Sunday, October 31, 2010

1

ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ

  • Sunday, October 31, 2010
  • ಡಾ.ಶ್ರೀಧರ ಎಚ್.ಜಿ.

  • ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ ಶಿವರಾಮಕಾರಂತ ಬಾಲವನ ಪ್ರಶಸ್ತಿ ಮತ್ತು ಬಹುಭಾಷಾ ಕವಿಗೋಷ್ಠಿ ೧೦.೧೦.೨೦೧೦.


    ಬಾಲವನದ ಮಟ್ಟಿಗೆ ಒಂದು ವಿಶಿಷ್ಟ ದಿನ. ಆಗಸದಲ್ಲಿ ಮೋಡಕಟ್ಟಿದ ವಾತಾವರಣ. ಆಗಾಗ ಹನಿಯುವ, ಒಮ್ಮೊಮ್ಮೆ ಧೋ ಎಂದು ಸುರಿಯುವ ಮಳೆ. ಬಾಲವನದ ವಾತಾವರಣ ಎಂದಿನಂತಿರಲಿಲ್ಲ. ಹೊಸದಾಗಿ ನಿರ್ಮಿಸಿದ ಬಯಲುರಂಗ ಮಂದಿರದಲ್ಲಿ ಎಲ್ಲಿ ನೋಡಿದರೂ ವಿದ್ಯಾರ್ಥಿಗಳು ಕುಳಿತಿದ್ದರು.

    ಎಲ್ಲರಿಗೂ ಮೊದಲ ವರ್ಷದ ಡಾ. ಶಿವರಾಮಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವ ಸಂಭ್ರಮ.

    ಅಂದು, ೨೦೦೯ರ ಶಿವರಾಮಕಾರಂತ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬಾಲವನ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರಿನ ಸಹಾಯಕ ಕಮೀಷನರ್ ಡಾ. ಹರೀಶ್ ಕುಮಾರ್ ಕೆ. ಇವರು ಮುಂದಿನ ವರ್ಷ ಬಾಲವನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು. ಅವರು ಹೇಳಿದಂತೆ ಮಾಡಿ ತೋರಿಸಿದರು. ಮೊದಲ ಬಾಲವನ ಪ್ರಶಸ್ತಿಯನ್ನು ೧೦.೧೦.೨೦೧೦ರಂದು ನಡೆದ ಸಮಾರಂಭದಲ್ಲಿ ಕನ್ನಡದ ಹಿರಿಯ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿಯವರಿಗೆ ಬಾಲವನ ಸಮಿತಿಯ ವತಿಯಿಂದ ನೀಡಿ ಗೌರವಿಸಲಾಯಿತು.

    ಅನಂತರ ಕಾಲೇಜು ವಿದ್ಯಾರ್ಥಿಗಳ ಬಹುಭಾಷಾ ಕವಿಗೋಷ್ಠಿ. ವಿದ್ಯಾರ್ಥಿಗಳು ಒಂಬತ್ತು ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಓದಿದರು. ಅಲ್ಲಿ ಸೇರಿದ್ದ ನೂರಾರು ಮಂದಿ ಹಿರಿಯರು ಮತ್ತು ಕಿರಿಯರು ವಿದ್ಯಾರ್ಥಿಗಳ ಕವಿಶಕ್ತಿಗೆ ತಲೆದೂಗಿದರು.

    ಡಾ. ವಸಂತಕುಮಾರ್ ಪೆರ್ಲರಿಂದ ಅಧ್ಯಕ್ಷೀಯ ನುಡಿಗಳು.

    ಗದ್ಯಕ್ಕಿಂತ ಭಿನ್ನವಾದುದು ಕವಿತೆ. ಕವಿ ತನ್ನ ಮನಸ್ಸಿನ ಅನಿಸಿಕೆಯನ್ನು ವ್ಯಕ್ತಪಡಿಸಲು ವಿವಿಧ ಪ್ರಕಾರಗಳನ್ನು ಬಳಸುತ್ತಾನೆ. ಇವುಗಳಲ್ಲಿ ಕವಿತೆಯೂ ಒಂದು. ಕವಿತೆಯು ಅದರ ಶಿಸ್ತಿನ ಎಲ್ಲ ಅಂಶಗಳನ್ನು ಒಳಗೊಳ್ಳಬೇಕು. ಅರ್ಥ, ಭಾವವೈವಿಧ್ಯ, ಸಂಕೀರ್ಣ ಅನುಭವಗಳನ್ನು ಓದುಗನಿಗೆ ಸಂವಹನಗೊಳಿಸಬೇಕು. ಗದ್ಯವು ಬುದ್ಧಿಗೆ, ಕವಿತೆ ಹೃದಯಕ್ಕೆ ಸಂಬಂಧಿಸಿದ್ದು. ಕಾವ್ಯ ಹೃದಯದೊಂದಿಗೆ ನೇರವಾಗಿ ಸಂವಾದ ಮಾಡುತ್ತದೆ. ಕವಿತೆ ಎಂದರೆ ಒಡೆದು ಕಟ್ಟುವ ಪ್ರಕ್ರಿಯೆ ಎಂದು ಕವಿ ಡಾ. ವಸಂತಕುಮಾರ ಪೆರ್ಲ ಹೇಳಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನುಭವಗಳಿಗೆ ದಕ್ಕುವ ವಿಷಯವನ್ನು ಆಯ್ದುಕೊಂಡಿದ್ದಾರೆ. ನಾವು ಮನೆಭಾಷೆಯನ್ನು ಶಕ್ತಿಯುತಗೊಳಿಸದಿದ್ದರೆ ಮುಖ್ಯಭಾಷೆ ನಿಸ್ಸತ್ವವಾಗುತ್ತದೆ. ಸ್ಥಳೀಯ ಭಾಷೆಗಳು ಸತ್ವಪೂರ್ಣವಾದರೆ ಮುಖ್ಯಭಾಷೆಗೆ ಚೈತನ್ಯ ಬರುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

    ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಕಾಲೇಜುಗಳಿಂದ ಬಂದ ೨೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜು ಕನ್ನಡ ಸಂಘ ಮತ್ತು ಸಂತಫಿಲೋಮಿನಾ ಕಾಲೇಜು ಕನ್ನಡ ಸಂಘಗಳು ಜಂಟಿಯಾಗಿ ಆಯೋಜಿಸಿದ್ದವು. ಕಾರ್ಯಕ್ರಮದ ಕೊನೆಯಲ್ಲಿ ಬಾಲವನ ಸಮಿತಿಯ ವತಿಯಿಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

    Read more...

    Sunday, October 17, 2010

    1

    ಸದ್ಗುಣಿ ಕೃಷ್ಣಾಬಾಯಿ ಭಾಗ - 2

  • Sunday, October 17, 2010
  • ಡಾ.ಶ್ರೀಧರ ಎಚ್.ಜಿ.
  • ಸದ್ಗುಣಿ ಕೃಷ್ಣಾಬಾಯಿ ಕಾದಂಬರಿ ತನ್ನ ರಚನಾ ವಿನ್ಯಾಸದಲ್ಲಿ ಮೂರು ಅಂಶಗಳನ್ನು ಹೊಂದಿದೆ.

    ೧. ಉತ್ತಮ ಗೃಹಿಣಿಯ ಲಕ್ಷಣಗಳು

    ೨. ಸ್ತ್ರೀ ಶಿಕ್ಷಣ ಮತ್ತು ಸಮಸ್ಯೆಗಳು

    ೩. ಪುರುಷರು ಪಡೆಯುವ ಶಿಕ್ಷಣ ಮತ್ತು ಉದ್ಯೋಗದ ಸಾಧ್ಯತೆ

    ಎಳೆಯ ವಯಸ್ಸಿನಲ್ಲಿ ಪತಿಗೃಹವನ್ನು ಸೇರಿದರೂ ಅಲ್ಲಿನ ರೀತಿ ನೀತಿಗಳಿಗೆ ಕೃಷ್ಣಾಬಾಯಿ ಹೊಂದಿಕೊಳ್ಳುವಳು. ಖಾಯಿಲೆ ಬಿದ್ದ ಅತ್ತೆಯ ಸೇವೆ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನ, ಗಂಡನ ಓದಿಗಾಗಿ ಮಾಡುವ ತ್ಯಾಗ, ಇಂಗ್ಲೆಂಡಿಗೆ ಹೋಗುವ ದಾರಿಯಲ್ಲಿ ಒದಗಿದ ವಿಪತ್ತಿನಿಂದ ಪತಿಯನ್ನು ಅಗಲಿದರೂ ಆತನ ಬರುವಿಕೆಗಾಗಿ ಕಾಯುವ ತಾಳ್ಮೆ, ಅಕ್ಕನ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸರಿದಾರಿಗೆ ತರುವಲ್ಲಿ ಆಕೆ ಪಡೆಯುವ ಯಶಸ್ಸು ಇವೆಲ್ಲವೂ ಕೃಷ್ಣಾಬಾಯಿ ತಾಳ್ಮೆ, ಸಹನೆ ಹಾಗೂ ಉತ್ತಮ ಗೃಹಿಣಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಸ್ತ್ರೀ ಆಧುನಿಕ ಶಿಕ್ಷಣವನ್ನು ಪಡೆದರೂ ಆಕೆ ಗೃಹಕೃತ್ಯದಲ್ಲಿಯೂ ನಿಪುಣಳಿರಬೇಕೆಂಬ ನಿಲುವು ಲೇಖಕಿಯದು.

    ಪಾಶ್ಚಾತ್ಯ ಶಿಕ್ಷಣವನ್ನು ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಪಡೆಯುವ ಅವಕಾಶ ದೊರೆತಾಗ ವಿಭಿನ್ನ ಪ್ರತಿಕ್ರಿಯೆಗಳು ಸಮಾಜದಲ್ಲಿ ಕಾಣಿಸಿಕೊಂಡವು. ಅದರಲ್ಲಿಯೂ ಸ್ತ್ರೀಗೆ ಶಿಕ್ಷಣ ಪಡೆಯುವ ಅವಕಾಶ ದೊರಕಿದ್ದು ಸಾಂಪ್ರದಾಯಿಕ ಸಮಾಜದಲ್ಲಿ ಪರ ವಿರೋಧದ ಸಂಘರ್ಷವನ್ನು ನಿರ್ಮಿಸಿತು. ಸ್ತ್ರೀಗೆ ಶಿಕ್ಷಣ ನೀಡಬೇಕೆಂಬ ಸುಧಾರಕ ಪಂಥದ ನಿಲುವುಗಳು ಪ್ರಚಾರದಲ್ಲಿರುವುದನ್ನು ಕಾದಂಬರಿ ಸೂಕ್ಷ್ಮವಾಗಿ ದಾಖಲಿಸುತ್ತದೆ. ಅದೇ ಹೊತ್ತಿನಲ್ಲಿ ಶಾಲೆಗೆಂದು ಬರುತ್ತಿದ್ದ ಹೆಣ್ಣು ಮಕ್ಕಳ ಬಗೆಗೆ ಅಸಹನೆ, ಅವರನ್ನು ಶಾಲೆಗೆ ಬರದಂತೆ ತಡೆಯುವ ಪ್ರಯತ್ನಗಳೂ ನಡೆದವು. ಕೃತಿಯೊಳಗೆ ಕೃಷ್ಣಾಬಾಯಿ ಸ್ವತ: ಈ ಬಗೆಯ ಅನುಭವಗಳನ್ನು ಪಡೆಯುವಳು. "ಕೃಷ್ಣಾಬಾಯಿಯು ಶಾಲೆಗೆ ಬರದಂತೆ ಮಾಡಬೇಕೆಂಬ ಪ್ರಯತ್ನ ನಡೆಯಿತು. ಆದರೆ ಕೃಷ್ಣಾಬಾಗೆ ಅಣ್ಣನದೂ, ಗುರುವಿನದೂ ಬೆಂಬಲವಿದ್ದಿದ್ದರಿಂದ ಅವರ ಪ್ರಯತ್ನ ನಿಷ್ಪಲವಾಯಿತು. ಅವರು ಎಷ್ಟೋಸಾರೆ ಇಲ್ಲಿಂದ ಎದ್ದು ಹೋಗಬಾರದೆ, ಇಲ್ಲಿ ಹೆಂಗಸರದೇನು ಕೆಲಸವದೆ, ಅವರ ಕೆಲಸ ಒಲಿಯ ಮುಂದಲ್ಲವೆ .. .. . ಇವರಿಗೆ ಓದು ಯಾತಕೆ ಬೇಕು ? ಬರಹ ಯಾತಕೆ ಬೇಕು? ದೇವರು ಕೊಟ್ಟದ್ದನ್ನು ಉಂಡು ತಿಂದು ಗಂಡಂದಿರ ಮನೆಯಲ್ಲಿ ಸಂಸಾರ ಮಾಡುವುದನ್ನು ಬಿಟ್ಟು ನಾಳೆ ಇವರು ಸಭೇ ಶಿರಸ್ತೆ ಕೆಲಸಗಳನ್ನು ಮಾಡಲಿಕ್ಕೆ ಹೋಗುವದು ಅಷ್ಟರಲ್ಲಿಯೇ ಇದೆ" ಎಂದು ಅಪಹಾಸ್ಯ ಮಾಡಿದ್ದಿದೆ. ಹಾಗೆಯೇ ಕೃಷ್ಣಾಬಾಯ ವಿವಾಹದ ಕುರಿತಾಗಿ ಮನೆಯಲ್ಲಿ ಮಾತುಕತೆಗಳು ಆರಂಭವಾದಾಗ ಮಾಧವರಾಯನ ತಾಯಿ ರಮಾಬಾಯಿ ಸಾಕಷ್ಟು ವಿಚಾರ ಮಾಡಹತ್ತಿದಳು. "ಅವಳು ಹಳೇ ತರದ ಹೆಂಗಸು ಇದ್ದು ಸಾಮಾಜಿಕದ ಸದ್ಯ ಸ್ಥಿತಿಯಲ್ಲಿ ಹೆಚ್ಚು ಕಡಿಮೆಯಾಗಬಾರದೆಂಬುವ ಜನರಲ್ಲಿ ಒಬ್ಬಳಾಗಿದ್ದಳು. ಪುಣೆ ಮುಂಬು ಮುಂತಾದ ಸುಧಾರಿಸಿದ ಪಟ್ಟಣಗಳಲ್ಲಿ ಆಕೆ ಬಹಳ ವರ್ಷಗಳವರೆಗೆ ಇದ್ದರೂ ಆಕೆಯ ಮೂಲ ಕರ್ನಾಟಕಸ್ಥಳಾದ್ದರಿಂದ ಹೆಂಗಸರು ವಿದ್ಯೆ ಕಲಿಯಬಾರದೆಂತಲೂ, ವಿದ್ಯೆ ಕಲಿಯುವುದರಿಂದ ಸ್ತ್ರೀಯರ ನೀತಿಯು ಕೆಡುತ್ತದೆಂತಲೂ, ಅವರು ಗುರು ಹಿರಿಯರಿಗೆ ಯೋಗ್ಯ ಸನ್ಮಾನವನ್ನು ತೋರಿಸುವದಿಲ್ಲೆಂತಲೂ ಅವರು ಸಂಸಾರದ ಕೆಲಸಗಳಲ್ಲಿ ಮನಸ್ಸು ಹಾಕುವುದಿಲ್ಲೆಂತಲೂ, ಆಕೆಯ ದೃಢ ತಿಳುವಳಿಕೆಯಾಗಿತ್ತು".(ಪು.೧೪) ಹೀಗಾಗಿ ಸ್ತ್ರೀಗೆ ಶಿಕ್ಷಣವನ್ನು ನೀಡುವುದರ ಬಗೆಗೆ ವಿರೋಧವಿದ್ದ ಎರಡು ಬಗೆಯ ಮಾದರಿಯನ್ನು ನೋಡಲು ಸಾಧ್ಯ.

