Monday, December 27, 2010

0

ಪ್ರೊ. ಮಾಲತಿ ಪಟ್ಟಣ ಶೆಟ್ಟಿಗೆ ನಿರಂಜನ ಪ್ರಶಸ್ತಿ

 • Monday, December 27, 2010
 • ಡಾ.ಶ್ರೀಧರ ಎಚ್.ಜಿ.
 • Share


 • ಇಲ್ಲಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರವು ಪ್ರತಿ ವರ್ಷ ನೀಡುವ ನಿರಂಜನ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ ಪ್ರೊ. ಮಾಲತಿ ಪಟ್ಟಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಜನವರಿ ೯ರಂದು ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

  ಕಥೆ, ಕವಿತೆ, ಸಂಪಾದನೆ, ವಿಮರ್ಶೆ, ಭಾಷಾಂತರ ಮೊದಲಾದ ಸಾಹಿತ್ಯಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ನಿರಂಜನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

  ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ಮೌನಕರಗುವ ಹೊತ್ತು, ಎಷ್ಟೊಂದು ನಾವೆಗಳು ಮುಂತಾದ ಕವನ ಸಂಕಲನ, ಇಂದು ನಿನ್ನಿನ ಕಥೆಗಳು, ಸೂರ್ಯಮುಳುಗುವುದಿಲ್ಲ ಕಥಾಸಂಗ್ರಹ, ಬಸವರಾಜ ಕಟ್ಟೀಮನಿ ಮತ್ತು ಶ್ರೀನಿವಾಸ ವೈದ್ಯ ಬದುಕು ಬರಹ ಕೃತಿಗಳಲ್ಲದೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ರೇಡಿಯೋ ನಾಟಕ, ಮಕ್ಕಳ ನಾಟಕ, ಮಕ್ಕಳ ಪ್ರವಾಸ ಕಥನ, ಮಹಿಳೆಯರ ಸಾಮಾಜಿಕ ಸಮಸ್ಯೆಯನ್ನು ಕುರಿತು ಸಾಕಷ್ಟು ಕೆಲಸ ಮಾಡಿದ್ದಾರೆ.

  ಮೂಸಲ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಟಾನದ ರಾಷ್ಟ್ರಮಟ್ಟದ ವರ್ಷದ ಲೇಖಕಿ ಪ್ರಶಸ್ತಿ-೨೦೦೯, ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ, ಮದರ್ ಥೆರೇಸಾ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ-ಸನ್ಮಾನಗಳಿಗೆ ಭಾಜನರಾಗಿರುವ ಮಾಲತಿ ಪಟ್ಟಣಶೆಟ್ಟಿ ಇವರ ಮುಡಿಗೆ ಇದೀಗ ನಿರಂಜನ ಪ್ರಶಸ್ತಿಯ ಗೌರವ ದೊರೆತಿದೆ.

  ಮೂಲತಃ ಕೊಲ್ಹಾಪುರದವರಾದ ಇವರು ಧಾರವಾಡದ ಜಿ.ಎಸ್.ಎಸ್. ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ-ಮುಖ್ಯಸ್ಥೆಯಾಗಿ ಸುಮಾರು ೩೪ ವರ್ಷ ಸೇವೆ ಸಲ್ಲಿಸಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಕೃತಿಗಳು ಕರ್ನಾಟಕ ವಿಶ್ವವಿದ್ಯಾನಿಲಯ ಹಾಗೂ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿರುವುದನ್ನೂ ಇಲ್ಲಿ ಸ್ಮರಿಸಬಹುದು.

  0 Responses to “ಪ್ರೊ. ಮಾಲತಿ ಪಟ್ಟಣ ಶೆಟ್ಟಿಗೆ ನಿರಂಜನ ಪ್ರಶಸ್ತಿ”

  Subscribe