Saturday, December 31, 2011

0

ಸಿರಿವಂತೆ ಶಾಲೆ

 • Saturday, December 31, 2011
 • ಡಾ.ಶ್ರೀಧರ ಎಚ್.ಜಿ.
 • Share
 • ನಮ್ಮ ಮನೆಯಿಂದ ಸಿರಿವಂತೆ ಶಾಲೆಗೆ ನಡೆದುಕೊಂಡು ಹೋಗಲು ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ‍್ ದೂರವಿತ್ತು. ಹೀಗಾಗಿ ನಾವು ಮುಂಜಾನೆ ಎಂಟೂವರೆಗೆಲ್ಲ ಮನೆಬಿಡುತ್ತಿದ್ದೆವು. ಮುಂಡಿಗೆಹಳ್ಳದ ಸೇತುವೆ ಸಮೀಪ ನಮ್ಮ ತಂಡದ ಸದಸ್ಯರೆಲ್ಲರೂ ಒಟ್ಟುಸೇರುತ್ತಿದ್ದೆವು.

  ಶಾಲೆಗೆ ನಡೆದುಕೊಂಡು ಹೋಗುವಾಗ ನಮಗೆಲ್ಲ ಒಂದು ಭಯವಿತ್ತು. ೧೯೭೦ರ ಕಾಲದಲ್ಲಿ ಲಿಂಗನಮಕ್ಕಿ, ಜೋಗ, ಕಾರ್ಗಲ್ ಪ್ರದೇಶದಲ್ಲಿ ಶರಾವತಿ ನದಿಗೆ ಡ್ಯಾಂ ಕಟ್ಟುವ ಕೆಲಸಗಳು ಭರದಿಂದ ನಡೆಯುತ್ತಿದ್ದವು. ನಾವು ಶಾಲೆಗೆ ಹೋಗುವಾಗ ಈ ಕೆಲಸಗಳಿಗೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು ಎದುರಾಗುತ್ತಿದ್ದವು. ಇಂತಹ ಲಾರಿಗಳು ದೂರದಲ್ಲಿ ಕಾಣುವುದು ಬಿಡಿ, ಅವು ಬರುತ್ತಿರುವ ಶಬ್ದ ಕೇಳಿದರೂ ಸಾಕು, ನಾವು ಭಯಗೊಳ್ಳುತ್ತಿದ್ದೆವು. ರಸ್ತೆಯನ್ನು ಬಿಟ್ಟು, ದೊಡ್ಡ ಮರದ ಸಂದಿಯಲ್ಲಿ, ಪೊದೆಯ ಮರೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆವು. ಈ ಬಗೆಯ ಭಯಕ್ಕೆ ಕಾರಣ ನಮಗೂ ಸರಿಯಾಗಿ ಗೊತ್ತಿರಲಿಲ್ಲ. ನಮ್ಮ ಹಿರಿಯರು ತಮ್ಮಲ್ಲಿಯೇ ಮಾತನಾಡಿಕೊಳ್ಳುವಾಗ ಹೇಳಿದ ಒಂದು ಮಾತು ನಮ್ಮ ಕಿವಿಯ ಮೇಲೆ ಬಿದ್ದು ನಮ್ಮನ್ನು ಕಂಗಾಲು ಮಾಡಿತ್ತು. “ ಲಿಂಗನಮಕ್ಕಿಯಲ್ಲಿ ಬೃಹತ್ತಾದ ಡ್ಯಾಂ ಕಟ್ಟುತ್ತಿದ್ದಾರೆ. ಎಷ್ಟು ಕಟ್ಟಿದರೂ ಅದು ನಿಲ್ಲುತ್ತಿಲ್ಲ. ಅದಕ್ಕೆ ಮಕ್ಕಳ ಬಲಿ ಬೇಕಂತೆ. ಅದಕ್ಕೆ ಈಗ ಬಲಿ ನೀಡಲು ಮಕ್ಕಳನ್ನು ಹುಡುಕುತ್ತಿದ್ದಾರೆ. ಡದುರಿಗೆ ಮಕ್ಕಳು ಸಿಕ್ಕಿದರೆ ಬಲಿ ನೀಡಲು ಹಿಡಿದುಕೊಂಡು ಹೋಗುತ್ತಾರೆ”. ಎಂಬ ಮಾತು ನಮ್ಮ ತಲ್ಲಣಕ್ಕೆ ಕಾರಣವಾಗಿತ್ತು. ಇದು ನಿಜವೋ ಸುಳ್ಳೋ ಎಂದು ವಿವೇಚಿಸುವಷ್ಟು ನಮ್ಮಲ್ಲಿ ವಿವೇಕವಿರಲಿಲ್ಲ. ನಮ್ಮನ್ನು ರೇಗಿಸುವುದಕ್ಕೆ ಹೀಗೆ ಹೇಳಿದ್ದಿರಲೂ ಬಹುದು. ಈ ಗಾಳಿಮಾತಿನಿಂದ ನಾವಂತೂ ಹೆದರಿಹೋಗಿದ್ದೆವು. ಮೈಯೆಲ್ಲ ಕಿವಿಯಾಗಿ ಮಾರ್ಗದಲ್ಲಿ ಹೋಗುತ್ತಿದ್ದೆವು.

