುಖದು:ಖಕರಂ ಎಂಬಲ್ಲಿ ಈ ಅಂಶ ಸ್ಪಷ್ಟವಾಗಿದೆ. ಆದ್ದರಿಂದ ಇವುಗಳನ್ನು ವ್ಯಕ್ತಿಯ ವ್ಯಕ್ತಿತ್ವದಿಂದ ಬೇರ್ಪಡಿಸುವಂತಿಲ್ಲ.

    ಭೋಗಸುಖದಲ್ಲಿ ಮೈಮರೆಯುವ ಮಾದರಿಯೊಂದನ್ನು ಪಂಪ ಆದಿಪುರಾಣದಲ್ಲಿ ನೀಡಿದ್ದಾನೆ. ಭೋಗವನ್ನು ಅಂತಿಮ ಸತ್ಯವೆಂದು ನಂಬಿದ ಪಾತ್ರಗಳಿವು. ಆದಿಪುರಾಣದಲ್ಲಿ ಬರುವ ಲಲಿತಾಂಗ-ಸ್ವಯಂಪ್ರಭೆ, ವಜ್ರಜಂಘ-ಶ್ರೀಮತಿಯ ಪಾತ್ರಗಳು ಈ ಬಗೆಯವು. ಇವರು ಭೋಗವೇ ಅಂತಿಮ ಸತ್ಯ ಎಂಬ ಭ್ರಮೆಯಲ್ಲಿರುವರು. ಆದ್ದರಿಂದ ಅವರು ಸಹಜವಾಗಿ ಈ ಬದುಕಿನಿಂದ ನಿರ್ಗಮಿಸುವುದಿಲ್ಲ. ಅನ್ಯ ಒತ್ತಡ, ಆಮಿಷಕ್ಕೆ ಒಳಗಾಗಿ ನಿರ್ಗಮಿಸುವುದು ಅನಿವಾರ್ಯವಾಗುತ್ತದೆ. ಮಹಾಬಲನಲ್ಲಿಯೇ ಈ ಪ್ರವೃತ್ತಿ ಕಾಣಿಸಿಕೊಳ್ಳುತ್ತದೆ. ಮಹಾಬಲನ ಮೇಲೆ ಒತ್ತಡ ಹೇರುವ ಸ್ವಯಂಬುದ್ಧನ ಮಾತುಗಳನ್ನು ಇಲ್ಲಿ ಗಮನಿಸಬಹುದು.

    ನಿನ್ನ ಮುನ್ನಿನ ಚರಿತಂಗಳಂ ನೆನೆಯದಿರ್ ನೆನೆ ಜೈನ ಪದಾಂಬುಜಂಗಳಂ (ಆದಿಪು.೨.೪೬)
    . . . ಮಮತ್ವಮಂ ಬಿಸುಟು ನೀನೇ ತತ್ತ್ವಮುಂ ಭವ್ಯ ಭಾ
    ವಿಸು ನಿನ್ನೀ ತನುವಂ ತಪೋವನವನಕ್ರೀಡಾಸುಖಕ್ಕೊಡ್ಡು ಚಿಂ
    ತಿಸದಿರ್ ಮುನ್ನಿನ ನಿನ್ನ ಯೌವನಕ್ರೀಡಾವಿಳಾಸಂಗಳಂ (ಆದಿಪು.೨.೪೭)

    . . . ನಿನ್ನೊಳಾತ್ಮ ಹಿತಮಂ ನಿಶ್ಚಯಿಸು ಸನ್ಮಾರ್ಗಸೂ
    ಚನೆಗೆಯ್ದೆಂ ಶರಣಂ ಜಿನೇಂದ್ರಚರಣಂ ವಿದ್ಯಾಧರಾಧೀಶ್ವರಾ (ಆದಿಪು೨.೪೮)
    ಚೆಲ್ವಪ್ಪೊಡಲಂ ಪಡೆದಪೆಯೀಗಳೆ ಬಲ್ವಿಡಿವಿಡಿದು ಶರಣ್ಬುಗು ಜಿನೇಂದ್ರಪದ ಸರಸಿಜಮಂ
    (ಆದಿಪು೨.೫೮)

