Sunday, January 16, 2011

0

ಪಂಪನ ಆದಿಪುರಾಣಂ - ಧಾರ್ಮಿಕ ಮೌಲ್ಯ

 • Sunday, January 16, 2011
 • ಡಾ.ಶ್ರೀಧರ ಎಚ್.ಜಿ.
 • Share

 • ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪಂಪನ ಎರಡೂ ಕೃತಿಗಳನ್ನು ಎಂ.ಎ. ತರಗತಿಯಲ್ಲಿ ಪಠ್ಯವಾಗಿ ಓದುವ ಕಾಲಕ್ಕೆ ಇಡಿಯಾಗಿ ಆದಿಪುರಾಣವನ್ನು ಅನಿವಾರ್ಯವಾಗಿ ಓದಿದ್ದೆ. ಅನಂತರ ಡಾಕ್ಟರೇಟ್ ಪದವಿಯ ಅಧ್ಯಯನದ ಸಂದರ್ಭದಲ್ಲಿ ಓದಿದ್ದೆ. ಈಗ ಮತ್ತೊಮ್ಮೆ ಓದಿದೆ. ಆದರೆ ಈ ಮೂರೂ ಓದುಗಳು ಬೇರೆಬೇರೆಯಾಗಿ ನಿಂತವು. ಮೊದಲ ಸಲ ಅದಾಗಲೇ ಬಂದಿದ್ದ ವಿಮರ್ಶೆಯ ಮಾರ್ಗದರ್ಶನದಲ್ಲಿ, ಎರಡನೆಯ ಸಲ ನಿರ್ದಿಷ್ಟ ಭಾಗಗಳನ್ನು ಕೇಂದ್ರೀಕರಿಸಿದ ಓದುಗಳಾಗಿದ್ದವು. ಮೂರನೆಯ ಸಲದ ಈ ಓದು ನನ್ನೊಳಗೆ ಸೃಷ್ಟಿಸಿದ ಆಲೋಚನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅಪೇಕ್ಷೆ ನನ್ನದು.

  ಅವೈದಿಕ ದರ್ಶನಗಳಲ್ಲಿ ಬರುವ ಜೈನಧರ್ಮ ಪಾಪ ಪುಣ್ಯ ಮೋಕ್ಷಗಳನ್ನು ನಿರಾಕರಿಸುವುದಿಲ್ಲ. ಹೀಗಾಗಿ ಇದು ವೈದಿಕ ಧರ್ಮಕ್ಕೆ ಹೆಚ್ಚು ಸಮೀಪವಾಗಿದೆ. ಎಲ್ಲ ಧರ್ಮಗಳಲ್ಲಿಯೂ ಇರುವ ಸತ್ಯಾಂಶಗಳನ್ನು ಗೌರವಿಸುವ ಜೈನಧರ್ಮ ಸಾಕಷ್ಟು ಪ್ರಾಚೀನ. ಯಜುರ್ವೇದದಲ್ಲಿ ವೃಷಭನಾಥ, ಅಜಿತನಾಥ ಮತ್ತು ಅರಿಷ್ಟನೇಮಿಯರ ಉಲ್ಲೇಖವಿದೆ.೧ ಇವರಲ್ಲಿ ವೃಷಭನಾಥ ಜೈನಧರ್ಮವನ್ನು ಪ್ರತಿಷ್ಠೆ ಮಾಡಿದ ವ್ಯಕ್ತಿ ಎಂದು ಗ್ರಹಿಸಲಾಗಿದೆ. ಈತನನ್ನು ಆದಿತೀರ್ಥಂಕರನೆಂದು ಜೈನಧರ್ಮ ಗುರುತಿಸಿದೆ. ಇಂತಹ ಆದಿತೀರ್ಥಂಕರನ ಬದುಕಿನ ಕಥೆಯನ್ನು ಆಧರಿಸಿ ಬಂದಿರುವ ಕೃತಿ ಪಂಪನ ಆದಿಪುರಾಣ.

