Sunday, April 25, 2010

0

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ- ಬಹುಮಾನ ವಿತರಣೆ

 • Sunday, April 25, 2010
 • ಡಾ.ಶ್ರೀಧರ ಎಚ್.ಜಿ.
 • Share
 • ಪುತ್ತೂರು: ಡಾ.ಕೋಟ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರಂತರ ಕರುಳಿನ ಕುಡಿ ಕಾದಂಬರಿಯಲ್ಲಿ ಜೀವನ ಮೌಲ್ಯ ಎಂಬ ವಿಷಯಾಧಾರಿತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕಾಲೇಜಿನಲ್ಲಿ ಶನಿವಾರ ನಡೆಯಿತು.
  ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಡಾ.ನಾ.ಮೊಗಸಾಲೆ ಬರೆಯುವವನಿಗೆ ಕನಿಷ್ಟ ಮೌಲ್ಯವಾದರೂ ಇರಬೇಕು. ಈ ಹಿನ್ನಲೆಯಲ್ಲಿ ಕಾರಂತರು ಆದರ್ಶಪ್ರಾಯರು. ಅವರ ಕುರಿತಾಗಿ ಮಾತನಾಡುವುದು ಅಥವ ಬರೆಯುವುದೆಂದರೆ ಜೀವನ ಮೌಲ್ಯಗಳ ಬಗೆಗೆ ಚರ್ಚಿಸಿದಂತೆ. ಇಂದು ನಾವೆಲ್ಲಾ ಚಿಂತಿಸುವ ಜಾಗತೀಕರಣದಂತಹ ಸಂಗತಿಗಳನ್ನು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಕಾರಂತರು ವಿಶ್ಲೇಷಿಸಿದ್ದರು ಎಂದರು.
  ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ವಿಚಾರಗಳಿಗೆ ಒತ್ತಿಲ್ಲದಿರುವುದು ದುರದೃಷ್ಟಕರ. ಯುವ ಪೀಳಿಗೆಗೆ ಸರಿಯಾಗಿ ಮಾರ್ಗದರ್ಶನ ಮಾಡುವಲ್ಲಿ ಹಿರಿಯರು ಸೋತಿದ್ದಾರೆ. ಆದ್ದರಿಂದಲೇ ಮೌಲ್ಯಗಳ ಅಧಃಪತನವನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.
  ಅಧ್ಯಕ್ಷತೆ ವಹಿಸಿದ್ದ ಕಾರಂತ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ತಾಳ್ತಜೆ ವಸಂತ ಕುಮಾರ್ ಕಹಿ ವಾಸ್ತವದ ಜೊತೆಜೊತೆಗೇ ರಮ್ಯ ಬದುಕೂ ಇದೆ. ಅದನ್ನು ಯುವ ಪೀಳಿಗೆ ಅನುಭವಿಸುವಂತಾಗಬೇಕು ಎಂದರು.
  ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕೆ.ಎಂ.ಭೈರಪ್ಪ ಮೊದಲ ಸ್ಥಾನ ಪಡೆದರೆ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿದ್ಯಾರ್ಥಿ ಗಿರೀಶ್ ಎಂ.ಜಿ ದ್ವಿತೀಯ ಸ್ಥಾನಕ್ಕೆ ಭಾಜನರಾದರು. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ವಿಜ್ಞಾನ ಪದವಿ ವಿದ್ಯಾರ್ಥಿ ಶರೋನ್ ಅಲೋವೆರಾ ತೃತೀಯ ಸ್ಥಾನ ಪಡೆದರು.
  ವೇದಿಕೆಯಲ್ಲಿ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಕೆ.ರಾಮಭಟ್, ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎ.ವಿ.ನಾರಾಯಣ ಉಪಸ್ಥಿತರಿದ್ದರು.
  ವಿದ್ಯಾರ್ಥಿನಿ ಅನನ್ಯಾ ಬಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ವೇದವ್ಯಾಸ ಸ್ವಾಗತಿಸಿ ಪ್ರಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಎಚ್.ಮಾಧವ ಭಟ್ ವಂದಿಸಿದರು. ವಿದ್ಯಾರ್ಥಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮ ನಿರೂಪಿಸಿದರು.

  0 Responses to “ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ- ಬಹುಮಾನ ವಿತರಣೆ”

  Subscribe