Sunday, March 28, 2010

0

ಸಾಹಿತ್ಯಕ್ಕೆ ಪುತ್ತೂರಿನ ಕೊಡುಗೆ - ವಿಚಾರಗೋಷ್ಟಿ

  • Sunday, March 28, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಬಾಲವನ ಕನ್ನಡಿಗರಿಗೆಲ್ಲ ಪವಿತ್ರವಾದ ಸ್ಥಳ. ಶಿವರಾಮ ಕಾರಂತರಿಂದಾಗಿ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಪುತ್ತೂರಿಗೆ ಹೆಸರು ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲವನದಲ್ಲಿ ನಿರಂತರವಾಗಿ ಸಾಹಿತ್ಯದ ಚಟುವಟಿಕೆಗಳು ನಡೆಯಬೇಕು. ಇಂದಿನ ವಿಚಾರಗೋಷ್ಟಿ ಚರ್ಚೆಗೆ ಆರಿಸಿಕೊಂಡಿರುವ ಉಗ್ರಾಣ ಮಂಗೇಶರಾವ್, ಎ.ಪಿ. ಸುಬ್ಬಯ್ಯ, ಕೆದಂಬಾಡಿ ಜತ್ತಪ್ಪ ರೈ, ಪ್ರೊ. ಬಿ. ಲೀಲಾಭಟ್ ಇವರೆಲ್ಲರೂ ಕಾರಂತರಿಗೆ ಹತ್ತಿರದವರಾಗಿದ್ದರು. ಅವರ ಬಗೆಗೆ ಬಾಲವನದಲ್ಲಿ ವಿಚಾರಗೋಷ್ಟಿ ನಡೆಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣ. ಇಂದು ವಿದ್ಯಾರ್ಥಿಗಳು ಕನ್ನಡದ ಕೆಲಸದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಎನ್. ಸುಬ್ರಹ್ಮಣ್ಯಂ ಹೇಳಿದರು.

    ಅವರು ಡಾ. ಶಿವರಾಮಕಾರಂತ ಬಾಲವನ ಸಮಿತಿ, ಕನ್ನಡ ಸಂಘ ಸಂತ ಫಿಲೋಮಿನಾ ಕಾಲೇಜು, ಕನ್ನಡ ಸಂಘ, ವಿವೇಕಾನಂದ ಕಾಲೇಜು ಇದರ ಸಹಯೋಗದಲ್ಲಿ ಬಾಲವನದಲ್ಲಿ ನಡೆದ ಕನ್ನಡ ಸಾಹಿತ್ಯಕ್ಕೆ ಪುತ್ತೂರಿನ ಕೊಡುಗೆ ಎಂಬ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಬೌದ್ಧಿಕವಾಗಿ ಮತ್ತು ಬೌತಿಕವಾಗಿ ಬಾಲವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಕೆಲಸದಲ್ಲಿ ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕೆಂದು ಬಾಲವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಆದ ಡಾ. ಹರೀಶ್ ಕುಮಾರ್ ಹೇಳಿದರು.

    ಪ್ರೊ. ವಿಷ್ಣುಭಟ್ ಸ್ವಾಗತಿಸಿದರು. ಪ್ರೊ. ಆರ್. ವೇದವ್ಯಾಸ ವಂದಿಸಿದರು. ಬಸ್ತಿಯಾಂ ಪಾಯಸ್ ಕಾರ್ಯಕ್ರಮ ನಿರ್ವಹಿಸಿದರು.

    ಅನಂತರ ನಡೆದ ವಿಚಾರಗೋಷ್ಟಿಯಲ್ಲಿ ಉಗ್ರಾಣ ಮಂಗೇಶ್ ರಾವ್ ಬದುಕು ಬರಹ ಎಂಬ ವಿಷಯದ ಮೇಲೆ ಡಾ. ಸುಬ್ರಹ್ಮಣ್ಯ ಭಟ್ ಪ್ರಬಂಧವನ್ನು ಮಂಡಿಸಿದರು. ಉಗ್ರಾಣರು ತಮ್ಮ ಬದುಕಿನಲ್ಲಿ ಎದುರಾದ ಸಂಘರ್ಷವನ್ನು ಮೀರಿ ನಿಂತವರು. ಅವರ ಕಾವ್ಯ, ಕಥೆಗಳು ಅತ್ಯಂತ ಸುಂದರವಾಗಿದೆ. ಹೃದ್ಯವಾದ ಗದ್ಯ ಅವರದು. ಪ್ರಾಚೀನ ಛಂದಸ್ಸನ್ನು ಬಳಸಿದ್ದರಿಂದ ಅವರ ಕವಿತೆಗಳು ಜನಪ್ರಿಯವಾಗಲಿಲ್ಲ. ಮಾನಂ ಪರಿಮಳಿಸಿ ಬೀಳ್ವುದೇ ಧನ್ಯಂ ಎಂಬ ಆದರ್ಶ ಉಗ್ರಾಣರದಾಗಿತ್ತು ಎಂದು ಉದಾಹರಣೆ ಸಹಿತ ವಿವರಿಸಿದರು.

