Saturday, January 30, 2010

2

ಜೋಗಿಗೆ ಸನ್ಮಾನದ ಹಿರಿಮೆ !

  • Saturday, January 30, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಉಪ್ಪಿನಂಗಡಿಯ ಗಿರೀಶ್ ರಾವ್‌ಗೆ ಸನ್ಮಾನ ! ಹೀಗೆಂದರೆ ಹಲವರಿಗೆ ಪರಿಚಯವಾಗಲಿಕ್ಕಿಲ್ಲ.
    ಬರಹಗಾರ ಜೋಗಿಗೆ ಸನ್ಮಾನ ಎಂದರೆ ಹಲವರಿಗೆ ಪರಿಚಯಸಿಗಬಹುದು.
    ಸುಮಾರು ನಾಲ್ಕು ವರ್ಷಗಳ ಹಿಂದೆ, ಗಿರೀಶ್ ರಾವ್ ಅವರನ್ನು ಕನ್ನಡ ಪ್ರಭದ ಕಛೇರಿಯಲ್ಲಿ ಭೇಟಿಯಾಗಿದ್ದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿದ್ದ ನನ್ನ ವಿದ್ಯಾರ್ಥಿನಿ ವಿದ್ಯಾರಶ್ಮಿ ಜೋಗಿಯವನ್ನು ಭೇಟಿ ಮಾಡಿಸಿದ್ದರು. ಅವರು ಪುತ್ತೂರಿನವರು ಎಂಬ ಕಾರಣಕ್ಕೆ ನನಗೆ ಆ ಭೇಟಿ ಸಂತೋಷವನ್ನು ನೀಡಿತ್ತು. ಮೊದಲ ಭೇಟಿಯಾದ್ದರಿಂದ ನನಗೆ ಆಗ ಮುಕ್ತವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಅನಂತರ ಎರಡು ವರ್ಷದ ಹಿಂದೆ ಜೋಗಿ ಪುತ್ತೂರಿಗೆ ಬಂದರು. ಗೆಳೆಯ ಗೋಪಾಲಕೃಷ್ಣ ಕುಂಟಿನಿಯ ಕಥಾಸಂಕಲನ 'ಆಮೇಲೆ ಇವನು' ಕೃತಿ ಬಿಡುಗಡೆಗೆ ಬಂದಿದ್ದರು. ಆ ಸಂದರ್ಭದಲ್ಲಿಯೇ ಅವರ ‘ಕಾಡ ಬೆಳದಿಂಗಳ" ಚಲನ ಚಿತ್ರದ ಪ್ರದರ್ಶನವನ್ನು ಪುತ್ತೂರಿನ ಅನುರಾಗದಲ್ಲಿ ಏರ್ಪಡಿಸಲಾಗಿತ್ತು. ಆಗ ಸ್ಥಳದ ಕೊರತೆಯಿಂದ ನಮ್ಮ ಕಾಲೇಜಿನ "ವಿದ್ಯಾರ್ಥಿಗಳಿಗೆ ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಚಲನ ಚಿತ್ರವನ್ನು ತೋರಿಸುವುದಾಗಿ ಹೇಳಿದೆವು. ಆಗ ಜೋಗಿಯವರ ಹೃದಯ ವೈಶಾಲ್ಯತೆಯ ಪರಿಚಯವಾಗಿತ್ತು.
    " ಸರ್. ನಿಮ್ಮ ಸಿ.ಡಿ.ಯನ್ನು ಒಂದು ವಾರದ ನಂತರ ಕಳಿಸಿಕೊಡುತ್ತೇನೆ. ವಿದ್ಯಾರ್ಥಿಗಳಿಗೆ ಇಲ್ಲಿ ಚಲನ ಚಿತ್ರವನ್ನು ತೋರಿಸಲು ಸಾಧ್ಯವಾಗುತ್ತಿಲ್ಲ" ಎಂದು ತುಸು ಅಳುಕುತ್ತಲೇ ಜೋಗಿಯವರಲ್ಲಿ ಕೇಳಿದೆ.
    "ಅಯ್ಯೋ, ಅದಕ್ಕೇನಂತೆ. ಹಾಗೇ ಮಾಡಿ" ಎಂದು ಬಿಟ್ಟರು. ನನಗೆ ಬೆಟ್ಟದಷ್ಟು ಇದ್ದ ಭಾರ ಒಮ್ಮೆಲೆ ಇಳಿಯಿತು. ಜೋಗಿಯ ಸರಳತೆ ನನಗೆ ಇಷ್ಟವಾಯಿತು. ಇದಾಗಿ ಒಂದು ವಾರದ ನಂತರ ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ 'ಕಾಡ ಬೆಳದಿಂಗಳು' ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಿಲಾಗಿತ್ತು. ಚಲನಚಿತ್ರವನ್ನು ನೋಡಿದ ನಂತರ ಸುಮಾರು ಒಂದೂವರೆ ಗಂಟೆಯಷ್ಟು ಚರ್ಚೆ ನಡೆಯಿತು. ಅದರ ಕಥೆ ಎಲ್ಲರಿಗೂ ಇಷ್ಟವಾಗಿತ್ತು. ಈ ಘಟನೆಯ ಅನಂತರ ನಾನು ಜೋಗಿಯವರ ಬರಹಗಳ ಅಭಿಮಾನಿಯಾಗಿ ಬದಲಾದೆ.
    ಅವರ ಕೃತಿಗಳಲ್ಲಿ ಬರುವ ನವಿರಾದ ನಿರೂಪಣೆ, ತೆಳುವಾದ ಹಾಸ್ಯ, ವಸ್ತು ಪಡೆಯುವ ತಿರುವುಗಳು ಆಕರ್ಷಕವಾಗಿರುತ್ತವೆ.
    ಇದೀಗ ಜೋಗಿ ಗೆಳೆಯರು ಉಪ್ಪಿನಂಗಡಿ ಮತ್ತು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಜೋಗಿಯವರನ್ನು ಗೌರವಿಸುವ ಕಾರ್ಯಕ್ರಮ ದಿನಾಂಕ ೩೧.೦೧.೨೦೧೦ರಂದು ನಡೆಯುತ್ತಿದೆ. ಹುಟ್ಟಿದೂರಿನ ಗೌರವ ಅವರಿಗೆ ಸಲ್ಲುತ್ತಿದೆ.
