Sunday, August 8, 2010

2

ಆಪರೇಶನ್ ಆದ ಮೊದಲ ರಾತ್ರಿ !

 • Sunday, August 8, 2010
 • ಡಾ.ಶ್ರೀಧರ ಎಚ್.ಜಿ.
 • Share
 • ನನ್ನನ್ನು ಕೊಠಡಿಗೆ ತಂದು ಮಲಗಿಸಿದರು. ಅನಸ್ತೇಶಿಯಾದ ಪ್ರಭಾವ ಇರುವುದರಿಂದ ಕಾಲುಗಳು ನನ್ನ ಸ್ವಾಧೀನದಲ್ಲಿರಲಿಲ್ಲ. ವಿಪರೀತ ಭಾರ. ಕಬ್ಬಿಣದ ತೊಲೆಗಳಂತಿದ್ದವು. ೮ ಗಂಟೆಯ ನಂತರ ಸ್ವಲ್ಪ ನೀರು ಕುಡಿಯಿರಿ. ವಾಂತಿ ಆಗದಿದ್ದರೆ ಆಹಾರ ಸೇವಿಸಬಹುದು ಎಂದು ಸಿಸ್ಟರ್ ಹೇಳಿದರು. ಆಗಿನ್ನೂ ೬.೩೦ರ ಸಮಯ. ಇನ್ನೂ ಒಂದೂವರೆ ಗಂಟೆ ನೀರು ಕುಡಿಯದೆ ಇರಬೇಕಲ್ಲ ಎಂದು ತಳಮಳವಾಯಿತು. ವಿಪರೀತ ಬಾಯಾರಿಕೆ. ಸುಮಾರು ೭.೩೦ರ ಹೊತ್ತಿಗೆ ಒಂದು ಗುಟುಕು ನೀರನ್ನು ಧೈರ್ಯ ಮಾಡಿ ಕುಡಿದೆ. ದೇವರ ದಯೆ, ವಾಂತಿಯಾಗಲಿಲ್ಲ. ೮.೩೦ರ ಹೊತ್ತಿಗೆ ಮನೆಯಿಂದ ತಂದ ಗಂಜಿಯನ್ನು ಉಂಡು ಮಾತ್ರೆ ತಿಂದು ಮಲಗಿದೆ.

  ಹತ್ತು ಗಂಟೆಯ ಸಮಯ. ಅನಸ್ತೇಶಿಯಾದ ಪ್ರಭಾವ ಕಡಿಮೆಯಾಗತೊಡಗಿತು. ಕಾಲು ತನ್ನ ಇರುವಿಕೆಯನ್ನು ತೋರಿಸತೊಡಗಿತು. ಆಪರೇಶನ್ ಮಾಡಿದ ಜಾಗದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿತು. ೧೦.೩೦ರ ಹೊತ್ತಿಗೆ ಅಸಾಧ್ಯ ನೋವು ಕಾಣಿಸಿಕೊಂಡಿತು. ೧೧ರ ವೇಳೆಗೆ ಮೈ ನೋವಿನ ಹೊಡೆತಕ್ಕೆ ತತ್ತರಿಸಿ ನಡುಗತೊಡಗಿತು. ಜ್ವರವೂ ಆರಂಭವಾತು. ನಾನು ಕೈಗೆಟುಕುವಂತಿದ್ದ ಬೆಲ್ ಒತ್ತಿದೆ. ಒಂದೆರಡು ನಿಮಿಷದಲ್ಲಿ ಬಂದ ಸಿಸ್ಟರ್ ನನಗೆ ನೋವಿನ ಉಪಶಮನಕ್ಕೆ ಒಂದು ಇಂಜಕ್ಷನ್ ಕೊಟ್ಟು, ಜ್ವರಕ್ಕೆ ಮಾತ್ರೆಯನ್ನು ಕೊಟ್ಟು ಹಿಂದಿರುಗಿದರು. ಇದರ ಪರಿಣಾಮವಾಗಿ ಅರ್ಧ ಗಂಟೆಯಲ್ಲಿ ಎಲ್ಲವೂ ಹತೋಟಿಗೆ ಬಂತು ನಿಧಾನವಾಗಿ ನಿದ್ರೆ ಆವರಿಸಿತು.

