Sunday, March 14, 2010

2

ನೆನಪಿನಂಗಳ - ಶಾಲೆಯ ಮೊದಲ ದಿನ

 • Sunday, March 14, 2010
 • ಡಾ.ಶ್ರೀಧರ ಎಚ್.ಜಿ.
 • Share
 • ನನಗಾಗ ಆರು ವರ್ಷ. ನಮ್ಮ ತಂದೆ ನನ್ನನ್ನು ಶಾಲೆಗೆ ಸೇರಿಸುವುದರ ಬಗೆಗೆ ಚಿಂತಿತರಾಗಿದ್ದರು. ಮನೆಂದ ಪ್ರಾಥಮಿಕ ಶಾಲೆಗೆ ನಡೆದುಕೊಂಡು ಹೋಗುವುದು ದೂರ. ಅದೂ ಟಾರು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ವಾಹನಗಳ ಸಂಚಾರವಿರುವ ರಸ್ತೆ. ಮಳೆಗಾಲದಲ್ಲಿ ಇನ್ನಷ್ಟು ಕಷ್ಟ. ಹೀಗಾಗಿ ಸಾಕಷ್ಟು ಯೋಚಿಸಿ ನನ್ನನ್ನು ಸಾಲೆಕೊಪ್ಪದಲ್ಲಿ ಶಾಲೆಗೆ ಸೇರಿಸಿದರು. ಇದು ನನ್ನ ತಂದೆಯ ಮೂಲಮನೆ. ಇಲ್ಲಿ ನನ್ನ ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು ಅವರ ಮಕ್ಕಳು ಇದ್ದರು. ಕೂಡು ಕುಟುಂಬ. ತುಂಬಿದ ಸಂಸಾರ. ಶಾಲೆ ಆರಂಭವಾಗುವ ಮೊದಲ ದಿನ ಸಂಜೆ ನನ್ನನ್ನು ತಂದೆ ಕರೆದುಕೊಂಡು ಸಾಲೆಕೊಪ್ಪಕ್ಕೆ ಹೋದರು. ನನಗೆ ಮಾತ್ರ ಅಪ್ಪ, ಅಮ್ಮನನ್ನು ಬಿಟ್ಟು ಹೋಗುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಮರುದಿನ ಬೆಳಿಗ್ಗೆ ಅಜ್ಜಿ ದೊಡ್ಡವರಿಗೆಲ್ಲ ತಿಂಡಿ ಕೊಟ್ಟರು. ನಮ್ಮಂತಹ ಮಕ್ಕಳಿಗೆ ಬೆಳ್ತಿಗೆ ಅಕ್ಕಿಯ ಗಂಜಿ ಊಟ ! ಮನೆಯಲ್ಲಿ ತಿಂಡಿ ತಿಂದು ಅಭ್ಯಾಸವಿದ್ದ ನನಗೆ ಗಂಜಿ ಊಟ ಸ್ವಲ್ಪವೂ ಇಷ್ಟವಾಗಲಿಲ್ಲ. ಇದು ಹೀಗೇ ಆದರೆ ಹೇಗೆಂಬ ಚಿಂತೆ ಕಾಡತೊಡಗಿತು.
