Saturday, July 23, 2011

0

ಮೂರು . . . . . . ನಾಲ್ಕು . . . . .

  • Saturday, July 23, 2011
  • ಡಾ.ಶ್ರೀಧರ ಎಚ್.ಜಿ.

  • ದೊಡ್ಡಮ್ಮ ದಂಪತಿಗಳ ಭಾವ ಚಿತ್ರವಿದು
    ದೊಡ್ಡಮ್ಮನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಯಿತು ಕಳೆದಂತೆ ಅಲ್ಲಿಯ ಕೆಲಸಗಳು ಮಾಮೂಲಿಯಾದವು. ಮುಂಜಾನೆ ಸ್ನಾನಮಾಡಿ ದೇವರ ಪೂಜೆ ಮಾಡಿ ಕೆಲವೊಮ್ಮೆ ಶಾಲೆಗೆ ಹೋಗಬೇಕಿತ್ತು. ಬೇಸಾಯದ ದಿನಗಳಲ್ಲಿ ಗದ್ದೆಗೆ ಹೋಗಬೇಕಿತ್ತು. ಗದ್ದೆ ನಾಟಿಯ ಸಂದರ್ಭದಲ್ಲಿ ರಜೆಯಿದ್ದರೆ ಕೆಲಸದವರ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೆ. ಕಿತ್ತ ನಾಟಿಯ ಸಸಿಗಳನ್ನು ನೆಡುವ ಇಲ್ಲವೇ ಅದರ ಕಟ್ಟುಗಳನ್ನು ಅಲ್ಲಲ್ಲಿ ಇರಿಸುವ ಕೆಲಸಗಳನ್ನು ಮಾಡುವುದು ನಮಗೆ ಒಂದು ಆಟವಾಗಿತ್ತು. ಮಳೆಯಲ್ಲಿ ನೆನೆಯುವುದು ಒಂದು ಸಂಗತಿಯಾಗಿರಲಿಲ್ಲ. ತೋಟಕ್ಕೆ ಕೊಳೆ ಔಷಧಿ ಹೊಡೆಯಲು ಬಂದರೆ ಅವರಿಗೆ ನೆರವು ನೀಡುವುದು ನನಗೆ ಅತ್ಯಂತ ಸಂತೋಷದ ಸಂಗತಿಯಾಗಿತ್ತು.

    ಶಾಲೆಗೆ ಹೋದರೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದೆವು. ಆಗ ನಮ್ಮದು ಬಸ್ಸಿನ ವೇಗ. ನಾವೆಲ್ಲ ಒಂದೊಂದು ಬಸ್ಸಿನ ಹೆಸರನ್ನಿಟ್ಟುಕೊಂಡು ಓಡುತ್ತಿದ್ದೆವು. ಶಾಲೆಂದ ಮನೆಗೆ ಬರಲು ಒಟ್ಟು ಮೂರು ದಾರಿಗಳಿದ್ದವು. ಶಾಲೆಂದ ಹೊರಟು ಟಾರು ರಸ್ತೆಯಲ್ಲಿ ಒಂದು ಫರ್ಲಾಂಗಿನಷ್ಟು ಬಂದು ಬಲಕ್ಕೆ ತಿರುಗಿ ಮಣ್ಣಿನ ರಸ್ತೆಯಲ್ಲಿ ಇಳಿದರೆ ವಾಮನರಾಯರ ಮನೆ ಸಿಗುತ್ತಿತ್ತು. ಇವರ ಮನೆಯ ಬುಡದಲ್ಲಿ ಮತ್ತೆ ಎಡಕ್ಕೆ ತಿರುಗಿ ಸ್ವಲ್ಪ ದೂರ ಬಂದರೆ ಒಂದೆರಡು ಹಸಲರ ಮನೆಗಳು ಸಿಗುತ್ತಿದ್ದವು. ಅವರ ಮನೆಯ ಮುಂದೆ ಯಾವಾಗಲೂ ಕೋಳಿಗಳು "ಸರ್ಜಿಸಿದ ಮಲಮೂತ್ರಗಳು ಇರುತ್ತಿದ್ದವು. ನಮ್ಮ ಕಾಲಿಗೆ ಚಪ್ಪಲಿ ಇರಲಿಲ್ಲ. ಹಾಗಾಗಿ ನಾವು ಈ ದಾರಿಯಲ್ಲಿ ಬಂದರೆ ಕೋಳಿಯ ಮಲವನ್ನು ಮೆಟ್ಟಿಕೊಂಡೇ ಮನೆಗೆ ಬರಬೇಕಿತ್ತು. ಆದ್ದರಿಂದ ನಾವು ಈ ದಾರಿಯನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ.

    ಇನ್ನು ಎರಡನೆಯದು ಸ್ವಲ್ಪ ಕಾಡಿನ ದಾರಿ. ಟಾರು ರಸ್ತೆಯಲ್ಲಿ ಇನ್ನಷ್ಟು ಮುಂದೆ ಬಂದು ಬಲಕ್ಕೆ ತಿರುಗಿದರೆ ಕಾಡಿನ ಮೂಲಕ ಸಾಗುವ ಕಾಲುದಾರಿ ಸಿಗುತ್ತಿತ್ತು. ಇದು ಅಂಕುಡೊಂಕಾದ ಕಾಲುದಾರಿ. ಅಕ್ಕಪಕ್ಕದಲ್ಲಿ ಸಾಕಷ್ಟು ಮುಳ್ಳಿನ ಗಿಡಗಳು ಇರುತ್ತಿದ್ದವು. ಮರದ ಬೇರುಗಳು ಕಾಲಿಗೆ ಅಡ್ಡ ಬರುತ್ತಿದ್ದವು. ಇರುವುದರಲ್ಲಿ ಇದು ಹತ್ತಿರದ ದಾರಿಯಾಗಿತ್ತು. ಆದರೆ ಈ ದಾರಿಯಲ್ಲಿ ಒಬ್ಬರೇ ಬರಲು ನಮಗೆ ಹೆದರಿಕೆಯಾಗುತ್ತಿತ್ತು. ಕಾಡಿನ ದಾರಿಯಲ್ಲಿ ಕೆಲವೊಮ್ಮೆ ನರಿಯೋ ಹಂದಿಯೋ ಸಿಗುವುದಿತ್ತು.
    ಮೂರನೆಯದು ಟಾರು ರಸ್ತೆಯಲ್ಲಿ ನೇರವಾಗಿ ಒಂದು ಕಿಲೋಮಿಟರಿನಷ್ಟು ಬಂದು ಗಡಿಕಟ್ಟೆಗಿಂತ ಸ್ವಲ್ಪ ಮೊದಲು ಸಿಗುವ ಅರಳಿ ಮರದ ಎದುರು ಬಲಕ್ಕೆ ತಿರುಗಿದರೆ ನೇರವಾಗಿ ದೊಡ್ಡಮ್ಮನ ಮನೆಗೆ ಬಂದು ತಲುಪುತ್ತಿದ್ದೆವು. ಆದರೆ ಇದು ಅತ್ಯಂತ ಬಳಸು ದಾರಿಯಾಗಿತ್ತು. ಸಂಜೆ ಶಾಲೆ ಬಿಟ್ಟ ನಂತರ ಗೆಳೆಯರೊಂದಿಗೆ ಮಾತನಾಡಿಕೊಳ್ಳುತ್ತ ಈ ದಾರಿಯಲ್ಲಿ ಬರುತ್ತಿದ್ದವು.

    ದೊಡ್ಡಮ್ಮನ ಮಾರ್ಗದರ್ಶನದಲ್ಲಿ ನಾನು ಅಡಿಗೆಯ ಕೆಲಸವನ್ನು ಅಚ್ಚುಕಟ್ಟಾಗಿ ಕಲಿತೆ. ತಿಂಗಳಿಗೆ ನಾಲ್ಕುದಿನ ನನ್ನ ಪಾಲಿಗೆ ಅಡಿಗೆಯ ಕೆಲಸ ಬರುತ್ತಿತ್ತು. ಇದು ನನಗೆ ಮುಂದಿನ ಬದುಕಿನಲ್ಲಿ ಸಾಕಷ್ಟು ಪ್ರಯೋಜನಕ್ಕೆ ಬಂತು. ಅನ್ನ, ಸಾರು, ಹುಳಿ(ಸಾಂಬಾರು), ಪಲ್ಯ, ತಂಬಳಿ, ಪಾಯಸ, ಚಕ್ಕುಲಿ, ಕಾಕಡುಬು, ಪಂಚಕಜ್ಜಾಯ, ಹೀಗೆ ಹಲವು ತಿಂಡಿ ತಿನಿಸುಗಳನ್ನು ಮಾಡುವ ವಿಧಾನವನ್ನು ಕಲಿತುಕೊಂಡೆ. ದೊಡ್ಡಮ್ಮನ ಮನೆಯಲ್ಲಿ ಚೌತಿಯ ಹಬ್ಬಕ್ಕೆ ಗಣಪತಿಯನ್ನು ತರುತ್ತಿದ್ದರು. ಆ ಸಂದರ್ಭದಲ್ಲಿ ದೊಡ್ಡಮ್ಮನಿಗೆ ತಿಂಗಳ ರಜೆ ಏನಾದರೂ ಬಂದರೆ ಅಡಿಗೆ ಮನೆಯ ಕೆಲಸ ನನ್ನ ತಲೆಯ ಮೇಲೆ ಬೀಳುತ್ತಿತ್ತು.

    ದೊಡ್ಡಮ್ಮನ ಹಿರಿಯ ಮಗ ಮಹಾಬಲೇಶ್ವರ (ಈತನನ್ನು ಮಾಬಲಗಿರಿ ಎಂದೇ ಎಲ್ಲರೂ ಕರೆಯುವುದು) ನಮಗಿಂತ ಸಾಕಷ್ಟು ದೊಡ್ಡವನಾಗಿದ್ದ. ಹೀಗಾಗಿ ಆತನೊಂದಿಗೆ ನನಗೆ ಅಷ್ಟಾಗಿ ಸಲಿಗೆ ಇರಲಿಲ್ಲ. ಎರಡನೆಯವನು ತಿಮ್ಮಣ್ಣ ಭಟ್ಟ. ಈತ ನನಗಿಂತ ತುಸು ದೊಡ್ಡವನಾಗಿದ್ದ. ಓದುವಾಗಲೂ ನನಗಿಂತ ಒಂದೆರಡು ತರಗತಿ ಮೇಲಿನದರಲ್ಲಿ ಕಲಿಯುತ್ತಿದ್ದ. ಆದರೆ ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಲೆಕ್ಕಮಾಡಿ ಮಾತನಾಡುವ ಜಾಯಮಾನ. ಮೂರನೆಯವನು ಶ್ರೀಕಾಂತ. ನನಗಿಂತ ವಯಸ್ಸಿನಲ್ಲಿ ತುಸು ಕಿರಿಯವನು. ನಮ್ಮಿಬ್ಬರ ಮನೋಧರ್ಮ ಬಹುತೇಕ ಸರಿಹೊಂದುತ್ತಿತ್ತು. ಹೀಗಾಗಿ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು. ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದೆವು. ದೊಡ್ಡಮ್ಮನಿಗೆ ಮೂವರು ಗಂಡುಮಕ್ಕಳ ನಂತರ ಹುಟ್ಟಿದವಳು ಮಮತ. ಈಕೆಯನ್ನು ಅತ್ಯಂತ ಮುದ್ದಿನಿಂದ ಬೆಳೆಸಿದ್ದರು. ದೊಡ್ಡಪ್ಪನಿಗಂತೂ ಮಗಳೆಂದರೆ ಪಂಚಪ್ರಾಣ. ಆಕೆಯ ಕೈಯ್ಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ.

    ಕಾಲ ನಿಲ್ಲುವುದಿಲ್ಲ. ನಾನು ಮೂರನೆಯ ತರಗತಿಯನ್ನು ದಾಟಿ ನಾಲ್ಕನೆಯ ತರಗತಿಗೆ ತಲುಪಿದ್ದೆ. ದೊಡ್ಡಮ್ಮನ ಮನಗೆ ನಾನು ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದೆ. ಆದರೆ ದೊಡ್ಡಮ್ಮನ ಮನೆಗೆ ನಾನು ಹೊರಗಿನ ವ್ಯಕ್ತಿಯಾಗಿದ್ದೆ. ಹೀಗಾಗಿ ಮಾಬಲಗಿರಿ ಮತ್ತು ತಿಮ್ಮಣ್ಣರ ಸಿಟ್ಟು ನನ್ನ ಮೇಲೆ ತಿರುಗುತ್ತಿತ್ತು. ಆಗೆಲ್ಲ ದೊಡ್ಡಮ್ಮ ತುಂಬಾ ಬೇಜಾರು ಮಾಡಿಕೊಳ್ಳುತ್ತಿದ್ದರು. ಈ ಪ್ರವೃತ್ತಿ ತುಸು ಅತಿರೇಕಕ್ಕೆ ಹೋಗುವ ಹೊತ್ತಿಗೆ ನಾನು ನಾಲ್ಕನೆಯ ತರಗತಿಯಲ್ಲಿ ಉತ್ತೀರ್ಣನಾಗಿದ್ದೆ. ಮುಂದಿನ ಓದಿಗೆ ಊರಿಗೆ ಹಿಂದಿರುರುಗುವುದೆಂದು ತೀರ್ಮಾನವಾಗಿತ್ತು. ಅಷ್ಟರಲ್ಲಿ ಅನಿರೀಕ್ಷಿತವಾದ ತಿರುವು ಸಂಭವಿಸಿತು.

