Sunday, December 5, 2010

0

ನೆನಪಿನಂಗಳ - ೩ : ಆಲಳ್ಳಿ ಶಾಲೆಯಲ್ಲಿ ಅಕ್ಷರದ ಬೆಳಕು

  • Sunday, December 5, 2010
  • ಡಾ.ಶ್ರೀಧರ ಎಚ್.ಜಿ.
  • Share

  • ಶಾಲೆ ಎಂದರೆ ಒಂದು ಕೊಠಡಿ; ಒಬ್ಬರು ಅಧ್ಯಾಪಕರು. ಅವರೇ ಶಾಲೆಯ ಹೆಡ್‌ಮಾಸ್ಟರ್, ಮಾಸ್ಟ್‌ರ್ ಮತ್ತು ಕ್ಲಾರ್ಕ್ ಕಮ್ ಜವಾನ. ಆಲ್ ಇನ್ ಒನ್. ಒಂದರಿಂದ ನಾಲ್ಕನೆಯ ತರಗತಿಯ ವರೆಗಿನ ಮಕ್ಕಳು ಒಂದೇ ಕೊಠಡಿಯಲ್ಲಿದ್ದೆವು.

    ನಾವು ಜನಗಣಮನ ಹೇಳುವುದರೊಂದಿಗೆ ಶಾಲೆ ಆರಂಭವಾಯಿತು. ಮೇಸ್ಟ್ರು ಖುರ್ಚಿಯಲ್ಲಿ ಆಸೀನರಾದರು. ನನ್ನ ಹೆಸರನ್ನು ಒಂದನೆ ತರಗತಿಯ ಹಾಜರಿ ಪುಸ್ತಕದಲ್ಲಿ ಕ್ರಮವತ್ತಾಗಿ ಬರೆದರು. ನಮ್ಮ ಶಾಲೆಯಲ್ಲಿ ಒಟ್ಟು ಸುಮಾರು ೨೦ ರಿಂದ ೨೫ ವಿದ್ಯಾರ್ಥಿಗಳು ಇದ್ದ ನೆನಪು. ತರಗತಿಯ ಆರಂಭದ ದ್ಯೋತಕವಾಗಿ ಎಲ್ಲಾ ತರಗತಿಯ ವಿದ್ಯಾರ್ಥಿಗಳ ಹೆಸರನ್ನು ಕರೆದು ಗುರುತು ಮಾಡಿಕೊಂಡರು. ಆ ಹೊತ್ತಿಗೆ ಶಾಲೆಯಿಂದ ಸ್ವಲ್ಪ ದೂರದಲ್ಲಿದ್ದ ಹೊಂಡದಿಂದ [ಕೆರೆಯೂ ಅಲ್ಲದ, ಬಾವಿಯೂ ಅಲ್ಲದ ನೀರಿನಾಶ್ರಯ] ಒಂದು ಕೊಡಪಾನ ನೀರನ್ನು ತಂದು ಶಾಲೆಯ ಕಟ್ಟೆಯ ಮೇಲೆ ನಾಲ್ಕಾರು ಮಂದಿ ವಿದ್ಯಾರ್ಥಿಗಳು ಇಟ್ಟರು.

    ನನ್ನ ಬದುಕಿನಲ್ಲಿ ದೊರೆತ ಮೊದಲ ಅಧ್ಯಾಪಕರ ಹೆಸರು ಶ್ರೀನಿವಾಸ. ಇಲ್ಲಿಂದ ಸ್ವಲ್ಪ ದೂರದ ಕಾನ್ಲೆ ಎಂಬ ಊರಿನಿಂದ ಬರುತ್ತಿದ್ದರು. ಬಿಳಿ ಅಂಗಿ, ಕಚ್ಚೆಪಂಜೆ, ಮೇಲೊಂದು ಬುಶ್‌ಕೋಟು, ಕಾಲಿಗೆ ಚರ್ಮದ ಚಪ್ಪಲಿ. ಎತ್ತರವಲ್ಲದ ಗಿಡ್ಡವೂ ಅಲ್ಲದ ಮಧ್ಯಮ ತರಗತಿಯ ಆಳ್ತನ. ಬಡಕಲು ಶರೀರ. ನೋಡಲು ತುಸು ಕಪ್ಪು. ಅವರೇ ನನ್ನ ಮೊದಲ ಗುರು. ಬದುಕಿಗೆ ಅಕ್ಷರದ ಬೆಳಕನ್ನು ಬಿತ್ತಿದವರು. ಒರಟಾಗಿದ್ದ ಮೊರಡು ಕಲ್ಲನ್ನು ತುಸು ಕೆತ್ತಿದವರು.

