Monday, January 24, 2011

0

ಪಂಪನ ಆದಿಪುರಾಣ - 2

 • Monday, January 24, 2011
 • ಡಾ.ಶ್ರೀಧರ ಎಚ್.ಜಿ.
 • Share
 • ರಾಜಾ ಪ್ರತ್ಯಕ್ಷ ದೇವತಾ ಎಂಬುದು ಜನಪ್ರಿಯ ಮಾತು. ಆಳುವ ವರ್ಗದ ಬದುಕಿನ ಮಾದರಿಗಳು ಅನುಕರಣೀಯವಾಗಿರಬೇಕು ಎಂಬಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಹದಿನಾಲ್ಕು ಜನ ಮನುಗಳ ವ್ಯವಸ್ಥಿತ ಆಡಳಿತದ ಕಾರ್ಯವೈಖರಿಯನ್ನು ನೀಡುವಲ್ಲಿ ಕವಿ ಆದರ್ಶ ರಾಜನ ಮಾದರಿಯೊಂದನ್ನು ನೀಡಿರುವಂತಿದೆ. ಈ ಬಗೆಯ ವಿವರಣೆಯ ಮೂಲಕ ತನ್ನ ಕಾಲದ ರಾಜಪ್ರಭುತ್ವದ ಕರ್ತವ್ಯಗಳನ್ನು ಪಂಪ ಎಚ್ಚರಿಸುವಂತಿದೆ.
  ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಮುಂ ಎಂಬ ಘೋಷಿತ ನಿಲುವಿನಲ್ಲಿ, ಪಂಪನ ಕಾವ್ಯ ಪ್ರಜ್ಞೆ ದ್ವಿಮುಖವಾಗಿದೆ ಎಂದು ಹೊರನೋಟಕ್ಕೆ ಅನಿಸುವುದು ಸಹಜ. ಆದರೆ ಪಂಪನ ಕೃತಿಗಳನ್ನು ಇಡಿಯಾಗಿ ಗಮನಿಸಿದರೆ ಲೌಕಿಕ ಮತ್ತು ಜಿನಾಗಮ ಪರಸ್ಪರ ಪೂರಕವಾಗಿ ನಿಂತಂತೆ ಕಾಣುತ್ತದೆ. ಇಲ್ಲಿನ ಪಾತ್ರಗಳು ಸಂಸಾರದ ಸಾರಸರ್ವಸ್ವವನ್ನು ಅನುಭವಿಸಿದ ಅನಂತರವೇ ಜಿನಾಗಮದ ಕಡೆಗೆ ಚಲಿಸುವುದನ್ನು ನೋಡಬಹುದು. ಧರ್ಮ ಒಂದು ಸಾಮಾಜಿಕ ಜವಾಬ್ದಾರಿ ಎಂದು ಗ್ರಹಿಸಿದರೆ, ಆದಿಪುರಾಣದ ಪಾತ್ರಗಳು ಈ ನಿಲುವನ್ನು ಹೆಚ್ಚು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಲೌಕಿಕದ ಬದುಕಿನಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ ನಂತರವೇ ಮುಂದಿನ ಹಂತಕ್ಕೆ ಚಲಿಸುತ್ತವೆ. ಹೀಗಾಗಿ ಪಂಪ ಹೇಳುವ ಲೌಕಿಕ ಮತ್ತು ಜಿನಾಗಮ ಕ್ರಮವಾಗಿ ಧರ್ಮ ಮತ್ತು ಮೋಕ್ಷದ ಅರ್ಥವನ್ನು ಪಡೆಯುತ್ತವೆ. ಲೌಕಿಕದಲ್ಲಿ ಮುಳುಗಿದ ವ್ಯಕ್ತಿಗಳಿಗೆ ಇದು ಬಿಡುಗಡೆಯ ತಾಣವೂ ಆಗುತ್ತದೆ. ತನ್ನ ಕಾಲದ ಅರಸು ಮಕ್ಕಳ ಲೌಕಿಕದ ವೈಭವ, ಭೋಗಜೀವನವನ್ನು ಹತ್ತಿರದಿಂದ ನೋಡಿದ ಪಂಪನಿಗೆ ಲೌಕಿಕವೇ ಅಂತಿಮ ಸತ್ಯವಲ್ಲ, ಅದರಾಚೆಗೆ ಇನ್ನೊಂದು ಬದುಕಿದೆ ಎಂದು ಹೇಳುವ ತುಡಿತ ಇರುವಂತೆ ಕಾಣುತ್ತದೆ. ಹೀಗಾಗಿ ಈ ಎರಡು ಬದುಕನ್ನು ಬೆಳಗುವ ಪ್ರಕ್ರಿಯೆ ಇಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.