  ಅದು ಜೂನ್ ತಿಂಗಳು. ಮಳೆಗಾಲದ ಸಮಯ. ಅದೂ ಮಲೆನಾಡಿನ ಮಳೆ. ಹಿಡಿದರೆ ಬಿಡುವ ಪ್ರಶ್ನೆ ಇರಲಿಲ್ಲ. ಮುಂಜಾನೆಂದಲೇ ಮಳೆ ಆರಂಭವಾಗಿತ್ತು. ೯.೩೦ರ ಹೊತ್ತಿಗೆ ತಂದೆ ನನ್ನನ್ನು ಮನೆಯ ಸಮೀಪದಲ್ಲಿಯೇ ಇದ್ದ ಶಾಲೆಗೆ ಕರೆದುಕೊಂಡು ಹೋದರು. ಪ್ರವೇಶಾತಿಯ ಪ್ರಕ್ರಿಯೆಗಳನ್ನು ಮುಗಿಸಿ ಶನಿವಾರ ಬರುತ್ತೇನೆ ಎಂದು ತಂದೆ ಮರೆಯಾದರು. ನಾನು ಶಾಲೆಯ ಕಟ್ಟೆಯ ಮೇಲೆ ನಿಂತು ಅವರು ನನಗೆ ಬೆನ್ನುಹಾಕಿ ಹೋಗುವುದನ್ನು ನೋಡುತ್ತಾ ನಿಂತಿದ್ದೆ. ಕಣ್ಣಂಚಿನಲ್ಲಿ ನೀರು ಧಾರಾಕಾರವಾಗಿ ಇಳಿಯುತ್ತಿತ್ತು.
  ತಂದೆ ಮರೆಯಾಗುತ್ತಿದ್ದಂತೆ ಅಧ್ಯಾಪಕರು ಬಂದು ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಹಲಗೆ ಮಣೆಯ ಮೇಲೆ ಕೂರಿಸಿದರು. ಒಂದರಿಂದ ನಾಲ್ಕನೆಯ ತರಗತಿಯವರೆಗೆ ಸುಮಾರು ಇಪ್ಪತ್ತು ಮಕ್ಕಳಿದ್ದೆವು. ಒಬ್ಬ ಅಧ್ಯಾಪಕರಿದ್ದರು. ಬರೆಯಲು ತಂದ ಸ್ಲೇಟಿನ ಮೇಲೆ ಅಕ್ಷರವನ್ನು ಬರೆದು ತಿದ್ದಲು ಹೇಳಿದರು. ನಾನು ನನಗೆ ಕಂಡಹಾಗೆ ತಿದ್ದಿದೆ. ಮಧ್ಯಾಹ್ನ ಊಟಕ್ಕೂ ಹೋಗಿಬಂದೆ. ಮಧ್ಯಾಹ್ನದ ನಂತರ ನನಗೇಕೋ ಈ ವ್ಯವಸ್ಥೆ ಸರಿಹೊಂದುವುದಿಲ್ಲ ಎಂಬ ಭಾವನೆ ಬರತೊಡಗಿತು. ಅನಾಥ ಪ್ರಜ್ಞೆ, ಏಕಾಕಿತನ ಮನಸ್ಸನ್ನು ಆವರಿಸತೊಡಗಿತು. ಸಂಜೆ ಶಾಲೆ ಬಿಡುವ ಹೊತ್ತಿಗೆ ಈ ಭಾವನೆ ತೀವ್ರ ಸ್ವರೂಪವನ್ನು ಪಡೆದುಕೊಂಡು ಇಲ್ಲಿಂದ ಹೊರಟು ಬಿಡಬೇಕು ಎಂಬ ತೀರ್ಮಾನಕ್ಕೆ ಬಂದೆ. ಶಾಲೆ ಬಿಡುತ್ತಿದ್ದಂತೆ ಅಜ್ಜನ ಮನೆಗೆ ಹೋಗಿ ಸ್ಲೇಟನ್ನು ಒಂದು ಮೂಲೆಯಲ್ಲಿಟ್ಟೆ. ಅಜ್ಜಿ ತಿನ್ನಲು ಬೆಳಿಗ್ಗೆ ಮಾಡಿಟ್ಟಿದ್ದ ದೋಸೆಯನ್ನು ಕೊಟ್ಟರು. ತಿಂಡಿ ತಿಂದು ಹೊರಗೆ ಬಂದವನೇ ಮತ್ತೊಮ್ಮೆ ಯೋಚಿಸಿದೆ. ಅಜ್ಜನ ಮನೆಯಿಂದ ನಮ್ಮ ಮನೆರುವ ಸ್ಥಳ ಮುಂಡಿಗೆಹಳ್ಳಕ್ಕೆ ಸುಮಾರು ಮೂರು ಮೈಲಿ ದೂರ. ನಡೆದುಕೊಂಡು ಹೋಗಲು ಮುಕ್ಕಾಲು ಘಂಟೆಂದ ಒಂದು ಘಂಟೆ ಬೇಕು. ನಡುವೆ ಎರಡು ಹೊಳೆ. ನಿರ್ಜನ ಪ್ರದೇಶ. ಒಬ್ಬನೇ ಹೋಗಬಹುದೆಂದು ತೀರ್ಮಾನಿಸಿ ನನ್ನ ಕೊಡೆ ಹಿಡಿದುಕೊಂಡು ಯಾರಿಗೂ ಕಾಣದಂತೆ ಮನೆ ಬಿಟ್ಟೆ.
