Tuesday, January 12, 2010

0

ವಿಜೃಂಭಣೆಯ ವಿವೇಕಾನಂದ ಜಯಂತಿ 2010

  • Tuesday, January 12, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಪುತ್ತೂರು: ಸ್ವಾಮಿ ವಿವೇಕಾನಂದರು ತಾರುಣ್ಯಕ್ಕೊಂದು ಜೀವಂತ ಹಾಗೂ ಸಾರ್ವಕಾಲಿಕ ಆದರ್ಶ. ಯುವಜನರಿಗೆ ಆತ್ಮದರ್ಶನ ಮಾಡಿಸಿ ಸಾವಿನೆಡೆಗೆ ಮುಖ ಮಾಡಿನಿಂತ ದೇಶಕ್ಕೆ ಜೀವ ತುಂಬಿ ಹೊಸ ಪಥವನ್ನು ತೋರಿದ, ದೇಶವನ್ನೇ ಬದಲಾಸಿದ ಮಹಾನ್ ಧೀಮಂತ. ಅವರ ವ್ಯಕ್ತಿತ್ವ ಇಡೀ ಜಗತ್ತಿಗೇ ಸ್ವೀಕೃತವಾಗಿತ್ತು ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯ ಸು.ರಾಮಣ್ಣ ಹೇಳಿದರು.

    ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕಾಲೇಜಿನ ಬಯಲು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದ ಭವಿಷ್ಯ ಮಾತ್ರವಲ್ಲದೆ ವರ್ತಮಾನವೂ ಯುವಕರ ಕೈಯಲ್ಲಿದೆ. ವರ್ತಮಾನದ ಅವಮಾನವನ್ನು ಗುರುತಿಸಿ ಅದಕ್ಕೆ ಸಡ್ಡು ಹೊಡೆದು ಬೆಳೆಯುವ ಛಾತಿ ಯುವಕರಲ್ಲಿ ಮೂಡಬೇಕು ಎಂದರಲ್ಲದೆ ಭಾರತದ ವೈಶಿಷ್ಟ್ಯವೇ ಇಲ್ಲಿನ ಕುಟುಂಬ ಪದ್ಧತಿ. ಇಂಥ ಘನ ವಿಶೇಷತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಉದಾತ್ತ ಮನೋಭಾವನೆ ಬೆಳೆಯಬೇಕು ಎಂದವರು ಹೇಳಿದರು. ನಮ್ಮ ದೇಶ ಭಾರತವೇ ಹೊರತು 'ಇಂಡಿಯಾ' ಅಲ್ಲ. ಅದು ಆಂಗ್ಲರು ನಮ್ಮತನದ ಮೇಲೆ ಮಾಡಿದ ಸವಾರಿ. ಆದ್ದರಿಂದ ನಾವು ಭಾರತೀಯರು ಎಂಬುದೇ ಸರ್ವವಿಧಿತ. ಈ ಹಿನ್ನೆಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಮಾತಾಡುವಾಗ ನಾವು ಇಂಡಿಯನ್ಸ್ ಅನ್ನುವುದರ ಬದಲು ಭಾರತಿಯನ್ಸ್ ಎಂದೇ ಪರಿಚಯಿಸಿಕೊಳ್ಳಬೇಕು. ಬಂಗಾರಪ್ಪ ಅನ್ನುವ ಹೆಸರು ಆಂಗ್ಲ ಭಾಷೆಯಲ್ಲಿ ಗೋಲ್ಡ್ ಫಾದರ್ ಎಂದಾಗದು. ಹೀಗಿರುವಾಗ ಭಾರತ ಅನ್ನುವ ಹೆಸರು ಇಂಡಿಯಾ ಆಗುವುದು ಹೇಗೆ? ಎಂದು ತಾರ್ಕಿಕವಾಗಿ ಪ್ರಶ್ನಿಸಿದರು .

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ವಿನಯ ಹೆಗ್ಡೆ ಹಿರಿಯರು ಮಕ್ಕಳಿಗೆ ಆದರ್ಶವಾಗಬೇಕು. ದುರದೃಷ್ಟವೆಂದರೆ ಇಂದು ಯುವಕರಿಗೆ ಉದಾಹರಣೆಗಳಾಗಬಹುದಾದ ವ್ಯಕ್ತಿಗಳೇ ಕಾಣಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಹಿರಿಯರು ಯೋಚಿಸಿ ಸಾಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ಶುಭ ಹಾರೈಸಿದರು.

    ಇದೇ ಸಂದರ್ಭದಲ್ಲಿ ವಿಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿ.ವಿ.ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ಪೈ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ಹಾಗೂ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ.ಶ್ರೀಶಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

    ಸುಮಾರು ಆರು ಸಾವಿರಕ್ಕೂ ಮಿಕ್ಕಿ ಸೇರಿದ ವಿದ್ಯಾರ್ಥಿ ಹಾಗೂ ಹೆತ್ತವರ ಸಮೂಹ.

    ನೆರೆದಿದ್ದವರೆಲ್ಲವರಿಗೂ ಶುಚಿ ರುಚಿಯಾದ ಭೋಜನ ವ್ಯವಸ್ಥೆ .

    0 Responses to “ವಿಜೃಂಭಣೆಯ ವಿವೇಕಾನಂದ ಜಯಂತಿ 2010”

    Subscribe