    . ಶಿಕ್ಷಣವನ್ನು ಪಡೆಯಲು ಬರುವ ಸ್ತ್ರೀ, ಪುರುಷನಿಂದ ಟೀಕೆಗೆ ಒಳಗಾಗುವುದು

    . ಶಿಕ್ಷಣವನ್ನು ಪಡೆದ ಸ್ತ್ರೀಯನ್ನು ಸ್ವತ: ಮಹಿಳೆಯರೇ ಅನುಮಾನದಿಂದ ನೋಡುವುದು.

    ಅಂದರೆ ಸ್ತ್ರೀ ಶಿಕ್ಷಣದ ನಿರಾಕರಣೆಯ ನೆಲೆಗಳು ಆ ಕಾಲದ ಸಮಾಜದ ಒಳಗೇ ಇದ್ದವು. ಭಿನ್ನ ಕಾರಣಗಳಿಗಾಗಿ ಹಿರಿಯ ತಲೆಮಾರಿನ ಪುರುಷ ಮತ್ತು ಸ್ತ್ರೀಯರಿಬ್ಬರೂ, ಸ್ತ್ರೀಗೆ ಶಿಕ್ಷಣ ನೀಡುವುದನ್ನು ಅನುಮಾನದಿಂದ ನೋಡುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾವಂತ ಪುರುಷರೇ ಸ್ತ್ರೀ ಶಿಕ್ಷಣವನ್ನು ಸಮರ್ಥಿಸಿದ್ದನ್ನು ನೋಡುತ್ತೇವೆ. ಪ್ರಸ್ತುತ ಕಾದಂಬರಿಯಲ್ಲಿ ಮಾಧವರಾಯ ಹೇಳುವ " ಜ್ಞಾನವು ಎಲ್ಲ ಹೆಂಗಸರಿಗೂ ಗಂಡಸರಿಗೂ ಸರಿಯಾಗಿಯೇ ಅತ್ಯಗತ್ಯವಾದದ್ದು. --- ಕೃಷ್ಣೆಯು ವಿದ್ಯಾಭ್ಯಾಸ ಮಾಡಿರುವುದು ಪ್ರಶಂಸನೀಯ ಗುಣವೇ ಆಗುತ್ತದೆ" (ಪು.೧೫) ಮಾತುಗಳು ಗಮನಾರ್ಹ. ಅನಂತರದ ದಿನಗಳಲ್ಲಿ ಕೃಷ್ಣಾಬಾಯಿಯು ತನ್ನ ಅತ್ತೆ ರಮಾಬಾಯಿಯ ಅಭಿಪ್ರಾಯವನ್ನು ಸುಳ್ಳಾಗಿಸುವಂತೆ ಹಾಗೂ ಮಾಧವರಾಯನ ಮಾತುಗಳನ್ನು ಸಮರ್ಥಿಸುವಂತೆ ಬದುಕುತ್ತಾಳೆ. ಮಾತ್ರವಲ್ಲ, ವಿದ್ಯಾವಂತ ಸೊಸೆಯನ್ನು ಪಡೆದಿದ್ದರಿಂದ ಆ ಕುಟುಂಬಕ್ಕೆ ಆದ ಒಳಿತನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಸ್ತ್ರೀಯರು ವಿದ್ಯಾವಂತರಾದರೂ ತಮ್ಮ ಕರ್ತವ್ಯಗಳನ್ನು ಚ್ಯುತಿಲ್ಲದೆ ನಡೆಸುವರೆಂದು ಪ್ರತಿಪಾದಿಸುವ ಅಗತ್ಯವಿತ್ತು. ಅಲ್ಲದೆ ಸ್ತ್ರೀಯರ ಉನ್ನತ ವಿದ್ಯಾಭ್ಯಾಸದ ಅಗತ್ಯವನ್ನೂ ಪ್ರತಿಪಾದಿಸಿ ಅವರು ಪ್ರಗತಿಪರ ನಿಲುವನ್ನು ತಳೆಯುವರು. ತಿರುಮಲಾಂಬ ಅವರ ಮೊದಲ ಕಾದಂಬರಿ ಸುಶೀಲೆಯಲ್ಲಿಯೂ ವಿದ್ಯಾವಂತ ಯುವತಿಯರು ಸಮಾಜದ ವಕ್ರದೃಷ್ಟಿಗೆ ಗುರಿಯಾಗುತ್ತಿದ್ದ ಚಿತ್ರ ದೊರೆಯುತ್ತದೆ. "ಒಳ್ಳೆಯ ಓದು, ಒಳ್ಳೆಯ ಓದು, ವಿರಾಮ ದೊರೆತು ಹೊತ್ತು ಹೋಗದಿದ್ದರೆ ಹಾಳು ಪುಸ್ತಕವನ್ನೇ ಓದಬೇಕೆ? ಓದು ಬರಹ ಬಲ್ಲ ಈ ಕಾಲದ ಹುಡುಗಿಯರನ್ನು ನಂಬುವುದು ಹೇಗೆ?" ಎಂಬ ಮಾತುಗಳು ದೊರೆಯುತ್ತವೆ. ಹೀಗಾಗಿ ಸ್ತ್ರೀಯರಿಗೆ ಶಿಕ್ಷಣದ ಅಗತ್ಯವನ್ನು ಸಮರ್ಥಿಸುವ ಅನಿವಾರ್ಯತೆ ಅಂದಿನ ಲೇಖಕಿಯರಿಗಿತ್ತು.

    ಸ್ತ್ರೀಯರು ಆಧುನಿಕ ವಿದ್ಯಾಭ್ಯಾಸದ ಜೊತೆಯಲ್ಲಿ ಗೃಹಕೃತ್ಯದಲ್ಲಿಯೂ ತಿಳುವಳಿಕೆ ಪಡೆದಿರಬೇಕೆಂಬ ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾದ ಪರಿಷ್ಕೃತ ನಿಲುವನ್ನು ಕಾದಂಬರಿ ತಾಳುತ್ತದೆ. ಇದು ಇಂಗ್ಲಿಷ್ ಶಿಕ್ಷಣಕ್ಕೆ ದೇಸಿನೆಲೆಯಲ್ಲಿ ಪ್ರತಿಕ್ರಿಸುವಂತೆ ಕಾಣುತ್ತದೆ. ಕೃಷ್ಣಾಬಾ ತನ್ನ ಅಕ್ಕನ ಮಕ್ಕಳಾದ ಕಾಶಿ ಮತ್ತು ಗೋದಾವರಿಗೆ ನೀಡುವ ಶಿಕ್ಷಣ ಈ ಬಗೆಯದು. ಮಕ್ಕಳ ಮನಸ್ಸನ್ನು ಬಂಧಿಸದೆ, ಬೆತ್ತದಲ್ಲಿ ದಂಡಿಸದೆ ಅವರ ಆಸಕ್ತಿಗೆ ಅನುಗುಣವಾದ ಶಿಕ್ಷಣ ನೀಡುವ ತಂತ್ರ ಕೃಷ್ಣಾಬಾಯದು. ಈ ರೀತಿಯ ಶಿಕ್ಷಣಕ್ಕೆ ಸಮಕಾಲೀನ ಸಾಮಾಜಿಕರಿಂದ ಟೀಕೆಗಳು ಬಂದಿವೆಯಾದರೂ ಕೃತಿಯ ಚೌಕಟ್ಟಿನೊಳಗೆ ಅವು ನಿಲ್ಲುವುದಿಲ್ಲ. ಶಿವರಾಮಕಾರಂತರು ಮಕ್ಕಳ ಶಿಕ್ಷಣದ ಬಗೆಗೆ ಆಲೋಚಿಸುವುದಕ್ಕಿಂತ ಸಾಕಷ್ಟು ಮೊದಲೇ ಮಕ್ಕಳ ಶಿಕ್ಷಣದ ಬಗೆಗೆ ಕಾದಂಬರಿ ತಳೆಯುವ ನಿಲುವು ಸಾಕಷ್ಟು ಹೊಸತನಗಳಿಂದ ಕೂಡಿದೆ. ಶಿಕ್ಷಣದ ಸಂದರ್ಭದಲ್ಲಿ ಕೃಷ್ಣಾಬಾಯಿ ಅಳವಡಿಸಿದ ಮಕ್ಕಳಿಗೆ ಚಿತ್ರಕಲೆ ಕಲಿಸುವುದು, ಹೊಲಿಗೆ ತರಬೇತಿ, ಅಡಿಗೆ ಮಾಡುವುದು, ತರಕಾರಿ ಬೆಳೆಯುವುದು, ಯಂತ್ರಗಳ ಪರಿಚಯ, ಛಾಪಖಾನೆಯನ್ನು ತೋರಿಸುವುದು ಮುಂತಾದ ಚಟುವಟಿಕೆಗಳು ಗಮನ ಸೆಳೆಯುತ್ತವೆ. ಲೇಖಕಿ ಸ್ವತ: ಶಿಕ್ಷಕಿಯಾದ್ದರಿಂದ ಮಕ್ಕಳ ಶಿಕ್ಷಣದ ಬಗೆಗೆ ವಿಶೇಷವಾಗಿ ಆಲೋಚಿಸಲು ಸಾಧ್ಯವಾದಂತಿದೆ. ಇವತ್ತಿಗೂ ಮಕ್ಕಳಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬೇಕೆಂಬ ವಿಚಾರ ಚರ್ಚಿತವಾಗುತ್ತಿದ್ದು, ಲೇಖಕಿಯ ಈ ಧೋರಣೆ ಹೆಚ್ಚು ಪ್ರಸ್ತುತ. ಶಿಕ್ಷಣದಿಂದ ಹುಡುಗರು ನೀತಿವಂತರೂ, ವ್ಯವಹಾರಜ್ಞರೂ ಆಗಬೇಕೆಂಬುದು ಉದ್ದೇಶವಾಗಿತ್ತು.

    ಕೃಷ್ಣಾಬಾಯಿ ಕಾದಂಬರಿಯ ಕೇಂದ್ರ ಪಾತ್ರ. ಲೇಖಕಿಯ ಆದರ್ಶ ಪಾತ್ರವಿದು. ಮಾಧವರಾಯನ ಯಶಸ್ಸಿನ ಹಿಂದೆ ಕೃಷ್ಣಾಬಾಯಿಯ ತ್ಯಾಗವಿದೆ. ಸ್ವತ: ಕೃಷ್ಣಾಬಾಯಿ ಪ್ರಾಚೀನ ಕಾವ್ಯ, ಭಗವದ್ಗೀತೆ, ಸಂಸ್ಕೃತ, ಇಂಗ್ಲಿಷ್, ಆಧುನಿಕ ಕವನಗಳನ್ನು ಓದುವುದರ ಜೊತೆಗೆ ಟೈಲರಿಂಗ್, ಕಸೂತಿ, ರಂಗವಲ್ಲಿ, ಹಾಡು, ಹೆಣಿಗೆ, ಚಿತ್ರಕಲೆ ಮೊದಲಾದವುಗಳನ್ನು ಕಲಿತಿದ್ದಳು ಮಾತ್ರವಲ್ಲ, ಸಂಸ್ಕೃತ ಮತ್ತು ಇಂಗ್ಲಿಷ್‌ನಿಂದ ಭಾಷಾಂತರವನ್ನೂ ಮಾಡುತ್ತಿದ್ದಳು. ಹೀಗಾಗಿ ಕೃಷ್ಣಾಬಾಯಿಯದು ಹಳತು ಹೊಸದು, ಪರಂಪರೆ ಮತ್ತು ಆಧುನಿಕತೆಯತ್ತ ಮುಖಮಾಡಿದ ಸಮನ್ವಯದ ಮಾದರಿ ವ್ಯಕ್ತಿತ್ವ.