  ಸಾಲೆಕೊಪ್ಪ ಊರು ಕಳೆಯುತ್ತಿದ್ದಂತೆ ಮೊದಲ ಹೊಳೆ ಸಿಗುತ್ತದೆ. ಇದನ್ನು ದಾಟಲು ಆಗ ಸೇತುವೆ ಇರಲಿಲ್ಲ. (ಈಗ ಸೇತುವೆಯಿದೆ) ಹೊಳೆಯ ಬುಡಕ್ಕೆ ಬಂದು ನೋಡಿದರೆ ಸಾಕಷ್ಟು ನೀರು ತುಂಬಿ ಹರಿಯುತ್ತಿತ್ತು. ನನಗೆ ಅದನ್ನು ನೋಡಿ ನಿಜಕ್ಕೂ ಭಯವಾಯಿತು. ಸ್ವಲ್ಪದೂರ ಹೊಳೆಯಲ್ಲಿ ನಿಧಾನವಾಗಿ ಹೋದೆ. ಹೊಳೆಯ ನಡುವೆ ಬಂದಾಗ ಸೆಳವು ತೀವ್ರವಾಗಿತ್ತು. ಕಾಲಕೆಳಗಿನ ಮರಳು ಬಿರುಸಿನಿಂದ ನೀರಿನೊಡನೆ ಕೊಚ್ಚಿಹೋಗುತ್ತಿತ್ತು. ನಾನು ಹೊಳೆಯಲ್ಲಿ ತೇಲಿ ಹೋಗುತ್ತೇನೆ ಎನಿಸಿತು. ಆದರೂ ಹಿಂದಕ್ಕೆ ಮರಳುವ ಆಲೋಚನೆ ಬರಲೇ ಇಲ್ಲ. ಏನಾದರಾಗಲಿ ಎಂದು ನಿಧಾನವಾಗಿ ಸಾವರಿಸಿಕೊಳ್ಳುತ್ತ ಒಂದೊಂದೇ ಹೆಜ್ಜೆಯನ್ನಿಟ್ಟು ಮುಂದುವರಿದೆ. ಆತಂಕಗಳ ನಡುವೆ ಮೊದಲ ಕಂಟಕ ಮುಗಿದಿತ್ತು. ನಾನು ಸಾಲೆಕೊಪ್ಪದ ಹೊಳೆಯನ್ನು ದಾಟಿದ್ದೆ.
  ಈಗ ಮತ್ತೊಮ್ಮೆ ಆಲೋಚನೆಗಿಟ್ಟುಕೊಂಡಿತು. ಮುಂದೆ ಸಿಗುವ ಹೊಳೆ ಇದಕ್ಕಿಂತ ದೊಡ್ಡದು. ನೀರೂ ಹೆಚ್ಚಿರುತ್ತದೆ ಎಂಬ ಆಲೋಚನೆ ಬಂತು. ತಕ್ಷಣ ನನ್ನ ದಾರಿಯನ್ನು ಬದಲಾಸಿದೆ. ಮೊದಲಿನ ಯೋಜನೆಯ ಪ್ರಕಾರ ಪುರ ಎಂಬ ಊರಿನ ಮೂಲಕ ನಾನು ಮುಂಡಿಗೆಹಳ್ಳದ ಹೊಳೆಯನ್ನು ದಾಟಿ ಮನೆ ಸೇರಬೇಕಾಗಿತ್ತು. ಆದರೆ ಮುಂಡಿಗೆ ಹಳ್ಳದ ಹೊಳೆಗೆ ಹೆದರಿ ದಾರಿಯನ್ನು ಬದಲಾಸಿದೆ. ಇದು ಸುತ್ತುಬಳಸಿನ ದಾರಿ. ಸಮಯವೂ ಹೆಚ್ಚು ಬೇಕು. ಆದರೆ ಧೈರ್ಯಮಾಡಿ ಹೊಸದಾರಿಯನ್ನು ಹಿಡಿದೆ. ನನ್ನ ಜೊತೆಗೆ ಇದ್ದದ್ದು ಒಂದು ಕೊಡೆ ಮಾತ್ರ.