    ಕೊಠಡಿಯಲ್ಲಿ ನಮಗೆ ಕುಳಿತುಕೊಳ್ಳಲು ಕಾಲ್ಮಣೆಗಳಿದ್ದವು. ಈ ಕೊಠಡಿಗೆ ರಸ್ತೆಯ ಕಡೆಗೆ ಒಂದು ಬಾಗಿಲು. ಇನ್ನೊಂದು ಬದಿಯಲ್ಲಿ ಎರಡು ಕಿಟಕಿ. ತರಗತಿಯ ಒಳಗೆ ಸಾಲೆಯ ಸಾಮಗ್ರಿಯನ್ನು ಇಡಲು ಗೋಡೆಯಲ್ಲಿ ಒಂದು ಪುಟ್ಟ ಮರದ ಕಪಾಟು. ಶಾಲೆಯ ಸಾಮಗ್ರಿ ಎಂದರೆ ಬೋರ್ಡು ಒರೆಸುವ ಬಟ್ಟೆ, ಚಾಕ್‌ಪೀಸ್ ಮತ್ತು ಹಾಜರಿ ಪುಸ್ತಕ. ಕೊಠಡಿಯ ನಡುವೆ ಒಂದು ಹಳೆಯ ಮರದ ಟೇಬಲ್ ಮತ್ತು ಅಷ್ಟೇ ಹಳೆಯದಾದ ಒಂದು ಖುರ್ಚಿ.

    ಮೊದಲ ತರಗತಿಯ ನಮ್ಮ ಸಂಪತ್ತೆಂದರೆ ಒಂದು ಸ್ಲೇಟು; ಒಂದು ಕನ್ನಡ ಪುಸ್ತಕ. ಸ್ಲೇಟಿನ ಮೇಲೆ ಬರೆಯಲು ಒಂದು ಬಳಪದಕಡ್ಡಿ. ಶಾಲೆಗೆ ಹೋಗುವ ಮೊದಲ ದಿನ ಇವುಗಳನ್ನು ತೆಗೆದುಕೊಂಡು ಹೋಗಿದ್ದೆ. ಶ್ರೀನಿವಾಸ ಮೇಸ್ಟ್ರು ನನ್ನ ಸ್ಲೇಟಿನ ಮೇಲೆ ಅ ಆ ಅಕ್ಷರವನ್ನು ಬರೆದು ತಿದ್ದಲು ಹೇಳಿದರು. ನಾನು ಸುಮಾರು ಮಧ್ಯಾಹ್ನದವರೆಗೂ ಅದನ್ನು ತಿದ್ದಿದ ನೆನಪಿದೆ. ಅದರ ಮೇಲೆ ತಿದ್ದಿ, ತಿದ್ದಿ ಅದು ದಪ್ಪ ಅಕ್ಷರವಾಗಿ ಮಾರ್ಪಟ್ಟಿತ್ತು.

    ೧೧.೩೦ರ ಹೊತ್ತಿಗೆ ಎಲ್ಲರನ್ನೂ ಶೌಚಕ್ಕೆ ಹೋಗಲು ಬಿಟ್ಟರು. ನಾವು ಶಾಲೆಯ ಸುತ್ತ ಇದ್ದ ಪೊದೆಗಳ ಮರೆಗೆ ಹೋಗಿ ಮೂತ್ರಮಾಡಿ ಬಂದೆವು. ಎಡೆಯಲ್ಲಿ ಹೋಗಬೇಕೆಂದರೆ ಎದ್ದು ನಿಂತು ಕಿರುಬೆರಳನ್ನು ತೋರಿಸಿದರೆ ಹೊರಗೆ ಹೋಗಲು ಅನುಮತಿ ನೀಡುತ್ತಿದ್ದರು.

