Saturday, December 4, 2010

0

ನೆನಪಿನಂಗಳದಲ್ಲಿ ಆಲಳ್ಳಿ ಶಾಲೆ . . .

  • Saturday, December 4, 2010
  • ಡಾ.ಶ್ರೀಧರ ಎಚ್.ಜಿ.
  • Share

  • ಸಾಲೆಕೊಪ್ಪದಿಂದ ಸ್ಕೂಲಿಗೆ ಹೋಗುವುದಿಲ್ಲವೆಂದು ಮನೆಗೆ ಬಂದ ಮೇಲೆ ಹೊಸ ಸಮಸ್ಯೆ ತಲೆದೋರಿತು. ಇವನನ್ನು ಎಲ್ಲಿ ಶಾಲೆಗೆ ಸೇರಿಸುವುದೆಂದು ಮನೆಯವರು ತಲೆಕೆಡಿಸಿಕೊಂಡರು. ಹೊರಗೆ ಎಲ್ಲಿಯೂ ಬಿಡುವಂತಿಲ್ಲ. ಮನೆಯ ಹತ್ತಿರ ಶಾಲೆಯಿಲ್ಲ. ಇರುವ ಒಂದೇ ಒಂದು ಆಯ್ಕೆಯೆಂದರೆ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದ ಆಲಳ್ಳಿ ಶಾಲೆಗೆ ಕಳಿಸುವುದು. ಆದರೆ ಅದೂ ಸಹ ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

    ಆಲಳ್ಳಿಯ ಶಾಲೆಗೆ ಮನೆಯಿಂದ ಹೋಗುವುದಕ್ಕೆ ಎರಡು ದಾರಿಗಳಿದ್ದವು. ನೇರವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಮೊದಲನೆಯದು. ಮನೆಯ ಮುಂದಿನ ಗದ್ದೆಗೆ ಇಳಿದು, ಎದುರಾಗುವ ಹೊಳೆದಾಟಿ, ಮುಂದೆ ಸುಗುವ ಕಾಡಿನಿಂದ ಆವೃತವಾದ ಗುಡ್ಡವನ್ನು ಹತ್ತಿ ಒಳಮಾರ್ಗದಲ್ಲಿ ಹೋಗುವುದು ಎರಡನೆಯ ದಾರಿ. ಇವೆರಡರಲ್ಲಿ ಎರಡನೆಯ ದಾರಿ ಹತ್ತಿರದ್ದು. ಆದರೆ ಬೇಸಿಗೆಯಲ್ಲಿ ಮಾತ್ರ ಇದರಲ್ಲಿ ಹೋಗುವುದು ಕಾರ್ಯಸಾಧುವಾಗಿತ್ತು. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ದಾಟುವುದು ಸುಲಭದ್ದಾಗಿರಲಿಲ್ಲ.

    ಮನೆಗೆ ಬಂದ ಒಂದೆರಡು ದಿನದ ನಂತರ ಅಪ್ಪ ನನ್ನನ್ನು ಆಲಳ್ಳಿ ಸಾಲೆಗೆ ಕರೆದುಕೊಂಡು ಹೋದರು. ಆ ಕಾಲಕ್ಕೆ ನಮ್ಮೂರಿನ ಪರಿಸರದಲ್ಲಿ ಇರುವುದೆಲ್ಲವೂ ಒಂದೇ ಶಾಲೆ. ಅವೆಲ್ಲವೂ ಸರ್ಕಾರಿ ಶಾಲೆಗಳು. ಕನ್ನಡ ಮಾಧ್ಯಮ ಮಾತ್ರ. ಆಯ್ಕೆಯ ಪ್ರಶ್ನೆಗಳಿರಲಿಲ್ಲ. ಹೀಗಾಗಿ ಇದು ಒಂದು ರೀತಿಯಲ್ಲಿ ಹೆತ್ತವರಿಗೆ ನೆಮ್ಮದಿಯ ಸಂಗತಿಯಾಗಿತ್ತು.