    ೧೯೮೦ರ ಕಾಲಘಟ್ಟದಲ್ಲಿ ಬದುಕನ್ನರಸಿ ಗೊತ್ತು ಗುರಿಯಿಲ್ಲದೆ ಬೆಂಗಳೂರಿನ ಬಸ್ಸು ಹತ್ತಿದಾಗ ಅವರ ಕಿಸೆಯಲ್ಲಿ ಬಸ್ಸಿಗಾಗುವಷ್ಟೇ ದುಡ್ಡಿತ್ತು. ಬೆಂಗಳೂರು ಅವರನ್ನು ಕೈಹಿಡಿದು ಮುನ್ನಡೆಸಿತು. ಸಾಕಷ್ಟು ಬವಣೆಯ ಅನಂತರ ಅವರು ಕನ್ನಡ ಪ್ರಭ ದಿನಪತ್ರಿಕೆಯನ್ನು ಸೇರಿದರು. ಬದುಕಿನ ಅನಿವಾರ್ಯತೆ ಪೆನ್ನು ಹಿಡಿಸಿತು. ಅವರು ರೂಪಿಸುತ್ತಿದ್ದ ಸಾಪ್ತಾಹಿಕದಲ್ಲಿ ಒಂದು ಹೊಸತನವಿತ್ತು ; ಲವಲವಿಕೆಯಿತ್ತು. ಇಲ್ಲಿಂದ ಮುಂದೆ ಅವರು ಹಿಂದಿರುಗಿ ನೋಡಿದ್ದಿಲ್ಲ. ಅವರೇ ಹೇಳುವಂತೆ
    "ಓದುಗನಾಗಲು ಹೊರಟವನು ಕಥೆ ಬರೆದೆ. ಮೆಚ್ಚಿಕೊಂಡರು. ಮತ್ತೊಂದಿಷ್ಟು ಕಥೆಗಳನ್ನು ಬರೆದು ಪ್ರಕಟಿಸಿದೆ. ಮದುವೆಯಾಯಿತು. ಕತೆಯೊಂದು ಸಿನಿಮಾ ಆಯಿತು. ರಾಜ್ಯ ಪ್ರಶಸ್ತಿಯೂ ಬಂತು. ಸೀರಿಯಲ್ಲು ಸಿನೆಮಾಗಳಿಗೆ ಸಂಭಾಷಣೆ ಬರೆದೆ. ಬರೆಯುವುದಿಲ್ಲ ಎಂದು ಕುಳಿತಾಗಲೆಲ್ಲ ಕತೆಗಳು ಹುಡುಕಿಕೊಂಡು ಬಂದು ಕಾಡಿವೆ". ಎಂದು ಅತ್ಯಂತ ವಿನಯದಿಂದ ಹೇಳುವ ಜೋಗಿ ಬರೆದ ಕೃತಿಗಳು ಹಲವು.
    ಕಾದಂಬರಿ : ಊರ್ಮಿಳಾ, ನದಿಯನೆನಪಿನ ಹಂಗು, ಯಾಮಿನಿ, ಹಿಟ್ ವಿಕೆಟ್, ಚಿಟ್ಟೆ ಹೆಜ್ಜೆ ಜಾಡು
    ಸಣ್ಣಕಥೆ : ಜೋಗಿ ಕಥೆಗಳು, ಸೀಳುನಾಲಿಗೆ (ಮರುಮುದ್ರಣದಲ್ಲಿ ಕಾಡುಹಾದಿಯ ಕಥೆಗಳು) ರಾಯಭಾಗದ ರಹಸ್ಯ ರಾತ್ರಿ,
    ಕಥಾಸಮಯ,
    ಲೇಖನ ಸಂಕಲನಗಳು ಮೂರು ಸಂಪುಟ, ಜಾನಕಿ ಕಾಲಂ ಮೂರು ಸಂಪುಟವಲ್ಲದೆ
    ಕಿರುತೆರೆಯಲ್ಲಿ ಶಿಕಾರಿ, ಶಕ್ತಿ, ಜೀವನ, ಬೆಳ್ಳಿತೆರೆ, ಶರಪಂಜರ, ಕಲ್ಯಾಣಿ,ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ ಧಾರವಾಹಿಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಒದಗಿಸಿದ ಗೌರವ ಜೋಗಿಯವರದು.
    ಚಲನಚಿತ್ರ : ಕಾಡಬೆಳದಿಂಗಳು. ಇದಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೋಗಿಯವರದೇ.
    ಮೌನಿ ಮತ್ತು ಕೇರ್ ಆಫ್ ಫುಟ್ ಪಾತ್ ಚಲನಚಿತ್ರಕ್ಕೆ ಚಿತ್ರಕಥೆ ಒದಗಿಸಿದ್ದು ಇದೇ ಜೋಗಿ.
    ಪ್ರಶಸ್ತಿ : ಜೋಗಿ ಕಥೆಗಳು ಸಂಕಲನಕ್ಕೆ ವಿಶ್ವೇಶ್ವರಯ್ಯ ಪ್ರಶಸ್ತಿ
    ಜಾನಕಿ ಕಾಲಂ ಕೃತಿಗೆ ಹಾಮಾನಾಯಕ ಪ್ರಶಸ್ತಿ
    ಕಾಡಬೆಳದಿಂಗಳು ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ .
    ಜೋಗಿ ಚಿತ್ರಕಥೆ ನೀಡಿದ ಕೇರ್ ಆಫ್ ಫುಟ್ ಪಾತ್ ಚಲನಚಿತ್ರವೂ ಪ್ರಶಸ್ತಿಯ ಗೌರವ ಪಡೆಯಿತು.
    ಇಂದು ಜೋಗಿ ನಿರಂತರ ಬರವಣಿಗೆಯ ಸಂಕೇತ. ಆತ್ಮವಿಶ್ವಾಸದ ಪ್ರತೀಕ.
    ಬರಹದಲ್ಲಿ ಸದಾ ಹೊಸತನ ಜೋಗಿಯ ವಿಶೇಷತೆ.
    ಜೋಗಿಯ ಲೇಖನಿಯ ಮಸಿ ಅಕ್ಷಯವಾಗಲಿ.
    ಜೋಗಿ ಸದಾ ಬರೆಯುತ್ತಿರಲಿ ಎಂಬುದೇ ಎಲ್ಲರ ಹಾರೈಕೆ.

