Thursday, December 16, 2010

0

ನೆನಪಿನಂಗಳ ೪ - ಹಿರಿಯರ ಹೆಜ್ಜೆ ಗುರುತು

  • Thursday, December 16, 2010
  • ಡಾ.ಶ್ರೀಧರ ಎಚ್.ಜಿ.
  • Share

  • ಈಗ ಗೊತ್ತಿರುವ ಮಟ್ಟಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಹೆಗ್ಗಾರಳ್ಳಿ ನಮ್ಮ ಮೂಲ ಸ್ಥಳ. ಆ ಊರಿನಲ್ಲಿ ನಮ್ಮ ಬಂಧುಗಳು ಈಗ ಯಾರಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಕುಟುಂಬಕ್ಕೆ ಹೆಗ್ಗಾರಳ್ಳಿ ಮನೆತನ ಎಂಬ ಹೆಸರು ಮಾತ್ರ ಈಗಲೂ ಉಳಿದುಕೊಂಡು ಬಂದಿದೆ. ನಮ್ಮ ಹೆಸರಿನ ಮುಂದಿರುವ ಎಚ್. ಎಂದರೆ ಹೆಗ್ಗಾರಳ್ಳಿ ಎಂದರ್ಥ. ಆದರೆ ನಾನು ಮಾತ್ರ ಇದುವರೆಗೆ ಹೆಗ್ಗಾರಳ್ಳಿಯ ಮುಖ ನೋಡಿದವನಲ್ಲ.

    ನಮ್ಮ ಅಜ್ಜನ ತಂದೆಯ ಕಾಲಕ್ಕೆ ಸಾಗರ ತಾಲೂಕಿನ ಶಿರವಂತೆ ಸಮೀಪದ ಸಾಲೆಕೊಪ್ಪಕ್ಕೆ ವಲಸೆ ಬಂದರು. ಅಜ್ಜನ ತಂದೆಯ ಹೆಸರು ನಾರಾಯಣಪ್ಪ. ನನ್ನ ಅಜ್ಜನ ಹೆಸರು ರಾಮಕೃಷ್ಣಯ್ಯ. ಈ ಹೊತ್ತಿಗೆ ನಮ್ಮ ಅಜ್ಜನಿಗೆ ಅತ್ಯಂತ ಚಿಕ್ಕ ಪ್ರಾಯ. ಆಗ ಅವರಿಗೆ ೮-೧೦ ವರ್ಷ. ಇಲ್ಲಿಗೆ ವಲಸೆ ಬಂದ ಸ್ವಲ್ಪ್ಪ ಸಮಯದಲ್ಲಿಯೇ ನಮ್ಮ ಮುತ್ತಜ್ಜ (ನಾರಾಯಣಪ್ಪ ತೀರಿಕೊಂಡರು.) ಹೀಗಾಗಿ ತಂದೆಯ ಕಡೆಯ ಕೊಂಡಿಯೊಂದು ಸದ್ದಿಲ್ಲದೆ ಕಳಚಿಕೊಂಡಿತು. ಹೀಗಾಗಿ ನಮಗೆ ಅಜ್ಜನ ಕಡೆಯ ಬಂಧುಗಳ ಪರಿಚಯವಿಲ್ಲ.

