Monday, December 27, 2010
ಕ್ವಾಟ : ಶಬ್ದಲೋಕ
ಮಲೆನಾಡಿನಲ್ಲಿ ಈ ಸಲ ಒಳ್ಳೆಯ ಚಳಿ ಬಿದ್ದಿದೆ. ಒಂದು ರೀತಿಯಲ್ಲಿ ಕಿತ್ತು ತಿನ್ನುವ ಚಳಿ ಎಂದರೂ ತಪ್ಪಿಲ್ಲ. ಹಾಗೆ ನೋಡಿದರೆ ನನು ಇರುವ ಪುತ್ತೂರಿನಲ್ಲಿಯೂ ಈಸಲ ಸಾಕಷ್ಟು ವಾಡಿಕೆಗಿಂತ ಹೆಚ್ಚಿನ ಚಳಿ ಇದೆ.
ಮಲೆನಾಡಿನಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಬಳಸುವ ಒಂದು ಅಪರೂಪದ ಶಬ್ದ ಕ್ವಾಟ. ಹೀಗೆ ಹೇಳಿದರೆ ಅರ್ಥವಾಗಲಿಕ್ಕಿಲ್ಲ.
ಚಳಿಗಾಲದಲ್ಲಿ ಮುಂಜಾನೆ ಮುಖತೊಳೆಯುವುದು, ಕೈಕಾಲಿಗೆ ತಣ್ಣನೆಯ ನೀರು ಸುರಿದುಕೊಳ್ಳುವುದು ಒಂದು ರೀತಿ ರೋಮಾಂಚನ ನೀಡುವ ಅನುಭವ. ಈ ಸಂದರ್ಭದಲ್ಲಿ ಹಂಡೆಯಲ್ಲಿ ಅಥವಾ ಮಣ್ಣಿನಿಂದ ತಯಾರಿಸಿದ ಬಾನಿಯಲ್ಲಿ ತುಂಬಿಸಿಟ್ಟ ನೀರು ಮುಂಜಾನೆಯ ಹೊತ್ತಿಗೆ ತಣ್ಣಗೆ ಕೊರೆಯುತ್ತಿರುತ್ತದೆ. ಈ ಬಗೆಯ ತಣ್ಣನೆಯ ನೀರನ್ನು ಆಡುಮಾತಿನಲ್ಲಿ ಕ್ವಾಟ ಎಂದು ಕರೆಯುವುದಿದೆ.
ಹಂಡೆಯ ನೀರನ್ನು ಮುಟ್ಟಲು ಸಾಧ್ಯವಿಲ್ಲ. ಕ್ವಾಟಾ ಅಂದ್ರೆ ಕ್ವಾಟ. ಬಿಸಿ ನೀರು ಇದ್ದರೆ ಚೆನ್ನಾಗಿತ್ತು ಎಂಬ ಮಾತುಗಳನ್ನು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಕೇಳಬಹುದು.
ನೀವೂ ಕ್ವಾಟದ ಸುಖವನ್ನು ಅನುಭವಿಸಿ.
ಪ್ರೊ. ಮಾಲತಿ ಪಟ್ಟಣ ಶೆಟ್ಟಿಗೆ ನಿರಂಜನ ಪ್ರಶಸ್ತಿ

ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ಮೌನಕರಗುವ ಹೊತ್ತು, ಎಷ್ಟೊಂದು ನಾವೆಗಳು ಮುಂತಾದ ಕವನ ಸಂಕಲನ, ಇಂದು ನಿನ್ನಿನ ಕಥೆಗಳು, ಸೂರ್ಯಮುಳುಗುವುದಿಲ್ಲ ಕಥಾಸಂಗ್ರಹ, ಬಸವರಾಜ ಕಟ್ಟೀಮನಿ ಮತ್ತು ಶ್ರೀನಿವಾಸ ವೈದ್ಯ ಬದುಕು ಬರಹ ಕೃತಿಗಳಲ್ಲದೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ರೇಡಿಯೋ ನಾಟಕ, ಮಕ್ಕಳ ನಾಟಕ, ಮಕ್ಕಳ ಪ್ರವಾಸ ಕಥನ, ಮಹಿಳೆಯರ ಸಾಮಾಜಿಕ ಸಮಸ್ಯೆಯನ್ನು ಕುರಿತು ಸಾಕಷ್ಟು ಕೆಲಸ ಮಾಡಿದ್ದಾರೆ.
Thursday, December 16, 2010
ಶಬ್ದಗಳೊಂದಿಗೆ ಸಲ್ಲಾಪ :
ನೆನಪಿನಂಗಳ ೪ - ಹಿರಿಯರ ಹೆಜ್ಜೆ ಗುರುತು
Sunday, December 5, 2010
ನೆನಪಿನಂಗಳ - ೩ : ಆಲಳ್ಳಿ ಶಾಲೆಯಲ್ಲಿ ಅಕ್ಷರದ ಬೆಳಕು
Saturday, December 4, 2010
ನೆನಪಿನಂಗಳದಲ್ಲಿ ಆಲಳ್ಳಿ ಶಾಲೆ . . .
Sunday, October 31, 2010
ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ
ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ ಶಿವರಾಮಕಾರಂತ ಬಾಲವನ ಪ್ರಶಸ್ತಿ ಮತ್ತು ಬಹುಭಾಷಾ ಕವಿಗೋಷ್ಠಿ ೧೦.೧೦.೨೦೧೦.