  ಮುಂಜಾನೆ ಒಂಬತ್ತೂವರೆಗೆಲ್ಲ ನಾವು ಶಾಲೆಗೆ ತಲುಪುತ್ತಿದ್ದೆವು. ಶಾಲೆಯ ಕೀಲಿಕೈ ಒಂದು ಮನೆಯಲ್ಲಿರುತ್ತಿತ್ತು. ಅದನ್ನು ತಂದು ಬೀಗ ತೆಗೆದು, ಕಸಹೊಡೆದು, ಕುಡಿಯಲು ನೀತು ತಂದಿಟ್ಟು ವ್ಯವಸ್ಥೆಗೊಳಿಸುತ್ತಿದ್ದೆವು. ಈ ಹೊತ್ತಿಗೆ ಸಾಗರದಿಂದ ಮಹೇಶ ಬಸ್ಸು ಬರುತ್ತಿತ್ತು. ಶ್ರೀ ಬಿ.ಎನ್. ರಾಮಚಂದ್ರ ಆಗ ನಮ್ಮ ಮುಖ್ಯೋಪಾಧ್ಯಾಯರು. ಸುಶೀಲಮ್ಮ, ರಾಧಾಬಾಯಿ ಮತ್ತು ಗುಡಿಗಾರ‍್ ಮೇಸ್ಟ್ರು ಇತರ ಅಧ್ಯಾಪಕರು. ಇವರಲ್ಲಿ ಗುಡಿಗಾರ‍್ ಮೇಸ್ಟ್ರು ವಯೋಮಾನದಲ್ಲಿ ಇತರರಿಗಿಂತ ಹಿರಿಯರು. ಅತ್ಯಂತ ಸಾತ್ವಿಕ ವ್ಯಕ್ತಿ. ಕೈಯ್ಯಲ್ಲಿ ಚರ್ಮದ ಒಂದು ಚಿಕ್ಕ ಬ್ಯಾಗು, ದಪ್ಪ ಗಾಜಿನ ಕನ್ನಡಕ, ಮೂಲಂಗಿ ಪ್ಯಾಂಟು, ಅರ್ಧತೋಳಿನ ಅಂಗಿ ಅವರ ವೇಷಭೂಷಣ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಮಾತನಾಡಿಸುತ್ತಿದ್ದರು. ನಮಗೆ ಅವರಲ್ಲಿ ವಿಶೇಷವಾದ ಸಲಿಗೆ. ಅವರಿಗೆ ನಮ್ಮಲ್ಲಿ ಪ್ರೀತಿ.

  ಬಿ.ಎನ್. ರಾಮಚಂದ್ರರಿಗೆ ವಿದ್ಯಾರ್ಥಿಗಳ ಬಗೆಗೆ ವಿಶೇಷವಾದ ಕಾಳಜಿಯಿತ್ತು. ಆ ಕಾಲಕ್ಕೆ ಅವರಿಗೆ ಮದುವೆಯಾಗಿರಲಿಲ್ಲ. ತಾರುಣ್ಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಶಾಲೆಗೆ ಅಥಿತಿಗಳು ಬಂದರೆ ಟೀ ತರುವುದು, ಕೆಲವೊಮ್ಮೆ ಬೆಲ್ ಹೊಡೆಯುವುದಕ್ಕೆ ಅವರು ನನ್ನನ್ನು ಕರೆಯುತ್ತಿದ್ದರು. ನನಗಿದು ಒಂದು ಗೌರವದ ಸಂಗತಿಯಾಗಿತ್ತು.

  ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರತೀವರ್ಷ ಆಗುತ್ತಿರಲಿಲ್ಲ. ನಾನು ಏಳನೆಯ ತರಗತಿಯಲ್ಲಿರುವಾಗ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಗುಡಿಗಾರ‍್ ಮೇಸ್ಟ್ರು ನಮ್ಮಿಂದ ಕುವೆಂಪು ಅವರ ಬಾಲಗೋಪಾಲ ನಾಟಕವನ್ನು ಮಾಡಿಸಿದ್ದರು. ನಾನು ಅದರಲ್ಲಿ ಗುರುವಿನ ಪಾತ್ರವನ್ನು ಮಾಡಿದ್ದೆ. ಅದೇ ದಿನ ಇನ್ನೊಂದು ಹಾಸ್ಯನಾಟಕವಿತ್ತು. ಅದರಲ್ಲಿ ನಾನು ಶಾಲೆಯ ಅಧ್ಯಾಪಕನ ಮಾಡಿದ್ದೆ. ಅದರಲ್ಲಿ ಒಂದು ಸಂಭಾಷಣೆ ಹೀಗಿದೆ.

