Sunday, October 17, 2010

1

ಸದ್ಗುಣಿ ಕೃಷ್ಣಾಬಾಯಿ ಭಾಗ - 2

 • Sunday, October 17, 2010
 • ಡಾ.ಶ್ರೀಧರ ಎಚ್.ಜಿ.
 • Share
 • ಸದ್ಗುಣಿ ಕೃಷ್ಣಾಬಾಯಿ ಕಾದಂಬರಿ ತನ್ನ ರಚನಾ ವಿನ್ಯಾಸದಲ್ಲಿ ಮೂರು ಅಂಶಗಳನ್ನು ಹೊಂದಿದೆ.

  ೧. ಉತ್ತಮ ಗೃಹಿಣಿಯ ಲಕ್ಷಣಗಳು

  ೨. ಸ್ತ್ರೀ ಶಿಕ್ಷಣ ಮತ್ತು ಸಮಸ್ಯೆಗಳು

  ೩. ಪುರುಷರು ಪಡೆಯುವ ಶಿಕ್ಷಣ ಮತ್ತು ಉದ್ಯೋಗದ ಸಾಧ್ಯತೆ

  ಎಳೆಯ ವಯಸ್ಸಿನಲ್ಲಿ ಪತಿಗೃಹವನ್ನು ಸೇರಿದರೂ ಅಲ್ಲಿನ ರೀತಿ ನೀತಿಗಳಿಗೆ ಕೃಷ್ಣಾಬಾಯಿ ಹೊಂದಿಕೊಳ್ಳುವಳು. ಖಾಯಿಲೆ ಬಿದ್ದ ಅತ್ತೆಯ ಸೇವೆ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನ, ಗಂಡನ ಓದಿಗಾಗಿ ಮಾಡುವ ತ್ಯಾಗ, ಇಂಗ್ಲೆಂಡಿಗೆ ಹೋಗುವ ದಾರಿಯಲ್ಲಿ ಒದಗಿದ ವಿಪತ್ತಿನಿಂದ ಪತಿಯನ್ನು ಅಗಲಿದರೂ ಆತನ ಬರುವಿಕೆಗಾಗಿ ಕಾಯುವ ತಾಳ್ಮೆ, ಅಕ್ಕನ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸರಿದಾರಿಗೆ ತರುವಲ್ಲಿ ಆಕೆ ಪಡೆಯುವ ಯಶಸ್ಸು ಇವೆಲ್ಲವೂ ಕೃಷ್ಣಾಬಾಯಿ ತಾಳ್ಮೆ, ಸಹನೆ ಹಾಗೂ ಉತ್ತಮ ಗೃಹಿಣಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಸ್ತ್ರೀ ಆಧುನಿಕ ಶಿಕ್ಷಣವನ್ನು ಪಡೆದರೂ ಆಕೆ ಗೃಹಕೃತ್ಯದಲ್ಲಿಯೂ ನಿಪುಣಳಿರಬೇಕೆಂಬ ನಿಲುವು ಲೇಖಕಿಯದು.