    2 Responses to “ಜೋಗಿಗೆ ಸನ್ಮಾನದ ಹಿರಿಮೆ !”

    kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...
    February 1, 2010 at 7:52 PM

    ಒಳ್ಳೆಯ ಕಾರ್ಯಕ್ರಮವೊ೦ದರಲ್ಲಿ ಭಾಗಿಯಾಗುವುದಕ್ಕೆ ಅನುವು ಮಾಡಿಕೊಟ್ಟ ನಿಮಗೆ ಧನ್ಯವಾದಗಳು ಸಾರ್


    ವೆಂಕಟಕೃಷ್ಣ ಕೆ ಕೆ ಪುತ್ತೂರು said...
    February 4, 2010 at 9:54 AM

    ಕಾರ್ಯಕ್ರಮ ಚೆನ್ನಾಗಿತ್ತು ಸಾರ್.ತಮ್ಮ ಬ್ಲಾಗ್ ಇರುವ ವಿಚಾರ ಇತ್ತೀಚೆಗ ಗೊತ್ತಾಯಿತು.ಲೇಖನಗಳನ್ನೂ ಹಾಕಿ ಸಾರ್.ಹಾಗೇ ನನ್ನ ಬ್ಲಾಗ್ ಗೂ ಒಮ್ಮೆ ಬನ್ನಿ.ಓದಿ ತಮ್ಮ ಅಭಿಪ್ರಾಯ ತಿಳಿಸಿ.ಕೆಲವು ಬರಹಗಳು ಇವೆ,ನೋಡಿ.
    http://sharadabooks.blogspot.com/
    ತಮ್ಮ ಮೇಲ್ ಐಡಿ ಹಾಕಿ ಸಾರ್.ನನಗೆ ಗೊತ್ತಿಲ್ಲ ಅದಕ್ಕೇ ಇಲ್ಲಿ ಬರೆದೆ.ನಿಮ್ಮ profile ನಲ್ಲೂ ಇಲ್ಲ.


    Subscribe