  ಯಾಜ್ಞವಲ್ಕ್ಯರು ಎಲ್ಲ ವರ್ಣದವರೂ ಅನುಸರಿಸಬೇಕಾದ ನಿಜವಾದ ಧರ್ಮವನ್ನು ಕುರಿತು ಹೀಗೆ ಹೇಳಿದ್ದಾರೆ :

  ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯ ನಿಗ್ರಹ:
  ದಾನಂ ದಮೋ ದಯಾ ಕ್ಷಾಂತಿ: ಸರ್ವೇಷಾಂ ಧರ್ಮ ಸಂಗ್ರಹ:
  ಅಹಿಂಸೆ, ಸತ್ಯ, ಅಸ್ತೇಯ(ಕದಿಯದಿರುವುದು) ಶುಚಿಜೀವನ, ಇಂದ್ರಿಯ ನಿಗ್ರಹ, ದಾನ, ದಮ(ಆಸೆಗಳ ಮೇಲೆ ಹತೋಟಿ) ದಯೆ, ಕ್ಷಾಂತಿ (ಕ್ಷಮೆ) ಇವುಗಳನ್ನು ಆಚರಿಸುವುದೇ ಧರ್ಮ. ಈ ಬಗೆಯ ಆಶಯಗಳ ಇನ್ನೊಂದು ರೂಪ ಪಂಪನಲ್ಲಿ ಕಾಣಿಸಿಕೊಳ್ಳುತ್ತದೆ. ಆತನೇ ಹೇಳುವಂತೆ ಧರ್ಮಮಂ ಘಳಿಯಿಸಿಕೊಳ್ವುದೊಂದೆ ಚದುರಿಂತುಟು ಸಂಸೃತಿ ಧರ್ಮಮೇಕೆ ಬಾಯಳಿವುದೇಕೆ (ಆದಿಪು ೩.೫೩) ಧರ್ಮವನ್ನು ಗಳಿಸಿಕೊಳ್ಳುವುದೇ ಜಾಣತನ. ಇದು ಸಂಸಾರ ಧರ್ಮದ ಸ್ವರೂಪ. ಇಂತಹ ಸಂಸಾರ ಸಮುದ್ರವನ್ನು ದಾಟಲು ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯಗಳೇ ದೋಣಿಗಳು. ಇವು ಮುಕ್ತಿಯನ್ನು ಬಯಸುವ ಜೀವಿಗಳಿಗೆ ಸೋಪಾನಗಳು. (ಆದಿಪು ೫.೬೦) ಆದ್ದರಿಂದ ಆ ಮುನೀಂದ್ರರ ಚರಣಗಳಿಗೆ ಶರಣಾಗಬೇಕು. (೫.೬೬) ಎಂಬಲ್ಲಿ ಲೌಕಿಕದಲ್ಲಿ ಮುಳುಗಿದ ವ್ಯಕ್ತಿ ಮಾಡಬೇಕಾದ ಕರ್ತವ್ಯದ ಸ್ಪಷ್ಟ ಚಿತ್ರಣವಿದೆ.
  ಪುಸಿಯದುದು ಪರಾಂಗನೆಗಾ
  ಟಿಸದುದು ಕೊಲ್ಲದುದು ಮೋಹಮಿಲ್ಲದುದರಿವಂ
  ಪೊಸಯಿಸುವುದು ವೈರಾಗ್ಯದ
  ದೆಸೆಗೆಸಪುದು ಧರ್ಮಮದರ ತಡೆವುದಧರ್ಮಂ (ಆದಿಪು ೫.೭೯)