    ಎ.ಪಿ. ಸುಬ್ಬಯ್ಯನವರು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು ಅನುವಾದಿಸಿದ ದು:ಖಾರ್ತರು ಕೃತಿ ಇಂದಿಗೂ ಮಹತ್ವದ್ದಾಗಿದೆ. ಪುತ್ತೂರು ಕರ್ನಾಟಕ ಸಂಘದ ಮೊದಲ ಅಧ್ಯಕ್ಷರಾಗಿದ್ದ ಎ.ಪಿ ಸುಬ್ಬಯ್ಯನವರು ಕಾರಂತರ ಕೆಲಸಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಧಿಕಾರಕ್ಕಾಗಿ ಹಂಬಲಿಸದ ನಿಜ ಅರ್ಥದಲ್ಲಿ ಮೌಲ್ಯಭರಿತ ರಾಜಕಾರಣ ಅವರದಾಗಿತ್ತು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅವರಿಗೆ ಪ್ರೌಢಿಮೆ ಇರುವುದರಿಂದ ಅನುವಾದ ಕಲೆ ಅವರಿಗೆ ಸಿದ್ದಿಸಿತ್ತು ಎಂದು ಡಾ. ಎ.ಪಿ. ರಾಧಾಕೃಷ್ಣ ಹೇಳಿದರು. ಅಜ್ಜನ ಬಗೆಗೆ ಮೊಮ್ಮಗ ಪ್ರಬಂಧವನ್ನು ಮಂಡಿಸಿದ್ದು ಹಲವರ ಗಮನ ಸೆಳೆತು.

    ಕಾಡು ಸೃಜನಶೀಲತೆಯ ಆಗರ. ಮನುಷ್ಯನ ಬದುಕು ಪ್ರಕೃತಿಯ ಒಡಲಿನಲ್ಲಿ ಅರಳಬೇಕು ಎಂದು ಮಾತಿಗೆ ತೊಡಗಿದ ಧನಂಜಯ ಕುಂಬ್ಳೆ ಜತ್ತಪ್ಪ ರೈಯವರ ಸಾಹಿತ್ಯದಲ್ಲಿ ಕಾಡಿನ ಹಸಿರಿದೆ. ಮನುಷ್ಯನ ಉಸಿರಿದೆ. ಅವರು ಬರೆದ ಬೇಟೆಯ ಸಾಹಿತ್ಯ ಅನನ್ಯವಾದುದು. ಕನ್ನಡಲ್ಲಿ ಬೇಟೆ ಸಾಹಿತ್ಯಕ್ಕೆ ಕೆದಂಬಾಡಿಯೇ ಸಾಮ್ರಾಟ. ಹಾಗೆಯೇ ಕೆದಂಬಾಡಿಯವರು ತುಳುವಿಗಾಗಿ ಮಾಡಿದ ಕೆಲಸ ಸರಿಯಾಗಿ ಗುರುತಿಸಲ್ಪಟ್ಟಿಲ್ಲ. ಅವರು ತುಳುವಿಗೆ ಅನುವಾದಿಸಿದ ಕೃತಿಗಳು ಮೂಲಕ್ಕಿಂತ ಭಿನ್ನವಾಗಿ ತುಳು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ತೆರೆದುಕೊಳ್ಳುತ್ತವೆ. ಕೆದಂಬಾಡಿಯವರ ಕೃತಿಗಳಲ್ಲಿ ತುಳುವಿನ ಸಾಂಸ್ಕೃತಿಕ ಮೌಲ್ಯಗಳನ್ನು ಆವರಿಸಿಕೊಂಡಿವೆ. ತುಳುಭೀಷ್ಮನ ಕೃತಿಗಳು ಮತ್ತೊಮ್ಮೆ ಎಲ್ಲರಿಗೂ ಸಿಗುವಂತಾಗಲಿ ಎಂದು ಆಶಿಸಿದರು.

