Tuesday, August 28, 2012

0

ಸಿರಿವಂತೆ ಶಾಲೆಯ ನೆನಪುಗಳು

  • Tuesday, August 28, 2012
  • ಡಾ.ಶ್ರೀಧರ ಎಚ್.ಜಿ.


  • ಶಾಲೆಗೆ ನಡೆದುಕೊಂಡು ಹೋಗುವಾಗ ನಮಗೆಲ್ಲ ಒಂದು ಭಯವಿತ್ತು. ೧೯೭೦ರ ಕಾಲದಲ್ಲಿ ಲಿಂಗನಮಕ್ಕಿ, ಜೋಗ, ಕಾರ್ಗಲ್ ಪ್ರದೇಶದಲ್ಲಿ ಡ್ಯಾಂ ಕಟ್ಟುವ ಕೆಲಸಗಳು ನಡೆಯುತ್ತಿದ್ದವು. ನಾವು ಶಾಲೆಗೆ ಹೋಗುವಾಗ ಕೆಲಸಗಳಿಗೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು ಎದುರಾಗುತ್ತಿದ್ದವು. ಇಂತಹ ಲಾರಿಗಳನ್ನು ದೂರದಲ್ಲಿ ಕಾಣುವುದು ಬಿಡಿ, ಅವು ಬರುತ್ತಿರುವ ಶಬ್ದ ಕೇಳಿದರೂ ಸಾಕು, ನಾವು ಭಯಗೊಳ್ಳುತ್ತಿದ್ದೆವು. ರಸ್ತೆಯನ್ನು ಬಿಟ್ಟು, ದೊಡ್ಡ ಮರದ ಸಂದಿಯಲ್ಲಿ, ಮಟ್ಟಿಯ ಮರೆಯಲ್ಲಿ ಅಡಗುತ್ತಿದ್ದೆವು. ನಮ್ಮ ಭಯಕ್ಕೆ ಕಾರಣ ಖಚಿತವಾಗಿ ನಮಗೂ ಗೊತ್ತಿರಲಿಲ್ಲ. ನಮ್ಮ ಹಿರಿಯರು ತಮ್ಮಲ್ಲಿಯೇ ಮಾತನಾಡಿಕೊಳ್ಳುವಾಗ ಹೇಳಿದ ಒಂದು ಮಾತು ನಮ್ಮ ಭಯಕ್ಕೆ ಕಾರಣವಾಗಿತ್ತು. ಲಿಂಗನಮಕ್ಕಿಯಲ್ಲಿ ಬೃಹತ್ತಾದ ಡ್ಯಾಂ ಕಟ್ಟುತ್ತಿದ್ದಾರೆ. ಎಷ್ಟು ಕಟ್ಟಿದರೂ ಅದು ನಿಲ್ಲುತ್ತಿಲ್ಲ. ಅದಕ್ಕೆ ಮಕ್ಕಳ ಬಲಿ ಬೇಕಂತೆ. ಅದಕ್ಕೆ ಈಗ ಬಲಿ ನೀಡಲು ಮಕ್ಕಳನ್ನು ಹುಡುಕುತ್ತಿದ್ದಾರೆ. ಎದುರಿಗೆ ಮಕ್ಕಳು ಸಿಕ್ಕಿದರೆ ಬಲಿ ನೀಡಲು ಹಿಡಿದುಕೊಂಡು ಹೋಗುತ್ತಾರೆ ಎಂಬ ಮಾತು ನಮ್ಮ ತಲ್ಲಣಕ್ಕೆ ಕಾರಣವಾಗಿತ್ತು. ಇದು ನಿಜವೋ ಸುಳ್ಳೋ ಎಂದು ವಿವೇಚಿಸುವಷ್ಟು ನಮ್ಮಲ್ಲಿ ವಿವೇಕವಿರಲಿಲ್ಲ. ನಮ್ಮನ್ನು ರೇಗಿಸುವುದಕ್ಕೆ ಹೀಗೆ ಹೇಳಿದ್ದಾಗಿರಲೂ ಬಹುದು. ಗಾಳಿಮಾತಿನಿಂದ ನಾವಂತೂ ಹೆದರಿ ಕಂಗಾಲಾಗಿದ್ದೆವು. ಮೈಯೆಲ್ಲ ಕಿವಿಯಾಗಿ ಮಾರ್ಗದಲ್ಲಿಮ ಹೋಗುತ್ತಿದ್ದವು.
    ಮುಂಜಾನೆ ಒಂಬತ್ತೂವರೆಗೆಲ್ಲ ನಾವು ಶಾಲೆಗೆ ತಲುಪುತ್ತಿದ್ದೆವು. ಶಾಲೆಯ ಕೀಲಿಕೈ ಒಂದು ಮನೆಯಲ್ಲಿರುತ್ತಿತ್ತು. ಅದನ್ನು ತಂದು ಬೀಗ ತೆಗೆದು, ಕಸಹೊಡೆದು, ಕುಡಿಯಲು ನೀರು ತಂದಿಟ್ಟು ವ್ಯವಸ್ಥೆಗೊಳಿಸುತ್ತಿದ್ದೆವು. ಹೊತ್ತಿಗೆ ಮಹೇಶ ಬಸ್ಸು ಬರುತ್ತಿತ್ತು. ಶ್ರೀ ಬಿ.ಎನ್. ರಾಮಚಂದ್ರ ಆಗ ನಮ್ಮ ಮುಖೋಪಾಧ್ಯಾಯರು. ಸುಶೀಲಮ್ಮ, ರಾಧಾಬಾಯಿ ಮತ್ತು ಗುಡಿಗಾರ್ ಮೇಸ್ಟ್ರು ಇತರ ಅಧ್ಯಾಪಕರು.
