Sunday, August 22, 2010

0

ಆಸ್ಪತ್ರೆಯ ದಿನಚರಿ

  • Sunday, August 22, 2010
  • ಡಾ.ಶ್ರೀಧರ ಎಚ್.ಜಿ.
  • Share
  • ನನ್ನ ನೆನಪಿನಂತೆ ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರಿನಲ್ಲಿ ಆರಂಭವಾಗಿ ಸುಮಾರು ಹನ್ನೆರಡು ವರ್ಷವಾಗಿರಬೇಕು. ಪೇಟೆಗೆ ತುಂಬಾ ಹತ್ತಿರವಾಗಿದ್ದರೂ ಹಸಿರಿನ ನಡುವೆ ಇದೆ. ಹಿತಕರವಾದ ವಾತಾವರಣ. ಬಂದು ಹೋಗುವ ವಾಹನದ ಸದ್ದನ್ನು ಹೊರತುಪಡಿಸಿದರೆ ಮೌನವೇ ಅಲ್ಲಿನ ಮಾತು. ಇಲ್ಲಿನ ವ್ಯವಸ್ಥೆ ಮತ್ತು ಸೇವೆಯ ಬಗೆಗೆ ಒಂದೆರಡು ಮಾತುಗಳನ್ನು ಹೇಳದಿದ್ದರೆ ಲೋಪವಾಗುತ್ತದೆ.

    ಆಸ್ಪತ್ರೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಡಾ. ರಾಜೇಶ್ವರಿ ಪಡಿವಾಳ್ ಸ್ವತ: ವೈದ್ಯರು. ಅವರಿಗೆ ರೋಗಿಗಳ ಮನೋಧರ್ಮದ ಅರಿವಿದೆ. ಪ್ರತಿದಿನ ಮುಂಜಾನೆ ಸುಮಾರು ೬.೩೦ ರಿಂದ ೭ ಗಂಟೆಯ ನಡುವೆ ಅವರು ಬಹುತೇಕ ಎಲ್ಲಾ ಕೊಠಡಿಗಳಿಗೂ ಭೇಟಿ ನೀಡಿ ರೋಗಿಗಳ ಕುಶಲವನ್ನು ವಿಚಾರಿಸುವುದು ನನ್ನ ಗಮನ ಸೆಳೆಯಿತು. ಸೌಲಭ್ಯದ ದೃಷ್ಟಿಯಿಂದ ನಮ್ಮ ಅಗತ್ಯಗಳನ್ನು ಅವರಿಗೆ ತಿಳಿಸಲು ಇದರಿಂದ ಸಹಾಯಕ. ನನ್ನ ಕೊಠಡಿಯಲ್ಲಿ ಒಂದು ಟ್ಯೂಬ್ ಲೈಟ್ ಇತ್ತು. ಅದರೊಂದಿಗೆ ಇರುವ ಇನ್ನೊಂದು ಡಿಮ್ ಲೈಟ್‌ನ ಬಲ್ಪ್ ಇರಲಿಲ್ಲ. ಶೌಚಾಲಯದಲ್ಲಿಯೂ ಇದೇ ಸ್ಥಿತಿ. ಸಹಜವಾದ ಬೆಳಕಿಲ್ಲ. ಬಲ್ಪ್ ಇರಲಿಲ್ಲ. ನಾನು ಆಸ್ಪತ್ರೆಗೆ ಸೇರಿದ ದಿನ ಇದನ್ನು ಗಮನಿಸಿ ನನ್ನ ಕೊಠಡಿಗೆ ಬರುವ ನರ್ಸ್‌ರಲ್ಲಿ ಹೇಳಿದೆ. ನಾನು ಹೇಳಿದ್ದು ಮಾತ್ರ. ರಾತ್ರಿ ಸಂಜೆ ೭ ಗಂಟೆಯಾದರೂ ವ್ಯವಸ್ಥೆಯಾಗಲಿಲ್ಲ. ಇಂತಹ ಹೊತ್ತಿನಲ್ಲಿ ಡಾ. ರಾಜೇಶ್ವರಿಯವರು ನನ್ನ ಕೊಠಡಿಗೆ ಬಂದರು. ಮೂಲಭೂತ ಸೌಲಭ್ಯದಲ್ಲಿನ ಈ ಅವ್ಯವಸ್ಥೆಯನ್ನು ಅವರ ಗಮನಕ್ಕೆ ತಂದೆ. ತಕ್ಷಣ ಪ್ರತಿಕ್ರಿಸಿದ ಅವರು ೧೦ ನಿಮಿಷದಲ್ಲಿ ವ್ಯವಸ್ಥೆ ಮಾಡಿದರು. ಆದರೆ ನನಗೊಂದು ಕುತೂಹಲವಿತ್ತು. ಎರಡೂ ಕಡೆ ಹಾಳಾದ ಬಲ್ಪುಗಳಿರಲಿಲ್ಲ. ! ಹೀಗಾಗಿ ಬಲ್ಪ್ ಹಾಕಲು ಬಂದ ವ್ಯಕ್ತಿಯಲ್ಲಿ ಈ ಬಗೆಗೆ ವಿಚಾರಿಸಿದೆ. ಆತ ನೀಡಿದ ಉತ್ತರ, 'ಹೀಗೂ ಉಂಟೆ' ಎಂದು ನನ್ನಲ್ಲಿ ಆಶ್ಚರ್ಯ ಮೂಡಿಸಿತು.