    ಮಾಧವರಾಯ ಲೇಖಕಿಯ ಇನ್ನೊಂದು ಆದರ್ಶ ಪಾತ್ರ. ಕೃಷ್ಣಾಬಾಯ ಪತಿ. ಪಶ್ಚಿಮದ ನೇರ ಪ್ರಭಾವಕ್ಕೆ ಒಳಗಾದವನು. ಇಂಗ್ಲೆಂಡಿನ ಬಗೆಗೆ ಗೌರವ ಇರುವ ವಸಾಹತು ಆಡಳಿತವನ್ನು ಒಪ್ಪಿಕೊಂಡ ವ್ಯಕ್ತ್ವಿ. ಬಿ.ಎ. ತರಗತಿಯಲ್ಲಿ ಓದುತ್ತಿದ್ದ ಆತ ಚಿಕ್ಕವನಾದರೂ ವಿದ್ಯಾವಂತ. ಉತ್ತಮ ವಾಗ್ಮಿ; ಭಾಷಣಕಾರ. ವಾರದಲ್ಲಿ ಒಂದೆರಡು ಸಲ ಮಾಧವನ ಭಾಷಣ ಸಣ್ಣ ದೊಡ್ಡ ಸಭೆಗಳಲ್ಲಿ ಆಗುತ್ತಿತ್ತು. ಕೃಷ್ಣಾಬಾಯಿಯನ್ನು ಮೊದಲ ಸಲ ನೋಡಿದಾಗಲೇ ಒಲವು ಮೂಡಿತು. ಆಕೆಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು 'ಕಲಿತವಳು' ಎಂಬ ಅಂಶ ಅಡ್ಡಬಂದಾಗ ಮಾಧವರಾಯನು ಕೃಷ್ಣಾಬಾಯಿಯ ಮೇಲಿನ ಪ್ರೇಮದಿಂದ "ಸುಶಿಕ್ಷಿತ ಸ್ತ್ರೀಯರು ಮಕ್ಕಳಿಗೂ ಗಂಡಂದಿರಿಗೂ ಉಪಯುಕ್ತರಾಗಿ ದೇಶೋನ್ನತಿಗೂ ಸಹ ಕಾರಣರಾಗುತ್ತಾರೆ" ಎಂಬ ನಿಲುವು ತಾಳುವನು. ಈ ವಿವಾಹಕ್ಕೆ ಎರಡೂ ಮನೆಯವರು ಒಪ್ಪಿದರೂ ಮಾಧವರಾಯನ 'ಒಲವು' ಮುಖ್ಯವಾಗುತ್ತದೆ. ಹೀಗಾಗಿ ಕಲಿತ ವರ್ಗದಲ್ಲಿ ವೈವಾಹಿಕ ಬದುಕಿನ ಬಗೆಗೆ ಆಗುತ್ತಿದ್ದ ಬದಲಾವಣೆಯ ನಿಲುವುಗಳನ್ನು ದಾಖಲಿಸುತ್ತದೆ. ಎಲ್.ಎಲ್.ಬಿ. ಪರೀಕ್ಷೆ ಬರೆದರೂ ಸರಕಾರಿ ಕಛೇರಿಗಳಲ್ಲಿ ಕೆಲಸ ದೊರಕುವುದು ಕಠಿಣವಾದ್ದರಿಂದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುವನು. ಈ ಹೊತ್ತಿಗೆ ಎಲ್.ಎಲ್.ಬಿ. ಪಾಸಾದರೂ ಮುಂಬುಯಂತಹ ಶಹರದಲ್ಲಿ ಸದ್ಯಕ್ಕೆ ವಕೀಲಿ ಮಾಡುವುದು ಲಾಭಕರವಾದೀತೆಂದು ಅನಿಸಲಿಲ್ಲ. ಹೀಗಾಗಿ ಹೆಂಡತಿ ಒಡವೆಗಳನ್ನು ಮಾರಿ ಒದಗಿಸಿದ ಆರ್ಥಿಕ ನೆರವಿನಿಂದ ಲಂಡನ್ನಿಗೆ ಹೆಚ್ಚಿನ ಅಧ್ಯಯನಕ್ಕೆ ತೆರಳುವನು. 'ಲ್ಯಾಂಬರ್ಟನ್' ಗೃಹಸ್ಥನ ಆಶ್ರಯದಲ್ಲಿದ್ದು ಸಿವಿಲ್‌ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಮುಂಬಯಿಗೆ ಮರಳಿ ಅಸಿಸ್ಟೆಂಟ್ ಕಲೆಕ್ಟರ್‌ನಾಗುವನು. ತನ್ಮೂಲಕ ವಸಾಹತುಶಾಹಿ ಆಡಳಿತದ ಒಂದು ಭಾಗವಾಗಿ ಬಿಡುವನು. ಈ ಕಾಲ ಘಟ್ಟದಲ್ಲಿ ಸರಕಾರಿ ಸೇವೆಗೆ ಸೇರಬೇಕೆಂಬ ಹಂಬಲ ವಿದ್ಯಾವಂತ ಯುವಕರ ಅಪೇಕ್ಷೆಯಾಗಿತ್ತ್ತೆಂಬ ಸುಳಿವು ಕಾದಂಬರಿಯಲ್ಲಿದೆ.

    ಆಧುನಿಕ ಶಿಕ್ಷಣವನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಂಡ ಉದಯಮಾನವಾದ ಒಂದು ವರ್ಗ ಕಾದಂಬರಿಯಲ್ಲಿ ಕಂಡುಬರುತ್ತದೆ. ಹರಿವಂತ, ಶಾಮರಾಯ, ರಾಧಾಬಾ, ಮಾಧವರಾಯ, ಜನಾರ್ದನಪಂತ ಮೊದಲಾದವರು ಈ ವರ್ಗದಲ್ಲಿ ಬರುವ ವ್ಯಕ್ತಿಗಳು. ಆಧುನಿಕ ಶಿಕ್ಷಣವನ್ನು ಆರಂಭದಲ್ಲಿ ಸಂಶಯ ದ್ವಂದ್ವದಿಂದ ನೋಡುವ ಯಶೋಧಾಬಾಯಿ ಮತ್ತು ಆಕೆಯ ಸ್ನೇಹಿತೆಯರು ಅಂತಿಮವಾಗಿ ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬಂದು ನಿಲ್ಲುವರು. ಪಾಶ್ಚಾತ್ಯ ಶಿಕ್ಷಣವನ್ನು ಪಡೆದು ಸರ್ಕಾರದ ಸೇವೆಯಲ್ಲಿರುವ ಒಂದು ವರ್ಗವೇ ಕಾದಂಬರಿಯಲ್ಲಿದೆ. ಮಾಧವರಾಯ ಈ ವರ್ಗಕ್ಕೆ ಸೇರುವ ಹೊಸತಲೆಮಾರಿನ ಪ್ರತಿನಿಧಿ. ಈ ಹೊತ್ತಿಗೆ ಇಂಗ್ಲಿಷ್‌ನಿಂದ ಭಾಷಾಂತರ ಮಾಡುವ ಪ್ರಕ್ರಿಯೆ ಸಾಹಿತ್ಯದ ವಲಯದಲ್ಲಿ ನಡೆಯುತ್ತಿದ್ದ ಬಗ್ಗೆ ಕೃತಿಯೊಳಗೆ ಪ್ರಮಾಣಗಳು ದೊರೆಯುತ್ತವೆ. ಒಂದೆಡೆ ಸ್ತ್ರೀ ಶಿಕ್ಷಣವನ್ನು ಬೆಂಬಲಿಸಿ ಪ್ರಗತಿಪರ ನಿಲುವನ್ನು ತಳೆಯುವ ಕೃತಿ ಇನ್ನೊಂದೆಡೆ ೧೦-೧೨ ವರ್ಷದ ಹೆಣ್ಣುಮಕ್ಕಳಿಗೆ ವಿವಾಹ ಮಾಡುವ ಚಿತ್ರಣವನ್ನೂ ನೀಡುತ್ತದೆ. ಹೀಗಾಗಿ ಬಾಲ್ಯವಿವಾಹದ ವಿರೋಧಿ ನಿಲುವುಗಳು ಕೃತಿಯಲ್ಲಿ ಕಾಣುವುದಿಲ್ಲ.

    ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಆರಂಭವಾದ ಖಾಸಗಿ ಒಡೆತನದ ಸಂಸ್ಥೆಗಳು ನೌಕರರನ್ನು ಶೋಷಣೆ ಮಾಡುವ, ಮಿತಿಮೀರಿ ದುಡಿಸುವ ಚಿತ್ರ ಕೃತಿಯಲ್ಲಿದೆ. ಎಲ್.ಎಲ್.ಬಿ. ಮುಗಿದಾಕ್ಷಣ ದುಡಿಯಲು ಸೇರಿದ ಸಂಸ್ಥೆಯಲ್ಲಿ ಮಿತಿ ಮೀರಿ ಕೆಲಸ ಮಾಡಿದ ಪರಿಣಾಮವಾಗಿ ಮಾಧವರಾಯನ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದನ್ನು ಇದಕ್ಕೆ ಗಮನಿಸಬಹುದು. ಬಾಲಕಿಯರ ಶಿಕ್ಷಣದ ಸಲುವಾಗಿ ಆರಂಭವಾಗಿದ್ದ ಶೈಕ್ಷಣಿಕ ಸಂಸ್ಥೆ, ಮಾಹಿತಿ ಕಳಿಸಲು ವಸಾಹತು ಶಾಹಿ ಆಡಳಿತ ಆರಂಭಿಸಿದ 'ತಾರು ವ್ಯವಸ್ಥೆ' ಸುದ್ದಿಗಳಿಗಾಗಿ ಆರಂಭವಾಗಿದ್ದ ಪತ್ರಿಕೆಗಳ ಚಿತ್ರಣದ ಎಳೆಗಳು ಕೃತಿಯಲ್ಲಿದೆ. ಹಡಗು ದುರಂತದಲ್ಲಿ ಪರಸ್ಪರ ಬೇರೆಯಾಗಿದ್ದ ಮಾಧವರಾಯ ಮತ್ತು ಕೃಷ್ಣಾಬಾಯಿ ಮತ್ತೆ ಒಂದಾಗಲು ಪತ್ರಿಕೆಯಲ್ಲಿ ಬಂದ ಸುದ್ದಿಯಿಂದ ಸಾಧ್ಯವಾಗುತ್ತದೆ. ಮಾಧವರಾಯನ ಅಧ್ಯಯನಕ್ಕೆ ಇಂಗ್ಲೆಂಡಿನಲ್ಲಿ ಯಾವುದೇ ಅಪೇಕ್ಷೆಗಳಿಲ್ಲದೆ ಸಹಾಯ ಮಾಡುವ ಲ್ಯಾಂಬರ್ಟನ್ ಕುಟುಂಬದ ಸ್ನೇಹಪರತೆ ಕಾದಂಬರಿಯಲ್ಲಿ ಗಮನಸೆಳೆಯುತ್ತದೆ. ಹಿಂದೆಲ್ಲ ದೂರದ ಊರುಗಳಿಂದ ಮೈಸೂರಿನಂತಹ ಶೈಕ್ಷಣಿಕ ಕೇಂದ್ರಗಳಿಗೆ ಅಧ್ಯಯನದ ಸಲುವಾಗಿ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದ ವಿವಿಧ ರೀತಿಯ ಸಹಾಯವನ್ನು ಇದು ನೆನಪಿಸುತ್ತದೆ. ಬಡತನ ಅಧ್ಯಯನಕ್ಕೆ ಮಿತಿಯಾಗದು ಎಂಬ ಅಂಶ ಇಲ್ಲಿರುವಂತಿದೆ.

    ಇಂಗ್ಲೆಂಡಿಗೆ ಹೋಗಲು ಅಂದು ಇದ್ದ ಏಕೈಕ ದಾರಿಯೆಂದರೆ ಸಮುದ್ರಮಾರ್ಗ. ಇದಕ್ಕೆ ಸರಕು ಸಾಗಣೆಯ ಇಲ್ಲವೆ ಪ್ರಯಾಣಿಕ ಹಡಗನ್ನು ಬಳಸುವುದು ಅನಿವಾರ್ಯವಾಗಿತ್ತು. ಇಂತಹ ಹಡಗುಗಳು ಮಾರ್ಗ ಮಧ್ಯದಲ್ಲಿ ದುರಂತಕ್ಕೆ ಗುರಿಯಾಗುವುದೂ ಸಹಜವಾಗಿತ್ತು. ಈ ಬಗೆಗೆ ಲೇಖಕಿಗೆ ಸ್ಪಷ್ಟವಾದ ತಿಳುವಳಿಕೆದೆ. ಕುತೂಹಲದ ಸಂಗತಿಯೆಂದರೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಬೃಹತ್ ಹಡಗು 'ಟೈಟಾನಿಕ್' ಸಮುದ್ರ ಮಾರ್ಗ ಮಧ್ಯದಲ್ಲಿ ದುರಂತವನ್ನು ಹೊಂದಿರುವುದು ಇದೇ ಕಾಲ ಘಟ್ಟದಲ್ಲಿ ಎಂಬುದು ಗಮನಾರ್ಹ. ಸಾಮಾನ್ಯವಾಗಿ ಕಥಾನಾಯಕರು ಮಾತ್ರ ಹಡಗನ್ನೇರುತ್ತಿದ್ದ ಕಾಲಘಟ್ಟದಲ್ಲಿ ಲೇಖಕಿ ಕೃಷ್ಣಾಬಾಯಿಯನ್ನೂ ಇಂಗ್ಲೆಂಡಿಗೆ ಹೋಗುವ ಹಡಗು ಹತ್ತಿಸಿದ್ದಾರೆ. ಆಕೆ ಇಂಗ್ಲೆಂಡನ್ನು ತಲುಪಿದ್ದರೆ ಅದೊಂದು ಚಾರಿತ್ರಿಕ ಘಟನೆಯಾಗುತ್ತಿತ್ತು ; ಆದರೆ ಕೃಷ್ಣಾಬಾಯಿಗೆ ತಲುಪಲಾಗದೆ ಹೋದದ್ದು ದುರಂತವೇ ಸರಿ.