ಬಾಲವನದ ಮಟ್ಟಿಗೆ ಒಂದು ವಿಶಿಷ್ಟ ದಿನ. ಆಗಸದಲ್ಲಿ ಮೋಡಕಟ್ಟಿದ ವಾತಾವರಣ. ಆಗಾಗ ಹನಿಯುವ, ಒಮ್ಮೊಮ್ಮೆ ಧೋ ಎಂದು ಸುರಿಯುವ ಮಳೆ. ಬಾಲವನದ ವಾತಾವರಣ ಎಂದಿನಂತಿರಲಿಲ್ಲ. ಹೊಸದಾಗಿ ನಿರ್ಮಿಸಿದ ಬಯಲುರಂಗ ಮಂದಿರದಲ್ಲಿ ಎಲ್ಲಿ ನೋಡಿದರೂ ವಿದ್ಯಾರ್ಥಿಗಳು ಕುಳಿತಿದ್ದರು.
ಎಲ್ಲರಿಗೂ ಮೊದಲ ವರ್ಷದ ಡಾ. ಶಿವರಾಮಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವ ಸಂಭ್ರಮ.
ಅಂದು, ೨೦೦೯ರ ಶಿವರಾಮಕಾರಂತ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬಾಲವನ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರಿನ ಸಹಾಯಕ ಕಮೀಷನರ್ ಡಾ. ಹರೀಶ್ ಕುಮಾರ್ ಕೆ. ಇವರು ಮುಂದಿನ ವರ್ಷ ಬಾಲವನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು. ಅವರು ಹೇಳಿದಂತೆ ಮಾಡಿ ತೋರಿಸಿದರು. ಮೊದಲ ಬಾಲವನ ಪ್ರಶಸ್ತಿಯನ್ನು ೧೦.೧೦.೨೦೧೦ರಂದು ನಡೆದ ಸಮಾರಂಭದಲ್ಲಿ ಕನ್ನಡದ ಹಿರಿಯ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿಯವರಿಗೆ ಬಾಲವನ ಸಮಿತಿಯ ವತಿಯಿಂದ ನೀಡಿ ಗೌರವಿಸಲಾಯಿತು.
ಅನಂತರ ಕಾಲೇಜು ವಿದ್ಯಾರ್ಥಿಗಳ ಬಹುಭಾಷಾ ಕವಿಗೋಷ್ಠಿ. ವಿದ್ಯಾರ್ಥಿಗಳು ಒಂಬತ್ತು ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಓದಿದರು. ಅಲ್ಲಿ ಸೇರಿದ್ದ ನೂರಾರು ಮಂದಿ ಹಿರಿಯರು ಮತ್ತು ಕಿರಿಯರು ವಿದ್ಯಾರ್ಥಿಗಳ ಕವಿಶಕ್ತಿಗೆ ತಲೆದೂಗಿದರು.
ಡಾ. ವಸಂತಕುಮಾರ್ ಪೆರ್ಲರಿಂದ ಅಧ್ಯಕ್ಷೀಯ ನುಡಿಗಳು.
ಗದ್ಯಕ್ಕಿಂತ ಭಿನ್ನವಾದುದು ಕವಿತೆ. ಕವಿ ತನ್ನ ಮನಸ್ಸಿನ ಅನಿಸಿಕೆಯನ್ನು ವ್ಯಕ್ತಪಡಿಸಲು ವಿವಿಧ ಪ್ರಕಾರಗಳನ್ನು ಬಳಸುತ್ತಾನೆ. ಇವುಗಳಲ್ಲಿ ಕವಿತೆಯೂ ಒಂದು. ಕವಿತೆಯು ಅದರ ಶಿಸ್ತಿನ ಎಲ್ಲ ಅಂಶಗಳನ್ನು ಒಳಗೊಳ್ಳಬೇಕು. ಅರ್ಥ, ಭಾವವೈವಿಧ್ಯ, ಸಂಕೀರ್ಣ ಅನುಭವಗಳನ್ನು ಓದುಗನಿಗೆ ಸಂವಹನಗೊಳಿಸಬೇಕು. ಗದ್ಯವು ಬುದ್ಧಿಗೆ, ಕವಿತೆ ಹೃದಯಕ್ಕೆ ಸಂಬಂಧಿಸಿದ್ದು. ಕಾವ್ಯ ಹೃದಯದೊಂದಿಗೆ ನೇರವಾಗಿ ಸಂವಾದ ಮಾಡುತ್ತದೆ. ಕವಿತೆ ಎಂದರೆ ಒಡೆದು ಕಟ್ಟುವ ಪ್ರಕ್ರಿಯೆ ಎಂದು ಕವಿ ಡಾ. ವಸಂತಕುಮಾರ ಪೆರ್ಲ ಹೇಳಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನುಭವಗಳಿಗೆ ದಕ್ಕುವ ವಿಷಯವನ್ನು ಆಯ್ದುಕೊಂಡಿದ್ದಾರೆ. ನಾವು ಮನೆಭಾಷೆಯನ್ನು ಶಕ್ತಿಯುತಗೊಳಿಸದಿದ್ದರೆ ಮುಖ್ಯಭಾಷೆ ನಿಸ್ಸತ್ವವಾಗುತ್ತದೆ. ಸ್ಥಳೀಯ ಭಾಷೆಗಳು ಸತ್ವಪೂರ್ಣವಾದರೆ ಮುಖ್ಯಭಾಷೆಗೆ ಚೈತನ್ಯ ಬರುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಕಾಲೇಜುಗಳಿಂದ ಬಂದ ೨೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜು ಕನ್ನಡ ಸಂಘ ಮತ್ತು ಸಂತಫಿಲೋಮಿನಾ ಕಾಲೇಜು ಕನ್ನಡ ಸಂಘಗಳು ಜಂಟಿಯಾಗಿ ಆಯೋಜಿಸಿದ್ದವು. ಕಾರ್ಯಕ್ರಮದ ಕೊನೆಯಲ್ಲಿ ಬಾಲವನ ಸಮಿತಿಯ ವತಿಯಿಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.