    ನಮ್ಮ ಅಜ್ಜ ರಾಮಕೃಷ್ಣಯ್ಯ. ಮತ್ತು ಭಾಗೀರಥಿ ದಂಪತಿಗಳಿಗೆ ನಾರಾಯಣಪ್ಪ, ಗಣಪತಿ, ಶ್ರೀಪತಿ, ಗಂಗಾಧರ, ಭಾಸ್ಕರ, ತಿಮ್ಮಪ್ಪ, ಮಹಾಲಕ್ಷ್ಮಿ, ಅನ್ನಪೂರ್ಣ, ಗೌರಿ ಎಂದು ಒಂಬತ್ತು ಮಂದಿ ಮಕ್ಕಳು. ತುಂಬಿದ ಸಂಸಾರ. ಹೇಳಿಕೊಳ್ಳುವಂತಹ ಆಸ್ತಿಯೇನೂ ಇರಲಿಲ್ಲ. ಸುಮಾರು ಎರಡು ಎಕರೆ ಅಡಿಕೆ ತೋಟವಿತ್ತು. ಇದರಲ್ಲಿ ಸಂಸಾರವನ್ನು ತೂಗಿಸಬೇಕಾಗಿತ್ತು. ಅಡಿಕೆಗೆ ಅಂತಹ ಧಾರಣೆಯೂ ಇರಲಿಲ್ಲ. ಆದರೂ ಬದುಕಿನ ಬಂಡಿ ಸಾಗುತ್ತಿತ್ತು. ಈ ಹೊತ್ತಿಗೆ ನಮ್ಮ ಅಜ್ಜನಿಗೆ ಅದೇನು ಕಂಡಿತೋ ಗೊತ್ತಿಲ್ಲ. ಸಂಸಾರವನ್ನು ನಡೆಸುವ ಜವಾಬ್ದಾರಿಯನ್ನು ಹಿರಿಯ ಮಗ ನಾರಾಯಣಪ್ಪನಿಗೆ ವಹಿಸಿ ಶಿವಾ ರಾಮ ಎಂದು ಮನೆಯಲ್ಲಿ ಉಳಿದರು. ಅಜ್ಜನಿಗೆ ಈ ಕಾಲಕ್ಕೆ ಅಂತಹ ವಯಸ್ಸೇನೂ ಆಗಿರಲಿಲ್ಲ.

    ನಮ್ಮ ಅಜ್ಜನ ಮನೆ ಬಹುತೇಕ ಊರಿನ ಕೊನೆಯಲ್ಲಿತ್ತು. ಇಲ್ಲಿಗೆ ಸಮೀಪದ ಪಟ್ಟಣವೆಂದರೆ ಸಾಗರದ ಪೇಟೆ. ಅಲ್ಲಿಗೆ ಹೋಗಬೇಕೆಂದರೆ, ಸುಮಾರು ಎರಡು ಗಂಟೆ ಕಾಲು ಹಾದಿಯಲ್ಲಿ ನಡೆದು ಸಿರಿವಂತೆ ಎಂಬ ಊರಿಗೆ ಬಂದು ಬಸ್ಸನ್ನು ಹಿಡಿಯಬೇಕು. ಸಿರಿವಂತೆಯಿಂದ ಸಾಗರಕ್ಕೆ ೮ ಕಿಲೋಮೀಟರ್. ಗಂಟೆಗೊಂದು ಬಸ್ಸು. ನಿಲ್ಲಿಸಿದರೆ ಕಾಯುತ್ತಿರುವವರ ಪೂರ್ವಜನ್ಮದ ಪುಣ್ಯ ಎಂದೇ ಹೇಳಬೇಕು. ಬಸ್ಸು ಇಲ್ಲಿಗೆ ಬರುವಾಗಲೇ ಸಾಮಾನ್ಯವಾಗಿ ತುಂಬಿ ತುಳುಕುತ್ತಿದ್ದವು. ಅದರಲ್ಲಿಯೂ ಸಾಗರದಿಂದ ಹಿಂದಿರುಗಿ ಬರುವಾಗ ಆರಂಭದಲ್ಲಿ ಬಸ್ಸನ್ನು ಹತ್ತಲು ಬಿಡುತ್ತಿರಲಿಲ್ಲ. ಖಾಸಗಿ ಬಸ್ಸಿನ ಏಜಂಟರು ಆಯಾ ಬಸ್ಸಿನ ಸರ್ವಾಧಿಕಾರಿಗಳು. ಅವರು ವಿಧಿಸಿದ ಕಟ್ಟಪ್ಪಣೆಯನ್ನು ಮೀರುವಂತಿಲ್ಲ. ಸಿರಿವಂತೆಯವರು ಕೊನೆಯಲ್ಲಿ ಹತ್ತಬೇಕು. ಮೊದಲೇ ಹತ್ತಿದರೆ ದೂರ ಹೋಗುವ ಪ್ರಯಾಣಿಕರಿಗೆ ಸೀಟು ಇರುವುದಿಲ್ಲವೆಂಬುದು ಅವರ ವಾದ. ಈ ಕಾರಣಕ್ಕೆ ಸಂಜೆಯ ಹೊತ್ತು ನಿರಂತರ ತಗಾದೆಗಳು ನಡೆಯುತ್ತಿದ್ದವು.