  ಪ್ರಾಚೀನ ಕನ್ನಡ ಸಾಹಿತ್ಯವನ್ನು ಇಡಿಯಾಗಿ ನೋಡಿದರೆ ಅದರೊಳಗೆ ಧರ್ಮ, ಅಧರ್ಮದ ವಿವೇಚನೆ ಇದೆ. ಆತ್ಮದ ಉದ್ದಾರಕ್ಕೆ ಮನುಷ್ಯ ಸ್ವೀಕರಿಸಬೇಕಾದ ಜೀವನ ಮೌಲ್ಯಗಳ ಗುರುತುಗಳು ಹಲವು ಬಗೆಯಲ್ಲಿ ವ್ಯಕ್ತವಾಗಿವೆ. ಈ ಸಂಸೃತಿಯೊಳ್ ಧರ್ಮಾಧರ್ಮ ಸ್ಥಿತಿಯೆ ವಲಂ ಸ್ವರ್ಗನರಕ ಸುಖದು:ಖಕರಂ (ಆದಿಪು. ೫.೭೭) ಎಂಬ ಪಂಪನ ಮಾತಿನಲ್ಲಿ ಧರ್ಮ ಮತ್ತು ಅಧರ್ಮದ ಆಚರಣೆಯಿಂದ ಜೀವಿ ಪಡೆದುಕೊಳ್ಳುವ ಸ್ಥಿತಿಯ ಸೂಚನೆಯಿದೆ. ಈ ಗ್ರಂಥವು ಸತ್ಯಾರ್ಥವನ್ನು ಹೇಳುವುದರಿಂದ ಸೂಕ್ತವೆಂದೂ ಧರ್ಮವನ್ನು ಹೇಳುವುದರಿಂದ ಧರ್ಮಶಾಸ್ತ್ರವೆನಿಸಿದೆ (ಪೂರ್ವಪು. ೧.೨೪) ಎಂಬಲ್ಲಿ ಇದು ಧಾರ್ಮಿಕ ಕೃತಿ ಎಂಬ ನಿಲುವು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪಂಪ ತನ್ನ ಕೃತಿ ಆದಿಪುರಾಣವನ್ನು ’ಧಾರ್ಮಿಕ ಕಾವ್ಯ’ ಎಂದು ಕರೆದುಕೊಂಡಂತೆ ಕಾಣುತ್ತದೆ.

  ಸಾಮಾನ್ಯವಾಗಿ ಧರ್ಮ ಎಂದರೆ ಪರಂಪರಾಗತವಾಗಿ ಬಂದ ನಿಷ್ಠೆಯಿಂದ ಪಾಲಿಸಬೇಕಾದ ವಿಧಿ, ಸಂಪ್ರದಾಯ, ಆಚರಣೆ ಎಂದು ಗುರುತಿಸುತ್ತೇವೆ. ಧರ್ಮ: ಪುಣ್ಯಂ ವೃಷ: ಶ್ರೇಯ: ಸುಕೃತಂ - ಈ ೫ ಪುಣ್ಯದ ಪೆಸರ್ (ಹಲಾಯು. ೨೧.೧೨೫) ಎಂಬಲ್ಲಿ ಧರ್ಮವು ಪುಣ್ಯದ ಭಾಗವಾಗಿ ಬಂದಿದೆ. ಆದ್ದರಿಂದ ಸದ್ಗತಿಗೆ ಸಾಧನವಾದ ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮಕ್ಕೆ ಮೊದಲ ಸ್ಥಾನ. ಧರ್ಮವನು ಬಿಟ್ಟಿಹುದು ಬದುಕಲ್ಲ (ಕುವ್ಯಾಉ.೪.೫೯) ಎಂಬಲ್ಲಿಯೂ ಇದು ಬದುಕಿನ ಅನಿವಾರ್ಯ ಸ್ವಭಾವಗಳಲ್ಲಿ ಒಂದು ಎಂಬ ಅಂಶವೇ ಬಂದಿದೆ. ಧರ್ಮ: ಸ್ವಭಾವ: ಆತ್ಮಾ - ಈ ೩ ಸ್ವಭಾವಂ (ಹಲಾಯು ೧೨೯-೯೭) ಎಂಬ ಮಾತಿನಲ್ಲಿ ಮಾನವ ಸ್ವಭಾವದಲ್ಲಿ ಧರ್ಮವನ್ನು ಗುರುತಿಸಿದೆ. ಮಹಾಪುರಾಣದಲ್ಲಿ ಧರ್ಮದ ಮಹತ್ವವನ್ನು ಕೃತಿಯ ಆರಂಭದಲ್ಲಿಯೇ ಹೇಳಿದೆ. ಅರ್ಥಕಾಮಗಳು ಧರ್ಮದ ಫಲರೂಪವಾದ ಸ್ವರ್ಗಸುಖಕ್ಕೆ ಅಂಗರೂಪವಾಗಿರುವುದರಿಂದ ಆ ಅರ್ಥಕಾಮಗಳ ಕಥನವು ಧರ್ಮಕಥೆಯೆನಿಸುವುದು. (ಪೂರ್ವಪು. ೧.೧೧೯) ಯಾವುದರಿಂದ ಸ್ವರ್ಗ ಮೋಕ್ಷಸುಖ ಪ್ರಾಪ್ತಿಯು ನಿಶ್ಚಯವಾಗಿ ಆಗುವುದೋ ಅದು ಧರ್ಮವೆನಿಸುವುದು. ಅಂತಹ ಧರ್ಮ ಸಂಬಂಧವಾದ ಕಥೆಯು ಸದ್ದರ್ಮಕಥೆ ಎನಿಸುವುದು. (ಪೂರ್ವಪು.೧.೧೨೦) ಆದ್ದರಿಂದ ಮಹಾಪುರಾಣವನ್ನು ಆಧರಿಸಿ ರಚನೆಯಾದ ಆದಿಪುರಾಣಕ್ಕೆ ಪಂಪನ ದೃಷ್ಠಿಯಲ್ಲಿ ’ಸದ್ದರ್ಮಕಥೆ’ಯ ಸ್ಥಾನವಿದೆ.