  ಪಾಶ್ಚಾತ್ಯ ಶಿಕ್ಷಣವನ್ನು ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಪಡೆಯುವ ಅವಕಾಶ ದೊರೆತಾಗ ವಿಭಿನ್ನ ಪ್ರತಿಕ್ರಿಯೆಗಳು ಸಮಾಜದಲ್ಲಿ ಕಾಣಿಸಿಕೊಂಡವು. ಅದರಲ್ಲಿಯೂ ಸ್ತ್ರೀಗೆ ಶಿಕ್ಷಣ ಪಡೆಯುವ ಅವಕಾಶ ದೊರಕಿದ್ದು ಸಾಂಪ್ರದಾಯಿಕ ಸಮಾಜದಲ್ಲಿ ಪರ ವಿರೋಧದ ಸಂಘರ್ಷವನ್ನು ನಿರ್ಮಿಸಿತು. ಸ್ತ್ರೀಗೆ ಶಿಕ್ಷಣ ನೀಡಬೇಕೆಂಬ ಸುಧಾರಕ ಪಂಥದ ನಿಲುವುಗಳು ಪ್ರಚಾರದಲ್ಲಿರುವುದನ್ನು ಕಾದಂಬರಿ ಸೂಕ್ಷ್ಮವಾಗಿ ದಾಖಲಿಸುತ್ತದೆ. ಅದೇ ಹೊತ್ತಿನಲ್ಲಿ ಶಾಲೆಗೆಂದು ಬರುತ್ತಿದ್ದ ಹೆಣ್ಣು ಮಕ್ಕಳ ಬಗೆಗೆ ಅಸಹನೆ, ಅವರನ್ನು ಶಾಲೆಗೆ ಬರದಂತೆ ತಡೆಯುವ ಪ್ರಯತ್ನಗಳೂ ನಡೆದವು. ಕೃತಿಯೊಳಗೆ ಕೃಷ್ಣಾಬಾಯಿ ಸ್ವತ: ಈ ಬಗೆಯ ಅನುಭವಗಳನ್ನು ಪಡೆಯುವಳು. "ಕೃಷ್ಣಾಬಾಯಿಯು ಶಾಲೆಗೆ ಬರದಂತೆ ಮಾಡಬೇಕೆಂಬ ಪ್ರಯತ್ನ ನಡೆಯಿತು. ಆದರೆ ಕೃಷ್ಣಾಬಾಗೆ ಅಣ್ಣನದೂ, ಗುರುವಿನದೂ ಬೆಂಬಲವಿದ್ದಿದ್ದರಿಂದ ಅವರ ಪ್ರಯತ್ನ ನಿಷ್ಪಲವಾಯಿತು. ಅವರು ಎಷ್ಟೋಸಾರೆ ಇಲ್ಲಿಂದ ಎದ್ದು ಹೋಗಬಾರದೆ, ಇಲ್ಲಿ ಹೆಂಗಸರದೇನು ಕೆಲಸವದೆ, ಅವರ ಕೆಲಸ ಒಲಿಯ ಮುಂದಲ್ಲವೆ .. .. . ಇವರಿಗೆ ಓದು ಯಾತಕೆ ಬೇಕು ? ಬರಹ ಯಾತಕೆ ಬೇಕು? ದೇವರು ಕೊಟ್ಟದ್ದನ್ನು ಉಂಡು ತಿಂದು ಗಂಡಂದಿರ ಮನೆಯಲ್ಲಿ ಸಂಸಾರ ಮಾಡುವುದನ್ನು ಬಿಟ್ಟು ನಾಳೆ ಇವರು ಸಭೇ ಶಿರಸ್ತೆ ಕೆಲಸಗಳನ್ನು ಮಾಡಲಿಕ್ಕೆ ಹೋಗುವದು ಅಷ್ಟರಲ್ಲಿಯೇ ಇದೆ" ಎಂದು ಅಪಹಾಸ್ಯ ಮಾಡಿದ್ದಿದೆ. ಹಾಗೆಯೇ ಕೃಷ್ಣಾಬಾಯ ವಿವಾಹದ ಕುರಿತಾಗಿ ಮನೆಯಲ್ಲಿ ಮಾತುಕತೆಗಳು ಆರಂಭವಾದಾಗ ಮಾಧವರಾಯನ ತಾಯಿ ರಮಾಬಾಯಿ ಸಾಕಷ್ಟು ವಿಚಾರ ಮಾಡಹತ್ತಿದಳು. "ಅವಳು ಹಳೇ ತರದ ಹೆಂಗಸು ಇದ್ದು ಸಾಮಾಜಿಕದ ಸದ್ಯ ಸ್ಥಿತಿಯಲ್ಲಿ ಹೆಚ್ಚು ಕಡಿಮೆಯಾಗಬಾರದೆಂಬುವ ಜನರಲ್ಲಿ ಒಬ್ಬಳಾಗಿದ್ದಳು. ಪುಣೆ ಮುಂಬು ಮುಂತಾದ ಸುಧಾರಿಸಿದ ಪಟ್ಟಣಗಳಲ್ಲಿ ಆಕೆ ಬಹಳ ವರ್ಷಗಳವರೆಗೆ ಇದ್ದರೂ ಆಕೆಯ ಮೂಲ ಕರ್ನಾಟಕಸ್ಥಳಾದ್ದರಿಂದ ಹೆಂಗಸರು ವಿದ್ಯೆ ಕಲಿಯಬಾರದೆಂತಲೂ, ವಿದ್ಯೆ ಕಲಿಯುವುದರಿಂದ ಸ್ತ್ರೀಯರ ನೀತಿಯು ಕೆಡುತ್ತದೆಂತಲೂ, ಅವರು ಗುರು ಹಿರಿಯರಿಗೆ ಯೋಗ್ಯ ಸನ್ಮಾನವನ್ನು ತೋರಿಸುವದಿಲ್ಲೆಂತಲೂ ಅವರು ಸಂಸಾರದ ಕೆಲಸಗಳಲ್ಲಿ ಮನಸ್ಸು ಹಾಕುವುದಿಲ್ಲೆಂತಲೂ, ಆಕೆಯ ದೃಢ ತಿಳುವಳಿಕೆಯಾಗಿತ್ತು".(ಪು.೧೪) ಹೀಗಾಗಿ ಸ್ತ್ರೀಗೆ ಶಿಕ್ಷಣವನ್ನು ನೀಡುವುದರ ಬಗೆಗೆ ವಿರೋಧವಿದ್ದ ಎರಡು ಬಗೆಯ ಮಾದರಿಯನ್ನು ನೋಡಲು ಸಾಧ್ಯ.

  . ಶಿಕ್ಷಣವನ್ನು ಪಡೆಯಲು ಬರುವ ಸ್ತ್ರೀ, ಪುರುಷನಿಂದ ಟೀಕೆಗೆ ಒಳಗಾಗುವುದು

  . ಶಿಕ್ಷಣವನ್ನು ಪಡೆದ ಸ್ತ್ರೀಯನ್ನು ಸ್ವತ: ಮಹಿಳೆಯರೇ ಅನುಮಾನದಿಂದ ನೋಡುವುದು.