    ದೊಡ್ಡಪ್ಪನ ಮನೆಯ ಪಕ್ಕದಲ್ಲಿ ಅವರ ತಮ್ಮ ಚಂದ್ರಶೇಖರ ಭಟ್ಟರು ಹೊಸದಾಗಿ ಮನೆ ಕಟ್ಟಿ ವಾಸ ಮಾಡಲು ತೊಡಗಿದ್ದರು. ಸ್ವಂತ ತಮ್ಮನಾದರೂ ಇಬ್ಬರಲ್ಲಿ ಸಂಬಂಧ ಅಷ್ಟಕ್ಕಷ್ಟೆ. ಹಾಗಂತ ವೈರತ್ವವೇನೂ ಇರಲಿಲ್ಲ. ಮಾತನಾಡುತ್ತಿದ್ದರು. ವಿಶೇಷ ಕಾರ್ಯಕ್ರಮವಾದರೆ ಹೋಗಿಬರುವ ಕ್ರಮತ್ತು. ಇಬ್ಬರ ಮನೆಗೆ ಇರುವುದು ಒಂದು ತಂತಿ ಬೇಲಿಯ ಗಡಿ ಮಾತ್ರ. ದೊಡ್ಡಪ್ಪನಿಗೆ ತನ್ನ ತಮ್ಮನ ಬಗೆಗೆ ಯಾವಾಗಲೂ ಒಂದು ಬಗೆಯ ವಿಚಿತ್ರ ಸಂಶಯ. ಆ ಸಂಶಯಕ್ಕೆ ನಿರ್ದಿಷ್ಟ ಕಾರಣವಿರಲಿಲ್ಲ. ನಾನು ಯಾವಾಗಲಾದರೊಮ್ಮೆ ಅವರ ಮನೆಗೆ ಹೋಗಿಬರುತ್ತಿದ್ದೆ. ಸಣ್ಣಪುಟ್ಟ ಕೆಲಸಗಳಲ್ಲಿ ಅವರಿಗೆ ನೆರವಾಗುತ್ತಿದ್ದೆ. ದೊಡ್ಡಪ್ಪನ ಮಕ್ಕಳು ರೇಗಿದಾಗ ತಂತಿ ಬೇಲಿಯ ಸಮೀಪ ನಿಂತು ಅಳುತ್ತಿದ್ದೆ. ಇದು ಚಂದ್ರಭಟ್ಟರಿಗೆ ಗೊತ್ತಾಗಿತ್ತು. ಈ ಹೊತ್ತಿಗೆ ಅವರಿಗೆ ಮದುವೆಯಾಗಿ ಸುಮಾರು ಎರಡು ವರ್ಷದ ಮಗಳಿದ್ದಳು. ಮನೆಯಲ್ಲಿ ಒಂದು ಜೊತೆ ಎತ್ತು, ನಾಲ್ಕಾರು ಎಮ್ಮೆ, ಒಂದೆರಡು ಕರೆಯುವ ಹಸುಗಳಿದ್ದವು. ನಾನು ಮನೆಗೆ ಹಿಂದಿರುಗುವ ವಿಷಯವನ್ನು ಅವರ ಮನೆಯಲ್ಲಿ ಒಮ್ಮೆ ಹೇಳಿದ್ದೆ. ಇದಾಗಿ ಸ್ವಲ್ಪ ದಿನಕ್ಕೆ ಅವರು "ಮುಂದಿನ ವರ್ಷ ನೀನು ನಮ್ಮ ಮನೆಂದ ಶಾಲೆಗೆ ಹೋಗು" ಎಂದು ಹೇಳಿದರು. ಅವರಲ್ಲಿ ನನಗೆ ಸಾಕಷ್ಟು ಸಲಿಗೆಯೂ ಈ ಹೊತ್ತಿಗೆ ಬೆಳೆದಿತ್ತು. ದೊಡ್ಡಮ್ಮನಿಗೂ ಇದು ಸರಿ ಎಂದು ಕಂಡಿರಬೇಕು. ಅವರೂ ಇದನ್ನು ಅನುಮೋದಿಸಿದರು. ನಾಲ್ಕನೆಯ ತರಗತಿ ಮುಗಿಸಿ ಹೊರಡುವಾಗ ನನ್ನ ಬಟ್ಟೆಗಳು ತಂತಿ ಬೇಲಿಯನ್ನು ದಾಟಿ ಪಕ್ಕದ ಮನೆ ಸೇರಿದವು. ರಜೆ ಮುಗಿಸಿ ಹಿಂದಿರುಗಿದ ನಾನು ಚಂದ್ರಭಟ್ಟರ ಮನೆಯನ್ನು ಸೇರಿದೆ. ಐದನೆಯ ತರಗತಿಗೆ ಅವರ ಮನೆಂದ ಶಾಲೆಗೆ ಹೋಗತೊಡಗಿದೆ.
    ಮುಂದುವರಿಯುವುದು. . . .
    Read more...

    Thursday, June 2, 2011

    1

    ನೆನಪಿನಂಗಳ - ದೊಡ್ಡಮ್ಮನ ಮನೆಯಿಂದ ಶಾಲೆಗೆ ಪಯಣ

  • Thursday, June 2, 2011
  • ಡಾ.ಶ್ರೀಧರ ಎಚ್.ಜಿ.
  • ನನ್ನ ಅಮ್ಮನ ಒಬ್ಬಳು ಅಕ್ಕನ ಹೆಸರು ಗೌರಿ. ಇವರನ್ನು ಹೆಗ್ಗೋಡಿನ ಸಮೀಪದ ಹೊನ್ನೇಸರದ ತಿಮ್ಮಣ್ಣ ಭಟ್ಟರ ಮಗ ಸುಬ್ಬಾಭಟ್ಟರಿಗೆ ವಿವಾಹ ಮಾಡಿಕೊಟ್ಟಿದ್ದರು. ಇವರು ಸ್ವಲ್ಪ ಸಮಯದ ನಂತರ ಗಡಿಕಟ್ಟೆಯಿಂದ ತುಸು ಮುಂದೆ ಬರುವ ಹಿರೇಮನೆ ಎಂಬಲ್ಲಿ ವಾಸಮಾಡಲು ತೊಡಗಿದರು. ನನ್ನ ಹೊಳೆದಾಟುವ ಸಾಹಸವನ್ನು ಅರಿತ ಈ ದೊಡ್ಡಮ್ಮ ತಮ್ಮ ಮನೆಯಿಂದ ಶಾಲೆಗೆ ಹೋಗಲು ಸೂಚಿಸಿದರು. ನನ್ನ ಮನೆಯಲ್ಲಿಯೂ ಇದಕ್ಕೆ ಒಪ್ಪಿಗೆ ಸಿಕ್ಕಿತು. ನನ್ನನ್ನು ಮೂರನೆಯ ತರಗತಿಗೆ ಪುರಪ್ಪೆಮನೆಯಲ್ಲಿದ್ದ ಸರ್ಕಾರಿ ಶಾಲೆಗೆ ಸೇರಿಸಿದರು

    ಸುಬ್ಬಾಭಟ್ಟರು ತೀರಾ ಶ್ರೀಮಂತರಲ್ಲದಿದ್ದರೂ ಬಡವರಾಗಿರಲಿಲ್ಲ. ಒಂದಷ್ಟು ಅಡಿಕೆ ತೋಟವಿತ್ತು. ಭತ್ತಬೆಳೆಯುವ ಗದ್ದೆಯಿತ್ತು. ಆರ್ಥಿಕವಾಗಿ ತಮ್ಮ ಸಂಸಾರದ ಖರ್ಚನ್ನು ಸರಿದೂಗಿಸಿಕೊಂಡು ಹೋಗುವಷ್ಟು ಸಂಪತ್ತು ಅವರಿಗಿತ್ತು. ಗೌರಿ ದೊಡ್ಡಮ್ಮನಿಗೆ ಮೂವರು ಗಂಡುಮಕ್ಕಳು. ಒಬ್ಬಳು ಮಗಳು. ಮಹಾಬಲೇಶ್ವರ ಭಟ್, ತಿಮ್ಮಣ್ಣ ಭಟ್, ಶ್ರೀಕಾಂತ ಮತ್ತು ಮಮತ ಎಂದು ಅವರ ಮಕ್ಕಳ ಹೆಸರುಗಳು. ನಾನು ಹೋಗುತ್ತಿದ್ದ ಶಾಲೆಗೆ ಇವರೂ ಹೋಗುತ್ತಿದ್ದರು. ನನಗೆ ನೆನಪಿರುವಂತೆ ಮಹಾಬಲೇಶ್ವರ ಏಳನೆಯ ತರಗತಿಗೆ, ತಿಮ್ಮಣ್ಣ ಐದನೆಯ ತರಗತಿಗೆ ಹೋಗುತ್ತಿದ್ದರು. ಶ್ರೀಕಾಂತ ಎರಡನೆಯ ತರಗತಿ. ಮಮತ ಬಹುತೇಕ ಒಂದನೆ ತರಗತಿಯಲ್ಲಿದ್ದಳೆಂದು ತೋರುತ್ತದೆ. ಪುರಪ್ಪೆಮನೆ ಶಾಲೆ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು. ತುಸು ಕಾಡಿನ ದಾರಿಯಲ್ಲಿ ಹೋಗಬೇಕಿತ್ತು. ಹೀಗಾಗಿ ಶಾಲೆಗೆ ನಾವೆಲ್ಲರೂ ಒಟ್ಟಿಗೆ ಹೋಗುತ್ತಿದ್ದೆವು.

    ಗೌರಿ ದೊಡ್ಡಮ್ಮನದು ತುಂಬಾ ಒಳ್ಳೆಯ ಮನಸ್ಸು. ನನ್ನನ್ನು ಅವರು ತಮ್ಮ ಮಗನಂತೆಯೇ ನೋಡಿಕೊಂಡಿದ್ದರು. ದೊಡ್ಡಪ್ಪ ತುಂಬಾ ಬುದ್ದಿವಂತರಲ್ಲ. ಆದರೆ ಅವರಿಗೆ ಬೇಕಾದಷ್ಟು ವ್ಯವಹಾರ ಜ್ಞಾನವಿತ್ತು. ಸಂಸಾರವನ್ನು ತಾವೇ ನಿಭಾಯಿಸಿಕೊಂಡು ಹೋಗುತ್ತಿದ್ದರು. ಅವರು ತಪ್ಪು ಮಾಡಿದಾಗ ಅಜ್ಜ ತಿಮ್ಮಣ್ಣ ಭಟ್ಟರು ’ಭೂಂಭಾರ್ಕ’ ಎಂಬ ಪದವನ್ನು ಬಳಸಿ ಬೈಯ್ಯುತ್ತಿದ್ದರು. ನಮಗೆ ಅಜ್ಜನ ಬಾಯಲ್ಲಿ ಈ ಶಬ್ದವನ್ನು ಕೇಳುವುದೆಂದರೆ ಏನೋ ಒಂದು ರೀತಿಯ ಮೋಜು.
    ಮುಂಜಾನೆ ಬೇಗ ಎದ್ದು ಬಚ್ಚಲಿಗೆ ಬೆಂಕಿ ಹಾಕುವುದು, ಕೊಟ್ಟಿಗೆ ಸಗಣಿ ತೆಗೆಯುವುದು, ದೇವರಿಗೆ ಹೂ ಕೊಯ್ಯುವುದು, ದೇವರಪೂಜೆ ಮಾಡುವುದು, ಅಡಿಕೆ ಕೊಯ್ಯುವ ಸಂದರ್ಭದಲ್ಲಿ ಅಡಿಕೆ ಹೆಕ್ಕುವುದು, ಸುಲಿದ ಹಸಿಅಡಿಕೆಯಲ್ಲಿರುವ ಗೋಟನ್ನು ಆರಿಸುವುದು, ಅನಂತರ ಇದನ್ನು ಅಜ್ಜ ತಿಮ್ಮಣ್ಣ ಭಟ್ಟರ ನೇತೃತ್ವದಲ್ಲಿ ಅದನ್ನು ಚಾಕುವಿನಿಂದ ಕೆತ್ತುವುದು, ಮುಂಜಾನೆ ಬೇಯಿಸಿದ ಅಡಿಕೆಯನ್ನು ತಟ್ಟಿಯಲ್ಲಿ ಹರಗುವುದು, ಸಮಯ ಬಂದರೆ ದೊಡ್ಡಮ್ಮನಿಗೆ ಅಡಿಗೆಗೆ ಸಹಾಯ ಮಾಡುವುದು, ಹಸು ಅಥವಾ ಎಮ್ಮೆ ಕರೆಯುವುದು ಹೀಗೆ ಕೆಲಸ ಮಾಡಬೇಕಿತ್ತು. ಮನೆಯಿಂದ ದೂರವಿದ್ದು ಗೊತ್ತಿಲ್ಲದ ನಾನು ಆರಂಭದಲ್ಲಿ ಇಲ್ಲಿಗೆ ಹೊಂದಿಕೊಳ್ಳುವುದಕ್ಕೆ ತುಂಬಾ ಕಷ್ಟಪಟ್ಟೆ.

    ಆ ಕಾಲಕ್ಕೆ ನಮ್ಮೂರಿನಿಂದ ದೊಡ್ಡಮ್ಮನ ಮನೆಗೆ ನೇರವಾಗಿ ಹೋಗುವುದಕ್ಕೆ ಗಜಾನನ ಕಂಪನಿಯ ಮಹೇಶ ಎಂಬ ಒಂದು ಬಸ್ಸಿತ್ತು. ಇದನ್ನು ಹತ್ತಿಕೊಂಡು ಮುಂಡಿಗೆ ಹಳ್ಳಕ್ಕೆ ಹೋಗಿಬಿಡಲೇ ಎಂಬಷ್ಟು ಮನಸ್ಸು ಹಪಹಪಿಗೆ ಒಳಗಾದ ದಿನಗಳೂ ಇದ್ದವು. ಒಮ್ಮೆ ಪುರಪ್ಪೆಮನೆ ಅಂಚೆಕಛೇರಿಯಲ್ಲಿ ಒಂದು ಮೂರು ಪೈಸೆಗೆ ದೊರೆಯುತ್ತಿದ್ದ ಒಂದು ಅಂಚೆಕಾರ್ಡನ್ನು ಖರೀದಿಸಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಅಮ್ಮನಿಗೆ ಒಂದು ಪತ್ರವನ್ನು ಬರೆದಿದ್ದೆ. ಅಂಚೆಯ ಡಬ್ಬಕ್ಕೆ ಹಾಕಿದರೆ ಮನೆಗೆ ತಲುಪಲು ತಡವಾಗುತ್ತದೆ ಎಂದು ಯೋಚಿಸಿ ಮಹೇಶ ಬಸ್ಸು ಬರುವುದನ್ನು ಕಾದು ಅದರ ಡ್ರೈವರನಲ್ಲಿ ಕಾಗದವನ್ನು ಕೊಟ್ಟು, ಸಿರಿವಂತೆ ಅಂಚೆಕಛೇರಿಯ ಡಬ್ಬಕ್ಕೆ ಹಾಕುವಂತೆ ವಿನಂತಿ ಮಾಡಿದ್ದೆ. ಆತ ಅದನ್ನು ಹಾಕಿದನೋ ಇಲ್ಲವೋ ಗೊತ್ತಿಲ್ಲ. ಮನೆಯಿಂದ ಯಾರೂ ಬರಲೂ ಇಲ್ಲ. ಅಲ್ಲಿಗೆ ಮನೆಗೆ ಹಿಂದಿರುಗಿ ಬರುವ ನನ್ನ ಪ್ರಯತ್ನ ಬಹುತೇಕ ನಿಂತಿತು.
    ಮುಂದುವರಿಯುವುದು
    Read more...
    0

    ವಿವೇಕಾನಂದ ಕಾಲೇಜಿಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ

  • ಡಾ.ಶ್ರೀಧರ ಎಚ್.ಜಿ.
  • ೨೭-೩-೨೦೧೧ರಂದು ವಿವೇಕಾನಂದ ಕಾಲೇಜಿನ ಚರಿತ್ರೆಯಲ್ಲಿ ಒಂದು ಮಹತ್ವದ ದಿನ. ಕಾಲೇಜಿಗೆ ಜನವರಿಯಲ್ಲಿ ಭೇಟಿ ನೀಡಿದ ನ್ಯಾಕ್ ತಂಡದ ವರದಿಯನ್ನು ಆಧರಿಸಿ ನ್ಯಾಕ್ ಸಂಸ್ಥೆಯು ವಿವೇಕಾನಂದ ಪದವಿ ಕಾಲೇಜಿಗೆ ಎ ಗ್ರೇಡ್ ಮಾನ್ಯತೆಯನ್ನು ನೀಡಿದೆ.
    Read more...