  ಭಾರತೀಯವಾದ ವಿವಿಧ ಮತ, ದರ್ಶನ, ಸಿದ್ಧಾಂತಗಳೆಲ್ಲವೂ ಧರ್ಮದ ವಿಶಾಲ ಚೌಕಟ್ಟಿನಲ್ಲಿ ಅಡಕವಾಗಿಬಿಡುತ್ತವೆ. ಧರ್ಮದಿಂದ ಅರ್ಥವೂ ಕಾಮವೂ ಸ್ವರ್ಗವೂ ಉಂಟಾಗುತ್ತದೆ. ಅರ್ಥಕಾಮಗಳಿಗೆ ಆ ಧರ್ಮವೇ ಉತ್ಪತ್ತಿ ಸ್ಥಾನ. ಧರ್ಮವು ಇಚ್ಚಿಸಿದ್ದನ್ನು ಕೊಡುವ ಕಾಮಧೇನು. ಧರ್ಮವು ಮಹಾಚಿಂತಾಮಣಿ ರತ್ನ. ಧರ್ಮವು ಸ್ಥಿರವಾದ ಕಲ್ಪವೃಕ್ಷ. ಧರ್ಮವು ನಾಶವಾಗದಿರುವ ನಿಧಿಯಾಗಿದೆ. ಧರ್ಮವು ಅಪಾಯದಿಂದ ತಪ್ಪಿಸಿ ಮನುಷ್ಯನನ್ನು ಕಾಪಾಡುತ್ತದೆ. (ಪೂರ್ವಪು.೨-೩೨,೩೪,೩೫) ಈ ಕಾರಣಕ್ಕಾಗಿಯೇ ಪಂಪನು :

  ಪ್ರಾಣಿಹಿತಮಂ ವಿನೇಯ
  ಪ್ರೀಣನಕರಮಂ ಜಗತ್ತ್ರಯ ಪ್ರಕಟಿತಕ
  ಲ್ಯಾಣಮನೀನೆಗ ದಿಪು
  ರಾಣಮನಪರಿಮಿತ ಭಕ್ತಿಯಿಂ ವಿರಚಿಸುವೆಂ (ಆದಿಪು. ೧.೪೨)

  ಎಂದಿರಬೇಕು. ಇದು ಪ್ರಾಣಿಗಳಿಗೆ ಹಿತಕರವಾದುದು. ಶಿಷ್ಟಜನರಿಗೆ ಸಂತೋಷಪ್ರದವಾದುದು. ಇದು ಮೂರು ಲೋಕಗಳಿಗೂ ಕಲ್ಯಾಣವನ್ನೇ ಬಯಸುವುದು. ಆದ್ದರಿಂದ ನಾನು ಈ ಆದಿಪುರಾಣವನ್ನು ಅತಿಭಕ್ತಿಯಿಂದ ರಚಿಸುವೆನು ಎಂಬ ಪಂಪನ ಮಾತಿನಲ್ಲಿ ಆದಿಪುರಾಣವನ್ನು ರಚಿಸುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಹೀಗಾಗಿ ಧರ್ಮವೆಂದರೆ ನಿಸರ್ಗ - ಮನುಷ್ಯರ ಸಂಬಂಧ, ಮನುಷ್ಯ - ಸಮಾಜದ ಸಂಬಂಧ, ಮನುಷ್ಯ - ಮನುಷ್ಯರ ನಡುವಣ ಸಂಬಂಧವನ್ನು ಗುರುತಿಸುವುದು ಧರ್ಮದ ವ್ಯಾಖ್ಯಾನವೇ ಆಗುತ್ತದೆ. ಪಂಪನ ಆದಿಪುರಾಣದ ಆವರಣದಲ್ಲಿ ಈ ಬಗೆಯ ಮಾನವನ ವಿವಿಧ ಗುಣಸ್ವಭಾವಗಳ ಶೋಧನೆ ಇರುವುದನ್ನು ಗಮನಿಸಬಹುದು.