  ಅಂದರೆ ಸ್ತ್ರೀ ಶಿಕ್ಷಣದ ನಿರಾಕರಣೆಯ ನೆಲೆಗಳು ಆ ಕಾಲದ ಸಮಾಜದ ಒಳಗೇ ಇದ್ದವು. ಭಿನ್ನ ಕಾರಣಗಳಿಗಾಗಿ ಹಿರಿಯ ತಲೆಮಾರಿನ ಪುರುಷ ಮತ್ತು ಸ್ತ್ರೀಯರಿಬ್ಬರೂ, ಸ್ತ್ರೀಗೆ ಶಿಕ್ಷಣ ನೀಡುವುದನ್ನು ಅನುಮಾನದಿಂದ ನೋಡುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾವಂತ ಪುರುಷರೇ ಸ್ತ್ರೀ ಶಿಕ್ಷಣವನ್ನು ಸಮರ್ಥಿಸಿದ್ದನ್ನು ನೋಡುತ್ತೇವೆ. ಪ್ರಸ್ತುತ ಕಾದಂಬರಿಯಲ್ಲಿ ಮಾಧವರಾಯ ಹೇಳುವ " ಜ್ಞಾನವು ಎಲ್ಲ ಹೆಂಗಸರಿಗೂ ಗಂಡಸರಿಗೂ ಸರಿಯಾಗಿಯೇ ಅತ್ಯಗತ್ಯವಾದದ್ದು. --- ಕೃಷ್ಣೆಯು ವಿದ್ಯಾಭ್ಯಾಸ ಮಾಡಿರುವುದು ಪ್ರಶಂಸನೀಯ ಗುಣವೇ ಆಗುತ್ತದೆ" (ಪು.೧೫) ಮಾತುಗಳು ಗಮನಾರ್ಹ. ಅನಂತರದ ದಿನಗಳಲ್ಲಿ ಕೃಷ್ಣಾಬಾಯಿಯು ತನ್ನ ಅತ್ತೆ ರಮಾಬಾಯಿಯ ಅಭಿಪ್ರಾಯವನ್ನು ಸುಳ್ಳಾಗಿಸುವಂತೆ ಹಾಗೂ ಮಾಧವರಾಯನ ಮಾತುಗಳನ್ನು ಸಮರ್ಥಿಸುವಂತೆ ಬದುಕುತ್ತಾಳೆ. ಮಾತ್ರವಲ್ಲ, ವಿದ್ಯಾವಂತ ಸೊಸೆಯನ್ನು ಪಡೆದಿದ್ದರಿಂದ ಆ ಕುಟುಂಬಕ್ಕೆ ಆದ ಒಳಿತನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಸ್ತ್ರೀಯರು ವಿದ್ಯಾವಂತರಾದರೂ ತಮ್ಮ ಕರ್ತವ್ಯಗಳನ್ನು ಚ್ಯುತಿಲ್ಲದೆ ನಡೆಸುವರೆಂದು ಪ್ರತಿಪಾದಿಸುವ ಅಗತ್ಯವಿತ್ತು. ಅಲ್ಲದೆ ಸ್ತ್ರೀಯರ ಉನ್ನತ ವಿದ್ಯಾಭ್ಯಾಸದ ಅಗತ್ಯವನ್ನೂ ಪ್ರತಿಪಾದಿಸಿ ಅವರು ಪ್ರಗತಿಪರ ನಿಲುವನ್ನು ತಳೆಯುವರು. ತಿರುಮಲಾಂಬ ಅವರ ಮೊದಲ ಕಾದಂಬರಿ ಸುಶೀಲೆಯಲ್ಲಿಯೂ ವಿದ್ಯಾವಂತ ಯುವತಿಯರು ಸಮಾಜದ ವಕ್ರದೃಷ್ಟಿಗೆ ಗುರಿಯಾಗುತ್ತಿದ್ದ ಚಿತ್ರ ದೊರೆಯುತ್ತದೆ. "ಒಳ್ಳೆಯ ಓದು, ಒಳ್ಳೆಯ ಓದು, ವಿರಾಮ ದೊರೆತು ಹೊತ್ತು ಹೋಗದಿದ್ದರೆ ಹಾಳು ಪುಸ್ತಕವನ್ನೇ ಓದಬೇಕೆ? ಓದು ಬರಹ ಬಲ್ಲ ಈ ಕಾಲದ ಹುಡುಗಿಯರನ್ನು ನಂಬುವುದು ಹೇಗೆ?" ಎಂಬ ಮಾತುಗಳು ದೊರೆಯುತ್ತವೆ. ಹೀಗಾಗಿ ಸ್ತ್ರೀಯರಿಗೆ ಶಿಕ್ಷಣದ ಅಗತ್ಯವನ್ನು ಸಮರ್ಥಿಸುವ ಅನಿವಾರ್ಯತೆ ಅಂದಿನ ಲೇಖಕಿಯರಿಗಿತ್ತು.

  ಸ್ತ್ರೀಯರು ಆಧುನಿಕ ವಿದ್ಯಾಭ್ಯಾಸದ ಜೊತೆಯಲ್ಲಿ ಗೃಹಕೃತ್ಯದಲ್ಲಿಯೂ ತಿಳುವಳಿಕೆ ಪಡೆದಿರಬೇಕೆಂಬ ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾದ ಪರಿಷ್ಕೃತ ನಿಲುವನ್ನು ಕಾದಂಬರಿ ತಾಳುತ್ತದೆ. ಇದು ಇಂಗ್ಲಿಷ್ ಶಿಕ್ಷಣಕ್ಕೆ ದೇಸಿನೆಲೆಯಲ್ಲಿ ಪ್ರತಿಕ್ರಿಸುವಂತೆ ಕಾಣುತ್ತದೆ. ಕೃಷ್ಣಾಬಾ ತನ್ನ ಅಕ್ಕನ ಮಕ್ಕಳಾದ ಕಾಶಿ ಮತ್ತು ಗೋದಾವರಿಗೆ ನೀಡುವ ಶಿಕ್ಷಣ ಈ ಬಗೆಯದು. ಮಕ್ಕಳ ಮನಸ್ಸನ್ನು ಬಂಧಿಸದೆ, ಬೆತ್ತದಲ್ಲಿ ದಂಡಿಸದೆ ಅವರ ಆಸಕ್ತಿಗೆ ಅನುಗುಣವಾದ ಶಿಕ್ಷಣ ನೀಡುವ ತಂತ್ರ ಕೃಷ್ಣಾಬಾಯದು. ಈ ರೀತಿಯ ಶಿಕ್ಷಣಕ್ಕೆ ಸಮಕಾಲೀನ ಸಾಮಾಜಿಕರಿಂದ ಟೀಕೆಗಳು ಬಂದಿವೆಯಾದರೂ ಕೃತಿಯ ಚೌಕಟ್ಟಿನೊಳಗೆ ಅವು ನಿಲ್ಲುವುದಿಲ್ಲ. ಶಿವರಾಮಕಾರಂತರು ಮಕ್ಕಳ ಶಿಕ್ಷಣದ ಬಗೆಗೆ ಆಲೋಚಿಸುವುದಕ್ಕಿಂತ ಸಾಕಷ್ಟು ಮೊದಲೇ ಮಕ್ಕಳ ಶಿಕ್ಷಣದ ಬಗೆಗೆ ಕಾದಂಬರಿ ತಳೆಯುವ ನಿಲುವು ಸಾಕಷ್ಟು ಹೊಸತನಗಳಿಂದ ಕೂಡಿದೆ. ಶಿಕ್ಷಣದ ಸಂದರ್ಭದಲ್ಲಿ ಕೃಷ್ಣಾಬಾಯಿ ಅಳವಡಿಸಿದ ಮಕ್ಕಳಿಗೆ ಚಿತ್ರಕಲೆ ಕಲಿಸುವುದು, ಹೊಲಿಗೆ ತರಬೇತಿ, ಅಡಿಗೆ ಮಾಡುವುದು, ತರಕಾರಿ ಬೆಳೆಯುವುದು, ಯಂತ್ರಗಳ ಪರಿಚಯ, ಛಾಪಖಾನೆಯನ್ನು ತೋರಿಸುವುದು ಮುಂತಾದ ಚಟುವಟಿಕೆಗಳು ಗಮನ ಸೆಳೆಯುತ್ತವೆ. ಲೇಖಕಿ ಸ್ವತ: ಶಿಕ್ಷಕಿಯಾದ್ದರಿಂದ ಮಕ್ಕಳ ಶಿಕ್ಷಣದ ಬಗೆಗೆ ವಿಶೇಷವಾಗಿ ಆಲೋಚಿಸಲು ಸಾಧ್ಯವಾದಂತಿದೆ. ಇವತ್ತಿಗೂ ಮಕ್ಕಳಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬೇಕೆಂಬ ವಿಚಾರ ಚರ್ಚಿತವಾಗುತ್ತಿದ್ದು, ಲೇಖಕಿಯ ಈ ಧೋರಣೆ ಹೆಚ್ಚು ಪ್ರಸ್ತುತ. ಶಿಕ್ಷಣದಿಂದ ಹುಡುಗರು ನೀತಿವಂತರೂ, ವ್ಯವಹಾರಜ್ಞರೂ ಆಗಬೇಕೆಂಬುದು ಉದ್ದೇಶವಾಗಿತ್ತು.