    ವಯೋಮಾನದಲ್ಲಿ ಗುಡಿಗಾರ್ ಮೇಸ್ಟ್ರು ಇತರರಿಗಿಂತ ಹಿರಿಯರು. ಅತ್ಯಂತ ಸಾತ್ವಿಕ ವ್ಯಕ್ತಿ. ಮೂಲಂಗಿ ಪ್ಯಾಂಟು, ಗಿಡ್ಡತೋಳಿನ ಅಂಗಿ, ಕೈಯ್ಯಲ್ಲಿ ಒಂದು ಚಿಕ್ಕ ಬ್ಯಾಗು, ದಪ್ಪ ಗಾಜಿನ ಕನ್ನಡಕ ಅವರ ವೇಷಭೂಷಣ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಮಾತನಾಡಿಸುತ್ತಿದ್ದರು. ನಮಗೆ ಅವರಲ್ಲಿ ವಿಶೇಷವಾದ ಸಲಿಗೆ. ಅವರಿಗೆ ನಮ್ಮಲ್ಲಿ ಪ್ರೀತಿ.
    ಸುಶೀಲಮ್ಮ ಮತ್ತು ರಾಧಾಬಾಯಿ ಟೀಚರ್ ಎಂದರೆ ನನಗೆ ವಿಶೇಷವಾದ ಗೌರವವಿತ್ತು. ಅವರು ಅರ್ಥವಾಗದ ಪಾಠವನ್ನು ಕೇಳಿದರೆ ಪ್ರೀತಿಯಿಂದ ಕಲಿಸುತ್ತಿದ್ದರು.
    ಬಿ.ಎನ್. ರಾಮಚಂದ್ರರಿಗೆ ವಿದ್ಯಾರ್ಥಿಗಳ ಬಗೆಗೆ ವಿಶೇಷವಾದ ಕಾಳಜಿಯಿತ್ತು. ಕಾಲಕ್ಕೆ ಅವರಿಗೆ ಮದುವೆಯಾಗಿರಲಿಲ್ಲ. ತಾರುಣ್ಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ನನ್ನ ಬಗೆಗೆ ಅವರಿಗೆ ವಿಶೇಷವಾದ ಮಮತೆಯಿತ್ತು. ಶಾಲೆಗೆ ಯಾರಾದರೂ ಅತಿಥಿಗಳು ಬಂದರೆ ಹತ್ತಿರದ ಕ್ಯಾಂಟಿನ್ನಿಂದ ಚಹ ಮತ್ತು ತಿಂಡಿಯನ್ನು ತರಲು ನನ್ನನ್ನು ಕಳಿಸುತ್ತಿದ್ದರು. ಉಳಿದವರ ಎದುರಿನಲ್ಲಿ ನನಗಿದು ಹೆಮ್ಮೆಯ ವಿಷಯ. 
    ನಾನಾಗ ಆರನೆಯ ತರಗತಿಗೆ ಬಂದು ಸೇರಿದ್ದೆ. ಕೆಲವೇ ದಿನಗಳಾಗಿದ್ದವು. ಆಫೀಸ್ ಕೊಠಡಿಯ ಪಕ್ಕದಲ್ಲಿ ಏಳನೆಯ ತರಗತಿ. ಅದರ ಪಕ್ಕದಲ್ಲಿ ನಮ್ಮ ಕೊಠಟಿ. ಒಂದು ದಿನ ಮಧ್ಯಾಹ್ನ ಹೆಡ್ಮಾಸ್ಟರ್ ಶ್ರೀಯುತ ಬಿ. ಎನ್. ರಾಮಚಂದ್ರ ಅವರು ನನ್ನನ್ನು ಏಳನೆಯ ತರಗತಿಗೆ ಕರೆದರು. ಅಲ್ಲಿನ ವಿದ್ಯಾರ್ಥಿಗಳೆಲ್ಲರೂ ನಿಂತಿದ್ದರು. ರಾಮಚಂದ್ರ ಬೋರ್ಡಿನಲ್ಲಿ ಬರೆದ ಲೆಕ್ಕವನ್ನು ಮಾಡಲು ನನಗೆ ಹೇಳಿದರು. ನಾನು ಶ್ರದ್ಧೆಯಿಂದ ಲೆಕ್ಕವನ್ನು ಮಾಡಿದೆ. ಅನಂತರ ಎಲ್ಲರ ಎದುರಿನಲ್ಲಿ ನನ್ನನ್ನು ಹೊಗಳಿದರು. ಮಾತ್ರವಲ್ಲ, ಎಲ್ಲರಿಗೂ ಮೂಗು ಹಿಡಿದು ಕೆನ್ನೆಗೆ ಹೊಡೆಯಲು ಹೇಳಿದರು. ಆಗ ಮಾತ್ರ ನನಗೆ ಭಯ ಆರಂಭವಾಯಿತು. ನಾನು ಮೊದಲಿನಿಂದಲೂ ಹುಡುಗಿಯರನ್ನು ಆದಷ್ಟು ದೂರ ಇಟ್ಟವನು. ಈಗ ಅವರ ಮೂಗು ಹಿಡಿದು ಹೊಡೆಯ ಬೇಕೆಂದರೆ ಮನಸ್ಸಿನಲ್ಲಿ ಏನೋ ಒಂದು ರೀತಿಯ ಅಳುಕು. ಅಧ್ಯಾಪಕರ ಆಜ್ಞೆಯನ್ನು ಮೀರುವ ಧೈರ್ಯವಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಮೆಲ್ಲನೆ ಅವರ ಕೆನ್ನೆಗಳಿಗೆ ಹೊಡೆದ ಶಾಸ್ತ್ರ ಮಾಡಿದೆ. ಒಮ್ಮೆ ಕಂಟಕದಿಂದ ಪಾರಾದರೆ ಸಾಕು ಎನಿಸಿತ್ತು.