    ಮಧ್ಯಾಹ್ನ ಊಟದ ವಿರಾಮ. ನಾವು ಬಾಳೆ ಎಲೆಯಲ್ಲಿ ಕಟ್ಟಿ ತಂದ ತಿಂಡಿಯನ್ನು ತಿಂದು ಕೈತೊಳೆದೆವು. ನಮ್ಮ ಮೇಸ್ಟ್ರು ನಮ್ಮೊಂದಿಗೆ ತಿಂಡಿ ತಿಂದರು. ಒಮ್ಮೊಮ್ಮೆ ಸಮೀಪದ ಆಲಳ್ಳಿಗೆ ಹೋಗಿ ಅಲ್ಲಿದ್ದ ಏಕಮಾತ್ರ ಚಹ ಅಂಗಡಿಯಲ್ಲಿ ಅವಲಕ್ಕಿ ತಿಂದು ಬರುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ಶ್ರೀನಿವಾಸರು ಶ್ರೀಮಂತರಲ್ಲ. ಅವರ ಅಮ್ಮ ನಮ್ಮ ಮನೆಯ ಸಮೀಪ ಕೂಲಿ ಕೆಲಸಕ್ಕೆ ಬರುತ್ತಿದ್ದರು.

    ಊಟದ ನಂತರ ಅ ಆ ಇ ಈ ಯಿಂದ ತೊಡಗಿ ಕಾಗುಣಿತದ ಬಳ್ಳಿಗಳನ್ನು ಹೇಳಿಕೊಡುತ್ತಿದ್ದರು. ಇದು ಳಂ ಳ:ವರೆಗೂ ಹೋಗುತ್ತಿತ್ತು. ಅನಂತರ ಮಗ್ಗಿ ಪಾಠ. ನಮಗಿಂತ ಸೀನಿಯರ್ ವಿದ್ಯಾರ್ಥಿಗಳು ಅಥವಾ ಮಗ್ಗಿ ಸರಿಯಾಗಿ ಬರುವವರು ಹೇಳಿಕೊಡುತ್ತಿದ್ದರು. ನಾವು ಹೇಳುತ್ತಿದ್ದವು. ಒಂದರಿಂದ ತೊಡಗಿ ನೂರರವರೆಗೆ ಒಬ್ಬರು. ಅನಂತರ ೨ ಒಂದ್ಲೆ ಎರಡು ಆರಂಭವಾಗಿ ೨೦ರ ಮಗ್ಗಿಯವರೆಗೂ ಹೋಗುತ್ತಿತ್ತು. ನಾವು ಇದನ್ನು ರಾಗಬದ್ಧವಾಗಿ ಹೇಳುತ್ತಿದ್ದವು. ಈ ಹೊತ್ತು ಮೇಸ್ಟ್ರಿಗೆ ತುಸು ವಿಶ್ರಾಂತಿಯ ಸಮಯ. ಅವರು ನಮ್ಮ ಈ ಗದ್ದಲದ ನಡುವೆಯೇ ನಿದ್ದೆ ಮಾಡಿ ಬಿಡುತ್ತಿದ್ದರು. ನಮಗೆ ಮಗ್ಗಿ ಪಾಠ ಮುಗಿದರೆ ಅವತ್ತಿನ ಶಾಲೆಯೂ ಮುಗಿದಂತೆ. ಎಲ್ಲರೂ ಮನೆಗೆ ಹೊರಡುತ್ತಿದ್ದವು. ಸಂಜೆ ಮನೆಗೆ ಹೊರಡುವ ಮೊದಲು ತರಗತಿಯ ಕೊಠಡಿಯ ಕಸಹೊಡೆದು ಬಿಡುತ್ತಿದ್ದವು.