    Wednesday, March 23, 2011

    0

    ಶಬ್ದಲೋಕ - ಬಾದಾಳ :

  • Wednesday, March 23, 2011
  • ಡಾ.ಶ್ರೀಧರ ಎಚ್.ಜಿ.

  • ಇದು ಪಾತಾಳಕ್ಕಿಂತ ಬೇರೆಯಾದುದು ಎಂದು ಮೊದಲೇ ಹೇಳಿಬಿಡುತ್ತೇನೆ !

    ಇತ್ತೀಚೆಗೆ ನನ್ನ ಪತ್ನಿ ಸವಿತ ಮಾತಿನ ನಡುವೆ ಬಾದಾಳ ಎಂಬ ಶಬ್ದವನ್ನು ಬಳಸಿದಳು. ತಕ್ಷಣ ನನ್ನ ಕಿವಿ ಚುರುಕಾಯಿತು. ನನಗೆ ತಿಳಿದ ಶಬ್ದ ಭಂಡಾರವನ್ನೆಲ್ಲ ಶೋಧಿಸಿ ನೋಡಿದೆ. ಬಾದಾಳ ಸಿಕ್ಕಲಿಲ್ಲ. ನನ್ನಲ್ಲಿರುವ ನಿಘಂಟುಗಳನ್ನು ಶೋಧಿಸಿದರೂ ಬಾದಾಳ ಕಾಣಲಿಲ್ಲ. ಕೊನೆಗೆ ಆಕೆಯನ್ನೇ ನೇರವಾಗಿ ಕೇಳಿದೆ.

    ಬಾದಾಳ ಎಂದರೆ ಏನು ?

    "ಮನೆಯಲ್ಲಿ ಸಾಮಾನ್ಯವಾಗಿ ಇಲ್ಲಿ ಹೆಗ್ಗಣಗಳು ಇರುತ್ತವೆ. ಅವು ಇದ್ದ ಮೇಲೆ ಓಡಾಡುತ್ತವೆ. ತಮ್ಮ ಓಡಾಟ, ವಾಸ ಮತ್ತು ಇತರ ಕೆಲವು ಸಂಗತಿಗಳಿಗೆ ಅನುಕೂಲವಾಗಲಿ ಎಂದು ಇಲಿ, ಹೆಗ್ಗಣಗಳು ಬಿಲವನ್ನು ಮಾಡುತ್ತವೆ. ಇದೇ ರೀತಿ ಮನೆಯ ಹೊರಭಾಗದಲ್ಲಿ ಹೆಗ್ಗಣಗಳು ಆಳವಾದ ಬಿಲವನ್ನು ಮಾಡಿದ್ದರೆ, ತೆಂಗಿನ ಮರದ ಬುಡದಲ್ಲಿ ಮಣ್ಣನ್ನು ಒಂದೆಡೆ ಒತ್ತಿ ಬಿಲವನ್ನು ತೋಡಿದ್ದರೆ ಅದಕ್ಕೆ ಬಾದಾಳ ಎನ್ನುತ್ತೇವೆ ಎಂದಳು".

    ನನಗೆ ನಿಜಕ್ಕೂ ನಿಜಕ್ಕೂ ಆಶ್ಚರ್ಯವಾಯಿತು. ಹಾಗಿದ್ದರೆ ಇದು ಪಾತಾಳ ಲೋಕಕ್ಕೆ ಹೋಗಲು ಮಾಡಿದ ಮೊದಲ ಹಂತದ ಕಾಮಗಾರಿ ಎನಿಸಿತು. ವೈಶಂಪಾಯನ ಸರೋವರವನ್ನು ನೋಡಿ ಪಂಪ ಹೇಳಿದ ಪಾತಾಳ ಲೋಕಕ್ಕೆ ಬಾಗಿಲಿದು ಎಂದು ಹೇಳಿದ್ದು ನೆನಪಾಯಿತು.

    Read more...
    0

    ಆದಿಪುರಾಣ - 4

  • ಡಾ.ಶ್ರೀಧರ ಎಚ್.ಜಿ.

  • ಪಂಪನ ಎರಡೂ ಕೃತಿಗಳಲ್ಲಿ ಗೆಲುವಿನ ತುದಿಯಲ್ಲಿ ರಾಜ್ಯತ್ಯಾಗದ ಚಿತ್ರವಿದೆ. ಈ ತ್ಯಾಗ ಅಣ್ಣ ತಮ್ಮಂದಿರ ನಡುವೆ ನಡೆಯುವುದು ಗಮನಾರ್ಹ. ವಿಕ್ರಮಾರ್ಜುನ ವಿಜಯದಲ್ಲಿ ಧರ್ಮರಾಯನು ಅರ್ಜುನನಿಗೆ ಪ್ರಾಯದ ಪೆಂಪೆ ಪೆಂಪೆಮಗೆ ಮೀರಿದರಂ ತವೆ ಕೊಂದ ಪೆಂಪು ಕಟ್ಟಾಯದ ಪೆಂಪು (ಪಂಪಭಾ ೧೪.೧೭) ಎಂದು ಅರ್ಜುನನಿಗೆ ಅಧಿಕಾರವನ್ನು ಬಿಟ್ಟುಕೊಡುವನು. ಅದೇ ರೀತಿ ಆದಿಪುರಾಣದಲ್ಲಿ ಬಾಹುಬಲಿಯು ಗೆಲುವಿನ ಔನ್ನತ್ಯದಲ್ಲಿ ಭರತನಿಗೆ ತನ್ನ ಹಕ್ಕಿನ ಅಧಿಕಾರವನ್ನು ತ್ಯಾಗ ಮಾಡುವುದರ ಹಿಂದೆ ನಿರ್ದಿಷ್ಟ ಉದ್ದೇಶಗಳಿರುವಂತಿದೆ. ಅಧಿಕಾರದಾಹ, ಅಹಂಕಾರ, ಭೋಗದ ಬದುಕಿಗಾಗಿ ಹಂಬಲಿಸುವ, ಸಿಂಹಾಸನಕ್ಕಾಗಿ ತಿಕ್ಕಾಟಗಳು ನಡೆಯುತ್ತಿರುವ ಕಾಲದಲ್ಲಿ ಬರುವ ಈ ಬಗೆಯ ಚಿತ್ರಗಳನ್ನು ಕೇವಲ ಆದರ್ಶದ ಚಿತ್ರಗಳು ಎನ್ನಬಹುದೇ? ಅಥವಾ ತನ್ನ ಕಾಲದ ಚರಿತ್ರೆಯ ಒಳಗೆ ಇದ್ದಿರಬಹುದಾದ ರಾಜಕೀಯದ ಗೊಂದಲಗಳಿಗೆ ಧ್ವನಿಪೂರ್ಣವಾಗಿ ಪಂಪನ ಪ್ರತಿಕ್ರಿಯೆಯಾಗಿ ಇವು ಬಂದಿರಬಹುದೇ? ಎಂಬ ಅನುಮಾನಗಳು ಕಾಡುತ್ತವೆ.

    ಸೋದರರೊಳ್ ಸೋದರರಂ
    ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು
    ತ್ಪಾದಿಸುವುದು ಕೋಪಮನಳ
    ವೀದೊರೆತೆನೆ ತೊಡರ್ವುದೆಂತು ರಾಜ್ಯಶ್ರೀಯೊಳ್ (ಆದಿಪು.೧೪.೧೨೨)

    ಅದಿಪುರಾಣದಲ್ಲಿ ಬರುವ ಈ ಪದ್ಯ ತೀರ ಸರಳವಾದ ಮನಸ್ಥಿತಿಯಲ್ಲಿ ಬಂದಿದೆ ಎಂದು ಅನಿಸುವುದಿಲ್ಲ. ತನ್ನ ಕಾಲದ ರಾಜಕೀಯ ತಿಕ್ಕಾಟಗಳಿಗೆ ಕವಿ ಇಲ್ಲಿ ಧ್ವನಿ ನೀಡಿದಂತಿದೆ. ಅಪ್ಪ ಮಕ್ಕಳು, ಸಹೋದರರ ನಡುವೆ ರಾಜ್ಯಕ್ಕಾಗಿ ನಡೆಯುತ್ತಿದ್ದ ಅಧಿಕಾರದ ಅಹಂಗೆ ಬೀಸಿದ ಚಾಟಿಏಟಿನಂತೆ ಕಾಣುತ್ತದೆ. ಇದಕ್ಕೆ ಪೂರಕವಾಗಿ ಪಿರಿಯಣ್ಣಂ ಗುರು ತಂದೆಯೆಂದೆರಗುವೆಂ, ಆಳರಸಂಬೊಂದು ವಿಭೇದಮಾದೊಡೆರಕಂ ಚಿ: ಕಷ್ಟಮಲ್ತೇ ಎಂಬ ಮಾತುಗಳು ಬಂದಿವೆ. ಬಂಧುತ್ವದ ಯಾವ ಅಂಶಗಳನ್ನೂ ಪರಿಗಣಿಸದೆ, ರಾಜ್ಯವನ್ನು ಕಿತ್ತುಕೊಳ್ಳುವ ಸಂಘರ್ಷಕ್ಕೆ ಪಂಪನ ಮನಸ್ಸಿನ ಆತಂಕ ಇಲ್ಲಿ ಆಕಾರಪಡೆದಂತೆ ಕಾಣುತ್ತದೆ. ನ್ಯಾಯವಾಗಿ ಕೊಡಬೇಕಾದ ಅರ್ಧ ರಾಜ್ಯದಲ್ಲಿ ಐದು ಗ್ರಾಮಗಳನ್ನು ಕೊಡದ ಕೌರವನ ವ್ಯಕ್ತಿತ್ವದ ಎದುರು ಧರ್ಮರಾಯ ಮತ್ತು ಬಾಹುಬಲಿಯ ತ್ಯಾಗಕ್ಕೆ ಹೊಸ ಅರ್ಥ ಸಾಧ್ಯತೆಗಳು ತಾನಾಗಿ ಬಂದು ಬಿಡುತ್ತವೆ.

    ಪಂಪ ಯುದ್ಧದ ಅನಾಹುತಗಳನ್ನು ಹತ್ತಿರದಿಂದ ಕಂಡವನು. ಅದರಿಂದಾಗುವ ಜನಕ್ಷಯ ಕವಿಯ ಮನಸ್ಸನ್ನು ತಲ್ಲಣಗೊಳಿಸಿರಬೇಕು. ಪೂರ್ವಪುರಾಣದಲ್ಲಿ ಬರುವ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧದಂತಹ ಪರಿಕಲ್ಪನೆಯೇ ಹೊಸತು. ಪ್ರಪಂಚದಲ್ಲಿ ಈ ಬಗೆಯ ಅಹಿಂಸಾ ಯುದ್ಧದ ಕಲ್ಪನೆ ನೀಡಿದವರಲ್ಲಿ ಜಿನಸೇನರೇ ಮೊದಲಿಗರಾಗಿರಬೇಕು. ಹೀಗಾಗಿ ಜಿನಸೇನರ ನೆರಳಿನಲ್ಲಿ ಬರುವ ಕನ್ನಡದ ಆದಿಪುರಾಣು ನೀಡುವ ಅಹಿಂಸಾಯುದ್ಧದ ಪರಿಕಲ್ಪನೆಗೆ ಆ ಕಾಲದ ಹಿನ್ನೆಲೆಯಲ್ಲಿ ಮಹತ್ವವಿದೆ.

    ಚಕ್ರರತ್ನವನ್ನು ಮುಂದಿಟ್ಟುಕೊಂಡು ದಿಗ್ವಿಜಯಕ್ಕೆ ಹೊರಟ ಭರತನಿಗೆ ರಕ್ತಪಾತವನ್ನು ಸೃಷ್ಟಿಸುವ ಯುದ್ಧವನ್ನು ಮಾಡುವ ಅಗತ್ಯವೇ ಬರುವುದಿಲ್ಲ. ಭರತ ಮತ್ತು ಬಾಹುಬಲಿಯ ನಡುವೆ ಯುದ್ಧದ ಅನಿವಾರ್ಯತೆ ಎದುರಾದಾಗ ಉಭಯ ಪಕ್ಷದ ಮಂತ್ರಿಗಳು ಸಮಸ್ತಜನಸಂಹರಣಮಪ್ಪ ರಣದೊಳೇವಂದಪುದೆಂದು ಧರ‍್ಮಯುದ್ಧಮನೆ ತಮ್ಮೊಳ್ ಸಮಕಟ್ಟಿ (ಆದಿಪು.೧೪.೧೦೦ವ) ಇಬ್ಬರೂ ಅರಸರನ್ನು ದೃಷ್ಟಿಯುದ್ಧ, ಜಲಯದ್ಧ, ಮಲ್ಲಯುದ್ಧಕ್ಕೆ ಒಪ್ಪಿಸುವರು. ವಿಕ್ರಮಾರ್ಜುನ ವಿಜಯದಲ್ಲಿ ಬರುವ ಸಂಧಾನದ ಪ್ರಕ್ರಿಯೆಗಳು ಯುದ್ಧವನ್ನು ತಪ್ಪಿಸುವ ನೆಲೆಯಲ್ಲಿಯೇ ಬರುತ್ತವೆ. ಸಮಕಾಲೀನ ಭಾರತದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಹಿಂಸಾತ್ಮಕ ಯುದ್ಧಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಅಹಿಂಸಾತ್ಮಕ ಯುದ್ಧವನ್ನು ಪಂಪ ಮುಂದಿಡುತ್ತಿರುವಂತಿದೆ. ಆಂಗ್ಲರ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ಸಂಘಟಿಸಿದ ಮಹಾತ್ಮಾ ಗಾಂಧೀಜಿಯ ಹೋರಾಟವನ್ನು ಕಂಡ ಭಾರತೀಯರಿಗೆ ಪಂಪನ ಈ ಬಗೆಯ ನಿಲುವು ಅರ್ಥಪೂರ್ಣವಾಗಿ ಕಾಣುತ್ತದೆ.

