Saturday, December 31, 2011

0

ಸಿರಿವಂತೆ ಶಾಲೆಗೆ ಭೇಟಿ

  • Saturday, December 31, 2011
  • ಡಾ.ಶ್ರೀಧರ ಎಚ್.ಜಿ.
  • Share

  • ೨೦೧೦ರ ನವಂಬರ್ ಡಿಸೆಂಬರ್ ವೇಳೆಗೆ ಒಮ್ಮೆ ಊರಿಗೆ ಹೋಗಿದ್ದೆ. ಹೀಗೇ ಕುಳಿತವನಿಗೆ ನಾನು ಕಲಿತ ಶಾಲೆಗೆ ಒಮ್ಮೆ ಹೋಗಿ ಬರಬೇಕೆಂದು ಅನಿಸಿತು. ನನ್ನ ತಮ್ಮನ ಮಗ ಚೇತನ್ ಕರೆದುಕೊಂಡು ಸುಮಾರು ೧೧ ಗಂಟೆಯ ಹೊತ್ತಿಗೆ ಶಾಲೆಗೆ ಹೋದೆ. ಮಕ್ಕಳೆಲ್ಲ ಕಲೆಕೆಯಲ್ಲಿ ತೊಡಗಿದ್ದರು. ನಾನು ನೇರವಾಗಿ ಮುಖ್ಯೋಪಾಧ್ಯಾಯರ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ನಾನು ಬಂದಿರುವುದನ್ನು ಗಮನಿಸಿದ ಟೀಚರ್ ಒಬ್ಬರು ಅದೇ ಹೊತ್ತಿಗೆ ಅಲ್ಲಿಗೆ ಬಂದರು. ನಾನು ನನ್ನ ಪರಿಚಯವನ್ನು ಮಾಡಿಕೊಂಡೆ. ಸುದೈವಕ್ಕೆ ಅವರೇ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರ ಹೆಸರು ಅನಿತಾ ಕಾನಡೆ. ಉತ್ತರ ಕನ್ನಡ ಮೂಲದವರು. ನನ್ನನ್ನು ಕೂರಿಸಿ ಮಾತನಾಡಿದರು. ನನ್ನನ್ನು ಶಾಲೆಯ ಕೊಠಡಿಗಳನ್ನು ತೋರಿಸಲು ಕರೆದುಕೊಂಡು ಹೋದರು.

    ನಾನು ಏಳನೆಯ ತರಗತಿ ಓದಿದ ಕೊಠಡಿಯನ್ನು ಪ್ರವೇಶಿಸಿದಾಕ್ಷಣ ತುಸು ಭಾವುಕನಾದೆ. ಅದೇ ಕೊಠಡಿಯಲ್ಲಿ ಈಗಲೂ ಏಳನೆಯ ತರಗತಿ ನಡೆಯುತ್ತಿತ್ತು. ನಾವು ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆ ಮಕ್ಕಳೆಲ್ಲ ಎದ್ದು ನಿಂತು ಗುಡ್ ಮಾರ್ನಿಂಗ್ ಸಾರ್ ಎಂದು ರಾಗಬದ್ಧವಾಗಿ ಹೇಳಿದರು. ನಾವೂ ಸಹ ಆ ವಯಸ್ಸಿನಲ್ಲಿ ಹಾಗೇ ಮಾಡಿರುವುದು ನೆನಪಾಯಿತು. ಒಂದಷ್ಟು ಹಳೆಯ ನೆನಪುಗಳು ನುಗ್ಗಿಬಂದವು. ಚಪ್ಪಲಿ ಇಲ್ಲದೆ ಶಾಲೆಗೆ ನಡೆದುಕೊಂಡು ಬರುತ್ತಿದ್ದ ಆ ದಿನಗಳು ನೆನಪಾದವು. ಗೆಳೆಯರು ಮತ್ತು ಪಾಠಮಾಡಿದ ಅಧ್ಯಾಪಕರ ಮುಖಗಳು ಸುಳಿದುಹೋದವು. ಕಣ್ಣಿನಲ್ಲಿ ನನಗೆ ಅರಿವಿಲ್ಲದೆ ಹನಿಗಳು ಮಡುಗಟ್ಟಿದವು. ಅನಂತರ ಮತ್ತೊಮ್ಮೆ ಮುಖ್ಯೋಪಾಧ್ಯಾಯರ ಎದುರು ಕುಳಿತೆ. ಕಾಫಿ ತರಿಸಿಕೊಡುವುದಾಗಿ ಹೇಳಿ ಉಪಚರಿಸಿದರು. ನನಗೆ ಕಾಫಿಯನ್ನು ಎಲ್ಲಿಂದ ತರಬೇಕೆಂದು ಗೊತ್ತಿತ್ತು. ಅವರ ಬಿನ್ನಹವನ್ನು ನಯವಾಗಿ ತಿರಸ್ಕರಿಸಿದೆ.