    ಶಾಂತಾಬಾಯಿ ತಮ್ಮ ಕೃತಿಯಲ್ಲಿ ಸ್ವಾತಂತ್ರ್ಯ ಪೂರ್ವದ ಆದರ್ಶ ಪ್ರಾಯಳಾದ ಸ್ತ್ರೀ ಮಾದರಿಯನ್ನು ನೀಡುತ್ತಿರುವಂತೆಯೇ ಬದುಕನ್ನು ವ್ಯರ್ಥವಾಗಿ ಕಳೆಯುತ್ತಿದ್ದ ಕೃಷ್ಣಾಬಾಯಿಯ ಅಕ್ಕ ಯಶೋಧಾಬಾಯ ಚಿತ್ರವನ್ನೂ ನೀಡುವರು. " ದೊಡ್ಡ ಶಹರಗಳಲ್ಲಿ ಜನರ ನೀತಿಯನ್ನು ಸುಧಾರಿಸುವ ಅನೇಕ ಸಾಧನಗಳಿರುವಂತೆಯೇ ಅದನ್ನು ಕೆಡಿಸುವ ಸಾಧನಗಳೂ ಅನೇಕ ಇರುವವು." ಎಂಬ ಲೇಖಕಿಯ ಮಾತು ಗಮನಾರ್ಹ. ಯಶೋಧಾಬಾಯಿ ಆರ್ಥಿಕವಾಗಿ ಸ್ವತಂತ್ರಳಾದರೂ ತಿರುಗಾಟ, ಹರಟೆ, ಆಟ, ನಾಟಕ ಮುಂತಾದ ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ತನ್ನ ಸಮಯವನ್ನು ಕಳೆಯುತ್ತಿದ್ದಳು. ಇಂಥ ತಾಯ ಮಕ್ಕಳು ಹೇಗೆ ಹಾದಿತಪ್ಪಿ ನಡೆಯುವರು ಎಂಬುದರ ಕಡೆಗೆ ಲೇಖಕಿ ಓದುಗರ ಗಮನ ಸೆಳೆಯುತ್ತಾರೆ. ಅಲ್ಲದೆ ಅಕ್ಕ ಮತ್ತು ತಂಗಿಯರ ವ್ಯಕ್ತಿತ್ವದಲ್ಲಿರುವ ವೈರುಧ್ಯಗಳನ್ನು ಚಿತ್ರಿಸುವುದರ ಮೂಲಕ ವರ್ತಮಾನದ ಬದುಕಿಗೆ ಅಪೇಕ್ಷಿತ ಸ್ತ್ರೀ ಮಾದರಿಯನ್ನು ನೀಡುತ್ತಾರೆ. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಶಿಕ್ಷಣದ ಆಸಕ್ತಿಯನ್ನು ಬೆಳೆಸುವ ಕೃಷ್ಣಾಬಾಯಿ ಆಧುನಿಕ ಶಿಕ್ಷಣದ ಪ್ರತಿಪಾದಕಳಾಗಿ ನಿಲ್ಲುತ್ತಾಳೆ. ಮನೆಯೊಳಗೆ ಸ್ತ್ರೀಯರ ನಡುವೆ ಅಧಿಕಾರಕ್ಕಾಗಿ ನಡೆಯುವ ಹೋರಾಟ, ಮತ್ಸರ, ಇರುಸುಮುರುಸು, ಅಸಹನೀಯ ವಾತಾವರಣದ ಚಿತ್ರವನ್ನು ಗಂಗಾಬಾಯ ಸಂದರ್ಭದಲ್ಲಿ ನೋಡಲು ಸಾಧ್ಯ. ಕೃಷ್ಣಾಬಾಯ ಒಳ್ಳೆಯತನವನ್ನು ಗುರುತಿಸಲು ಗಂಗಾಬಾಯಿಯ ಪಾತ್ರದ ಬಳಕೆಯಾಗಿದೆ ಎಂದು ಅನಿಸಿದರೂ ಆಕೆಯ ದುಷ್ಟತನದ ಹಿಂದಿನ ಪ್ರೇರಣೆಗಳು ಬೇರೆಯದೇ ಆಗಿವೆ.

    ಒಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡ ಮಧ್ಯಮವರ್ಗ ಈ ಸಂಸ್ಕೃತಿಂದ ಬೇರ್ಪಟ್ಟರೂ ಅದರೊಂದಿಗೆ ಮರುಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್‍ಯತೆತ್ತು. ಸ್ತ್ರೀಗೆ ವಿದ್ಯೆ ನೀಡಬೇಕು ಎನ್ನುವುದು ಈ ವರ್ಗದ ಖಚಿತವಾದ ನಿಲುವು. ಅಂದರೆ ಸುಧಾರಣಾವಾದ ಮೊದಲು ಮೇಲ್ವರ್ಗದಲ್ಲಿ ಕಂಡುಬಂತೆನ್ನುವ ವಾಸ್ತವವಾದಿ ಚಿತ್ರ ಇಲ್ಲಿದೆ. ಆರಂಭಕಾಲೀನ ಕಾದಂಬರಿಗಳಂತೆ ಈ ಕೃತಿಗೂ ಕಥಾನಾಯಕಿಯ ಹೆಸರನ್ನೇ ಇಡಲಾಗಿದೆ. ದೇಶದಲ್ಲೆಲ್ಲಾ ಸ್ವಾತಂತ್ರ್ಯ ಹೋರಾಟದ ವಾತಾವರಣವಿದ್ದರೂ ಕೃತಿ ಈ ಬಗ್ಗೆ ಮೌನವಹಿಸುತ್ತದೆ. ಮಾತ್ರವಲ್ಲ, ವಸಾಹತು ಆಡಳಿತದ ಬಗೆಗೆ ಗೌರವವಿದೆ. ಹೆಂಗಸರಿಗೆ ವಿದ್ಯೆ ಕಲಿಸಬೇಕೆಂಬ ವಿಷಯ " ಈ ದೇಶದಲ್ಲಿ ದಯಾಳು ಇಂಗ್ಲಿಷ್ ರಾಜ್ಯದಾಡಳಿತೆ ಪ್ರಾರಂಭವಾದಂದಿನಿಂದ ಜನರಿಗೆ ತಿಳಿಯ ಹತ್ತಿರುತ್ತದೆ" 'ಇಂಗ್ಲೆಂಡು ಲಕ್ಷ್ಮೀನಿವಾಸ' ಎಂಬಲ್ಲಿ ವಸಾಹತು ಆಡಳಿತದ ಬಗೆಗೆ ಆಸಕ್ತಿ ಮತ್ತು ಅದು ಸ್ವೀಕೃತವಾಗಲು ಕಾರಣ ಸೂಚಿತವಾಗಿದೆ. ಭಾಷಾಬಳಕೆಯ ದ್ವಂದ್ವದಿಂದಾಗಿ ಈ ಕೃತಿ ಗಮನ ಸೆಳೆಯುತ್ತದೆ. ಹೊಸಗನ್ನಡ ರೂಪುಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಬಂದ ಕೃತಿಯಿದು. ಮುಖ್ಯವಾಗಿ ಉತ್ತರ ಕರ್ನಾಟಕದ ಜನಭಾಷೆಯ ಭಾಷಾರೂಪದ ಹಲವು ಪದಗಳು ಇಲ್ಲಿ ಬಳಕೆಯಾಗಿದೆ. ಇನಾಮು, ಕೋಠಿಮನೆ, ಇಂಗ್ರೇಜಿ, ಜಡ್ಡು, ಗೋಜಲು, ಜಿಂದಿಗಿ, ಅಬಚಿ, ಸೂಟಿ, ಅಡಚಣಿ, ಅಡಗಿ, ತಿನುಸಾಳಿ, ಖೊಳಂಬಿಸು, ಬುರಿಕೆ, ಯಾಕಾಗವಲ್ಲದು, ಹಳಹಳಿ, ಹುರುಪಳಿಸು, ಅರಿವೆ ಅಂಚಡಿ, ನೆಗೆಣ್ಣಿ ಮೊದಲಾದ ಪದಗಳು ಗಮನ ಸೆಳೆಯುತ್ತವೆ. 'ಸದ್ಗುಣಿ ಕೃಷ್ಣಾಬಾಯಿ' ಲೇಖಕಿಯರ ಹಾಗೂ ಶಾಂತಾಬಾಯಿಯವರ ಮೊದಲ ಕೃತಿ ಎಂಬ ಕಾರಣಕ್ಕೇ ಐತಿಹಾಸಿಕವಾಗಿ ಮುಖ್ಯವಾಗುವುದಿಲ್ಲ. ವಸಾಹತುಶಾಹಿ ಆಡಳಿತದ ಪರಿಣಾಮವಾಗಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಸೂಕ್ಷ್ಮ ಬದಲಾವಣೆಯ ಚಿತ್ರವಿದೆ. ವೈದ್ಯಶಾಸ್ತ್ರ, ವಕೀಲಿ ವೃತ್ತಿ, ಡಾಕ್ಟರ್ ವೃತ್ತಿ, ಖಾಸಗಿ ಕಂಪನಿಯಲ್ಲಿ ದುಡಿಸುವ ರೀತಿ, ಅಂಚೆ ಸೇವೆ, ತಾರು(ಟೆಲಿಗ್ರಾಂ) ಶಾಲಾರ್ವಾಕೋತ್ಸವ, ಪತ್ರಿಕೆ, ಕಂಪನಿ ನಾಟಕ, ಇಂಗ್ಲಿಷ್ ಸಾಹಿತ್ಯ, ಬದಲಾಗುತ್ತಿರುವ ಜೀವನ ಕ್ರಮ ಮೊದಲಾದ ಅಂಶಗಳನ್ನು ತನ್ನ ಒಡಲಿನಲ್ಲಿ ದಾಖಲಿಸಿದೆ. ಹೀಗಾಗಿ ಸಂಕ್ರಮಣ ಸ್ಥಿತಿಯಲ್ಲಿರುವ ಭಾರತೀಯ ಸಮಾಜ ಆಕಾರ ಪಡೆಯುತ್ತಿದ್ದ ವಿವಿಧ ಮುಖ ಮತ್ತು ವೈರುಧ್ಯಗಳನ್ನು ಯಾವುದೇ ಆಡಂಬರಗಳಿಲ್ಲದೆ ದಾಖಲಿಸುವ ಈ ಕೃತಿ ನಿಜ ಅರ್ಥದಲ್ಲಿ 'ಬದುಕಿನ ಕನ್ನಡಿ'ಯಾಗುತ್ತದೆ. ಸ್ವಾತಂತ್ರ್ಯಪೂರ್ವದ ಬದುಕನ್ನು ನಿರುದ್ವಿಗ್ನವಾಗಿ ಚಿತ್ರಿಸುವ ಈ ಕಾದಂಬರಿಯಲ್ಲಿ, ವಾಸ್ತವವಾದಿ ಸಾಹಿತ್ಯದ ಎಳೆಗಳು ಮೊದಲ ನೋಟಕ್ಕೆ ಎದುರಾಗುತ್ತವೆ.

    Read more...

    Sunday, October 3, 2010

    1

    ಸದ್ಗುಣಿ ಕೃಷ್ಣಾಬಾಯಿ - ಒಂದು ಮರುನೋಟ

  • Sunday, October 3, 2010
  • ಡಾ.ಶ್ರೀಧರ ಎಚ್.ಜಿ.
  • (ಎಸ್.ಡಿ.ಎಂ. ಕಾಲೇಜು ಉಜಿರೆಯವರು ಪ್ರಕಟಿಸಿದ ಶೋಧನ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ)

    ಶಾಂತಾಬಾಯಿ ನೀಲಗಾರ ಬರೆದ 'ಸದ್ಗುಣಿ ಕೃಷ್ಣಾಬಾ ಅಥವಾ ಉತ್ತಮ ಗೃಹಿಣಿ' (೧೯೦೮) ಕಾದಂಬರಿ ಪ್ರಕಟವಾಗಿ ಒಂದು ಶತಮಾನ ಕಳೆಯಿತು. ಲೇಖಕಿಯೊಬ್ಬರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ಎಂದು ಇದನ್ನು ಸದ್ಯಕ್ಕೆ ಸ್ವೀಕರಿಸಲಾಗಿದೆ. ಹೀಗಾಗಿ ಐತಿಹಾಸಿಕವಾಗಿ ಮೊದಲ ಕಾದಂಬರಿಕಾರ್ತಿ ಎಂಬ ಹೆಸರು ಸದ್ಯಕ್ಕೆ ಶಾಂತಾಬಾಯಿ ನೀಲಗಾರ ಅವರಿಗೆ ಸಲ್ಲುತ್ತದೆ.

    ಕೃತಿಯಲ್ಲಿ ೯೧ ಪುಟವಿದ್ದು ಇದರ ಬೆಲೆ ಎಂಟು ಅಣೆ. " ಚಚಡಿ ದೇಸಗತಿಯ ಕಾರಬಾರಿಗಳಾದ ಮ.ರಾ. ನರಸಿಂಹಾಚಾರ್ಯ ಕಾವ್ಯಾನಂದ ಪುಣೇಕರ ಎಂಬ ಸಭ್ಯಗೃಹಸ್ಥರು ತಮ್ಮ ಸ.ವಾ.ಸೌ. ರಾಧಾಬಾಯಿ ಪುಣೇಕರ ಇವರ ಸ್ಮರಣಕ್ಕಾಗಿ ಸಂತುಷ್ಟೋ ಭಾರ್ಯಾಯಾ ಭರ್ತಾ ಭರ್ತಾಭಾರ್ಯಾ ಪರಸ್ಪರಮ್ಯಸ್ಮಿನ್ನೇವ ಕುಲೇನಿತ್ಯಂ ಕಲ್ಯಾಣಂ ತತ್ರವೈದ್ರುವಮ್ಈ ಮನೂಕ್ತಿ ಶಿರೋಲೇಖನದ ನಿಬಂಧವನ್ನು ಬರೆಸುವುದಕ್ಕೆ ೨೫ರೂ ಪಾರಿತೋಷಕ ಕೊಡುತ್ತೇವೆಂದು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ತಿಳುಹಿಸಿದರು. ಈ ನಿಬಂಧವನ್ನು ನಮ್ಮ ದೇಶಭಗಿನಿಯರೊಳಗಿನವರೊಬ್ಬರು ಬರೆದರೆ ಬಹಳ ವಿಹಿತವಾಗುವುದೆಂದೂ ತಮ್ಮ ಅಭಿಪ್ರಾಯವನ್ನು ವ್ಯಕ್ತಮಾಡಿದ್ದರು. ಅದರಂತೆ ಸಂಘದವರು ಅಂತ:ಕರಣ ಪೂರ್ವಕವಾಗಿ ಆ ಕಾರ್ಯವನ್ನು ನನಗೆ ಒಪ್ಪಿಸಿದರು. ನಾನು ಒಂದು ಕಥಾರೂಪದಿಂದ ಅದನ್ನು ಕ್ರಮಕ್ರಮವಾಗಿ ವಾಗ್ಭೂಷಣದಲ್ಲಿ ಕೊಟ್ಟು ಮುದ್ರಿಸಿ ತಮ್ಮ ಮುಂದೆ ಇಟ್ಟಿರುವೆನು" ಎಂಬ ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ಲೇಖಕಿ ಈ ಕೃತಿ ಹುಟ್ಟಿ ಬಂದ ಹಿನ್ನೆಲೆ ಮತ್ತು ಆಶಯವನ್ನು ವಿವರಿಸಿದ್ದಾರೆ.