  ಸುಳ್ಳು ಹೇಳದಿರುವುದು, ಪರಸ್ತ್ರೀಯನ್ನು ಬಯಸದಿರುವುದು, ಕೊಲ್ಲದಿರುವುದು, ಮೋಹವಿಲ್ಲದಿರುವುದು, ಜ್ಞಾನವನ್ನು ವಿಶಾಲವಾಗಿಸುವುದು, ವೈರಾಗ್ಯದ ಕಡೆಗೆ ಮನವನ್ನೊಯ್ಯುವುದು ಧರ್ಮ. ಅದನ್ನು ತಡೆಯುವುದು ಅಧರ್ಮ ಎಂಬ ಪಂಪನ ಮಾತು ಎಲ್ಲ ಕಾಲಕ್ಕೂ ಎಲ್ಲ ಧರ್ಮಕ್ಕೂ ಅನ್ವಯವಾಗಬಲ್ಲದು. ಸರ್ವಧರ್ಮ ತತ್ವವಿದು. ಮಹಾಬಲನ ಮಂತ್ರಿ ಸ್ವಯಂಬುದ್ಧ ಹೇಳುವ ದಯೆ ದಮಂ ದಾನಂ ತಪಂ ಶೀಲಮೆಂಬಿವೆ ಮೆಯ್ಯಾಗಿರೆ ಸಂದ ಧರ್ಮಮೆ ವಲಂ ಪೊತ್ತೆತ್ತುಗುಂ ಮುಕ್ತಿಪರ್ಯವಸಾನಂಬರಂ (ಆದಿಪು. ೨.೭) ಎಂಬ ಮಾತಿನಲ್ಲಿ ಧರ್ಮವನ್ನು ಅನುಸರಿಸಿದರೆ ಸಿಗುವ ಫಲಸ್ವರೂಪದ ಚಿತ್ರವಿದೆ. ಆತ ಇದನ್ನು ಜೈನಧರ್ಮದ ತತ್ವ ಎಂದು ಹೇಳಿಲ್ಲದಿರುವುದು ಗಮನಾರ್ಹ. ಈ ಅಂಶವು ಜಿನಸೇನರಲ್ಲಿ ವಿದ್ಯೆ ನಿಪುಣತೆ ಪರಾಕ್ರಮ ದಾನ ಬುದ್ಧಿ, ಕ್ಷಮೆ, ದಯೆ ಧೈರ್ಯ ಸತ್ಯ ಲೋಭವಿಲ್ಲದಿರುವಿಕೆ ಇವು ಮೊದಲಾದವು ಆ ಮಹಾಬಲನ ಸ್ವಾಭಾವಿಕವಾದ ಗುಣಗಳಾಗಿದ್ದವು(ಪೂರ್ವಪು.೪.೧೩೪) ಎಂದಿದೆ. ವ್ಯಕ್ತಿಗತ ನೆಲೆಯ ಗುಣಗಳು ಪಂಪನಲ್ಲಿ ಲೋಕಸಾಧಾರಣಗೊಳ್ಳುವುದು ಗುರುತಿಸಬೇಕಾದ ಆಂಶ. ತನ್ಮೂಲಕ ಭಾರತೀಯ ಸಂಸ್ಕೃತಿಯ ಜೀವನ ಮೌಲ್ಯಗಳನ್ನು ಆದಿಪುರಾಣ ಎತ್ತಿಹಿಡಿಯುತ್ತದೆ. ಹೀಗಾಗಿ ಪಂಪನ ಆದಿಪುರಾಣ, ಕೇವಲ ಜೈನಕಾವ್ಯ ಎಂಬ ಸೀಮಿತ ಚೌಕಟ್ಟುಗಳನ್ನು ಮೀರಿ ನಿಲ್ಲುತ್ತದೆ. ಉದಾರ ಮಾನವತಾ ವಾದದ ಕಡೆಗೆ ಅದರ ದೃಷ್ಟಿಯಿದೆ.

