Sunday, August 1, 2010

0

ಮಹಾವೀರ ಮೆಡಿಕಲ್ ಸೆಂಟರ್ ಮತ್ತು ಕೊಠಡಿ ಸಂಖ್ಯೆ ೧೧೦ . . . .

  • Sunday, August 1, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಇಲ್ಲಿಂದ ಮುಂದೆ ಒಂದು ವಾರ ಮಹಾವೀರ ಮೆಡಿಕಲ್ ಸೆಂಟರ್‌ನ ೧೧೦ ಸಂಖ್ಯೆಯ ಕೊಠಡಿ ನನ್ನ ಮನೆ!

    ಬೆಡ್ ಮೇಲೆ ಕಣ್ಣು ಮುಚ್ಚಿ ಮಲಗಿದವನು ಆದ ಘಟನೆಗಳನ್ನು ಮತ್ತೊಮ್ಮೆ ಜೋಡಿಸ ತೊಡಗಿದೆ. ಆಗ ಒಂದು ಸಂಗತಿ ನೆನಪಾತು !

    ಸಾಮಾನ್ಯವಾಗಿ ಮುಂಜಾನೆ ವಾಕಿಂಗ್ ಹೋಗಿ ಬಂದವನು ಸ್ನಾನ ಮಾಡಿ ಚಿಕ್ಕದಾಗಿ ಪೂಜೆ ಮಾಡುವುದು ನನ್ನ ಪದ್ಧತಿ. ೨೬ರ ಮುಂಜಾನೆ ಎಂದಿನಂತೆ ಪೂಜೆಗೆ ಕುಳಿತಿದ್ದೆ. ನಾನು ಪೂಜೆ ಮಾಡುವಾಗ ದೀಪ ಹಚ್ಚುವುದು ನನ್ನ ಪತ್ನಿಯ ಕ್ರಮ. ಅಂದು ಆಕೆ ದೀಪ ಬೆಳಗುತ್ತಿದ್ದಂತೆ ನಂದಿಹೋತು! 'ಎಂದೂ ಹೀಗಾಗಿರಲಿಲ್ಲ ಇದೇನಪ್ಪಾ' ಎಂದು ಮತ್ತೆ ನಾನೇ ದೀಪ ಬೆಳಗಿಸಿಕೊಂಡು ಪೂಜೆ ಮಾಡಿದೆ. ಇದು ಅಂದು ನಡೆಯಲಿರುವ ಘಟನೆಗೆ ಅಪಶಕುನದ ಪೂರ್ವ ಸೂಚನೆಯಾಗಿತ್ತೇ ? ಅಥವಾ ಕಾಕತಾಳೀಯವಾಗಿರಬಹುದೇ ಎಂಬ ಅನುಮಾನ ಕಾಡತೊಡಗಿತು.

    ಯಾವಾಗಲೂ ಹೆಲ್ಮೆಟ್ ಧರಿಸದವನು ಅಂದು ಮಗನಲ್ಲಿ ಅದನ್ನು ಕೇಳಿ ಹಾಕಿಕೊಂಡು ಹೋಗಿದ್ದೆ. ಇದನ್ನು ಹಾಕಿಕೊಳ್ಳದಿದ್ದರೆ ಮುಖದ ಎಡ ಭಾಗದಲ್ಲಿ ತೀವ್ರ ಸ್ವರೂಪದ ಗಾಯವಾಗುತ್ತಿತ್ತು ಎಂಬಲ್ಲಿ ಸಂಶಯವಿಲ್ಲ. ನಾನು ಬಿದ್ದಾಗ ಹೆಲ್ಮೆಟ್‌ನ ಗಲ್ಲದ ಎಡಭಾಗ ರಸ್ತೆಗೆ ತಾಗಿತ್ತು. ಆ ಭಾಗದಲ್ಲಿ ಹೆಲ್ಮೆಟ್‌ನಲ್ಲಿ ಸಾಕಷ್ಟು ಆಳವಾದ ಗೆರೆಗಳು ಬಿದ್ದಿದ್ದವು. ಅಂದರೆ ಆಗುವ ಅಪಘಾತ ತಪ್ಪುವುದಿಲ್ಲ. ಆದರೆ ಆಗುವ ಅನಾಹುತವನ್ನು ಕಡಿಮೆಗೊಳಿಸಲು, ಹೆಲ್ಮೆಟ್ ಧರಿಸಲು ಪ್ರೇರಣೆ ದೊರಕಿತು ಎಂಬ ಭಾವನೆ ನನ್ನದು.