    ನನಗೆ ಈ ಶಾಲೆಯಲ್ಲಿ ಸಿಕ್ಕಿದವರಲ್ಲಿ ಹಲವರು ಇಂದು ಕೃಷಿ ಮಾಡುತ್ತಿದ್ದಾರೆ. ಈ ದಿನಗಳಲ್ಲಿ ದೊರಕಿದ ಹಾಗೂ ಈಗಲೂ ನನ್ನೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳೆಂದರೆ ಕೊಡ್ಲಗದ್ದೆ ಮನೆಯ ನಟರಾಜ, ಮಲ್ಲೇಶ ಗೌಡರ ಮಗ ಜಯ ಮತ್ತು ವಿರೂಪಾಕ್ಷ. ಶಾಲೆಯ ದಿನಗಳಲ್ಲಿ ನಾವು ಒಳ್ಳೆಯ ಗೆಳೆಯರಾಗಿದ್ದವು. ಈಗಲೂ ಆ ಗೆಳೆತನ ಉಳಿದುಕೊಂಡಿದೆ.

    ಮೊದಲ ಕೆಲವು ದಿನ ನನ್ನನ್ನು ಅಪ್ಪ ಅಥವಾ ಅಮ್ಮ ಶಾಲೆಯವರೆಗೆ ಕಳಿಸಿ ಹೋಗುತ್ತಿದ್ದರು. ಸಂಜೆ ಬಂದು ಕರೆದುಕೊಂಡು ಹೋಗುತ್ತಿದ್ದರು. ಹೊಳೆದಾಟಿ ಕಾಡಿನ ದಾರಿಯಲ್ಲಿ ಹೋಗುವಾಗ ಜಯ, ವಿರೂಪಾಕ್ಷ ಮತ್ತು ನಾನು ಒಟ್ಟಿಗೆ ಹೋಗುತ್ತಿದ್ದವು. ಸಾಮಾನ್ಯವಾಗಿ ಅಪ್ಪ ಹೊಳೆ ದಾಟಿಸಿ ಬಿಡುತ್ತಿದ್ದರು. ಸಂಜೆ ನಾನು ಬರುವ ಹೊತ್ತಿಗೆ ಅವರು ಕಾದಿರುತ್ತಿದ್ದರು. ಹೊಳೆಯಲ್ಲಿ ನೀರು ಹೆಚ್ಚಿದ್ದರೆ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ದಾಟಿಸುತ್ತಿದ್ದರು.

    ಶಾಲೆಗೆ ಹೋಗಿ ಬರುವ ಕಾಡಿನ ದಾರಿಯಲ್ಲಿ ಹೊಳೆದಾಸವಾಳದ ಹಣ್ಣುಗಳು ಯಥೇಚ್ಚವಾಗಿ ಸಿಗುತ್ತಿದ್ದವು. ಅವುಗಳನ್ನು ಕೊಯ್ದು ತಿನ್ನುತ್ತಾ ಹೋಗುವುದು ನಮ್ಮ ನಿತ್ಯದ ಕಾಯಕ. ಒಮ್ಮೆ ಹುತ್ತದ ಮೇಲಿದ್ದ ಗಿಡದ ಹಣ್ಣು ಕೊಯ್ಯಲು ಕೈ ಹಾಕಿದಾಗ ಹಾವೊಂದು ಬುಸ್ ಎಂದದ್ದು ಈಗಲೂ ನೆನಪಿದೆ.