    ಕವಿಯ ಪ್ರಕಾರ ಧರ್ಮವೇ ಮುಖ್ಯ. ಧರ್ಮ, ಅರ್ಥ, ಕಾಮಗಳು ಧರ್ಮಾರ್ಥಿ ಜನರ ವಿಶ್ವಾಸಕ್ಕೆ ಪಾತ್ರವಾದವು.

    ಧರ್ಮಂ ಪ್ರಧಾನಂಮರ್ಥಂ
    ಧರ್ಮಾಂಘ್ರಿಪ ಫಳಮದರ್ಕೆ ರಸಮದು ಕಾಮಂ (ಆದಿಪು.೧೦.೫೦)

    ಆದ್ದರಿಂದ ಭೋಗದಿಂದ ಪಡೆಯಲಾಗದ ಮುಕ್ತಿಯನ್ನು ದೊರಕಿಸಿಕೊಳ್ಳಲು ಇರುವ ಸಾಧ್ಯತೆಯೆಂದರೆ ಜೈನದೀಕ್ಷೆಯಂ ಕೊಂಡಡಿಗೆರಗಿಸುವೆಂ ಸಮಸ್ತ ಸುರಸಮುದಯಮಂ (ಆದಿಪು.೧೪.೧೨೭)ಎಂದು ಹೇಳಿದೆ. ಹೇಯಂ ಸಾಮ್ರಾಜ್ಯಮುಪಾದೇಯಂ ಪ್ರವ್ರಜ್ಯಂ (ಆದಿಪು.೧೬.೬೨) ಸಾಮ್ರಾಜ್ಯವು ಹೇಯವಾದುದು, ಸನ್ಯಸನವು ಸ್ವೀಕಾರ್ಯವಾದುದು ಎಂದು ಪರಿಭಾವಿಸಿ ಭರತನು ಮುಕ್ತಿಶ್ರೀಯನ್ನು ಬಯಸಿದನು. ಹೀಗೆ ಅಂತಿಮವಾಗಿ ಇಲ್ಲಿ ಬರುವ ಪಾತ್ರಗಳು ಲೌಕಿಕವನ್ನು ಕಳೆದುಕೊಂಡು ತಪಸ್ಸು ಮಾಡಿ ದೈವತ್ವಕ್ಕೆ ಏರುತ್ತವೆ; ಮುಕ್ತಿ ಹೊಂದುತ್ತವೆ.

    ಧರ್ಮದಂತೆಯೇ ಕಾವ್ಯವೂ ಓದುಗರಿಗೆ ಅರಿವನ್ನು ಮೂಡಿಸುತ್ತದೆ. ಆದ್ದರಿಂದ ಧರ್ಮ ಮತ್ತು ಕಾವ್ಯಧರ್ಮವನ್ನು ಸಮನ್ವಯಗೊಳಿಸಿದಂತಿದೆ. ತನ್ನ ಇಡೀ ಕೃತಿಯನ್ನು ಕಟ್ಟುವ ಸಂದರ್ಭದಲ್ಲಿ ಪಂಪ ನೀಡುವ ನಿಸರ್ಗ, ಪೂಜೆ, ವಿವಾಹ, ನರ್ತನ, ಉತ್ಸವ, ವೈರಾಗ್ಯ ಮುಂತಾದ ಚಿತ್ರಣಗಳು ಧರ್ಮದ ನೆಲೆಗಳನ್ನು ವಿಸ್ತರಿಸುತ್ತಾ ಹೋಗುತ್ತವೆ. ಧರ್ಮದ ಮುಖ್ಯ ಲಕ್ಷಣವೆಂದರೆ ಎಲ್ಲವನ್ನೂ ಒಳಗೊಂಡಿರುವುದು. ಹೀಗಾಗಿ ಜೈನಧರ್ಮವನ್ನು ಮೀರಿ ಮಾನವ ಧರ್ಮದ ಕಡೆಗೆ ಚಲಿಸುತ್ತಾನೆ. ಆದಿಪುರಾಣ, ಪುರಾಣ ಕಾವ್ಯವಾಗಿ ಧಾರ್ಮಿಕ ಮೌಲ್ಯಗಳನ್ನು ಅಚ್ಚುಕಟ್ಟಾಗಿ ನೆಲೆಗೊಳಿಸಲು ಯತ್ನಿಸುತ್ತದೆ. ಅದೇ ಹೊತ್ತಿನಲ್ಲಿ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳ ಚಿತ್ರಣ, ವ್ಯಕ್ತಿಯ ಅಂತರಂಗದ ಶೋಧನೆ, ಸಂಘರ್ಷದ ಸೂಕ್ಷ್ಮಗಳನ್ನು ತೆರೆಯುವುದರ ಮೂಲಕ ಪುರಾಣದ ಚೌಕಟ್ಟುಗಳನ್ನು ಮೀರಿ ನಿಲ್ಲುತ್ತದೆ.

    ಅಡಿಟಿಪ್ಪಣಿ :
    ೧. ಜೈನಧರ್ಮ ದರ್ಶನ : ಜಿ. ಹನುಮಂತರಾವ್, ಪು.೪, ಡಿವಿಕೆ ಮೂರ್ತಿ, ಮೈಸೂರು ೨೦೦೪
    ೨. ಪುರಾಣ : ಡಾ. ಕೆ. ಎಲ್. ಗೋಪಾಲಕೃಷ್ಣಯ್ಯ, ಪು. ೧೬, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೮

    ಸಂಕ್ಷೇಪ ಸೂಚಿ :
    ಆದಿಪು : ಆದಿಪುರಾಣಂ
    ಪಂಪಭಾ : ಪಂಪಭಾರತ
    ಪೂರ್ವಪು : ಪೂರ್ವಪುರಾಣ
    ಹಲಾಯು : ಅಭಿಧಾನ ರತ್ನಮಾಲಾ ಕರ್ಣಾಟಕ ಟೀಕೆ
    ಮಂಗರಾ : ಮಂಗರಾಜನ ಅಭಿನವಾಭಿಧಾನಂ
    ಪರಾಮರ್ಶನ ಗ್ರಂಥಗಳು :
    -ಪಂಪಮಹಾಕವಿ ವಿರಚಿತ ಆದಿಪುರಾಣಂ : ಗದ್ಯಾನುವಾದ ಶ್ರಿ ಕೆ.ಎಲ್. ನರಸಿಂಹಶಾಸ್ತ್ರಿ
    ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೦
    -ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ : ಡಾ. ಕೆ. ಎಲ್. ಗೋಪಾಲಕೃಷ್ಣಯ್ಯ,
    ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೭
    -ಮಹಾಪುರಾಣ : ಶ್ರಿ ಭಗವಜ್ಜಿನಸೇನಾಚಾರ್ಯ - ಗುಣಭದ್ರಾಚಾರ್ಯ, ಸಂಪುಟ ೧,
    ಸಂಪಾದಕರು ಮತ್ತು ಅನುವಾದಕರು: ಶ್ರೀಮಾನ್ ಎರ್ತೂರು ಶಾಂತಿರಾಜ ಶಾಸ್ತ್ರಿಗಳವರು
    ಪ್ರಕಾಶಕರು : ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ಬೆಂಗಳೂರು, ೧೯೯೨
    -ಜೈನ ಮಹಾಪುರಾಣ ಮತ್ತು ವೈದಿಕ ಪುರಾಣಗಳ ತೌಲನಿಕ ಅಧ್ಯಯನ : ಜಿ. ಬ್ರಹ್ಮಪ್ಪ
    ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು -೦೬, ೨೦೦೪
    -ಪಂಪ ಸಂಪುಟ
    (ಆದಿಪುರಾಣಂ, ವಿಕ್ರಮಾರ್ಜುನ ವಿಜಯಂ) : ಸಂ. ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ
    ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬
    -ಕನ್ನಡ ಸಾಹಿತ್ಯ ಪರಂಪರೆ ಮತ್ತು ಅಭಿವ್ಯಕ್ತಿ : ಸಂ. ಡಾ. ಎಸ್. ಡಿ. ಶೆಟ್ಟಿ,
    ಕನ್ನಡ ಸಂಘ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ದ.ಕ., ೨೦೦೬

    (ಪ್ರೊ. ಕೆ. ಇ. ರಾಧಾಕೃಷ್ಣ ಇವರು ಸಂಪಾದಿಸಿದ ಪಂಪಾಧ್ಯಯನ ಕೃತಿಯಲ್ಲಿ ಈ ಪ್ರಬಂಧ ಪ್ರಕಟವಾಗಿದೆ.)

    Read more...

    Tuesday, March 1, 2011

    0

    ನೆನಪಿನಂಗಳ - ಚೌಡಿಪುರಾಣ

  • Tuesday, March 1, 2011
  • ಡಾ.ಶ್ರೀಧರ ಎಚ್.ಜಿ.

  • ೧೯೬೩ ಜುಲೈ ೧೩ರಂದು ಶನಿವಾರ ಸಂಜೆ ೬.೨೦ರ ಹೊತ್ತಿಗೆ ಅಮ್ಮನ ತವರು ಮನೆ ಕಲ್ಮಕ್ಕಿಯಲ್ಲಿ ನಾನು ಈ ಜಗತ್ತಿಗೆ ಕಣ್ಣು ಬಿಟ್ಟೆ. ನಾನು ಹುಟ್ಟಿದ ಮೂರು ತಿಂಗಳಿಗೆ ಅಮ್ಮ ನನ್ನನ್ನು ಕಟ್ಟಿಕೊಂಡು ಮುಂಡಿಗೆ ಹಳ್ಳಕ್ಕೆ ಬಂದರು. ಗದ್ದೆಯ ಒಂದು ಬದಿಯಲ್ಲಿ ಅಡಿಕೆ ಗಿಡವನ್ನು ನೆಟ್ಟರು. ಮಳೆಗಾಲದಲ್ಲಿ ಭತ್ತ ಬೇಸಿಗೆಯಲ್ಲಿ ತರಕಾರಿ ಬೆಳೆದರು. ಬೆಲ್ಲ ತಯಾರಿಸಲು ಕಬ್ಬು ಬೆಳೆಯುತ್ತಿದ್ದರು. ಮಳೆಗಾಲದಲ್ಲಿ ಹಂದಿ ಬಂದು ಕಬ್ಬನ್ನು ನಾಶಮಾಡದಂತೆ ರಾತ್ರಿಯ ಕಾವಲು ಮಾಡಬೇಕಾಗಿತ್ತು. ಮನೆಕೆಲಸ, ಗದ್ದೆಯ ವ್ಯವಸಾಯದ ಕೆಲಸ ಎಂದು ಬಿಡುವಿಲ್ಲದ ದುಡಿಮೆಯ ದಿನಗಳವು. ಇಂತಹ ದಿನಗಳಲ್ಲಿ ಒಂದು ದಿನ ರಾತ್ರಿ ಗದ್ದೆಗೆ ದನಗಳು ಬಂದು ನಿಂತವು. ಬೆಳೆದ ಪೈರನ್ನು ತಿನ್ನತೊಡಗಿದವು. ಅಪ್ಪ ಹೇಳುವಂತೆ ಇಂತಹ ಸಂದರ್ಭದಲ್ಲಿ ’ ಗದ್ದೆಗೆ ದನ ಬಂದಿದೆ’ ಎಂದು ಚೌಡಿ ಬಂದು ಅಪ್ಪನನ್ನು ಎಬ್ಬಿಸುತ್ತಿತ್ತು.!

    ನಮ್ಮ ಊರಿಗೆ ೧೯೬೦ರ ದಶಕದಲ್ಲಿ ಕುಂದಾಪುರದ ಕಡೆಯಿಂದ ಶೆಟ್ಟಿ ಸಮುದಾಯದವರು ಕೂಲಿ ಕೆಲಸಕ್ಕೆಂದು ಬರುತ್ತಿದ್ದರು. ಇವರನ್ನು ಕರೆತರುಲು ಒಬ್ಬ ಸೇರೆಗಾರ ಇರುತ್ತಿದ್ದ. ಸೇರೆಗಾರ ಕಳಿಸಿದಲ್ಲಿಗೆ ಅವರು ಕೆಲಸಕ್ಕೆ ಹೋಗಬೇಕಿತ್ತು. ಇವರು ಕೆಲಸವಿರುವ ಕಡೆ ಹೋಗಿ ಗುತ್ತಿಗೆ ತೆಗೆದುಕೊಂಡು ಬರುತ್ತಿದ್ದರು. ಕೆಲವೊಮ್ಮೆ ದಿನಗೂಲಿಗೂ ತಮ್ಮ ಅಡಿಯಲ್ಲಿರುವ ಕೆಲಸದವರನ್ನು ಕಳಿಸುತ್ತಿದ್ದರು. ಹೀಗೆ ಬಂದ ಒಂದು ಕುಟುಂಬ ನಮ್ಮ ಮನೆಯ ಆಶ್ರಯಕ್ಕೆ ಬಂತು. ಲಕ್ಷ್ಮಣ ಮತ್ತು ಯಂಕಿ ಎಂದು ಅವರ ಹೆಸರು. ನಾನು ಸಣ್ಣವನಿದ್ದಾಗ ಇವರನ್ನು ನೋಡಿದ ನೆನಪಿದೆ. ಅವರು ನಮ್ಮ ಮನೆಯಿಂದ ತುಸು ದೂರದಲ್ಲಿ ಸಣ್ಣ ಸೋಗೆಯಿಂದ ಮಾಡಿದ ಮನೆಯಲ್ಲಿ ವಾಸಮಾಡುತ್ತಿದ್ದರು.

    ಅದು ಹೇಗೆ ಆಯಿತೋ ಗೊತ್ತಿಲ್ಲ. ಪ್ರತೀ ಸೋಮವಾರ ಚೌಡಿ ಯಂಕಿಯ ಮೈಮೇಲೆ ಆವೇಶವಾಗತೊಡಗಿತು. ಸುತ್ತಲಿನ ಊರುಗಳಿಗೆ ಸುದ್ದಿ ಹರಡಿತು. ಸೋಮವಾರ ಸಂಜೆ ನಮ್ಮ ಮನೆಯ ಅಂಗಳದಲ್ಲಿ ಜನ ಸೇರತೊಡಗಿತು. ಸಂಜೆಯಾಗುತ್ತಿದ್ದಂತೆ ಯಂಕಿ ತಣ್ಣೀರಿನಲ್ಲಿ ಸ್ನಾನ ಮಾಡಿ ನೇರವಾಗಿ ತುಳಸಿ ಕಟ್ಟೆಯ ಮುಂದೆ ಇರುತ್ತಿದ್ದ ಮಣೆಯ ಮೇಲೆ ಕೂರುತ್ತಿದ್ದಳು. ಇದಾಗಿ ಒಂದೆರಡು ಕ್ಷಣದಲ್ಲಿ ಆಕೆಗೆ ಆವೇಶವಾಗುತ್ತಿತ್ತು. ಅಲ್ಲಿಯೇ ಇದ್ದ ಮುಳ್ಳಿನ ಚಪ್ಪಲಿಯ ಮೇಲೆ ಕಾಲನ್ನಿಟ್ಟು ನಡೆಯುತ್ತಿದ್ದಳು. ಬಾರುಕೋಲಿನಿಂದ ಹೊಡೆದುಕೊಳ್ಳುತ್ತಿದ್ದಳು. ವಿಚಿತ್ರವಾಗಿ ಆರ್ಭಟಿಸುತ್ತಿದ್ದಳು. ಇದನ್ನು ನೋಡಿ ನನಗೆ ಮೊದಮೊದಲು ಭಯವಾಗುತ್ತಿತ್ತು.

