Sunday, August 1, 2010

1

ಆಪರೇಷನ್ ಥಿಯೇಟರ್ ಎಂಬ ಜೀವಲೋಕ . . . .

 • Sunday, August 1, 2010
 • ಡಾ.ಶ್ರೀಧರ ಎಚ್.ಜಿ.
 • Share
 • ನಾನು ನೋಡುತ್ತಿದ್ದೆ. ಮೊದಲ ಮಹಾದ್ವಾರವನ್ನು ದಾಟಿದಾಕ್ಷಣ ನಮ್ಮ ಟ್ರಾಲಿ ನಿಂತಿತು. ಒಂದೈದು ನಿಮಿಷದಲ್ಲಿ ಬಂದ ಪುರುಷನೊಬ್ಬ ಆಪರೇಶನ್ ಮಾಡುವ ಕಾಲನ್ನು ಚೊಕ್ಕಟವಾಗಿ ಸರಸರನೆ ಶೇವಿಂಗ್ ಮಾಡಿದ. ಈ ಪ್ರಕ್ರಿಯೆಗೆ ಅಲ್ಲಿದ್ದ ಇಬ್ಬರು ಸಿಸ್ಟರ್‌ಗಳು ಸಹಕರಿಸುತ್ತಿದ್ದರು. ಇಲ್ಲಿ ಫ್ಯಾನಿನ ವ್ಯವಸ್ಥೆ ಇರಲಿಲ್ಲ. ಸಹಜವಾದ ಗಾಳಿ ಬರಲು ಅವಕಾಶವಿರಲಿಲ್ಲ. ಈ ಹೊತ್ತಿಗೆ ನನಗೆ ಸೆಖೆಯಾಗಿ ಬೆವರತೊಡಗಿತ್ತು. ಅನಂತರ ಅದೇ ಕಾಲಿಗೆ ಸ್ನಾನ ಮಾಡಿಸಿದರು. ಅಲ್ಲಿದ್ದ ಮೂವರೂ ಮಲೆಯಾಳಂ ಮಾತೃಭಾಷೆಯವರು. ನನ್ನಲ್ಲಿ ಮಾತನಾಡುವಾಗ ಅವರದು ಮಲೆಯಾಳಿ ಕನ್ನಡ. ಒಬ್ಬರು ಸಿಸ್ಟರ್ ನನ್ನಲ್ಲಿ ಕೇಳಿದರು: (ಇವರ ಹೆಸರು ಜಿನ್ಸಿ ಎಂದು ಮತ್ತೊಮ್ಮೆ ಹೋದಾಗ ಗೊತ್ತಾಯಿತು)

  "ನೀವು ಬ್ರಾಹ್ಮಿನ್ ಅಲ್ಲೆ ?".

  ಆಪರೇಶನ್‌ಗೆಂದು ಬಂದವರು ಯಾರಾದರೆ ಇವರಿಗೇನು ಎಂದು ಯೋಚಿಸುತ್ತಾ 'ಹೌದು' ಎಂದೆ. ಮರುಕ್ಷಣವೆ ಅವರದು ಇನ್ನೊಂದು ಪ್ರಶ್ನೆ.
  'ನಿಮ್ಮ ಬಳ್ಳಿ ಎಲ್ಲಿ ?'
  ಆಪರೇಶನ್‌ಗೆಂದು ಬರುವಾಗ ನನಗೆ ಬಳ್ಳಿ ತರಬೇಕೆಂದು ಗೊತ್ತಿರಲಿಲ್ಲ. ನನ್ನ ಭಾಷೆಯಲ್ಲಿ ಬಳ್ಳಿ ಎಂದರೆ ಹಗ್ಗವೆಂದು ಅರ್ಥ. ಆದರೂ ನನಗೆ ಸಣ್ಣ ಗುಮಾನಿ ಬಂತು. ಇವರು ಹಗ್ಗದ ಬಗೆಗೆ ಕೇಳುತ್ತಿಲ್ಲವೆಂದು ಅನಿಸಿತು. ಆದರೆ ಇವರು ಯಾವುದರ ಬಗೆಗೆ ಕೇಳುತ್ತಿದ್ದಾರೆಂದು ನನಗೆ ಪಕ್ಕನೆ ಹೊಳೆಯಲಿಲ್ಲ. ಅರ್ಥವಾಗದವನಂತೆ ಅವರ ಮುಖವನ್ನೇ ನೋಡಿದೆ. ಆಕೆಯಿಂದ ಮತ್ತೊಮ್ಮೆ ಅದೇ ಪ್ರಶ್ನೆ.
  'ಅದೇ ನಿಮ್ಮ ಬಳ್ಳಿ ಎಲ್ಲಿ ?'
  ಆಗ ನನಗೆ ಜ್ಞಾನೋದಯವಾಗಿ ನಗುಬಂತು. ಅವರು ನನ್ನ ಜನಿವಾರದ ಬಗೆಗೆ ಅತ್ಯಂತ ಕಾಳಜಿಂದ ಪ್ರಶ್ನಿಸುತ್ತಿದ್ದರು. ರೂಮಿನಲ್ಲಿ ಚೀಲದಲ್ಲಿ ಇಟ್ಟು ಬಂದಿದ್ದೇನೆ ಎಂದೆ. 'ಹಾಗಾ' ಎಂದು ಸುಮ್ಮನಾದರು. ೧೯೯೬ ಡಿಸೆಂಬರ್ ೨೧ ರಂದು ನನ್ನ ಮದುವೆಯ ದಿನ ಪತ್ನಿಯ ಮನೆಯವರು ನನಗೆ ಒಂದು ಉಂಗುರ ಮತ್ತು ಚೈನ್ ಸರವನ್ನು ಕೊಟ್ಟಿದ್ದರು. ಅಂದಿನಿಂದ ಇಂದಿನವರೆಗೆ ಅದನ್ನು ನಾನು ಮೈಮೇಲಿನಿಂದ ತೆಗೆದಿಟ್ಟಿರಲಿಲ್ಲ. ಈಗ ಮೊದಲ ಸಲ ಆಪರೇಶನ್‌ಗೆ ಹೊರಡುವ ಮೊದಲು ಅದನ್ನು ತೆಗೆದು ಸವಿತಳಿಗೆ ಕೊಟ್ಟುಬಂದಿದ್ದೆ.

