Sunday, August 22, 2010

7

ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ ?

 • Sunday, August 22, 2010
 • ಡಾ.ಶ್ರೀಧರ ಎಚ್.ಜಿ.
 • Share
 • ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದವನಿಗೆ ಅಲ್ಲಿನ ಏಕಾಂತದಲ್ಲಿ ಚಿತ್ರ ವಿಚಿತ್ರ ಆಲೋಚನೆಗಳು ನೆನಪುಗಳು ಬರುತ್ತಿದ್ದವು. ಇಂತಹ ಒಂದು ಸಂದರ್ಭದಲ್ಲಿ ಪಕ್ಕನೆ ನಡೆದ ಈ ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಹೊಳೆದು ಹೋತು. ತುಸು ಹೊತ್ತಿನ ನಂತರ ಈ ಭಾವನೆ ಮತ್ತಷ್ಟು ಗಾಢವಾಗಿ ಕಾಡತೊಡಗಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ!.

  ಇಲ್ಲಿನ ನೆಹರು ನಗರದಲ್ಲಿ ನಾರಾಯಣ ಕಂಗಿಲ ಎಂಬ ಸ್ನೇಹಿತರಿದ್ದಾರೆ. ಅವರು ಬ್ಯಾಂಕಿನ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿಯನ್ನು ಪಡೆದವರು. ಸಾಹಿತ್ಯದಲ್ಲಿ ಅಭಿರುಚಿಯುಳ್ಳವರು. ಸ್ವತ: ಕಥೆ, ಕವನ, ನಾಟಕಗಳನ್ನು ಬರೆದವು. ಕೆ.ವಿ. ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಸುಬ್ರಾಯ ಚೊಕ್ಕಾಡಿ ಮೊದಲಾದವರೊಂದಿಗೆ ನವ್ಯೋತ್ತರದ ಕಾಲದಲ್ಲಿ ಸಾಕಷ್ಟು ಕೆಲಸ ಮಾಡಿದವರು. ಅವರೊಮ್ಮೆ ಮಾತನಾಡುತ್ತಾ ನಾಡಿ ಭವಿಷ್ಯದ ಬಗೆಬಗೆ ನನ್ನೊಂದಿಗೆ ಹೇಳಿದ್ದರು. ಅವರಿಗೆ ಅದರಲ್ಲಿ ತಕ್ಕಮಟ್ಟಿಗೆ ನಂಬಿಕೆತ್ತು. ಆದರೆ ನನಗೆ ಅದರ ತಲೆ ಬುಡ ಅರ್ಥವಾಗಿರಲಿಲ್ಲ. ಹೀಗಾಗಿ ಇನ್ನೊಮ್ಮೆ ನಾಡಿ ಭವಿಷ್ಯವನ್ನು ಕೇಳಲು ಹೋಗುವಾಗ ನಾನೂ ಬರುವುದಾಗಿ ತಿಳಿಸಿದೆ. ಸ್ವಲ್ಪ ದಿನದಲ್ಲಿಯೇ ಅವರೊಂದಿಗೆ ಹೋಗುವ ಅವಕಾಶವೂ ಒದಗಿಬಂತು. ಮಂಗಳೂರಿನ ಯಾವುದೋ ಮೂಲೆಯಲ್ಲಿ ನಾಡಿಭವಿಷ್ಯವನ್ನು ಹೇಳುವ ವ್ಯಕ್ತಿಯನ್ನು ಅವರು ಶೋಧಿಸಿದ್ದರು. ಆತನ ಹೆಸರು ಮಹೇಂದ್ರಸ್ವಾಮಿ ಎಂದು ನನ್ನ ನೆನಪು. ಮೂಲತ: ತಮಿಳು ನಾಡಿನ ವ್ಯಕ್ತಿ. ನಾವು ಆತನಲ್ಲಿಗೆ ತಲುಪುವಾಗ ಸುಮಾರು ಹನ್ನೊಂದು ಗಂಟೆಯಾಗಿತ್ತು. ನಮ್ಮನ್ನು ಒಂದು ಕೊಠಡಿಯಲ್ಲಿ ಕುಳ್ಳಿರಿಸಿದ. ಹತ್ತಾರು ದೈವಗಳ ಫೋಟೋಗಳು ಅಲ್ಲಿದ್ದವು. ತುಸು ಹೊತ್ತಿನಲ್ಲಿ ಬಂದ ಆತ ತಮಿಳಿನಲ್ಲಿ ಪ್ರಾರ್ಥನೆ ಮಾಡಿದ. ಅನಂತರ ನೇರವಾಗಿ ಒಳಗೆ ಹೋಗಿ ತಾಳೆಗರಿ ಪ್ರತಿಯೊಂದನ್ನು ತಂದು ಹರಡಿಕೊಂಡು ಕುಳಿತ. ಈ ಜ್ಯೋತಿಷ್ಯವನ್ನು ಅಗಸ್ತ್ಯರು ಬರೆದಿರುವರೆಂದು, ನಮ್ಮ ಹುಟ್ಟು ಎಂಬುದು ನೂರಾರು ವರ್ಷಗಳ ಹಿಂದೆಯೇ ನಿರ್ಧಾರಿತವಾದ ಸಂಗತಿ ಎಂದು ಆರಂಭದಲ್ಲಿ ಹೇಳಿದ. ತಾಳೆಯೋಲೆಯಲ್ಲಿ ಬರೆದಿರುವುದನ್ನು ಹೇಳುವುದಾಗಿ ಆತ ಆರಂಭಿಸಿದ.
  ನಾನು ಆತನಿಗೆ ನನ್ನ ಯಾವುದೇ ವಿವರವನ್ನು ಹೇಳಿರಲಿಲ್ಲ. ಆತನೇ ಒಂದೊಂದಾಗಿ ಹೇಳಲಾರಂಭಿಸಿದ. ಇಡಿಯಾಗಿ ನಮ್ಮ ಮಾತುಕತೆ ಪ್ರಶ್ನೋತ್ತರದ ಮಾದರಿಯಲ್ಲಿತ್ತು.