  ರಾತ್ರಿ ಸುಮಾರು ಒಂದು ಗಂಟೆಗೆ ಎಚ್ಚರವಾತು. ಅಂದು ರಾತ್ರಿ ನನ್ನೊಂದಿಗೆ ಭಾವ ಇದ್ದರು. ನನಗೆ ಎದ್ದು ಹೋಗುವುದು ತುಸು ತ್ರಾಸದಾಯಕವಾಗಿತ್ತು. ಅನಸ್ತೇಶಿಯಾದ ಪ್ರಭಾವದಿಂದ ಶರೀರವೂ ಹಿಡಿತಕ್ಕೆ ಬಂದಿರಲಿಲ್ಲ. ಹೀಗಾಗಿ ಮೂತ್ರ ಬಂದರೆ ಇರಲಿ ಎಂದು ಆಸ್ಪತ್ರೆಯವರು ಕೊಡುವ ಸಾಮಗಿಯನ್ನು ಕೈಯ್ಯಳತೆಯಲ್ಲಿ ಇಟ್ಟುಕೊಂಡು ಮಲಗಿದ್ದೆ. ಹೊಟ್ಟೆಯಲ್ಲಿ ವಿಚಿತ್ರವಾದ ನೋವಿನ ಅನುಭವ.! ಏನಿರಬಹುದೆಂದು ಸ್ವಲ್ಪ ಹೊತ್ತು ಚಿಂತಿಸಿದೆ. ಹಸಿವಲ್ಲ. ಹಾಗೆ ನೋಡಿದರೆ ಹೊಟ್ಟೆ ನೋವೂ ಅಲ್ಲ. ಮೂತ್ರದ ಒತ್ತಡ ! ಸರಿ, ಅಲ್ಲಿಯೇ ಇತ್ತಲ್ಲ ಸಾಮಗ್ರಿ. ಮೆಲ್ಲನೆ ಎದ್ದೆ. ಅದನ್ನಿಟ್ಟುಕೊಂಡು ಕುಳಿತೆ. ಮೂತ್ರ ಬರುವುದಿಲ್ಲ. ಹೊಟ್ಟೆ ನೋವು ಕಡಿಮೆಯಾಗುವುದೂ ಇಲ್ಲ. ಸರಿ, ಎದ್ದು ಶೌಚಾಲಯಕ್ಕೆ ಹೋಗೋಣವೆಂದು ಮೆಲ್ಲನೆ ನಿಂತೆ. ಗಾಳಿ ಬೀಸುವಾಗ ಹಿಡಿತಕ್ಕೆ ಸಿಕ್ಕದೆ ದೋಣಿ ಅಲ್ಲಾಡಿದಂತೆ ದೇಹ ಓಲಾಡಿತು. ಶೌಚಾಲಯಕ್ಕೆ ಹೋಗುವುದು ಸುರಕ್ಷಿತವಲ್ಲ ಎಂದು ಹಾಗೇ ಕುಳಿತೆ. ಕ್ಷಣದಿಂದ ಕ್ಷಣಕ್ಕೆ ನೋವು ಹೆಚ್ಚತೊಡಗಿತು. ಭಾವನನ್ನು ಎಬ್ಬಿಸಿ ನನ್ನನ್ನು ಶೌಚಾಲಯಕ್ಕೆ ಬಿಡಲು ಹೇಳಿದೆ. ಕಮೋಡಿನ ಮೇಲೆ ಸುರಕ್ಷಿತವಾಗಿ ಕುಳಿತೆ. ಹಾಗೇ ಸುಮಾರು ಕಾಲು ಗಂಟೆಯಾಗಿರಬಹುದು. ಸ್ವಲ್ಪ ಮೂತ್ರ ವಿಸರ್ಜನೆ ಮಾಡಿ ಮೆಲ್ಲನೆ ಬಂದು ಮಲಗಿದೆ.

