Saturday, December 31, 2011

0

ಸಿರಿವಂತೆ ಶಾಲೆಗೆ ಭೇಟಿ

  • Saturday, December 31, 2011
  • ಡಾ.ಶ್ರೀಧರ ಎಚ್.ಜಿ.

  • ೨೦೧೦ರ ನವಂಬರ್ ಡಿಸೆಂಬರ್ ವೇಳೆಗೆ ಒಮ್ಮೆ ಊರಿಗೆ ಹೋಗಿದ್ದೆ. ಹೀಗೇ ಕುಳಿತವನಿಗೆ ನಾನು ಕಲಿತ ಶಾಲೆಗೆ ಒಮ್ಮೆ ಹೋಗಿ ಬರಬೇಕೆಂದು ಅನಿಸಿತು. ನನ್ನ ತಮ್ಮನ ಮಗ ಚೇತನ್ ಕರೆದುಕೊಂಡು ಸುಮಾರು ೧೧ ಗಂಟೆಯ ಹೊತ್ತಿಗೆ ಶಾಲೆಗೆ ಹೋದೆ. ಮಕ್ಕಳೆಲ್ಲ ಕಲೆಕೆಯಲ್ಲಿ ತೊಡಗಿದ್ದರು. ನಾನು ನೇರವಾಗಿ ಮುಖ್ಯೋಪಾಧ್ಯಾಯರ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ನಾನು ಬಂದಿರುವುದನ್ನು ಗಮನಿಸಿದ ಟೀಚರ್ ಒಬ್ಬರು ಅದೇ ಹೊತ್ತಿಗೆ ಅಲ್ಲಿಗೆ ಬಂದರು. ನಾನು ನನ್ನ ಪರಿಚಯವನ್ನು ಮಾಡಿಕೊಂಡೆ. ಸುದೈವಕ್ಕೆ ಅವರೇ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರ ಹೆಸರು ಅನಿತಾ ಕಾನಡೆ. ಉತ್ತರ ಕನ್ನಡ ಮೂಲದವರು. ನನ್ನನ್ನು ಕೂರಿಸಿ ಮಾತನಾಡಿದರು. ನನ್ನನ್ನು ಶಾಲೆಯ ಕೊಠಡಿಗಳನ್ನು ತೋರಿಸಲು ಕರೆದುಕೊಂಡು ಹೋದರು.

    ನಾನು ಏಳನೆಯ ತರಗತಿ ಓದಿದ ಕೊಠಡಿಯನ್ನು ಪ್ರವೇಶಿಸಿದಾಕ್ಷಣ ತುಸು ಭಾವುಕನಾದೆ. ಅದೇ ಕೊಠಡಿಯಲ್ಲಿ ಈಗಲೂ ಏಳನೆಯ ತರಗತಿ ನಡೆಯುತ್ತಿತ್ತು. ನಾವು ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆ ಮಕ್ಕಳೆಲ್ಲ ಎದ್ದು ನಿಂತು ಗುಡ್ ಮಾರ್ನಿಂಗ್ ಸಾರ್ ಎಂದು ರಾಗಬದ್ಧವಾಗಿ ಹೇಳಿದರು. ನಾವೂ ಸಹ ಆ ವಯಸ್ಸಿನಲ್ಲಿ ಹಾಗೇ ಮಾಡಿರುವುದು ನೆನಪಾಯಿತು. ಒಂದಷ್ಟು ಹಳೆಯ ನೆನಪುಗಳು ನುಗ್ಗಿಬಂದವು. ಚಪ್ಪಲಿ ಇಲ್ಲದೆ ಶಾಲೆಗೆ ನಡೆದುಕೊಂಡು ಬರುತ್ತಿದ್ದ ಆ ದಿನಗಳು ನೆನಪಾದವು. ಗೆಳೆಯರು ಮತ್ತು ಪಾಠಮಾಡಿದ ಅಧ್ಯಾಪಕರ ಮುಖಗಳು ಸುಳಿದುಹೋದವು. ಕಣ್ಣಿನಲ್ಲಿ ನನಗೆ ಅರಿವಿಲ್ಲದೆ ಹನಿಗಳು ಮಡುಗಟ್ಟಿದವು. ಅನಂತರ ಮತ್ತೊಮ್ಮೆ ಮುಖ್ಯೋಪಾಧ್ಯಾಯರ ಎದುರು ಕುಳಿತೆ. ಕಾಫಿ ತರಿಸಿಕೊಡುವುದಾಗಿ ಹೇಳಿ ಉಪಚರಿಸಿದರು. ನನಗೆ ಕಾಫಿಯನ್ನು ಎಲ್ಲಿಂದ ತರಬೇಕೆಂದು ಗೊತ್ತಿತ್ತು. ಅವರ ಬಿನ್ನಹವನ್ನು ನಯವಾಗಿ ತಿರಸ್ಕರಿಸಿದೆ.

    ವಾಸ್ತವವಾಗಿ ಈ ಶಾಲೆ ಸಾಕಷ್ಟು ಹಳೆಯದು. ೧.೧೧.೧೯೨೨ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆರಂಭವಾಗಿತ್ತು. ನಾವು ಓದುವ ಕಾಲಕ್ಕೆ ಸಿರಿವಂತೆ ಮುಖ್ಯರಸ್ತೆಯ ಪಕ್ಕದಲ್ಲಿ ೧೯೨೨ರ ಕಾಲದಲ್ಲಿ ಕಟ್ಟಿದ ಹಳೆಯ ಕಲ್ಲಿನ ಕಟ್ಟಡವಿತ್ತು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅದನ್ನು ಉರುಳಿಸಿದರು. ಅನಂತರ ೨೦.೧೧.೧೯೫೮ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆರಂಭವಾಗಿತ್ತು. ನನ್ನ ಅಮ್ಮ ಸರೋಜ, ನಾನು, ತಮ್ಮ ಪ್ರಭಾಕರ ಮತ್ತು ತಂಗಿ ಸುಜಾತ ಇದೇ ಶಾಲೆಯಲ್ಲಿ ಓದಿದ್ದೇವೆ. ಹೀಗಾಗಿ ಈ ಶಾಲೆಗೆ ಏನಾದರೂ ನೀಡಬೇಕೆಂದು ಮನಸ್ಸಿನಲ್ಲಿ ಆಲೋಚನೆ ಬಂತು. ಶ್ರೀಮತಿ ಅನಿತ ಕಾನಡೆಯವರನ್ನು ಈ ಬಗೆಗೆ ಕೇಳಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ವಸ್ತುಗಳು ಏನಾದರೂ ಅಗತ್ಯವಿದ್ದರೆ ಹೇಳಿ ತಂದುಕೊಡುತ್ತೇನೆ ಎಂದೆ. ಅವರು ತಮ್ಮ ಸಹೋದ್ಯೋಗಿಗಳಲ್ಲಿ ಸಮಾಲೋಚನೆ ಮಾಡಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಮಾಡಲು ತಟ್ಟೆಯ ಅಗತ್ಯವಿದೆ. ತಂದುಕೊಟ್ಟರೆ ಉಪಕಾರವಾಗುತ್ತದೆ ಎಂದರು. ಸರಿ, ಮುಂದಿನ ಸಲ ಊರಿಗೆ ಬರುವಾಗ ತಂದು ಕೊಡುತ್ತೇನೆ ಎಂದು ಭರವಸೆ ನೀಡಿ ಮರಳಿದೆ.

    ಮೇ ೨೦೧೧ರಲ್ಲಿ ಊರಿಗೆ ಹೋಗುವಾಗ ಮರೆಯದೆ ೧೫೦ ಊಟದ ತಟ್ಟೆಗಳನ್ನು ಖರೀದಿಸಿ ತೆಗೆದುಕೊಂಡು ಹೋದೆ. ನಾನು ಹೋದ ಸಮಯದಲ್ಲಿ ಶಾಲೆಗೆ ರಜೆಯಿತ್ತು. ಶಾಲೆ ಆರಂಭವಾಗುವವರೆಗೆ ಇರಲು ನನಗೆ ಬಿಡುವಿರಲಿಲ್ಲ. ಹೀಗಾಗಿ ಶ್ರೀಮತಿ ಅನಿತಾ ಕಾನಡೆಯವರಿಗೆ ನನ್ನ ಸಂದಿಗ್ಧತೆಯನ್ನು ಹೇಳಿದಾಗ ಅವರು ಶಾಲೆಗೆ ಬರುವುದಾಗಿ ಹೇಳಿದರು. ಅದರಂತೆ ೧೨.೫.೨೦೧೧ರಂದು ನಾನು, ಪತ್ನಿ ಸವಿತಾ ಮತ್ತು ತಮ್ಮ ಪ್ರಭಾಕರ ಶಾಲೆಗೆ ಹೋದೆವು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸತ್ಯಮೂರ್ತಿಯವರು ಬಂದಿದ್ದರು. ಅವರಿಗೆ ನಾವು ತೆಗೆದುಕೊಂಡು ಹೋಗಿದ್ದ ತಟ್ಟೆಗಳನ್ನು ಹಸ್ತಾಂತರಿಸಿ ಬಂದೆವು. ನನಗೆ ಆ ಕ್ಷಣಕ್ಕೆ ಧನ್ಯತೆ ಮೂಡಿತು. ಮನಸ್ಸಿಗೆ ನಿರಾಳವೆನಿಸಿತು.

    Read more...
    0

    ಸಿರಿವಂತೆ ಶಾಲೆ

  • ಡಾ.ಶ್ರೀಧರ ಎಚ್.ಜಿ.
  • ನಮ್ಮ ಮನೆಯಿಂದ ಸಿರಿವಂತೆ ಶಾಲೆಗೆ ನಡೆದುಕೊಂಡು ಹೋಗಲು ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ‍್ ದೂರವಿತ್ತು. ಹೀಗಾಗಿ ನಾವು ಮುಂಜಾನೆ ಎಂಟೂವರೆಗೆಲ್ಲ ಮನೆಬಿಡುತ್ತಿದ್ದೆವು. ಮುಂಡಿಗೆಹಳ್ಳದ ಸೇತುವೆ ಸಮೀಪ ನಮ್ಮ ತಂಡದ ಸದಸ್ಯರೆಲ್ಲರೂ ಒಟ್ಟುಸೇರುತ್ತಿದ್ದೆವು.