    ಮಹಿಳೆಯರನ್ನು ಬರವಣಿಗೆಯಲ್ಲಿ ತೊಡಗಿಸಲು ಸಂಘ ಸಂಸ್ಥೆಗಳು ಬಹುಮಾನಗಳನ್ನು ನೀಡುತ್ತಿದ್ದ ಅಂಶ ಇಲ್ಲಿ ವ್ಯಕ್ತವಾಗಿದೆ. ಈ ಬಗೆಯ ಆಹ್ವಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯಾಗಿ 'ಮಹಿಳೆಯ ಅಕ್ಷರಲೋಕ' ತೆರೆದುಕೊಂಡಿತು ಎನ್ನುವುದು ಗಮನಾರ್ಹ ಅಂಶ. ಕೃತಿಯ ಶೀರ್ಷಿಕೆಯ ಪುಟದಲ್ಲಿ ೧೯೦೮ ಎಂದಿದ್ದು ಪ್ರಸ್ತಾವನೆಯ ಕೊನೆಯಲ್ಲಿ 'ಧಾರವಾಡ ೩೧.೦೩.೦೯' ಎಂಬ ದಿನಾಂಕವು ನಮೂದಾಗಿದೆ. ಬಹುತೇಕ ಕೃತಿಯನ್ನು ೧೯೦೮ರಲ್ಲಿ ಬರೆದು ವಾಗ್ಭೂಷಣದಲ್ಲಿ ಕ್ರಮವಾಗಿ ಮುದ್ರಿಸಿ ೧೯೦೯ರಲ್ಲಿ ಇದನ್ನು ಒಟ್ಟು ಸೇರಿಸಿ ಕೃತಿ ರೂಪದಲ್ಲಿ ಪ್ರಕಟಿಸಿರಬೇಕು. 'ಪ್ರಸ್ತಾವನೆಯು' ಆಗಲೇ ಸೇರಿಕೊಂಡಿರಬೇಕು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ ಗ್ರಂಥಮಾಲೆಯ ೪೬ನೆಯ ಪುಸ್ತಕವಾಗಿ ಶಾಂತಾಬಾಯಿಯವರ ಕೃತಿ ಪ್ರಕಟವಾಗಿದೆ.

    ಶಾಂತಾಬಾಯಿ ನೀಲಗಾರ ಅವರು 'ಗರ್ಲಸ್ಕೂಲಿನ ಹೆ. ಮಿಸ್‌ಟ್ರೆಸ್' ಆಗಿದ್ದರು. ಅಂದರೆ ಉನ್ನತ ಶಿಕ್ಷಣವನ್ನು ಪಡೆದ ಲೇಖಕಿ ಬಾಲಕಿಯರ ಶಾಲೆಯಲ್ಲಿ ಮುಖ್ಯೋಪಾಧ್ಯಾನಿಯಾಗಿದ್ದರು. ಉಳಿದಂತೆ ಶಾಂತಾಬಾಯಿಯವರ ಬಗೆಗೆ ಖಚಿತ ಮಾಹಿತಿಗಳು ದೊರೆತಿಲ್ಲ. ಈ ಅಪೂರ್ವ ಕೃತಿಯನ್ನು ೧೯೯೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮರುಮುದ್ರಣ ಮಾಡಿದ್ದು ಇದಕ್ಕೆ ವಿಜಯಾ ದಬ್ಬೆಯವರು 'ಸಾಂಪ್ರದಾಕ ರೂಪ ಆಧುನಿಕ ಸತ್ತ್ವ' ಎಂಬ ಹೆಸರಿನಲ್ಲಿ ಕೃತಿಪರಿಚಯದ ಮಾತುಗಳನ್ನು ಆರಂಭದಲ್ಲಿ ಬರೆದಿರುವರು. ೧೯೯೬ರಲ್ಲಿ ಪ್ರಕಟವಾದ ಕೃತಿಯ ಮುಖಪುಟವನ್ನು ಈ ಲೇಖನದೊಂದಿಗೆ ಪ್ರಕಟಿಸಿದೆ.

    ಪಾಶ್ಚಾತ್ಯರ ಸಂಪರ್ಕದಿಂದಾಗಿ ಶತಮಾನಗಳಿಂದ ಬಂದ ಹಲವು ಆಚಾರ, ವಿಚಾರ, ಪದ್ಧತಿ, ಸಾಂಪ್ರದಾಕ ಮೌಲ್ಯಗಳ ಸ್ವರೂಪವು ಗುರುತು ಹಿಡಿಯಲಾಗದಷ್ಟು ವೇಗವಾಗಿ ಬದಲಾಯಿತು. ವಿರೋಧ, ಹೊಂದಾಣಿಕೆ, ಪರಿಷ್ಕಾರದ ನೆಲೆಗಳಲ್ಲಿ ಹೊಸ ಚಿಂತನೆಗಳು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಎಡೆಪಡೆದವು. ರಾಜಾರಾಂ ಮೋಹನ್‌ರಾಯ್ ಮುಂತಾದ ಸಮಾಜ ಸುಧಾರಕರ ಸುಧಾರಣಾವಾದಿ ಚಳುವಳಿ ಹಾಗೂ ಇಂಗ್ಲಿಷ್ ವಿದ್ಯಾಭ್ಯಾಸದ ಪರಿಣಾಮವಾಗಿ ಪರಂಪರಾಗತ ಶಿಕ್ಷಣ ಪದ್ಧತಿ ತನ್ನ ಅರ್ಥವಂತಿಕೆಯನ್ನು ಕಳೆದುಕೊಂಡು ಹೊಸ ದಿಕ್ಕಿನ ಕಡೆಗೆ ಚಲಿಸಿತು. ಪುರುಷರೊಂದಿಗೆ ಮಹಿಳೆಯರಿಗೂ ಶಿಕ್ಷಣದ ಬಾಗಿಲು ತೆರೆದುಕೊಂಡಿತು.

    ವಸಾಹತುಶಾಹಿ ಆಡಳಿತ, ಆಧುನಿಕ ಶಿಕ್ಷಣ, ಉದ್ಯೋಗದ ಹೊಸ ಸಾಧ್ಯತೆಂದಾಗಿ ಸಿದ್ಧಮಾದರಿಯ ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಯ ಒಳನೆಲೆಗಳಲ್ಲಿ ಬದಲಾವಣೆಯ ಚಲನೆ ಕಾಣಿಸಿಕೊಂಡಿತು. ಈ ದೃಷ್ಟಿಯಿಂದ 'ಸದ್ಗುಣಿ ಕೃಷ್ಣಾಬಾಯಿ' ಒಂದು ಗಮನಾರ್ಹ ಕೃತಿ. ಆಧುನಿಕ ಶಿಕ್ಷಣ ಸ್ತ್ರೀಗೆ ನೀಡಿದ ಒಳ ಎಚ್ಚರ ಈ ಕೃತಿಯ ನಾಯಕಿಯಲ್ಲಿದೆ. ಹೀಗಾಗಿ ಆಕೆಯಲ್ಲಿ ತನ್ನ ಪರಿಸರದ ಬದುಕಿನ ಚಲನೆಯನ್ನು ಬದಲಿಸುವ, ಮರು ರೂಪಿಸುವ ಶಕ್ತಿರುವುದನ್ನು ನೋಡಬಹುದು.

    ಕೃತಿಯ ಆರಂಭದಲ್ಲಿ ಬರುವ ಮಾತುಗಳಿಗೆ ಬದಲಾಗಿ ಶಿಕ್ಷಣವನ್ನು ಪಡೆದ ಸ್ತ್ರೀಯ ವ್ಯಕ್ತಿತ್ವದ ಸಾಧ್ಯತೆಗಳನ್ನು ಗುರುತಿಸುತ್ತಾ ಹೋಗುತ್ತದೆ. ಜೊತೆಗೆ ಸಾಮಾಜಿಕ ಸ್ತರಗಳಲ್ಲಿ ನೆಲೆಯೂರಿದ್ದ ಸ್ತ್ರೀ ವಿರೋಧಿ ನಿಲುವುಗಳನ್ನು ಮೌನವಾಗಿ ಮುರಿದು ಕಟ್ಟುತ್ತದೆ. ಶಾಂತಾಬಾಯವರ ಬರವಣಿಗೆಯಲ್ಲಿನ ಈ ಶಕ್ತಿ ಮುಂದಿನ ಸ್ತ್ರೀ ಪರ ಚಲನೆಗೆ ಮುನ್ನುಡಿಯಂತಿದೆ. ಕೃತಿಯಲ್ಲಿ ಏಳು ಪುಟದ ಉಪೋದ್ಘಾತ ಮತ್ತು ಒಂಬತ್ತು ಭಾಗವಿದೆ. ಉಪೋದ್ಘಾತದ ಭಾಗದಲ್ಲಿ ಲೇಖಕಿ ಉತ್ತಮ ಗೃಹಿಣಿಯಲ್ಲಿ ಇರಬೇಕಾದ ಗುಣಗಳನ್ನು ಸಾಂಪ್ರದಾಕ ತಿಳುವಳಿಕೆಯ ಹಿನ್ನೆಲೆಯಲ್ಲಿ ಗುರುತಿಸುತ್ತದೆ. ಹೊರನೋಟಕ್ಕೆ ಇಲ್ಲಿ ಲೇಖಕಿಯ ಧೋರಣೆಯು ಸಂಪ್ರದಾಯಕ್ಕಿಂತ ಭಿನ್ನವಾಗಿಲ್ಲ.

    " ಸುಶೀಲ ಸ್ತ್ರೀ ದೊರೆತರೆ ಅವನು ಶ್ರೀಮಂತನೇ ಇರಲಿ, ಬಡವನೇ ಇರಲಿ ಅವನು ನಿಜವಾಗಿ ಸುಖಿಯಾಗುವನು"(ಪು.೧) "ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಕೀರ್ತಿ ತರತಕ್ಕಂಥವರೇ ಉತ್ತಮ ಗೃಹಿಣಿಯರು" (ಪು.೨) "ನೀತಿವಂತಳೂ, ಈಶ್ವರ ನಿಷ್ಠಳೂ ಇದ್ದ ಹೊರ್ತು ಯಾರಿಗೂ ಉತ್ತಮ ಸ್ತ್ರೀ ಎಂಬ ಹೆಸರು ಬರಲಾರದು"(ಪು.೩) "ಯಾವ ಸ್ತ್ರೀಯು ತನ್ನ ಮನಸ್ಸನ್ನೂ ವಾಣಿಯನ್ನೂ ದೇಹವನ್ನೂ ತನ್ನ ಸ್ವಾಧೀನದಲ್ಲಿಟ್ಟುಕೊಂಡು ಪತಿಯ ಆಜ್ಞೆಯ ಹೊರತಾಗಿ ಯಾವ ಕೆಲಸವನ್ನೂ ಮಾಡುವುದಿಲ್ಲವೋ ಆಕೆಯೇ ಸಾಧ್ವಿಯೆಂದು ಮನು ನುಡಿದಿರುವನು"(ಪು.೩) "ನಿಜವಾದ ಪತ್ನಿ ಪತಿಯ ಸುಖವೇ ತನ್ನ ಸುಖವೆಂದು ಎಣಿಸುವಳು ಮತ್ತು ಅವನ ದು:ಖಗಳಲ್ಲಿ ಪಾಲುಗಾರಳಾಗುವಳು"(ಪು.೬) "ನಿಜವಾದ ಪತ್ನಿಯು ದೊಡ್ಡಮನಸ್ಸಿನವಳೂ, ಮಮತೆಯುಳ್ಳವಳೂ, ಸ್ವಾರ್ಥಶೂನ್ಯಳೂ ಇರುವಳು. ಆಕೆಯು ತನ್ನ ಸುಖದ ಕಡೆಗೆ ಲಕ್ಷ್ಯಕೊಡದೆ, ತನ್ನ ಪತಿಯ ಸುಖವೆ ತನ್ನ ಸುಖವೆಂದು ಎಣಿಸುವಳು".(ಪು.೬) ಇಂತಹ ಹಲವು ಮಾತುಗಳು ಈ ಭಾಗದಲ್ಲಿ ಬರುತ್ತವೆ. ಉತ್ತಮ ಗೃಹಿಣಿಯಲ್ಲಿರಬೇಕಾದ ಅಂಶಗಳನ್ನು ವ್ಯಕ್ತಮಾಡಿ ತೋರಿಸುವ ಚಿಕ್ಕ ಕಥೆಯನ್ನು ಬರೆಯುವೆನೆಂದು ತಿಳಿಸುವುದರೊಂದಿಗೆ ಉಪೋದ್ಘಾತ ಮುಗಿಯುವುದು.

    ಉಪೋದ್ಘಾತದಲ್ಲಿ ಬರುವ ವಿವರಗಳಿಗೆ ಕೃಷ್ಣಾಬಾಯ ಬದುಕು ಒಂದು ಮಾದರಿಯಾಗಿ ನಿಲ್ಲುತ್ತದೆ. ಕಥಾಸಾರಾಂಶ : ಕಥಾನಾಯಕಿ ಕೃಷ್ಣಾಬಾಯಿಯ ಹೆತ್ತವರು ಕರ್ನಾಟಕ ದೇಶದವರಾದರೂ ಸರಕಾರಿ ಕೆಲಸದ ಸಲುವಾಗಿ ಮಹಾರಾಷ್ಟ್ರ ದೇಶದಲ್ಲಿ ಬಹುಕಾಲ ವಾಸವಾಗಿದ್ದರು. ಈಕೆಯ ತಂದೆ ಹರಿವಂತ. ತಾಯಿ ರಾಧಾಬಾಯಿ. ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡ ಕೃಷ್ಣಾಬಾಯಿ ತನ್ನ ಅಣ್ಣ ಶಾಮರಾಯ ಹಾಗೂ ಗುರುಗಳ ಪ್ರೋತ್ಸಾಹದಿಂದ ಶಿಕ್ಷಣವನ್ನು ಕಲಿತಳು. ಇದರೊಂದಿಗೆ ಅಡಿಗೆ, ಕಸೂತಿ, ರಂಗವಲ್ಲಿ, ಹಾಡು, ಹೆಣಿಕೆ ಮುಂತಾದ ಗೃಹಕೃತ್ಯವನ್ನು ಶ್ರದ್ದೆಯಿಂದ ಕಲಿತಳು.