  ಕಾಲಿನಲ್ಲಿ ಸೆಳೆತವಿತ್ತು. ನಿದ್ರೆ ಬರುವ ಛಾನ್ಸೇ ಇರಲಿಲ್ಲ. ಹೀಗಾಗಲು ಕಾರಣವೇನು ಎಂದು ಯೋಚನೆಗೆ ತೊಡಗಿದೆ. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದವನಿಗೆ ಮತ್ತೇನು ಕೆಲಸ. ನಿಧಾನವಾಗಿ ನನಗೇ ಅರ್ಧರಾತ್ರಿಯಲ್ಲಿ ಜ್ಞಾನೋದಯವಾತು ! ಇದೆಲ್ಲ ಅನಸ್ತೇಶಿಯಾದ ಪ್ರಭಾವ ! ನನಗೆ ಸೊಂಟದ ಕೆಳಗೆ ಕ್ರಿಯಾಶೀಲವಾಗುವಂತೆ ಅನಸ್ತೇಶಿಯಾ ಕೊಟ್ಟ್ಟಿದ್ದರು. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ 'ಲೋಕಲ್ ಅನಸ್ತೇಶಿಯಾ' ಎಂದು ಹೆಸರು. ಹೀಗಾಗಿ ದೇಹದ ಮೇಲ್ಬಾಗದಲ್ಲಿ ನಾನು ಸಂಪೂರ್ಣ ಸರಿಯಾಗಿದ್ದೆ. ದೇಹದ ಕೆಳಭಾಗ ಅದರ ಪ್ರಭಾವಲಯ. ಕಾಲನ್ನು ಮೆಲ್ಲನೆ ಎತ್ತಿ ನೋಡಿದೆ. ಸಂಶಯವೇ ಇಲ್ಲ. ಕಾಲು ಇನ್ನೂ ಭಾರವಾಗಿತ್ತು. ಹೀಗಾಗಿ ಆ ಭಾಗ ನನ್ನ ಹಿಡಿತಕ್ಕೆ ಇನ್ನೂ ಬಂದಿಲ್ಲ ಎಂಬುದು ಖಚಿತವಾಯ್ತು. ಬೆಳಗಾಗುವಾಗ ಸಣ್ಣದಾಗಿ ತಲೆನೋವುತ್ತು. ಮುಂಜಾನೆ ಬಂದ ಡಾ. ಪುತ್ತೂರಾಯರು "ಇದು ಅನಸ್ತೇಶಿಯಾದ ಪ್ರಭಾವ. ಇನ್ನೊಂದೆರಡು ದಿನವಿರುತ್ತದೆ. ತಲೆ ದಿಂಬನ್ನು ತೆಗೆದು ಮಲಗಿ ಬೇಗ ಸರಿಯಾಗುತ್ತದೆ" ಎಂದು ಸೂಚಿಸಿದರು.

  ಆಸ್ಪತ್ರೆಯಲ್ಲಿ ನನಗೆ ಸಿಕ್ಕಿದ ಕೊಠಡಿ ಸಂಖ್ಯೆ ೧೧೦. ನಾನು ಬಾಗಿಲಿಗೆ ಬೆನ್ನು ಹಾಕಿ ಮಲಗಿದರೆ ಕಿಟಕಿಯ ಮೂಲಕ ಹೊರಗಿನ ದೃಶ್ಯ ಕಾಣುತ್ತಿತ್ತು. ಎದುರಿಗೆ ಹಸಿರಿನಿಂದ ಕಂಗೊಳಿಸುತ್ತಿದ್ದ ಅಡಿಕೆ ತೋಟ, ಗಾಳಿ ಬೀಸಿದಾಗ ತೊನೆಯುವ ತೆಂಗಿನ ಮರಗಳು, ಹಾಗೆಯೇ ಆಸ್ಪತೆಗೆ ಬಂದು ಹೋಗುವ ವಾಹನಗಳು ಕಾಣುತ್ತಿದ್ದವು. ಮುಂಜಾನೆ ಎದ್ದ ತಕ್ಷಣ ಹಸಿರನ್ನು ನೋಡುತ್ತಾ ಒಂದಷ್ಟು ಹೊತ್ತು ಮಲಗುತ್ತಿದ್ದೆ. ದಕ್ಷಿಣ ಕನ್ನಡದಲ್ಲಿ ಸುರಿಯುವ ಮಳೆಯ ಸೊಬಗನ್ನು ಎಷ್ಟೋ ದಿನಗಳ ನಂತರ ಸರಿಯಾಗಿ ನೋಡಿದೆ.