  ಜಿನಸೇನರಿಗಿಂತ ಮೊದಲು ಜೈನಪುರಾಣಗಳು ಇದ್ದಿರಬಹುದು. ಈ ಬಗೆಗೆ ಜಿನಸೇನರಲ್ಲಿಯೇ ಸೂಚನೆಗಳು ದೊರೆಯುತ್ತವೆ. ಆದರೆ ಮಹಾಪುರಾಣ ಉಪಲಬ್ದ ಜೈನಪುರಾಣಗಳಲ್ಲಿ ಮೊದಲಿನದು. ಕನ್ನಡದ ನೆಲದಲ್ಲಿ ಅರಳಿದ ಈ ಕೃತಿ ಆದಿಪುರಾಣಕ್ಕೆ ಭಿತ್ತಿಯನ್ನು ಒದಗಿಸಿದೆ. ಭಾರತದಲ್ಲಿ ಎಲ್ಲ ಮತ, ಧರ್ಮದವರೂ ತಮ್ಮದೇ ಆದ ಪುರಾಣ ಪ್ರಪಂಚವನ್ನು ಸೃಷ್ಟಿಸುತ್ತಿದ್ದ ಕಾಲದಲ್ಲಿ ಜಿನಸೇನರು ಮತ್ತು ಗುಣಭದ್ರಾಚಾರ್ಯರು ಜೈನರಿಗೆ ಪುರಾಣ ಲೋಕವೊಂದನ್ನು ಮಹಾಪುರಾಣದ ಮೂಲಕ ತೆರೆದರು. ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಗುರುಗಳಾದ ವೀರಸೇನ ಆಚಾರ್ಯರ ಶಿಷ್ಯರಾದ ಜಿನಸೇನಾಚಾರ್ಯರು ಮಹಾಪುರಾಣದ ಮೊದಲ ನಲವತ್ತೆರಡು ಸರ್ಗಗಳನ್ನು ರಚಿಸಿದರು. ಈ ಭಾಗವನ್ನು ಪೂರ್ವಪುರಾಣವೆಂದು ಗುರುತಿಸುವರು. ಅಪೂರ್ಣವಾಗಿದ್ದ ಈ ಕೃತಿಯನ್ನು ಪೂರ್ಣಗೊಳಿಸಿದ ಯಶಸ್ಸು ಗುಣಭದ್ರಾಚಾರ್ಯರಿಗೆ ಸಲ್ಲುತ್ತದೆ. ಆದಿನಾಥನ ಕಥೆಯ ಕೊನೆಯ ಐದು ಸರ್ಗ ಹಾಗೂ ಉಳಿದ ತೀರ್ಥಂಕರರ ಚರಿತ್ರೆಗಳನ್ನು ಅವರು ಬರೆದರು. ಈ ಭಾಗವನ್ನು ಉತ್ತರ ಪುರಾಣವೆಂದು ಕರೆಯುವುದು ಪದ್ದತಿ. ಈ ಎರಡೂ ಭಾಗಗಳನ್ನು ಒಟ್ಟು ಸೇರಿಸಿ ಮಹಾಪುರಾಣವೆಂದು ಹೇಳಿದೆ.