    ಶಾಲೆಗೆ ನಡೆದುಕೊಂಡು ಹೋಗುವಾಗ ನಮಗೆಲ್ಲ ಒಂದು ಭಯವಿತ್ತು. ೧೯೭೦ರ ಕಾಲದಲ್ಲಿ ಲಿಂಗನಮಕ್ಕಿ, ಜೋಗ, ಕಾರ್ಗಲ್ ಪ್ರದೇಶದಲ್ಲಿ ಶರಾವತಿ ನದಿಗೆ ಡ್ಯಾಂ ಕಟ್ಟುವ ಕೆಲಸಗಳು ಭರದಿಂದ ನಡೆಯುತ್ತಿದ್ದವು. ನಾವು ಶಾಲೆಗೆ ಹೋಗುವಾಗ ಈ ಕೆಲಸಗಳಿಗೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು ಎದುರಾಗುತ್ತಿದ್ದವು. ಇಂತಹ ಲಾರಿಗಳು ದೂರದಲ್ಲಿ ಕಾಣುವುದು ಬಿಡಿ, ಅವು ಬರುತ್ತಿರುವ ಶಬ್ದ ಕೇಳಿದರೂ ಸಾಕು, ನಾವು ಭಯಗೊಳ್ಳುತ್ತಿದ್ದೆವು. ರಸ್ತೆಯನ್ನು ಬಿಟ್ಟು, ದೊಡ್ಡ ಮರದ ಸಂದಿಯಲ್ಲಿ, ಪೊದೆಯ ಮರೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆವು. ಈ ಬಗೆಯ ಭಯಕ್ಕೆ ಕಾರಣ ನಮಗೂ ಸರಿಯಾಗಿ ಗೊತ್ತಿರಲಿಲ್ಲ. ನಮ್ಮ ಹಿರಿಯರು ತಮ್ಮಲ್ಲಿಯೇ ಮಾತನಾಡಿಕೊಳ್ಳುವಾಗ ಹೇಳಿದ ಒಂದು ಮಾತು ನಮ್ಮ ಕಿವಿಯ ಮೇಲೆ ಬಿದ್ದು ನಮ್ಮನ್ನು ಕಂಗಾಲು ಮಾಡಿತ್ತು. “ ಲಿಂಗನಮಕ್ಕಿಯಲ್ಲಿ ಬೃಹತ್ತಾದ ಡ್ಯಾಂ ಕಟ್ಟುತ್ತಿದ್ದಾರೆ. ಎಷ್ಟು ಕಟ್ಟಿದರೂ ಅದು ನಿಲ್ಲುತ್ತಿಲ್ಲ. ಅದಕ್ಕೆ ಮಕ್ಕಳ ಬಲಿ ಬೇಕಂತೆ. ಅದಕ್ಕೆ ಈಗ ಬಲಿ ನೀಡಲು ಮಕ್ಕಳನ್ನು ಹುಡುಕುತ್ತಿದ್ದಾರೆ. ಡದುರಿಗೆ ಮಕ್ಕಳು ಸಿಕ್ಕಿದರೆ ಬಲಿ ನೀಡಲು ಹಿಡಿದುಕೊಂಡು ಹೋಗುತ್ತಾರೆ”. ಎಂಬ ಮಾತು ನಮ್ಮ ತಲ್ಲಣಕ್ಕೆ ಕಾರಣವಾಗಿತ್ತು. ಇದು ನಿಜವೋ ಸುಳ್ಳೋ ಎಂದು ವಿವೇಚಿಸುವಷ್ಟು ನಮ್ಮಲ್ಲಿ ವಿವೇಕವಿರಲಿಲ್ಲ. ನಮ್ಮನ್ನು ರೇಗಿಸುವುದಕ್ಕೆ ಹೀಗೆ ಹೇಳಿದ್ದಿರಲೂ ಬಹುದು. ಈ ಗಾಳಿಮಾತಿನಿಂದ ನಾವಂತೂ ಹೆದರಿಹೋಗಿದ್ದೆವು. ಮೈಯೆಲ್ಲ ಕಿವಿಯಾಗಿ ಮಾರ್ಗದಲ್ಲಿ ಹೋಗುತ್ತಿದ್ದೆವು.

    ಮುಂಜಾನೆ ಒಂಬತ್ತೂವರೆಗೆಲ್ಲ ನಾವು ಶಾಲೆಗೆ ತಲುಪುತ್ತಿದ್ದೆವು. ಶಾಲೆಯ ಕೀಲಿಕೈ ಒಂದು ಮನೆಯಲ್ಲಿರುತ್ತಿತ್ತು. ಅದನ್ನು ತಂದು ಬೀಗ ತೆಗೆದು, ಕಸಹೊಡೆದು, ಕುಡಿಯಲು ನೀತು ತಂದಿಟ್ಟು ವ್ಯವಸ್ಥೆಗೊಳಿಸುತ್ತಿದ್ದೆವು. ಈ ಹೊತ್ತಿಗೆ ಸಾಗರದಿಂದ ಮಹೇಶ ಬಸ್ಸು ಬರುತ್ತಿತ್ತು. ಶ್ರೀ ಬಿ.ಎನ್. ರಾಮಚಂದ್ರ ಆಗ ನಮ್ಮ ಮುಖ್ಯೋಪಾಧ್ಯಾಯರು. ಸುಶೀಲಮ್ಮ, ರಾಧಾಬಾಯಿ ಮತ್ತು ಗುಡಿಗಾರ‍್ ಮೇಸ್ಟ್ರು ಇತರ ಅಧ್ಯಾಪಕರು. ಇವರಲ್ಲಿ ಗುಡಿಗಾರ‍್ ಮೇಸ್ಟ್ರು ವಯೋಮಾನದಲ್ಲಿ ಇತರರಿಗಿಂತ ಹಿರಿಯರು. ಅತ್ಯಂತ ಸಾತ್ವಿಕ ವ್ಯಕ್ತಿ. ಕೈಯ್ಯಲ್ಲಿ ಚರ್ಮದ ಒಂದು ಚಿಕ್ಕ ಬ್ಯಾಗು, ದಪ್ಪ ಗಾಜಿನ ಕನ್ನಡಕ, ಮೂಲಂಗಿ ಪ್ಯಾಂಟು, ಅರ್ಧತೋಳಿನ ಅಂಗಿ ಅವರ ವೇಷಭೂಷಣ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಮಾತನಾಡಿಸುತ್ತಿದ್ದರು. ನಮಗೆ ಅವರಲ್ಲಿ ವಿಶೇಷವಾದ ಸಲಿಗೆ. ಅವರಿಗೆ ನಮ್ಮಲ್ಲಿ ಪ್ರೀತಿ.

    ಬಿ.ಎನ್. ರಾಮಚಂದ್ರರಿಗೆ ವಿದ್ಯಾರ್ಥಿಗಳ ಬಗೆಗೆ ವಿಶೇಷವಾದ ಕಾಳಜಿಯಿತ್ತು. ಆ ಕಾಲಕ್ಕೆ ಅವರಿಗೆ ಮದುವೆಯಾಗಿರಲಿಲ್ಲ. ತಾರುಣ್ಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಶಾಲೆಗೆ ಅಥಿತಿಗಳು ಬಂದರೆ ಟೀ ತರುವುದು, ಕೆಲವೊಮ್ಮೆ ಬೆಲ್ ಹೊಡೆಯುವುದಕ್ಕೆ ಅವರು ನನ್ನನ್ನು ಕರೆಯುತ್ತಿದ್ದರು. ನನಗಿದು ಒಂದು ಗೌರವದ ಸಂಗತಿಯಾಗಿತ್ತು.

    ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರತೀವರ್ಷ ಆಗುತ್ತಿರಲಿಲ್ಲ. ನಾನು ಏಳನೆಯ ತರಗತಿಯಲ್ಲಿರುವಾಗ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಗುಡಿಗಾರ‍್ ಮೇಸ್ಟ್ರು ನಮ್ಮಿಂದ ಕುವೆಂಪು ಅವರ ಬಾಲಗೋಪಾಲ ನಾಟಕವನ್ನು ಮಾಡಿಸಿದ್ದರು. ನಾನು ಅದರಲ್ಲಿ ಗುರುವಿನ ಪಾತ್ರವನ್ನು ಮಾಡಿದ್ದೆ. ಅದೇ ದಿನ ಇನ್ನೊಂದು ಹಾಸ್ಯನಾಟಕವಿತ್ತು. ಅದರಲ್ಲಿ ನಾನು ಶಾಲೆಯ ಅಧ್ಯಾಪಕನ ಮಾಡಿದ್ದೆ. ಅದರಲ್ಲಿ ಒಂದು ಸಂಭಾಷಣೆ ಹೀಗಿದೆ.

    ಅಧ್ಯಾಪಕ ತರಗತಿಗೆ ಬಂದು ಹಾಜರಿ ಕರೆದ ನಂತರ ವಿದ್ಯಾರ್ಥಿಗಳಿಗೆ ಲಿಂಗದಲ್ಲಿ ಎಷ್ಟುವಿಧ? ಎಂದು ಒಂದು ಪ್ರಶ್ನೆ ಕೇಳುತ್ತಾನೆ. ಇದಕ್ಕೆ ಸರಿಯಾದ ಉತ್ತರ ಬರುವುದಿಲ್ಲ. ಆಗ ಲಿಂಗ ಎಂಬ ತುಸು ಕಿಲಾಡಿ ಹುಡುಗನೊಬ್ಬ ಮಹಾಲಿಂಗ ಮತ್ತು ಶಿವಲಿಂಗ ಎಂದು ಎರಡು ವಿಧ ಸಾರ‍್ ಎಂದು ಉತ್ತರಿಸಿದ. ಇದನ್ನು ಕೇಳಿ ಎಲ್ಲ ಹುಡುಗರು ಹೋ ಎಂದು ಕಿರುಚುವರು.

    ನಾನು ಹೇಳುವಂತಹ ಕ್ರೀಡಾಪಟುವೇನೂ ಆಗಿರಲಿಲ್ಲ. ಶಾಲೆಯ ಕಬಡ್ಡಿ ಮತ್ತು ಕೊ ಕ್ಕೊ ತಂಡದ ಸದಸ್ಯನಾಗಿದ್ದೆ. ತಾಲೂಕು ಮಟ್ಟದ ಕೊ ಕ್ಕೊಪಂದ್ಯ ನಮ್ಮ ಶಾಲೆಯಲ್ಲಿ ನಡೆದಿತ್ತು. ನಾವು ಸೆಮಿಫೈನಲ್ವರೆಗೆ ಹೋಗಿ ಸೋತೆವು ಎಂದು ನೆನಪು. ಹಾಗೆಯೇ ಸಾಗರದ ಜೂನಿಯರ‍್ ಕಾಲೇಜು ಮೈದಾನದಲ್ಲಿ ಕಬಡ್ಡಿ ಪಂದ್ಯ ನಡೆದಿತ್ತು. ನಾವು ನಾಲ್ಕನೆಯ ಸುತ್ತಿನಲ್ಲಿ ಸೋತಿದ್ದೆವು.