  ಆರಂಭದಲ್ಲಿ ನನ್ನ ಒಂದು ತಾಳೆಗರಿಯನ್ನು ಮಗುಚಿ ನನ್ನ ಹೆಸರನ್ನು ಹೇಳತೊಡಗಿದ. ಆರಂಭದಲ್ಲಿ ಹೇಳಿದ ನಾಲ್ಕಾರು ಹೆಸರುಗಳು ಹೊಂದಿಕೆಯಾಗಲಿಲ್ಲ. ಆತ ಓಲೆಗರಿಯನ್ನು ನೋಡಿ ಹೇಳುವ ವಿವರಗಳು ಪೂರ್ಣವಾಗಿ ಹೊಂದಿಕೆಯಾಗಬೇಕು. ಇಲ್ಲವಾದರೆ ಮುಂದಿನ ಓಲೆಗೆ ಹೋಗುತ್ತಿದ್ದ. ಕೆಲವಕ್ಕೆ ನನ್ನ ಹೆಸರು ಹೊಂದಿಕೆಯಾದರೆ ತಂದೆ, ತಾಯಿ, ಹೆಂಡತಿ, ತಮ್ಮ, ತಂಗಿ ಇತ್ಯಾದಿ ನನ್ನ ಕುಟುಂಬದ ವಿವರಗಳು ಹೊಂದಿಕೆಯಾಗುತ್ತಿರಲಿಲ್ಲ. ಹೀಗೆ ಸುಮಾರು ಅರ್ಧಮುಕ್ಕಾಲು ಗಂಟೆ ಕಳೆಯಿತು. ಕೊನೆಗೊಮ್ಮೆ ಆತ ಹೇಳುವ ಎಲ್ಲಾ ವಿವರಗಳು ನನ್ನ ಪ್ರವರದೊಂದಿಗೆ ಹೊಂದಿಕೆಯಾಗುವ ಓಲೆಯೊಂದು ಬಂತು !