    ಇಲ್ಲಿ ಚೆಲುವಾದ ಒಡಲನ್ನು ಪಡೆಯುವ ಆಮಿಷವನ್ನು ನೀಡುವುದರ ಮೂಲಕ ಮಹಾಬಲನನ್ನು ಸಂಸಾರದಿಂದ ಆಧ್ಯಾತ್ಮದ ಕಡೆಗೆ ತಿರುಗಿಸುವನು. ಜಿನ ಸ್ಮರಣೆಯನ್ನು ಮಾಡುವುದರ ಮೂಲಕ ದೇವತೆಯಾಗಿ ಜನಿಸಿದ್ದೇನೆ ಎಂದು ಲಲಿತಾಂಗ ಭಾವಿಸುವಲ್ಲಿ (ಆದಿಪು.೨.೬೭) ಈ ಭಾವನೆಯೇ ಮುಂದುವರಿದಿದೆ.

    ಇದು ಸುಖದೊಂದು ತುತ್ತ ತುದಿ ರಾಗದ ಮೊದಲ್ ನಿರಂತರಾ
    ಭ್ಯುದಯ ಸಾಗರಂ ವಿಭವದಾಗರಮೀ ದಿವಿಜೇಂದ್ರರುಂದ್ರಲೋ
    ಕದೊಳುಮಿದೊಂದೆ ಸಾರಮಿದು ಜೇನಪದಾಬ್ಜವರಪ್ರಸಾದದಾ
    ದುದು ನಿನಗಪ್ಪ ಕಾರಣದಿನೀಗಳೆ ಪೂಜಿಸು ಚೈತ್ಯರಾಜಿಯಂ (ಆದಿಪು.೨.೬೯)
    ಈ ಬಗೆಯ ಎಲ್ಲ ಸೂಕ್ಷ್ಮಗಳೂ ಜಿನಪ್ರಸಾದದಿಂದ ಆಗಿರುವುದರಿಂದ ಎಲ್ಲ ಚೈತ್ಯಾಲಯಗಳನ್ನು ಪೂಜಿಸು ಎಂದು ನಿರ್ದೇಶಿಸುವಲ್ಲಿ ಭೋಗದಲ್ಲಿ ಮುಳುಗಲಿರುವ ಆತ್ಮಕ್ಕೆ ಭಿನ್ನ ದಾರಿಯನ್ನು ಸೂಚಿಸುವಂತಿದೆ. ಆದರೆ ಲಲಿತಾಂಗ ಮತ್ತೆ ಭೋಗದ ಬದುಕಿನಲ್ಲಿ ಮುಳುಗಿದಾಗ (ಅದು ಸುಖದೊಂದು ಪಿಂಡಮದು (ಆದಿಪು.೨.೭೪) ಆಯುಷ್ಯ ಮುಗಿಯುವ ಕಾಲಘಟ್ಟದಲ್ಲಿ ಮೃತ್ಯವಿನಿಂದ ನನ್ನನ್ನು ಬಿಡಿಸು (ಆದಿಪು.೩.೫) ಎಂದು ಹಲುಬುತ್ತಿರಲು ಆಗ ಬರುವ ಸಾಮಾನಿಕದೇವರು ನಿನಗೆ ಮಾತ್ರ ಈ ಅವಸ್ಥೆ ಬರುವುದಲ್ಲ. ಎಲ್ಲರಿಗೂ ಬರುತ್ತದೆ.