    ಉದ್ಯೋಗದ ನಿಮಿತ್ತ ಮುಂಬಯಿಗೆ ಬಂದ ಶಾಮರಾಯ ತಂಗಿಯನ್ನು ಅಲ್ಲಿನ ಝನಾನಾ ಮಿಶನದ ಬಾಲಿಕಾ ಶಾಲೆಗೆ ಸೇರಿಸಿದನು. ಶಿಕ್ಷಣದಲ್ಲಿ ಮೊದಲ ಸ್ಥಾನವನ್ನು ಪಡೆದ ಕೃಷ್ಣಾಬಾಗೆ ಅನೇಕ ಗಣ್ಯರ ಸಮ್ಮುಖದಲ್ಲಿ ಸುವರ್ಣಪದಕವೂ ಹಲವು ಇನಾಮುಗಳು ದೊರೆತು. ಬಹುಮಾನ ವಿತರಣೆಯ ಸಮಾರಂಭದಲ್ಲಿ ಕರ್ನಾಟಕ ಮೂಲದ ಭಾವೂಸಾಹೇಬ ಮತ್ತು ಆತನ ಮಗ ಮಾಧವರಾಯನ ಪರಿಚಯವಾಯಿತು.

    ಯೋಗಾಯೋಗವೆಂಬಂತೆ ಭಾವೂಸಾಹೇಬ ಮತ್ತು ಕೃಷ್ಣಾಬಾಯ ತಂದೆ ಹರಿವಂತರು ಬಾಲ್ಯ ಸ್ನೇಹಿತರಾಗಿದ್ದರು. ಇಲ್ಲಿ ಆದ ಪರಿಚಯ ಸಂಬಂಧಕ್ಕೆ ತಿರುಗಿ ಕೃಷ್ಣಾಬಾಯಿ ಮತ್ತು ಮಾಧವರಾಯನ ನಡುವೆ ವಿವಾಹ ನಡೆತು. ಇದಾಗಿ ಸ್ವಲ್ಪ ಸಮಯದಲ್ಲಿಯೇ ರಾಧಾಬಾಯಿಯ ಅರೋಗ್ಯ ಹವಾಮಾನದ ವ್ಯತ್ಯಯದಿಂದ ಹಾಳಾಗಿದ್ದರಿಂದ ಶ್ಯಾಮರಾಯನು ತಾಯಿಯನ್ನು ಕರೆದುಕೊಂಡು ಊರಿಗೆ ಹಿಂದಿರುಗಿದರು. ಆದರೆ ಯಾವುದೇ ಚಿಕಿತ್ಸೆಯೂ ಪರಿಣಾಮ ಬೀರದೆ ರಾಧಾಬಾಯಿ ಮೃತಳಾದಳು. ಇದಾಗಿ ಸ್ವಲ್ಪ ಸಮಯದಲ್ಲಿ ಅತ್ತೆ ರಮಾಬಾಯಿ ಮತ್ತು ಮಾವ ಬಾವೂಸಾಹೇಬರು ತೀರಿಕೊಂಡಳು.

    ಇದರಿಂದಾಗಿ ಮನೆಯ ಜವಾಬ್ದಾರಿ ಕೃಷ್ಣಾಬಾಯ ಹೆಗಲೇರಿತು. ಈ ವೇಳೆಗೆ ಆಕೆಯ ಪತಿ ಮಾಧವರಾಯ ಎಲ್.ಎಲ್.ಬಿ. ಪರೀಕ್ಷೆಯನ್ನು ಬರೆಯಲು ಅಧ್ಯಯನ ಮಾಡುತ್ತಿದ್ದನು. ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ವಿಶಾಲವಾದ ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋದರು. ಮುಂಬುಯಂಥ ಶಹರದಲ್ಲಿ ಸದ್ಯ ವಕೀಲಿ ಮಾಡುವುದು ಲಾಭಕರವಲ್ಲವೆಂದು ಯೋಚಿಸಿ ಮಾಧವರಾಯ ಮುಂಬುಯ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ಸ್ವಲ್ಪ ಸಮಯದಲ್ಲಿಯೇ ಆ ವೃತ್ತಿಯನ್ನು ತ್ಯಜಿಸಿ ಉನ್ನತ ಶಿಕ್ಷಣವನ್ನು ಪಡೆಯುವ ಹಂಬಲ ಹೆಚ್ಚಿತು.

    ಕೃಷ್ಣಾಬಾಯಿ ಗುಟ್ಟಿನಲ್ಲಿ ತನ್ನ ಒಡವೆಯನ್ನು ಮಾರಿ ಹಣದ ವ್ಯವಸ್ಥೆಯನ್ನು ಮಾಡಿದ್ದರಿಂದ ಸಿವಿಲ್ ಸರ್ವಿಸ್ ಅಥವಾ ಬ್ಯಾರಿಸ್ಟರ್ ಪರೀಕ್ಷೆಯನ್ನು ಬರೆಯಲು ಪತ್ನಿಯೊಂದಿಗೆ ಇಂಗ್ಲೆಂಡಿಗೆ ಹೊರಟನು. ಅವರು ಪ್ರಯಾಣ ಮಾಡುತ್ತಿದ್ದ ಹಡಗು ದಾರಿಯ ನಡುವೆ ಮುಳುಗುವ ಹಂತ ತಲುಪಿದಾಗ ಅಲ್ಲಿಂದ ಪಾರಾಗುವ ಗೊಂದಲದಲ್ಲಿ ಕೃಷ್ಣಾಬಾ ಯಿ ಮತ್ತು ಮಾಧವರಾಯ ಬೇರೆ ಬೇರೆ ಹಡಗುಗಳಿಗೆ ವರ್ಗಾಸಲ್ಪಟ್ಟರು. ಇದರ ಪರಿಣಾಮವಾಗಿ ಕೃಷ್ಣಾಬಾಯಿ ಮರಳಿ ಮುಂಬಯಿಗೂ , ಮಾಧವರಾಯ ಇಂಗ್ಲೆಂಡಿಗೂ ತಲುಪಿದರು. ಕೃಷ್ಣಾಬಾಯಿ ಪುಣೆಯ ತನ್ನ ಅಕ್ಕನ ಮನೆಯಲ್ಲಿ ಆಶ್ರಯಕ್ಕೆ ಬಂದಳು. ಅಕ್ಕನ ಮಕ್ಕಳಾದ ಕಾಶಿ, ಗೋದಾವರಿ, ಬಳವಂತರಿಗೆ ಸೂಕ್ತ ಶಿಕ್ಷಣ, ಮಾರ್ಗದರ್ಶನವನ್ನು ನೀಡಿ - ಗಂಗಾಬಾಯಿಯ ಮತ್ಸರದ ನಡುವೆಯೂ- ಎಲ್ಲರ ಮೆಚ್ಚುಗೆಯನ್ನು ಗಳಿಸಿದಳು. ಇಂಗ್ಲೆಂಡಿನ ವ್ಯಾಪಾರಿ ಲ್ಯಾಂಬರ್ಟಿನ್ ಸಾಹೇಬನ ನೆರವಿನಿಂದ ಮಾಧವರಾಯ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಮುಗಿಸಿ ಮುಂಬುಗೆ ಮರಳಿ ಪುಣೆಯಲ್ಲಿದ್ದ ಪತ್ನಿಯನ್ನು ಭೇಟಿಯಾದನು. ಅನಂತರ ಪುಣೆಯ ಅಸಿಸ್ಟೆಂಟ್ ಕಲೆಕ್ಟರನಾಗಿ ನೇಮಕಗೊಂಡನು. (ಮುಂದುವರಿಯುವುದು )
    Read more...

    Sunday, September 26, 2010

    1
    ಕಾಯಕಯೋಗಿ ಲಿಂಗಪ್ಪಣ್ಣನ ನೆನಪು೧೯೯೨ರ ಹೊತ್ತಿಗೆ ಪುತ್ತೂರಿನ ವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಜೀವಶಾಸ್ತ್ರ ವಿಭಾಗದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಲಿಂಗಪ್ಪಣ್ಣನ ಪರಿಚಯ ಇರದಿರಲು ಸಾಧ್ಯವೇ ಇಲ್ಲ ! ಏಕೆಂದರೆ ಅವರು ಸಸ್ಯಶಾಸ್ತ್ರ ವಿಭಾಗದ ಅವಿಭಾಜ್ಯ ಅಂಗವಾಗಿದ್ದರು. ಕಾಲೇಜಿನ ಆರಂಭದಿಂದಲೂ ಇಲ್ಲಿ ನೌಕರರಾಗಿದ್ದ ಅವರು ಇತ್ತೀಚೆಗೆ ನಿಧನರಾದರು. ಅವರಿಗಿದು ಶ್ರದ್ಧಾಂಜಲಿ.

    ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಪಿ. ಲಿಂಗಪ್ಪಗೌಡರು. ಅವರ ಕಣ್ಣಮುಂದೆ ಕಲಿತುಹೋದ ಅನೇಕ ಕಿರಿಯರಿಗೆ ಅವರು ಲಿಂಗಪ್ಪಣ್ಣ ಎಂದೇ ಜನಪ್ರಿಯ. ತುಸು ಪಾಚಿ ಬಣ್ಣದ ಅರ್ಧತೋಳಿನ ಅಂಗಿ, ಎಣ್ಣೆಹಾಕಿ ಹೊಳೆಯುವ, ಹಿಂದಕ್ಕೆ ಬಾಚಿದ ಗುಂಗುರು ಕೂದಲು, ಎರಡೂ ಕಿವಿಗಳಲ್ಲಿ ದೇಸೀ ಸೊಗಸಿನ ಕಡಕು, ಬಹುತೇಕ ಎಡಭಾಗದಲ್ಲಿ ಜೋತುಬಿದ್ದ ಖಾಕಿ ಬಟ್ಟೆಯ ಚೀಲ, ಅದರ ತುಂಬ ಸಸ್ಯಶಾಸ್ತ್ರದ ಪ್ರಯೋಗಾಲಯಕ್ಕೆ ಬೇಕಾಗುವ ಹೂ, ಗಿಡ, ಕಾ, ಬಳ್ಳಿಗಳ ಸಂಗ್ರಹ.
    ಪ್ರತಿದಿನ ದೂರದ ಬಲ್ನಾಡಿನಿಂದ ನಡೆದುಕೊಂಡೇ ಬಂದರೂ ಸಮಯಕ್ಕೆ ಮೊದಲೇ ಬರುವ ಲಿಂಗಪ್ಪಣ್ಣನದು ಆರೋಗ್ಯ ಪೂರ್ಣ ವ್ಯಕ್ತಿತ್ವ. ಈ ಲಿಂಗಪ್ಪಣ್ಣ ಸದಾ ಹಸನ್ಮುಖಿ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಲಿಂಗಪ್ಪಗೌಡರ ತಂದೆ ಪೊಕುಳ ಗೌಡ. ತಾ ಕೊರಪೊಳು ಗ್ರಾಮೀಣ ಬದುಕಿನ ಪ್ರತಿರೂಪದಂತೆ ಇದ್ದವರು. ಇವರ ಮೂವರು ಮಕ್ಕಳಲ್ಲಿ ಲಿಂಗಪ್ಪಗೌಡರು ಹಿರಿಯ ಮಗ. ಇವರ ತಮ್ಮ ಸಂಕಪ್ಪಗೌಡ ಮತ್ತು ತಂಗಿ ಸುಶೀಲ. ದಿನಾಂಕ ೧೧.೦೨.೧೯೩೫ರಲ್ಲಿ ಹುಟ್ಟಿದ ಇವರು ಉಜ್ರುಪಾದೆಯ ಬಲ್ನಾಡು ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯವರೆಗೆ ಅಭ್ಯಾಸ ಮಾಡಿದರು. ೨೦.೦೬.೧೯೬೫ರಲ್ಲಿ ವಿವೇಕಾನಂದ ಕಾಲೇಜಿಗೆ ಸಹಾಯಕರಾಗಿ ಸೇರ್ಪಡೆ. ನಿವೃತ್ತಿಯ ಹೊತ್ತಿಗೆ ದ್ವಿತೀಯ ದರ್ಜೆ ಗುಮಾಸ್ತನ ಹುದ್ದೆಯನ್ನು ಪಡೆದಿದ್ದರು. ಹೀಗಾಗಿ ಬಹುತೇಕ ವಿವೇಕಾನಂದ ಕಾಲೇಜು ಆರಂಭವಾಗುವುದರ ಜೊತೆಗೆ ಲಿಂಗಪ್ಪಣ್ಣನ ವೃತ್ತಿ ಬದುಕೂ ಆರಂಭವಾಗುತ್ತದೆ.
    ಕಾಲೇಜಿನ ಆರಂಭದ ದಿನಗಳನ್ನು, ಸಂಸ್ಥೆಯ ಬೆಳವಣಿಗೆಯ ಹಂತಗಳನ್ನು ಅವರು ಕಣ್ಣಾರೆ ಕಂಡವರು. ಬಯಲು ಆಲಯವಾಗಿ ರೂಪಾಂತರಗೊಳ್ಳುವಾಗ ಲಿಂಗಪ್ಪಣ್ಣ ಕಲ್ಲುಗಳನ್ನು ಎತ್ತಿ ಇಟ್ಟಿದ್ದಾರೆ. ಸಿಮೆಂಟು ಹೊತ್ತಿದ್ದಾರೆ. ಅದೆಷ್ಟೋ ರಾತ್ರಿಗಳನ್ನು ಏಕಾಂಗಿ ಕಾವಲುಗಾರನಾಗಿ ಇಲ್ಲಿ ಕಳೆದಿದ್ದಾರೆ. ಕಾಲೇಜಿನ ಅಭಿವೃದ್ಧಿಯಲ್ಲಿ ಇವರ ಶ್ರಮದ ಕೊಡುಗೆ ಸಣ್ಣದಲ್ಲ. ನಿಜವಾದ ಅರ್ಥದಲ್ಲಿ ಕಾಯಕಯೋಗಿಯ ವ್ಯಕ್ತಿತ್ವ ಅವರದು. ಕಾಲೇಜಿನ ಅಭಿವೃದ್ಧಿಯನ್ನು ಕಂಡು ಸಂತಸಪಟ್ಟ ಹಿರಿಯರು. ಲಿಂಗಪ್ಪಗೌಡ ಎಂದರೆ ಸಸ್ಯಶಾಸ್ತ್ರ ಪ್ರಯೋಗಾಲಯ ಎಂಬಷ್ಟು ಅವಿನಾಭಾವ ಸಂಬಂಧವೊಂದು ರೂಪುಗೊಂಡಿತ್ತು. ಅದು ಅವರ ಮನೆಯಾಗಿತ್ತು. ಸ್ವಚ್ಚ, ಸುಂದರ ಪರಿಸರ. ಎಲ್ಲೆಡೆ ಅಚ್ಚುಕಟ್ಟು. ಪ್ರಯೋಗವನ್ನು ಆರಂಭಿಸುವುದಕ್ಕೆ ಮೊದಲು ಹೊತ್ತು ತಂದ ಸಸ್ಯರಾಶಿಯನ್ನು ಜೋಡಿಸಿ ಉಪನ್ಯಾಸಕರ ಕೆಲಸವನ್ನು ಹಗುರ ಮಾಡುತ್ತಿದ್ದರು. ಮಾತ್ರವಲ್ಲ, ತಂದ ನೂರಾರು ಸಸ್ಯಗಳ ಸಸ್ಯಶಾಸ್ತ್ರೀಯ ಹೆಸರುಗಳು ಅವರ ಸ್ಮರಣೆಯಲ್ಲಿದ್ದವು. ವಿದ್ಯಾರ್ಥಿಗಳಿಗೆ ಇದು ಚೋದ್ಯದ ಸಂಗತಿ.
    ಕರ್ತವ್ಯದ ಸಮಯದಲ್ಲಿ ಪ್ರಯೋಗಾಲಯ ಅವರ ಪಾಲಿಗೆ ದೇವಾಲಯ. ಇವರ ಸರಳತೆ ವಿದ್ಯಾರ್ಥಿಗಳಿಗೊಂದು ಆದರ್ಶ. ಆದ್ದರಿಂದ ಸದಾ ಮುಗುಳ್ನಗುವ ಲಿಂಗಪ್ಪಣ್ಣನೆಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಯಾವುದೇ ಕೆಲಸವನ್ನು ಹೇಳಿದರೂ ಇಲ್ಲವೆನ್ನದೆ ಮಾಡುವ ಕಾಯಕ ನಿಷ್ಠೆ ಇವರದು. ಕಾಡುಹರಟೆ ಅವರ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಭಾನುವಾರ ಮತ್ತು ಇತರೆ ರಜಾದಿನಗಳಲ್ಲಿ ಕಾಲೇಜಿಗೆ ಬರುವ ಪರಿಪಾಟವನ್ನು ಲಿಂಗಪ್ಪಣ್ಣ ಇಟ್ಟುಕೊಂಡಿದ್ದರು. ಹೀಗೆ ಬರುವಾಗ ಚೀಲದಲ್ಲಿ ಸಸ್ಯಗಳು ಇರುತ್ತಿರಲಿಲ್ಲ. ಬದಲಾಗಿ ಕಾಲೇಜಿನ ಮತ್ತು ಹಾಸ್ಟೆಲ್‌ನ ದಿನಪತ್ರಿಕೆಗಳನ್ನು ಹೊತ್ತು ಬರುತ್ತಿದ್ದರು. ಸುಮಾರು ಹನ್ನೊಂದು ಗಂಟೆಗೆ ಬಂದವರು ಮಧ್ಯಾಹ್ನದವರೆಗೂ ಇದ್ದು ಹೋಗುತ್ತಿದ್ದರು. ಅವರದು ತುಸು ಸಂಕೋಚ ಪ್ರವೃತ್ತಿ. ಒತ್ತಾಯ ಮಾಡಿದರೆ ಊಟ ಮಾಡುತ್ತಿದ್ದರು; ಕಾಫಿ ಅಥವಾ ಟೀ ಕುಡಿಯುತ್ತಿದ್ದರು. ಪ್ರೊ. ಎಂ.ಎಸ್. ಅಪ್ಪನವರಿಗೂ ಲಿಂಗಪ್ಪಣ್ಣನಿಗೂ ಬಿಡಿಸಲಾಗದ ಸಂಬಂಧ. ಅವರಿಗೆ ಬೇಕಾದ ಕಜೆ ಅಕ್ಕಿಯನ್ನು ಲಿಂಗಪ್ಪಣ್ಣ ತಂದು ಕೊಡುತ್ತಿದ್ದರು. ಪ್ರೊ. ಅಪ್ಪನವರು ನಿವೃತ್ತಿಯ ನಂತರ ಬೆಂಗಳೂರಿಗೆ ಹೋದರು. ಅವರು ಪುತ್ತೂರಿಗೆ ಬರುವ ದಿನಾಂಕವನ್ನು ಮೊದಲೇ ತಿಳಿದುಕೊಂಡು ಲಿಂಗಪ್ಪಣ್ಣ ಹಾಜರಿರುತ್ತಿದ್ದರು. ಬರುವಾಗ ಅಪ್ಪನವರಿಗೆ ಕೊಡಲೆಂದು ಅವರ ಕೈಚೀಲದಲ್ಲಿ ಪುತ್ತೂರಿನ ಜೇನು ಸದಾ ಇರುತ್ತಿತ್ತು.
    ೨೮.೦೨.೧೯೯೩ರಂದು ಲಿಂಗಪ್ಪಣ್ಣ ವೃತ್ತಿಯಿಂದ ನಿವೃತ್ತರಾದರು. ಆದರೆ ಆ ಶೈಕ್ಷಣಿಕ ವರ್ಷದ ಎಲ್ಲಾ ಕೆಲಸಗಳನ್ನು ಅವರು ನಿರ್ವಹಿಸಿದ್ದರು. ಕುತೂಹಲದ ವಿಷಯವೆಂದರೆ ಪ್ರೊ ಅಪ್ಪ ಮತ್ತು ಲಿಂಗಪ್ಪಣ್ಣ ಒಂದೇ ವರ್ಷ ನಿವೃತ್ತರಾದರು ; ಇಬ್ಬರೂ ಒಂದೇ ವರ್ಷ ವಿಧಿವಶರಾದರು. ಇದು ಆಕಸ್ಮಿಕವೋ, ಸಂಬಂಧದ ಬೆಸುಗೆಯೋ ಅರ್ಥವಾಗುವುದಿಲ್ಲ. ಇಲ್ಲದ್ದಕ್ಕಾಗಿ ಹಂಬಲಿಸುವ ವ್ಯಕ್ತಿತ್ವ ಅವರದಲ್ಲ. ಉದಯಕೃಷ್ಣ, ಕುಸುಮಾವತಿ ಮತ್ತು ಜಯಚಂದ್ರ ಅವರ ಮಕ್ಕಳು. ಸಂತೃಪ್ತ ಬದುಕು ಅವರದು. ಕರ್ತವ್ಯವೇ ದೇವರೆಂದು ನಂಬಿದ ಲಿಂಗಪ್ಪಣ್ಣ ೨೧.೦೬.೨೦೧೦ರಂದು ನಮ್ಮನ್ನು ಅಗಲಿದ್ದಾರೆ. ಆದರೆ ನಮ್ಮೆಲ್ಲರ ಮನದ ಮೂಲೆಯಲ್ಲಿ ಲಿಂಗಪ್ಪಣ್ಣನ ಬೆಚ್ಚನೆಯ ನೆನಪಿದೆ. ಅಗಲಿದ ಹಿರಿಯ ಜೀವಕ್ಕೆ ಇದು ಅಕ್ಷರ ನಮನ.
    Read more...

    Sunday, September 12, 2010

    1

    ಪ್ರೊ. ಎಂ.ಎಸ್. ಅಪ್ಪನವರ ನೆನಪು - ಚದುರಿದ ಚಿತ್ರಗಳು

  • Sunday, September 12, 2010
  • ಡಾ.ಶ್ರೀಧರ ಎಚ್.ಜಿ.