    "ನೀವು ಹೇಳುವುದು ಸರಿ ಸಾರ್. ಹಳೆಯ ಬಲ್ಪ್ ಇರಬೇಕಿತ್ತು. ಆದರೆ ಇಲ್ಲ. ಏನು ಮಾಡುವುದು ಹೇಳಿ. ಆಸ್ಪತ್ರೆಗೆ ಬಂದವರು ಹೋಗುವಾಗ ಇಲ್ಲಿನ ನೆನಪಿಗೆ ಇರಲಿ ಎಂದು ಬಲ್ಪ್‌ನ್ನು ಹಿಡಿದುಕೊಂಡು ಹೋಗುತ್ತಾರೆ.! ನಾವಾದರೂ ರೋಗಿಗಳು ಹೋಗುವಾಗ ಎಷ್ಟೂಂತ ನೋಡುವುದು. ಬರುವ ರೋಗಿಗಳು ಪ್ರಾಮಾಣಿಕರಾಗಿರಬೇಕಲ್ವಾ ?" ಎಂದು ನನ್ನನ್ನೆ ಪ್ರಶ್ನಿಸಿದ. ಹೌದಲ್ಲ, ಹೋಗುವವರೆಲ್ಲ ಹೀಗೆ ಮಾಡಿದರೆ ಅವರಾದರೂ ಏನು ಮಾಡಲು ಸಾಧ್ಯ? ಎಂದು ಅನಿಸಿತು. ವಸತಿ ಗೃಹಗಳಲ್ಲಿ ಮಾಡಿದ ಹಾಗೆ ರೋಗಿಗಳು ಕೊಠಡಿಯನ್ನು ಖಾಲಿ ಮಾಡುವಾಗ ಪರಿಶೀಲಿಸಿದರೆ ಈ ಬಗೆಯ ಅಧ್ವಾನಗಳನ್ನು ತಪ್ಪಿಸಬಹುದೆನಿಸಿತು. ಬಲ್ಪ್ ಹಾಕಲು ಬಂದ ವ್ಯಕ್ತಿ ಒಂದು ಸ್ಟೂಲನ್ನು ತಂದಿದ್ದ. ಹೋಗುವಾಗ ನನ್ನ ಕೊಠಡಿಯಲ್ಲಿಯೇ ಬಿಟ್ಟು ಹೋದ. ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾಲಿಟ್ಟುಕೊಳ್ಳಲು ಇದು ಅನುಕೂಲಕರವಾಗಿತ್ತು. ಈ ಬಗೆಗೆ ಯಾರಿಂದಲೂ ಆಕ್ಷೇಪಗಳು ಬಂದಿಲ್ಲವೆಂಬುದು ಗಮನಾರ್ಹ.
    ಆಸ್ಪತ್ರೆಯಲ್ಲಿ ಇರುವಷ್ಟು ದಿನ ನಾನು ಮುಂಜಾನೆ ೬ ಗಂಟೆಯ ಹೊತ್ತಿಗೆ ಎದ್ದು ಮುಖತೊಳೆದಿರುತ್ತಿದ್ದೆ. ಸರಿಯಾಗಿ ೬.೩೦ರ ಹೊತ್ತಿಗೆ ಬಿ.ಪಿ. ತಪಾಸಣೆಗೆ ಇಬ್ಬರು ಸೋದರಿಯರು ಬರುತ್ತಿದ್ದರು. ಇವರು ಬಂದು ಹೋಗಿ ೫ ರಿಂದ ೧೦ ನಿಮಿಷದಲ್ಲಿ ಇಂಜಕ್ಷನ್ ಕೊಡುವವರು ಬರುತ್ತಿದ್ದರು. ನನಗೆ ಎರಡು ನಮೂನೆಯ ಇಂಜಕ್ಷನ್ ಕೊಡುತ್ತಿದ್ದರು. ಅದರಲ್ಲಿ ಒಂದು ವಿಪರೀತ ನೋವು ಕೊಡುತ್ತಿತ್ತು. ಮತ್ತೊಂದರಲ್ಲಿ ಅಷ್ಟಾಗಿ ನೋವಾಗುತ್ತಿರಲಿಲ್ಲ. ಅದು ಇಂಜಕ್ಷನ್ ಕೊಡುವವರ ಸಮಸ್ಯೆಯಲ್ಲ. ಇಂಜಕ್ಷನ್‌ನ ಮಹಿಮೆ ಹಾಗಿತ್ತು. ಹೀಗಾಗಿ ನಾನು ಅವರಲ್ಲಿ ಸ್ವಲ್ಪ ನಿಧಾನವಾಗಿ ಕೊಡಿ. ಅರ್ಧ ಕೊಟ್ಟಾದ ಮೇಲೆ ತುಸು ನಿಲ್ಲಿಸಿ ಕೊಡಲು ಹೇಳುತ್ತಿದ್ದೆ. ನನ್ನ ಮಾತುಗಳನ್ನು ಅವರು ಪಾಲಿಸುತ್ತಿದ್ದರು. ಇಂಜಕ್ಷನ್ ಕೊಡುವಾಗ ನನ್ನ ಅಧ್ಯಾಪಕನ ಬುದ್ದಿ ಜಾಗೃತವಾಗುತ್ತಿತ್ತು. ಆ ಸೋದರಿಯರ ಶಿಕ್ಷಣ, ಊರು, ಮನೆ, ಈ ವೃತ್ತಿಯ ಅನುಭವ - ಹೀಗೆ ನಾನು ಅವರನ್ನು ಮಾತನಾಡಿಸುತ್ತಿದ್ದೆ. ನನ್ನ ಕೊಠಡಿಗೆ ಬಂದವರೆಲ್ಲರೂ ಬೇರೆ ಬೇರೆ ನರ್ಸಿಂಗ್ ಕಾಲೇಜುಗಳಲ್ಲಿ ತರಬೇತಿಯನ್ನು ಪಡೆದವರು. ಅವರ ತಂಡದಲ್ಲಿ ಒಬ್ಬ ಸೋದರನಿರುವುದು ನನ್ನ ಕುತೂಹಲಕ್ಕೆ ಕಾರಣವಾಗಿತ್ತು. ಇಂಜಕ್ಷನ್ ಕೊಟ್ಟ ನಂತರ ತೆಗೆದುಕೊಳ್ಳ ಬೇಕಾದ ಮಾತ್ರೆಯನ್ನು ಕ್ರಮವತ್ತಾಗಿ ಇಟ್ಟು ಹೋಗುತ್ತಿದ್ದರು.