  ನಾನು ಆ ಹೊತ್ತಿಗೆ ವಿಪರೀತ ಬೆವರ ತೊಡಗಿದ್ದೆ. ತಲೆಯ ಬದಿಂದ ಧಾರಾಕಾರವಾಗಿ ಬೆವರಿನ ನೀರು ಹರಿಯ ತೊಡಗಿತ್ತು. ನನ್ನ ಮಾನಸಿಕ ಸ್ಥಿತಿ ನಿಜಕ್ಕೂ ವಿಚಿತ್ರವಾಗಿತ್ತು. ಆಗ ಅಲ್ಲಿದ್ದ ಇನ್ನೊಬ್ಬರು ಸಿಸ್ಟರ್ 'ಸಾರ್‌ಗೆ ವಿಪರೀತ ಸೆಖೆ. ಅಲ್ಲಿಂದ ಕರೆದುಕೊಂಡು ಹೋಗುವ' (ಇವರ ಹೆಸರು ವಂದನಾ) ಎಂದು ಟ್ರಾಲಿಯನ್ನು ದೂಡಿಕೊಂಡು ಸೀದಾ ಆಪರೇಶನ್ ಕೊಠಡಿಗೆ ಕರೆದೊಯ್ದರು. ಅಲ್ಲಿ ಎ.ಸಿ. ಹಾಕಿದ್ದರಿಂದ ತುಸು ತಂಪಾತು. ಡಾಕ್ಟರ್ ಬರಲು ಇನ್ನೊಂದು ಐದು ನಿಮಿಷವಿತ್ತು. ಅವರು ತಮ್ಮ ಆಪರೇಶನ್ ಡ್ರೆಸ್ ತೊಟ್ಟುಕೊಂಡರು. ಇಲ್ಲಿಂದ ಮುಂದೆ ಯಾರ ಪರಿಚಯವೂ ಸಿಗುವುದಿಲ್ಲ. ಎಲ್ಲರೂ ಮೈಮೇಲೆ ಬೇರೆ ಡ್ರೆಸ್ ಹಾಕಿಕೊಳ್ಳುವುದರಿಂದ ಇವರೆಲ್ಲರೂ ನನಗೆ ಗಗನ ಯಾತ್ರಿಗಳಂತೆ ಕಾಣತೊಡಗಿದರು.