    ಆವನುಮೀ ಸಂಸಾರದೊಳ್ ಬೇಯದೊಳನೆ ಶರಣ್ಧರ‍್ಮದಿಂದೊಂದುಮುಂಟೇ (ಆದಿಪು.೩.೬) ಜಿನಚೈತ್ಯವ್ರಾತಮಂಬಂದಿಸು ಜಿನಪದಪದ್ಮಂಗಳಂ ದಿವ್ಯಮಪ್ಪರ್ಚನೆಯಿಂದಂ ಭಕ್ತಿಯಿಂದರ್ಚಿಸು (ಆದಿಪು.೩.೭) ಎಂಬ ಮಾತಿನಂತೆ ಲಲಿತಾಂಗ ಜಿನನನ್ನು ಅರ್ಚಿಸಿದನು. ಈ ಸಂದರ್ಭದಲ್ಲಿ ಜಿನನಿಗಲ್ಲದೆ ಉಳಿದವರಿಗೆ ಮೃತ್ಯುರಾಜನನ್ನು ಗೆಲ್ಲಲು ಸಾಧ್ಯವೇ (ಆದಿಪು.೩.೮) ಎಂಬ ಕವಿಯ ಮಾತು ಮೃತ್ಯುವನ್ನು ದಾಟುವ ದಾರಿಯನ್ನು ಖಚಿತಪಡಿಸುತ್ತದೆ. ಪತಿಯನ್ನು ಕಳೆದುಕೊಂಡು ಬದುಕಿನಿಂದ ನಿರಾಶಳಾದ ಸ್ವಯಂಪ್ರಭೆಯ ಚಿತ್ರ - ಅಲಕಂ ಮಂದಾರ ಶೂನ್ಯಂ ಕದಪು ಮಕರಿಕಾ ಪತ್ರ ಶೂನ್ಯಂ ಎಂಬ ಈ ಪದ್ಯವು- ಲೌಕಿಕದ ಬದುಕಿನಲ್ಲಿ ಗಂಡನನ್ನು ಕಳೆದುಕೊಂದ ಹೆಣ್ಣಿನ ಚಿತ್ರವನ್ನು ಮನೋಜ್ಞವಾಗಿ ನೀಡುತ್ತದೆ. (ಆದಿಪು.೩.೧೩) ಇಂತಹ ಸಂದರ್ಭದಲ್ಲಿ ಸ್ವಯಂಪ್ರಭೆಯ ಬಳಿಗೆ ಮಹತ್ತರ ದೇವಿಯರು ಬಂದು ಜಿನಪತಿಯಂ ಪೂಜಿಸು ಪಡೆವೆಯಿನಿಯನಂ ಮರುಭವದೊಳ್ (ಆದಿಪು.೩.೧೬) ಎಂದು ಉಪದೇಶ ಮಾಡುವರು. ಆಕೆ ಗುರುಪಂಚಕವನ್ನು ನೆನೆಯುತ್ತ ಶರೀರವನ್ನು ತೊರೆಯುವಳು. ಹೀಗಾಗಿ ಭೋಗದ ಬದುಕಿನಲ್ಲಿ ಮುಳುಗಿದ ವ್ಯಕ್ತಿಗೆ ದಾರಿಯನ್ನು ತೋರಿಸುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ತನ್ನ ಕಾಲದ ಬದುಕಿನ ಸನ್ನಿವೇಶದಲ್ಲಿ ಪಂಪನಿಗೆ ಇದು ಅನಿವಾರ್ಯವಾಗಿತ್ತೆಂದು ತೋರುತ್ತದೆ.