    ಮುಂಜಾನೆ ಹತ್ತುಗಂಟೆಯ ಸುಮಾರಿಗೆ ನಾವು ಶಾಲೆಯನ್ನು ತಲುಪಿದೆವು. ಮಳೆ ಸುರಿಯುತ್ತಿತ್ತು. ಶಾಲೆಯ ಬೀಗವೂ ತೆರೆದಿರಲಿಲ್ಲ. ಹೀಗಾಗಿ ಶಾಲೆಯ ಕಟ್ಟೆಯ ಮೇಲೆ ಕುಳಿತೆವು. ಈ ಶಾಲೆ ಕಾನಲೆ ರಸ್ತೆಯನ್ನು ದಾಟಿದ ನಂತರ ಆಲಳ್ಳಿ ಊರಿನ ಹೊಲಗದ್ದೆಗಳು ಆರಂಭವಾಗುವುದಕ್ಕಿಂತ ಮೊದಲು ಬಯಲಿನಲ್ಲಿತ್ತು. ಆ ಪರಿಸರಕ್ಕೆಲ್ಲ ಶಾಲೆಯ ಕಟ್ಟಡ ಮಾತ್ರ. ಸಮೀಪದಲ್ಲಿ ಯಾವುದೇ ಮನೆಗಳಿರಲಿಲ್ಲ. ಸುತ್ತ ಸಣ್ಣದಾಗಿ ಬೆಳೆದಿರುವ ಕಾಡು. ಕುಡಿಯುವ ನೀರಿಗೆ ಬಾವಿಯೂ ಇರಲಿಲ್ಲ. ಶಾಲೆಯ ಕಟ್ಟೆಯ ಮೇಲೆ ಕುಳಿತು ಕಣ್ಣು ಹಾಯಿಸಿದಷ್ಟು ದೂರ ಹಸಿರಿನಿಂದ ತುಂಬಿದ ಗದ್ದೆಗಳೇ ಕಾಣುತ್ತಿದ್ದವು. ಶಾಲೆಯ ಎದುರಿನ ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಒಂದೊಂದು ವಾಹನಗಳು ಹೋಗುತ್ತಿದ್ದವು. ಅವುಗಳಲ್ಲಿ ಹೆಚ್ಚಿನವು ಗಜಾನನ ಕಂಪನಿಯ ಬಸ್ಸುಗಳು. ವಿರಳವಾಗಿ ವಿರಳವಾಗಿ ಹೋಗುತ್ತಿದ್ದವು. ಬೈಕಿನ ಸಂಗತಿಯಿರಲಿಲ್ಲ. ಕಾರುಗಳ ಸಂಖ್ಯೆಯೂ ಕಡಿಮೆ.

    ಸಮಯ ಕಳೆದಂತೆ ವಿದ್ಯಾರ್ಥಿಗಳು ಬರಲಾರಂಭಿಸಿದರು. ನಾವು ಶಾಲೆಯ ಕಟ್ಟೆಯ ಮೇಲೆ ಕುಳಿತೇ ಇದ್ದೆವು. ಹನ್ನೊಂದು ಗಂಟೆಯ ಹೊತ್ತಿಗೆ ಕಚ್ಚೆ ಪಂಜೆ ಧರಿಸಿದ್ದ ಹಿರಿಯರೊಬ್ಬರು ಶಾಲೆಯ ಕಡೆಗೆ ಬಂದರು. ಅವರನ್ನು ನೋಡಿ ಅಲ್ಲಿದ್ದ ವಿದ್ಯಾರ್ಥಿಗಳು ಗಂಭೀರವಾದರು. ಒಬ್ಬ ಹುಡುಗ ಓಡಿ ಹೋಗಿ ಅಧ್ಯಾಪಕರ ಕೈಯಿಂದ ಬೀಗದ ಕೀಯನ್ನು ತಂದು ಬಾಗಿಲನ್ನು ತೆರೆದ. ನಾವು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಧ್ಯಾಪಕರು ಕೊನೆಗೂ ಬಂದರು.

    ತಮ್ಮ ಪರಿಚಯವನ್ನು ಅಪ್ಪ ಹೇಳಿಕೊಂಡರು. ಅನಂತರ ನನ್ನನ್ನು ಆಲಳ್ಳಿ ಶಾಲೆಗೆ ಸೇರಿಸುವ ಪ್ರಕ್ರಿಯೆ ವಿದ್ಯುಕ್ತವಾಗಿ ನಡೆಯಿತು. ಅಪ್ಪ ನನ್ನನ್ನು ಅಲ್ಲಿಯೇ ಬಿಟ್ಟು ಮನೆಗೆ ಹೊರಟು ಹೋದರು.

    0 Responses to “ನೆನಪಿನಂಗಳದಲ್ಲಿ ಆಲಳ್ಳಿ ಶಾಲೆ . . .”

    Subscribe