    ವಾಸ್ತವವಾಗಿ ಈ ಶಾಲೆ ಸಾಕಷ್ಟು ಹಳೆಯದು. ೧.೧೧.೧೯೨೨ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆರಂಭವಾಗಿತ್ತು. ನಾವು ಓದುವ ಕಾಲಕ್ಕೆ ಸಿರಿವಂತೆ ಮುಖ್ಯರಸ್ತೆಯ ಪಕ್ಕದಲ್ಲಿ ೧೯೨೨ರ ಕಾಲದಲ್ಲಿ ಕಟ್ಟಿದ ಹಳೆಯ ಕಲ್ಲಿನ ಕಟ್ಟಡವಿತ್ತು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅದನ್ನು ಉರುಳಿಸಿದರು. ಅನಂತರ ೨೦.೧೧.೧೯೫೮ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆರಂಭವಾಗಿತ್ತು. ನನ್ನ ಅಮ್ಮ ಸರೋಜ, ನಾನು, ತಮ್ಮ ಪ್ರಭಾಕರ ಮತ್ತು ತಂಗಿ ಸುಜಾತ ಇದೇ ಶಾಲೆಯಲ್ಲಿ ಓದಿದ್ದೇವೆ. ಹೀಗಾಗಿ ಈ ಶಾಲೆಗೆ ಏನಾದರೂ ನೀಡಬೇಕೆಂದು ಮನಸ್ಸಿನಲ್ಲಿ ಆಲೋಚನೆ ಬಂತು. ಶ್ರೀಮತಿ ಅನಿತ ಕಾನಡೆಯವರನ್ನು ಈ ಬಗೆಗೆ ಕೇಳಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ವಸ್ತುಗಳು ಏನಾದರೂ ಅಗತ್ಯವಿದ್ದರೆ ಹೇಳಿ ತಂದುಕೊಡುತ್ತೇನೆ ಎಂದೆ. ಅವರು ತಮ್ಮ ಸಹೋದ್ಯೋಗಿಗಳಲ್ಲಿ ಸಮಾಲೋಚನೆ ಮಾಡಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಮಾಡಲು ತಟ್ಟೆಯ ಅಗತ್ಯವಿದೆ. ತಂದುಕೊಟ್ಟರೆ ಉಪಕಾರವಾಗುತ್ತದೆ ಎಂದರು. ಸರಿ, ಮುಂದಿನ ಸಲ ಊರಿಗೆ ಬರುವಾಗ ತಂದು ಕೊಡುತ್ತೇನೆ ಎಂದು ಭರವಸೆ ನೀಡಿ ಮರಳಿದೆ.

    ಮೇ ೨೦೧೧ರಲ್ಲಿ ಊರಿಗೆ ಹೋಗುವಾಗ ಮರೆಯದೆ ೧೫೦ ಊಟದ ತಟ್ಟೆಗಳನ್ನು ಖರೀದಿಸಿ ತೆಗೆದುಕೊಂಡು ಹೋದೆ. ನಾನು ಹೋದ ಸಮಯದಲ್ಲಿ ಶಾಲೆಗೆ ರಜೆಯಿತ್ತು. ಶಾಲೆ ಆರಂಭವಾಗುವವರೆಗೆ ಇರಲು ನನಗೆ ಬಿಡುವಿರಲಿಲ್ಲ. ಹೀಗಾಗಿ ಶ್ರೀಮತಿ ಅನಿತಾ ಕಾನಡೆಯವರಿಗೆ ನನ್ನ ಸಂದಿಗ್ಧತೆಯನ್ನು ಹೇಳಿದಾಗ ಅವರು ಶಾಲೆಗೆ ಬರುವುದಾಗಿ ಹೇಳಿದರು. ಅದರಂತೆ ೧೨.೫.೨೦೧೧ರಂದು ನಾನು, ಪತ್ನಿ ಸವಿತಾ ಮತ್ತು ತಮ್ಮ ಪ್ರಭಾಕರ ಶಾಲೆಗೆ ಹೋದೆವು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸತ್ಯಮೂರ್ತಿಯವರು ಬಂದಿದ್ದರು. ಅವರಿಗೆ ನಾವು ತೆಗೆದುಕೊಂಡು ಹೋಗಿದ್ದ ತಟ್ಟೆಗಳನ್ನು ಹಸ್ತಾಂತರಿಸಿ ಬಂದೆವು. ನನಗೆ ಆ ಕ್ಷಣಕ್ಕೆ ಧನ್ಯತೆ ಮೂಡಿತು. ಮನಸ್ಸಿಗೆ ನಿರಾಳವೆನಿಸಿತು.

    0 Responses to “ಸಿರಿವಂತೆ ಶಾಲೆಗೆ ಭೇಟಿ”

    Subscribe