    ಮೊದಲ ದಿನ ಎಡಗೈಗೆ ಇಂಜಕ್ಷನ್ ಕೊಡಲೆಂದು ಹಾಕಿದ ಕ್ಯಾನಲ್, ಮೂರು ದಿನವಾಗುವಾಗ ವಿಪರೀತ ನೋವು ನೀಡಲು ಆರಂಭಿಸಿತು. ಹೀಗಾಗಿ ಅದನ್ನು ತೆಗೆದು ಇನ್ನೊಂದು ಕೈಗೆ ಹಾಕುವುದಾಗಿ ಹೇಳಿದರು. ಆಗ ನನಗನ್ನಿಸಿತು. "ಒಂದು ಕೈ ಈಗಾಗಲೇ ಹಾಕಿದ ಕ್ಯಾನಲ್‌ನಿಂದ ಸಾಕಷ್ಟು ತೊಂದರೆಗೆ ಒಳಗಾಗಿದೆ. ಇನ್ನೊಂದು ಕೈಗೆ ಹಾಕಿದರೆ ಅದೂ ಸಹ ನೋವಿನಿಂದ ನಿರುಪಯುಕ್ತವಾದೀತು ಎಂಬ ಆಲೋಚನೆ ಬಂದು ಅದೇ ಕೈನಲ್ಲಿ ಇನ್ನೊಂದು ಬದಿಗೆ ಹಾಕಲು ಸೂಚಿಸಿದೆ. ಇದರಿಂದಾಗಿ ನನ್ನ ಇನ್ನೊಂದು ಕೈನಲ್ಲಿ ನನ್ನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಆಗುತ್ತದಲ್ವ ?" ಎಂದೆ. ಬಂದವರಿಗೆ ಈ ಬಗೆಯ ಪ್ರಶ್ನೆ ಹೊಸದಾಗಿತ್ತು. ಅವರು ತುಸು ಯೋಚಿಸಿದರು. ಅನಂತರ ಅವರಿಗೂ ನನ್ನ ಸಲಹೆ ಹೌದೆನಿಸಿ ಅದೇ ರೀತಿ ಮಾಡಿದರು. ಅದರಲ್ಲಿಯೂ ಕೊನೆಯ ದಿನ ನನ್ನ ಕ್ಯಾನಲ್ ತೆಗೆಯುವಾಗ ಅದಕ್ಕೆ ನೀರನ್ನು ಹಚ್ಚಿ ನನಗೆ ನೋವಾಗದ ಹಾಗೆ ನಿಧಾನವಾಗಿ ಬಿಡಿಸಿದರು. ಇಲ್ಲಿನ ಸಿಸ್ಟರ್‌ಗಳೆಲ್ಲರೂ (ಸೋದರಿಯರು) ಅತ್ಯಂತ ತಾಳ್ಮೆಯಿಂದ, ಸಮಾಧಾನ ಚಿತ್ತದಿಂದ ನನ್ನಲ್ಲಿ ವ್ಯವಹರಿಸಿದ್ದು ಅತ್ಯಂತ ಸಂತೋಷವನ್ನು ನೀಡಿದ ಸಂಗತಿ. ಇದನ್ನು ಹೇಳುವುದಕ್ಕೆ ಕಾರಣ, ಕೆಲವೆಡೆ ಸಿಸ್ಟ್‌ರ್‌ಗಳು ಅತ್ಯಂತ ಕೆಟ್ಟದಾಗಿ ವರ್ತಿಸಿರುವುದನ್ನು ನಾನು ನೋಡಿದ್ದೇನೆ.

    ನನಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ನನ್ನಲ್ಲಿ ವಿಶ್ವಾಸ ತೋರಿಸಿದ್ದನ್ನು ಈಗಾಗಲೇ ಹೇಳಿದ್ದೇನೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಲ್ಲಿ ಒಬ್ಬರಾದ ಡಾ. ಪ್ರದೀಪರು ವಿದೇಶಕ್ಕೆ ಹೋಗಿದ್ದರು. ಆ ದಿನಗಳಲ್ಲಿ ಪ್ರತಿ ದಿನ ಡಾ. ಸುರೇಶ್ ಪುತ್ತೂರಾಯರು ಬಂದು ಪರಿಶೀಲಿಸಿ ಸೂಕ್ತ ಔಷಧಗಳನ್ನು ನೀಡುತ್ತಿದ್ದರು. ಅದೇ ರೀತಿ ಡಾ. ಅರವಿಂದರು ಬೇರೆ ಊರಿನವರಾದರೂ ಎರಡು ದಿನಕ್ಕೊಮ್ಮೆ ಬಂದು ನನ್ನ ಗಾಯದ ಸ್ಥಿತಿಯನ್ನು ಪರಿಶೀಲಿಸುತ್ತಿದ್ದರು. ಒಂದು ದಿನವಂತೂ ರಾತ್ರಿ ಸುಮಾರು ೧೦ ಗಂಟೆಯ ಸುಮಾರಿಗೆ ಬಂದು ಪರಿಶೀಲನೆ ನಡೆಸಿದ್ದು, ಅವರಲ್ಲಿದ್ದ ನನ್ನ ಗೌರವವನ್ನು ಇಮ್ಮಡಿಗೊಳಿಸಿದೆ.

