Sunday, January 2, 2011

1

ನಮ್ಮ ತಂದೆ ಮುಂಡಿಗೆಹಳ್ಳಕ್ಕೆ ವಲಸೆ ಬಂದದ್ದು

 • Sunday, January 2, 2011
 • ಡಾ.ಶ್ರೀಧರ ಎಚ್.ಜಿ.
 • Share
 • ಹಿರಿಯ ಮಗ ನಾರಾಯಣಪ್ಪನಿಗೆ ಕೌಲಕೋಡಿನಿಂದ ಮದುವೆಯಾಯಿತು. ಇದಾಗಿ ಒಂದೆರಡು ವರ್ಷಕ್ಕೆ ಎರಡನೆಯ ಮಗ ಗಣಪತಿಗೆ ಖಂಡಿಕದ ದಾರಿಯಲ್ಲಿ ಸಿಗುವ ಕಲ್ಮಕ್ಕಿಯ ಹೊಸೊಕ್ಕಲು ನಾರಾಯಣಪ್ಪನ ಮಗಳು ಸರೋಜಳೊಂದಿಗೆ ವಿವಾಹವಾಯಿತು. ಇಲ್ಲಿ ಹೊಸೊಕ್ಕಲು ಎಂದರೆ ಹೊಸದಾಗಿ ಬಂದವರು ಎಂದರ್ಥ. ಕಲ್ಮಕ್ಕಿಗೆ ಇವರು ದೂರದ ಹೊನ್ನಾವರ ಸಮೀಪದ ಶರಾವತಿ ನದಿ ದಂಡೆಯಲ್ಲಿರುವ ಹಡಿನಬಾಳದಿಂದ ವಲಸೆ ಬಂದಿದ್ದರು. ಜೀವನೋಪಾಯಕ್ಕೆ ಖಂಡಿಕದ ರಾಮಭಟ್ಟರ ತೋಟವನ್ನು ಗೇಣಿಗೆ ಮಾಡಿಕೊಂಡಿದ್ದರು.

  ನನ್ನ ಅಪ್ಪ ಗಣಪತಿಗೆ ಮದುವೆಯಾದಾಗ ಹದಿನಾರು ವರ್ಷ. ಅದೇ ರೀತಿ ಅಮ್ಮ ಸರೋಜಂಗೆ ಹದಿಮೂರು ವರ್ಷ. ಇದೇ ಸಮಯಕ್ಕೆ ಸಾಲೆಕೊಪ್ಪದಿಂದ ಸುಮಾರು ನಾಲ್ಕು ಮೈಲಿ ದೂರದಲ್ಲಿರುವ ಮುಂಡಿಗೆ ಹಳ್ಳದಲ್ಲಿ ಆಸ್ತಿಯೊಂದನ್ನು ಖರೀದಿಸಿದರು. ಅಲ್ಲಿಗೆ ವ್ಯವಸಾಯ ಮಾಡಲು ಯಾರು ಹೋಗುವುದೆಂದು ಸಾಕಷ್ಟು ಚರ್ಚೆಯಾಗಿ ಅಂತಿಮವಾಗಿ ಗಣಪತಿ (ನನ್ನ ತಂದೆ) ಅಲ್ಲಿಗೆ ಹೋಗಿ ಸಾಗುವಳಿ ಮಾಡುವುದೆಂದು ನಿರ್ಧಾರವಾಯಿತು. ೧೯೬೦ರ ಹೊತ್ತಿಗೆ ನವದಂಪತಿಗಳು ಸಂಸಾರವನ್ನು ಆರಂಭಿಸಲು ಮುಂಡಿಗೆಹಳ್ಳಕ್ಕೆ ತೆರಳಿದರು.

  ಇಂದು ಮುಂಡಿಗೆಹಳ್ಳ ಒಂದು ಪರಿಚಿತ ಸ್ಥಳ. ರಾಷ್ಟ್ರೀಯ ಹೆದ್ದಾರಿ ೨೦೬ ಈ ಊರಿನ ಮೂಲಕ ಹಾದು ಹೋಗುತ್ತದೆ. ಶಿವಮೊಗ್ಗದ ಕಡೆಯಿಂದ ಜೋಗ ಜಲಪಾತವನ್ನು ನೋಡಲು ಹೋಗುವ ಪ್ರವಾಸಿಗರು ಸಮ್ಮ ಊರಿನ ಮೂಲಕವೇ ಹೋಗಬೇಕು. ವಿಕಿಮ್ಯಾಪಿಯಾದಲ್ಲಿ ನಿಮಗೆ ಮುಂಡಿಗೆಹಳ್ಳವನ್ನು ಗುರುತಿಸಲು ಸಾಧ್ಯ. ಈ ಊರಿಗೆ ಅಪಘಾತದ ಸ್ಥಳ ಎಂಬ ಹಣೆಪಟ್ಟಿ ಬೇರೆ ಇದೆ. ಇಲ್ಲಿ ನಡೆಯುವ ಅಪಘಾತಗಳಿಗೆ ಚಾಲಕರ ಅಜಾಗರೂಕತೆಯೇ ಕಾರಣ. ತುಸು ಇಳಿಜಾರಾದ ರಸ್ತೆಯಲ್ಲಿ ವೇಗವಾಗಿ ಬಂರುವ ವಾಹನ ಚಾಲಕರು ಸೇತುವೆಯನ್ನು ದಾಟುತ್ತಿದ್ದಂತೆ ಬಲಕ್ಕೆ ತಿರುಗಬೇಕು. ಈ ಸ್ಥಳದಲ್ಲಿ ಹಿಡಿತ ಸಿಗದೆ ವಾಹನಗಳು ಪಲ್ಟಿಯಾಗುತ್ತವೆ. ಈ ಬಗೆಯ ಅಪಘಾತಗಳಿಗೆ ಇನ್ನೊಂದು ಕಾರಣವನ್ನು ಕೆಲವರು ಗುರುತಿಸುತ್ತಾರೆ. ಮುಂಡಿಗೆಹಳ್ಳದ ಈ ಪ್ರದೇಶದಲ್ಲಿ ಒಂದು ಭೂತವಿದೆ. ಅದರ ಉಪಟಳವಿದು ಎಂದು ಕಥೆ ಹೇಳುವವರಿಗೇನೂ ಕಡಿಮೆಯಿಲ್ಲ. ಈ ಭೂತಪ್ಪನ ಕಥೆಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ.
  ೧೯೬೦ರ ಹೊತ್ತಿಗೆ ಮುಂಡಿಗೆ ಹಳ್ಳ ಹೇಗಿತ್ತು ಎಂದು ಗಮನಿಸುವ ಅಗತ್ಯವಿದೆ. ನಮ್ಮ ಮನೆಯ ಪರಿಸರದಲ್ಲಿ ಇದ್ದದ್ದು ಇದೊಂದೇ ಮನೆ. ಕರೆದರೆ, ಕೂಗಿದರೆ ಮರುದನಿ ಕೊಡುವುದಕ್ಕೆ ಇನ್ನೊಬ್ಬರಿಲ್ಲ. ಸರಿಸುಮಾರು ಪಶ್ಚಿಮಕ್ಕೆ ಮುಖಮಾಡಿದ ಒಂದು ಸಣ್ಣ ಹಂಚಿನ ಮನೆ. ಅದಕ್ಕೆ ತಾಗಿ ದನಗಳನ್ನು ಕಟ್ಟಲು ಒಂದು ಕೊಟ್ಟಿಗೆ. ಮನೆಯ ಹಿಂಬದಿಯಲ್ಲಿ ಸ್ನಾನಕ್ಕೆಂದು ನಿರ್ಮಿಸಿದ ಬಚ್ಚಲು. ಇದರೊಂದಿಗೆ ಕುಡಿಯುವ ನೀರಿನ ಬಾವಿ. ಬಚ್ಚಲು ಮತ್ತು ವಾಸದ ಮನೆಯ ನಡುವೆ ಒಂದು ಸಣ್ಣ ಅಂಗಳ. ಇದರಲ್ಲಿ ಒಂದು ತುಳಸಿ ಕಟ್ಟೆ.
  ಮನೆಯ ಮುಂಭಾಗದಲ್ಲಿ ಬತ್ತ ಬೆಳೆಯುವ ಗದ್ದೆ. ಗದ್ದೆಯ ನಡುವೆ ಹರಿದು ಹೋಗುವ ಮುಂಡಿಗೆಹಳ್ಳದ ಹೊಳೆ. ಹೊಳೆ ಎಂದರೆ ತೋಡಿಗಿಂತ ದೊಡ್ಡದು. ಆದರೆ ನದಿಗಿಂತ ಸಣ್ಣದು. ಮನೆಯ ಹಿಂಭಾಗ ದಟ್ಟವಾದ ಅರಣ್ಯ. ದಟ್ಟವಾದ ಬಿದಿರಿನ ಪೊದೆಗಳು. ಮನೆಗೆ ಹೋಗಲು ಇರುವುದು ಒಂದು ಕಾಲುದಾರಿ. ಸಂಜೆಯಾಗುತ್ತಿದ್ದಂತೆ ಮನೆಯ ಹಿಂಬದಿಯ ಕಾಡಿನಲ್ಲಿ ಹುಲಿ ಕೂಗುವ ಸದ್ದು ನಿರಂತರವಾಗಿ ಕೇಳುತ್ತಿತ್ತು. ಕೆಲವೊಮ್ಮೆ ಮನೆಯ ಸಮೀಪ ಹುಲಿರಾಯ ಬರುವುದಿತ್ತು. ಹಂದಿ, ನರಿ, ನವಿಲು ಮುಂತಾದವು ಮನೆಯ ಸಮೀಪದ ನಿತ್ಯ ಅತಿಥಿಗಳು. ಮನೆಯ ಹಿಂದೆ ತುಸು ದೂರದಲ್ಲಿ ಒಂದು ಚೌಡಿಯ ಮರವಿತ್ತು.! ಚೌಡಿ ಮರವೆಂದರೆ ಗ್ರಾಮೀಣ ಪರಿಭಾಷೆಯಲ್ಲಿ ಒಂದು ಸಾತ್ವಿಕ ದೇವತೆ ವಾಸವಾಗಿರುವ ಮರ ಎಂದರ್ಥ. ನಮ್ಮ ಮನೆಯಲ್ಲಿ ಇಂದಿಗೂ ಈ ಚೌಡಿಗೆ ನಡೆದುಕೊಳ್ಳುವ ಪದ್ಧತಿ ಇದೆ.