    ಸಾಗರದಲ್ಲಿ ನಡೆದ ಈ ಕಬಡ್ಡಿ ಪಂದ್ಯದಲ್ಲಿ ನಮ್ಮ ಆಟವು ಮಧ್ಯಾಹ್ನದ ಒಳಗೆ ಮುಕ್ತಾಯವಾಗಿತ್ತು. ಈ ಹೊತ್ತಿಗೆ ಸಾಗರದ ಶ್ರೀ ಟಾಕೀಸಿನಲ್ಲಿ ಮಯೂರ ಸಿನಿಮಾ ನಡೆಯುತ್ತಿತ್ತು. ಹಳ್ಳಿಯಲ್ಲಿ ಯಾರ ಬಾಯಲ್ಲಿ ನೋಡಿದರೂ ಮಯೂರ ಸಿನಿಮಾದ ಸುದ್ದಿ. ಹೀಗಾಗಿ ನನಗೂ ಅದನ್ನು ನೋಡಬೇಕೆಂದು ಆಸೆಯಾಗಿತ್ತು. ಇದಕ್ಕೆ ಸರಿಯಾಗಿ ನಮ್ಮ ಆಟವೂ ಮುಗಿದಿತ್ತು. ಹೀಗಾಗಿ ಮ್ಯಾಟಿನಿ ಶೋಗೆ ಹೋದ ನೆನಪಿದೆ. ಇದೇ ಸಿನಿಮಾಕ್ಕೆ ನನ್ನ ಚಿಕ್ಕಮ್ಮ ಕುಸುಮ ಮತ್ತು ಚಿಕ್ಕಪ್ಪ ಶ್ರೀಪಾದ ರಾವ್ ಬಂದಿದ್ದರು. ನನ್ನ ಟಿಕೇಟನ್ನು ಅವರೇ ತೆಗೆದುಕೊಟ್ಟರು. ಇದು ನಾನು ನೋಡಿದ ಮೊದಲ ಸಿನಿಮಾವೂ ಆಗಿತ್ತು. ಅತ್ಯಂತ ಸಂಭ್ರಮದಿಂದ ಕುಳಿತು ಈ ಸಿನಿಮಾವನ್ನು ನೋಡಿದ್ದೆ. ತೆರೆಯ ಮೇಲೆ ಚಿತ್ರಗಳು ಹೇಗೆ ಮೂಡಿಬರುತ್ತಿವೆ ಎಂಬುದು ಒಗಟಾಗಿಯೇ ಉಳಿದಿತ್ತು. ತುಂಬಾದಿನಗಳವರೆಗೆ ಈ ಸಿನಿಮಾದ ಸುದ್ದಿಯನ್ನು ಹೇಳಿ ಸಂತೋಷಪಟ್ಟಿದ್ದೆ.

    Read more...

    Friday, October 21, 2011

    0

    ಹೆಗ್ಗಾರಳ್ಳಿಗೆ ಭೇಟಿ

  • Friday, October 21, 2011
  • ಡಾ.ಶ್ರೀಧರ ಎಚ್.ಜಿ.

  • ಹೆಗ್ಗಾರಳ್ಳಿ ಊರಿನ ಬೀದಿಯ ಚಿತ್ರ
    ಬದುಕಿನ ಯಾವುದೋ ಘಟ್ಟದಲ್ಲಿ ಹಲವು ಕುಟುಂಬಗಳು ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆ ಹೋಗಿರುವ ಸಾಧ್ಯತೆದೆ. ನಮ್ಮ ಕುಟುಂಬವೂ ಸುಮಾರು ನೂರು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸಮೀಪದ ಹೆಗ್ಗಾರಳ್ಳಿ ಎಂಬ ಊರಿನಿಂದ ಸಿರಿವಂತೆ ಸಮೀಪದ ಸಸರವಳ್ಳಿ ಎಂಬ ಹಳ್ಳಿಗೆ ವಲಸೆ ಬಂದರು. ಇದು ನಮ್ಮ ತಾತನ ತಂದೆಯ ಕಾಲದಲ್ಲಿ ನಡೆದ ಘಟನೆ. ಸಸರವಳ್ಳಿಯಲ್ಲಿ ಈಗಲೂ ನಮ್ಮ ಮನೆತನಕ್ಕೆ ಹೆಗ್ಗಾರಳ್ಳಿಮನೆ ಎಂಬ ಹೆಸರಿದೆ. ಹಾಗೆ ನೋಡಿದರೆ ಹವ್ಯಕ ಸಮುದಾಯದ ಕುಟುಂಬಗಳಲ್ಲಿ ಈ ವಲಸೆಯ ಪ್ರಕ್ರಿಯೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರುವುದು ಕಂಡುಬರುತ್ತದೆ. ದಕ್ಷಿಣ ಕನ್ನಡದಲ್ಲಿರುವ ಹವ್ಯಕರು ಉತ್ತರ ಕನ್ನಡ ಇಲ್ಲವೇ ಶಿವಮೊಗ್ಗ ಜಿಲ್ಲೆಯ ಕಡೆಂದ ವಲಸೆ ಬಂದಿರುವುದು ಕಂಡುಬರುತ್ತದೆ. ಈ ವಲಸೆಯ ಪ್ರಕ್ರಿಯೆ ಯಾವಾಗ ಯಾವ ಪ್ರಮಾಣದಲ್ಲಿ ನಡೆತು ಎಂಬುದರ ಬಗೆಗೆ ಅಧ್ಯಯನ ನಡೆಸುವ ಅಗತ್ಯವಿದೆ.


    ಹೀಗೆ ವಲಸೆ ಬಂದ ಪ್ರತಿಯೊಬ್ಬರಿಗೂ ತಮ್ಮ ಮೂಲ ಊರಿನ ಬಗೆಗೆ ಒಂದು ವ್ಯಾಮೋಹ ಮನಸ್ಸಿನಾಳದಲ್ಲಿ ಇರುತ್ತದೆ. ನನಗೂ ನಮ್ಮ ಮನೆತನದ ಮೂಲ ಊರಾದ ಹೆಗ್ಗಾರಳ್ಳಿ ಊರನ್ನು ನೋಡಬೇಕೆಂಬ ಅಪೇಕ್ಷೆ ಬಹಳ ಕಾಲದಿಂದ ಇತ್ತು. ಆದರೆ ಮಾಹಿತಿಯ ಕೊರತೆ, ಹೆಗ್ಗಾರಳ್ಳಿಯಲ್ಲಿ ಯಾರೂ ಪರಿಚಯವಿಲ್ಲದ ಕಾರಣ ಊರಿಗೆ ಹೋಗಲು ಒಂದು ಎಳೆ ಸಿಕ್ಕಿರಲಿಲ್ಲ. ಹೀಗಿರುವ ಸಂದರ್ಭದಲ್ಲಿ ನಾಲ್ಕಾರು ವರ್ಷಗಳ ಹಿಂದೆ , ಪತ್ರಿಕೆಯಲ್ಲಿ ಬಂದ ಯಕ್ಷಗಾನದ ಒಂದು ಜಾಹಿರಾತಿನಲ್ಲಿ ಮನೋಜ್ ಭಟ್ ಎಂಬುವವರ ಹೆಸರು ಕಣ್ಣಿಗೆ ಬಿತ್ತು. ಹೆಸರಿನೊಂದಿಗೆ ಅವರ ಮೊಬೈಲ್ ನಂಬರು ಸಹ ಸಿಕ್ಕಿತು. ವ್ಯಕ್ತಿಯನ್ನು ಸಂಪರ್ಕಿಸಿ ಹೆಗ್ಗಾರಳ್ಳಿ ಊರಿಗೆ ಹೋಗಬಹುದು ಎಂದು ಮನಸ್ಸಿನಲ್ಲಿಯೇ ಲೆಕ್ಕಹಾಕಿದೆ. ಅನಂತರವೂ ಒಂದಿಲ್ಲೊಂದು ತೊಂದರೆಂದ ಕಡೆಗೆ ಹೋಗಲು ಸಾಧ್ಯವಾಗಿರಲಿಲ್ಲ.

    ಕಳೆದ ಮೇ ತಿಂಗಳಲ್ಲಿ ಊರಿಗೆ ಹೋದಾಗ ಹೆಗ್ಗಾರಳ್ಳಿ ಊರು ನನ್ನನ್ನು ಸೆಳೆಯತೊಡಗಿತು. ಇದಕ್ಕೆ ಪೂರಕವಾಗಿ ಶಿರಸಿಂದ ಹುಲೇಕಲ್ ಮಾರ್ಗವಾಗಿ ಹೋಗುವ ಸಮೀಪದ ಓಣಿಕೆರೆ ಎಂಬ ಸಂಬಂಧಿಕರ ಮನೆಗೆ ಹೋಗುವ ಅವಕಾಶ ಸ್ಟೃಯಾತು. ನಾನು ಮತ್ತು ಸವಿತ ಇಬ್ಬರೇ ನಮ್ಮ ವಾಹನದಲ್ಲಿ ಓಣಿಕೆರೆಗೆ ಹೋದೆವು. ಅಲ್ಲಿಂದ ಹೆಗ್ಗಾರಳ್ಳಿ ಊರಿನ ತಪಾಸಣೆಗೆ ಆರಂಭಿಸಿದೆ. ಹಳೆಯ ನಂಬರನ್ನು ಹುಡುಕಿ ಮನೋಜ್ ಭಟ್ ಎಂಬ ವ್ಯಕ್ತಿಗೂ ಕರೆಮಾಡಿದೆ. ಮೊದಲ ಸಲಕ್ಕೆ ಈ ವ್ಯಕ್ತಿ ಸಿಗಲಿಲ್ಲ. ಅನಂತರ ಮಾತಿಗೆ ಸಿಕ್ಕಿದರು. ನಾನು ನನ್ನ ಅಹವಾಲನ್ನು ತೋಡಿಕೊಂಡೆ. ನನಗೆ ನಮ್ಮ ಪೂರ್ವಜರ ಊರಿನ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಸಂಭ್ರಮವಿತ್ತು. ಆದರೆ ಈ ವ್ಯಕ್ತಿ ಇರುವುದು ಬೆಂಗಳೂರಿನಲ್ಲಿ ಎಂದಾಗ ನನಗೆ ತುಸು ನಿರಾಸೆಯಾತು. ಆದರೆ ಅವರು ತಮ್ಮ ಊರಿಗೆ ಹೋಗುವ ಮಾರ್ಗವನ್ನು ಸೂಚಿಸಿ ಹೆಗ್ಗಾರಳ್ಳಿಯಲ್ಲಿ ತಮ್ಮ ಮನೆಗೆ ಹೋಗುವಂತೆ ಸೂಚಿಸಿದರು. ನನಗೆ ಇದರಿಂದ ಅನಂದವಾಗಿತ್ತು.