    ಮುಂಜಾನೆ ಸೋದರಿಯರು ಇಂಜಕ್ಷನ್ ಕೊಟ್ಟು ಹೋದ ಕೆಲವೇ ಕ್ಷಣದಲ್ಲಿ ಕಸ ಗುಡಿಸಿ ಶುಚಿಗೊಳಿಸಲು ಬರುತ್ತಿದ್ದರು. ಇಲ್ಲಿಗೆ ಮುಂಜಾನೆಯ ಒಂದು ಹಂತ ಮುಗಿಯುತ್ತಿತ್ತು. ಮಧ್ಯಾಹ್ನ ಮತ್ತು ಸಂಜೆ ಇದರ ಪುನರಾವರ್ತನೆ. ಆದರೆ ಕ್ಯಾಂಟಿನ್‌ನ ಊಟ ಮತ್ತು ಉಪಾಹಾರ ಮಾತ್ರ ನನಗೆ ಸಮಾಧಾನ ನೀಡಲಿಲ್ಲ. ಅನಿವಾರ್ಯತೆಗೆ ಆಗಬಹುದಷ್ಟೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗೆಗೆ ಮರುಚಿಂತನೆ ಮಾಡುವುದು ಒಳಿತು. ಅಲ್ಲಿರುವ ರೋಗಿಗಳಲ್ಲದೆ ಸಿಸ್ಟರ್ ಗಳು ಇದನ್ನೇ ಅವಲಂಬಿಸಿರುವುದರಿಂದ ಇದರ ಗುಣಮಟ್ಟವನ್ನು ಹೆಚ್ಚಿಸುವುದರ ಕಡೆಗೆ ಯೋಚಿಸಬೇಕು.

    ಯಥಾಪ್ರಕಾರ ಆ ದಿನಗಳಲ್ಲಿ ಕರೆಂಟಿನ ಕಣ್ಣಾಮುಚ್ಚಾಲೆ ಸಾಕಷ್ಟಿತ್ತು. ಆದರೆ ಕರೆಂಟು ಹೋದ ಒಂದೆರಡು ನಿಮಿಷದಲ್ಲಿ ಜನರೇಟರ್ ಹಾಕುತ್ತಿದ್ದರು. ಹೆಲೆಕಾಪ್ಟರ್ ಹೋದ ಹಾಗೆ ಅದರ ಶಬ್ಬ ನನ್ನ ಕೊಠಡಿಗೆ ಕೇಳುತ್ತಿತ್ತು. ಈಗ ಬರುತ್ತದೆ. . . . ಈಗ ಬರುತ್ತದೆ . . . ಎಂದು ಕಾಯುತ್ತಿರಲಿಲ್ಲ. ನನಗೆ ಆಪರೇಶನ್ ಮಾಡುವಾಗಲೂ ಜನರೇಟರ್ ಹಾಕಿದ್ದರು. ಕರೆಂಟನ್ನು ನಂಬಿ ಯಾವುದೇ ಆಪರೇಶನ್ ಮಾಡಲು ಹೊರಟರೆ ರೋಗಿಯ ಪರಿಸ್ಥಿತಿ ಹೇಳಲಾಗದು. ಪರ್ಯಾಯ ವ್ಯವಸ್ಥೆಯನ್ನು ಇಟ್ಟುಕೊಳ್ಳದಿದ್ದರೆ ಆಸ್ಪತ್ರೆಯಲ್ಲಿ ಎಲ್ಲವೂ ಅಯೋಮಯವಾದೀತು.