    ಬಂದ ಜನರು ಚೌಡಿಯಲ್ಲಿ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿದ್ದರು. ದನ ಕಳೆದು ಹೋದದ್ದು, ಮೇಯಲು ಹೋದ ಎಮ್ಮೆ ಒಂದು ವಾರವಾದರೂ ಪತ್ತೆಯಾಗದ್ದು, ಕಳವಾದದ್ದು ಹೀಗೆ ಹತ್ತಾರು ಸಮಸ್ಯೆಗಳನ್ನು ಕೇಳಿ ಉತ್ತರ ಪಡೆದು ಹೋಗುತ್ತಿದ್ದರು. ಆಕೆಯ ಮೈಯಿಂದ ಚೌಡಿಯ ಆವೇಶ ಇಳಿದ ಮೇಲೆ ಯಂಕಿ ಮೊದಲಿನಂತೆಯೇ ಇರುತ್ತಿದ್ದಳು. ಯಂಕಿ ನಮ್ಮ ಊರು ಬಿಟ್ಟು ಹೋಗುವವರೆಗೂ ಇದು ಹೀಗೆಯೇ ನಡೆಯುತ್ತಿತ್ತು. ಕೊನೆಗೊಮ್ಮೆ ಯಂಕಿ ತನ್ನ ಸ್ವಂತ ಊರಿಗೆ ಹೋದಳು. ಅಲ್ಲಿಂದ ಮುಂದೆ ಚೌಡಿಯ ಕಥೆ ಮೌನಕ್ಕೆ ತಿರುಗಿತು. ಆದರೆ ನಮ್ಮಲ್ಲಿಗೆ ಬಂದ ಜೋಯಿಸರು ಚೌಡಿಯ ಇಲ್ಲಿಯೇ ಇದೆ. ಅದಕ್ಕೆ ಸರಿಯಾಗಿ ನಡೆದುಕೊಳ್ಳಿ. ನಿಮಗೆ ಒಳ್ಳೆಯದಾಗುತ್ತದೆ ಎಂದು ಅದರ ಇರುವಿಕೆಯ ಬಗೆಗೆ ನಿರಂತರವಾಗಿ ಹೇಳುತ್ತಿದ್ದರು. ಅಲ್ಲದೆ ನಮ್ಮ ಮನೆಯಲ್ಲಿ ಎಮ್ಮೆ ಅಥವಾ ಹಸು ಕರುಹಾಕಿದರೆ ಮೊದಲ ಹಾಲನ್ನು ಚೌಡಿಗೆ ಹಾಕುವ ಕ್ರಮ ಈಗಲೂ ಇದೆ. ದೀಪಾವಳಿ, ಯುಗಾದಿ ಮುಂತಾದ ವಿಶೇಷ ಸಂದರ್ಭದಲ್ಲಿ ಚೌಡಿಗೆ ಪ್ರಾರ್ಥನೆ ಸಲ್ಲಿಸಿ ಕೆಲಸವನ್ನು ಆರಂಭಿಸುವರು.
    ಅಪ್ಪನ ಅನುಭವಕ್ಕೆ ಬಂದ ಚೌಡಿಯ ಬಗೆಗೆ ಒಂದೆರಡು ಘಟನೆಯನ್ನು ಇಲ್ಲಿ ಹೇಳಬೇಕು.

    ಮನೆಯ ಹಿಂದುಗಡೆ ನಮ್ಮ ಬಚ್ಚಲು ಮನೆಯಿತ್ತು. ಅದಕ್ಕೆ ಬಾಗಿಲು ಇರಲಿಲ್ಲ. ಒಮ್ಮೆ ಕಳ್ಳರು ಬಂದು ಬಚ್ಚಲು ಮನೆಯಲ್ಲಿದ್ದ ನೀರು ಕಾಯಿಸುವ ಹಂಡೆಯನ್ನು ಒಯ್ದರು. ಆದರೆ ಅವರು ನಮ್ಮ ಮನೆಯ ಬೌಂಡರಿಯನ್ನು ದಾಟಲಿಲ್ಲ. ಚೌಡಿ ಅವರನ್ನು ಅಡ್ಡಗಟ್ಟಿತು. ಕಳ್ಳರು ಹಂಡೆಯನ್ನು ಅಲ್ಲಿಯೇ ಒಗೆದು ಓಡಿ ಹೋದರು. ಅಪ್ಪನಿಗೆ ಮರುದಿನ ಬೆಳಿಗ್ಗೆಯೇ ಈ ಸಂಗತಿ ಗೊತ್ತಾದದ್ದು.
    ನಮ್ಮ ತಂದೆಯವರು ಹಳೆ ಮನೆಯನ್ನು ಕೆಡಗಿ ಹೊಸ ಮನೆ ಕಟ್ಟುವಾಗ ಒಂದು ಘಟನೆ ನಡೆಯಿತು. ಮನೆಯ ಕೋಳಿನ ಮೇಲೆ ಕುಳಿತ ಕೆಲಸಗಾರನೊಬ್ಬ ಒಮ್ಮೆಲೆ ಆಯತಪ್ಪಿ ಬೀಳತೊಡಗಿದ. ಬೀಳುತ್ತಿದ್ದ ಆತನಿಗೆ ಒಂದು ಆಧಾರ ಸಿಕ್ಕಿ ನಡುವೆ ನೇತಾಡತೊಡಗಿದ. ಅನಂತರ ಆತನನ್ನು ಕೆಳಗೆ ಇಳಿಸಿದರು. ಆತ ಹೇಳೆದ ಪ್ರಕಾರ ಕೆಳಗೆ ಉರುಳುತ್ತಿದ್ದ. ಇದ್ದಕ್ಕಿದ್ದಂತೆ ಅವನನ್ನು ಯಾರೋ ಎತ್ತಿ ಹಿಡಿದಂತಾಯಿತು. ಆಗ ಅವನಿಗೆ ನೇತಾಡಲು ಒಂದು ತೊಲೆ ಸಿಕ್ಕಿತು.

    ನಮ್ಮ ಮನೆ ಈಗ ಇರುವ ಸ್ಥಳದಲ್ಲಿ ಯಾವಾಗಲೂ ಕುಡಿಯುವ ನೀರಿನ ಸಮಸ್ಯೆ. ಇಲ್ಲಿ ಬಾವಿ ತೆಗೆದರೂ ನೀರು ಸರಿಯಾಗಿ ಬರುತ್ತಿರಲಿಲ್ಲ. ನೀರುಬಂದರೂ ಬಾವಿ ಕುಸಿಯುತ್ತಿತ್ತು. ನೀರು ಚೆನ್ನಾಗಿರುತ್ತಿರಲಿಲ್ಲ. ಹೀಗೆ ಏನಾದರೂ ಒಂದು ಸಮಸ್ಯೆ. ಆದ್ದರಿಂದ ಗದ್ದೆಯ ನಡುವೆ ಹರಿಯುವ ಹೊಳೆಯಿಂದ ನಾವು ನೀರು ತರುತ್ತಿದ್ದವು. ನಿತ್ಯಯ ಬಳಕೆಗೆ ಬೇಕಾಗುವ ನೀರನ್ನು ಹೊಳೆಯಿಂದ ಹೊತ್ತು ತರಬೇಕಾಗಿತ್ತು. ೧೯೯೦ರ ಹೊತ್ತಿಗೆ ಗದ್ದೆಯಲ್ಲಿಯೇ ಒಂದು ಸಣ್ಣ ಬಾವಿಯನ್ನು ತೋಡಿ ಅಲ್ಲಿಂದ ಪಂಪಿನ ಮೂಲಕ ಮನೆಗೆ ನೀರಿನ ವ್ಯವಸ್ಥೆಯಾಗಿತ್ತು. ಆದರೆ ಕುಡಿಯಲು ಹೊಳೆಯ ನೀರು ಒಳ್ಳೆಯದಲ್ಲ. ಒಂದು ಬಾವಿ ಇದ್ದರೆ ಚೆನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಈಗ ಒಂದು ಹತ್ತು-ಹದಿನೈದು ವರ್ಷದ ಹಿಂದೆ ಜಲನೋಡುವ ವ್ಯಕ್ತಿಯೊಬ್ಬರು ನನ್ನ ತಮ್ಮನಿಗೆ ಪರಿಚಯವಾದರು. ಅವರನ್ನು ಬಾವಿಯ ಜಲನೋಡಲೆಂದು ಮನೆಗೆ ಕರೆದುಕೊಂಡು ಬಂದು ಪ್ರಾಥಮಿಕ ಉಪಚಾರವನ್ನು ಮಾಡಿದರು. ವ್ಯಕ್ತಿ ಪರ ಊರಿನವನು. ನಮ್ಮ ಮನೆಯ ಪರಿಸರಕ್ಕೆ ಬಂದದ್ದು ಇದೇ ಮೊದಲು. ಅನಂತರ ಆತ ಜಲನೋಡಲು ಹೊರಟು ನಿಂತ. ಆದರೆ ಹೊಸಿಲು ದಾಟದೆ ಅಲ್ಲಿಯೇ ನಿಂತ. ಒಂದು ತೆಂಗಿನ ಕಾಯಿ ಕೊಡಿ ಎಂದು ಕೇಳಿದ. ಕಾಯನ್ನು ತಂದು ಕೊಟ್ಟರು. ಕಾಯನ್ನು ಕೈಯ್ಯಲ್ಲಿ ಹಿಡಿದು ಪ್ರಾರ್ಥನೆ ಮಾಡಿದ. ನೇರವಾಗಿ ಮನೆಯ ಹಿಂಭಾಗಕ್ಕೆ ಹೋಗಿ ಒಂದು ಸ್ಥಳವನ್ನು ತೋರಿಸಿ ಇಲ್ಲಿ ಬಾವಿಯನ್ನು ತೋಡಬಹುದು ಎಂದುಬಿಟ್ಟ. ಮನೆಯವರಿಗೆಲ್ಲ ಆಶ್ಚರ್ಯ. ಮತ್ತೆ ಆತನೇ ಹೇಳಿದನಂತೆ. ನಿಮ್ಮ ಮನೆಯ ಆವರಣದಲ್ಲಿ ಒಂದು ಚೌಡಿ ಇದೆ. ನಾನು ಜಲ ನೋಡಲೆಂದು ಹೊರಟಾಗ ಅದೇ ನನ್ನನ್ನು ತಡೆದು ನಿಲ್ಲಿಸಿತು. ತೆಂಗಿನ ಕಾಯಿ ನೀಡಿ ಪ್ರಾರ್ಥನೆ ಮಾಡಿದ ಬಳಿಕ ನನ್ನನ್ನು ಅದೇ ಈ ಸ್ಥಳಕ್ಕೆ ಕರೆದುಕೊಂಡು ಬಂದು ನಿಲ್ಲಿಸಿದೆ. ಇಲ್ಲಿಯೇ ಬಾವಿಯನ್ನು ತೋಡಿ. ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಹೊರಟು ಹೋದ. ಅದರಂತೆ ತೆರೆದ ಬಾವಿಯನ್ನು ತೋಡಿದರು. ನೀರು ಸಾಕಷ್ಟಿದೆ. ಇಲ್ಲಿಯವರೆಗೆ ಬಾವಿಯಲ್ಲಿ ನೀರು ಖಾಲಿಯಾಗಿಲ್ಲ. ಈ ಘಟನೆ ನಮಗೆ ಈಗಲೂ ಒಂದು ಬಿಡಿಸಲಾಗದ ಒಗಟಾಗಿಯೇ ಉಳಿದಿದೆ.
    Read more...
    0

    ಆದಿಪುರಾಣ - 3

  • ಡಾ.ಶ್ರೀಧರ ಎಚ್.ಜಿ.
  • ಆದಿಪುರಾಣವನ್ನು ಇಡಿಯಾಗಿ ಗಮನಿಸಿದರೆ ಪೂರ್ಣತೆಯ ಕಡೆಗೆ ಹೊರಟ ಆತ್ಮವೊಂದು ತನಗಂಟಿದ ಕರ್ಮಬಂಧನಗಳನ್ನು ಕಳೆದುಕೊಳ್ಳುತ್ತ ಹೋಗುವ ದೀರ್ಘ ಯಾತ್ರೆ ಇಲ್ಲಿದೆ. ಆದರೆ ಪಂಪನಂತಹ ಕವಿ ಬದುಕಿನ ಬಗೆಗೆ ಏಕಮುಖಿಯಾಗಿ ಚಿಂತಿಸಲಾರ. ಆತನ ತುಡಿತ, ಒಳದನಿ ಬೇರೆಯದೇ ಆಗಿದೆ. ಭೋಗಜೀವನ, ಯುದ್ಧವನ್ನು ಪಂಪ ವೈಭವೀಕರಿಸಿದ್ದರೂ ಕೃತಿ ಅಂತಿಮವಾಗಿ ವಿಷಾಧ ಭಾವದ ಕಡೆಗೆ ಹೊರಳಿಬಿಡುತ್ತದೆ. ಧರ್ಮದಲ್ಲಿ ನೆಲೆಯಾಗುತ್ತದೆ. ಇಲ್ಲಿನ ಪಾತ್ರಗಳು ಅಂತಿಮವಾಗಿ ಮಾನವ ಧರ್ಮದ ಕಡೆಗೆ ಚಲಿಸುತ್ತವೆ. ಆದ್ದರಿಂದ ಆದಿಪುರಾಣದಲ್ಲಿ ಧರ್ಮ ಮತ್ತು ಕಾವ್ಯಧರ್ಮದ ಸಮನ್ವಯದ ಬಗೆಗಿನ ಪಂಪನ ನಿಲುವಿನಲ್ಲಿ ಭಿನ್ನ ಸಾಧ್ಯತೆಯ ಎಳೆಯೊಂದು ಹೊಳೆಯುತ್ತದೆ. ಕೃತಿಯ ಪ್ರಬಂಧ ಧ್ವನಿ ಧರ್ಮವೇ ಕಾವ್ಯದ ಕಥಾನಾಯಕ ಎಂಬಂತಿದೆ. ಮಾನವ ಸಂಬಂಧಗಳ ವಿವಿಧ ನೆಲೆಗಳನ್ನು ಶೋಧಿಸಿ ಅಂತಿಮವಾಗಿ ’ಅರಿವಂ ಪೊಸಯಿಸುವುದು ಧರ್ಮ’ ಎಂಬ ನಿಲುವಿಗೆ ಕವಿ ತಲುಪುತ್ತಾನೆ. ಹೀಗಾಗಿ ಆತನಿಗೆ ಅರಿವನ್ನು ಬೆಳಗಿಸುವ ಧರ್ಮವೇ ಮುಖ್ಯ. ಹೀಗಾಗಿ ಅರಿವಿನಲ್ಲಿ ಮೂಡಿದ ತಿಳಿವನ್ನು ವ್ಯಕ್ತಪಡಿಸಲು ಕವಿಗೆ ಜೈನಧರ್ಮ ಒಂದು ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಕೆಯಾಗಿದೆ.

    ಪಂಪನ ನಿಲುವಿನಲ್ಲಿ ಲೋಕದೃಷ್ಟಿ ಕೆಡದೆ ಧರ್ಮ ಸಂತತಿ ನಿಲ್ಲಬೇಕು. ಅವಸರ್ಪಿಣಿ ಕಾಲದಲ್ಲಿ ಹುಟ್ಟಿದ ಪಂಪನ ಕೃತಿ ನಿರ್ದಿಷ್ಟ ಮೌಲ್ಯಗಳ ಕಡೆಗೆ ಚಲಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಸಮಾಜವು ನೀತಿಯ ಕಡೆಗೆ ಗಮನ ಕೊಡದೆ ವೈಭವ, ಭೋಗಜೀವನದ ಕಡೆಗೆ ಸಮಾಜ ಹೋಗುತ್ತಿದೆಯೆಂಬ ಆತಂಕ ಕೃತಿಯ ಹಿಂದಿರುವಂತಿದೆ. ಆದ್ದರಿಂದ ಧರ್ಮವನ್ನು ಸ್ಥಿರಗೊಳಿಸಬೇಕೆಂಬ ಅಪೇಕ್ಷೆ, ಆದರ್ಶ ಇಲ್ಲಿನದು. ಸೃಷ್ಟಿಯು ಕೆಟ್ಟು ಪೋಗದೇ (ಆದಿಪು ೮.೧೧) ಎಂಬ ಮಾತಿನ ಹಿನ್ನೆಲೆಯಲ್ಲಿ ಈ ಬಗೆಯ ಆತಂಕವಿರುವಂತಿದೆ. ಜೀವ ಸಂಕುಲದ ಬದುಕು ಸಹಜವಾಗಿ ಮುನ್ನಡೆಯಬೇಕು ಎಂಬ ಅಕಾಂಕ್ಷೆ ಕವಿಯದು. ಇದಕ್ಕೆ ಆಡಳಿತ ವರ್ಗದ ನೈತಿಕನೆಲೆ ಸರಿಯಾಗಿರಬೇಕು. ವ್ಯಕ್ತಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ತಿಳಿದು ಮುನ್ನಡೆಯಬೇಕು. ಅದೇ ಧರ್ಮ ಎಂಬ ನಿಲುವು ಕೃತಿಯಲ್ಲಿ ಅಲ್ಲಲ್ಲಿ ಮೂಡಿ ಬಂದಿದೆ. ಇದಕ್ಕೆ ಎರಡು ಮಾದರಿಗಳನ್ನು ಕವಿ ನೀಡುತ್ತಾನೆ. ಇವೆರಡೂ ಸರಿಯಾಗಿ ನಡೆಯಬೇಕು. ಅದಾಗದಿದ್ದರೆ ಸೃಷ್ಠಿಯು ಕೆಟ್ಟು ಹೋಗುವುದು. ಈ ಬಗೆಯ ಎರಡೂ ಅತಿಗಳು ನಡೆಯದಂತೆ ತಡೆಯುವುದು ಅತ್ಯಂತ ಮುಖ್ಯ. ಅದೇ ಧರ್ಮ. ಮಾದರಿ ಒಂದು :
    ವ್ಯಕ್ತಿ ಭೋಗವನ್ನು ಅನುಭವಿಸಿ ತಮ್ಮ ಉತ್ತರಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿ ತಪಸ್ಸಿಗೆ ಹೋಗಬೇಕು. ಇದಕ್ಕೆ ವಜ್ರದಂತ ಅಮಿತ ತೇಜನಿಗೆ ಹೇಳುವ ಮಾತುಗಳನ್ನು ಗಮನಿಸಬಹುದು.

    ನೀನೆಮ್ಮಂ ಮೀರದೆ ರಾ
    ಜ್ಯಾನುಷ್ಠಾನಮನೊಡಂಬಡೀಗಳ್ ನಿಜಸಂ
    ತಾನಕ್ಕೆ ಮಗಂಬಡೆಯೆ ತ
    ಪೋನಿಯಮಂ ಮಗನೆ ಕಡೆಯೊಳಿರ್ದಪುದಲ್ತೇ (ಆದಿಪು ೪.೮೦)

    ನೀನು ನಮ್ಮ ಮಾತನ್ನು ಮೀರದೆ ರಾಜ್ಯಭಾರವನ್ನು ಮಾಡು. ನಿನಗೆ ಮಗನು ಹುಟ್ಟಿ ಅವನು ಬೆಳೆಯಲಿ ಮಗನೆ ! ತಪೋನುಷ್ಠನಕ್ಕಾಗಿ ಕಾಡಿಗೆ ಹೋಗುವುದು ಕಡೆಯಲ್ಲಿದ್ದೇ ಇದೆ. ಇಲ್ಲಿ ನಿಚ್ಚಳವಾಗಿ ವೈದಿಕ ಸಂಸ್ಕೃತಿಯ ನೆರಳು ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು. ಅಮಿತತೇಜ ಇಲ್ಲಿ ಭೋಗವನ್ನು ಮಾತ್ರವಲ್ಲ, ಕರ್ತವ್ಯವನ್ನೂ ನಿರಾಕರಿಸುತ್ತಿದ್ದಾನೆ. ಹೀಗಾದರೆ ರಾಜ್ಯ ಅರಾಜಕವಾಗುವ ಸ್ಥಿತಿ ಬರುತ್ತದೆ. ಆದ್ದರಿಂದ ವೈರಾಗ್ಯವೆಂದರೆ ವ್ಯಕ್ತಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಲ್ಲ. ಈ ಹಿನ್ನೆಲೆಯಲ್ಲಿ

    ಶಾಂತಾತ್ಮ ಮದುವೆ ನಿಲ್ ನೀ
    ನಿಂತೆನ್ನ ಗೃಹಸ್ಥಧರ್ಮದಿಂದಂ ನೀನೆಂ
    ತಂತೆ ಸಲೆ ನೆಗಳೆ ಜಗತೀ
    ಸಂತತಿ ನಿಲೆ ನಿನ್ನ ಧರ್ಮ ಸಂತತಿ ನಿಲ್ಕುಂ(ಆದಿಪು ೮.೧೩)

    ಶಾತಾತ್ಮ, ಮದುವೆಯಾಗು. ನನ್ನಂತೆಯೇ ನೀನು ಗೃಹಸ್ಥ ಧರ್ಮವನ್ನು ಪರಿಗ್ರಹಿಸಿದರೆ ಜಗತ್ತಿಗೂ ಸಂತತಿಯು ನಿಲ್ಲುವುದು. ನಿನಗೂ ಧರ್ಮ ಸಂತತಿಯು ನಿಲ್ಲುವುದು ಎಂಬ ಮಾತಿಗೆ ವಿಶೇಷ ಅರ್ಥ ಬರುತ್ತದೆ. ಇದನ್ನು ವ್ಯಕ್ತಿ ಪಾಲನೆ ಮಾಡದಿದ್ದರೆ ಅಧರ್ಮ ಸಂತತಿಯೊಂದು ಮೊಳಕೆಯೊಡೆಯುತ್ತದೆ ಎಂಬ ಆತಂಕ ಇಲ್ಲಿ ವ್ಯಕ್ತವಾಗಿದೆ. ಕವಿ ನೀಡುವ ಈ ಬಗೆಯ ಮಾದರಿಗೆ ವ್ಯತಿರಿಕ್ತ ಮಾದರಿಯೂ ಆದಿಪುರಾಣದಲ್ಲಿದೆ. ಹೀಗಾಗಿ ವಿಭಿನ್ನ ಆಯಾಮಗಳಲ್ಲಿ ಬದುಕಿನ ಶೋಧನೆಯನ್ನು ಕವಿ ನಡೆಸಿರುವುದನ್ನು ಎರಡನೆಯ ಮಾದರಿಯಲ್ಲಿ ನೋಡಬಹುದು. ಮಾದರಿ ಎರಡು :
    ವ್ಯಕ್ತಿ ಭೋಗವನ್ನು ಅನುಭವಿಸಿದ ಅನಂತರ ಸದಾಕಾಲ ಭೋಗದ ಬದುಕಿಗೆ ಅಂಟಿಕೊಂಡಿರಬಾರದು.
    ಮಹಾಬಲನಿಗೆ ಸಾಕಷ್ಟು ವಯಸ್ಸಾಗಿದೆ. ಆದರೂ ಭೋಗಕ್ಕೆ ಅಂಟಿಕೊಂಡು ನರಳುತ್ತಿರುವ ಚಿತ್ರವನ್ನು ಇಲ್ಲಿ ಗಮನಿಸಬಹುದು.
    ಮುಸುಮುತ್ತಂತೆ ತೆರಳ್ದ ತನ್ನ ಮೊಗಮಂ ಕಂಡಳ್ಕನೋ ಕೂಡೆ ಜೋ
    ಲ್ದು ಸಡಿಲ್ದಿರ್ದೊಡಲಳ್ಳೆ ಜೊಳ್ಳೆತನಮಂ ಮೇಣ್ಕಾಣನೋ ಸಂತತ
    ವ್ಯಸನೋದ್ರೇಕದ ಕುಂದನೇನೊಣರನೋ ಶಕ್ತಿ ಕ್ಷಯಂಗಾಣನೋ
    ಬಿಸುಡಂ ಮುನ್ನಿನ ತನ್ನ ಲಂಪಳಿಕೆಯಂ ಮತ್ತಂ ಜರಾಜರ್ಜರಂ (ಆದಿಪು ೨.೪೫)

    ನನ್ನ ರಾಜನು ಕೋಡಗದಂತೆ ಮುದಿಯಾಗಿ ಮುದ್ದೆಯಾದ ತನ್ನ ಮುಖವನ್ನು ಕಂಡು ಅಳುಕನಲ್ಲ. ಜೋತುಬಿದ್ದ ಒಡಲಳ್ಳೆಗಳ ಜೊಳ್ಳುತನವನ್ನು ಗಮನಿಸನೆ ! ವ್ಯಸನೋದ್ರೇಕದಿಂದ ಕುಂದನೇನನ್ನೂ ಕಾಣನೇ. ಶಕ್ತಿ ಕ್ಷಯವನ್ನನುಭವಿಸನೆ! ಮುಪ್ಪಿನಿಂದ ತರತರನೆ ಕಂಪಿಸುತ್ತಿದ್ದರೂ ಲಂಪಟತೆಯನ್ನು ಮಾತ್ರ ಬಿಸುಡನು ಇಂದು ಮಹಾಬಲನ ಬಗೆಗೆ ಸ್ವಯಂಬುದ್ಧನು ಹೀಗೆ ಆಲೋಚಿಸುವುದು ಆತನ ಭೋಗಾಸಕ್ತಿಯ ಟೀಕೆಯಾಗುತ್ತದೆ. ಈ ಬಗೆಯ ವಿವರಗಳು ಜಿನಸೇನರ ಕೃತಿಯಲ್ಲಿಲ್ಲ ಎಂಬುದು ಗಮನೀಯ ಅಂಶ. ಪಂಪ ಉದ್ದೇಶ ಪೂರ್ವಕವಾಗಿ ಈ ಬಗೆಯ ಮಾತುಗಳನ್ನು ಸೇರಿಸುವುದರ ಹಿಂದೆ ನಿರ್ದಿಷ್ಟ ಕಾರಣವಿರಬೇಕು. ವಯಸ್ಸಾದರೂ ಅಧಿಕಾರಲಾಲಸೆ, ಭೋಗಕ್ಕೆ ಅಂಟಿ ಕುಳಿತ ರಾಜತ್ವದ ಬಗೆಗೆ ಕವಿಗಿರುವ ತಿರಸ್ಕಾರ ಇಲ್ಲಿ ಮೂಡಿದಂತಿದೆ. ಹೀಗಾಗಿ ಇದು ಭೋಗಜೀವನದಲ್ಲಿ ಮುಳುಗಿದ ಸಮಕಾಲೀನ ಪ್ರಭುತ್ವದ ವಿಡಂಬನೆಯೂ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಪಂಪನ ಧರ್ಮದ ಅಮೃತಧಾರೆ ಹನಿಹನಿಯಾಗಿ ಹಿತವಾಗಿ ಒಸರುತ್ತದೆ. ನಿನ್ನ ಮುನ್ನಿನ ಚರಿತಂಗಳಂ ನೆನೆಯದಿರ್ ನೆನೆ ಜೈನಪದಾಂಬುಜಂಗಳಂ (ಆದಿಪು ೨.೪೬) ಶರಣಂ ಜಿನೇಂದ್ರ ಚರಣಂ ವಿದ್ಯಾಧರಾಧೀಶ್ವರ ಜಿನೇಂದ್ರ ಚರಣವೇ ನಿನಗೆ ಶರಣು (ಆದಿಪು ೨.೪೮) ಧರ್ಮಕ್ಕಿಂತ ಬೇರಾವ ಶರಣಿಲ(ಆದಿಪು.೩.೬) ಎಂಬ ಸಾಂತ್ವನದ ಮಾತುಗಳು ಹಿತವಾಗಿ ಮೂಡಿಬರುತ್ತವೆ. ಈ ಬಗೆಯ ಚಿತ್ರಗಳನ್ನು ನೀಡುತ್ತಲೇ ಆದಿಪುರಾಣ ಭಿನ್ನರೀತಿಯ ಪುರಾಣವಾಗಿ ನಿಲ್ಲುತ್ತದೆ. ಹಾಗೆಯೇ ಲೌಕಿಕದ ನೆಲೆಯಿಂದ ಕಾವ್ಯ ಧರ್ಮದ ನೆಲೆಗೆ ಸದ್ದಿಲ್ಲದೆ ಜಾರುತ್ತದೆ.