  ಜಿನಸೇನರ ಕೃತಿ ರಚನೆಯಾದ ಒಂದು ಶತಮಾನದೊಳಗೆ ಪಂಪ ಪೂರ್ವಪುರಾಣದ ಭಾಗವನ್ನು ಆಧರಿಸಿ ಅದನ್ನು ಕನ್ನಡದಲ್ಲಿ ಮರುಸೃಷ್ಠಿಸಿದ್ದು ಗಮನಾರ್ಹ ಅಂಶ. ಕವಿಯೇ ಹೇಳುವಂತೆ ನೆಗಳ್ದಾದಿ ಪುರಾಣದೊಳರಿವುದು ಕಾವ್ಯಧರ್ಮಮುಂ ಧರ್ಮಮುಮಂ (ಆದಿಪು ೧.೩೮) ಅಂದರೆ ಸಂಸ್ಕೃತದಲ್ಲಿ ಧರ್ಮಾನುಬಂಧಿನಿಯಾದ ಜಿನಸೇನರ ಕಥೆ ಕಾವ್ಯಧರ್ಮದಲ್ಲಿ ರಸಪಾಕಗೊಂಡು ಮರುಹುಟ್ಟು ಪಡೆಯುವ ಪ್ರಕ್ರಿಯೆ ಇಲ್ಲಿ ನಡೆದಿದೆ. ವ್ಯಕ್ತಿಯ ಬದುಕಿನ ಮೇಲೆ ಧರ್ಮ ತನ್ನ ಪಾರಮ್ಯವನ್ನು ಸ್ಥಾಪಿಸಿದ್ದ ಕಾಲವದು. ಹೀಗಾಗಿ ಆದಿಪುರಾಣದಂತಹ ಧಾರ್ಮಿಕ ಕೃತಿಗೆ ಬದುಕು ಮತ್ತು ಸಾಹಿತ್ಯ ಸಮನ್ವಯದ ನೆಲೆಯನ್ನು ಒದಗಿಸಿದೆ.
  ಮೃದುಪದಗತಿಯಿಂ ರಸಭಾ
  ವದ ಪೆರ್ಚಿಂ ಪುಣ್ಯವನಿತೆವೋಲ್ (ಆದಿಪು. ೧.೧೭)
  ಕಿವಿಯಿಂ ಬಗೆವುಗುವೊಡೆ ಕೊಂ
  ಕುವೆತ್ತ ಪೊಸನುಡಿಯೆ ಪುಗುಗುಂ (ಆದಿಪು. ೧.೧೮)
  ಮೃದು ಮಧುರ ವಚನ ರಚನೆ (ಆದಿಪು. ೧-೧೯)
  ಇದು ನಿಚ್ಚಂ ಪೊಸತರ್ಣವಂಬೊಲತಿ ಗಂಭೀರಂ (ಆದಿಪು ೧.೨೭)

  ಎಂಬ ಮಾತುಗಳಲ್ಲಿ ಜಿನಸೇನರ ಪ್ರಭಾವಲಯದಿಂದ ಬಿಡುಗಡೆ ಪಡೆಯುವ ಪ್ರಯತ್ನವಿದೆ. ಹೀಗಾಗಿ ಪಂಪನ ಆದಿಪುರಾಣ ಜಿನಸೇನರ ನೆರಳಲ್ಲ; ಮರುಸೃಷ್ಠಿ; ಮರು ನಿರೂಪಣೆ. ಸಂಸ್ಕೃತ ಭಾಷೆ, ಶೈಲಿ, ವಸ್ತು, ನಿರೂಪಣೆ, ಸಂಸ್ಕೃತಿಯೊಂದಿಗೆ ಕನ್ನಡದ ಮನಸ್ಸು ನಡೆಸಿದ ಸೃಜನ ಶೀಲತೆಯ ಸಂಘರ್ಷ ಕವಿ ನಡೆಸುವ ಸಾಂಸ್ಕೃತಿಕ ಮುಖಾಮುಖಿ ಇಲ್ಲಿದೆ. ’ಬಗೆ ಪೊಸತಪ್ಪುದು’, ’ಇದು ನಿಚ್ಚಂ ಪೊಸತು’, ’ಕೊಂಕುವೆತ್ತ ಪೊಸನುಡಿ’ ಎಂಬಲ್ಲಿ ತನ್ನ ಕೃತಿ ಹೊಸದಾಗಬೇಕು ಎಂಬ ಪೂರ್ವನಿರ್ಧಾರಿತ ಕಲ್ಪನೆಯಿದೆ. ಆದ್ದರಿಂದ ’ಇದು ಕನ್ನಡದ ಆದಿಪುರಾಣ’. ಕನ್ನಡದ ದೇಸಿಯಲ್ಲಿ ರೂಪುಗೊಂಡ ಅಪೂರ್ವ ಪುರಾಣ.
  ಗುರುದೇವೇಂದ್ರ ಮುನೀಂದ್ರನಿಂದ್ರನಮಿತಂ ದೇವಂ ಕಥಾನಾಯಕಂ
  ಪುರುದೇವಂ ಕಥೆಯುಂ ತದಾದಿಪುರುಷಪ್ರಸ್ತುತ್ಯ ಜನ್ಮಾಳಿ ಬಂ
  ಧುರಮೆಂದಂದೆ ಮದೀಯವಾಗ್ವಿಭವ ವಿನ್ಯಾಸಂ ಬಲಂಬೆತ್ತುದು (ಆದಿಪು. ೧.೨೫)