    ಈ ಊರಿಗೆ ಇರುವ ಇನ್ನೊಂದು ಸಂಪರ್ಕವೆಂದರೆ ಎತ್ತಿನಗಾಡಿ ಹೋಗುವ ದಾರಿ. ಸಾಲೆಕೊಪ್ಪದಿಂದ ಹೊರಟು ಹುಳೇಗಾರು ಮೂಲಕ ಸಿರಿವಂತೆಗೆ ಬಂದು ಸಾಗರದ ದಾರಿಯನ್ನು ಎತ್ತಿನ ಗಾಡಿಗಳು ಹಿಡಿಯಬೇಕಾಗಿತ್ತು. ಇದು ಸಾಕಷ್ಟು ಸುತ್ತು ಬಳಸಿನ ದಾರಿ. ಆದರೂ ಸಾಮಾನು ಸರಂಜಾಮುಗಳನ್ನು ಈ ದಾರಿಯಲ್ಲಿಯೇ ತರಬೇಕಾಗಿತ್ತು. ಹಳ್ಳಿಯಿಂದ ಅಡಿಕೆ ಮುಂತಾದ ಮಾರಾಟದ ಸಾಮಗ್ರಿಗಳನ್ನು ಈ ಮಾರ್ಗದಲ್ಲಿಯೇ ಸಾಗಿಸಬೇಕಾಗಿತ್ತು.

    ಅಜ್ಜಿಯ ತವರು ಮನೆ ಖಂಡಿಕ. ಆ ಕಾಲಕ್ಕೆ ಸಾಲೆಕೊಪ್ಪದಿಂದ ಖಂಡಿಕ್ಕೆ ಕಾಲುನಡಿಗೆಯಲ್ಲಿ ಸುಮಾರು ಎಂದೂವರೆ ಎರಡು ಗಂಟೆಯ ದಾರಿ. ಸಾಲೆಕೊಪ್ಪದಿಂದ ಹೊರಟು ಸಸರವಳ್ಳಿ ಸಿದ್ದಿವಿನಾಯಕ ದೇವಸ್ಥಾನದ ಎದುರು ಕಿರಿದಾದ ದಾರಿಗೆ ಇಳಿದರೆ ಇಕ್ಕೆಡೆಗಳಲ್ಲಿ ಹಸಿರಿನ ತೋರಣ. ಭತ್ತದ ಗದ್ದೆ, ಅಡಿಕೆ ತೋಟದ ನಡುವೆ ಪ್ರಯಾಣ. ಕೈತೋಟದ ಅಡಿಕೆ ತೋಟವನ್ನು ದಾಟಿ ಎದುರಿಗೆ ಸಿಗುವ ಗುಡ್ಡವನ್ನು ಹತ್ತಿ ಇಳಿದರೆ ಸಿಗುವುದು ಹಲಸಿನ ಘಟ್ಟ ಎಂಬ ಹಳ್ಳಿ. ಈ ಹೊತ್ತಿಗೆ ಬಾಯಾರಿಕೆಯಾದರೆ ಇಲ್ಲಿನ ರಾಮಭಟ್ಟರ ಮನೆಯಲ್ಲಿ ನೀರು ಕುಡಿದು ಮತ್ತೆ ತೋಟವಿಳಿದರೆ ಕಲ್ಮಕ್ಕಿಯ ಹೊಸೊಕ್ಕಲು ನಾರಣಪ್ಪನವರ ಮನೆ ಪಕ್ಕದಲ್ಲಿ ಸಂಕ ದಾಟಿದರೆ ರಸ್ತೆ ಸಿಗುತ್ತಿತ್ತು. ಇಲ್ಲಿಂದ ಬಲಕ್ಕೆ ತಿರುಗಿ ಏರುದಾರಿಯಲ್ಲಿ ಒಂದಷ್ಟು ದೂರ ಸಾಗಿದರೆ ಸಿಗುವುದು ಕಲ್ಮಕ್ಕಿಯ ರಾಮೇಶ್ವರ ಸನ್ನಿಧಿ. ದಾರಿಯಲ್ಲಿಯೇ ನಿಂತು ಕೈಮುಗಿದು ಗುಡ್ಡೆದಿಂಬವನ್ನು ದಾಟಿ ಒಂದಷ್ಟು ದೂರ ಹೋದರೆ ಖಂಡಿಕದ ಹೊರವಲಯ ಕಾಣುತ್ತಿತ್ತು. ಇವೆಲ್ಲ ನಿರ್ಜನ ಪ್ರದೇಶಗಳು. ಹಲಸಿನ ಘಟ್ಟ ಮತ್ತು ಗುಡ್ಡೆದಿಂಬದ ಸಮೀಪ ಕಾಡುಕೋಣ ಮತ್ತು ಹುಲಿಗಳು ಒಮ್ಮೊಮ್ಮೆ ಎದುರಾಗುವುದೂ ಇತ್ತು.