    ಮರುದಿನ ಮುಂಜಾನೆ ನಮ್ಮ ಪ್ರಯಾಣ ಹೆಗ್ಗಾರಳ್ಳಿಯ ಕಡೆಗೆ ಆರಂಭವಾತು. ಶಿರಸಿ ಮಾರ್ಗವಾಗಿ ಸಿದ್ದಾಪುರವನ್ನು ತಲುಪಿ ನಮ್ಮ ವಾಹನವನ್ನು ನಿಲ್ಲಿಸಿ ಒಂದು ಅಂಗಡಿಯಲ್ಲಿ ಹೆಗ್ಗಾರಳ್ಳಿಗೆ ದಾರಿಯನ್ನು ಕೇಳಿದೆವು. ಅವರು ತೋರಿದ ದಾರಿಯಲ್ಲಿ ಮುಂದುವರಿದೆವು. ಅವರ ಪ್ರಕಾರ ನಾವು ನಿಂತ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರ. ನಾವು ನಾಲ್ಕು ಕಿಲೋಮೀಟರ್ ಹೋದರೂ ಊರು ಸಿಗಲಿಲ್ಲ. ಮತ್ತೊಮ್ಮೆ ವಾಹನ ನಿಲ್ಲಿಸಿ ಕೇಳಿದೆವು. ನಾವು ಸರಿ ಸುಮಾರು ಎರಡು ಕಿಲೋಮೀಟರ್ ಊರನ್ನು ದಾಟಿ ಮುಂದೆ ಬಂದಿದ್ದೆವು. ಹೀಗಾಗಿ ಹಿಂದಿರುಗಿ ಹೊರಟೆವು. ಸಲ ದಾರಿ ತಪ್ಪಬಾರದೆಂದು ತುಂಬಾ ಎಚ್ಚರಿಕೆಂದ ಹೋದೆವು. ದಾರಿಯೂ ಸಿಕ್ಕಿತು. ರಸ್ತೆಂದ ಸುಮಾರು ಒಂದು ಕಿಲೋಮೀಟರ್ ಒಳಗೆ ಮಣ್ಣಿನ ರಸ್ತೆಯಲ್ಲಿ ಹೋಗಬೇಕು. ರಸ್ತೆಯೂ ತಕ್ಕಮಟ್ಟಿಗೆ ಚೆನ್ನಾಗಿತ್ತು. ನಿಧಾನವಾಗಿ ಹೋಗಿ ಒಂದು ಮನೆಯಮುಂದೆ ವಾಹನವನ್ನು ನಿಲ್ಲಿಸಿ ಕೇಳಿದೆವು. ಇಲ್ಲಿ ಮನೋಜ್ ಭಟ್ ಮನೆ ಯಾವುದು ? ನಾವು ನಿಂತ ಸ್ಥಳದ ಎದುರಿನ ಮನೆ ಅದೇ ಆಗಿತ್ತು.




    Read more...

    Sunday, August 7, 2011

    0

    ಚಂದ್ರಭಟ್ಟರ ಮನೆಯಲ್ಲಿ ಒಂದು ವರ್ಷ

  • Sunday, August 7, 2011
  • ಡಾ.ಶ್ರೀಧರ ಎಚ್.ಜಿ.

  • ಚಂದ್ರಭಟ್ಟರದು ಆ ಕಾಲಕ್ಕೆ ಪುಟ್ಟ ಸಂಸಾರ. ಇವರಿಗೆ ಒಬ್ಬಳು ಮಗಳಿದ್ದಳು. ಅನಂತರ ಮತ್ತಿಬ್ಬರು ಗಂಡು ಮಕ್ಕಳು ಹುಟ್ಟಿದರು. ಮುಂಜಾನೆ ಆರು ಗಂಟೆಗೆಲ್ಲ ಎದ್ದು ಮುಖ ತೊಳೆದು ದನಗಳ ಕೊಟ್ಟಿಗೆಗೆ ಹೋಗಿ ಸಗಣಿ ತೆಗೆದು ಅಕ್ಕಚ್ಚು ನೀಡಿ ಹುಲ್ಲನ್ನು ಹಾಕಬೇಕಿತ್ತು. ಅನಂತರ ಹಸು ಮತ್ತು ಎಮ್ಮೆಯ ಹಾಲು ಕರೆಯುವ ಕಾರ್ಯಕ್ರಮ. ಈ ಹೊತ್ತಿಗೆ ಅವರ ಪತ್ನಿ ಬರುತ್ತಿದ್ದರು. ನಾನು ಅವರನ್ನು ಚಿಕ್ಕಿ ಎಂದು ಕರೆಯುತ್ತಿದ್ದೆ. ನಾನೊಂದು ಹಸುವಿನ ಹಾಲು ಕರೆದರೆ ಅವರು ಇನ್ನೊಂದು ಹಸುವಿನ ಹಾಲು ಕರೆಯುತ್ತಿದ್ದರು. ನನಗೆ ಎಮ್ಮೆಯ ಹಾಲು ಕರೆಯುವುದು ಆರಂಭದಲ್ಲಿ ತುಸು ಕಷ್ಟವಾಗುತ್ತಿತ್ತು. ಕಾಲ ಕ್ರಮೇಣ ಇದನ್ನು ರೂಢಿಸಿಕೊಂಡೆ. ಅನಂತರ ತಿಂಡಿ ತಿಂದು ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಬೇಕಿತ್ತು. ತಿಂಗಳಿಗೊಮ್ಮೆ ಚಿಕ್ಕಿಗೆ ನಾಲ್ಕು ದಿನಗಳ ರಜ. ಆಗ ಪೂಜೆಯ ಜೊತೆಗೆ ಮಜ್ಜಿಗೆ ಕಡೆಯುವುದು, ಮುಂಜಾನೆ ತಿಂಡಿ ಮಾಡುವುದು, ಮಧ್ಯಾಹ್ನದ ಊಟಕ್ಕೆ ಅನ್ನ, ಆಸೆ (ಆಸೆ ಎಂದರೆ ಸಾರು, ಸಾಂಬಾರು, ತಂಬಳಿ, ಗೊಜ್ಜು ಮುಂತಾದ ವ್ಯಂಜನಗಳನ್ನು ಹೇಳುವ ಪದ) ಸಿದ್ಧಪಡಿಸಿ ಒಂಬತ್ತು ಗಂಟೆಗೆಲ್ಲ ಶಾಲೆಗೆ ಹೋಗುವುದಕ್ಕೆ ತಯಾರಾಗಬೇಕಿತ್ತು.


    ಚಳಿಗಾಲದಲ್ಲಿ ಮಜ್ಜಿಗೆ ಕಡೆಯಲು ಕುಳಿತರೆ ಎಷ್ಟು ಹೊತ್ತಾದರೂ ಬೆಣ್ಣೆ ಬರುತ್ತಿರಲಿಲ್ಲ. ಮಜ್ಜಿಗೆ ಕಡೆದು ಕೈ ಬಿದ್ದುಹೋಗುತ್ತಿತ್ತು. ಅಡಿಕೆ ಕೊಲಿನ ಸಂದರ್ಭದಲ್ಲಿ ಇದಕ್ಕೆ ಬೇರೆ ಒಂದಿಷ್ಟು ಕೆಲಸಗಳು ಸೇರ್ಪಡೆಯಾಗುತ್ತಿದ್ದವು. ತೋಟದಲ್ಲಿ ಮರದಿಂದ ಹಣ್ಣಾಗಿ ಬಿದ್ದ ಅಡಿಕೆಯನ್ನು ಹೆಕ್ಕುವುದು, ಅಡಿಕೆ ಕೊಯ್ಯುವಾಗ ಬಿದ್ದ ಉದುರು ಅಡಿಕೆಯನ್ನು ಹೆಕ್ಕುವುದು, ಅಡಿಕೆ ಸುಲಿದ ಮೇಲೆ ಬರುವ ಸಿಪ್ಪೆಯನ್ನು ಆರಿಸಿ ಅದನ್ನು ನಿಗದಿತ ಸ್ಥಳದಲ್ಲಿ ಚೆಲ್ಲುವುದು, ಹೀಗೆ ಒಂದಷ್ಟು ಕೆಲಸಗಳು. ನನಗೆ ಈ ಯಾವ ಕೆಲಸವೂ ಆಯಾಸವನ್ನು ಉಂಟುಮಾಡಿದ್ದಿಲ್ಲ. ಬೆಳಗಿನಿಂದ ರಾತ್ರಿಯವರೆಗೆ ನಿರಂತರವಾಗಿ ಕೆಲಸಮಾಡುವಷ್ಟು ಚೈತನ್ಯವಿತ್ತು. ಚಿಕ್ಕಮ್ಮ ರಜೆಯಲ್ಲಿದ್ದಾಗ ಅಡಿಗೆ ಮನೆಯಲ್ಲಿ ನನ್ನದೇ ದರ್ಬಾರು. ಒಮ್ಮೊಮ್ಮೆ ಚಿಕ್ಕಮ್ಮ ತಿಂಡಿ, ತಿನಿಸುಗಳನ್ನು ಮಾಡಲು ಮಾರ್ಗದರ್ಶನ ಮಾಡುತ್ತಿದ್ದರು. ಜೀವನದಲ್ಲಿ ಮೊದಲ ಸಲ ನಾನು ಗಟ್ಟಿಯಾದ ಕೆನೆ ಮೊಸರನ್ನು ನನಗೆ ಬೇಕಾದಷ್ಟು ತಿಂದದ್ದು ಈ ಮನೆಯಲ್ಲಿ.


    ಸಾಮಾನ್ಯವಾಗಿ ಹಸುವಿನ ಹಾಲಿನ ಮೊಸರು ತುಸು ತೆಳ್ಳಗಿರುತ್ತದೆ. ಆದರೆ ಎಮ್ಮೆ ಹಾಲಿನಿಂದ ಮಾಡಿದ ಮೊಸರು ಅತ್ಯಂತ ಗಟ್ಟಿಯಾಗಿರುತ್ತದೆ ; ಕೆನೆ ಭರಿತವಾಗಿರುತ್ತದೆ. ಈ ಮೊಸರನ್ನು ಅನ್ನಕ್ಕೆ ಹಾಕಿಕೊಂಡು ತುಸು ಉಪ್ಪನ್ನು ಬೆರಸಿ, ಒಳ್ಳೆ ಅಪ್ಪೆಮಿಡಿಯನ್ನು ಕಚ್ಚಿಕೊಂಡು ಊಟಮಾಡಿದರೆ ಅದರಂತಹ ರುಚಿ ಇನ್ನೊಂದಿಲ್ಲ. ಹಾಗೆಯೇ ಕೆನೆಮೊಸರನ್ನು ದಪ್ಪ ಅವಲಕ್ಕಿಗೆ ಬೆರೆಸಬೇಕು. ಇದಕ್ಕೆ ಆಲೆಮನೆ ಬೆಲ್ಲವನ್ನು ಹಾಕಿಕೊಂಡು ಕಲಸಬೇಕು. ಅನಂತರ ಅಪ್ಪೆಮಿಡಿ ಕಾಂಬಿನೇಷನ್ ರುಚಿಯನ್ನು ಹೇಳಿದರೆ ಅರ್ಥವಾಗುವಂಥದ್ದಲ್ಲ. ಬಿಡಿ. ಅದನ್ನು ಸವಿದೇ ನೋಡಬೇಕು. ಈ ಮನೆಯಲ್ಲಿ ನನಗೆ ಇತರ ಮಕ್ಕಳ ಕಿರಿಕಿರಿ ಇರಲಿಲ್ಲ. ಹೀಗಾಗಿ ಒಂದಷ್ಟು ದಿನಗಳು ನೆಮ್ಮದಿಂದ ಕಳೆದವು.