    ಕಾಡಿನ ದಾರಿಯಲ್ಲಿ ಹೋಗುವಾಗ ಒಮ್ಮೊಮ್ಮೆ ನರಿ, ಹಂದಿ, ಹಾವುಗಳು ಎದುರಿಗೆ ಸಿಗುತ್ತಿದ್ದವು. ಆಗೆಲ್ಲ ನಾವು ಹೆದರಿ ಕಂಗಾಲಾಗುತ್ತಿದ್ದವು. ಒಮ್ಮೆಯಂತೂ ದಾರಿಯ ಪಕ್ಕದ ಪೊದೆಯಲ್ಲಿದ್ದ ಹಂದಿಯೊಂದು ನಮ್ಮನ್ನು ಸ್ವಲ್ಪ ದೂರದವರೆಗೆ ಅಟ್ಟಿಸಿಕೊಂಡು ಬಂದಿತ್ತು. ಕೆಲವೊಮ್ಮೆ ಹತ್ತಾರು ಹಂದಿಗಳು ತಮ್ಮ ಸಂಸಾರವನ್ನು ಕಟ್ಟಿಕೊಂಡು ರಸ್ತೆಯನ್ನು ದಾಟುತ್ತಿದ್ದವು. ಆಗ ನಾವು ದೂರದಲ್ಲಿ ನಿಂತು ನೋಡುತ್ತಿದ್ದವು. ಎಲ್ಲವೂ ದಾಟಿದ್ದನ್ನು ಖಚಿತಪಡಿಸಿಕೊಂಡ ನಂತರ ಮುಂದೆ ಹೋಗುತ್ತಿದ್ದೆವು.

    ಬಾಲ್ಯದಿಂದಲೂ ನಾನು ಓದಿನಲ್ಲಿ ದಡ್ಡನಲ್ಲ. ಹೀಗಾಗಿ ಬಹಳ ಬೇಗ ಎಲ್ಲ ಅಕ್ಷರಗಳನ್ನು ಕಲಿತೆ. ಒಂದರಿಂದ ಇಪ್ಪತ್ತರವರೆಗಿನ ಮಗ್ಗಿಯ ಬಳ್ಳಿಯನ್ನು ಕಲಿತೆ. ಕೆಲವೊಮ್ಮೆ ನಾವು ಈ ಮಗ್ಗಿಯ ಬಳ್ಳಿಯನ್ನು ಹಿಂದು ಮುಂದಾಗಿ ಹೇಳಬೇಕಾಗಿತ್ತು.

    ಒಂದು ದಿನ ಸಂಜೆ ಅಪ್ಪ ಹೊಳೆದಾಟಿಸಲು ಬಂದಿರಲಿಲ್ಲ. ಅದು ಮಳೆಗಾಲದ ಸಮಯ. ಹೊಳೆಯಲ್ಲಿ ಸಾಕಷ್ಟು ನೀರಿತ್ತು. ಆಚೆ ದಡದಲ್ಲಿ ಅಪ್ಪ ಬಂದಿರಲಿಲ್ಲ. ತುಸು ಹೊತ್ತು ನೋಡಿದ ನಂತರ ನಾನೇ ದಾಟಲು ಸನ್ನದ್ದನಾದೆ. ಒಂದೊಂದೇ ಹೆಜ್ಜೆಯಿಟ್ಟುಕೊಂಡು ಹೊಳೆಯ ನಡುವಿಗೆ ಬಂದೆ. ಹೊಳೆಯ ನೀರು ಮೊಳಕಾಲನ್ನು ದಾಟಿ ತುಸು ಮೇಲೆ ಬಂದಿತ್ತು ಹಾಕಿಕೊಂಡಿದ್ದ ಚಡ್ಡಿ ಒದ್ದೆಯಾಗಿತ್ತು. ನೀರಿನ ಸೆಳವು ತುಸು ಜಾಸ್ತಿಯಾಯಿತು. ಕಾಲಡಿಯಲ್ಲಿದ್ದ ಮರಳು ಸರ್ರನೆ ಜಾರಿ ಹೋಗುತ್ತಿತ್ತು. ನನಗೆ ಮುಂದೆ ಹೆಜ್ಜೆಯಿಡಲು ಧೈರ್ಯ ಬರಲಿಲ್ಲ. ಹಿಂದೆ ಹೋಗುವಂತೆಯೂ ಇರಲಿಲ್ಲ. ಇನ್ನೇನು ಆಯ ತಪ್ಪಿ ಬೀಳಬೇಕು ಎಂಬಷ್ಟರಲ್ಲಿ ದನಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಅಪರಿಚಿತರೊಬ್ಬರು ಬಂದು ನನ್ನನ್ನು ಹಿಡಿದುಕೊಂಡರು. ನಾನು ಅಂದಿಗೆ ಬಚಾವಾದೆ.
    ಈ ಸುದ್ದಿ ಒಂದೆರಡು ದಿನಗಳ ನಂತರ ಮನೆಗೆ ಮುಟ್ಟಿತು.