  ಸುಮಾರು ನಾಲ್ಕೈದು ವರ್ಷದ ಹಿಂದೆ ನಾನು ಈ ಜ್ಯೋತಿಷ್ಯವನ್ನು ಕೇಳಲು ಹೋಗಿದ್ದು. ನಾನು ಸದ್ಯದಲ್ಲಿಯೇ ಹೊಸ ಮಾದರಿಯ ಹೊಸ ವಾಹನವನ್ನು ಖರೀದಿಸುವುದಾಗಿ ಹೇಳಿದ. ಅದಾಗಿ ತುಸು ಹೊತ್ತು ಆಲೋಚಿಸಿ ೪೬ನೆಯ ವಯಸ್ಸಿಗೆ ವಾಹನ ಅಪಘಾತವಾಗುತ್ತದೆ ಎಂದು ಸೂಚಿಸಿದ. ಇದರೊಂದಿಗೆ ಒಂದಿಷ್ಟು ಬೇರೆ ಸಂಗತಿಗಳನ್ನು ಹೇಳಿದ. ಆತ ಹೇಳಿದ ಮಾಹಿತಿಗಳು ನನ್ನನ್ನು ಗಲಿಬಿಲಿಗೊಳಿಸಿದವು. ಮಾತ್ರವಲ್ಲ ಆತ ಹೇಳಿದ ಸಂಗತಿಯನ್ನು ತಮಿಳಿನಲ್ಲಿ ಬರೆದು ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಡುವುದಾಗಿಯೂ ಹೇಳಿದ. ಇದೆಲ್ಲ ಆಗುವ ಹೋಗುವ ಕತೆಯಲ್ಲವೆಂದು ಮನಸ್ಸಿನಲ್ಲಿಯೇ ಅಂದುಕೊಂಡು ಬಂದೆ. ಹದಿನೈದು ದಿನಕ್ಕೆ ಒಂದು ನೋಟ್ ಬುಕ್ ಅಂಚೆಯಲ್ಲಿ ಬಂತು! ಅದರಲ್ಲಿ ತಮಿಳು ಮತ್ತು ಕನ್ನಡದಲ್ಲಿ ಬರೆದಿದ್ದ ಜ್ಯೋತಿಷ್ಯದ ಮಾಹಿತಿಗಳಿದ್ದವು. ಅನಂತರ ಈ ಸಂಗತಿಯನ್ನು ಅಲ್ಲಿಗೇ ಮರೆತುಬಿಟ್ಟೆ. ಇದಾಗಿ ಸ್ವಲ್ಪ ಸಮಯಕ್ಕೆ ಅದೇ ಆಗ ತಾನೆ ಮಾರುಕಟ್ಟೆಗೆ ಬಂದಿದ್ದ ಹೀರೋಹೊಂಡದವರ ಪ್ಲೆಜರ್ ವಾಹನವನ್ನು ಖರೀದಿ ಮಾಡಿದೆ. ಸತತವಾಗಿ ೪ ವರ್ಷ ಇದರಲ್ಲಿ ಓಡಾಡಿದೆ. ಒಂದೇ ಒಂದು ಸಣ್ಣ ಅಪಘಾತವಾಗಲಿಲ್ಲ. ವಾಹವನೂ ಹೊಸದೆಂಬಂತಿತ್ತು. ಮೊನ್ನೆ ಜೂನ್ ೧೨ಕ್ಕೆ ನನ್ನ ವಾಹನಕ್ಕೆ ೪ ವರ್ಷ ತುಂಬುವ ಸಂಭ್ರಮವಿತ್ತು. ಆದರೆ ಅದಾಗಲೇ ಇಲ್ಲ. . . .
  ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದವನಿಗೆ ಒಮ್ಮೆಲೆ ನಾಡಿಜ್ಯೋತಿಷ್ಯದ ನೆನಪಾಯಿತು. ವಿವರಗಳು ನೆನಪಾಗಲಿಲ್ಲ. ಮನೆಗೆ ದೂರವಾಣಿಯಲ್ಲಿ ಸಂಪರ್ಕಿಸಿ ಆತ ಕಳಿಸಿದ ನೋಟ್ ಪುಸ್ತಕವನ್ನು ಹುಡುಕಲು ಮಗ ಚಂದನ್‌ಗೆ ಹೇಳಿದೆ. ಆದರೆ ಆತ ಆಗಲೇ ಅದನ್ನು ಹುಡುಕಿ ಓದಿ ನೋಡಿದ್ದ. ೪೬ನೆಯ ವರ್ಷಕ್ಕೆ ವಾಹನ ಅಪಘಾತವಾಗುತ್ತದೆ ಎಂದು ಬರೆದಿದ್ದ! ನನಗೆ ಇದನ್ನು ಕೇಳಿ ಆಶ್ಚರ್ಯ ಮತ್ತು ವಿಸ್ಮಯ! ಇದನ್ನು ನಂಬುವುದೋ ಬಿಡುವುದೋ ಎಂಬ ಗೊಂದಲದ ನಡುವೆ ಇದೆಲ್ಲವೂ ಪೂರ್ವ ನಿಯೋಜಿತ ವಿಧಿ ಲಿಖಿತವೇ ಎಂಬ ಪ್ರಶ್ನೆ ಥಟ್ಟನೆ ಮನಸ್ಸಿಗೆ ಬಂತು.