  ಕೊಠಡಿಯ ಬಾಗಿಲಿಗೆ ಮುಖ ಹಾಕಿ ಮಲಗಿದರೆ ಕಾರಿಡಾರ್‌ನಲ್ಲಿ ಹೋಗಿಬರುವವರು ಕಾಣುತ್ತಿದ್ದರು. ನನ್ನ ಎದುರಿನ ಕೊಠಡಿಯಲ್ಲಿ ಒಬ್ಬರು ತುಸು ವಯಸ್ಸಾದ ಒಬ್ಬರು ಮಹಿಳೆ ಇದ್ದರು. ಅವರನ್ನು ನೋಡುವುದಕ್ಕೆ ವಿಪರೀತ ಜನ ಬರುತ್ತಿದ್ದರು. ಜನಕ್ಕಿಂತ ಹೆಚ್ಚಾಗಿ ಅವರು ಬರುವಾಗ ಮಾಡುತ್ತಿದ್ದ ಗದ್ದಲ, ಹಾಗೆಯೇ ಅವರೊಂದಿಗೆ ಬಂದ ಮಕ್ಕಳು ಮಾಡುತ್ತಿದ್ದ ಗಲಾಟೆ ಕಿರಿಕಿರಿಯಾಗುತ್ತಿತ್ತು. ಇದೇ ರೀತಿ ೧೧೦ರ ಕೊಠಡಿಯ ಕಿಟಕಿಯ ಹೊರಗೆ ಪೋರ್ಟಿಕೋದ ಹಾಗೆ ಒಂದಷ್ಟು ಖಾಲಿ ಜಾಗವಿದೆ. ಸಂಜೆಯ ಹೊತ್ತು ರೋಗಿಗಳಿಗೆ ಖುರ್ಚಿಹಾಕಿ ಕುಳಿತುಕೊಳ್ಳಲು ಹೇಳಿ ಮಾಡಿಸಿದ ಜಾಗ. ಅಲ್ಲಿ ಯಾರೂ ಕುಳಿತುಕೊಳ್ಳುತ್ತಿರಲಿಲ್ಲ ಎಂಬುದು ಬೇರೆ ಮಾತು. ಆದರೆ ೧೦೯ರ ಕೊಠಡಿಂದ ಅಲ್ಲಿಗೆ ಬರಲು ಬಾಗಿಲಿತ್ತು. ಪಕ್ಕದ ಕೊಠಡಿಗೆ ಬಂದವರು ಅಲ್ಲಿ ನಿಂತು ದೊಡ್ಡದಾಗಿ ಮೊಬೈಲ್‌ನಲ್ಲಿ ಮಾತನಾಡುವ ಕ್ರಮವಿತ್ತು. ಇದು ರಾತ್ರಿಯೂ ತುಂಬಾ ಹೊತ್ತಿನವರೆಗೆ ನಡೆಯುತ್ತಿತ್ತು. ಹೀಗಾಗಿ ನನಗೆ ಬೇಕೆನಿಸಿದಾಗ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಯೋಚನೆಯ ಲಹರಿ ತುಂಡಾಗುತ್ತಿತ್ತು.

  ಹೀಗಾಗಿ ಆಸ್ಪತ್ರೆಗೆ ರೋಗಿಗಳನ್ನು ನೋಡಲು ಬರುವ ಸಂದರ್ಶಕರು ಇನ್ನೊಬ್ಬರಿಗೆ ತೊಂದರೆಯಾಗದಂತೆ ವರ್ತಿಸುವುದನ್ನು ಮೊದಲು ಕಲಿಯಬೇಕು. ಸಂದರ್ಶಕರು ತುಂಬಾ ಮಾಡನಾಡುತ್ತಿದ್ದರೆ ಆಸ್ಪತ್ರೆಯ ಸಿಬ್ಬಂದಿಗಳು ಅಂತವರಿಗೆ ಸೌಜನ್ಯಯುತವಾಗಿ ಹೇಳುವುದು ಒಳ್ಳೆಯದು. ಕೊಠಡಿಯ ಒಳಗೆ ಮಾತನಾಡಿದರೆ ಪಕ್ಕದವರಿಗೆ ತೊಂದರೆಯಾಗುವುದಿಲ್ಲ ಎಂಬ ಪ್ರಾಥ"ಕ ಜ್ಞಾನ ಇಲ್ಲದವರಿಗೆ ಏನು ಮಾಡುವುದು? ಕೆಲವೊಮ್ಮೆ ಸಿಬ್ಬಂದಿಗಳಿಗೂ ಧರ್ಮ ಸಂಕಟವಾಗುತ್ತಿತ್ತು. ಇದು ನನ್ನ ಗಮನಕ್ಕೂ ಬಂದಿದೆ.

  ಮುಂದಿನ ಭಾಗ ಆಸ್ಪತ್ರೆಯ ದಿನಚರಿ . . .

  2 Responses to “ಆಪರೇಶನ್ ಆದ ಮೊದಲ ರಾತ್ರಿ !”

  Anonymous said...
  August 12, 2010 at 5:48 PM

  ಶ್ರೀಧರ್ ಅವರೆ,
  ನಿಮ್ಮ ಆಪರೇಶನ್ ಕೊಠಡಿಯ ಅನುಭವಗಳು ಆಸ್ಪತ್ರೆವಾಸದ ವಿವಿಧ ಮಗ್ಗುಲುಗಳನುಉ ಹೇಳುತ್ತವೆ. ನೀವುಇ ಬೇಗ ಮೊದಲಿನಂತೆ ಓಡಾಡುವಂತಾಗಲಿ ಅಂತ ನಮ್ಮೆಲ್ಲರ ಹಾರೈಕೆ. ನೋವಿನ ಅನುಭವವನ್ನು ಹೀಗೆ ಹಂಚಿಕೊಳ್ಳಲು ಸಾಹಿತ್ಯಿಕ ಹೃದಯ ಇದ್ದವರಿಗೆ ಮಾತ್ರ. ಶುಭಾಶಯಗಳು._ ಗಿರೀಶ .


  Anonymous said...
  August 18, 2010 at 6:12 PM

  eradane raatri bagge innu baredilla yaake? girisha


  Subscribe