    ನಾನು ಬಿದ್ದ ಸ್ಥಳಕ್ಕೆ ನಾಲ್ಕು ಮಾರು ದೂರದಲ್ಲಿ ಒಂದು ಮರದ ತುಂಬ ಹಳದಿಯ ಹೂಗಳು ಅರಳಿದ್ದವು. ಆ ದಿನ ಅದು ತುಂಬಾ ಸುಂದರವಾಗಿ ಕಾಣುತ್ತಿತ್ತು. ಮರವೇ ಹೂವಾಗಿ, ಅದು ಹೂಮರವಾಗಿ ನಿಂತಿತ್ತು. ಬಿದ್ದ ಅವಸರದಲ್ಲಿ ಅದನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದ್ದು ಈಗ ನೆನಪಿಗೆ ಬಂತು.

    'ಸರ್' ಎಂದು ಕರೆದಂತಾತು. ಕಣ್ಣು ತೆರೆದೆ. ಎದುರಿಗೆ ಇಬ್ಬರು ಸಿಸ್ಟರ್‌ಗಳು ನಿಂತಿದ್ದರು. 'ರಕ್ತ ಪರೀಕ್ಷೆಗೆ ರಕ್ತವನ್ನು ತೆಗೆಯಲು ಬಂದಿದ್ದೇವೆ' ಎಂದರು. ಇನ್ನೊಬ್ಬರು ಆಗಾಗ ಚುಚ್ಚುವುದನ್ನು ತಪ್ಪಿಸಲು ಎಡ ಕೈಗೆ ಕ್ಯಾನಲ್ ಅಳವಡಿಸಿದರು. ಅದರ ಮೂಲಕವೇ ರಕ್ತವನ್ನು ತೆಗೆದರು. ಇಲ್ಲಿಂದ ನನ್ನ ವೈದ್ಯಕೀಯ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ಆರಂಭಗೊಂಡಿತು. ಇದಾಗಿ ಹತ್ತು ನಿಮಿಷದಲ್ಲಿ ಇಸಿಜಿ ಪರೀಕ್ಷೆಗೆಂದು ಮತ್ತಿಬ್ಬರು ಬಂದರು. ಅವರು ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಆರೇಳು ಕಡೆ ಬಿಲ್ಲೆಯಾಕಾರದ ವಸ್ತುವನ್ನು ಅಂಟಿಸಿ ಯಂತ್ರದಲ್ಲಿ ರೀಡಿಂಗ್ ನೋಡಲು ಹೋದರೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಿಂದಿರುಗಿ ಹೋಗಿ ಅದನ್ನೇ ರಿಪೇರಿ ಮಾಡಿಕೊಂಡು ಬಂದರೋ ಅಥವಾ ಬೇರೆ ಯಂತ್ರವನ್ನು ತಂದರೋ ಗೊತ್ತಿಲ್ಲ. ರೀಡಿಂಗ್ ತೆಗೆದುಕೊಂಡು ಹೋದರು.