  ಅಮ್ಮ ಮುಂಡಿಗೆ ಹಳ್ಳಕ್ಕೆ ಬರುವಾಗ ಮದುವೆಯ ಸಂದರ್ಭದಲ್ಲಿ ಬಳುವಾರಿಗೆಂದು ಹಾಕಿದ ದನವನ್ನು ಜೊತೆಗೇ ತಂದಿದ್ದರು.
  ಲಿಂಗನಮಕ್ಕಿ ಆಣೆಕಟ್ಟನ್ನು ಕಟ್ಟುತ್ತಿದ್ದ ಸಮಯವಿದು. ಆಣೆಕಟ್ಟು ಮೇಲೆದ್ದಂತೆ ಒಂದೊಂದೇ ಊರುಗಳು ಮುಳುಗತೊಡಗಿದವು. ಇದರ ಪರಿಣಾಮವಾಗಿ ಗಾಲಿಮನೆಯಿಂದ ಒಂದು ಕುಟುಂಬ ಮುಂಡಿಗೆ ಹಳ್ಳಕ್ಕೆ ಬಂದಿತು. ಸರ್ಕಾರ ನೀಡಿದ ನೆಲದಲ್ಲಿ ಮನೆಕಟ್ಟಿಕೊಂಡರು. ಒಂದಷ್ಟು ನೆಲವನ್ನು ಖರೀದಿಸಿದರು. ರಸ್ತೆಯ ಇನ್ನೊಂದು ಬದಿಗೆ ಶರಾವತಿ ಹಿನ್ನೀರಿನಲ್ಲಿ ಮುಳುಗಿದ ಇನ್ನೊಂದು ಕುಟುಂಬ ಬಂದು ನೆಲೆಸಿತು. ಒಂದಿದ್ದ ಮನೆ ಮೂರಾಯಿತು.


  ಶಬ್ದಲೋಕ : ಬಳುವಾರಿ
  ಈ ಲೇಖನದ ಸಂದರ್ಭದಲ್ಲಿ ಈ ಶಬ್ದ ನಡುವೆ ಬಂದಿದೆ. ಇಂದಿನವರಿಗೆ ಇದರ ವಿವರಗಳನ್ನು ತಿಳಿಸುವ ಅಗತ್ಯವಿದೆ. ಈ ಶಬ್ದಕ್ಕೆ ಪರ್ಯಾಯವಾಗಿ ಬಳುವಳಿ ಎಂಬ ರೂಪವೂ ಬಳಕೆಯಲ್ಲಿದೆ. ಉಡುಗೊರೆ ಎಂದು ಇದಕ್ಕೆ ಅರ್ಥವನ್ನು ಹೇಳಬಹುದು. ಆದರೆ ಇಷ್ಟನ್ನೇ ಹೇಳಿದರೆ ಇದರ ಅರ್ಥ ಪೂರ್ಣವಾಗುವುದಿಲ್ಲ.

  ಮದುವೆಯ ಸಂದರ್ಭದಲ್ಲಿ ಬಳಕೆಯಾಗುವ ಪದವಿದು. ಮದುವೆಯಾಗುವ ಹುಡುಗಿಯ ಮನೆಯವರು ಒಂದು ಟ್ರಂಕಿನಲ್ಲಿ ಅಗತ್ಯ ವಸ್ತುಗಳನ್ನು ತುಂಬಿಸಿ ಕೊಡುವ ಪದ್ಧತಿಯಿತ್ತು. ಈಗಲೂ ಇದೆ.