    ನಮ್ಮ ಶಾಲೆಯ ಎದುರು, ಸುಮಾರು ಅರ್ಧಫರ್ಲಾಂಗು ದೂರದಲ್ಲಿ ನಂದಿಕೋಲು ಬಸವಣ್ಣನ ಒಂದು ದೇವಸ್ಥಾನವಿತ್ತು. ನಾವು ಮಧ್ಯಾಹ್ನದ ಬಿಡುವಿನ ಹೊತ್ತಿನಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಅಲ್ಲಿಗೆ ಹೋಗುತ್ತಿದ್ದೆವು. ಅಲ್ಲಿ ಒಂದಷ್ಟು ಮಾವಿನ ಮರಗಳಿದ್ದು ಸಂಮೃದ್ಧವಾಗಿ ಮಾವಿನ ಹಣ್ಣು ಸಿಗುತ್ತಿತ್ತು. ಈ ಬಸವಣ್ಣನ ದೇವಸ್ಥಾನದ ಎದುರು ಒಂದೆರಡು ಕಲ್ಲುಗಳಿದ್ದವು. ಅದರಲ್ಲಿ ಒಂದು ಕಲ್ಲಿನ ಮೇಲೆ ಒಂದಷ್ಟು ಅಕ್ಷರಗಳಿದ್ದವು. ಆಗ ನಾವು ಆ ಅಕ್ಷರಗಳನ್ನು ಓದಲು ಪ್ರಯತ್ನಿಸಿ ಸೋತಿದ್ದೆವು. ಹಾಗೆಯೇ ಆ ಅಕ್ಷರಗಳನ್ನು ಓದಿದರೆ ಸಾಯುತ್ತಾರೆ ಎಂಬ ಕಥೆಗಳನ್ನು ಕೇಳಿ ಸುಮ್ಮನಾಗಿದ್ದೆವು. ಆದರೆ ಅದರ ಬಗೆಗಿನ ಕುತೂಹಲ ಮಾತ್ರ ಹೋಗಿರಲಿಲ್ಲ. ಕಳೆದ ವರ್ಷ ಊರಿಗೆ ಹೋದಾಗ ಮತ್ತೊಮ್ಮೆ ನಂದಿಕೋಲು ಬಸವಣ್ಣನನ್ನು ನೋಡಲು ಹೋಗಿದ್ದೆ. ಅದೇ ಕಲ್ಲು, ಅದೇ ಅಕ್ಷರಗಳು. ಯಾವುದೇ ಬದಲಾವಣೆಯಿಲ್ಲದೆ ಹಾಗೇ ಮರದ ಅಡಿಯಲ್ಲಿದ್ದವು. ಬಿ.ಎಲ್. ರೈಸರ ಶಾಸನ ಸಂಪುಟದಲ್ಲಿ ಈ ಶಾಸನದ ಒಕ್ಕಣೆ ಸಿಕ್ಕಿತು. ಕ್ರಿ. ಶ. ೧೪೫೩ಕ್ಕೆ ಸಲ್ಲುವ ಈ ಶಾಸನವು ಸಿರಿಊರ ಗೌಡರ ಮಗ ರಾಮಗೌಡರು ಮತ್ತು ಆಯಿಗ ಗೌಡರು ಯುದ್ಧವೊಂದರಲ್ಲಿ ಮಡಿದದ್ದು ಹಾಗೂ ಆತನ ಮಡದಿ ಎಚಿಗೆಯ ಗೌಡಿ ಸಹಗಮನ ಮಾಡಿದ ಸಂಗತಿಯನ್ನು ಹೇಳುತ್ತದೆ. ಶಿಲಾಶಾಸನದ ಪಕ್ಕದಲ್ಲಿ ಇಂದಿಗೂ ಒಂದು ಮಹಾಸತಿ ಕಲ್ಲಿದೆ. ಕರ್ನಾಟಕದಲ್ಲಿ ಮಹಾಸತಿ ಪದ್ಧತಿ ಇರುವುದರ ಬಗೆಗೆ ಓದಿದ್ದೆ. ಆದರೆ ನಮ್ಮೂರಿನಲ್ಲಿಯೇ ಸಹಗಮನ ನಡೆದ ಸಂಗತಿ ನನ್ನನ್ನು ದಿಗ್ಮೂಢನನ್ನಾಗಿ ಮಾಡಿತು.