  ಇದಕ್ಕೆ ಪೂರಕವಾಗಿ ಇನ್ನೊಂದು ಅಂಶ ನಿಧಾನವಾಗಿ ಆಕಾರ ಪಡೆಯತೊಡಗಿತು. ಈ ಅವಧಿಯಲ್ಲಿ ನಾನು ಕಾಲನ್ನು ನೇರವಾಗಿ ಇಟ್ಟುಕೊಳ್ಳಬೇಕಾಗಿತ್ತು ; ಬಗ್ಗಿಸುವಂತಿರಲಿಲ್ಲ. ಶೌಚಾಲಯದ ವ್ಯವಸ್ಥೆಗೆ ಇದರಿಂದ ತುಂಬಾ ತೊಂದರೆಯಾಗುತ್ತಿತ್ತು. ಬೀಳುವುದಕ್ಕೆ ಮುಂಚಿತವಾಗಿ ನಾಲ್ಕಾರು ತಿಂಗಳ ಹಿಂದೆ ಹೊಸದಾಗಿ ಆಂಗ್ಲೋ ಇಂಡಿಯನ್ ಕಮೋಡು ಇರುವ ಕೊಠಡಿಯೊಂದನ್ನು ಕಟ್ಟಿಸಿದ್ದೆ. ಇದು ಸಕಾಲದಲ್ಲಿ ಉಪಯೋಗಕ್ಕೆ ಬಂರುವಂತಾಯಿತು !

  ಮೇ ೧೩ ರಂದು ನಾನು ಈ ಸಲ ಊರಿಗೆ ಹೋಗಿದ್ದು. ಇದಕ್ಕೆ ಒಂದೆರಡು ದಿನ ಮುಂಚಿತವಾಗಿ ನಮ್ಮ ಮನೆಯ ಟಿ.ವಿ. ಹಾಲಿಗೆ ಬರೆಯಲೆಂದು ಟ್ರಾಲಿಯಂತಿರುವ ಒಂದು ಟೇಬಲ್ ತಂದು ಕಿಟಕಿಯ ಪಕ್ಕದಲ್ಲಿ ಹಾಕಿದ್ದೆ. ಇದು ಒಂದೆರಡು ವರ್ಷಗಳಿಂದ ಒಳಗಿನ ಕೊಠಡಿಯಲ್ಲಿತ್ತು. ಮತ್ತು ಇದರ ಮೇಲೆ ಹೋಂ ಥಿಯೇಟರ್‌ನ ಪರಿಕರಗಳಿದ್ದವು. ಇದನ್ನೆಲ್ಲ ಖಾಲಿ ಮಾಡಿ ಟಿ.ವಿ ಸ್ಟ್ಯಾಂಡ್‌ನಲ್ಲಿ ಹೊಂದಿಸಿದ್ದೆ. ಇದಕ್ಕಾಗಿ ಸುಮಾರು ಅರ್ಧ ದಿನ ಹಿಡಿದಿತ್ತು. ಈಗ ಇದು ನನಗೆ ಓದಿ ಬರೆಯಲು ಅನುಕೂಲವಾಗುವಂತಿತ್ತು.

  ವಾಸ್ತವವಾಗಿ ನನಗೆ ಮೇ ೨೬ರಂದು ದುರ್ಗಾಪ್ರವೀಣನ ಮದುವೆ ಇರುವುದು ಮರೆತು ಹೋಗಿತ್ತು. ಅಂದು ಮುಂಜಾನೆ ಕಾಲೇಜಿಗೆ ಹೋದಾಗ ಸ್ನೇಹಿತರು ಈ ವಿಷಯವನ್ನು ನೆನಪು ಮಾಡದಿದ್ದರೆ ನಾನು ಹೋಗುತ್ತಿರಲಿಲ್ಲ. ವಿಧಿಲಿಖಿತ ನಿಶ್ಚಯವಾಗಿದ್ದರಿಂದ ಮರೆತ ಸಂಗತಿಯನ್ನು ಸರಿಯಾಗಿ ನೆನಪಿಸಿದರು. ಮನೆಯಿಂದ ಹೊರಡುವ ಮೊದಲು ಸಂಜೆ ರಿಸೆಪ್ಸನ್‌ಗೆ ಹೋಗುವುದೆಂದು ಒಮ್ಮೆ ಆಲೋಚಿಸಿದೆ. ಆದರೆ ಮಳೆಯ ದಿನವಾದ್ದರಿಂದ ಹಗಲೇ ಹೋಗಿಬರುವುದೆಂದು ನಿರ್ಧರಿಸಿ ಹೊರಟೆ. ಈಗ ಆಲೋಚಿಸಿದರೆ ಪ್ರತಿಯೊಂದು ಅಂಶವೂ ನನಗೆ ಅಪಘಾತವಾಗುವುದರ ಕಡೆಗೆ ಬೆರಳು ತೋರಿಸುತ್ತದೆ.
  ಹೀಗಾಗಿ ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತದಂತೆ ಕಾಣುತ್ತದೆ !.