  ಅಧ್ಯಾಪಕ ತರಗತಿಗೆ ಬಂದು ಹಾಜರಿ ಕರೆದ ನಂತರ ವಿದ್ಯಾರ್ಥಿಗಳಿಗೆ ಲಿಂಗದಲ್ಲಿ ಎಷ್ಟುವಿಧ? ಎಂದು ಒಂದು ಪ್ರಶ್ನೆ ಕೇಳುತ್ತಾನೆ. ಇದಕ್ಕೆ ಸರಿಯಾದ ಉತ್ತರ ಬರುವುದಿಲ್ಲ. ಆಗ ಲಿಂಗ ಎಂಬ ತುಸು ಕಿಲಾಡಿ ಹುಡುಗನೊಬ್ಬ ಮಹಾಲಿಂಗ ಮತ್ತು ಶಿವಲಿಂಗ ಎಂದು ಎರಡು ವಿಧ ಸಾರ‍್ ಎಂದು ಉತ್ತರಿಸಿದ. ಇದನ್ನು ಕೇಳಿ ಎಲ್ಲ ಹುಡುಗರು ಹೋ ಎಂದು ಕಿರುಚುವರು.

  ನಾನು ಹೇಳುವಂತಹ ಕ್ರೀಡಾಪಟುವೇನೂ ಆಗಿರಲಿಲ್ಲ. ಶಾಲೆಯ ಕಬಡ್ಡಿ ಮತ್ತು ಕೊ ಕ್ಕೊ ತಂಡದ ಸದಸ್ಯನಾಗಿದ್ದೆ. ತಾಲೂಕು ಮಟ್ಟದ ಕೊ ಕ್ಕೊಪಂದ್ಯ ನಮ್ಮ ಶಾಲೆಯಲ್ಲಿ ನಡೆದಿತ್ತು. ನಾವು ಸೆಮಿಫೈನಲ್ವರೆಗೆ ಹೋಗಿ ಸೋತೆವು ಎಂದು ನೆನಪು. ಹಾಗೆಯೇ ಸಾಗರದ ಜೂನಿಯರ‍್ ಕಾಲೇಜು ಮೈದಾನದಲ್ಲಿ ಕಬಡ್ಡಿ ಪಂದ್ಯ ನಡೆದಿತ್ತು. ನಾವು ನಾಲ್ಕನೆಯ ಸುತ್ತಿನಲ್ಲಿ ಸೋತಿದ್ದೆವು.

  ಸಾಗರದಲ್ಲಿ ನಡೆದ ಈ ಕಬಡ್ಡಿ ಪಂದ್ಯದಲ್ಲಿ ನಮ್ಮ ಆಟವು ಮಧ್ಯಾಹ್ನದ ಒಳಗೆ ಮುಕ್ತಾಯವಾಗಿತ್ತು. ಈ ಹೊತ್ತಿಗೆ ಸಾಗರದ ಶ್ರೀ ಟಾಕೀಸಿನಲ್ಲಿ ಮಯೂರ ಸಿನಿಮಾ ನಡೆಯುತ್ತಿತ್ತು. ಹಳ್ಳಿಯಲ್ಲಿ ಯಾರ ಬಾಯಲ್ಲಿ ನೋಡಿದರೂ ಮಯೂರ ಸಿನಿಮಾದ ಸುದ್ದಿ. ಹೀಗಾಗಿ ನನಗೂ ಅದನ್ನು ನೋಡಬೇಕೆಂದು ಆಸೆಯಾಗಿತ್ತು. ಇದಕ್ಕೆ ಸರಿಯಾಗಿ ನಮ್ಮ ಆಟವೂ ಮುಗಿದಿತ್ತು. ಹೀಗಾಗಿ ಮ್ಯಾಟಿನಿ ಶೋಗೆ ಹೋದ ನೆನಪಿದೆ. ಇದೇ ಸಿನಿಮಾಕ್ಕೆ ನನ್ನ ಚಿಕ್ಕಮ್ಮ ಕುಸುಮ ಮತ್ತು ಚಿಕ್ಕಪ್ಪ ಶ್ರೀಪಾದ ರಾವ್ ಬಂದಿದ್ದರು. ನನ್ನ ಟಿಕೇಟನ್ನು ಅವರೇ ತೆಗೆದುಕೊಟ್ಟರು. ಇದು ನಾನು ನೋಡಿದ ಮೊದಲ ಸಿನಿಮಾವೂ ಆಗಿತ್ತು. ಅತ್ಯಂತ ಸಂಭ್ರಮದಿಂದ ಕುಳಿತು ಈ ಸಿನಿಮಾವನ್ನು ನೋಡಿದ್ದೆ. ತೆರೆಯ ಮೇಲೆ ಚಿತ್ರಗಳು ಹೇಗೆ ಮೂಡಿಬರುತ್ತಿವೆ ಎಂಬುದು ಒಗಟಾಗಿಯೇ ಉಳಿದಿತ್ತು. ತುಂಬಾದಿನಗಳವರೆಗೆ ಈ ಸಿನಿಮಾದ ಸುದ್ದಿಯನ್ನು ಹೇಳಿ ಸಂತೋಷಪಟ್ಟಿದ್ದೆ.

  0 Responses to “ಸಿರಿವಂತೆ ಶಾಲೆ”

  Subscribe