    ಸುಮಾರು ಫೆಬ್ರವರಿ ತಿಂಗಳಿರಬಹುದು. ಈ ಸಂದರ್ಭದಲ್ಲಿ ಒಂದು ಘಟನೆ ನಡೆತು. ಹೊರಗೆ ಸಾಕಷ್ಟು ಚಳಿತ್ತು. ಅಂಗಳದಲ್ಲಿರುವ ಗೋಟನ್ನು ಕೈಮಗುಚಿ ಮುಗಿಸುವಷ್ಟರಲ್ಲಿ ಕತ್ತಲಾತು. ಶರೀರಕ್ಕೆ ವಿಪರೀತ ಆಯಾಸವಾತು. ನಾನು ಕೈಕಾಲು ತೊಳೆದುಕೊಂಡು ಬಂದು ಹೊಸ್ತಿಲಿನ ಒಳಭಾಗದಲ್ಲಿ ಕಂಬಳಿಹಾಸಿ ಮಲಗಿದೆ. ಅಲ್ಲಿಯೇ ನಿದ್ರೆ ಬಂದಿರಬೇಕು. ಊಟದ ಹೊತ್ತಿಗೆ ಚಿಕ್ಕಮ್ಮ ಕರೆದಿರಬೇಕು. ನನಗೆ ಎಚ್ಚರವಾಗಲಿಲ್ಲ. ಇದು ಚಿಕ್ಕಪ್ಪ ಚಂದ್ರಭಟ್ಟರಿಗೆ ತುಸು ಕೋಪಬರಿಸಿತು. ನನ್ನನ್ನು ಗದರಿಸಿ ಎಬ್ಬಿಸಿದರು. ನಾನು ಸಂಜೆಯ ಹೊತ್ತು ಮಲಗಿದ್ದು ಅವರ ಕೋಪವನ್ನು ನೆತ್ತಿಗೇರಿಸಿತ್ತು. ಅವರಿಗೆ ಏನನ್ನಿಸಿತೋ ಗೊತ್ತಿಲ್ಲ. ಮುಂದಿನ ವರ್ಷ ನೀನು ನಿನ್ನ ಮನೆಗೆ ಹೋಗು. ಇಲ್ಲಿ ಇರುವ ಅಗತ್ಯವಿಲ್ಲ ಎಂದುಬಿಟ್ಟರು. ನನಗೆ ಹೇಳುವುದಕ್ಕೆ ಏನೂ ಇರಲಿಲ್ಲ. ಏನಾದರೂ ಹೇಳಿದರೆ ಅವರಿಗೆ ಮತ್ತಷ್ಟು ಸಿಟ್ಟು ಬರುತ್ತಿತ್ತು. ಹೀಗಾಗಿ ನಾನು ಮಾತನಾಡಲಿಲ್ಲ. ಆ ವರ್ಷವನ್ನು ಮುಗಿಸಿ ನನ್ನ ಎರಡು ಜೊತೆ ಬಟ್ಟೆಗಳನ್ನು ಕಟ್ಟಿಕೊಂಡು ಊರಿಗೆ ಹೊರಟೆ. ಚಿಕ್ಕಪ್ಪ ೧೦ ರೂಪಾಗಳನ್ನು ನೀಡಿ ಕಳಿಸಿಕೊಟ್ಟರು. ನಾನು ಮಹೇಶ ಬಸ್ ಹತ್ತಿ ಮುಂಡಿಗೆ ಹಳ್ಳದಲ್ಲಿ ಬಂದಿಳಿದೆ. ಇಲ್ಲಿಗೆ ಪುರಪ್ಪೆಮನೆ ಶಾಲೆಯ ಋಣ ಮುಗಿದಿತ್ತು.


    ಆರನೆಯ ತರಗತಿಗೆ ನನ್ನನ್ನು ಸಿರಿವಂತೆ ಶಾಲೆಗೆ ಸೇರಿಸಿದರು. ಸಿರಿವಂತೆ ಒಂದು ಸಣ್ಣ ಹಳ್ಳಿ. ನಾನು ಓದುವ ಕಾಲಕ್ಕೆ ಎರಡು ಜೀನ್ಸಿ ಅಂಗಡಿ, ಎರಡು ಚಹದ ಹೋಟೆಲ್, ಲಕ್ಷ್ಮಣ ಮತ್ತು ವಾಸುವಿನ ಕೌರದ ಅಂಗಡಿ, ಅಂಚೆಕಛೇರಿ, ಹಿಟ್ಟಿನಗಿರಣಿ, ಹತ್ತರಿಂದ ಹದಿನೈದು ಮಡಿವಾಳರ ಮನೆಗಳಿದ್ದವು. ಎರಡು ಕೊಂಕಣಿ ಮನೆಗಳಿದ್ದವು. ಬೂಬಮ್ಮನ ಮನೆ ಹೆದ್ದಾರಿಯ ಬುಡದಲ್ಲಿ ಈ ಎಲ್ಲ ಮನೆಗಳಿಗಿಂತ ದೂರದಲ್ಲಿ ಪ್ರತ್ಯೇಕವಾಗಿತ್ತು. ಬೂಬಮ್ಮನ ಮನೆಗಿಂತ ಸ್ವಲ್ಪ ಮುಂದೆ ರಸ್ತೆಯ ಇನ್ನೊಂದು ಭಾಗದಲ್ಲಿ ಒಂದು ಐನೋರ ಮನೆತ್ತು. ಬೂಬಮ್ಮ ಸೂಲಗಿತ್ತಿಯ ಕೆಲಸವನ್ನು ಹಳ್ಳಿಯ ಕಡೆಗೆ ಮಾಡುತ್ತಿದ್ದಳು. ಹಾಗೆಯೇ ಉಳುಕು ತೆಗೆಯುವುದು ಮುಂತಾದ ಮಾಂತ್ರಿಕ ವಿದ್ಯೆಯ ಕೆಲಸಗಳನ್ನು ಮಾಡುತ್ತಿದ್ದಳು. ಐನೋರು ವೀರಶೈವರ ಮೆಗಳಲ್ಲಿ ಪೌರೋಹಿತ್ಯವನ್ನು ಮಾಡಿ ಜೀವನ ನಡೆಸುತ್ತಿದ್ದರು. ಸ್ವಲ್ಪ ಸಮಯದ ನಂತರ ಸಾಗರದ ಪಂಡಿತರ ಔಷದಾಲಯ ಸಿರಿವಂತೆಗೆ ಬಂತು. ಕರೆದಲ್ಲಿಗೆ ಹೋಗಿ ಔಷದಿ ಕೊಟ್ಟುಬರುತ್ತಿದ್ದರು. ಹಳ್ಳಿಗಳಿಗೆ ಹೋಗುವುದಕ್ಕೆ ವೈದ್ಯರ ವಾಹನವೆಂದರೆ ಒಂದು ಬಾಡಿಗೆ ಸೈಕಲ್ಲು. ಸುಮಾರು ೮-೧೦ ಕಿಲೋಮೀಟರ್‌ವರೆಗೂ ಅವರೂ ಬಿಸಿಲು ಮಳೆ ಎನ್ನದೆ ಸೈಕಲ್ಲಿನಲ್ಲಿ ಹೋಗಿ ಬರುತ್ತಿದ್ದರು. ನಿಜಕ್ಕೂ ಸುತ್ತಲಿನ ಸುತ್ತಮುತ್ತಲಿನ ಊರವರಿಗೆ ಇವರು ಧನ್ವಂತರಿಯಾದರು.


    ಮೇ ತಿಂಗಳ ಕೊನೆಯ ವಾರದಲ್ಲಿ ನನ್ನನ್ನು ಈ ಶಾಲೆಗೆ ಸೇರಿಸಿದರು. ಮನೆಯಿದ ಶಾಲೆಗೆ ನಡೆದುಕೊಂಡು ಹೋಗಬೇಕಿತ್ತು. ಸುಮಾರು ಎರಡು ಮೈಲಿ ದೂರ. ಒಂದಷ್ಟು ದೂರ ಮಣ್ಣಿನ ರಸ್ತೆಯಲ್ಲಿ ನಡೆದರೆ, ಅನಂತರ ಡಾಮರು ಮಾರ್ಗ ಸಿಗುತ್ತಿತ್ತು. ಸಾಗರದಿಂದ ಜೋಗಕ್ಕೆ ಹೋಗುವ ರಸ್ತೆದು. ಉತ್ತರ ಕನ್ನಡದ ಶಿರಸಿಗೂ ಇದೇ ರಸ್ತೆಯ ಮೂಲಕ ಪ್ರಯಾಣ ಮಾಡಬೇಕಿತ್ತು. ಹೀಗಾಗಿ ನಿಗದಿತ ಸಮಯದಲ್ಲಿ ಒಂದಷ್ಟು ಬಸ್ಸುಗಳು, ಆಗಾಗ ಲಾರಿಗಳು ಓಡಾಡುತ್ತಿದ್ದವು. ಕಾರುಗಳ ಸಂಖ್ಯೆ ತುಂಬಾ ಕಡಿಮೆ. ಇನ್ನು ದ್ವಿಚಕ್ರ ವಾಹನಗಳೆಂದರೆ ಸೈಕಲ್ಲುಗಳು. ಅಪರೂಪಕ್ಕೆ ರಾಜದೂತ ಬೈಕುಗಳು. ಶಾಲೆಗೆ ಹೋದ ಮೊದಲ ದಿನ ಇದೇ ಶಾಲೆಗೆ ಹೋಗುತ್ತಿದ್ದ ನಮ್ಮೂರಿನ ಇತರ ಮಕ್ಕಳ ಪರಿಚಯವಾತು. ಅನಂತರದ ದಿನಗಳಲ್ಲಿ ನಾವೆಲ್ಲ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದವು. ಹಿಂದುರುಗಿ ಬರುವಾಗಲೂ ಒಟ್ಟಿಗೆ ಬರುತ್ತಿದ್ದವು.