  ಮುಂದಿನ ಭಾಗ ...... ಮನೆಗೆ ಬರುವ ಸಂಭ್ರಮ ....

  7 Responses to “ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ ?”

  Anonymous said...
  August 23, 2010 at 8:45 PM

  ಸರ್, ನೀವು ಆ ನಾಡಿ ಭವಿಷ್ಯ ಹೇಳಿದವರು ನೋಟ್ ಪುಸ್ತಕದಲ್ಲಿ ಅಪಘಾತದ ವಿಚಾರ ಬಿಟ್ಟು ಬೇರೆ ಏನೇನು ವಿಷಯಗಳನ್ನು ಹೇಳಿದ್ದಾರೆ ಅಂತ ಹೇಳಿಲ್ಲ. ಅವುಗಳೆಲ್ಲ ಸರಿಯಾಗಿವೆಯೇ ಅಂತ ನಂಗೊಂದು ಕೆಟ್ಟ ಕುತೂಹಲ. ನಿಜವಾಗಿ ನನಗೆ ಭವಿಷ್ಯ ಕೇಳಲು ತುಂಬ ಹೆದರಿಕೆ. ಅದರ ಮೇಲೆ ನಂಬಿಕೆ ಇದ್ದರೂ ಇಲ್ಲದಿದ್ದರೂ ಏನಾದರೂ ಕೇಟ್ಟದ್ದನು ಹೇಳಿದಾಗ ಸ್ವಲ್ಪ ಕಿರಿಕಿರಿ ಆಗುವುದು ಸಹಜ ಅಲ್ವೇ?


  Anonymous said...
  August 23, 2010 at 8:46 PM

  ಮೇಲಿನ ಕಮೆಂಟು ನನ್ನದು, ಹೆಸ್ರು ಹಾಕ್ಲಿಕೆ ಮರ್ತು ಹೋಯಿತು.-ಗಿರೀಶ


  vidyarashmi said...
  August 28, 2010 at 7:57 PM

  sir,
  sirimane katti 8 tingala nantara naanoo idarolage kaalittiddene. khushi aaytu nodi, odi. blog shuru madida uddesha nodi innashtu santosha aaytu.sirimaneya siri hechchali. nanna samparkadalliro v.c vidyarthigalige idannu nodlike heltene.
  -vidyarashmi


  ಡಾ.ಶ್ರೀಧರ ಎಚ್.ಜಿ. said...
  September 6, 2010 at 2:23 PM

  ಜ್ಯೋತಿಷ್ಯದವರು ಹಲವು ಸಂಗತಿಗಳನ್ನು ಹೇಳಿದ್ದಾರೆ. ಅದೆಲ್ಲವನ್ನೂ ಇಲ್ಲಿ ಹೇಳುವುದು ಅಪ್ರಸ್ತುತವಾಗುತ್ತದೆ. ಆದ್ದರಿಂದ ಈ ಸಂದರ್ಭಕ್ಕೆ ಹೊಂದುವ ಸಂಗತಿಯನ್ನು ಮಾತ್ರ ಇಲ್ಲಿ ಹೇಳಿದೆ. ಓದುಗರು ಗಮನಿಸಿ.

  ನನ್ನ ವಿದ್ಯಾರ್ಥಿನಿ ಶ್ರೀಮತಿ ವಿದ್ಯಾರಶ್ಮಿ ಬ್ಲಾಗ್ ಓದಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಪ್ರೊತ್ಸಾಹದ ಮಾತುಗಳನ್ನು ಹೇಳಿದ್ದಾರೆ. ವಂದನೆಗಳು.
  ಮುಂದೆಯೂ ನಿರಂತರವಾಗಿ ಗಮನಿಸುತ್ತಿರಿ.


  Navven said...
  September 6, 2010 at 8:06 PM

  Hiiii Sir Im Ur Student Naveen 1st (HJK) Sir supeb it is ur own story....?