  ಪಂಪನ ಆದಿಪುರಾಣ, ಪುರಾಣವಾಗುವ ಬಗೆಯನ್ನು ಈ ಸಂದರ್ಭದಲ್ಲಿ ಗಮನಿಸುವುದು ಔಚಿತ್ಯಪೂರ್ಣ. ಪ್ರಾಚೀನ ಕಾಲಕ್ಕೆ ಸಂಬಂಧಿಸಿದ ನಡೆದುಹೋದ ಕಥೆಯನ್ನು ಹೇಳುವ ಕಾವ್ಯ ಪ್ರಕಾರಕ್ಕೆ ಪುರಾಣವೆಂದು ಹೆಸರು.

  ಪುರಾತನಂ ಪುರಾಣಂಸ್ಯಾತ್ ತನ್ಮಹನ್ಮಹದಾಶ್ರಯಾತ್
  ಮಹದ್ಬಿರುಪದಿಷ್ಟತ್ವಾನ್ಮಹಾಶ್ರೇಯೋನುಶಾಸನಾತ್ (ಪೂರ್ವಪು. ೧.೨೧)

  ಎಂದು ಪೂರ್ವಪುರಾಣದಲ್ಲಿದೆ. ಅಂದರೆ ಪುರಾತನವಾದುದು ಪುರಾಣವೆನಿಸುವುದು. ಆ ಪುರಾಣವು ತಿರ್ಥಂಕರರು ಮೊದಲಾದ ಮಹಾಪುರುಷರ ಸಂಬಂಧದಿಂದಲೂ ಮಹಾಪುರುಷರಿಂದ ಉಪದೇಶಿಸಲ್ಪಟ್ಟಿರುವುದರಿಂದ ಮಹಾಶ್ರೇಯಸ್ಸನ್ನು ಪ್ರತಿಪಾದಿಸುವುದರಿಂದ ಮಹಾಪುರಾಣವೆನಿಸುವುದು. ಪುರಾತನ ಕವಿಯನ್ನಾಶ್ರಯಿಸಿ ಉಂಟಾಗಿರುವುದರಿಂದ ಇದಕ್ಕೆ ಪುರಾಣತ್ವ ಉಂಟಾಗುವುದು. ಹಳೆಯದಕ್ಕೆ ಪುರಾಣ ಎಂದು ಹಲಾಯುಧ ಮತ್ತು ಮಂಗರಾಜರಲ್ಲಿ ಉಲ್ಲೇಖವಿದೆ. ಜೀರ್ಣಂ ಜರತ್ ಪುರಾಣಂ ಪ್ರತ, ಪ್ರತನಂ ಪುರಾತನಂ - ಈ ೬ ಪಳದು (ಹಲಾಯು ೧೧೯-೨೬) ಜೀರ್ಣಮಾ ಜರತ್ಪ್ರತನಮರ್ಣವಮನವ್ಯಂ ಪುರಾಣಂ ಪುರಾತನಮೆನಲು ಹಳಂತಿಗೆ ನಾಮಮಕ್ಕುಂ (ಮಂಗರಾ. ೧೨೯-೧೩) ಎಂಬಲ್ಲಿ ಈ ಅಂಶ ಸ್ಪಷ್ಟವಾಗಿದೆ.