    ಮುಂಡಿಗೆ ಹಳ್ಳದ ಸೇತುವೆಯ ಸಮೀಪ ನಮ್ಮ ತಂಡ ಎಂಟೂವರೆಯ ಹೊತ್ತಿಗೆ ಜೊತೆಯಾಗುತ್ತಿತ್ತು. ಶಿರೂರು ಕೊಡ್ಲಗದ್ದೆ ಮನೆಯ ನಟರಾಜ ಮತ್ತು ರತ್ನಮಾಲ, ಇವರ ಮನೆಯಲ್ಲಿ ಓದಲು ಇದ್ದ ಅಮೃತವಳ್ಳಿ, ನಮ್ಮ ಮನೆಯ ಸಮೀಪದಲ್ಲಿದ್ದ ಗಾಲಿಮನೆ ಶ್ರೀಧರ ಹೀಗೆ ನಾಲ್ಕು ಮಂದಿಯ ತಂಡ ನಮ್ಮದು. ಇದರಲ್ಲಿ ನಾವು ಹುಡುಗರು ಮೂರೂ ಜನ ಆರನೇ ತರಗತಿಯಲ್ಲಿದ್ದೆವು. ರತ್ನಮಾಲ ಮತ್ತು ಅಮೃತವಳ್ಳಿ ಏಳನೇ ತರಗತಿಯಲ್ಲಿದ್ದರು. ಮಧ್ಯಾಹ್ನಕ್ಕೆ ನಾವೆಲ್ಲರೂ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆವು. ಮನೆಯಲ್ಲಿ ಮುಂಜಾನೆ ಮಾಡಿದ ತಿಂಡಿಯೇ ಮಧ್ಯಾಹ್ನಕ್ಕೂ ಮುಂದುವರಿಯುತ್ತಿತ್ತು. ನಾವು ಶಾಲೆಯಲ್ಲಿ ತಿಂಡಿ ತಿನ್ನುತ್ತಿರಲಿಲ್ಲ. ಶಾಲೆಂದ ಒಂದು ಫರ್ಲಾಂಗು ದೂರದಲ್ಲಿ ಸಾಕಷ್ಟು ಹಳೆಯದಾದ ಶ್ರೀ ತ್ರಿಪುರಾಂತಕೇಶ್ವರ ದೇವಾಲಯವಿತ್ತು. ಇದರ ಕೈಸಾಲೆಯಲ್ಲಿ ಒಂದು ಮರದ ಕಪಾಟಿತ್ತು. ಎಲ್ಲರೂ ಅದರಲ್ಲಿ ತಿಂಡಿಯನ್ನು ಇಟ್ಟು ಹೋಗುತ್ತಿದ್ದರು. ಮಧ್ಯಾಹ್ನ ಎಲ್ಲರೂ ಬಂದು ತಿಂಡಿ ತಿಂದು ಕೈತೊಳೆದುಕೊಂಡು ಹೋಗುತ್ತಿದ್ದವು. ಕೆಲವು ದಿನ ನಮ್ಮ ತಿಂಡಿ ಕಾಣೆಯಾಗುತ್ತಿತ್ತು. ಯಾರೋ ಆಸುಪಾಸಿನಲ್ಲಿದ್ದವರು ನಮ್ಮ ತಿಂಡಿಯನ್ನು ತಿಂದು ಬಿಡುತ್ತಿದ್ದರು. ಆಗೆಲ್ಲ ನಾವು ತಂದ ತಿಂಡಿಯನ್ನು ಹಂಚಿಕೊಂಡು ತಿನ್ನುತ್ತಿದ್ದವು.

    Read more...

    Saturday, July 23, 2011

    0

    ಮೂರು . . . . . . ನಾಲ್ಕು . . . . .

  • Saturday, July 23, 2011
  • ಡಾ.ಶ್ರೀಧರ ಎಚ್.ಜಿ.

  • ದೊಡ್ಡಮ್ಮ ದಂಪತಿಗಳ ಭಾವ ಚಿತ್ರವಿದು
    ದೊಡ್ಡಮ್ಮನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಯಿತು ಕಳೆದಂತೆ ಅಲ್ಲಿಯ ಕೆಲಸಗಳು ಮಾಮೂಲಿಯಾದವು. ಮುಂಜಾನೆ ಸ್ನಾನಮಾಡಿ ದೇವರ ಪೂಜೆ ಮಾಡಿ ಕೆಲವೊಮ್ಮೆ ಶಾಲೆಗೆ ಹೋಗಬೇಕಿತ್ತು. ಬೇಸಾಯದ ದಿನಗಳಲ್ಲಿ ಗದ್ದೆಗೆ ಹೋಗಬೇಕಿತ್ತು. ಗದ್ದೆ ನಾಟಿಯ ಸಂದರ್ಭದಲ್ಲಿ ರಜೆಯಿದ್ದರೆ ಕೆಲಸದವರ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೆ. ಕಿತ್ತ ನಾಟಿಯ ಸಸಿಗಳನ್ನು ನೆಡುವ ಇಲ್ಲವೇ ಅದರ ಕಟ್ಟುಗಳನ್ನು ಅಲ್ಲಲ್ಲಿ ಇರಿಸುವ ಕೆಲಸಗಳನ್ನು ಮಾಡುವುದು ನಮಗೆ ಒಂದು ಆಟವಾಗಿತ್ತು. ಮಳೆಯಲ್ಲಿ ನೆನೆಯುವುದು ಒಂದು ಸಂಗತಿಯಾಗಿರಲಿಲ್ಲ. ತೋಟಕ್ಕೆ ಕೊಳೆ ಔಷಧಿ ಹೊಡೆಯಲು ಬಂದರೆ ಅವರಿಗೆ ನೆರವು ನೀಡುವುದು ನನಗೆ ಅತ್ಯಂತ ಸಂತೋಷದ ಸಂಗತಿಯಾಗಿತ್ತು.

    ಶಾಲೆಗೆ ಹೋದರೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದೆವು. ಆಗ ನಮ್ಮದು ಬಸ್ಸಿನ ವೇಗ. ನಾವೆಲ್ಲ ಒಂದೊಂದು ಬಸ್ಸಿನ ಹೆಸರನ್ನಿಟ್ಟುಕೊಂಡು ಓಡುತ್ತಿದ್ದೆವು. ಶಾಲೆಂದ ಮನೆಗೆ ಬರಲು ಒಟ್ಟು ಮೂರು ದಾರಿಗಳಿದ್ದವು. ಶಾಲೆಂದ ಹೊರಟು ಟಾರು ರಸ್ತೆಯಲ್ಲಿ ಒಂದು ಫರ್ಲಾಂಗಿನಷ್ಟು ಬಂದು ಬಲಕ್ಕೆ ತಿರುಗಿ ಮಣ್ಣಿನ ರಸ್ತೆಯಲ್ಲಿ ಇಳಿದರೆ ವಾಮನರಾಯರ ಮನೆ ಸಿಗುತ್ತಿತ್ತು. ಇವರ ಮನೆಯ ಬುಡದಲ್ಲಿ ಮತ್ತೆ ಎಡಕ್ಕೆ ತಿರುಗಿ ಸ್ವಲ್ಪ ದೂರ ಬಂದರೆ ಒಂದೆರಡು ಹಸಲರ ಮನೆಗಳು ಸಿಗುತ್ತಿದ್ದವು. ಅವರ ಮನೆಯ ಮುಂದೆ ಯಾವಾಗಲೂ ಕೋಳಿಗಳು "ಸರ್ಜಿಸಿದ ಮಲಮೂತ್ರಗಳು ಇರುತ್ತಿದ್ದವು. ನಮ್ಮ ಕಾಲಿಗೆ ಚಪ್ಪಲಿ ಇರಲಿಲ್ಲ. ಹಾಗಾಗಿ ನಾವು ಈ ದಾರಿಯಲ್ಲಿ ಬಂದರೆ ಕೋಳಿಯ ಮಲವನ್ನು ಮೆಟ್ಟಿಕೊಂಡೇ ಮನೆಗೆ ಬರಬೇಕಿತ್ತು. ಆದ್ದರಿಂದ ನಾವು ಈ ದಾರಿಯನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ.

    ಇನ್ನು ಎರಡನೆಯದು ಸ್ವಲ್ಪ ಕಾಡಿನ ದಾರಿ. ಟಾರು ರಸ್ತೆಯಲ್ಲಿ ಇನ್ನಷ್ಟು ಮುಂದೆ ಬಂದು ಬಲಕ್ಕೆ ತಿರುಗಿದರೆ ಕಾಡಿನ ಮೂಲಕ ಸಾಗುವ ಕಾಲುದಾರಿ ಸಿಗುತ್ತಿತ್ತು. ಇದು ಅಂಕುಡೊಂಕಾದ ಕಾಲುದಾರಿ. ಅಕ್ಕಪಕ್ಕದಲ್ಲಿ ಸಾಕಷ್ಟು ಮುಳ್ಳಿನ ಗಿಡಗಳು ಇರುತ್ತಿದ್ದವು. ಮರದ ಬೇರುಗಳು ಕಾಲಿಗೆ ಅಡ್ಡ ಬರುತ್ತಿದ್ದವು. ಇರುವುದರಲ್ಲಿ ಇದು ಹತ್ತಿರದ ದಾರಿಯಾಗಿತ್ತು. ಆದರೆ ಈ ದಾರಿಯಲ್ಲಿ ಒಬ್ಬರೇ ಬರಲು ನಮಗೆ ಹೆದರಿಕೆಯಾಗುತ್ತಿತ್ತು. ಕಾಡಿನ ದಾರಿಯಲ್ಲಿ ಕೆಲವೊಮ್ಮೆ ನರಿಯೋ ಹಂದಿಯೋ ಸಿಗುವುದಿತ್ತು.
    ಮೂರನೆಯದು ಟಾರು ರಸ್ತೆಯಲ್ಲಿ ನೇರವಾಗಿ ಒಂದು ಕಿಲೋಮಿಟರಿನಷ್ಟು ಬಂದು ಗಡಿಕಟ್ಟೆಗಿಂತ ಸ್ವಲ್ಪ ಮೊದಲು ಸಿಗುವ ಅರಳಿ ಮರದ ಎದುರು ಬಲಕ್ಕೆ ತಿರುಗಿದರೆ ನೇರವಾಗಿ ದೊಡ್ಡಮ್ಮನ ಮನೆಗೆ ಬಂದು ತಲುಪುತ್ತಿದ್ದೆವು. ಆದರೆ ಇದು ಅತ್ಯಂತ ಬಳಸು ದಾರಿಯಾಗಿತ್ತು. ಸಂಜೆ ಶಾಲೆ ಬಿಟ್ಟ ನಂತರ ಗೆಳೆಯರೊಂದಿಗೆ ಮಾತನಾಡಿಕೊಳ್ಳುತ್ತ ಈ ದಾರಿಯಲ್ಲಿ ಬರುತ್ತಿದ್ದವು.

    ದೊಡ್ಡಮ್ಮನ ಮಾರ್ಗದರ್ಶನದಲ್ಲಿ ನಾನು ಅಡಿಗೆಯ ಕೆಲಸವನ್ನು ಅಚ್ಚುಕಟ್ಟಾಗಿ ಕಲಿತೆ. ತಿಂಗಳಿಗೆ ನಾಲ್ಕುದಿನ ನನ್ನ ಪಾಲಿಗೆ ಅಡಿಗೆಯ ಕೆಲಸ ಬರುತ್ತಿತ್ತು. ಇದು ನನಗೆ ಮುಂದಿನ ಬದುಕಿನಲ್ಲಿ ಸಾಕಷ್ಟು ಪ್ರಯೋಜನಕ್ಕೆ ಬಂತು. ಅನ್ನ, ಸಾರು, ಹುಳಿ(ಸಾಂಬಾರು), ಪಲ್ಯ, ತಂಬಳಿ, ಪಾಯಸ, ಚಕ್ಕುಲಿ, ಕಾಕಡುಬು, ಪಂಚಕಜ್ಜಾಯ, ಹೀಗೆ ಹಲವು ತಿಂಡಿ ತಿನಿಸುಗಳನ್ನು ಮಾಡುವ ವಿಧಾನವನ್ನು ಕಲಿತುಕೊಂಡೆ. ದೊಡ್ಡಮ್ಮನ ಮನೆಯಲ್ಲಿ ಚೌತಿಯ ಹಬ್ಬಕ್ಕೆ ಗಣಪತಿಯನ್ನು ತರುತ್ತಿದ್ದರು. ಆ ಸಂದರ್ಭದಲ್ಲಿ ದೊಡ್ಡಮ್ಮನಿಗೆ ತಿಂಗಳ ರಜೆ ಏನಾದರೂ ಬಂದರೆ ಅಡಿಗೆ ಮನೆಯ ಕೆಲಸ ನನ್ನ ತಲೆಯ ಮೇಲೆ ಬೀಳುತ್ತಿತ್ತು.