    ವೈರಾಗ್ಯಕ್ಕೆ ಕಾರಣವಾಗುವ ಅಂಶಗಳು ಕಾವ್ಯದಲ್ಲಿ ಒಂದೇ ತೆರನಾಗಿಲ್ಲ. ಕೆನ್ನೆಮೇಲೆ ನೆರಿಗೆ ಮೂಡುವುದು, ನೋಡುತ್ತಿರುವಂತೆಯೇ ಮೋಡ ಕರಗುವುದು, ಮಧುವನ್ನು ಹೀರಲೆಂದು ಹೂವನ್ನರಸಿ ಬಂದ ದುಂಬಿ ಸಾಯುವುದು, ಚೈತನ್ಯದ ಚಿಲುಮೆಯಾಗಿದ್ದ ನೀಲಾಂಜನೆ ರಂಗದಲ್ಲಿಯೇ ಅದೃಶ್ಯಳಾಗುವುದು, ಬಾಹುಬಲಿಗೆ ಗೆಲುವಿನ ತುದಿಯಲ್ಲಿ ವೈರಾಗ್ಯ ಬರುವುದನ್ನು ಗಮನಿಸಬಹುದು. ವೈದಿಕ ಸಂಸ್ಕೃತಿಯಲ್ಲಿ ಬದುಕಿನ ಕೊನೆಯಲ್ಲಿ ವಾನಪ್ರಸ್ಥಕ್ಕೆ ಹೋಗುವ ಏಕಾಕೃತಿಯನ್ನು ಕವಿ ಇಲ್ಲಿ ನಿರಾಕರಿಸುತ್ತಾನೆ ; ಖಚಿತ ಮಾದರಿಯನ್ನು ಭಗ್ನಗೊಳಿಸುತ್ತಾನೆ. ನೀಲಾಂಜನೆಯ ಪಾತ್ರದ ನಿರ್ಗಮನ ಜೀವನದ ನಶ್ವರತೆಯ ಅರಿವನ್ನು ಮೂಡಿಸಿತು. ಆಗಲೇ ಪುರುದೇವ ಭೋಗದ ಬದುಕಿನಿಂದ ನಿರ್ಗಮಿಸಬೇಕೆಂದು ನಿಶ್ಚಯಿಸಿದನು. ಜಿನಸೇನರಲ್ಲಿ ಅತ್ಯಂತ ಸರಳವಾಗಿ ಬಂದಿರುವ ನೀಲಾಂಜನೆಯ ನೃತ್ಯದ ಸಂದರ್ಭವು ಪಂಪನಲ್ಲಿ ಅಪೂರ್ವ ರೀತಿಯಲ್ಲಿ ಒಡಮೂಡಿರುವುದನ್ನು ಹಲವರು ಗುರುತಿಸಿದ್ದಾರೆ. ಈ ಸಂದರ್ಭ ಪಂಪನ ಪ್ರತಿಭೆಗೆ ಹಿಡಿದ ಕನ್ನಡಿ. ಜಿನಸೇನರನ್ನು ಅನುಸರಿಸಿಯೂ ಅವರನ್ನು ಮೀರುವ ಕವಿಪ್ರತಿಭೆ, ದೇಸೀ ಬದುಕಿನ ವಿವರಗಳನ್ನು ಪುರಾಣದೊಳಗೆ ಸಮನ್ವಯಗೊಳಿಸಿದ ರೀತಿ ಅಪೂರ್ವವಾಗಿದೆ. ಅರಮನೆ, ಆಸ್ಥಾನ, ವೈಭವ, ಭೋಗದ ಬದುಕು ಒಮ್ಮೆಲೆ ನಶ್ವರವಾಗಿ ಕಳಚಿ ಬೀಳುವ ಚಿತ್ರ ಇಲ್ಲಿದೆ. ತನ್ನ ಸಮಕಾಲೀನ ಪ್ರಭುತ್ವ ಅಳವಡಿಸಿಕೊಂಡ ಭೋಗಜೀವನಕ್ಕೆ ಕವಿಪ್ರತಿಭೆ ತೋರುವ ಪ್ರತಿಕ್ರಿಯೆ ಇದಾಗಿರಬಹುದೇ ಎಂಬ ಸಂಶಯ ಕಾಡುತ್ತದೆ.

    ಜಿನಸೇನರಲ್ಲಿ ಯೌವ್ವನವು, ವನದಲ್ಲಿರುವ ಲತೆಗಳ ಪುಷ್ಪದಂತೆ ನಾಶ ಸ್ವಭಾವವಾದುದು. ಭೋಗಸಂಪತ್ತುಗಳು ವಿಷದ ಬಳ್ಳಿಗೆ ಸಮಾನವಾದುವು. ಜೀವನವು ನಾಶ ಸ್ವಭಾವವುಳ್ಳುದು. ನಿಸ್ಸಾರವಾದ ಸಂಸಾರದಲ್ಲಿ ಸುಖದ ಲೇಶವು ದುರ್ಲಭವಾಗಿದೆ. ದು:ಖವೇ ಅಧಿಕವಾಗಿದೆ. ಅಂತಹ ಸಂಸಾರದಲ್ಲಿ ಅಜ್ಞಾನಿಯು ಸುಖವನ್ನಿಚ್ಚಿಸುತ್ತಾನೆ. (ಪೂರ್ವಪು.೧೭-೧೫,೧೭)

    ನಾರೀ ರೂಪಮಯಂ ಯಂತ್ರಮಿದಮತ್ಯಂತ ಪೇಲವಮ್
    ಪಶ್ಯತಾಮೇವ ನ: ಸಾಕ್ಷತ್ಕಥಮೇತದಗಾಲ್ಲಯಮ್ (ಪೂರ್ವಪು.೧೭.೩೬)

    ಹೊರಗೆ ಪ್ರಕಾಶಮಾನವಾದ ಈ ಸ್ತ್ರೀರೂಪವು ರಮಣೀಯವಾದುದೆಂದು ತಿಳಿದು ಕಾಮುಕರು ದೀಪದಲ್ಲಿ ಪತಂಗಗಳು ಬಿದ್ದು ನಾಶವಾಗುವಂತೆ ಆ ಸ್ತ್ರೀರೂಪದಲ್ಲಿ ಬಿದ್ದು ನಾಶವಾಗುತ್ತಾರೆ (ಪೂರ್ವಪು.೧೭.೩೭) ಎಂಬ ರೀತಿಯ ವಿವರಗಳು ಪೂರ್ವಪುರಾಣದಲ್ಲಿದೆ. ಪಂಪ ಇದನ್ನು ಮರುನಿರೂಪಿಸುವ ರೀತಿ ಹೊಸತನದಿಂದ ಕೂಡಿದೆ. ಕಣ್ಣೆದುರೇ ಮೃತ್ಯು ಸಂಭವಿಸಿದ್ದನ್ನು ನೋಡಿದಾಗ ಆದಿದೇವನಿಗಾದ ವಿಸ್ಮಯ, ತಲ್ಲಣಗಳು ಮೋಕ್ಷಗಾಮಿಯಾದ ಎಲ್ಲ ಜೀವಿಗಳೂ ಅನುಭವಿಸುವಂಥದ್ದೇ ಆಗಿದೆ.

    ದೇಹಾನಿತ್ಯತೆಗಿಂತು ನಾಡೆ ಚೋದ್ಯಂಬಟ್ಟಂ (ಆದಿಪು.೮.೪೩)
    ನಾರೀರೂಪದ ಯಂತ್ರಂ
    ಚಾರುತರಂ ನೋಡೆ ನೋಡೆ ಕರಗಿದುದೀ ಸಂ
    ಸಂಸಾರದನಿತ್ಯತೆ ಮನದೊಳ್
    ಬೇರೂರಿದುದೀಗಳೆಂತಿದಂ ಕಡೆಗಣಿಪೆಂ (ಆದಿಪು. ೯.೪೪)
    ಸಂಸೃತಿ ನಾಟಕಮುಮನೆನಗೆ ನೆರೆಯೆ ತೋರಿದಳೀಗಳ್ (ಆದಿಪು. ೯.೪೫)

    ದೇಹಕ್ಕೆ ವಸ್ತ್ರಾಭರಣಗಳೇ ಹೊರೆ. ಸುಗಂಧಾದಿ ದ್ರವ್ಯಗಳನ್ನು ಹಚ್ಚಿಕೊಳ್ಳುವುದೇ ಮಲ. ಗೀತವು ಗೋಳಾಟ. ನೃತ್ಯವೂ ನಗೆಯೂ ನಿಶ್ಚಯವಾಗಿ ಹುಚ್ಚರಾಟ. ಇವುಗಳೊಂದರಲ್ಲಿಯೂ ಹುರುಳಿಲ್ಲ(ಆದಿಪು. ೯.೫೫) ಎಂಬ ಮಾತುಗಳು ಸ್ವತ: ಅನುಭವಜನ್ಯವಾದವು. ಎರವಲಾಗಿ ಬಂದ ಉಪದೇಶವಲ್ಲ. ಈ ಬಗೆಯ ಆತ್ಮಾವಲೋಕನವೇ ಮನುಷ್ಯನ ವ್ಯಕ್ತಿತ್ವದ ಪರಿವರ್ತನೆಗೆ ಕಾರಣವಾಗಬಲ್ಲದು. ಇದಕ್ಕೆ ಜಯವರ್ಮನಿಂದ ಆದಿನಾಥನವರೆಗಿನ ಎಲ್ಲ ಹಂತಗಳಲ್ಲಿಯೂ ಅನುಭವದ ಹಿನ್ನೆಲೆಯಿದೆ. ಆತ್ಮದ ಮಾಗುವಿಕೆಯ ಚಿತ್ರವಿದೆ. ತೀರ್ಥಂಕರ ಸ್ಥಿತಿಯ ಪಕ್ವತೆ ಅಂತಿಮ ಸತ್ಯ. ಆದಿನಾಥನ ಅನಂತರವೂ ಭರತ, ಬಾಹುಬಲಿಯರಲ್ಲಿ ಈ ಕ್ರಿಯೆ ಮುಂದುವರಿಯುತ್ತದೆ. ಇಲ್ಲಿನ ಪಾತ್ರಗಳು ಸ್ವಯಮಾನುಭವಗಳನ್ನು ಪಡೆಯುವುದರ ಮೂಲಕ ಜೀವಂತಿಕೆಯನ್ನು ಪಡೆಯುತ್ತವೆ. ಆದ್ದರಿಂದ ಇದರ ತೀವ್ರತೆ ಹೆಚ್ಚು. ಇದುವರೆಗೆ ಭೋಗದಲ್ಲಿಯೇ ಮುಳುಗಿದ್ದ ಜೀವವೊಂದು ಈ ಬಗೆಯ ಬದುಕನ್ನು ನಿಜವೆಂದೇ ಭ್ರಮಿಸಿತ್ತು. ಆದರೆ ಶಾಶ್ವತವೆಂದು ನಂಬಿದ್ದೆಲ್ಲವೂ ಒಮ್ಮೆಲೆ ಅಪ್ರಸ್ತುತವಾಗಿ ನಿಂತ ನೆಲವೇ ಕುಸಿದು ಬಿಡುತ್ತದೆ. ತನ್ನ ಮಕ್ಕಳಿಗೆ ರಾಜ್ಯವನ್ನು ಹಂಚಿಕೊಟ್ಟು ಆಧ್ಯಾತ್ಮಿಕ ಬದುಕಿನ ಕಡೆಗೆ ಆದಿದೇವ ಹೊರಳುವನು. ಭೋಗದ ಬದುಕಿನಿಂದ ನಿರ್ಗಮಿಸುವ ನಿರ್ಧಾರವನ್ನು ಸ್ವತ: ಕೈಗೊಳ್ಳುವನು. ಮನುಷ್ಯ ತನ್ನ ಪಾತ್ರದ ಅಂತ್ಯವನ್ನು ತಾನೇ ನಿರ್ಧರಿಸುವ ಹಂತಕ್ಕೆ ಏರಬೇಕೆಂಬ ಸೂಚನೆ ಇಲ್ಲಿರುವಂತಿದೆ. ವಿಕ್ರಮಾರ್ಜುನ ವಿಜಯದಲ್ಲಿ ಭೀಷ್ಮನ ಪಾತ್ರ ಬಹುತೇಕ ಈ ಬಗೆಯ ಪಾತ್ರಕ್ಕೆ ಮಾದರಿಯಾಗಬಲ್ಲದು.

    ಆದಿಪುರಾಣ, ಜೈನಧರ್ಮದ ಚೌಕಟ್ಟಿನಲ್ಲಿ ಮಾನವಧರ್ಮವನ್ನು ಹೇಳುವ ಕೃತಿ. ಹೀಗಾಗಿ ಅಧರ್ಮಿಗಳು ಹಾಗೂ ಬದುಕಿನಲ್ಲಿ ನಿರಾಕರಣೀಯ ಮಾದರಿಗಳನ್ನು ಅಳವಡಿಸಿಕೊಂಡವರು ಅನುಭವಿಸಬೇಕಾದ ಶಿಕ್ಷೆಯ ಸ್ವರೂಪವನ್ನು ಕವಿ ವಿವರಿಸಿ ಭಯವನ್ನು ಮೂಡಿಸಿದ್ದಾನೆ.(ಆದಿಪು ೫.೮೧) ವ್ಯಕ್ತಿಯ ಬದುಕಿನಲ್ಲಿ ಸಂಸಾರ ಮತ್ತು ವೈರಾಗ್ಯ ಬದುಕಿನ ಎರಡು ಮುಖ್ಯ ಘಟ್ಟಗಳು. ಇದನ್ನು ಕವಿ ಯೌವನವನಕ್ರೀಡಾ ವಿಲಾಸ ಮತ್ತು ತಪೋವನ ಕ್ರೀಡಾಸುಖ (ಆದಿಪು ೨.೪೭) ಎಂದು ಗುರುತಿಸಿದ್ದಾನೆ. ಭೋಗಪ್ರಧಾನವಾದ ದೇಹಸುಖ ಮತ್ತು ತ್ಯಾಗ ಪ್ರಧಾನವಾದ ಮಾನಸಿಕ ಸುಖಗಳು ವ್ಯಕ್ತಿತ್ವದ ಒಳಗೇ ನಿರ್ಮಾಣಗೊಳ್ಳುವ ಪ್ರಕ್ರಿಯಗಳು. ಸಂಸೃತಿಯೊಳ್ ಧರ್ಮಾಧರ್ಮ ಸ್ಥಿತಿಯೆ ವಲಂ ಸ್ವರ್ಗನರಕಸುಖದು:ಖಕರಂ ಎಂಬಲ್ಲಿ ಈ ಅಂಶ ಸ್ಪಷ್ಟವಾಗಿದೆ. ಆದ್ದರಿಂದ ಇವುಗಳನ್ನು ವ್ಯಕ್ತಿಯ ವ್ಯಕ್ತಿತ್ವದಿಂದ ಬೇರ್ಪಡಿಸುವಂತಿಲ್ಲ.