  ಸಂಜೆಯಾಗತೊಡಗಿತ್ತು. ಮಳೆಗಾಲವಾದ್ದರಿಂದ ಕತ್ತಲಾಗುವುದು ತುಸು ಬೇಗ. ಹೀಗಾಗಿ ನಡೆಯುವುದನ್ನು ಬಿಟ್ಟು ಅಷ್ಟಷ್ಟು ದೂರ ಓಡತೊಡಗಿದೆ. ಗಾಡಿಗೆರೆ, ಕಲ್ಮಕ್ಕಿಯನ್ನು ದಾಟಿ ಹುಳೆಗಾರು ದೇವಸ್ಥಾನದ ಹತ್ತಿರ ಬರುವಾಗ ಅಲ್ಲಿ ನನ್ನ ತಾಯಿಯ ಮನೆಯ ಪಕ್ಕದ ರಾಮಣ್ಣ ಮತ್ತು ಇತರರು ವಾಲಿಬಾಲ್ ಆಡುತ್ತಿದ್ದರು. ಅವರಿಗೆ ಕಾಣಬಾರದೆಂದು ಕೊಡೆಯನ್ನು ಬಿಡಿಸಿ ಅವರಿಗೆ ಮುಖ ಕಾಣದಂತೆ ಮಾಡಿಕೊಂಡು ದೇವಸ್ಥಾನದ ಸಮೀಪ ಎಡಕ್ಕೆ ತಿರುಗಿ ಕಾಲುದಾರಿಯನ್ನು ಹಿಡಿದೆ. ನಿರ್ಜನ ಪ್ರದೇಶ. ಕಾಡುಬೇರೆ. ಇಲ್ಲಿನ ಕಾಡು ಕಳೆಯುವವರೆಗೆ ಓಡಿದೆ. ಕತ್ತಲಾಗುವ ಹೊತ್ತಿಗೆ ಮನೆ ಸೇರಿದೆ. ನನ್ನನ್ನು ನೋಡಿ ಅಮ್ಮನಿಗೆ ಆಶ್ಚರ್ಯ ಮತ್ತು ಗಾಬರಿ ! ಈ ಮಳೆಯಲ್ಲಿ ಹೇಗೆ ಬಂದೆ ಎಂದು ಕೇಳಿದರು. ತಂದೆ ಹೊರಗೆ ಹೋಗಿದ್ದವರು ಮನೆಗೆ ಬಂದರು. ನನ್ನನ್ನು ನೋಡಿ ಅವರಿಗೂ ಆಶ್ಚರ್ಯ. ಇವನು ಹೊಳೆ ದಾಟಿ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರದು. ಮನೆಯಲ್ಲಿ ಹೇಳಿ ಬಂದಿದ್ದೀಯ ಎಂದು ಕೇಳಿದರು. ನಾನು ಮಾತನಾಡಲಿಲ್ಲ. ನಕಾರಾತ್ಮಕವಾಗಿ ತಲೆಯಾಡಿಸಿದೆ. ಇದನ್ನು ನೋಡಿ ಅವರಿಗೂ ಕಳವಳ ಆರಂಭವಾಯಿತು. ಬೆಳಿಗ್ಗೆಯೇ ಎದ್ದು ಸಾಲೆಕೊಪ್ಪಕ್ಕೆ ಹೋಗಿ ಹೇಳಿ ಬರಬೇಕು ಎಂದು ನಿರ್ಧರಿಸಿದರು. ಈಗಿನ ಹಾಗೆ ಸಂಪರ್ಕಿಸುವುದಕ್ಕೆ ದೂರವಾಣಿಗಳು ಇಲ್ಲದ ಕಾಲವದು. ರಾತ್ರಿ ಊಟವಾಗುವ ಹೊತ್ತಿಗೆ ಚಿಕ್ಕಪ್ಪ ಸಾಲೆಕೊಪ್ಪದಿಂದ ನನ್ನನ್ನು ಹುಡುಕಿಕೊಂಡು ಬಂದರು. ಎಲ್ಲರೂ ಒಟ್ಟು ಸೇರಿ ನನ್ನನ್ನು ಗದರಿದರು. ನಾನು ಅಳುತ್ತ ನಿಂತಿದ್ದೆ. ಚಿಕ್ಕಪ್ಪ ರಾತ್ರಿ ಉಳಿದುಕೊಂಡು ಬೆಳಿಗ್ಗೆ ಹಿಂದಿರುಗಿ ಹೋದರು.