    ನಾನು ಆಸ್ಪತ್ರೆಯಲ್ಲಿ ಇದ್ದ ದಿನಗಳಲ್ಲಿ ನನ್ನ ಅನೇಕ ವಿದ್ಯಾರ್ಥಿಗಳು, ಉಪನ್ಯಾಸಕ ಮಿತ್ರರು, ಗೆಳೆಯರು ಬಂದು ನಾನು ಬಿದ್ದ ಕಥೆಯನ್ನು ಸಮಾಧಾನ ಚಿತ್ತದಿಂದ ಕೇಳಿದ್ದಾರೆ. ಬಂದವರೆಲ್ಲ 'ಇದು ಹೇಗಾಯ್ತು' ಎಂದು ಕೇಳುವುದು, ನಾನು ಬೇಸರವಿಲ್ಲದೆ ಹೇಳಿದ್ದನ್ನೆ ಹೇಳುವುದು ನಡೆದಿತ್ತು. ಬಂದವರಿಗೆ ನನ್ನ ಕಥೆ ಹೊಸದು. ಹೀಗಾಗಿ ಅತ್ಯಂತ ಆಸಕ್ತಿಂದ ಕೇಳುತ್ತಿದ್ದರು. ಅದೊಂದು ದಿನ ಸಾಮಾನ್ಯವಾಗಿ ಅಪಘಾತಕ್ಕೆ ಕಾರಣವಾಗುವ ಅಂಶಗಳ ಕಡೆಗೆ ಯೋಚಿಸತೊಡಗಿದೆ. ಆಸ್ಪತ್ರೆಯ ಏಕಾಂತದಲ್ಲಿ ನನ್ನ ಮನಸ್ಸು ಹುಚ್ಚು ಕುದುರೆಯಂತೆ ಓಡುತ್ತಿತ್ತು. ನೂರಾರು ಯೋಚನೆಗಳು, ನೆನಪುಗಳು ಕಾಡುತ್ತಿದ್ದವು.

    ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಸುವ ಶೋಕಿ ಕೆಲವರದು. ಅದರಲ್ಲಿಯೂ ತರುಣರಿಗೆ ಈ ಬಗೆಯ ಚಪಲ ಹೆಚ್ಚು. ಇದರ ಪರಿಣಾಮವಾಗಿ ಬದಿಯಲ್ಲಿ ಹೋಗುವ ಪಾದಚಾರಿಗಳೋ, ಜಾಗರೂಕತೆಯಲ್ಲಿ ಹೋಗುವ ವಾಹನ ಚಾಲಕರು ಬಲಿಪಶುವಾಗುವರು. ನನ್ನ ಅಪಘಾತದಲ್ಲಿ ಆದದ್ದೂ ಇದೇ. ಹಿಂದಿನಿಂದ ಬಂದ ಕಾರಿನ ಮಿತಿ ಮೀರಿದ ವೇಗ. ಇದರೊಂದಿಗೆ ತಿರುವು. ಚಾಲಕರಿಗೆ ನಿಯಂತ್ರಣ ತಪ್ಪಲು ಈ ಅಂಶ ಧಾರಾಳವಾಗಿ ಸಾಕು. ಇದರೊಂದಿಗೆ ಪರಮಾತ್ಮ ಒಳಗೆ ಸೇರಿದರೆ ಮುಗಿದೇ ಹೋತು. ಮತ್ತೆಲ್ಲ ಅವನಾಡಿಸಿದಂಗೆ ಅಲ್ಲವೇ ?