  ಎಂದು ತನ್ನ ಕೃತಿಯ ಬಗೆಗೆ ಹೇಳಿದ್ದಾನೆ. ಅವನ ಪ್ರಕಾರ ಆದಿನಾಥನ ಚರಿತ್ರೆಯೇ ಆದಿಪುರಾಣದ ಕಥಾವಸ್ತು. ವೃಷಭನಾಥ, ಆದಿದೇವ, ಆದಿನಾಥ, ಆದಿಬ್ರಹ್ಮ, ಪುರುದೇವ ಇತ್ಯದಿ ಹೆಸರುಗಳು ಆದಿನಾಥನಿಗಿದೆ. ಇದರಲ್ಲಿ ವೃಷಭನಾಥನಲ್ಲದೆ, ಭರತ, ಭಾಹುಬಲಿ, ಶ್ರೇಯಾಂಸ ಮುಂತಾದವರ ಪೂರ್ವ ಹಾಗೂ ವರ್ತಮಾನ ಜನ್ಮದ ಕಥೆಗಳು ಚಿತ್ರಣಗೊಂಡಿವೆ. ಪಂಪನು ಜಿನಸೇನರ ಪೂರ್ವ ಪುರಾಣ ಅಥವಾ ಪುರುದೇವ ಮತ್ತು ಆತನ ಮಕ್ಕಳ ಕಥೆಯ ಭಾಗವನ್ನು ಮಾತ್ರ ತನ್ನ ಕೃತಿಗೆ ವಸ್ತುವಾಗಿ ಆರಿಸಿಕೊಂಡು ಎಲ್ಲಿಯೂ ಮೂಲಕಥೆಯ ಮೆಯ್ಗೆಡದಂತೆ ಎಚ್ಚರ ವಹಿಸಿದ್ದಾನೆ.