  ಭಾರತೀಯ ಸಂಸ್ಕೃತಿಯಲ್ಲಿ ಪುರಾಣಗಳಿಗೆ ಸಾಕಷ್ಟು ದೀರ್ಘ ಇತಿಹಾಸವಿದೆ. ಕ್ರಿ. ಶ. ೩೦೦ರ ಹೊತ್ತಿಗೆ ಪುರಾಣದ ಯುಗ ಆರಂಭವಾಯಿತೆಂದು, ಇಲ್ಲಿಂದ ಮುಂದೆ ಕ್ರಿ.ಶ. ೧೦೦೦ದವರೆಗೂ ವೈವಿಧ್ಯಮಯ ಪುರಾಣಗಳು ರಚನೆಯಾಗಿವೆ ಎಂದು ಹೇಳಲಾಗಿದೆ. ಇವುಗಳಲ್ಲಿ ಸಾಮಾನ್ಯವಾಗಿ ದೇವಪುರುಷನ ಏಳುಬೀಳುಗಳ ಕಥನವಿದೆ. ಹಾಗೆಯೇ ರಾಜರು ಸ್ತ್ರೀಯರು, ಇತರ ಜಾತಿಗಳ ಜನರಿಗೆ ವಿಧಿನಿಷೇಧ, ಶಿಷ್ಟಾಚಾರ, ನಡವಳಿಕೆ, ಸಂಪ್ರದಾಯವನ್ನು ತಿಳಿಸಲಾಗಿದೆ.೨ ಇದರೊಂದಿಗೆ ಚತುರ್ವಿಧ ಪುರುಷಾರ್ಥದ ಪ್ರತಿಪಾದನೆ ಪುರಾಣದಲ್ಲಿದೆ. ಇವು ಧರ್ಮ ಮತ್ತು ಮೋಕ್ಷವೆಂಬ ಮೌಲ್ಯಗಳ ಸಮನ್ವಯವನ್ನು ಒಪ್ಪಿಕೊಳ್ಳುತ್ತವೆ. ಹಾಗೆಯೇ ಮೋಕ್ಷಕ್ಕಿಂತಲೂ ಮಾನವನಿಗೆ ಧರ್ಮಾಚರಣೆಯೇ ಮುಖ್ಯವೆಂಬುದನ್ನು ಒತ್ತಿ ಹೇಳುತ್ತವೆ. ಪುರಾಣದ ಅರ್ಥವು ಯಾವುದೋ ಅದೇ ಧರ್ಮ (ಪೂರ್ವಪು.೨.೩೮) ಎಂಬ ಮಾತು ಈ ಸಂದರ್ಭದಲ್ಲಿ ಗಮನಾರ್ಹ. ಧರ್ಮ - ಸಾಮಾಜಿಕ ಕರ್ತವ್ಯ, ಅರ್ಥ-ಲೌಕಿಕ ಸಾಧನೆ, ಕಾಮ-ಗಂಡು ಹೆಣ್ಣಿನ ಪ್ರಣಯ, ಮೋಕ್ಷ- ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆ ಇವು ಪುರಾಣಗಳು ಪ್ರತಿಪಾದಿಸುವ ಚತುರ್ವಿಧ ಪುರುಷಾರ್ಥಗಳು. ಆದಿಪುರಾಣ ಈ ದಿಸೆಯಲ್ಲಿ ಪುರಾಣದ ಅಂಶಗಳನ್ನು ನಿಚ್ಚಳವಾಗಿ ಅಂತರ್ಗತಮಾಡಿಕೊಂಡಿದೆ.

  ಅಮರಕೋಶದಲ್ಲಿ :
  ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿಚ
  ವಂಶಾನುಚರಿತಂ ಚಾಪಿ ಪುರಾಣಂ ಪಂಚಲಕ್ಷಣಂ

