Saturday, February 6, 2010

0

ಹಸಿರು ಚಿಗುರು ಕಾದಂಬರಿಯ ಜೊತೆಗೆ . . .

  • Saturday, February 6, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಶ್ರೀಮತಿ ಎ.ಪಿ. ಮಾಲತಿ ಕನ್ನಡದ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬರು. ಸಣ್ಣಕಥೆ, ಕಾದಂಬರಿ, ಕವನ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಇವರು ತಮ್ಮ ಪರಿಸರದ ಸಾಮಾಜಿಕ ಬಿಕ್ಕಟ್ಟುಗಳಿಗೆ ತಮ್ಮದೇ ರೀತಿಯಲ್ಲಿ ಧ್ವನಿ ನೀಡಿದವರು. ಅರ್ಧಾಂಗಿ, ಆಘಾತ, ಅನಿಶ್ಚಯ, ಹೊಸಹೆಜ್ಜೆ, ಮಿನುಗದ ಚುಕ್ಕೆ, ಸರಿದ ತೆರೆ, ಬದಲಾಗದವರು, ಸುಖದ ಹಾದಿ, ದೇವ, ತಿರುಗಿದ ಚಕ್ರ, ಪುನರ್ಮಿಲನ ಇತ್ಯಾದಿ ಇಪ್ಪತ್ತಕ್ಕಿಂತ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಮಾಲತಿಯವರು ಮೂಲತ: ಉತ್ತರ ಕನ್ನಡದ ಭಟ್ಕಳದವರು. ಪುತ್ತೂರಿನ ಕೃಷಿಕ ಕುಟುಂಬವನ್ನು ಸೇರಿದರೂ ಬರೆಯುವ ಆಸಕ್ತಿಯನ್ನು ಉಳಿಸಿಕೊಂಡವರು.
    ಇವರ ಬರವಣಿಗೆಯ ಹಾದಿಯನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೀವಮಾನದ ಸಾಧನೆಗೆ ನೀಡುವ `ಗೌರವ ಪ್ರಶಸ್ತಿ' ಮಾಲತಿಯವರ ಮುಡಿಗೇರಿದೆ. ಅಲ್ಲದೆ ಇವರ ಸುಖದಹಾದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಇದರೊಂದಿಗೆ ಭಾರ್ಗವಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ ಇತ್ಯಾದಿ ಹಲವು ಗೌರವ, ಪ್ರಶಸ್ತಿಗಳು ಇವರ ವಿವಿಧ ಕಾದಂಬರಿಗಳಿಗೆ ಬಂದಿವೆ. ದೇವ ಕಾದಂಬರಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವೂ ಆಗಿತ್ತು. ಇವರ ಕಥೆಗಳು ಧಾರವಾಹಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೂ ಇದೆ.