  'ವೈದ್ಯೋ ನಾರಾಯಣೋ ಹರಿ:' ಒಬ್ಬೊಬ್ಬರೆ ಬಂದರು. ಡಾ. ಜೋಶಿ ಅನಸ್ತೇಶಿಯಾ ಕೊಡಲು ತಯಾರಿ ನಡೆಸ ತೊಡಗಿದರು. ಮೊದಲು ನನ್ನನ್ನು ಮುರುಟಿಕೊಂಡು ಮಲಗಲು ಹೇಳಿದರು. ಅನಂತರ ಸೊಂಟದ ಕೆಳಗೆ ಪರಿಣಾಮ ಬೀರುವಂತೆ ಬೆನ್ನಿನ ಹಿಂಬದಿಯಲ್ಲಿ ಅನಸ್ತೇಶಿಯಾ ನೀಡಿದರು. ಇದು ಅತ್ಯಂತ ಸಣ್ಣ ಸೂಜಿ, ೨೭ನೆಯ ನಂಬರಿನದು ಎಂದು ಅನಂತರ ಅವರು ತಿಳಿಸಿದರು. ಅನಸ್ತೇಶೀಯಾ ಪರಿಣಾಮ ಬೀರತೊಡಗಿತು. ಕಾಲುಗಳು ತಮ್ಮ ಸ್ಪರ್ಶಜ್ಞಾನವನ್ನು ಕಳೆದುಕೊಂಡವು. ನನ್ನನ್ನು ಮುಖ ಅಡಿಯಾಗಿ ಮಲಗಿಸಿದರು. ಹಿಂದೆ ತಿರುಗಿ ನೋಡಿದರೂ ಕಾಣಬಾರದೆಂದು ನನ್ನ ಬೆನ್ನಿನ ಮೇಲೆ ಅಡ್ಡವಾಗಿ ಒಂದು ಪರದೆಯನ್ನು ಹಾಕಿದರು. ಡಾ. ಜೋಶಿ ನನ್ನ ಮುಖದ ಸ"ಪ ಬಂದು ನಿಂತರು. ಡಾ. ಅರವಿಂದ ಮತ್ತು ಡಾ. ಪ್ರದೀಪರು ಚಕಚಕನೆ ತಮ್ಮ ಕೆಲಸವನ್ನು ಆರಂಭಿಸಿದರು.

  ಡಾ. ಜೋಶಿ ನನಗೆ ಸುಮಾರು ೨೦ ವರ್ಷದ ಪರಿಚಯ. ಆಗ ಕಾಲೇಜಿಗೆ ಸಮೀಪವಾಗಿ ನೆಹರು ನಗರದಲ್ಲಿ ಅವರ ಕ್ಲಿನಿಕ್ ಬಿಟ್ಟರೆ ಬೇರೆ ವೈದ್ಯರು ಇರಲಿಲ್ಲ. ಮಾತ್ರವಲ್ಲ, ಅವರ ಮನೆ ಕಾಲೇಜಿಗೆ ಸಮೀಪದಲ್ಲಿ ಇತ್ತು. ಹಾಗಾಗಿ ರಾತ್ರಿ ಯಾರಿಗಾದರೂ ಅನಾರೋಗ್ಯವಾದರೆ ನಾನು ಸೀದಾ ಜೋಶಿಯವರ ಮನೆಗೆ ಹೊತ್ತುಗೊತ್ತು ಇಲ್ಲದೆ ಹೋಗುತ್ತಿದ್ದೆ. ಕೆಲವೊಮ್ಮೆ ಅವರೇ ಹಾಸ್ಟೆಲಿಗೆ ಬಂದು ಪರಿಶೀಲನೆ ನಡೆಸಿ ಔಷಧಕ್ಕಾಗಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆ ದಿನಗಳಲ್ಲಿ ಈಗಿನ ಹಾಗೆ ಸಾರಿಗೆ ಸೌಲಭ್ಯವೂ ಇರಲಿಲ್ಲ. ಹೀಗಾಗಿ ಅವರು ವೈದ್ಯರಾಗಿ ಮಾಡಿದ ಸಹಾಯ, ಉಪಕಾರ ತುಂಬಾ ದೊಡ್ಡದು. ಈಗಲೂ ನನಗೆ ಅವರಲ್ಲಿ ಅಪಾರವಾದ ವಿಶ್ವಾಸ. ಈಗಲೂ ಔಷಧಿ ತರಲು ಹೋದರೆ ನನ್ನ ಚಟುವಟಿಕೆ, ಬರವಣಿಗೆಯ ಬಗೆಗೆ ಅವರು ವಿಚಾರಿಸುವುದಿದೆ. ನಾವು ಒಂದಷ್ಟು ಲೋಕಾಭಿರಾಮವಾಗಿ ಮಾತನಾಡಲು ಸಮಯವನ್ನು ಉಳಿಸಿಕೊಂಡಿದ್ದೇವೆ.