  ಎಂದು ಭಾರತೀಯ ಪುರಾಣದ ಲಕ್ಷಣವಿದೆ. ಸರ್ಗ, ಪ್ರತಿಸರ್ಗ, ವಂಶ, ಮನ್ವಂತರ, ವಂಶಾನುಚರಿತ ಎಂಬ ಐದು ಲಕ್ಷಣಗಳಿಂದ ಕೂಡಿದುದು ಪುರಾಣ ಎಂದು ಇದರ ಅರ್ಥ. ಇಲ್ಲಿ ಸರ್ಗ, ಪ್ರತಿಸರ್ಗವೆಂದರೆ ಪ್ರಥಮ ಸೃಷ್ಠಿ ಮತ್ತು ಪುನರ್ ಸೃಷ್ಠಿ ಅಥವಾ ವಿಶ್ವದ ವಿಕಾಸ; ವಂಶವೆಂದರೆ ರುಷಿಗಳ ಮತ್ತು ಅವರ ಪೂರ್ವಜರ ಚರಿತೆಗಳು; ಮನ್ವಂತರವೆಂದರೆ ವಿವಿಧ ಮನುಗಳ ಕಾಲಾವಧಿ; ವಂಶಾನುಚರಿತವೆಂದರೆ ರಾಜರುಗಳ ವಂಶಾವಳಿಯನ್ನು ನಿರೂಪಿಸುವುದು. ಪೂರ್ವಪುರಾಣದಲ್ಲಿಯೂ ಇದಕ್ಕೆ ಸಂವಾದಿಯಾದ ಮಾಹಿತಿಗಳಿವೆ. ಈ ಆದಿಪುರಾಣದಲ್ಲಿ ಕಾಲದ ವರ್ಣನೆ, ಮನುಗಳ ಉತ್ಪತ್ತಿ, ವಂಶಗಳ ಉತ್ಪತ್ತಿ, ವೃಷಭತೀರ್ಥಂಕರರ ರಾಜ್ಯಭಾರ, ಅವರ ಅರ್ಹಂತ್ಯಾವಸ್ಥೆ, ನಿರ್ವಾಣ, ಯುಗಗಳ ಪರಿವರ್ತನೆಯ ವಿವರಗಳಿವೆ. (ಪೂರ್ವಪೂ. ೨.೧೫೮) ಎರಡು ಮತ್ತು ಮೂರನೆಯ ಅಧ್ಯಾಯದಲ್ಲಿ ಲೋಕದ ಉತ್ಪತ್ತಿ ಕಥನ, ಹದಿನಾಲ್ಕು ಮನುಗಳ ವಿವರಗಳು ಸಾಕಷ್ಟು ದೀರ್ಘವಾಗಿ ಬಂದಿವೆ. ಪಂಪನ ಆದಿಪುರಾಣದಲ್ಲಿ ಈ ಅಂಶಗಳು ಅಡಕವಾಗಿ ಬಂದಿವೆ. ಆದರೆ ಪಂಪನಲ್ಲಿ ಹದಿನಾಲ್ಕು ಮನುಗಳ ವಿವರವು ಆರನೆಯ ಅಧ್ಯಾಯದಲ್ಲಿ ಬಂದಿದೆ.(ಆದಿಪು. ೬.೫೨ ರಿಂದ ೬.೭೯) ಇದರೊಂದಿಗೆ ತುಸು ಭಿನ್ನವಾಗಿರುವ ಜೈನಪುರಾಣದ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. ಪಂಪನೇ ಗುರುತಿಸುವಂತೆ
  ಆ ಪುರಾಣಕ್ಕಂ ಲೋಕಾಕಾರ ಕಥನಮುಂ ದೇಶನಿವೇಶೋಪದೇಶಮುಂ ನಗರ ಸಂಪತ್ಪರಿವರ್ಣನಮುಂ ರಾಜ್ಯರಮಣೀಯತಾಖ್ಯಾನಮುಂ ತೀರ್ಥಮಹಿಮ ಸಮರ್ಥನಮುಂ ಚತುರ್ಗತಿ ಸ್ವರೂಪ ನಿರೂಪಣಮುಂ ತಪೋದಾನ ವಿಧಾನ ವರ್ಣನಮುಂ ತತ್ಫಳ ಪ್ರಾಪ್ತಿ ಪ್ರಕಟನಮುಮೆಂದಿಂತವಯವಂಗಳೆಂಟಕ್ಕುಂ (ಆದಿಪು ೧.೪೨ವ), ಅಂದರೆ ಲೋಕಾಕಾರ ಕಥನ, ದೇಶ ನಿವೇಶ ವರ್ಣನ, ನಗರ ವರ್ಣನ, ರಾಜ್ಯವರ್ಣನ, ತೀರ್ಥಮಹಿಮೆ, ಚತುರ್ಗತಿ ಸ್ವರೂಪ ವಿವರಣೆ, ತಪೋದಾನ ವಿಧಾನ, ತಪ: ಫಲವರ್ಣನೆ ಇವು ಎಂಟು ಜೈನಪುರಾಣದ ನಿರ್ದಿಷ್ಟ ಲಕ್ಷಣಗಳು. ಈ ಎಲ್ಲಾ ಲಕ್ಷಣಗಳನ್ನು ಹೊಂದಿಯೂ ಆದಿಪುರಾಣ ಕಾವ್ಯವಾಗುವ ರೀತಿ ಬೆರಗು ಮೂಡಿಸುತ್ತದೆ. ಮಾತ್ರವಲ್ಲ, ಕಾವ್ಯ ಮತ್ತು ಪುರಾಣ ಒಂದರೊಡನೊಂದು ಬೆಸೆದುಕೊಳ್ಳುವ ಚಿತ್ರವನ್ನು ಆದಿಪುರಾಣ ಸಮರ್ಥಿಸುವಂತಿದೆ.

  ಪಂಪ ಜಿನಸೇನರ ಕೃತಿಯನ್ನು ಭಕ್ತಿಯಿಂದ ಅನುಸರಿಸುವನು. ಲೋಕಾಕಾರ ಕಥನದಿಂದ ತೊಡಗಿ ತನ್ನ ಕೃತಿಯ ಕೊನೆಯವರೆಗೂ ಕವಿ ಪುರಾಣದ ಎಲ್ಲೆಗಳನ್ನು ಮೀರಲು ಹೋಗುವುದಿಲ್ಲ. ನಿರೂಪಣೆಯ ಸಂದರ್ಭದಲ್ಲಿ ತುಸು ಹಿಂದುಮುಂದಾಗಬಹುದು. ಉದಾಹರಣೆಗೆ ಜೈನರಾಣದ ಆರಂಭದಲ್ಲಿ ಬರುವ ಲೋಕಾಕಾರ ಕಥನದ ಸಂದರ್ಭವನ್ನು ಇದಕ್ಕೆ ಗಮನಿಸಬಹುದು. ಜಿನಸೇನರಲ್ಲಿ ಅಧೋ ಮಧ್ಯ ಊರ್ಧ್ವ ಈ ಮೂರು ಭೇದಗಳಿಂದ ಕೂಡಿಕೊಂಡಿರುವ ಈ ಲೋಕವನ್ನು ಈಶ್ವರನು ಸೃಷ್ಟಿಸುವುದೂ ಇಲ್ಲ. ಸಂಹಾರ ಮಾಡುವುದೂ ಇಲ್ಲ. ಇದು ಸ್ವಭಾವದಿಂದಲೇ ನಿಶ್ಚಿತ ಸ್ಥಿತಿಯುಳ್ಳುದು. ಬೆತ್ತದ ಕುರ್ಚಿಯ ಕೆಳಭಾಗದಂತೆ ಅಧೋಲೋಕದ ಆಕಾರವೂ, ಚಕ್ರತಾಳದಂತೆ ವರ್ತುಲಾಕಾರವಾಗಿ ಮಧ್ಯಲೋಕದ ಆಕಾರವೂ, ಮದ್ದಳೆಯಂತೆ ಊರ್ಧ್ವಲೋಕದ ಆಕಾರವೂ ಇವೆ.