  ಸಾಮಾನ್ಯವಾಗಿ ಬಳುವಾರಿ ಟ್ರಂಕನ್ನು ಸಿದ್ಧಪಡಿಸುವ ಜವಾಬ್ದಾರಿ ಮನೆಯ ಅಳಿಯನದು. ಈ ಟ್ರಂಕಿನಲ್ಲಿ ಸ್ವಲ್ಪ ಅಕ್ಕಿ, ತರಕಾರಿ, ಬೇಳೆ ಕಾಳುಗಳು, ಪೂಜಾ ಸಾಮಗ್ರಿ, ಪೂಜಿಸುವ ದೇವರು, ಅಡಿಗೆಯ ಪಾತ್ರೆ ಮುಂತಾದ ದಿನಬಳಕೆಯ ಸಾಮಗ್ರಿಗಳಿರುತ್ತವೆ. ನನ್ನ ಅಮ್ಮನಿಗೆ ಅಜ್ಜ ಒಂದು ಹಿತ್ತಾಳೆ ಚೊಂಬು ಮತ್ತು ಒಂದು ಹಸುವನ್ನು ಬಳುವಾರಿಗೆ ಕೊಟ್ಟ್ಟಿದ್ದರು.

  ಹಿಂದಿನ ಕಾಲದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಕಲ್ನಡಿಗೆ ಅಥವಾ ಎತ್ತಿನ ಗಾಡಿಯಲ್ಲಿ ಹೋಗಬೇಕಾಗಿತ್ತು. ಹೀಗಾಗಿ ಮದುಮಕ್ಕಳಿಗೆ ದಾರಿಯಲ್ಲಿ ಅಡಿಗೆ ಮಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಅಗತ್ಯ ಸಾಮಗ್ರಿಗಳನ್ನು ಕಳಿಸುತ್ತಿದ್ದರೆಂದು ಕಾಣುತ್ತದೆ. ಈ ಪದ್ಧತಿ ಸಾಂಕೇತಿಕ ರೂಪವನ್ನು ಪಡೆದು ಈಗಲೂ ಮಲೆನಾಡಿನಲ್ಲಿ ಭಾಗದಲ್ಲಿ ಆಚರಣೆಯಲ್ಲಿದೆ. ಆದರೆ ಇಂದು ಟ್ರಂಕಿನ ಬದಲು ಸೂಟ್‌ಕೇಸ್ ಬಳಸುತ್ತಾರೆ.

  ಹಳಗನ್ನಡ ಕಾವ್ಯಗಳಲ್ಲಿಯೂ ಬಳುವಳಿಯ ಪ್ರಸ್ತಾಪವಿದೆ. ಕೃಷ್ಣನು ಸುಭದ್ರೆಗೆ ಬಳುವಳಿಯನ್ನು ಕೊಟ್ಟ ಉಲ್ಲೇಖ ಪಂಪಭಾರತದಲ್ಲಿದೆ. ವಡ್ಡಾರಾಧನೆಯಲ್ಲಿ ಸುಮತಿಗೆ ಬಳುವಳಿ ನೀಡಿದ ವಿವರಗಳಿವೆ. ಕಾವ್ಯಗಳಲ್ಲಿ ಆನೆ, ಕುದುರೆ, ರಥ, ಪದಾತಿ, ಲಲನೆಯರು, ವಸ್ತ್ರಾಭರಣ, ವಾಹನ ಮುಂತಾದ ವಸ್ತುಗಳನ್ನು ಬಳುವಳಿಯಾಗಿ ನೀಡಿದ ವಿವರಗಳಿವೆ.

  1 Responses to “ನಮ್ಮ ತಂದೆ ಮುಂಡಿಗೆಹಳ್ಳಕ್ಕೆ ವಲಸೆ ಬಂದದ್ದು”

  Anonymous said...
  January 8, 2011 at 7:07 AM

  ನನ್ನ ತಿಳುವಳಿಕೆಯಲ್ಲಿ ಚೌಡಿ ತಾಮಸಿ. ಬ್ರಾಹ್ಮಣರ (ಸಾತ್ವಿಕ) ಸಂಸರ್ಗ ಬಂದಲ್ಲೆಲ್ಲಾ ಮತಾಂತರಗೊಂಡ ಭೂತ, ದೈವಗಳ ಹಾಗೇ ನಿಮ್ಮಲ್ಲೂ (ಮಡಿಕೇರಿಯ ನಮ್ಮಜ್ಜನ ಮನೆಯ ಬಳಿಯೂ ಒಬ್ಬಳಿದ್ದಾಳೆ) ಚೌಡಿ ಸಾತ್ವಿಕಗೊಂಡದ್ದಿರಬಹುದೇ?
  ಅಶೋಕವರ್ಧನ


  Subscribe