  ಕೃಷ್ಣಾಬಾಯಿ ಕಾದಂಬರಿಯ ಕೇಂದ್ರ ಪಾತ್ರ. ಲೇಖಕಿಯ ಆದರ್ಶ ಪಾತ್ರವಿದು. ಮಾಧವರಾಯನ ಯಶಸ್ಸಿನ ಹಿಂದೆ ಕೃಷ್ಣಾಬಾಯಿಯ ತ್ಯಾಗವಿದೆ. ಸ್ವತ: ಕೃಷ್ಣಾಬಾಯಿ ಪ್ರಾಚೀನ ಕಾವ್ಯ, ಭಗವದ್ಗೀತೆ, ಸಂಸ್ಕೃತ, ಇಂಗ್ಲಿಷ್, ಆಧುನಿಕ ಕವನಗಳನ್ನು ಓದುವುದರ ಜೊತೆಗೆ ಟೈಲರಿಂಗ್, ಕಸೂತಿ, ರಂಗವಲ್ಲಿ, ಹಾಡು, ಹೆಣಿಗೆ, ಚಿತ್ರಕಲೆ ಮೊದಲಾದವುಗಳನ್ನು ಕಲಿತಿದ್ದಳು ಮಾತ್ರವಲ್ಲ, ಸಂಸ್ಕೃತ ಮತ್ತು ಇಂಗ್ಲಿಷ್‌ನಿಂದ ಭಾಷಾಂತರವನ್ನೂ ಮಾಡುತ್ತಿದ್ದಳು. ಹೀಗಾಗಿ ಕೃಷ್ಣಾಬಾಯಿಯದು ಹಳತು ಹೊಸದು, ಪರಂಪರೆ ಮತ್ತು ಆಧುನಿಕತೆಯತ್ತ ಮುಖಮಾಡಿದ ಸಮನ್ವಯದ ಮಾದರಿ ವ್ಯಕ್ತಿತ್ವ.