    ಇಷ್ಟಾಗುವಾಗ ರಾತ್ರಿ ಆಸ್ಪತ್ರೆಯಲ್ಲಿ ನನ್ನೊಂದಿಗೆ ಯಾರು ಇರುವುದು ಎಂಬ ಸಮಸ್ಯೆ ಎದುರಾತು. ಇದಕ್ಕೆ ತಕ್ಷಣದ ಪರಿಹಾರವೆಂದು ಹಾಸ್ಟೆಲ್ ಮೆಸ್‌ನ ವಿನಯ ಭಟ್ಟರಿಗೆ ಸಂಪರ್ಕಿಸಿದೆ. ವಿನಯ ಭಟ್ಟರು ಆ ರಾತ್ರಿ ನನ್ನೊಂದಿಗಿದ್ದರು. ನನಗೂ ವಿನಯರಿಗೂ ದೀರ್ಘ ಕಾಲದ ಸ್ನೇಹ, ಸಂಬಂಧ. ನಾನು ಹಾಸ್ಟೆಲ್‌ನ ವಾರ್ಡನ್ ಆಗಿರುವಾಗಲೇ ಅವರು ಮೆಸ್‌ಗೆ ಬಂದು ಸೇರಿದ್ದರು. ಅಲ್ಲಿಂದ ಆರಂಭವಾದ ನಮ್ಮ ವಿಶ್ವಾಸ ಈಗಲೂ ಮುಂದುವರಿದಿದೆ. ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ಪರಿಶೀಲನೆಗೆಂದು ಬಂದ ಡಾ. ಪುತ್ತೂರಾಯರು 'ನಾಳೆ ಸಂಜೆ ೪.೩೦ಕ್ಕೆ ಶಸ್ತ್ರಚಿಕಿತ್ಸೆಗೆ ಸಮಯ ನಿಗದಿಯಾಗಿದೆ' ಎಂದು ತಿಳಿಸಿದರು. ಹಾಗೆಯೇ ಮುಂಜಾನೆ ೧೦ ಗಂಟೆಯ ನಂತರ ಯಾವುದೇ ರೀತಿಯ ಆಹಾರವನ್ನೂ ಸ್ವೀಕರಿಸಬಾರದೆಂಬ ಸೂಚನೆ ನೀಡಿದರು. ನನಗೆ ಆಗಾಗ ನೀರು ಕುಡಿಯುವ ಅಭ್ಯಾಸ. ಹೇಗಪ್ಪಾ ಇದರಿಂದ ಪಾರಾಗುವುದು ಎಂಬ ತಲೆಬಿಸಿ ಆರಂಭವಾತು. ದೊರಕಿದ ಮಾಹಿತಿಯನ್ನು ಕೂಡಲೇ ಮನೆಗೆ ರವಾನಿಸಿದೆ.

    ಇಡೀ ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲ. ಹೊಸಜಾಗ. ಆಗಾಗ ಬಂದು ಸುರಿಯುವ ಮಳೆಯ ಶಬ್ದ. ಅದರೊಂದಿಗೆ ಕಾಲಿನಲ್ಲಿ ಕಿರಿಕಿರಿ. ಕಣ್ಣು ಮುಚ್ಚಿದರೆ ಏನೇನೋ ಚಿತ್ರ ವಿಚಿತ್ರ ಕನಸುಗಳು ! ನನಗೆ ಆಪರೇಶನ್ ಆದ ಹಾಗೆ, ಕಾಲು ಸರಿಯಾಗಿ ನಡೆಯಲು ತೊಡಗಿದಂತೆ, ಅದ್ಯಾವುದೋ ಕ್ರೀಡಾಕೂಟದಲ್ಲಿ ಭಾಗವಹಿಸಿ ಓಡುವ ಸ್ಪರ್ಧೆಯಲ್ಲಿ ಮೊದಲು ಬಂದಂತೆ, ಮತ್ತೊಮ್ಮೆ ನಡೆಯಲು ಸಾಧ್ಯವಾಗದ ಹಾಗೆ, ವಿದ್ಯಾರ್ಥಿಗಳಿಗೆ ಒಂದೇ ಕಾಲಿನಲ್ಲಿ ನಿಂತು ಪಾಠ ಮಾಡುತ್ತಿರುವಂತೆ . . . . ಹೀಗೆ ವಿಚಿತ್ರ ಕಲ್ಪನೆಗಳು ಮನಸ್ಸಿನಾಳದಲ್ಲಿ ನಿರಂತರವಾಗಿ ಹಾದುಹೋಗುತ್ತಿದ್ದವು.

    ಬೆಳಗ್ಗೆ ೬.೩೦ಕ್ಕೆ ಸರಿಯಾಗಿ ಸಿಸ್ಟರ್ ಇಬ್ಬರು ಬಂದು ರಕ್ತವನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋದರು. ಹಾಗೆಯೇ ಒಂದು ಇಂಜಕ್ಷನ್ ಕೊಟ್ಟರು. ಆಹಾರಕ್ಕೆ ಮೊದಲು ಮತ್ತು ಕೊನೆಗೆ ಎಂದು ಎರಡು ಮಾತ್ರೆಯನ್ನು ಇಟ್ಟು ಹೋದರು. ೧೦ ಗಂಟೆಯ ಹೊತ್ತಿಗೆ ಒಂದಷ್ಟು ಗಂಜಿ ಊಟಮಾಡಿ ನೀರುಕುಡಿದೆ. ಇಂದಿಗೆ ಇದೇ ನನ್ನ ಕೊನೆಯ ಗಂಜಿಊಟ ! ಮತ್ತಿನದೆಲ್ಲ ಶಸ್ತ್ರ ಚಿಕಿತ್ಸೆ ಆದ ಮೇಲೆ ಎಂದು ನೆನಪಾಗಿ ಮನಸ್ಸಿಗೆ ತುಸು ಕಸಿವಿಸಿ. ವಿಚಿತ್ರವಾದ ತಲ್ಲಣ. ತಿರುಗುವ ಫ್ಯಾನನ್ನು ನೋಡುತ್ತಾ ಸುಮ್ಮೆನೆ ಮಲಗಿದೆ. ಸಮಯ ಹೋದಂತೆ ನನ್ನೊಳಗೆ ನಿಧಾನವಾಗಿ ಆತಂಕ ಮಡುಗಟ್ಟತೊಡಗಿತು.