    ಮತ್ತೆ ಕೆಲವರದು ಇನ್ನೊಬ್ಬರನ್ನು ಹಳ್ಳಕ್ಕೆ ತಳ್ಳಿ ಹೋಗುವ ಪ್ರವೃತ್ತಿ. ಶೀಘ್ರವಾಗಿ ನಿಗದಿತ ಸ್ಥಳವನ್ನು ಸೇರಬೇಕೆಂಬ ಅವಸರದಲ್ಲಿ ಸಹವರ್ತಿ ವಾಹನ ಚಾಲಕರನ್ನು ನಿರ್ಲಕ್ಷಿಸಿ ಮುನ್ನುಗ್ಗುವ ಆತುರ. ಇದರೊಂದಿಗೆ ರಾತ್ರಿಯಾದರೆ ದೊಡ್ಡ ವಾಹನದವರು ಲೈಟ್‌ನ್ನು ಡಿಮ್ ಮಾಡದಿರುವುದು. ಇದರಿಂದ ಕಣ್ಣು ಮಂಜಾಗುವುದು. ಎದುರಿಗೆ ಏನಿದೆ ಎಂದು ಕಾಣದೆ ಬೀಳುವ ಸಾಧ್ಯತೆ ಹೆಚ್ಚು. ಒಂದು ವಾಹನವನ್ನು ಹಿಂದಿಕ್ಕಿ ಮುಂದೆ ಸಾಗುವಾಗ ಎದುರಿನಿಂದ ವಾಹನ ಬರುತ್ತಿರುವುದು ಕಾಣುತ್ತಿದ್ದರು ಸಂದಿಯಲ್ಲಿ ನುಗ್ಗಿಸುವುದು.

    ಹದಗೆಟ್ಟ ರಸ್ತೆಗಳು ಇನ್ನೊಂದು ಕಾರಣ. ರಿಪೇರಿಯಾಗದೆ ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸುರಕ್ಷಿತವಾಗಿ ಹೋಗುವುದೇ ಒಂದು ಸವಾಲು. ಆದರೆ ನಾನು ಬಿದ್ದ ಮಿತ್ತೂರಿನಲ್ಲಿ ರಸ್ತೆ ಚೆನ್ನಾಗಿತ್ತು. ಆದರೆ ರಸ್ತೆ ಚೆನ್ನಾಗಿದ್ದರೆ ವಾಹನವನ್ನು ಮತ್ತಷ್ಟು ವೇಗವಾಗಿ ಓಡಿಸಲು ಮನಸ್ಸು ಹಾತೊರೆಯುವುದು. ಇದರೊಂದಿಗೆ ಲೋಕೋಪಯೋಗಿ ಇಲಾಖೆಯ ಪುಕ್ಕಟೆ ಕೊಡುಗೆಯನ್ನೂ ಇದರೊಂದಿಗೆ ಸೇರಿಸಬೇಕು. ರಸ್ತೆ ಹಾಳಾದ ತಕ್ಷಣ ಡಾಮರು ಹಾಕುವುದು ಸರಿ. ಹೀಗೆ ನಿರಂತರವಾಗಿ ಡಾಮರು ಹಾಕುವುದರಿಂದ ರಸ್ತೆ ಮತ್ತು ನೆಲದ ನಡುವೆ ಅಂತರ ಹೆಚ್ಚಾಗುತ್ತದೆ. ಇದು ದ್ವಿಚಕ್ರ ಸವಾರರಿಗೆ ಮೃತ್ಯು ಸ್ವರೂಪಿ. ನಾನು ಬಿದ್ದ ಸ್ಥಳದಲ್ಲಿ ರಸ್ತೆ ಮತ್ತು ಮಣ್ಣಿನ ನೆಲದ ನಡುವೆ ಸುಮಾರು ಒಂದು ಅಡಿಯಷ್ಟು ಅಂತರವಿತ್ತು. ಇಳಿಸುವಾಗ ಆಯತಪ್ಪಿ ಬೀಳಲು ಈ ಅಂತರ ಧಾರಾಳ ಸಾಕು. ಹೀಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರತೀ ಸಲ ಅಪಘಾತವಾದಾಗ ಇವುಗಳಲ್ಲಿ ಒಂದಾದರೂ ಕಾರಣ ಹೊಂದಿಕೆಯಾಗುತ್ತದೆ. ವಿಮಾನಗಳಲ್ಲಿ ಇರುವಂತೆ ನಾಲ್ಕುಚಕ್ರದ ವಾಹನಗಳಿಗೂ ಬ್ಲಾಕ್ ಬಾಕ್ಸ್ ಅಳವಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಯಾವುದನ್ನೂ ಅಳವಡಿಸಿದರೇನು? ವಾಹನಚಲಾಸುವ ವ್ಯಕ್ತಿಗೆ ಇನ್ನೊಬ್ಬರ ಬಗೆಗೆ, ಅದಕ್ಕಿಂತ ಹೆಚ್ಚಾಗಿ ತನ್ನ ಬಗೆಗೆ, ತನ್ನನ್ನು ನಂಬಿ ಬದುಕುತ್ತಿರುವ ಕುಟುಂಬದ ಬಗೆಗೆ ಒಳಮನಸ್ಸಿನಲ್ಲಿ ತುಡಿತವಿರಬೇಕು. ಆಗ ಮಾತ್ರ ವೇಗಕ್ಕೊಂದು ಮಿತಿ ಬರಲು ಸಾಧ್ಯವಾಗಬಹುದು.