  ಮಾಧವರಾಯ ಲೇಖಕಿಯ ಇನ್ನೊಂದು ಆದರ್ಶ ಪಾತ್ರ. ಕೃಷ್ಣಾಬಾಯ ಪತಿ. ಪಶ್ಚಿಮದ ನೇರ ಪ್ರಭಾವಕ್ಕೆ ಒಳಗಾದವನು. ಇಂಗ್ಲೆಂಡಿನ ಬಗೆಗೆ ಗೌರವ ಇರುವ ವಸಾಹತು ಆಡಳಿತವನ್ನು ಒಪ್ಪಿಕೊಂಡ ವ್ಯಕ್ತ್ವಿ. ಬಿ.ಎ. ತರಗತಿಯಲ್ಲಿ ಓದುತ್ತಿದ್ದ ಆತ ಚಿಕ್ಕವನಾದರೂ ವಿದ್ಯಾವಂತ. ಉತ್ತಮ ವಾಗ್ಮಿ; ಭಾಷಣಕಾರ. ವಾರದಲ್ಲಿ ಒಂದೆರಡು ಸಲ ಮಾಧವನ ಭಾಷಣ ಸಣ್ಣ ದೊಡ್ಡ ಸಭೆಗಳಲ್ಲಿ ಆಗುತ್ತಿತ್ತು. ಕೃಷ್ಣಾಬಾಯಿಯನ್ನು ಮೊದಲ ಸಲ ನೋಡಿದಾಗಲೇ ಒಲವು ಮೂಡಿತು. ಆಕೆಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು 'ಕಲಿತವಳು' ಎಂಬ ಅಂಶ ಅಡ್ಡಬಂದಾಗ ಮಾಧವರಾಯನು ಕೃಷ್ಣಾಬಾಯಿಯ ಮೇಲಿನ ಪ್ರೇಮದಿಂದ "ಸುಶಿಕ್ಷಿತ ಸ್ತ್ರೀಯರು ಮಕ್ಕಳಿಗೂ ಗಂಡಂದಿರಿಗೂ ಉಪಯುಕ್ತರಾಗಿ ದೇಶೋನ್ನತಿಗೂ ಸಹ ಕಾರಣರಾಗುತ್ತಾರೆ" ಎಂಬ ನಿಲುವು ತಾಳುವನು. ಈ ವಿವಾಹಕ್ಕೆ ಎರಡೂ ಮನೆಯವರು ಒಪ್ಪಿದರೂ ಮಾಧವರಾಯನ 'ಒಲವು' ಮುಖ್ಯವಾಗುತ್ತದೆ. ಹೀಗಾಗಿ ಕಲಿತ ವರ್ಗದಲ್ಲಿ ವೈವಾಹಿಕ ಬದುಕಿನ ಬಗೆಗೆ ಆಗುತ್ತಿದ್ದ ಬದಲಾವಣೆಯ ನಿಲುವುಗಳನ್ನು ದಾಖಲಿಸುತ್ತದೆ. ಎಲ್.ಎಲ್.ಬಿ. ಪರೀಕ್ಷೆ ಬರೆದರೂ ಸರಕಾರಿ ಕಛೇರಿಗಳಲ್ಲಿ ಕೆಲಸ ದೊರಕುವುದು ಕಠಿಣವಾದ್ದರಿಂದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುವನು. ಈ ಹೊತ್ತಿಗೆ ಎಲ್.ಎಲ್.ಬಿ. ಪಾಸಾದರೂ ಮುಂಬುಯಂತಹ ಶಹರದಲ್ಲಿ ಸದ್ಯಕ್ಕೆ ವಕೀಲಿ ಮಾಡುವುದು ಲಾಭಕರವಾದೀತೆಂದು ಅನಿಸಲಿಲ್ಲ. ಹೀಗಾಗಿ ಹೆಂಡತಿ ಒಡವೆಗಳನ್ನು ಮಾರಿ ಒದಗಿಸಿದ ಆರ್ಥಿಕ ನೆರವಿನಿಂದ ಲಂಡನ್ನಿಗೆ ಹೆಚ್ಚಿನ ಅಧ್ಯಯನಕ್ಕೆ ತೆರಳುವನು. 'ಲ್ಯಾಂಬರ್ಟನ್' ಗೃಹಸ್ಥನ ಆಶ್ರಯದಲ್ಲಿದ್ದು ಸಿವಿಲ್‌ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಮುಂಬಯಿಗೆ ಮರಳಿ ಅಸಿಸ್ಟೆಂಟ್ ಕಲೆಕ್ಟರ್‌ನಾಗುವನು. ತನ್ಮೂಲಕ ವಸಾಹತುಶಾಹಿ ಆಡಳಿತದ ಒಂದು ಭಾಗವಾಗಿ ಬಿಡುವನು. ಈ ಕಾಲ ಘಟ್ಟದಲ್ಲಿ ಸರಕಾರಿ ಸೇವೆಗೆ ಸೇರಬೇಕೆಂಬ ಹಂಬಲ ವಿದ್ಯಾವಂತ ಯುವಕರ ಅಪೇಕ್ಷೆಯಾಗಿತ್ತ್ತೆಂಬ ಸುಳಿವು ಕಾದಂಬರಿಯಲ್ಲಿದೆ.

  ಆಧುನಿಕ ಶಿಕ್ಷಣವನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಂಡ ಉದಯಮಾನವಾದ ಒಂದು ವರ್ಗ ಕಾದಂಬರಿಯಲ್ಲಿ ಕಂಡುಬರುತ್ತದೆ. ಹರಿವಂತ, ಶಾಮರಾಯ, ರಾಧಾಬಾ, ಮಾಧವರಾಯ, ಜನಾರ್ದನಪಂತ ಮೊದಲಾದವರು ಈ ವರ್ಗದಲ್ಲಿ ಬರುವ ವ್ಯಕ್ತಿಗಳು. ಆಧುನಿಕ ಶಿಕ್ಷಣವನ್ನು ಆರಂಭದಲ್ಲಿ ಸಂಶಯ ದ್ವಂದ್ವದಿಂದ ನೋಡುವ ಯಶೋಧಾಬಾಯಿ ಮತ್ತು ಆಕೆಯ ಸ್ನೇಹಿತೆಯರು ಅಂತಿಮವಾಗಿ ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬಂದು ನಿಲ್ಲುವರು. ಪಾಶ್ಚಾತ್ಯ ಶಿಕ್ಷಣವನ್ನು ಪಡೆದು ಸರ್ಕಾರದ ಸೇವೆಯಲ್ಲಿರುವ ಒಂದು ವರ್ಗವೇ ಕಾದಂಬರಿಯಲ್ಲಿದೆ. ಮಾಧವರಾಯ ಈ ವರ್ಗಕ್ಕೆ ಸೇರುವ ಹೊಸತಲೆಮಾರಿನ ಪ್ರತಿನಿಧಿ. ಈ ಹೊತ್ತಿಗೆ ಇಂಗ್ಲಿಷ್‌ನಿಂದ ಭಾಷಾಂತರ ಮಾಡುವ ಪ್ರಕ್ರಿಯೆ ಸಾಹಿತ್ಯದ ವಲಯದಲ್ಲಿ ನಡೆಯುತ್ತಿದ್ದ ಬಗ್ಗೆ ಕೃತಿಯೊಳಗೆ ಪ್ರಮಾಣಗಳು ದೊರೆಯುತ್ತವೆ. ಒಂದೆಡೆ ಸ್ತ್ರೀ ಶಿಕ್ಷಣವನ್ನು ಬೆಂಬಲಿಸಿ ಪ್ರಗತಿಪರ ನಿಲುವನ್ನು ತಳೆಯುವ ಕೃತಿ ಇನ್ನೊಂದೆಡೆ ೧೦-೧೨ ವರ್ಷದ ಹೆಣ್ಣುಮಕ್ಕಳಿಗೆ ವಿವಾಹ ಮಾಡುವ ಚಿತ್ರಣವನ್ನೂ ನೀಡುತ್ತದೆ. ಹೀಗಾಗಿ ಬಾಲ್ಯವಿವಾಹದ ವಿರೋಧಿ ನಿಲುವುಗಳು ಕೃತಿಯಲ್ಲಿ ಕಾಣುವುದಿಲ್ಲ.

  ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಆರಂಭವಾದ ಖಾಸಗಿ ಒಡೆತನದ ಸಂಸ್ಥೆಗಳು ನೌಕರರನ್ನು ಶೋಷಣೆ ಮಾಡುವ, ಮಿತಿಮೀರಿ ದುಡಿಸುವ ಚಿತ್ರ ಕೃತಿಯಲ್ಲಿದೆ. ಎಲ್.ಎಲ್.ಬಿ. ಮುಗಿದಾಕ್ಷಣ ದುಡಿಯಲು ಸೇರಿದ ಸಂಸ್ಥೆಯಲ್ಲಿ ಮಿತಿ ಮೀರಿ ಕೆಲಸ ಮಾಡಿದ ಪರಿಣಾಮವಾಗಿ ಮಾಧವರಾಯನ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದನ್ನು ಇದಕ್ಕೆ ಗಮನಿಸಬಹುದು. ಬಾಲಕಿಯರ ಶಿಕ್ಷಣದ ಸಲುವಾಗಿ ಆರಂಭವಾಗಿದ್ದ ಶೈಕ್ಷಣಿಕ ಸಂಸ್ಥೆ, ಮಾಹಿತಿ ಕಳಿಸಲು ವಸಾಹತು ಶಾಹಿ ಆಡಳಿತ ಆರಂಭಿಸಿದ 'ತಾರು ವ್ಯವಸ್ಥೆ' ಸುದ್ದಿಗಳಿಗಾಗಿ ಆರಂಭವಾಗಿದ್ದ ಪತ್ರಿಕೆಗಳ ಚಿತ್ರಣದ ಎಳೆಗಳು ಕೃತಿಯಲ್ಲಿದೆ. ಹಡಗು ದುರಂತದಲ್ಲಿ ಪರಸ್ಪರ ಬೇರೆಯಾಗಿದ್ದ ಮಾಧವರಾಯ ಮತ್ತು ಕೃಷ್ಣಾಬಾಯಿ ಮತ್ತೆ ಒಂದಾಗಲು ಪತ್ರಿಕೆಯಲ್ಲಿ ಬಂದ ಸುದ್ದಿಯಿಂದ ಸಾಧ್ಯವಾಗುತ್ತದೆ. ಮಾಧವರಾಯನ ಅಧ್ಯಯನಕ್ಕೆ ಇಂಗ್ಲೆಂಡಿನಲ್ಲಿ ಯಾವುದೇ ಅಪೇಕ್ಷೆಗಳಿಲ್ಲದೆ ಸಹಾಯ ಮಾಡುವ ಲ್ಯಾಂಬರ್ಟನ್ ಕುಟುಂಬದ ಸ್ನೇಹಪರತೆ ಕಾದಂಬರಿಯಲ್ಲಿ ಗಮನಸೆಳೆಯುತ್ತದೆ. ಹಿಂದೆಲ್ಲ ದೂರದ ಊರುಗಳಿಂದ ಮೈಸೂರಿನಂತಹ ಶೈಕ್ಷಣಿಕ ಕೇಂದ್ರಗಳಿಗೆ ಅಧ್ಯಯನದ ಸಲುವಾಗಿ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದ ವಿವಿಧ ರೀತಿಯ ಸಹಾಯವನ್ನು ಇದು ನೆನಪಿಸುತ್ತದೆ. ಬಡತನ ಅಧ್ಯಯನಕ್ಕೆ ಮಿತಿಯಾಗದು ಎಂಬ ಅಂಶ ಇಲ್ಲಿರುವಂತಿದೆ.

  ಇಂಗ್ಲೆಂಡಿಗೆ ಹೋಗಲು ಅಂದು ಇದ್ದ ಏಕೈಕ ದಾರಿಯೆಂದರೆ ಸಮುದ್ರಮಾರ್ಗ. ಇದಕ್ಕೆ ಸರಕು ಸಾಗಣೆಯ ಇಲ್ಲವೆ ಪ್ರಯಾಣಿಕ ಹಡಗನ್ನು ಬಳಸುವುದು ಅನಿವಾರ್ಯವಾಗಿತ್ತು. ಇಂತಹ ಹಡಗುಗಳು ಮಾರ್ಗ ಮಧ್ಯದಲ್ಲಿ ದುರಂತಕ್ಕೆ ಗುರಿಯಾಗುವುದೂ ಸಹಜವಾಗಿತ್ತು. ಈ ಬಗೆಗೆ ಲೇಖಕಿಗೆ ಸ್ಪಷ್ಟವಾದ ತಿಳುವಳಿಕೆದೆ. ಕುತೂಹಲದ ಸಂಗತಿಯೆಂದರೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಬೃಹತ್ ಹಡಗು 'ಟೈಟಾನಿಕ್' ಸಮುದ್ರ ಮಾರ್ಗ ಮಧ್ಯದಲ್ಲಿ ದುರಂತವನ್ನು ಹೊಂದಿರುವುದು ಇದೇ ಕಾಲ ಘಟ್ಟದಲ್ಲಿ ಎಂಬುದು ಗಮನಾರ್ಹ. ಸಾಮಾನ್ಯವಾಗಿ ಕಥಾನಾಯಕರು ಮಾತ್ರ ಹಡಗನ್ನೇರುತ್ತಿದ್ದ ಕಾಲಘಟ್ಟದಲ್ಲಿ ಲೇಖಕಿ ಕೃಷ್ಣಾಬಾಯಿಯನ್ನೂ ಇಂಗ್ಲೆಂಡಿಗೆ ಹೋಗುವ ಹಡಗು ಹತ್ತಿಸಿದ್ದಾರೆ. ಆಕೆ ಇಂಗ್ಲೆಂಡನ್ನು ತಲುಪಿದ್ದರೆ ಅದೊಂದು ಚಾರಿತ್ರಿಕ ಘಟನೆಯಾಗುತ್ತಿತ್ತು ; ಆದರೆ ಕೃಷ್ಣಾಬಾಯಿಗೆ ತಲುಪಲಾಗದೆ ಹೋದದ್ದು ದುರಂತವೇ ಸರಿ.