    ದೊಡ್ಡಮ್ಮನ ಹಿರಿಯ ಮಗ ಮಹಾಬಲೇಶ್ವರ (ಈತನನ್ನು ಮಾಬಲಗಿರಿ ಎಂದೇ ಎಲ್ಲರೂ ಕರೆಯುವುದು) ನಮಗಿಂತ ಸಾಕಷ್ಟು ದೊಡ್ಡವನಾಗಿದ್ದ. ಹೀಗಾಗಿ ಆತನೊಂದಿಗೆ ನನಗೆ ಅಷ್ಟಾಗಿ ಸಲಿಗೆ ಇರಲಿಲ್ಲ. ಎರಡನೆಯವನು ತಿಮ್ಮಣ್ಣ ಭಟ್ಟ. ಈತ ನನಗಿಂತ ತುಸು ದೊಡ್ಡವನಾಗಿದ್ದ. ಓದುವಾಗಲೂ ನನಗಿಂತ ಒಂದೆರಡು ತರಗತಿ ಮೇಲಿನದರಲ್ಲಿ ಕಲಿಯುತ್ತಿದ್ದ. ಆದರೆ ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಲೆಕ್ಕಮಾಡಿ ಮಾತನಾಡುವ ಜಾಯಮಾನ. ಮೂರನೆಯವನು ಶ್ರೀಕಾಂತ. ನನಗಿಂತ ವಯಸ್ಸಿನಲ್ಲಿ ತುಸು ಕಿರಿಯವನು. ನಮ್ಮಿಬ್ಬರ ಮನೋಧರ್ಮ ಬಹುತೇಕ ಸರಿಹೊಂದುತ್ತಿತ್ತು. ಹೀಗಾಗಿ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು. ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದೆವು. ದೊಡ್ಡಮ್ಮನಿಗೆ ಮೂವರು ಗಂಡುಮಕ್ಕಳ ನಂತರ ಹುಟ್ಟಿದವಳು ಮಮತ. ಈಕೆಯನ್ನು ಅತ್ಯಂತ ಮುದ್ದಿನಿಂದ ಬೆಳೆಸಿದ್ದರು. ದೊಡ್ಡಪ್ಪನಿಗಂತೂ ಮಗಳೆಂದರೆ ಪಂಚಪ್ರಾಣ. ಆಕೆಯ ಕೈಯ್ಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ.

    ಕಾಲ ನಿಲ್ಲುವುದಿಲ್ಲ. ನಾನು ಮೂರನೆಯ ತರಗತಿಯನ್ನು ದಾಟಿ ನಾಲ್ಕನೆಯ ತರಗತಿಗೆ ತಲುಪಿದ್ದೆ. ದೊಡ್ಡಮ್ಮನ ಮನಗೆ ನಾನು ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದೆ. ಆದರೆ ದೊಡ್ಡಮ್ಮನ ಮನೆಗೆ ನಾನು ಹೊರಗಿನ ವ್ಯಕ್ತಿಯಾಗಿದ್ದೆ. ಹೀಗಾಗಿ ಮಾಬಲಗಿರಿ ಮತ್ತು ತಿಮ್ಮಣ್ಣರ ಸಿಟ್ಟು ನನ್ನ ಮೇಲೆ ತಿರುಗುತ್ತಿತ್ತು. ಆಗೆಲ್ಲ ದೊಡ್ಡಮ್ಮ ತುಂಬಾ ಬೇಜಾರು ಮಾಡಿಕೊಳ್ಳುತ್ತಿದ್ದರು. ಈ ಪ್ರವೃತ್ತಿ ತುಸು ಅತಿರೇಕಕ್ಕೆ ಹೋಗುವ ಹೊತ್ತಿಗೆ ನಾನು ನಾಲ್ಕನೆಯ ತರಗತಿಯಲ್ಲಿ ಉತ್ತೀರ್ಣನಾಗಿದ್ದೆ. ಮುಂದಿನ ಓದಿಗೆ ಊರಿಗೆ ಹಿಂದಿರುರುಗುವುದೆಂದು ತೀರ್ಮಾನವಾಗಿತ್ತು. ಅಷ್ಟರಲ್ಲಿ ಅನಿರೀಕ್ಷಿತವಾದ ತಿರುವು ಸಂಭವಿಸಿತು.

    ದೊಡ್ಡಪ್ಪನ ಮನೆಯ ಪಕ್ಕದಲ್ಲಿ ಅವರ ತಮ್ಮ ಚಂದ್ರಶೇಖರ ಭಟ್ಟರು ಹೊಸದಾಗಿ ಮನೆ ಕಟ್ಟಿ ವಾಸ ಮಾಡಲು ತೊಡಗಿದ್ದರು. ಸ್ವಂತ ತಮ್ಮನಾದರೂ ಇಬ್ಬರಲ್ಲಿ ಸಂಬಂಧ ಅಷ್ಟಕ್ಕಷ್ಟೆ. ಹಾಗಂತ ವೈರತ್ವವೇನೂ ಇರಲಿಲ್ಲ. ಮಾತನಾಡುತ್ತಿದ್ದರು. ವಿಶೇಷ ಕಾರ್ಯಕ್ರಮವಾದರೆ ಹೋಗಿಬರುವ ಕ್ರಮತ್ತು. ಇಬ್ಬರ ಮನೆಗೆ ಇರುವುದು ಒಂದು ತಂತಿ ಬೇಲಿಯ ಗಡಿ ಮಾತ್ರ. ದೊಡ್ಡಪ್ಪನಿಗೆ ತನ್ನ ತಮ್ಮನ ಬಗೆಗೆ ಯಾವಾಗಲೂ ಒಂದು ಬಗೆಯ ವಿಚಿತ್ರ ಸಂಶಯ. ಆ ಸಂಶಯಕ್ಕೆ ನಿರ್ದಿಷ್ಟ ಕಾರಣವಿರಲಿಲ್ಲ. ನಾನು ಯಾವಾಗಲಾದರೊಮ್ಮೆ ಅವರ ಮನೆಗೆ ಹೋಗಿಬರುತ್ತಿದ್ದೆ. ಸಣ್ಣಪುಟ್ಟ ಕೆಲಸಗಳಲ್ಲಿ ಅವರಿಗೆ ನೆರವಾಗುತ್ತಿದ್ದೆ. ದೊಡ್ಡಪ್ಪನ ಮಕ್ಕಳು ರೇಗಿದಾಗ ತಂತಿ ಬೇಲಿಯ ಸಮೀಪ ನಿಂತು ಅಳುತ್ತಿದ್ದೆ. ಇದು ಚಂದ್ರಭಟ್ಟರಿಗೆ ಗೊತ್ತಾಗಿತ್ತು. ಈ ಹೊತ್ತಿಗೆ ಅವರಿಗೆ ಮದುವೆಯಾಗಿ ಸುಮಾರು ಎರಡು ವರ್ಷದ ಮಗಳಿದ್ದಳು. ಮನೆಯಲ್ಲಿ ಒಂದು ಜೊತೆ ಎತ್ತು, ನಾಲ್ಕಾರು ಎಮ್ಮೆ, ಒಂದೆರಡು ಕರೆಯುವ ಹಸುಗಳಿದ್ದವು. ನಾನು ಮನೆಗೆ ಹಿಂದಿರುಗುವ ವಿಷಯವನ್ನು ಅವರ ಮನೆಯಲ್ಲಿ ಒಮ್ಮೆ ಹೇಳಿದ್ದೆ. ಇದಾಗಿ ಸ್ವಲ್ಪ ದಿನಕ್ಕೆ ಅವರು "ಮುಂದಿನ ವರ್ಷ ನೀನು ನಮ್ಮ ಮನೆಂದ ಶಾಲೆಗೆ ಹೋಗು" ಎಂದು ಹೇಳಿದರು. ಅವರಲ್ಲಿ ನನಗೆ ಸಾಕಷ್ಟು ಸಲಿಗೆಯೂ ಈ ಹೊತ್ತಿಗೆ ಬೆಳೆದಿತ್ತು. ದೊಡ್ಡಮ್ಮನಿಗೂ ಇದು ಸರಿ ಎಂದು ಕಂಡಿರಬೇಕು. ಅವರೂ ಇದನ್ನು ಅನುಮೋದಿಸಿದರು. ನಾಲ್ಕನೆಯ ತರಗತಿ ಮುಗಿಸಿ ಹೊರಡುವಾಗ ನನ್ನ ಬಟ್ಟೆಗಳು ತಂತಿ ಬೇಲಿಯನ್ನು ದಾಟಿ ಪಕ್ಕದ ಮನೆ ಸೇರಿದವು. ರಜೆ ಮುಗಿಸಿ ಹಿಂದಿರುಗಿದ ನಾನು ಚಂದ್ರಭಟ್ಟರ ಮನೆಯನ್ನು ಸೇರಿದೆ. ಐದನೆಯ ತರಗತಿಗೆ ಅವರ ಮನೆಂದ ಶಾಲೆಗೆ ಹೋಗತೊಡಗಿದೆ.
    ಮುಂದುವರಿಯುವುದು. . . .
    Read more...

