Sunday, April 4, 2010

3

೦೩.೦೪.೨೦೧೦ ಶನಿವಾರ - ಉಪನ್ಯಾಸ ಮತ್ತು ಕವಿಗೋಷ್ಟಿ

  • Sunday, April 4, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಲಿಟರರಿ ಕ್ಲಬ್‌ನ ಸಹಯೋಗದಲ್ಲಿ ಚಂದ್ರಗಿರಿಯ ತೀರ ಕಾದಂಬರಿಯ ಬಗೆಗೆ ಉಪನ್ಯಾಸ, ಅನಂತರ ವಿದ್ಯಾರ್ಥಿಗಳಿಂದ ಬಹುಭಾಷಾ ಕವಿಗೋಷ್ಟಿ ನಡೆಯಿತು.
    ಸಾರಾ ಅಬೂಬಕರ್ ೨೫ ವರ್ಷಗಳ ಹಿಂದೆ ಬರೆದ ಕಾದಂಬರಿ ಚಂದ್ರಗಿರಿಯ ತೀರ. ಈ ಕೃತಿ ಪ್ರಕಟವಾಗಿ ೨೫ ವರ್ಷಗಳು ಕಳೆದ ಪ್ರಯುಕ್ತ ಇದರ ಕುರಿತು ಒಂದು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಸೂಕ್ಷ್ಮ ಸಂವೇದನೆಯುಳ್ಳ ಕವಿ ಮತ್ತು ವಿಮರ್ಶಕಿ ಡಾ. ಕವಿತಾ ರೈ ಉಪನ್ಯಾಸ ನೀಡುವ ಸಲುವಾಗಿ ಕಾಲೇಜಿಗೆ ಬಂದಿದ್ದರು. "ಮಹಿಳೆ : ಅಸ್ತಿತ್ವದ ಸಂಕಥನ" ಕೃತಿಯಲ್ಲಿ ಈ ಕಾದಂಬರಿಯ ಬಗೆಗೆ ಅವರು ವಿವಿಧ ನೆಲೆಯಲ್ಲಿ ಚಿಂತನೆ ನಡೆಸಿದ್ದಾರೆ. ಮಾತ್ರವಲ್ಲ, ಕನ್ನಡದಲ್ಲಿ ಬಂದಿರುವ ಕೆಲವು ಉತ್ತಮ ವಿಮರ್ಶೆಯ ಕೃತಿಗಳಲ್ಲಿ ಇದೂ ಒಂದು. ಆಸಕ್ತರು ಈ ಕೃತಿಯನ್ನು ನೋಡಬಹುದು.

    ಕಳೆದ ಮೂರು ವರ್ಷಗಳಿಂದ ಚಂದ್ರಗಿರಿಯ ತೀರ ಕಾದಂಬರಿಯ ಬಗೆಗೆ ಒಂದು ಉಪನ್ಯಾಸವನ್ನು ಏರ್ಪಡಿಸಬೇಕೆಂದು ಯೋಚಿಸಿದ್ದೆ. ಆದರೆ ಅದು ಕಾರ್ಯಗತವಾಗಿರಲಿಲ್ಲ. ಇಂದು ಅದು ಪ್ರಕಟವಾದ ೨೫ ವರ್ಷವಾದ ಈ ಸಂದರ್ಭದಲ್ಲಿ ಅದು ಈಡೇರಿದೆ.

    ಅಂಚಿಗೆ ಸರಿಸಲ್ಪಟ್ಟ ಅಸ್ಮಿತೆಗಳನ್ನು ಸಾಹಿತ್ಯದಲ್ಲಿ ತೋರಿಸಿದ ಸಾರಾ ಅವರ ಸಾಹಿತ್ಯ ವಿಶಿಷ್ಟವಾದುದು. ಧಾರ್ಮಿಕತೆ, ಪುರುಷನಿಷ್ಟ ಸಮಾಜ ಹೆಣ್ಣನ್ನು ದೇಹ ಮಾತ್ರ ಎಂದು ತಿಳಿದಿದೆ. ಮನಸ್ಸು ಇಲ್ಲವೇ ಇಲ್ಲವೆಂಬ ರೀತಿಯಲ್ಲಿ ನೋಡುತ್ತಿದೆ. ಧಾರ್ಮಿಕ ನಿರ್ಣಯಗಳು ಸ್ತ್ರೀಯ ಅಸ್ತಿತ್ವವನ್ನು ಅತಂತ್ರಗೊಳಿಸಿದಾಗ ನಾದಿರನಂತವರು ಆತ್ಮಹತ್ಯೆಯ ಮೂಲಕ ಪ್ರತಿರೋಧವನ್ನು ತೋರುತ್ತಾರೆ. ಕಾದಂಬರಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನೀಡುವ ವಿವಾಹ ವಿಚ್ಚೇದನವೂ ಹೆಣ್ಣಿನ ಬದುಕನ್ನು ವಿಚಲಿತಗೊಳಿಸುತ್ತದೆ. ಅಲ್ಲದೆ ಕಾದಂಬರಿಯಲ್ಲಿ ಎದುರಾಗುವ ಸಮಸ್ಯೆಯ ನಿವಾರಣೆಗೆ ಇರುವ ಹಲವು ಸಾಧ್ಯತೆಯನ್ನು ಲೇಖಕಿ ತೆರೆದಿಡುತ್ತಾ ಹೋಗುತ್ತಾರೆ. ಆದರೆ ಪುರುಷನಿಷ್ಠ ವ್ಯವಸ್ಥೆ ಇದರ ಕಡೆಗೆ ಗಮನಿಸದೆ ತನ್ನ ಮೂಗಿನ ನೇರಕ್ಕೆ ವ್ಯವಹರಿಸುತ್ತದೆ ಎಂದು ಡಾ. ಕವಿತಾ ರೈ ಉದಾಹರಣೆ ಸಹಿತ ವಿವರಿಸಿದರು.