    ಒಂದು ಮತ್ತು ಎರಡನೆಯ ತರಗತಿಯನ್ನು ಆಲಳ್ಳಿಯ ಶಾಲೆಯಲ್ಲಿ ಕಲಿತೆ. ಈ ಹೊತ್ತಿಗೆ ನಾನು ಹೊಳೆ ದಾಟಲು ಮಾಡಿದ ಸಾಹಸ ನಮ್ಮ ಬಂಧು ಬಳಗದಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದಿತ್ತು. ಇದು ನನ್ನ ದೊಡ್ಡಮ್ಮನ ಕಿವಿಗೂ ಬಿತ್ತು. ದೊಡ್ಡಮ್ಮನೆಂದರೆ ಅಮ್ಮನ ಅಕ್ಕ. ಗೌರಿ ಎಂದು ಇವರ ಹೆಸರು. ಅಮ್ಮ ಇವರನ್ನು ಗೌರಕ್ಕ ಎಂದು ಕರೆಯುತ್ತಿದ್ದರು.

    ಹೆಗ್ಗೋಡಿನ ಸಮೀಪ ಗಡಿಕಟ್ಟೆ ಎಂಬ ಊರಿದೆ. ಅಲ್ಲಿಂದ ತುಸು ಮುಂದೆ ಹೋದರೆ ಹಿರೇಮನೆ ಎಂಬ ಸ್ಥಳವಿದೆ. ದೊಡ್ಡಮ್ಮನ ಸಂಸಾರ ಅಲ್ಲಿ ವಾಸವಾಗಿತ್ತು. ವಾಸ್ತವವಾಗಿ ದೊಡ್ಡಪ್ಪನ ಮೂಲ ಮನೆ ಹೊನ್ನೆಸರದಲ್ಲಿತ್ತು. ದೊಡ್ಡಪ್ಪನ ತಂದೆ ಹಿರೇಮನೆಯಲ್ಲಿ ಜಮೀನು ತೆಗೆದುಕೊಂಡ ಮೇಲೆ ಇವರು ಇಲ್ಲಿಗೆ ಬಂದು ವಾಸವಾಗಿದ್ದರು.

    ಯಾವುದೋ ಕಾರ್ಯಕ್ರಮಕ್ಕೆ ಬಂದವರು ದೊಡ್ಡಮ್ಮ ಅಮ್ಮನಲ್ಲಿ ಹೇಳಿದರು. ಮುಂದಿನ ವರ್ಷದಿಂದ ಶ್ರೀಧರ ನಮ್ಮ ಮನೆಯಿಂದ ಶಾಲೆಗೆ ಹೋಗಲಿ. ನನ್ನ ಮಕ್ಕಳು ಓದುವ ಪುರಪ್ಪೆಮನೆ ಶಾಲೆಯಲ್ಲಿ ಅವನೂ ಕಲಿಯಲಿ ಎಂದು ತಾಕೀತು ಮಾಡಿದರು. ದೊಡ್ಡವರ ಅಪೇಕ್ಷೆಯಂತೆ ನಾನು ಆಲಳ್ಳಿಯ ಶಾಲೆಯನ್ನು ಬಿಟ್ಟು ಪುರಪ್ಪೆಮನೆ ಶಾಲೆಗೆ ಸೇರಿದೆ.

    0 Responses to “ನೆನಪಿನಂಗಳ - ೩ : ಆಲಳ್ಳಿ ಶಾಲೆಯಲ್ಲಿ ಅಕ್ಷರದ ಬೆಳಕು”

    Subscribe