    Thursday, June 2, 2011

    1

    ನೆನಪಿನಂಗಳ - ದೊಡ್ಡಮ್ಮನ ಮನೆಯಿಂದ ಶಾಲೆಗೆ ಪಯಣ

  • Thursday, June 2, 2011
  • ಡಾ.ಶ್ರೀಧರ ಎಚ್.ಜಿ.
  • ನನ್ನ ಅಮ್ಮನ ಒಬ್ಬಳು ಅಕ್ಕನ ಹೆಸರು ಗೌರಿ. ಇವರನ್ನು ಹೆಗ್ಗೋಡಿನ ಸಮೀಪದ ಹೊನ್ನೇಸರದ ತಿಮ್ಮಣ್ಣ ಭಟ್ಟರ ಮಗ ಸುಬ್ಬಾಭಟ್ಟರಿಗೆ ವಿವಾಹ ಮಾಡಿಕೊಟ್ಟಿದ್ದರು. ಇವರು ಸ್ವಲ್ಪ ಸಮಯದ ನಂತರ ಗಡಿಕಟ್ಟೆಯಿಂದ ತುಸು ಮುಂದೆ ಬರುವ ಹಿರೇಮನೆ ಎಂಬಲ್ಲಿ ವಾಸಮಾಡಲು ತೊಡಗಿದರು. ನನ್ನ ಹೊಳೆದಾಟುವ ಸಾಹಸವನ್ನು ಅರಿತ ಈ ದೊಡ್ಡಮ್ಮ ತಮ್ಮ ಮನೆಯಿಂದ ಶಾಲೆಗೆ ಹೋಗಲು ಸೂಚಿಸಿದರು. ನನ್ನ ಮನೆಯಲ್ಲಿಯೂ ಇದಕ್ಕೆ ಒಪ್ಪಿಗೆ ಸಿಕ್ಕಿತು. ನನ್ನನ್ನು ಮೂರನೆಯ ತರಗತಿಗೆ ಪುರಪ್ಪೆಮನೆಯಲ್ಲಿದ್ದ ಸರ್ಕಾರಿ ಶಾಲೆಗೆ ಸೇರಿಸಿದರು

    ಸುಬ್ಬಾಭಟ್ಟರು ತೀರಾ ಶ್ರೀಮಂತರಲ್ಲದಿದ್ದರೂ ಬಡವರಾಗಿರಲಿಲ್ಲ. ಒಂದಷ್ಟು ಅಡಿಕೆ ತೋಟವಿತ್ತು. ಭತ್ತಬೆಳೆಯುವ ಗದ್ದೆಯಿತ್ತು. ಆರ್ಥಿಕವಾಗಿ ತಮ್ಮ ಸಂಸಾರದ ಖರ್ಚನ್ನು ಸರಿದೂಗಿಸಿಕೊಂಡು ಹೋಗುವಷ್ಟು ಸಂಪತ್ತು ಅವರಿಗಿತ್ತು. ಗೌರಿ ದೊಡ್ಡಮ್ಮನಿಗೆ ಮೂವರು ಗಂಡುಮಕ್ಕಳು. ಒಬ್ಬಳು ಮಗಳು. ಮಹಾಬಲೇಶ್ವರ ಭಟ್, ತಿಮ್ಮಣ್ಣ ಭಟ್, ಶ್ರೀಕಾಂತ ಮತ್ತು ಮಮತ ಎಂದು ಅವರ ಮಕ್ಕಳ ಹೆಸರುಗಳು. ನಾನು ಹೋಗುತ್ತಿದ್ದ ಶಾಲೆಗೆ ಇವರೂ ಹೋಗುತ್ತಿದ್ದರು. ನನಗೆ ನೆನಪಿರುವಂತೆ ಮಹಾಬಲೇಶ್ವರ ಏಳನೆಯ ತರಗತಿಗೆ, ತಿಮ್ಮಣ್ಣ ಐದನೆಯ ತರಗತಿಗೆ ಹೋಗುತ್ತಿದ್ದರು. ಶ್ರೀಕಾಂತ ಎರಡನೆಯ ತರಗತಿ. ಮಮತ ಬಹುತೇಕ ಒಂದನೆ ತರಗತಿಯಲ್ಲಿದ್ದಳೆಂದು ತೋರುತ್ತದೆ. ಪುರಪ್ಪೆಮನೆ ಶಾಲೆ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು. ತುಸು ಕಾಡಿನ ದಾರಿಯಲ್ಲಿ ಹೋಗಬೇಕಿತ್ತು. ಹೀಗಾಗಿ ಶಾಲೆಗೆ ನಾವೆಲ್ಲರೂ ಒಟ್ಟಿಗೆ ಹೋಗುತ್ತಿದ್ದೆವು.

    ಗೌರಿ ದೊಡ್ಡಮ್ಮನದು ತುಂಬಾ ಒಳ್ಳೆಯ ಮನಸ್ಸು. ನನ್ನನ್ನು ಅವರು ತಮ್ಮ ಮಗನಂತೆಯೇ ನೋಡಿಕೊಂಡಿದ್ದರು. ದೊಡ್ಡಪ್ಪ ತುಂಬಾ ಬುದ್ದಿವಂತರಲ್ಲ. ಆದರೆ ಅವರಿಗೆ ಬೇಕಾದಷ್ಟು ವ್ಯವಹಾರ ಜ್ಞಾನವಿತ್ತು. ಸಂಸಾರವನ್ನು ತಾವೇ ನಿಭಾಯಿಸಿಕೊಂಡು ಹೋಗುತ್ತಿದ್ದರು. ಅವರು ತಪ್ಪು ಮಾಡಿದಾಗ ಅಜ್ಜ ತಿಮ್ಮಣ್ಣ ಭಟ್ಟರು ’ಭೂಂಭಾರ್ಕ’ ಎಂಬ ಪದವನ್ನು ಬಳಸಿ ಬೈಯ್ಯುತ್ತಿದ್ದರು. ನಮಗೆ ಅಜ್ಜನ ಬಾಯಲ್ಲಿ ಈ ಶಬ್ದವನ್ನು ಕೇಳುವುದೆಂದರೆ ಏನೋ ಒಂದು ರೀತಿಯ ಮೋಜು.
    ಮುಂಜಾನೆ ಬೇಗ ಎದ್ದು ಬಚ್ಚಲಿಗೆ ಬೆಂಕಿ ಹಾಕುವುದು, ಕೊಟ್ಟಿಗೆ ಸಗಣಿ ತೆಗೆಯುವುದು, ದೇವರಿಗೆ ಹೂ ಕೊಯ್ಯುವುದು, ದೇವರಪೂಜೆ ಮಾಡುವುದು, ಅಡಿಕೆ ಕೊಯ್ಯುವ ಸಂದರ್ಭದಲ್ಲಿ ಅಡಿಕೆ ಹೆಕ್ಕುವುದು, ಸುಲಿದ ಹಸಿಅಡಿಕೆಯಲ್ಲಿರುವ ಗೋಟನ್ನು ಆರಿಸುವುದು, ಅನಂತರ ಇದನ್ನು ಅಜ್ಜ ತಿಮ್ಮಣ್ಣ ಭಟ್ಟರ ನೇತೃತ್ವದಲ್ಲಿ ಅದನ್ನು ಚಾಕುವಿನಿಂದ ಕೆತ್ತುವುದು, ಮುಂಜಾನೆ ಬೇಯಿಸಿದ ಅಡಿಕೆಯನ್ನು ತಟ್ಟಿಯಲ್ಲಿ ಹರಗುವುದು, ಸಮಯ ಬಂದರೆ ದೊಡ್ಡಮ್ಮನಿಗೆ ಅಡಿಗೆಗೆ ಸಹಾಯ ಮಾಡುವುದು, ಹಸು ಅಥವಾ ಎಮ್ಮೆ ಕರೆಯುವುದು ಹೀಗೆ ಕೆಲಸ ಮಾಡಬೇಕಿತ್ತು. ಮನೆಯಿಂದ ದೂರವಿದ್ದು ಗೊತ್ತಿಲ್ಲದ ನಾನು ಆರಂಭದಲ್ಲಿ ಇಲ್ಲಿಗೆ ಹೊಂದಿಕೊಳ್ಳುವುದಕ್ಕೆ ತುಂಬಾ ಕಷ್ಟಪಟ್ಟೆ.

    ಆ ಕಾಲಕ್ಕೆ ನಮ್ಮೂರಿನಿಂದ ದೊಡ್ಡಮ್ಮನ ಮನೆಗೆ ನೇರವಾಗಿ ಹೋಗುವುದಕ್ಕೆ ಗಜಾನನ ಕಂಪನಿಯ ಮಹೇಶ ಎಂಬ ಒಂದು ಬಸ್ಸಿತ್ತು. ಇದನ್ನು ಹತ್ತಿಕೊಂಡು ಮುಂಡಿಗೆ ಹಳ್ಳಕ್ಕೆ ಹೋಗಿಬಿಡಲೇ ಎಂಬಷ್ಟು ಮನಸ್ಸು ಹಪಹಪಿಗೆ ಒಳಗಾದ ದಿನಗಳೂ ಇದ್ದವು. ಒಮ್ಮೆ ಪುರಪ್ಪೆಮನೆ ಅಂಚೆಕಛೇರಿಯಲ್ಲಿ ಒಂದು ಮೂರು ಪೈಸೆಗೆ ದೊರೆಯುತ್ತಿದ್ದ ಒಂದು ಅಂಚೆಕಾರ್ಡನ್ನು ಖರೀದಿಸಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಅಮ್ಮನಿಗೆ ಒಂದು ಪತ್ರವನ್ನು ಬರೆದಿದ್ದೆ. ಅಂಚೆಯ ಡಬ್ಬಕ್ಕೆ ಹಾಕಿದರೆ ಮನೆಗೆ ತಲುಪಲು ತಡವಾಗುತ್ತದೆ ಎಂದು ಯೋಚಿಸಿ ಮಹೇಶ ಬಸ್ಸು ಬರುವುದನ್ನು ಕಾದು ಅದರ ಡ್ರೈವರನಲ್ಲಿ ಕಾಗದವನ್ನು ಕೊಟ್ಟು, ಸಿರಿವಂತೆ ಅಂಚೆಕಛೇರಿಯ ಡಬ್ಬಕ್ಕೆ ಹಾಕುವಂತೆ ವಿನಂತಿ ಮಾಡಿದ್ದೆ. ಆತ ಅದನ್ನು ಹಾಕಿದನೋ ಇಲ್ಲವೋ ಗೊತ್ತಿಲ್ಲ. ಮನೆಯಿಂದ ಯಾರೂ ಬರಲೂ ಇಲ್ಲ. ಅಲ್ಲಿಗೆ ಮನೆಗೆ ಹಿಂದಿರುಗಿ ಬರುವ ನನ್ನ ಪ್ರಯತ್ನ ಬಹುತೇಕ ನಿಂತಿತು.
    ಮುಂದುವರಿಯುವುದು
    Read more...
    0

    ವಿವೇಕಾನಂದ ಕಾಲೇಜಿಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ

  • ಡಾ.ಶ್ರೀಧರ ಎಚ್.ಜಿ.
  • ೨೭-೩-೨೦೧೧ರಂದು ವಿವೇಕಾನಂದ ಕಾಲೇಜಿನ ಚರಿತ್ರೆಯಲ್ಲಿ ಒಂದು ಮಹತ್ವದ ದಿನ. ಕಾಲೇಜಿಗೆ ಜನವರಿಯಲ್ಲಿ ಭೇಟಿ ನೀಡಿದ ನ್ಯಾಕ್ ತಂಡದ ವರದಿಯನ್ನು ಆಧರಿಸಿ ನ್ಯಾಕ್ ಸಂಸ್ಥೆಯು ವಿವೇಕಾನಂದ ಪದವಿ ಕಾಲೇಜಿಗೆ ಎ ಗ್ರೇಡ್ ಮಾನ್ಯತೆಯನ್ನು ನೀಡಿದೆ.
    Read more...

    Subscribe