    ಮೇ ೩೦ ರಂದು ಎಕ್ಸ್‌ರೇ ತೆಗೆದು ಕಾಲನ್ನು ಪರಿಶೀಲಿಸಿದ ಡಾ. ಅರವಿಂದರು ಎಲ್ಲವೂ ಸರಿಯಾಗಿದೆ ಎಂದು ಸೂಚಿಸಿದರು. ಅಲ್ಲದೆ ಕಾಲಿನಲ್ಲಿ ಸ್ಕ್ರೂ ಇರುವುದನ್ನು ತೋರಿಸಿ ಅದನ್ನು ಹಾಕಿದ ವಿಧಾನವನ್ನು ವಿವರಿಸಿದರು.

    ದಿನಾಂಕ ೧.೬.೨೦೧೦ರಂದು ನನ್ನ ಕಾಲನ್ನು ಡಾ. ಅರವಿಂದರು ಮತ್ತೊಮ್ಮೆ ಪರಿಶೀಲಿಸಿದರು. ನಾನು ಅಡಿ ಮುಖವಾಗಿ ಮಲಗಿದ್ದೆ. ಶಸ್ತ್ರಕ್ರಿಯೆ ಆದ ಜಾಗದಲ್ಲಿ ಉರಿಯುತ್ತಿತ್ತು. ಗಾಯವನ್ನು ಶುಚಿಗೊಳಿಸುತ್ತಿದ್ದೇವೆ ಎಂದರು. ನಿಜವಾಗಿ ಹೊಲಿಗೆ ಬಿಚ್ಚಿದ್ದರಿಂದ ಉರಿಯುತ್ತಿತ್ತೆಂದು ವೈದ್ಯರು ಕೊನೆಯಲ್ಲಿ ಹೇಳಿದ ಮೇಲೆ ಗೊತ್ತಾಯಿತು. ಅಲ್ಲದೆ ಮರುದಿನ ಮನೆಗೆ ಹೋಗಬಹುದೆಂಬ ಶುಭವಾರ್ತೆಯನ್ನು ಅವರು ಹೇಳಿದರು. ನನಗೆ ಅವತ್ತೇ ರಾತ್ರಿ ಹೊರಡುವಷ್ಟು ಉತ್ಸಾಹ ಬಂದಿತ್ತು. ಆದರೆ ಆಗಲೇ ಕತ್ತಲಾದ್ದರಿಂದ ಮರುದಿನ ಹೋಗಲು ಸೂಚಿಸಿದರು.

    ಮುಂದಿನ ಭಾಗದಲ್ಲಿ ನಿರೀಕ್ಷಿಸಿ . . . ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ . . .

    0 Responses to “ಆಸ್ಪತ್ರೆಯ ದಿನಚರಿ”

    Subscribe