    ಭೋಗಸುಖದಲ್ಲಿ ಮೈಮರೆಯುವ ಮಾದರಿಯೊಂದನ್ನು ಪಂಪ ಆದಿಪುರಾಣದಲ್ಲಿ ನೀಡಿದ್ದಾನೆ. ಭೋಗವನ್ನು ಅಂತಿಮ ಸತ್ಯವೆಂದು ನಂಬಿದ ಪಾತ್ರಗಳಿವು. ಆದಿಪುರಾಣದಲ್ಲಿ ಬರುವ ಲಲಿತಾಂಗ-ಸ್ವಯಂಪ್ರಭೆ, ವಜ್ರಜಂಘ-ಶ್ರೀಮತಿಯ ಪಾತ್ರಗಳು ಈ ಬಗೆಯವು. ಇವರು ಭೋಗವೇ ಅಂತಿಮ ಸತ್ಯ ಎಂಬ ಭ್ರಮೆಯಲ್ಲಿರುವರು. ಆದ್ದರಿಂದ ಅವರು ಸಹಜವಾಗಿ ಈ ಬದುಕಿನಿಂದ ನಿರ್ಗಮಿಸುವುದಿಲ್ಲ. ಅನ್ಯ ಒತ್ತಡ, ಆಮಿಷಕ್ಕೆ ಒಳಗಾಗಿ ನಿರ್ಗಮಿಸುವುದು ಅನಿವಾರ್ಯವಾಗುತ್ತದೆ. ಮಹಾಬಲನಲ್ಲಿಯೇ ಈ ಪ್ರವೃತ್ತಿ ಕಾಣಿಸಿಕೊಳ್ಳುತ್ತದೆ. ಮಹಾಬಲನ ಮೇಲೆ ಒತ್ತಡ ಹೇರುವ ಸ್ವಯಂಬುದ್ಧನ ಮಾತುಗಳನ್ನು ಇಲ್ಲಿ ಗಮನಿಸಬಹುದು.

    ನಿನ್ನ ಮುನ್ನಿನ ಚರಿತಂಗಳಂ ನೆನೆಯದಿರ್ ನೆನೆ ಜೈನ ಪದಾಂಬುಜಂಗಳಂ (ಆದಿಪು.೨.೪೬)
    . . . ಮಮತ್ವಮಂ ಬಿಸುಟು ನೀನೇ ತತ್ತ್ವಮುಂ ಭವ್ಯ ಭಾ
    ವಿಸು ನಿನ್ನೀ ತನುವಂ ತಪೋವನವನಕ್ರೀಡಾಸುಖಕ್ಕೊಡ್ಡು ಚಿಂ
    ತಿಸದಿರ್ ಮುನ್ನಿನ ನಿನ್ನ ಯೌವನಕ್ರೀಡಾವಿಳಾಸಂಗಳಂ (ಆದಿಪು.೨.೪೭)

    . . . ನಿನ್ನೊಳಾತ್ಮ ಹಿತಮಂ ನಿಶ್ಚಯಿಸು ಸನ್ಮಾರ್ಗಸೂ
    ಚನೆಗೆಯ್ದೆಂ ಶರಣಂ ಜಿನೇಂದ್ರಚರಣಂ ವಿದ್ಯಾಧರಾಧೀಶ್ವರಾ (ಆದಿಪು೨.೪೮)
    ಚೆಲ್ವಪ್ಪೊಡಲಂ ಪಡೆದಪೆಯೀಗಳೆ ಬಲ್ವಿಡಿವಿಡಿದು ಶರಣ್ಬುಗು ಜಿನೇಂದ್ರಪದ ಸರಸಿಜಮಂ
    (ಆದಿಪು೨.೫೮)

    ಇಲ್ಲಿ ಚೆಲುವಾದ ಒಡಲನ್ನು ಪಡೆಯುವ ಆಮಿಷವನ್ನು ನೀಡುವುದರ ಮೂಲಕ ಮಹಾಬಲನನ್ನು ಸಂಸಾರದಿಂದ ಆಧ್ಯಾತ್ಮದ ಕಡೆಗೆ ತಿರುಗಿಸುವನು. ಜಿನ ಸ್ಮರಣೆಯನ್ನು ಮಾಡುವುದರ ಮೂಲಕ ದೇವತೆಯಾಗಿ ಜನಿಸಿದ್ದೇನೆ ಎಂದು ಲಲಿತಾಂಗ ಭಾವಿಸುವಲ್ಲಿ (ಆದಿಪು.೨.೬೭) ಈ ಭಾವನೆಯೇ ಮುಂದುವರಿದಿದೆ.

    ಇದು ಸುಖದೊಂದು ತುತ್ತ ತುದಿ ರಾಗದ ಮೊದಲ್ ನಿರಂತರಾ
    ಭ್ಯುದಯ ಸಾಗರಂ ವಿಭವದಾಗರಮೀ ದಿವಿಜೇಂದ್ರರುಂದ್ರಲೋ
    ಕದೊಳುಮಿದೊಂದೆ ಸಾರಮಿದು ಜೇನಪದಾಬ್ಜವರಪ್ರಸಾದದಾ
    ದುದು ನಿನಗಪ್ಪ ಕಾರಣದಿನೀಗಳೆ ಪೂಜಿಸು ಚೈತ್ಯರಾಜಿಯಂ (ಆದಿಪು.೨.೬೯)
    ಈ ಬಗೆಯ ಎಲ್ಲ ಸೂಕ್ಷ್ಮಗಳೂ ಜಿನಪ್ರಸಾದದಿಂದ ಆಗಿರುವುದರಿಂದ ಎಲ್ಲ ಚೈತ್ಯಾಲಯಗಳನ್ನು ಪೂಜಿಸು ಎಂದು ನಿರ್ದೇಶಿಸುವಲ್ಲಿ ಭೋಗದಲ್ಲಿ ಮುಳುಗಲಿರುವ ಆತ್ಮಕ್ಕೆ ಭಿನ್ನ ದಾರಿಯನ್ನು ಸೂಚಿಸುವಂತಿದೆ. ಆದರೆ ಲಲಿತಾಂಗ ಮತ್ತೆ ಭೋಗದ ಬದುಕಿನಲ್ಲಿ ಮುಳುಗಿದಾಗ (ಅದು ಸುಖದೊಂದು ಪಿಂಡಮದು (ಆದಿಪು.೨.೭೪) ಆಯುಷ್ಯ ಮುಗಿಯುವ ಕಾಲಘಟ್ಟದಲ್ಲಿ ಮೃತ್ಯವಿನಿಂದ ನನ್ನನ್ನು ಬಿಡಿಸು (ಆದಿಪು.೩.೫) ಎಂದು ಹಲುಬುತ್ತಿರಲು ಆಗ ಬರುವ ಸಾಮಾನಿಕದೇವರು ನಿನಗೆ ಮಾತ್ರ ಈ ಅವಸ್ಥೆ ಬರುವುದಲ್ಲ. ಎಲ್ಲರಿಗೂ ಬರುತ್ತದೆ.

    ಆವನುಮೀ ಸಂಸಾರದೊಳ್ ಬೇಯದೊಳನೆ ಶರಣ್ಧರ‍್ಮದಿಂದೊಂದುಮುಂಟೇ (ಆದಿಪು.೩.೬) ಜಿನಚೈತ್ಯವ್ರಾತಮಂಬಂದಿಸು ಜಿನಪದಪದ್ಮಂಗಳಂ ದಿವ್ಯಮಪ್ಪರ್ಚನೆಯಿಂದಂ ಭಕ್ತಿಯಿಂದರ್ಚಿಸು (ಆದಿಪು.೩.೭) ಎಂಬ ಮಾತಿನಂತೆ ಲಲಿತಾಂಗ ಜಿನನನ್ನು ಅರ್ಚಿಸಿದನು. ಈ ಸಂದರ್ಭದಲ್ಲಿ ಜಿನನಿಗಲ್ಲದೆ ಉಳಿದವರಿಗೆ ಮೃತ್ಯುರಾಜನನ್ನು ಗೆಲ್ಲಲು ಸಾಧ್ಯವೇ (ಆದಿಪು.೩.೮) ಎಂಬ ಕವಿಯ ಮಾತು ಮೃತ್ಯುವನ್ನು ದಾಟುವ ದಾರಿಯನ್ನು ಖಚಿತಪಡಿಸುತ್ತದೆ. ಪತಿಯನ್ನು ಕಳೆದುಕೊಂಡು ಬದುಕಿನಿಂದ ನಿರಾಶಳಾದ ಸ್ವಯಂಪ್ರಭೆಯ ಚಿತ್ರ - ಅಲಕಂ ಮಂದಾರ ಶೂನ್ಯಂ ಕದಪು ಮಕರಿಕಾ ಪತ್ರ ಶೂನ್ಯಂ ಎಂಬ ಈ ಪದ್ಯವು- ಲೌಕಿಕದ ಬದುಕಿನಲ್ಲಿ ಗಂಡನನ್ನು ಕಳೆದುಕೊಂದ ಹೆಣ್ಣಿನ ಚಿತ್ರವನ್ನು ಮನೋಜ್ಞವಾಗಿ ನೀಡುತ್ತದೆ. (ಆದಿಪು.೩.೧೩) ಇಂತಹ ಸಂದರ್ಭದಲ್ಲಿ ಸ್ವಯಂಪ್ರಭೆಯ ಬಳಿಗೆ ಮಹತ್ತರ ದೇವಿಯರು ಬಂದು ಜಿನಪತಿಯಂ ಪೂಜಿಸು ಪಡೆವೆಯಿನಿಯನಂ ಮರುಭವದೊಳ್ (ಆದಿಪು.೩.೧೬) ಎಂದು ಉಪದೇಶ ಮಾಡುವರು. ಆಕೆ ಗುರುಪಂಚಕವನ್ನು ನೆನೆಯುತ್ತ ಶರೀರವನ್ನು ತೊರೆಯುವಳು. ಹೀಗಾಗಿ ಭೋಗದ ಬದುಕಿನಲ್ಲಿ ಮುಳುಗಿದ ವ್ಯಕ್ತಿಗೆ ದಾರಿಯನ್ನು ತೋರಿಸುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ತನ್ನ ಕಾಲದ ಬದುಕಿನ ಸನ್ನಿವೇಶದಲ್ಲಿ ಪಂಪನಿಗೆ ಇದು ಅನಿವಾರ್ಯವಾಗಿತ್ತೆಂದು ತೋರುತ್ತದೆ.

    ತನ್ನ ಮುಂದಿನ ಜನ್ಮದಲ್ಲಿ ಅಖಿಲ ಭೋಗಗಳನ್ನು ಭೋಗಿಸಿದ ವಜ್ರಜಂಘನಿಗೆ ಬಂದ ಸಾವು ಭೋಗಜೀವನದಲ್ಲಿ ಮುಳುಗಿದವರ ಕಣ್ಣು ತೆರೆಸುವಂತಿದೆ. ವಜ್ರಜಂಘ ಮತ್ತು ಶ್ರೀಮತಿಯರ ಸಾವಿಗೆ ಕಾಲಾಗರು ಧೂಪದ ಹೊಗೆ ಒಂದು ನೆಪಮಾತ್ರ. ಅವರ ಸಾವಿಗೆ ಅತಿಯಾದ ಭೋಗವೇ ಕಾರಣವಾಗಿ ಬಿಡುತ್ತದೆ. ’ಓಪರೋಪರೊಳೊಡಸಾಯಲ್ಪಡೆದರಿನ್ನವೇಂ ಸೈಪೊಳವೇ’ ಎಂದು ಅವರ ಸಾವಿನ ಅತಿಶಯತೆಯನ್ನು ಗುರುತಿಸುವಾಗಲೇ ಅದರ ಕ್ಷಣಿಕತೆಯನ್ನು ಸೂಚಿಸುವ ಮಾತುಗಳು ತೇಲಿಬರುತ್ತವೆ. ಸಂಸೃತಿ ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್ (ಆದಿಪು. ೫.೨೫) ಜಡರೇನೆಂದು ನಂಬುವರ್ ಸಂಸೃತಿಯಂ (ಆದಿಪು.೫.೨೬)ಎಂಬ ಮಾತುಗಳು ಭೋಗದಲ್ಲಿ ಮುಳುಗಿದವರನ್ನು ಎಚ್ಚರಿಸುತ್ತದೆ. ಪಂಪನ ಈ ಮಾತುಗಳು ಕೇವಲ ಧಾರ್ಮಿಕ ಉಪದೇಶಗಳಾಗದೆ ನಮ್ಮೆದುರೇ ನಡೆದ ಘಟನೆಯಾಗಿ ತಲ್ಲಣಗೊಳಿಸುತ್ತದೆ.

    ಹಳೆಗನ್ನಡದ ಬಹುತೇಕ ಧಾಮಿಕ ಕೃತಿಗಳು ನಿರ್ದಿಷ್ಟ ತತ್ವ, ನೀತಿ, ಲೋಕಧರ್ಮವನ್ನು ರೂಪಿಸಿ ಸ್ಥಾಪಿಸಲು ಪೂರಕವಾಗಿ ಬಂದಿವೆ. ಇಲ್ಲಿ ಬರುವ ಪಾತ್ರಗಳೆಲ್ಲವೂ ಧರ್ಮದ ತಳಹದಿಯನ್ನು ಭದ್ರಪಡಿಸಲೆಂದು ಬಂದಿವೆ. ಹೀಗಾಗಿ ಈ ಬಗೆಯ ಕೃತಿಗಳು ಬದುಕಿನ ಆದರ್ಶಗಳನ್ನು ಮರುನಿರೂಪಿಸುತ್ತ ಪುರಾಣದ ಬಂಧವನ್ನು ಪಡೆದುಕೊಳ್ಳುತ್ತಿರುವಾಗಲೇ ವರ್ತಮಾನದ ಬದುಕಿನ ತುಡಿತಗಳನ್ನು ಅಂತರ್ಗತಗೊಳಿಸಿಕೊಂಡ ಕೃತಿಯೂ ಆಗುತ್ತದೆ. ಹೀಗಾಗಿ ನಾಯಕ ಪಾತ್ರವನ್ನು ವೈಭವೀಕರಿಸುವುದಕ್ಕೆ ಬದಲಾಗಿ ನಿರ್ದಿಷ್ಠ ಧಾರ್ಮಿಕ ನಿಲುವುಗಳನ್ನು ಸ್ಥಿರಗೊಳಿಸುವುದರ ಕಡೆಗೆ ಇಲ್ಲಿನ ತುಡಿತವಿದೆ.

    Read more...

    Subscribe