Sunday, April 25, 2010

0

ತಿಂಗಳ ತರಂಗ - ಉಪನ್ಯಾಸ

 • Sunday, April 25, 2010
 • ಡಾ.ಶ್ರೀಧರ ಎಚ್.ಜಿ.
 • Share
 • ವಾಸ್ತವತಾವಾದಿ ಪರಂಪರೆಯ ಮುಖ್ಯ ಸಾಹಿತ್ಯ ಪ್ರಕಾರ ಕಾದಂಬರಿ. ಸ್ವಾತಂತ್ರ್ಯ ಪೂರ್ವದ ಕಾದಂಬರಿಗಳಲ್ಲಿ ಆಧುನಿಕ ಶಿಕ್ಷಣದಿಂದ ಭಾರತೀಯ ಜೀವನ ಕ್ರಮದಲ್ಲಿ ಉಂಟಾದ ತಲ್ಲಣ, ಸೈದ್ಧಾಂತಿಕ ಸಂಘರ್ಷ, ಆದರ್ಶ ಮತ್ತು ಆಧ್ಯಾತ್ಮದ ಬಗೆಗಿನ ಚಿಂತನೆಗಳನ್ನು ನೋಡಲು ಸಾಧ್ಯ. ಸ್ವಾಸ್ಥ್ಯ ಸಮಾಜದ ಆದರ್ಶವನ್ನು ಇಟ್ಟುಕೊಂಡ ಕನಸುಗಾರಿಕೆ ಕನ್ನಡದ ಆರಂಭದ ಕಾದಂಬರಿಗಳಲ್ಲಿದೆ. ಪಾಶ್ಚಾತ್ಯ ಸಂಸ್ಕೃತಿಗೆ ತೆರೆದುಕೊಂಡ ಭಾರತೀಯ ಸಂಸ್ಕೃತಿ ಅನುಕರಣೆ, ಆತ್ಮಸಮರ್ಥನೆ ಮತ್ತು ಸುಧಾರಣೆಯ ಮಾರ್ಗದಲ್ಲಿ ಚಲಿಸಿದ್ದನ್ನು ಕನ್ನಡ ಕಾದಂಬರಿಗಳು ದಾಖಲಿಸಿವೆ ಎಂದು ಪ್ರಾಧ್ಯಾಪಕ ರಮೇಶ್ ಭಟ್ ಎಸ್. ಜಿ. ಹೇಳಿದರು.

  ಅವರು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಪೂರ್ವ ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

  ಈ ಕಾಲದ ಕಾದಂಬರಿಗಳಲ್ಲಿ ಸಮಾಜ ಸುಧಾರಣೆಯ ಕಡೆಗಿನ ಚಿಂತನೆ ಮತ್ತು ವಿಶ್ಲೇಷಣೆ ವಿಶೇಷವಾಗಿ ಕಾಣುತ್ತದೆ. ಲೇಖಕರ ಅನುಭವದ ನೆಲೆ ಇಲ್ಲಿ ಮುಖ್ಯವಾಗಿತ್ತು ಎಂದು ಅವರು ಹೇಳಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಮಾತನಾಡುತ್ತ ಪಾಶ್ಚಾತ್ಯ ಶಿಕ್ಷಣವನ್ನು ಪಡೆದ ಪರಿಣಾಮವಾಗಿ ಭಾರತೀಯರಿಗೆ ವ್ಯವಸ್ಥೆಯನ್ನು ಹೊಸದೃಷ್ಟಿಯಿಂದ ನೋಡಲು ಸಾಧ್ಯವಾಯಿತು. ರಾಷ್ಟ್ರೀಯತೆ, ದೇಶೀಯತೆ ,ಆಧುನಿಕ ಶಿಕ್ಷಣದ ಪರಿಣಾಮ, ನಿಸರ್ಗದ ಕಡೆಗಿನ ಒಲವು ಈ ಕಾಲ ಘಟ್ಟದ ಕಾದಂಬರಿಗಳಲ್ಲಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

  ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಸಾಹಿತಿ ಡಾ. ಶ್ರೀನಿವಾಸ ಹಾವನೂರ ಮತ್ತು ರಂಗಭೂಮಿ ಕಲಾವಿದ ಆನಂದ ಗಾಣಿಗ ಇವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

  ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿದರು. ಶ್ರೀಮತಿ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು.

  0 Responses to “ತಿಂಗಳ ತರಂಗ - ಉಪನ್ಯಾಸ”

  Subscribe