  ಇದಾಗಿ ಒಂದು ವಾರದ ನಂತರ ನನ್ನನ್ನು ಮನೆಯಿಂದ ಒಂದೂವರೆ ಮೈಲಿ ದೂರದಲ್ಲಿದ್ದ ಆಲಳ್ಳಿ ಶಾಲೆಗೆ ಸೇರಿಸಿದರು. ಇದು ಬಟಾಬಯಲಿನಲ್ಲಿ ಇದ್ದ ಶಾಲೆ. ಮಧ್ಯಾಹ್ನಕ್ಕೆ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆ. ಮಳೆಗಾಲದಲ್ಲಿ ನೀರು ಕಡಿಮೆ ಇದ್ದರೆ ಮನೆಯ ಸಮೀಪದಲ್ಲಿ ಹರಿಯುತ್ತಿದ್ದ ಮುಂಡಿಗೆ ಹಳ್ಳದ ಹೊಳೆಯನ್ನು ಅಪ್ಪ ದಾಟಿಸುತ್ತಿದ್ದರು. ಆಲಳ್ಳಿ ಗುಡ್ಡದಲ್ಲಿ ಕಾಲ್ದಾರಿಯಲ್ಲಿ ನುಸುಳಿ ಶಾಲೆ ಸೇರುತ್ತಿದ್ದೆ. ಮಾರ್ಗದಲ್ಲಿ ಬೇಕಾದಷ್ಟು ಹೊಳೆದಾಸವಾಳ ಹಣ್ಣು ತಿನ್ನಲು ಸಿಗುತ್ತಿತ್ತು. ಹೊಳೆ ತುಂಬಿದ್ದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಇಲ್ಲಿ ನನಗೆ ಈಶ್ವರನಾಯ್ಕ ಎಂಬ ಅಧ್ಯಾಪಕರಿದ್ದರು. ಇದು ಏಕೋಪಾಧ್ಯಾಯ ಶಾಲೆಯಾದ್ದರಿಂದ ಗುರುಗಳು ಬಂದ ನಂತರ ಬಾಗಿಲು ತೆರೆಯುತ್ತಿತ್ತು. ತರಗತಿಯ ಕಸ ಹೊಡೆಯುವುದು, ಬೆಲ್ ಹೊಡೆಯುವುದು ನೀರು ತಂದಿಡುವುದು ಮುಂತಾದ ಕೆಲಸವನ್ನು ನಾವೇ ಮಾಡಬೇಕಾಗಿತ್ತು. ಆಲಳ್ಳಿಯ ಈ ಶಾಲೆಯಲ್ಲಿ ನಾನು ಎರಡು ವರ್ಷ ಕಲಿತೆ. ಆದರೂ ಇದರಲ್ಲಿ ಒಂದು ಸಂತೋಷವಿತ್ತು. ಅಪ್ಪ, ಅಮ್ಮನ ಸಾಮೀಪ್ಯದ ಸುಖವಿತ್ತು. ಇಲ್ಲಿಂದ ಮುಂದೆ ಶಾಲೆ ನನಗೆ ಯಾವಾಗಲೂ ಬೇಸರ ತರಿಸಿದ್ದಿಲ್ಲ.

  2 Responses to “ನೆನಪಿನಂಗಳ - ಶಾಲೆಯ ಮೊದಲ ದಿನ”

  Kavitha said...
  March 16, 2010 at 2:44 AM

  Good one!


  ರಾಕೇಶ್ ಕುಮಾರ್ ಕಮ್ಮಜೆ said...
  March 20, 2010 at 11:20 AM

  Nice article. its very important to remember those experiences...


  Subscribe