  ವೈಶಾಖಸ್ಥ: ಕಟಿನ್ಯಸ್ತಹಸ್ತ: ಸ್ಯಾದ್ಯಾದೃಶ: ಪುಮಾನ್
  ತಾದೃಶಂ ಲೋಕಸಂಸ್ಥಾನಮಾಮನಂತಿ ಮನೀಷಿಣ:

  ಕಾಲುಗಳನ್ನು ವಿಸ್ತರಿಸಿ ಕೈಗಳನ್ನು ಸೊಂಟದಲ್ಲಿರಿಸಿ ನಿಂತಿರುವ ಪುರುಷನ ಆಕಾರದಂತೆ ಈ ಲೋಕದ ಆಕಾರವಾಗಿದೆಯೆಂದು ಪ್ರಾಜ್ಞರು ಹೇಳುತ್ತಾರೆ ಎಂದಿದೆ. (ಪೂರ್ವಪು. ೪-೪೦,೪೧,೪೨) ಪಂಪನಲ್ಲಿ ಈ ಲೋಕವು ಅನಂತವೂ ವಿಭುವೂ ಆಗಿದ್ದು ಆಕಾಶ ಮಧ್ಯದಲ್ಲಿ ಬೆಳಗುತ್ತದೆ. ಇದು ಅನಾದಿ ಮತ್ತು ನಾಶವಿಲ್ಲದುದು, ಸ್ವತ: ಸಿದ್ಧವಾದುದು.

  ಸ್ಫುಟವೈಶಾಖಸ್ಥಾನಂ
  ಕಟಿತಟವಿನ್ಯಸ್ತಹಸ್ತಯುಗನಾಗಿ ಮಹಾ
  ಲಟಹಂಬೆರಸಿರ್ದೊಪ್ಪುವ
  ನಟನಾಕೃತಿ ತಾನೆ ಲೋಕದೊಂದಾಕಾರಂ(ಆದಿಪು. ೧.೪೫)

  ವೈಶಾಖ ಸ್ಥಾನದ ಹಾಗೆ ನಿಂತು ತನ್ನ ಎರಡೂ ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು ಎದ್ದು ನಿಂತಿರುವ ನಟನ ಆಕೃತಿಯಂತಿದೆ ಈ ಲೋಕದ ಆಕಾರ. ಅದು ಸೃಷ್ಟಿ, ಲಯಗಳ ಗೊಡವೆಯಿಂದ ದೂರವಾದುದು. ಸಹಜವೂ ನಿಯತವೂ ಆದ ಸ್ಥಿತಿಯುಳ್ಳದ್ದು, ನಾಡಾಡಿ ಜನರಿಂದ ತಿಳಿಯಲಾಗದ್ದು. ಅದು ಅಧೋಲೋಕ, ತಿರ್ಯಗ್ಲೋಕ ಮತ್ತು ಊರ್ಧ್ವಲೋಕಗಳಿಂದ ಯುಕ್ತವಾದುದು. ಜಿನೇಶ್ವರನಿಗೆ ಗೋಚರವಾಗುವ ಈ ಲೋಕತ್ರಯವು ವೇತ್ರಾಸನ, ಝಲ್ಲರೀ ಮತ್ತು ಮೃದಂಗಗಳಿಗೆ ಸಮಾನವಾಗಿದೆ ಎಂಬ ವಿವರಣೆಯಿದೆ. ಜಿನಸೇನರಲ್ಲಿ ’ಪುರುಷ’ ಎಂದಿರುವುದನ್ನು ಪಂಪ ’ನಟ’ನೆಂದು ಪರಿವರ್ತಿಸುವನು. ’ನಾಡಾಡಿಯ ನರರ್ಗದು ಬಗೆಯಲ್ ಕೂಡದು’ ಎಂಬ ಮಾತು ’ಪ್ರ್ರಾಜ್ಞರು’ ಎಂಬುದಕ್ಕೆ ಪರ್ಯಾಯವಾಗಿ ಬಂದಂತಿದೆ. ಉಳಿದ ವಿವರಣೆಗಳಲ್ಲಿ ಕವಿ ಬಹುತೇಕ ಮೂಲವನ್ನು ಅನುಸರಿಸುವನು.