    ತನ್ನ ಮುಂದಿನ ಜನ್ಮದಲ್ಲಿ ಅಖಿಲ ಭೋಗಗಳನ್ನು ಭೋಗಿಸಿದ ವಜ್ರಜಂಘನಿಗೆ ಬಂದ ಸಾವು ಭೋಗಜೀವನದಲ್ಲಿ ಮುಳುಗಿದವರ ಕಣ್ಣು ತೆರೆಸುವಂತಿದೆ. ವಜ್ರಜಂಘ ಮತ್ತು ಶ್ರೀಮತಿಯರ ಸಾವಿಗೆ ಕಾಲಾಗರು ಧೂಪದ ಹೊಗೆ ಒಂದು ನೆಪಮಾತ್ರ. ಅವರ ಸಾವಿಗೆ ಅತಿಯಾದ ಭೋಗವೇ ಕಾರಣವಾಗಿ ಬಿಡುತ್ತದೆ. ’ಓಪರೋಪರೊಳೊಡಸಾಯಲ್ಪಡೆದರಿನ್ನವೇಂ ಸೈಪೊಳವೇ’ ಎಂದು ಅವರ ಸಾವಿನ ಅತಿಶಯತೆಯನ್ನು ಗುರುತಿಸುವಾಗಲೇ ಅದರ ಕ್ಷಣಿಕತೆಯನ್ನು ಸೂಚಿಸುವ ಮಾತುಗಳು ತೇಲಿಬರುತ್ತವೆ. ಸಂಸೃತಿ ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್ (ಆದಿಪು. ೫.೨೫) ಜಡರೇನೆಂದು ನಂಬುವರ್ ಸಂಸೃತಿಯಂ (ಆದಿಪು.೫.೨೬)ಎಂಬ ಮಾತುಗಳು ಭೋಗದಲ್ಲಿ ಮುಳುಗಿದವರನ್ನು ಎಚ್ಚರಿಸುತ್ತದೆ. ಪಂಪನ ಈ ಮಾತುಗಳು ಕೇವಲ ಧಾರ್ಮಿಕ ಉಪದೇಶಗಳಾಗದೆ ನಮ್ಮೆದುರೇ ನಡೆದ ಘಟನೆಯಾಗಿ ತಲ್ಲಣಗೊಳಿಸುತ್ತದೆ.

    ಹಳೆಗನ್ನಡದ ಬಹುತೇಕ ಧಾಮಿಕ ಕೃತಿಗಳು ನಿರ್ದಿಷ್ಟ ತತ್ವ, ನೀತಿ, ಲೋಕಧರ್ಮವನ್ನು ರೂಪಿಸಿ ಸ್ಥಾಪಿಸಲು ಪೂರಕವಾಗಿ ಬಂದಿವೆ. ಇಲ್ಲಿ ಬರುವ ಪಾತ್ರಗಳೆಲ್ಲವೂ ಧರ್ಮದ ತಳಹದಿಯನ್ನು ಭದ್ರಪಡಿಸಲೆಂದು ಬಂದಿವೆ. ಹೀಗಾಗಿ ಈ ಬಗೆಯ ಕೃತಿಗಳು ಬದುಕಿನ ಆದರ್ಶಗಳನ್ನು ಮರುನಿರೂಪಿಸುತ್ತ ಪುರಾಣದ ಬಂಧವನ್ನು ಪಡೆದುಕೊಳ್ಳುತ್ತಿರುವಾಗಲೇ ವರ್ತಮಾನದ ಬದುಕಿನ ತುಡಿತಗಳನ್ನು ಅಂತರ್ಗತಗೊಳಿಸಿಕೊಂಡ ಕೃತಿಯೂ ಆಗುತ್ತದೆ. ಹೀಗಾಗಿ ನಾಯಕ ಪಾತ್ರವನ್ನು ವೈಭವೀಕರಿಸುವುದಕ್ಕೆ ಬದಲಾಗಿ ನಿರ್ದಿಷ್ಠ ಧಾರ್ಮಿಕ ನಿಲುವುಗಳನ್ನು ಸ್ಥಿರಗೊಳಿಸುವುದರ ಕಡೆಗೆ ಇಲ್ಲಿನ ತುಡಿತವಿದೆ.

    0 Responses to “ಆದಿಪುರಾಣ - 3”

    Subscribe