  ಪರದೆಯ ಹಿಂದೆ ಆಪರೇಶನ್ ಆರಂಭವಾಗಿತ್ತು. ಜೋಶಿಯವರು ಮಾತಿಗೆ ತೊಡಗಿದರು. ಇತ್ತೀಚೆಗೆ ನಾನು ಬರೆದ ಪುಸ್ತಕ, ಬರೆಯುತ್ತಿರುವ ಲೇಖನ, ಸಾಹಿತ್ಯ ಮತ್ತು ಸಂಸ್ಕೃತಿ ಪರ ಚಟುವಟಿಕೆಗಳ ಬಗೆಗೆ ನಮ್ಮ ಮಾತುಕತೆ ಸಾಗಿತ್ತು. ಇದರೆಡೆಯಲ್ಲಿ ಅವರ ಪತ್ನಿ ತುಳುವಿನಲ್ಲಿ ಬರೆದ ನಾಟಕಕ್ಕೆ ಪ್ರಶಸ್ತಿ ಬಂದ ಸಂಗತಿಯನ್ನು ಹೇಳಿದರು. ನನಗಿದು ಹೊಸ ಸುದ್ದಿ. ನಾನು ಈ ಬಗ್ಗೆ ಅವರಲ್ಲಿ ಮತ್ತಷ್ಟು ವಿವರಗಳನ್ನು ಕೇಳಿ ಪಡೆದೆ. ಕುಂದಾಪುರದ ಕಡೆ ದೇವಸ್ಥಾನಗಳಲ್ಲಿ ಇರುವ ಮರದ ಗೊಂಬೆಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಿರುವುದಾಗಿ ತಿಳಿಸಿದರು. ಲೀಲಾಭಟ್ಟರ ಕೃತಿಗಳಲ್ಲಿ ಇದರ ಬಗೆಗೆ ಒಂದಷ್ಟು ಓದಿದ್ದು ನೆನಪಾಯಿತು. ಇಷ್ಟಾಗುವಾಗ ಹಿಂಬದಿಯಿಂದ ಡ್ರಿಲ್ ಮಾಡುವ ಸದ್ದು ಕೇಳಿಸಿತು. 'ಸ್ಕ್ರೂ ಹಾಕಲು ಡ್ರಿಲ್ ಮಾಡುತ್ತಿರುವರೇ' ಎಂದು ಕೇಳಿದೆ. ನನ್ನ ಯೋಚನೆ ಸರಿಯಾಗಿತ್ತು. ಅವರು 'ಹೌದು' ಎಂದರು. ನಮ್ಮ ಮಾತುಕತೆ ಮತ್ತೆ ಮುಂದುವರಿತು. 'ಈಗ ಹೊಲಿಯುತ್ತಿದ್ದಾರೆ. ಇನ್ನೊಂದು ಐದು ನಿಮಿಷದಲ್ಲಿ ಮುಗಿಯುತ್ತದೆ' ಎಂದರು. ಡಾ. ಜೋಶಿಯವರಿಂದ ನನಗೆ ಆಪರೇಶನ್ ಬಗೆಗೆ ಕಮೆಂಟರಿ ರೂಪದಲ್ಲಿ ಮಾಹಿತಿ ಸಿಗುತ್ತಿತ್ತು. ಅವರು ಹೇಳಿದಂತೆ ಎಲ್ಲವೂ ಮುಗಿತು.

  ಆಪರೇಶನ್ ಮಾಡಿದ ಡಾ. ಅರವಿಂದರು ತಮ್ಮ ಮುಖದ ವೇಶವನ್ನು ಕಳಚಿ ನಿಮಗೆ ಯಕ್ಷಗಾನದಲ್ಲಿ ಆಸಕ್ತಿ ಇದೆಯೇ ಎಂದು ಕೇಳಿದರು. ಆಸಕ್ತಿ ಇದೆ. ಒಂದೆರಡು ಲೇಖನ ಬರೆದಿರುವೆ ಎಂದೆ. "ಲೇಖನ ಬರೆಯುವುದಕ್ಕಲ್ಲ, ಇನ್ನು ಮುಂದೆ ವೇಷ ಹಾಕಿ ಕುಣಿಯುವುದಿದ್ದರೂ ತೊಂದರೆಲ್ಲ. ಆಪರೇಷನ್ ಸರಿಯಾಗಿದೆ" ಎಂದು ನಗುತ್ತಾ ಹೇಳಿದರು. ಇದು ನನ್ನಲ್ಲಿ ಉತ್ಸಾಹ ಮೂಡಿಸಿತು. ಹೊಸದಾಗಿ ಆತ್ಮವಿಶ್ವಾಸವನ್ನು ಚಿಗುರಿಸಿತು. 'ಇನ್ನು ಆರುವಾರ ವಿಶ್ರಾಂತಿ' ಎಂದು ತಾಕೀತು ಮಾಡಿದರು. 'ಸರಿ' ಎಂದು ತಲೆಯಾಡಿಸಿದೆ.

  ಮುಂದಿನ ಭಾಗ -ಆಪರೇಶನ್ ಆದ ಮೊದಲ ರಾತ್ರಿ

  1 Responses to “ಆಪರೇಷನ್ ಥಿಯೇಟರ್ ಎಂಬ ಜೀವಲೋಕ . . . .”

  Anonymous said...
  August 11, 2010 at 12:58 PM

  sir .... Namaskara sir nanu Dhanraj... ha..ha... nanage nimm hagga da oh.. sorry.. janivarada prasanga thumba nagu banthu. ha..ha.. operation theatre olagu nimma e hasya thunuku nivestu hasya pravurthivullavarendu thiliyuthade... take care sir...


  Subscribe