  ಪೂರ್ವಪುರಾಣದಲ್ಲಿ ಹದಿನಾಲ್ಕು ಮನುಗಳ ವಿವರವು ಕೃತಿಯ ಮೂರನೆಯ ಅಧ್ಯಾಯದಲ್ಲಿ ಬಂದಿದ್ದರೆ ಪಂಪನಲ್ಲಿ ಇದು ಆರನೆಯ ಆಶ್ವಾಸದಲ್ಲಿ ಬಂದಿದೆ. (ಆದಿಪು. ೬.೫೨ರಿಂದ ೬.೭೯) ಹದಿನಾಲ್ಕನೆಯ ಮನುವಾದ ನಾಭಿರಾಜನು ಮನುವೂ ಹೌದು; ಚಕ್ರವರ್ತಿಯೂ ಹೌದು. ಈ ಮನುಗಳ ಅವಧಿಯಲ್ಲಿ ಮಾನವ ಜನಾಂಗದ ಬದುಕಿನ ವಿಕಾಸ ಪಥದ ದಾಖಲೆಯಿದೆ. ಇವರು ಜನರ ಜೀವನ ಕ್ರಮವನ್ನು ನಿಯತಗೊಳಿಸಿದ ಮಹಾಪುರುಷರು. ತಮ್ಮ ಕಾಲದ ಸಾಮಾಜಿಕ ಬದುಕಿಗೆ ಅಗತ್ಯವಿದ್ದ ವ್ಯವಸ್ಥೆಗಳನ್ನು ಮಾಡುವುದರ ಮೂಲಕ ಇವರು ಕುಲಧರರೆಂದು ಕರೆಸಿಕೊಂಡರು. ಹದಿನಾಲ್ಕನೆಯ ಮನುವಾದ ನಾಭಿರಾಜನು ಮಗು ಮತ್ತು ತಾಯಿಯ ಶಾರೀರಿಕ ಸಂಬಂಧವನ್ನು ಬೇರ್ಪಡಿಸಲು ಹೊಕ್ಕಳ ಬಳ್ಳಿಯನ್ನು ಕತ್ತರಿಸುವ ಬಗೆಯನ್ನು ಲೋಕಕ್ಕೆ ಹೇಳಿಕೊಟ್ಟನು. ನಿಸರ್ಗದಲ್ಲಿ ತಾವಾಗಿಯೇ ಬೆಳೆದು ನಿಂತಿದ್ದ ಬತ್ತ, ಗೋಧಿ, ನವಣೆ, ಎಳ್ಳು, ಜೀರಿಗೆ, ಕಡಲೆ, ಹುರುಳಿ ಮೊದಲಾದ ಕಾಳುಕಡ್ಡಿಯನ್ನು ಬಳಸುವ ವಿಧಾನವನ್ನು ಜನತೆಗೆ ತಿಳಿಸಿ ಜನತೆಯ ಹಾಹಾಕಾರವನ್ನು ಹೋಗಲಾಡಿಸಿದನು. ಹದಿನೈದನೆಯ ಮನುವಾದ ವೃಷಭದೇವನು ಪ್ರಥಮ ತೀರ್ಥಂಕರನೂ ಆಗಿದ್ದರಿಂದ ಐಹಿಕ ಮತ್ತು ಪಾರಮಾರ್ಥಿಕ ಬದುಕಿನ ಬಗೆಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ನಿಭಾಯಿಸುವನು. ವಿವಿಧ ಶಾಸ್ತ್ರ, ವಿದ್ಯೆಗಳನ್ನು ತನ್ನ ಮಕ್ಕಳಿಗೆ ತಿಳಿಸುವನು. ಮುಖ್ಯವಾಗಿ ತನ್ನ ಮಗಳಾದ ಬ್ರಾಹ್ಮಿಯನ್ನು ನೆಪಮಾಡಿಕೊಂಡು ಲಿಪಿಶಾಸ್ತ್ರವನ್ನು ಹಾಗೂ ಸುಂದರಿಯನ್ನು ಕುರಿತು ಗಣಿತಶಾಸ್ತ್ರವನ್ನು ಅನುಗ್ರಹಿಸಿರುವುದು ಗಮನಾರ್ಹ.

  0 Responses to “ಪಂಪನ ಆದಿಪುರಾಣಂ - ಧಾರ್ಮಿಕ ಮೌಲ್ಯ”

  Subscribe