  ಸಂಸ್ಕೃತ ಭಾಷೆಯಲ್ಲಿ ಬಂದ ಕ್ರಿ.ಪೂ.ದ ಕಾಲಘಟ್ಟದ ಆದಿತೀರ್ಥಂಕರನ ಕಥೆಯನ್ನು ಕನ್ನಡದಲ್ಲಿ ಹೇಳಹೊರಟಿರುವುದೇ ಪಂಪನ ದೇಸಿಯ ಬಗೆಗಿನ ಪ್ರೀತಿಯನ್ನು ಸೂಚಿಸುತ್ತದೆ. (ದೇಸಿಯೊಳ್ ಪುಗುವುದು) ಪಂಪ ತಾನು ರಚಿಸಿದ ಎರಡೂ ಕೃತಿಗಳನ್ನು ಅವುಗಳ ಮೂಲ ಹೆಸರಿನಿಂದ ಕರೆದಿಲ್ಲದಿರುವುದು ಗಮನಾರ್ಹ. ಪೂರ್ವ ಪುರಾಣದ ಕಥೆಯನ್ನು ತನ್ನ ಕಾವ್ಯದ ಚೌಕಟ್ಟಿಗೆ ಅಳವಡಿಸುವಾಗ ಆದಿಪುರಾಣ, ಪುರುದೇವ ಚರಿತ ಎಂದರೆ ಮಹಾಭಾರತವನ್ನು ವಿಕ್ರಮಾರ್ಜುನ ವಿಜಯಂ ಎಂದು ಕರೆದಿರುವನೇ ಹೊರತು ಅವುಗಳ ಮೂಲ ಹೆಸರಿನಿಂದ ಕರೆಯಲಿಲ್ಲ. ಎರಡೂ ಕೃತಿಗಳನ್ನು ಆತ ಪೂರ್ಣವಾಗಿ ಕನ್ನಡಕ್ಕೆ ತಂದಿಲ್ಲವೆನ್ನುವುದೂ ಕುತೂಹಲದ ಸಂಗತಿ. ಜಿನಸೇನರ ಕೃತಿಯನ್ನು ಕನ್ನಡದ ಚೌಕಟ್ಟಿಗೆ ಮರುಹೊಂದಿಸುವಲ್ಲಿ ಪಂಪ ತೋರುವ ಸ್ವೋಪಜ್ಞತೆಯ ಕಾರಣದಿಂದ ಆದಿಪುರಾಣಕ್ಕೆ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಲಭ್ಯವಾಗಿದೆ. ಅದರ ಧಾರ್ಮಿಕ ಮೌಲ್ಯ ಇಂದಿಗೂ ಪ್ರಸ್ತುತವಾಗಿದೆ.
  ಕೃತಿಯ ಆರಂಭದಲ್ಲಿ ಬರುವ ಮಹಾಬಲನ ಒಡ್ಡೋಲಗದಲ್ಲಿ ನಡೆಯುವ ಧಾರ್ಮಿಕ ವಾಗ್ವಾದ ನಿರ್ದಿಷ್ಟ ಉದ್ದೇಶದಿಂದಲೇ ನಡೆಯುತ್ತದೆ. ಜಿನಧರ್ಮದ ಮಹತ್ವವನ್ನು ಹೇಳಲು ಕವಿ ಪೂರ್ವಪಕ್ಷವಾಗಿ ಈ ಧಾರ್ಮಿಕ ಜಿಜ್ಞಾಸೆಯನ್ನು ತರುವನು.
  ಮಹಾಬಲನಿಗೆ ಮಹಾಮತಿ, ಸಂಭಿನ್ನಮತಿ, ಶತಮತಿ, ಸ್ವಯಂಬುದ್ಧ ಈ ನಾಲ್ಕು ಜನ ಮಂತ್ರಿಗಳು ರಾಜ್ಯಕ್ಕೆ ಮೂಲಸ್ತಂಭಗಳಂತೆ ದೃಢವಾಗಿದ್ದರು.(ಪೂರ್ವಪು. ೪.೧೯೧) ಇವರಲ್ಲಿ ಸ್ವಯಂಬುದ್ಧನು ಸಮ್ಯಗ್ದರ್ಶನದಿಂದ ಶುದ್ಧವಾದ ಬುದ್ಧಿಯುಳ್ಳವನು. ಉಳಿದ ಮೂವರು ಮಿಥ್ಯಾದೃಷ್ಟಿಯವರಾಗಿದ್ದರು. ಮಹಾಬಲನ ಜನ್ಮದಿವಸದ ಉತ್ಸವ ಸಂದರ್ಭದಲ್ಲಿ ಸ್ವಯಂಬುದ್ಧನು. ’ದಯಾಮೂಲೋ ಭವೇದ್ಧರ್ಮೋ’ (ಪೂರ್ವಪು.೫.೨೧) ದಯಾಮೂಲವಾದುದು ಧರ್ಮ, ಹಿಂಸೆ ಮತ್ತು ಕಳ್ಳತನ ಮಾಡದಿರುವುದು, ಸತ್ಯವನ್ನು ನುಡಿಯುವುದು, ಸ್ತ್ರೀ ವಿಷಯಾಸಕ್ತಿಯನ್ನು ಬಿಡುವುದು, ಪರಿಗ್ರಹಗಳಿಲ್ಲದಿರುವುದು ಧರ್ಮ, ಈ ರಾಜ್ಯ ಮೊದಲಾದವು ಧರ್ಮದ ಫಲಗಳು ಎಂದು ಮುಂತಾಗಿ ಉಪದೇಶವನ್ನು ಮಾಡಿದನು. ಇದನ್ನು ಸಹಿಸದ ಮಹಾಮತಿಯು ಚಾರ್ವಾಕ ವಾದವನ್ನು, ಸಂಭಿನ್ನಮತಿಯು ವಿಜ್ಞಾನಾದ್ವೈತವಾದನ್ನು ಮತ್ತು ಶತಮತಿಯು ಶೂನ್ಯವಾದವನ್ನು ಕುರಿತು ಮಾತನಾಡಿದರು. ಜಿನಸೇನರ ಕೃತಿಯ ಐದನೆಯ ಅಧ್ಯಾಯದಲ್ಲಿ ಈ ಬಗ್ಗೆ ವಿವರಗಳಿವೆ. ಅಂತಿಮವಾಗಿ ಸ್ವಯಂಬುದ್ಧನು ಅನ್ಯ ವಾದಗಳನ್ನು ನಿರಾಕರಿಸಿ ಅರಸನಿಂದ ಜಯಪತ್ರವನ್ನು ಪಡೆದನು. ಈ ಸಂದರ್ಭದಲ್ಲಿ ಸ್ವಯಂಬುದ್ಧನು ಹೇಳುವ ಒಂದು ಮಾತು ಗಮನ ಸೆಳೆಯುತ್ತದೆ.:

  ಪುಸಿಯ ಪರಂಗನಾರತದ ಮದ್ಯದ ಮಾಂಸದ ಮೆಯ್ಗೊಱಲ್ದ ದು
  ರ್ವ್ಯಸನಿಯ ಮಾಡಿದೋದೆ ನಿಮಗಾಗಮಮಾಗಿರಸತ್ಯವಾದಮಂ
  ಪೊಸಯಿಸಿ ಜೀವನಿಲ್ಲ ಮೊಱೆಯಿಲ್ಲಱನಿಲ್ಲ ಪರತ್ರೆಯಿಲ್ಲೆನ
  ಲ್ಕಸಕಳಿಯಂತು ನಾಲಗೆ ಪೊರಳ್ವುದು ರಾಜಸಭಾಂತರಾಳದೊಳ್ (ಆದಿಪು. ೨.೧೧)

  ಸುಳ್ಳು, ಪರಾಂಗನಾರತ, ಮದ್ಯ, ಮಾಂಸ, ದುರ್ವ್ಯಸನಗಳನ್ನು ಕಲಿಸಿಕೊಡುವ ಓದೇ ನಿಮಗೆ ಆಗಮ. ಅಸತ್ಯವಾದವನ್ನು ಬಲಗೊಳಿಸಿ ಜೀವನಿಲ್ಲ, ಪ್ರಾರ್ಥನೆಯಿಲ್ಲ, ಧರ್ಮವಿಲ್ಲ, ಪರವಿಲ್ಲ ಎಂದು ಹೇಳಿದರೆ ಕಸಬರಿಗೆಯಂತೆ ರಾಜಸಭೆಯಲ್ಲಿ ನಾಲಗೆ ಹೊರಳುವುದು ಎಂಬ ಮಾತು ಇಂದಿಗೂ ಪ್ರಸ್ತುತ. ತನ್ನ ಕಾಲದ ರಾಜಸಭೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಚರ್ಚೆಯ ಮಾದರಿಯೊಂದನ್ನು ಪಂಪ ಇಲ್ಲಿ ನೀಡಿದಂತೆ ತೋರುತ್ತದೆ. ಅಂತಿಮವಾಗಿ ಜೈನ ತತ್ವದ ಹಿರಿಮೆಯನ್ನು ಸ್ವಯಂಬುದ್ಧ ಸ್ಥಾಪಿಸುವನು. ಇದು ಕೃತಿಯ ಆರಂಭದಲ್ಲಿಯೇ ಕವಿಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.

  0 Responses to “ಪಂಪನ ಆದಿಪುರಾಣ - 2”

  Subscribe