    ಶಿವಮೊಗ್ಗ ಜಿಲ್ಲೆಯ ಸಾಗರ ನಮ್ಮ ತಾಲೂಕು ಕೇಂದ್ರ. ೧೯೭೫ - ೭೬ನೆಯ ಇಸವಿಯ ಕಾಲಕ್ಕೆ ಸಾಗರದಲ್ಲಿ ಮೂರು ಸಿನಿಮಾ ಟಾಕೀಸುಗಳಿದ್ದವು. ಶ್ರೀ ಟಾಕೀಸು, ಸಾಗರ ಟಾಕೀಸು ಮತ್ತು ಕೃಷ್ಣಾ ಟಾಕೀಸು. ಹೊಸ ಸಿನಿಮಾ ಬಂದರೆ ಕಾರಿನಲ್ಲಿ ಬಂದು ಕರಪತ್ರಗಳನ್ನು ಹಂಚಿ ಹೋಗುತ್ತಿದ್ದರು. ಕಾರಿನಲ್ಲಿ ಹೋಗುವಾಗ ಅವರು ಕರಪತ್ರಗಳನ್ನು ಬಿಸಾಡಿದರೆ ಅವರು ಗಾಳಿಯಲ್ಲಿ ತೇಲಾಡುತ್ತಾ ಕೆಳಗಿಳಿಯುತ್ತಿದ್ದವು. ನಾವು ಅವುಗಳನ್ನು ನೆಲಕ್ಕೆ ಮುಟ್ಟುವ ಮೊದಲೇ ಹಿಡಿದು ಓದಲು ತೊಡಗುತ್ತಿದ್ದೆವು. ಇಂತಹ ಸಮಯದಲ್ಲಿಯೇ ರಾಜ್ಕುಮಾರ್ ಅಭಿನಯದ ಮಯೂರ ಸಿನಿಮಾ ಶ್ರೀ ಟಾಕೀಸಿಗೆ ಬಂತು. ಹಳ್ಳಿಯಲ್ಲಿದ್ದವರೆಲ್ಲರೂ ಹೋಗಿ ಸಿನಿಮಾ ನೋಡಿ ಬಂದರು. ಬಂದವರು ಸುಮ್ಮನೆ ಇರುತ್ತಿರಲಿಲ್ಲ. ಸಂಭ್ರಮದಿಂದ ಅದರ ಕಥೆ ಹೇಳುತ್ತಿದ್ದರು. ನನಗೆ ಸಿನಿಮಾ ಎಂದರೇನು ಎಂಬುದರ ಬಗೆಗೆ ಏನೂ ಗೊತ್ತಿರಲಿಲ್ಲ. ಇಂತಹ ಸಮಯದಲ್ಲಿ ಮಯೂರ ಸಿನಿಮಾ ನೋಡುವ ಅವಕಾಶ ನನಗೆ ತನಾಗಿ ಒದಗಿ ಬಂತು !.
    Read more...

    Subscribe