  Anonymous said...
  October 19, 2010 at 10:37 PM

  Sir nanu ramprasad rao...sir nange nimma touch bittu 5 varsha aytu...adyako suddun nimma nenapu aytu hage nim no siktu amele nimge cl madidaga ondu kadeyalli nange ada santoshakke pariveye irlilla mathondu kadeyalli nimma kate keli dukkha kuda aytu....amele nivu helida blog nodide tumba chennagide sir...iga nange avattu keleda VC na nenapugalu marukalisutide sir...nimma prostaha,nimma shistu,nimma buddimatugalu ivattu namma kala mele navu nillisuvante madide sir ....sir nimma siri maneya uddesha neraveralu namminda enadaru sahaya bekadare dayavittu sankocha illade keli sir... Kandita yavude ritiyallu sidda sir..sir matondu vishya nanu 1 varshada hinde.... "nanu nanna kutumba" anno ondu pustaka baredidde..adre adanna tumba publicity madilla..nimge a book kodbekunta yavooto andukondide adre adke innu time sikkila...adralli main navu "tande, tayi mattu nanna kutumbadavara hege yava yava riti nadkolbeku anno vishya....matter tumba chennagide...adre publicity madalu nange time siktill...next month 18 th ge oorige bartha iddene aga nimmana meet agiye agtine sir..innu nimma contact yavaglu ittirithin ...good night sir.


  Anonymous said...
  December 22, 2010 at 10:18 PM

  ಸ್ವಾಮೀ ಶ್ರೀಧರರಾಯರೇ ದಯವಿಟ್ಟು ಇಂಥಾ ನಾಡಿಯೋ ಫಲವೋ ಜ್ಯೋತಿಷ್ಯದ ಹುಚ್ಚಿಗೆ ಸಿಕ್ಕಿ ಬಳಲಬೇಡಿ. ಮನುಷ್ಯನ ದೌರ್ಬಲ್ಯದ ಕ್ಷಣಗಳನ್ನು ಹೇಗೆ ದುಷ್ಟ ಶಕ್ತಿಗಳು ಬಳಸಿಕೊಳ್ಳುತ್ತವೆ ಎನ್ನುವುದನ್ನು ಮ್ಯಾಕ್ಬೆತ್ ನಂಥಾ ನಾಟಕ, ಸಾಹಿತ್ಯಗಳಲ್ಲಿ ಓದಿ, ಮನನ ಮಾಡಿ ಭವಿಷ್ತ್ಯತ್ತಿನ ಸಾವಿರಾರು ಮನಸ್ಸುಗಳನ್ನು ಪ್ರಭಾವಿಸುವವರು ನೀವು. ನಿಮಗೆ ಅಪಘಾತ ಆಗಬಾರದಿತ್ತು, ಆದ ಮೇಲೆ ಮೊದಲಿನಂತಾಗಲು ಯೋಗ್ಯ ಶುಶ್ರೂಷೆ, ಇನ್ನೊಮ್ಮೆ ಅಂಥದ್ದು ಬರದ ಎಚ್ಚರವಹಿಸಿದರೆ ಸಾಕು. ಜೋಯಿಸನ ನಾಡೀ ಗ್ರಂಥದ ಸಾಚಾತನದ ಬಗ್ಗೆ ನಾನೋ ನೀವೋ ತೀರ್ಪುಗಾರರಾಗಲು ಬರುವುದಿಲ್ಲ. ಇಂದ್ರಜಾಲ,ಪವಾಡ ತನಿಖೆಯ ಪರಿಣತರು ಖಂಡಿತವಾಗಿಯೂ ಆತ ಸಂಭಾಶಣೆಯ ನೆಪದಲ್ಲಿ ನಿಮ್ಮರಿವಿಗೇ ಬಾರದಂತೆ ನಿಮ್ಮಿಂದಲೇ ನಿಮ್ಮ ವಿವರಗಳನ್ನು ಆತ ಹೇಗೆ ಪಡದ ಎಂದಿತ್ಯಾದಿ ಎಲ್ಲಾ ತಿಳಿದುಕೊಳ್ಳುವ ಸಾಧ್ಯತೆ ಇದೆ. ಗಟ್ಟಿ ಆರೋಗ್ಯದೊಡನೆ ಗಟ್ಟಿ ಮನಸ್ಸೂ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
  ಅಶೋಕವರ್ಧನ


  Subscribe