    ರಾತ್ರಿಯ ಬಸ್ಸಿನಲ್ಲಿ ಹೊರಟು ಊರಿನಿಂದ ಪತ್ನಿ ಸವಿತಳ ತಮ್ಮ ಸತೀಶ ಬಂದಿದ್ದ. ಇಷ್ಟಲ್ಲದೆ ಆಪರೇಶನ್ ಆಗುವಾಗ ಬರುವುದಾಗಿ ವಿ.ಜಿ. ಭಟ್ಟರು, ಡಾ.ಮನಮೋಹನ ಮೊದಲಾದವರು ತಿಳಿಸಿದ್ದರು. ಇದು ಒಂದು ರೀತಿಯಲ್ಲಿ ನನಗೆ ಮಾನಸಿಕ ಸಮಾಧಾನವನ್ನು ನೀಡಿತ್ತು.

    ೩.೩೦ರ ಹೊತ್ತಿಗೆ ಡಾ. ಜೋಶಿ ಬಂದು ನನ್ನನ್ನು ಪೂರ್ವ ಭಾವಿಯಾಗಿ ಪರಿಶೀಲಿಸಿದರು. ನನಗೆ ಆ ಹೊತ್ತಿಗಾಗಲೇ ಹಸಿವಾಗತೊಡಗಿತ್ತು. ಅದಕ್ಕೆ ಸರಿಯಾಗಿ ಅವರು 'ಹಸಿವಾಗುತ್ತದೆಯೇ?' ಎಂದು ಕೇಳಿದರು. ಹಾಗೆಯೇ ಈ ಹಿಂದೆ ನನಗೆ ಆಪರೇಶನ್ ಆಗಿತ್ತೆ? ಹಿಂದೆ ಯಾವಾಗಲಾದರೂ ಅನಸ್ತೇಶಿಯಾ ತೆಗೆದುಕೊಂಡ ನಿದರ್ಶನವಿದೆಯೇ? ಎಂದು ಮುಂತಾಗಿ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ನಾನು ಅನಸ್ತೇಶಿಯಾ ಹೇಗೆ ಕೊಡುವುದು ಎಂದು ತುಸು ಆತಂಕದಿಂದ ಕೇಳಿದೆ. ನೀವೇನೂ ಹೆದರುವ ಅಗತ್ಯವಿಲ್ಲ ಎಂದು ಭರವಸೆಯ ಮಾತುಗಳನ್ನು ಹೇಳಿದ್ದು ನನ್ನ ಮನಸ್ಸಿಗೆ ತುಸು ಹಿತವಾಯಿತು. ನನಗೆ ಗ್ಲೂಕೋಸ್ ನೀಡಲು ಸೂಚಿಸಿ ಅವರು ತೆರಳಿದರು.

    ಸಂಜೆ ೪ ಗಂಟೆಗೆ ಆಪರೇಶನ್ ಮಾಡುವಾಗ ಹಾಕಿಕೊಳ್ಳುವ ಬಟ್ಟೆಯನ್ನು ತಂದು ಕೊಟ್ಟರು. ಅದಾಗಿ ಹತ್ತು ನಿಮಿಷಕ್ಕೆ ನನ್ನನ್ನು ಟ್ರಾಲಿಯಲ್ಲಿ ಕರೆದುಕೊಂಡು ಹೋದರು.

    ಮುಂದಿನ ಭಾಗ - ಆಪರೇಶನ್ ಥಿಯೇಟರ್ ಎಂಬ ಜೀವಲೋಕ

    0 Responses to “ಮಹಾವೀರ ಮೆಡಿಕಲ್ ಸೆಂಟರ್ ಮತ್ತು ಕೊಠಡಿ ಸಂಖ್ಯೆ ೧೧೦ . . . .”

    Subscribe