    ಕಾರ್ಯಕ್ರಮದ ಎರಡನೆಯ ಭಾಗವಾಗಿ ನಡೆದ ಕವಿಗೋಷ್ಟಿಯಲ್ಲಿ ಕನ್ನಡ, ತುಳು, ಹವಿಗನ್ನಡ, ಹಿಂದಿ, ಕೊಡವ, ಇಂಗ್ಲಿಷ್ ಮೊದಲಾದ ಭಾಷೆಯಲ್ಲಿ ಬರೆದ ಕವನಗಳನ್ನು ವಿದ್ಯಾರ್ಥಿಗಳು ವಾಚಿಸಿದರು. ಇವರ ಕವಿತೆಗಳು ವರ್ತಮಾನದ ವಿವಿಧ ಸಮಸ್ಯೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾದವು.

    ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರಕ್ರಿಯೆಯನ್ನು ಕ್ರಿಯಾಶೀಲಗೊಳಿಸುವುದಕ್ಕೆ ಇಂತಹ ಕವಿಗೋಷ್ಟಿಗಳು ಪ್ರೇರಣೆಯಾಗುತ್ತವೆ. ಜಗತ್ತಿನಲ್ಲಿ ಕವನಕ್ಕೆ ವಸ್ತುವಾಗಬಲ್ಲ ಸಂಗತಿಗಳು ಸಾಕಷ್ಟಿವೆ. ಆದರೆ ಅವುಗಳನ್ನು ನಾವು ಹೇಗೆ ನೋಡುತ್ತೇವೆ ಮತ್ತು ಅಭಿವ್ಯಕ್ತಿಸುತ್ತೇವೆ ಎಂಬುದು ಮುಖ್ಯ. ಜನರ ಮನಸ್ಸನ್ನು ತಟ್ಟುವ ಭಾವನೆಗಳು ಕಾವ್ಯವಾಗುತ್ತದೆ. ಕಾವ್ಯವನ್ನು ಬರೆಯಲು ಕಾವ್ಯಭಾಷೆ ಮತ್ತು ವ್ಯವಧಾನವಿರಬೇಕು ಎಂದು ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಮಾಧವ ಭಟ್ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲದೆ ಡಾ. ಇಂದಿರಮ್ಮ, ಡಾ. ಕವಿತಾ ರೈ, ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಮಾಧವ ಭಟ್ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.

    ಕಾರ್ಯಕ್ರಮದ ಆರಂಭದಲ್ಲಿ ಡಾ. ಶ್ರೀಧರ ಎಚ್. ಜಿ. ಸ್ವಾಗತಿಸಿದರು. ಭರತ್‌ರಾಜ್ ವಂದಿಸಿದರು. ಶ್ರೀಮತಿ ಮೋತಿಬಾಯಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

    3 Responses to “೦೩.೦೪.೨೦೧೦ ಶನಿವಾರ - ಉಪನ್ಯಾಸ ಮತ್ತು ಕವಿಗೋಷ್ಟಿ”

    dhananjaya kumble said...
    April 11, 2010 at 9:15 AM

    varadi chennagide. daakhaleya dristiyinda tumba upayukta
    kumble


    ಡಾ.ಶ್ರೀಧರ ಎಚ್.ಜಿ. said...
    May 3, 2010 at 12:03 PM

    Dhanyavaada Kumbleyavarige. Blog bagege nimma snehitarigoo tilisi.

    Dr.H.G.Sridhara


    bharathraJ SORAKE said...
    March 18, 2011 at 8:38 PM

    sir, varadiyalli nanna hesru ede alva. andina karyakrama ega kanna munde barta ede


    Subscribe