    ಶಿವರಾಮ ಕಾರಂತರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಪ್ರೊ. ಬಿ. ಲೀಲಾಭಟ್ಟರು ಗ್ರಂಥಸಂಪಾದನೆಯಲ್ಲಿ ಒಂದು ಮಾದರಿಯನ್ನು ನಿರ್ಮಿಸಿದ್ದಾರೆ. ಕರಡು ತಿದ್ದುವಲ್ಲಿ ಅವರ ತಾಳ್ಮೆ ಮೆಚ್ಚುವಂತದು. ಉಗ್ರಾಣ, ಎಂ.ಎನ್. ಕಾಮತ್ ಕೃತಿಗಳು ಇವರನ್ನು ಮತ್ತೊಮ್ಮೆ ಕನ್ನಡಿಗರಿಗೆ ಪರಿಚಯಿಸಿವೆ. ಅವರ ಕೃತಿಗಳಲ್ಲಿ ಮಾಹಿತಿಗಳು ಸಿಗುವಷ್ಟು ಚಿಂತನೆಗೆ ಪೂರಕವಾದ ಅಂಶಗಳು ದೊರೆಯುವುದಿಲ್ಲ ಎಂದು ಶ್ರೀಮತಿ ತುಳಸಿ ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆ ಪ್ರೊ. ರಾಜಮಣಿಯವರದು. ಇಂದು ವಿಚಾರಗೋಷ್ಟಿಯಲ್ಲಿ ಚರ್ಚೆಗೆ ಒಳಗಾದ ಹಿರಿಯ ವಿದ್ವಾಂಸರು ಇತಿಹಾಸಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಇತಿಹಾಸವನ್ನು ಮುರಿಯುವ ಕೆಲಸ ನಡೆಯುತ್ತಿದೆ. ಅದನ್ನು ಮರುರೂಪಿಸುವ ಕೆಲಸ ನಡೆಯಬೇಕು. ಇಂದು ಹೃದಯವನ್ನು ತಟ್ಟುವ ಸಾಹಿತ್ಯ ಅಗತ್ಯವಾಗಿದೆ. ಸಹಜವಾದ ಭಾಷೆಯಿಂದ ಸಾಮಾನ್ಯರನ್ನು ತಲುಪಲು ಸಾಧ್ಯ. ಒಂದು ಕಾಲದಲ್ಲಿ ನಂಬಿದ ಮೌಲ್ಯಗಳು ಇಂದು ಮರೆವಿನ ಅಂಚಿಗೆ ಹೋಗುತ್ತಿವೆ. ಸಾಹಿತ್ಯ ಮತ್ತು ಸಂಸ್ಕೃತಿಪರ ಚಟುವಟಿಕೆಯಿಂದ ಇವುಗಳನ್ನು ಉಳಿಸಲು ಸಾಧ್ಯ ಎಂದು ರಾಜಮಣಿಯವರು ಹೇಳಿದರು.

    ವಿಚಾರಗೋಷ್ಟಿಯ ಕೊನೆಯಲ್ಲಿ ಡಾ. ಶ್ರೀಧರ ಎಚ್. ಜಿ. ವಂದಿಸಿದರು. ಬಾಲವನ ಸಮಿತಿಯ ವತಿಯಿಂದ ಎಲ್ಲರಿಗೂ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿವೇಕಾನಂದ ಕಾಲೇಜು, ಫಿಲೋಮಿನಾ ಕಾಲೇಜು, ಬೆಟ್ಟಂಪಾಡಿ ಸರ್ಕಾರಿ ಪದವಿ ಕಾಲೇಜು ಮತ್ತು ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಿಂದ ಬಂದ ೧೭೫ ಮಂದಿ ವಿದ್ಯಾರ್ಥಿಗಳು ವಿಚಾರಗೋಷ್ಟಿಯಲ್ಲಿ ಭಾಗವಹಿಸಿದ್ದರು.

    0 Responses to “ಸಾಹಿತ್ಯಕ್ಕೆ ಪುತ್ತೂರಿನ ಕೊಡುಗೆ - ವಿಚಾರಗೋಷ್ಟಿ”

    Subscribe