    ಎ.ಪಿ.ಮಾಲತಿಯವರ ಇತ್ತೀಚಿನ ಕೃತಿ `ಹಸಿರು ಚಿಗುರು' ಇಂದು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾದಂಬರಿ ಎಳೆಯ ತಲೆಮಾರಿನ ಮನೋಧರ್ಮದಲ್ಲಿ ಆಗುತ್ತಿರುವ ಬದಲಾವಣೆ, ಹಿರಿಯ ತಲೆಮಾರಿನೊಂದಿಗೆ ಹೊಂದಿಕೊಳ್ಳಲಾಗದ ಅವರ ಮನಸ್ಥಿತಿ, ನಗರ ಸಂಸ್ಕೃತಿಯ ಕಡೆಗೆ ಮುಖ ಮಾಡಿರುವ ತರುಣ ಜನಾಂಗದ ಚಿತ್ರ, ವಿಶೇಷ ಆರ್ಥಿಕವಲಯ, ಔದ್ಯೋಗೀಕರಣದ ಸಂದರ್ಭದಲ್ಲಿ ತಲ್ಲಣ, ಆತಂಕಗಳನ್ನು ಎದುರಿಸುತ್ತಿರುವ ಹಳ್ಳಿಗಳ ಬದುಕು, ಕಳೆದು ಹೋಗುತ್ತಿರುವ ಹಸಿರಿನ ನಡುವೆ ಬದುಕಿನ ಬೇರುಗಳನ್ನು ಅರಸಬೇಕೆಂಬ ಕಾದಂಬರಿಯ ಆಶಯ ಸಮಕಾಲೀನವಾದುದು. ಇದರೊಂದಿಗೆ ತಂದೆ, ಮಗ, ಸೊಸೆಯ ನಡುವೆ ಸಿಲುಕಿ ಮೂರಾಬಟ್ಟೆಯಾಗುತ್ತಿರುವ ಕೌಟುಂಬಿಕ ರಚನೆಯ ಕಡೆಗೆ ಕಾದಂಬರಿ ನಮ್ಮನ್ನು ಎಚ್ಚರಿಸುತ್ತದೆ. ಇವುಗಳ ನಡುವೆ ಕಿರಿಯ ತಲೆಮಾರು ತನ್ನ ಬೇರುಗಳನ್ನರಸಿ ಗ್ರಾಮೀಣ ಬದುಕಿನ ಕಡೆಗೆ ಮುಖಮಾಡಿ ನಿಲ್ಲುವ ಚಿತ್ರ ಅರ್ಥಪೂರ್ಣವಾಗಿದೆ. ಈ ದೃಷ್ಟಿಯಿಂದ ಕಿರಿಯ ತಲೆಮಾರಿನ ಶಶಾಂಕನ ಪಾತ್ರ ತೆಗೆದುಕೊಳ್ಳುವ ನಿರ್ಧಾರ ಕೃಷಿ ಸಂಸ್ಕೃತಿಪರವಾಗಿದೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗುತ್ತಿದೆ ಎಂಬುದೇ ಆತಂಕದ ವಿಷಯ.
    ಈ ಹಿನ್ನೆಲೆಯಲ್ಲಿ `ಹಸಿರು ಚಿಗುರು` ಕಾದಂಬರಿ ನಮ್ಮೊಳಗಿನ ಹಸಿರು ಸಂಸ್ಕೃತಿಯ ಚಿಗುರನ್ನು ಉಳಿಸಲು ಎಚ್ಚರಿಸುತ್ತದೆ. ನಗರ ಸಂಸ್ಕೃತಿಯ ಕಡೆಗೆ ವಲಸೆ ಹೋದವರು ಅಂತಿಮವಾಗಿ ಹಸಿರನ್ನರಸಿ ಹೋಗುವ ಅನಿವಾರ್ಯತೆಯನ್ನು ಕಾದಂಬರಿ ಗುರುತಿಸಿದೆ. ವಿಶ್ವದಾದ್ಯಂತ ಜಾಗತಿಕ ತಾಪಮಾನ, ಹಸಿರುಮನೆಯ ಬಗೆಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಹಿರಿಯರಾದ ಶ್ರೀಮತಿ ಎ.ಪಿ. ಮಾಲತಿಯವರ 'ಹಸಿರುಚಿಗುರು' ಕಾದಂಬರಿ ಬಂದಿರುವುದು ವರ್ತಮಾನದ ಚರ್ಚೆಗೆ ಹೊಸ ಆಯಾಮವನ್ನು ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ಹರಡಿಕೊಳ್ಳುವ ಅಗತ್ಯವಿದೆ.
    ಕರಾವಳಿಯ ಲೇಖಕಿ ಮತ್ತು ವಾಚಕಿಯರ ಸಂಘ ಈ ಕಾರ್ಯಕ್ರಮಕ್ಕೆ ಸಹಕರಿಸಿತ್ತು.


    0 Responses to “ಹಸಿರು ಚಿಗುರು ಕಾದಂಬರಿಯ ಜೊತೆಗೆ . . .”

    Subscribe