  ಶಾಂತಾಬಾಯಿ ತಮ್ಮ ಕೃತಿಯಲ್ಲಿ ಸ್ವಾತಂತ್ರ್ಯ ಪೂರ್ವದ ಆದರ್ಶ ಪ್ರಾಯಳಾದ ಸ್ತ್ರೀ ಮಾದರಿಯನ್ನು ನೀಡುತ್ತಿರುವಂತೆಯೇ ಬದುಕನ್ನು ವ್ಯರ್ಥವಾಗಿ ಕಳೆಯುತ್ತಿದ್ದ ಕೃಷ್ಣಾಬಾಯಿಯ ಅಕ್ಕ ಯಶೋಧಾಬಾಯ ಚಿತ್ರವನ್ನೂ ನೀಡುವರು. " ದೊಡ್ಡ ಶಹರಗಳಲ್ಲಿ ಜನರ ನೀತಿಯನ್ನು ಸುಧಾರಿಸುವ ಅನೇಕ ಸಾಧನಗಳಿರುವಂತೆಯೇ ಅದನ್ನು ಕೆಡಿಸುವ ಸಾಧನಗಳೂ ಅನೇಕ ಇರುವವು." ಎಂಬ ಲೇಖಕಿಯ ಮಾತು ಗಮನಾರ್ಹ. ಯಶೋಧಾಬಾಯಿ ಆರ್ಥಿಕವಾಗಿ ಸ್ವತಂತ್ರಳಾದರೂ ತಿರುಗಾಟ, ಹರಟೆ, ಆಟ, ನಾಟಕ ಮುಂತಾದ ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ತನ್ನ ಸಮಯವನ್ನು ಕಳೆಯುತ್ತಿದ್ದಳು. ಇಂಥ ತಾಯ ಮಕ್ಕಳು ಹೇಗೆ ಹಾದಿತಪ್ಪಿ ನಡೆಯುವರು ಎಂಬುದರ ಕಡೆಗೆ ಲೇಖಕಿ ಓದುಗರ ಗಮನ ಸೆಳೆಯುತ್ತಾರೆ. ಅಲ್ಲದೆ ಅಕ್ಕ ಮತ್ತು ತಂಗಿಯರ ವ್ಯಕ್ತಿತ್ವದಲ್ಲಿರುವ ವೈರುಧ್ಯಗಳನ್ನು ಚಿತ್ರಿಸುವುದರ ಮೂಲಕ ವರ್ತಮಾನದ ಬದುಕಿಗೆ ಅಪೇಕ್ಷಿತ ಸ್ತ್ರೀ ಮಾದರಿಯನ್ನು ನೀಡುತ್ತಾರೆ. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಶಿಕ್ಷಣದ ಆಸಕ್ತಿಯನ್ನು ಬೆಳೆಸುವ ಕೃಷ್ಣಾಬಾಯಿ ಆಧುನಿಕ ಶಿಕ್ಷಣದ ಪ್ರತಿಪಾದಕಳಾಗಿ ನಿಲ್ಲುತ್ತಾಳೆ. ಮನೆಯೊಳಗೆ ಸ್ತ್ರೀಯರ ನಡುವೆ ಅಧಿಕಾರಕ್ಕಾಗಿ ನಡೆಯುವ ಹೋರಾಟ, ಮತ್ಸರ, ಇರುಸುಮುರುಸು, ಅಸಹನೀಯ ವಾತಾವರಣದ ಚಿತ್ರವನ್ನು ಗಂಗಾಬಾಯ ಸಂದರ್ಭದಲ್ಲಿ ನೋಡಲು ಸಾಧ್ಯ. ಕೃಷ್ಣಾಬಾಯ ಒಳ್ಳೆಯತನವನ್ನು ಗುರುತಿಸಲು ಗಂಗಾಬಾಯಿಯ ಪಾತ್ರದ ಬಳಕೆಯಾಗಿದೆ ಎಂದು ಅನಿಸಿದರೂ ಆಕೆಯ ದುಷ್ಟತನದ ಹಿಂದಿನ ಪ್ರೇರಣೆಗಳು ಬೇರೆಯದೇ ಆಗಿವೆ.

  ಒಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡ ಮಧ್ಯಮವರ್ಗ ಈ ಸಂಸ್ಕೃತಿಂದ ಬೇರ್ಪಟ್ಟರೂ ಅದರೊಂದಿಗೆ ಮರುಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್‍ಯತೆತ್ತು. ಸ್ತ್ರೀಗೆ ವಿದ್ಯೆ ನೀಡಬೇಕು ಎನ್ನುವುದು ಈ ವರ್ಗದ ಖಚಿತವಾದ ನಿಲುವು. ಅಂದರೆ ಸುಧಾರಣಾವಾದ ಮೊದಲು ಮೇಲ್ವರ್ಗದಲ್ಲಿ ಕಂಡುಬಂತೆನ್ನುವ ವಾಸ್ತವವಾದಿ ಚಿತ್ರ ಇಲ್ಲಿದೆ. ಆರಂಭಕಾಲೀನ ಕಾದಂಬರಿಗಳಂತೆ ಈ ಕೃತಿಗೂ ಕಥಾನಾಯಕಿಯ ಹೆಸರನ್ನೇ ಇಡಲಾಗಿದೆ. ದೇಶದಲ್ಲೆಲ್ಲಾ ಸ್ವಾತಂತ್ರ್ಯ ಹೋರಾಟದ ವಾತಾವರಣವಿದ್ದರೂ ಕೃತಿ ಈ ಬಗ್ಗೆ ಮೌನವಹಿಸುತ್ತದೆ. ಮಾತ್ರವಲ್ಲ, ವಸಾಹತು ಆಡಳಿತದ ಬಗೆಗೆ ಗೌರವವಿದೆ. ಹೆಂಗಸರಿಗೆ ವಿದ್ಯೆ ಕಲಿಸಬೇಕೆಂಬ ವಿಷಯ " ಈ ದೇಶದಲ್ಲಿ ದಯಾಳು ಇಂಗ್ಲಿಷ್ ರಾಜ್ಯದಾಡಳಿತೆ ಪ್ರಾರಂಭವಾದಂದಿನಿಂದ ಜನರಿಗೆ ತಿಳಿಯ ಹತ್ತಿರುತ್ತದೆ" 'ಇಂಗ್ಲೆಂಡು ಲಕ್ಷ್ಮೀನಿವಾಸ' ಎಂಬಲ್ಲಿ ವಸಾಹತು ಆಡಳಿತದ ಬಗೆಗೆ ಆಸಕ್ತಿ ಮತ್ತು ಅದು ಸ್ವೀಕೃತವಾಗಲು ಕಾರಣ ಸೂಚಿತವಾಗಿದೆ. ಭಾಷಾಬಳಕೆಯ ದ್ವಂದ್ವದಿಂದಾಗಿ ಈ ಕೃತಿ ಗಮನ ಸೆಳೆಯುತ್ತದೆ. ಹೊಸಗನ್ನಡ ರೂಪುಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಬಂದ ಕೃತಿಯಿದು. ಮುಖ್ಯವಾಗಿ ಉತ್ತರ ಕರ್ನಾಟಕದ ಜನಭಾಷೆಯ ಭಾಷಾರೂಪದ ಹಲವು ಪದಗಳು ಇಲ್ಲಿ ಬಳಕೆಯಾಗಿದೆ. ಇನಾಮು, ಕೋಠಿಮನೆ, ಇಂಗ್ರೇಜಿ, ಜಡ್ಡು, ಗೋಜಲು, ಜಿಂದಿಗಿ, ಅಬಚಿ, ಸೂಟಿ, ಅಡಚಣಿ, ಅಡಗಿ, ತಿನುಸಾಳಿ, ಖೊಳಂಬಿಸು, ಬುರಿಕೆ, ಯಾಕಾಗವಲ್ಲದು, ಹಳಹಳಿ, ಹುರುಪಳಿಸು, ಅರಿವೆ ಅಂಚಡಿ, ನೆಗೆಣ್ಣಿ ಮೊದಲಾದ ಪದಗಳು ಗಮನ ಸೆಳೆಯುತ್ತವೆ. 'ಸದ್ಗುಣಿ ಕೃಷ್ಣಾಬಾಯಿ' ಲೇಖಕಿಯರ ಹಾಗೂ ಶಾಂತಾಬಾಯಿಯವರ ಮೊದಲ ಕೃತಿ ಎಂಬ ಕಾರಣಕ್ಕೇ ಐತಿಹಾಸಿಕವಾಗಿ ಮುಖ್ಯವಾಗುವುದಿಲ್ಲ. ವಸಾಹತುಶಾಹಿ ಆಡಳಿತದ ಪರಿಣಾಮವಾಗಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಸೂಕ್ಷ್ಮ ಬದಲಾವಣೆಯ ಚಿತ್ರವಿದೆ. ವೈದ್ಯಶಾಸ್ತ್ರ, ವಕೀಲಿ ವೃತ್ತಿ, ಡಾಕ್ಟರ್ ವೃತ್ತಿ, ಖಾಸಗಿ ಕಂಪನಿಯಲ್ಲಿ ದುಡಿಸುವ ರೀತಿ, ಅಂಚೆ ಸೇವೆ, ತಾರು(ಟೆಲಿಗ್ರಾಂ) ಶಾಲಾರ್ವಾಕೋತ್ಸವ, ಪತ್ರಿಕೆ, ಕಂಪನಿ ನಾಟಕ, ಇಂಗ್ಲಿಷ್ ಸಾಹಿತ್ಯ, ಬದಲಾಗುತ್ತಿರುವ ಜೀವನ ಕ್ರಮ ಮೊದಲಾದ ಅಂಶಗಳನ್ನು ತನ್ನ ಒಡಲಿನಲ್ಲಿ ದಾಖಲಿಸಿದೆ. ಹೀಗಾಗಿ ಸಂಕ್ರಮಣ ಸ್ಥಿತಿಯಲ್ಲಿರುವ ಭಾರತೀಯ ಸಮಾಜ ಆಕಾರ ಪಡೆಯುತ್ತಿದ್ದ ವಿವಿಧ ಮುಖ ಮತ್ತು ವೈರುಧ್ಯಗಳನ್ನು ಯಾವುದೇ ಆಡಂಬರಗಳಿಲ್ಲದೆ ದಾಖಲಿಸುವ ಈ ಕೃತಿ ನಿಜ ಅರ್ಥದಲ್ಲಿ 'ಬದುಕಿನ ಕನ್ನಡಿ'ಯಾಗುತ್ತದೆ. ಸ್ವಾತಂತ್ರ್ಯಪೂರ್ವದ ಬದುಕನ್ನು ನಿರುದ್ವಿಗ್ನವಾಗಿ ಚಿತ್ರಿಸುವ ಈ ಕಾದಂಬರಿಯಲ್ಲಿ, ವಾಸ್ತವವಾದಿ ಸಾಹಿತ್ಯದ ಎಳೆಗಳು ಮೊದಲ ನೋಟಕ್ಕೆ ಎದುರಾಗುತ್ತವೆ.

  1 Responses to “ಸದ್ಗುಣಿ ಕೃಷ್ಣಾಬಾಯಿ ಭಾಗ - 2”

  harini said...
  November 10, 2010 at 10:39 PM

  sir presentation is very nice...


  Subscribe