    ನಮ್ಮ ಅಜ್ಜಿ ಭಾಗೀರಥಿಗೆ ತನ್ನ ಮೊಮ್ಮಕ್ಕಳ ಮೇಲೆ ಇದ್ದ ಪ್ರೀತಿ ಯಾವ ರೀತಿಯದು ಎಂದು ಹೇಳುವುದು ಕಷ್ಟ. ಏಕೆಂದರೆ ನಾನಂತೂ ಅದರ ಸವಿಯನ್ನು ಉಂಡವನಲ್ಲ. ಅದಕ್ಕೆ ಬೇರೆಯದೇ ಆದ ಕಾರಣಗಳಿವೆ. ಇವೆ. ಮುಂದಿನ ದಿನಗಳಲ್ಲಿ ಅದನ್ನು ಹೇಳುತ್ತೇನೆ.

    ಇನ್ನು ಅಜ್ಜನದು ವಿಚಿತ್ರ ವ್ಯಕ್ತಿತ್ವ. ಮುಂಜಾನೆ ಎದ್ದು ಮನೆ ಎದುರಿನ ತೋಟಕ್ಕೆ ಮೆಟ್ಟಿಲಿಳಿದು ಹೋಗುತ್ತಿದ್ದರು. ಅಲ್ಲಿ ಒಂದು ಸಣ್ಣ ಕೊಳವಿತ್ತು. ಅದರ ಮೊದಲ ಮೆಟ್ಟಿಲ ಮೇಲೆ ನಿಂತು ನೀರನ್ನು ಆಕಡೆ ಈಕಡೆ ಸರಿಸುವುದು ಮುಖ ತೊಳೆಯುವುದು ಮಾಡುತ್ತಿದ್ದರು. ಸುಮಾರು ಒಂದು ಘಂಟೆಗಳ ಕಾಲ ಅವರ ಈ ಮುಖ ತೊಳೆಯುವ ಕಾರ್ಯಕ್ರಮ ನಡೆಯುತ್ತಿತ್ತು. ಅನಂತರ ಒಂದಷ್ಟು ಹೂಗಳನ್ನು ಕೊಯ್ದುಕೊಂಡು ಹಿಂದಿರುಗಿ ಬರುತ್ತಿದ್ದರು. ಸ್ನಾನ ಮಾಡುವಾಗಲೂ ಇದೇ ರೀತಿ. ಹಂಡೆಯಲ್ಲಿ ಇರುವ ನೀರನ್ನೆಲ್ಲ ಖಾಲಿ ಮಾಡಿಯೇ ಬರುವುದು ಅವರ ಸ್ವಭಾವ. ಅಜ್ಜನ ಮನೆಯಲ್ಲಿ ಅಬ್ಬಿ ನೀರು ಹಿತ್ತಿಲ ಕಡೆಗೆ ವರ್ಷವಿಡೀ ಬಂದು ಬೀಳುತ್ತಿತ್ತು. ವಿಶ್ವೇಶ್ವರಯ್ಯ ಇದನ್ನು ನೋಡಿದ್ದರೆ ಅಲ್ಲಿಯೂ ಒಂದು ಆಣೆಕಟ್ಟು ಮಾಡುತ್ತಿದ್ದರೇನೋ! ಹೀಗಾಗಿ ಇಲ್ಲಿ ಬಾವಿಯಿಂದ ನೀರನ್ನು ಸೇದ ಬೇಕಾಗಿರಲಿಲ್ಲ. ಈಗಲೂ ಸಾಲೆಕೊಪ್ಪದ ನಮ್ಮ ಅಜ್ಜನ ಮನೆಯಲ್ಲಿ ಬಾವಿಯಿಲ್ಲವೆಂದರೆ ನೀವು ನಂಬಲೇ ಬೇಕು. ನಿಜವಾದ ಅರ್ಥದಲ್ಲಿ ಭಾಗೀರಥಿ ಇಲ್ಲಿ ಮೈದೋರಿದ್ದಳು. ಹೀಗಾಗಿ ನಮ್ಮ ಅಜ್ಜನ ಸ್ನಾನ ಮತ್ತು ಸಂಜೆಯ ಕೈಕಾಲು ತೊಳೆಯುವ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆ ಆಗುತ್ತಿರಲಿಲ್ಲ. ಬಾವಿಯಿಂದ ಸೇದಿ ಅಜ್ಜನಿಗೆ ನೀರು ಒದಗಿಸುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಅಜ್ಜ ತನಗಿನ್ನೂ ಮೈಯ್ಯಲ್ಲಿ ತ್ರಾಣವಿರುವಾಗಲೇ ಯಾಕೆ ಸಂಸಾರದ ಜವಾಬ್ದಾರಿಯನ್ನು ಹಿರಿಯ ಮಗ ನಾರಾಯಣನಿಗೆ ಕೊಟ್ಟರು ಎಂಬುದು ಇಂದಿಗೂ ಚಿದಂಬರ ರಹಸ್ಯವಾಗಿಯೇ ಉಳಿದುಕೊಂಡಿದೆ.

    ಅಜ್ಜ ರಾಮಕೃಷ್ಣಯ್ಯ ಮತ್ತು ಅಜ್ಜಿ ಭಾಗೀರಥಿ ಇವರ ದಾಂಪತ್ಯದ ಬಗೆಗೆ ಒಂದು ಮಾತನ್ನು ಇಲ್ಲಿ ಹೇಳಬೇಕು. ನಮಗೆ ಬುದ್ದಿ ಬಂದಾಗಿನಿಂದ ಇವರಿಬ್ಬರು ಅನ್ಯೋನ್ಯವಾಗಿ ಮಾತನಾಡಿದ್ದನ್ನು ನಾವ್ಯಾರೂ ನೋಡಲೇ ಇಲ್ಲ. ಅಜ್ಜಿ ನಿರಂತರವಾಗಿ ಅಜ್ಜನ ಮೇಲೆ ಎಗರಾಡುತ್ತಿದ್ದರು. ಅಜ್ಜ ಏನೂ ಹೇಳದೆ ಮೌನಕ್ಕೆ ಶರಣಾಗುತ್ತಿದ್ದರು. ಹೀಗಾಗಿ ಅಜ್ಜಿಯದು ಒನ್ ವೇ ಗದ್ದಲ. ಇಷ್ಟನ್ನು ಹೊರತು ಪಡಿಸಿದರೆ ಅವರ ತಾರುಣ್ಯದ ದಿನಗಳ ಬಗೆಗೆ, ದಾಂಪತ್ಯದ ಆರಂಭದ ದಿನಗಳ ಬಗೆಗೆ ಹೇಳುವುದಕ್ಕೆ ನನ್ನಲ್ಲಿ ಮಾಹಿತಿಗಳಿಲ್ಲ.

    0 Responses to “ನೆನಪಿನಂಗಳ ೪ - ಹಿರಿಯರ ಹೆಜ್ಜೆ ಗುರುತು”

    Subscribe