  • ಎರಡು ದಶಕಗಳ ಕಾಲ ಪುತ್ತೂರಿನ ಅವಿಭಾಜ್ಯ ಅಂಗವಾಗಿದ್ದ ಪ್ರೊ ಎಂ.ಎಸ್. ಅಪ್ಪ ಇಂದು ನಮ್ಮೊಂದಿಗಿಲ್ಲ, 'ಅವರು ಕಾಲವಾಗಿದ್ದಾರೆ' ಎಂಬುದು ನನಗೆ ಮತ್ತು ನನ್ನಂತಹ ಹಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇರುವ ವಾಸ್ತವ. ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಸಂಘಟನೆ, ಸಮಾಜಸೇವೆ, ಎನ್.ಸಿ.ಸಿ., ಎನ್.ಎಸ್,ಎಸ್., ಸ್ಕೌಟ್ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅವರದು ಬಹುಮುಖಿ ವ್ಯಕ್ತಿತ್ವ. ಬೆಂಗಳೂರು ಮೂಲದ ಎಂ.ಎಸ್. ಅಪ್ಪ ಪುತ್ತೂರಿಗೆ ಅಪರಿಚಿತರಾಗಿ ಬಂದರು. ಆದರೆ ನಿವೃತ್ತರಾಗಿ ಇಲ್ಲಿಂದ ತೆರಳುವಾಗ ಅವರ ಜೊತೆಗೆ ಪುತ್ತೂರಿನ ಜನರ ಪ್ರೀತಿಯ ಹಾರೈಕೆತ್ತು; ವಿಶ್ವಾಸದ ಕಡಲಿತ್ತು. ಇದು ಅವರ ಕರ್ಮಭೂಮಿ. ಅವರ ಆಡಳಿತದ ಅವಧಿಯಲ್ಲಿ ವಿವೇಕಾನಂದ ಕಾಲೇಜಿನ ಕೀರ್ತಿ ನಾಲ್ಕು ದಿಕ್ಕುಗಳಿಗೆ ಪಸರಿಸಿತು. ಹಾಗೆಯೇ ಈ ಮಣ್ಣಿನ ಸತ್ವವನ್ನು ಹೀರಿ ಅವರ ವ್ಯಕ್ತಿತ್ವವೂ ಬೆಳೆಯಿತು.
    ಅಪ್ಪನವರ ನೆನಪುಗಳಿಗೆ ಹಲವು ಸ್ತರಗಳಿವೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರೊ. ಎಂ.ಎಸ್. ಅಪ್ಪನವರ ನೆನಪು ಮನಸ್ಸಿನಂಗಳದಲ್ಲಿ ಇರಲು ಸಾಧ್ಯ. ಅವರ ಮೂಲ ಹೆಸರು ಎಂ. ಸೂರ್ಯನಾರಾಯಣಪ್ಪ. ಆದರೆ ಸಾರ್ವಜನಿಕ ವಲಯದಲ್ಲಿ ಪ್ರೊ. ಎಂ.ಎಸ್. ಅಪ್ಪ ಎಂದೇ ಎಲ್ಲರಿಗೂ ಪರಿಚಿತರು. ಕೌಟುಂಬಿಕ ವಲಯದಲ್ಲಿ ಅವರು 'ಸೂರಿ'ಎಂದೇ ಜನಪ್ರಿಯರಾಗಿದ್ದರು. ಮಾಗಡಿ ತಾಲೂಕು ಚಕ್ರಭಾವಿ ಅವರ ಹುಟ್ಟಿದೂರು. ಶ್ರೀ ಎಂ. ಸುಬ್ಬರಾವ್ ಮತ್ತು ಶ್ರೀಮತಿ ಮಲ್ಲಮ್ಮ ದಂಪತಿಗಳ ಸುಪುತ್ರ. ಇವರ ತಂದೆಯವರು ಅಂಚೆ ಇಲಾಖೆಯಲ್ಲಿ ವಿಲೇಜ್ ಬ್ರಾಂಚ್ ಪೋಸ್ಟ್‌ಮಾಸ್ಟ್‌ರ್ ಆಗಿದ್ದರು. ದಾಖಲೆಗಳ ಪ್ರಕಾರ ೦೪.೦೫.೧೯೩೫ ಇವರ ಜನ್ಮದಿನಾಂಕ. ೧೯೩೯ರಲ್ಲಿ ಬಾಲ್ಯದಲ್ಲಿ ತಾಯನ್ನು ಕಳೆದುಕೊಂಡ ಅವರು ತಂದೆಯ ಪ್ರೀತಿ, ವಾತ್ಸಲ್ಯದ ಸುಖ ಮತ್ತು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ನಾಲ್ಕೂವರೆ ವರ್ಷ ಪ್ರಾಯದ ಈ ಹುಡುಗನನ್ನು ದೊಡ್ಡಪ್ಪ ಎಂ. ಸೂರ್ಯನಾರಾಯಣಪ್ಪನವರ ಮನೆಗೆ ಕರೆದುಕೊಂಡು ಹೋದರು. ಅವರು ಸುಗ್ಗನಹಳ್ಳಿಯಲ್ಲಿ ಜಿಲ್ಲಾ ಬೋರ್ಡು ವೈದ್ಯಶಾಲೆಯಲ್ಲಿ ಆಯುರ್ವೇದ ಪಂಡಿತರಾಗಿದ್ದರು. ಹೀಗಾಗಿ ಅವರಿಗೆ ರೋಗಗಳು ಕಾಡಿದ್ದಿಲ್ಲ. ಬದುಕಿನ ಕೊನೆಯ ಕೆಲವು ದಿನಗಳನ್ನು ಹೊರತುಪಡಿಸಿದರೆ ಅವರದು ಸದೃಢವಾದ ಆರೋಗ್ಯಪೂರ್ಣ ಬದುಕು.
    ಈಗಿನ ರಾಮನಗರ ಜಿಲ್ಲೆಯ ಸುಗ್ಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆದರು. (ಇದರ ಮೊದಲ ಹೆಸರು ಕ್ಲೋಸ್ ಪೇಟೆ) ೧೯೪೭ರಲ್ಲಿ ರಾಮನಗರದಲ್ಲಿ ಎಲ್. ಎಸ್. ಪರೀಕ್ಷೆಯನ್ನು ಬರೆದರು.ಎಂಟನೆಯ ತರಗತಿಗೆ ಮಾಗಡಿಯ ಮುನಿಸಿಪಲ್ ಹೈಸ್ಕೂಲನ್ನು ೧೯೪೮-೪೯ರಲ್ಲಿ ಸೇರಿದರು. ಒಂಬತ್ತು ಮತ್ತು ಹತ್ತನೆಯ ತರಗತಿ ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್ ಮಂಡ್ಯದಲ್ಲಿ ಪಡೆದರು. (೧೯೪೯-೫೦,೧೯೫೦-೫೧)ಇಲ್ಲಿಂದ ಮುಂದೆ ಶಿಕ್ಷಣಕ್ಕಾಗಿ ಸೂರಿಯ ಯಾತ್ರೆ ಮೈಸೂರನ್ನು ತಲುಪಿತು. ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಎರಡು ವರ್ಷದ ಇಂಟರ್ ಮೀಡಿಯೇಟ್ ಮುಗಿಸಿದರು. (೧೯೫೩-೧೯೫೫) ಇದಕ್ಕೆ ಅವರು ಐ.ಕಾಂ. ಪದವಿ ಎಂದು ಹೆಸರಿಸಿದ್ದಾರೆ. ಇಲ್ಲಿ ಪ್ರೊ. ಎಚ್ಚೆಸ್ಕೆಯವರು ಇವರಿಗೆ ಗುರುಗಳಾಗಿದ್ದರು. ಅವರು ನೀಡಿದ ಮಾರ್ಗದರ್ಶನವನ್ನು ಪ್ರೊ. ಅಪ್ಪನವರು ಕೊನೆಯವರೆಗೂ ನೆನಪಿಸಿಕೊಳ್ಳುತ್ತಿದ್ದರು. ಬಿ.ಕಾಂ. ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳಿದ ಅಪ್ಪನವರು ರಾಂ. ನಾರಾಯಣ ಚೆಲ್ಲಾರಾಮ ಕಾಲೇಜಿಗೆ ಸೇರ್ಪಡೆಯಾದರು. ಇಲ್ಲಿಯೂ ಅವರಿಗೆ ಪ್ರೊ. ಬಿ. ಆರ್. ಸುಬ್ಬರಾವ್ ಅವರಂತಹ ಗುರುಗಳು ಅವರಿಗೆ ಸಿಕ್ಕಿದರು. ಉಚಿತ ಊಟ ಮತ್ತು ವಸತಿಯೊಂದಿಗೆ ಬಡಗನಾಡು ಸಂಘದಲ್ಲಿ ಇವರದು ವಾಸ್ತವ್ಯ. ೧೯೫೫ರಲ್ಲಿ ಬಿ.ಕಾಂ ಪದವಿ ಪಡೆದು ಹೊರಬಂದವರೆ ಇಂಡಿಯನ್ ಏರ್‌ಲೈನ್ಸ್ ಕಂಪನಿಯಲ್ಲಿ ಸೀನಿಯರ್ ಟ್ರಾಫಿಕ್ ಕ್ಲರ್ಕಾಗಿ ಒಂದು ವರ್ಷ ಕೆಲಸ ಮಾಡಿದರು. ಮರುವರ್ಷವೇ ಅವರನ್ನು ನಾಗಪುರಕ್ಕೆ ವರ್ಗಾವಣೆ ಮಾಡಿದ್ದರಿಂದ ಅಜ್ಜಿಯ ಒತ್ತಾಯಕ್ಕೆ ಮಣಿದು ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದರು. ೧೯೫೬-೫೭ರಲ್ಲಿ ಹೆಸರುಘಟ್ಟ ರಸ್ತೆಯಲ್ಲಿದ್ದ ಮೈಲುತುತ್ತ ತಯಾರು ಮಾಡುತ್ತಿದ್ದ ಮೈಸೂರು ಕೆಮಿಕಲ್ ಮ್ಯಾನ್ಯುಫ್ಯಾಕ್ಚರ್‍ಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರು. ದಿನಾಂಕ ೫.೩.೧೯೫೭ರಲ್ಲಿ ಸೋದರ ಮಾವನ ಮಗಳು ಸುಂದರಮ್ಮನವರೊಂದಿಗೆ ವಿವಾಹವಾಯಿತು. ಅಪ್ಪನವರಿಗೆ ಈ ವಯಸ್ಸಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಹಿರಿಯರ ಬಲವಂತಕ್ಕೆ ಮಣಿದು ಸಪ್ತಪದಿಯನ್ನು ತುಳಿದರು. ಈ ವೇಳೆಗೆ ಅವರ ಇನ್ನೊಬ್ಬ ಸೋದರ ಮಾವ ಸಿ. ಗುಂಡುರಾವ್ ರೂರ್ಕೆಲಾದಲ್ಲಿದ್ದರು. ಉದ್ಯೋಗವನ್ನರಸಿ ಅವರೊಂದಿಗೆ ಒರಿಸ್ಸಾದತ್ತ ಪ್ರಯಾಣ ಮಾಡಿದರು. ಹಿಂದುಸ್ತಾನ್ ಸ್ಟೀಲ್ಸ್ ಕಂಪನಿ ಆಗತಾನೆ ಸ್ಥಾಪನೆಯಾಗುತ್ತಿದ್ದ ದಿನಗಳವು. ಕಂಪನಿಯ ಜರ್ಮನ್ ಇಂಜಿಯರ್‍ಸ್‌ಗಳಿಗೆ ಮನೆಗಳನ್ನು ಕಟ್ಟಿಸಿ ಕೊಡುವ ವಿಭಾಗದಲ್ಲಿ ಇವರ ಮಾವ ಕೆಲಸ ಮಾಡುತ್ತಿದ್ದರು. ಇದೇ ವಿಭಾಗದಲ್ಲಿ ಅಪ್ಪನವರು ಲೆಕ್ಕಪತ್ರಗಳನ್ನು ನಿರ್ವಹಿಸಲು ಸೇರಿಕೊಂಡರು. ಅಲ್ಲಿ ವೇತನ ಸಿಗುತ್ತಿತ್ತು. ಉಚಿತ ಊಟ ಮತ್ತು ವಸತಿ ವ್ಯವಸ್ಥೆತ್ತು. ಆದರೆ ಜ್ಞಾನ ದಾಹ ಅವರನ್ನು ನಿರಂತರವಾಗಿ ಕಾಡುತ್ತಿತ್ತು. ಹೀಗಾಗಿ ೧೯೫೭ರ ಸೆಪ್ಟಂಬರ್‌ನಲ್ಲಿ ಕೊಲ್ಕೊತ್ತಾ ವಿಶ್ವವಿದ್ಯಾಲಯದ ಸಂಜೆಕಾಲೇಜಿನಲ್ಲಿ ಎಂ.ಕಾಂ ಪದವಿಗೆ ಸೇರ್ಪಡೆಗೊಂಡರು. ಜೀವನ ನಿರ್ವಹಣೆಗೆ ಹಗಲು ಹೊತ್ತು ಒರಿಸ್ಸಾ ಟೆಕ್ಸ್‌ಟೈಲ್ ಮಿಲ್ ಕಾರ್ಪೊರೇಟ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಲ್ಕತ್ತದಲ್ಲಿ ಇರುವ ಅವಧಿಯಲ್ಲಿ ಪುತ್ತೂರು ಮೂಲದ ವ್ಯಕ್ತಿ ನಡೆಸುತ್ತಿದ್ದ ಹೊಟೆಲ್ ಆನಂದ ಭವನ ಅವರ ವಾಸ್ತವ್ಯದ ಸ್ಥಳ. ಹೀಗಾಗಿ ಅವರಿಗೆ ಪುತ್ತೂರಿನ ಬಗೆಗೆ ಆಂತರ್ಯದಲ್ಲಿ ಒಂದು ಪ್ರೀತಿಯ ಸೆಲೆಯಿತ್ತು. ಚಿತ್ತರಂಜನ್ ಅವೆನ್ಯೂನಲ್ಲಿದ್ದ ಈ ವಸತಿ ಗೃಹ ಅವರಿಗೆ ಮೂರು ವರ್ಷ ನೆಲೆಯನ್ನು ಒದಗಿಸಿತ್ತು. ಆಗ ಊಟ ಮತ್ತು ವಸತಿ ಸೇರಿ ತಿಂಗಳಿಗೆ ಆನಂದ ಭವನಕ್ಕೆ ತೊಂಬತ್ತು ರೂಪಾ ಕೊಡಬೇಕಿತ್ತು. ಕಲ್ಕತ್ತದ ಆನಂದ ಭವನ ಮತ್ತು ಪುತ್ತೂರಿನ ನಡುವೆ ಅವಿನಾಭಾವ ಸಂಬಂಧವಿದೆ. ಈಗಲೂ ಪುತ್ತೂರಿನ ಪರ್ಲಡ್ಕದಲ್ಲಿ ಅವರ ಮನೆದೆ. ಆ ಹೋಟೆಲ್ ಶತಮಾನ ತಲುಪಿದೆ. ಈಗ ಅವರ ಮಗ ದೇವಿಪ್ರಸಾದ್ ರಾವ್ ಈ ಹೋಟೆಲ್ ನಡೆಸುತ್ತಿದ್ದಾರೆ. ಶ್ರೀಯುತ ದೇವಿಪ್ರಸಾದ್‌ರವರ ಪತ್ನಿ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ. ಬೆಟ್ಟಂಪಾಡಿ ಸಮೀಪದ ಸ್ವರ್ಗ ಈಕೆಯ ತವರು ಮನೆ.
    ಏಳೆಂಟು ವರ್ಷದ ಹಿಂದೆ ಕೆಲಸದ ನಿಮಿತ್ತ ಕಲ್ಕತ್ತಕ್ಕೆ ಹೋಗಿದ್ದ ಅಪ್ಪನವರು ಹಳೆಯ ನೆನಪಿನಲ್ಲಿ ಅದೇ ಆನಂದ ಭವನದಲ್ಲಿ ಉಳಿದುಕೊಂಡಿದ್ದರು. ಈ ಸಲ ಊಟ ಮತ್ತು ವಸತಿಗೆ ಅಪ್ಪನವರಿಂದ ಹೋಟೆಲ್‌ನ ಆಡಳಿತ ವರ್ಗ ಹಣವನ್ನು ಎಷ್ಟು ಮಾತ್ರಕ್ಕೂ ಪಡೆಯಲಿಲ್ಲ ಎಂಬುದನ್ನು ಅವರು ಒಮ್ಮೆ ನೆನಪಿಸಿಕೊಂಡಿದ್ದರು. ೧೯೬೦ರಲ್ಲಿ ಕೋಲ್ಕೊತ ವಿಶ್ವವಿದ್ಯಾಲಯದಿಂದ ಎಂ.ಕಾಂ. ಪದವಿ. ಮೈಸೂರಿನ ಬನುಮಯ್ಯ ಕಾಲೇಜು ಮತ್ತು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಿಂದಲೂ ಉದ್ಯೋಗಕ್ಕೆ ಆಹ್ವಾನ ಬಂತು. ಇವೆರಡರಲ್ಲಿ ಒಂದು ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿದರು. ಸಾಕಷ್ಟು ಚಿಂತನ ಮಂಥನ ಮಾಡಿ ಅಂತಿಮವಾಗಿ ೦೧.೦೭.೧೯೬೦ರಂದು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದರು. ಆಗ ಅವರ ವೇತನ ತಿಂಗಳಿಗೆ ೨೨೫ ರೂಪಾಯಿಗಳು.
    ಕಾಲೇಜಿನಲ್ಲಿ ಪ್ಲಾನಿಂಗ್ ಫೋರಂನ ನೇತೃತ್ವವನ್ನು ವಹಿಸಿದ ಅಪ್ಪನವರು ೧೯೬೨-೬೩ರಲ್ಲಿ ಕೆನರಾ ಬ್ಯಾಂಕ್‌ನ ನೆರವಿನೊಂದಿಗೆ ವರ್ತೂರು ಮತ್ತು ಸಮೀಪದ ಹಳ್ಳಿಗಳನ್ನು ಕಾಲೇಜಿನ ವಿದ್ಯಾರ್ಥಿಗಳ ಮೂಲಕ ಸರ್ವೆ ಮಾಡಿಸಿ ಇದರ ವರದಿಯನ್ನು ಮದ್ರಿಸಿದರು. ಈ ವರದಿಯನ್ನು ಖ್ಯಾತ ಅರ್ಥಶಾಸ್ತ್ರಜ್ಞರಾದ ಡಾ. ವಿ.ಕೆ.ಆರ್.ವಿ ರಾವ್ ಅನಾವರಣಗೊಳಿಸಿದರು. ಈ ಕೆಲಸಕ್ಕೆ ಪ್ರೊ. ಎಂಪಿ.ಎಲ್. ಶಾಸ್ತ್ರಿಯವರು ಅವರಿಗೆ ಪ್ರೇರಣೆ ನೀಡಿದ್ದರು. ೧೯೬೪ರಲ್ಲಿ ಮೈಸೂರು ಆರ್ಮರ್ಡ್ ಸ್ಕ್ವಾರ್ಡ್ರ ಎನ್.ಸಿ.ಸಿ. ವಿಭಾಗದಲ್ಲಿ ಪ್ರಥಮ ತರಬೇತಿಗಾಗಿ ಪೂನಾ ಬಳಿ ಇರುವ ಎನ್.ಸಿ.ಸಿ.ಅಕಾಡೆಮಿ ಪುರಂದರಗಡ್‌ನಲ್ಲಿ 3 ತಿಂಗಳ ತರಬೇತಿ ಪಡೆದರು. ಅನಂತರ ಅಹಮದ್ ನಗರದ ಎ.ಸಿ. ಸೆಂಟರ್ ಸ್ಕೂಲ್‌ನಲ್ಲಿ ಒಂದು ತಿಂಗಳ ವಿಶೇಷ ತಾಂತ್ರಿಕ ತರಬೇತಿಯನ್ನು ಪಡೆದು ಎಂ.ಇ.ಎಸ್ ಕಾಲೇಜಿನಲ್ಲಿ ಪ್ರಥಮ ಎನ್.ಸಿ.ಸಿ. ಆಫೀಸರ್ ಸೆಕೆಂಡ್ ಲೆಫ್ಟಿನೆಂಟ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ೧೯೬೫ರಲ್ಲಿ ಮತ್ತೊಮ್ಮೆ ಮೂರು ತಿಂಗಳ ತರಬೇತಿಯನ್ನು ಪಡೆದು ಕ್ಯಾಪ್ಟ್‌ನ್ ಆಗಿ ನೇಮಕಗೊಂಡರು. ಕ್ರಿಯಾಶೀಲ ಮನೋಧರ್ಮದ ಅಧ್ಯಾಪಕರಾಗಿ ಅವರು ಜನಮೆಚ್ಚುಗೆಯನ್ನು ಗಳಿಸಿದ್ದರು.
    ಬೆಂಗಳೂರು ವಿಶ್ವಿವಿದ್ಯಾನಿಲಯದ ಉಗಮದೊಂದಿಗೆ ಕಾಮರ್ಸ್ ಪದವೀದರರ ಒಕ್ಕೂಟವನ್ನು ಆರಂಭಿಸಿ ಅದರ ಕಾರ್ಯದರ್ಶಿಯಾದರು. ಅನಂತರ ಉಪಾಧ್ಯಕ್ಷರೂ ಆಗಿದ್ದರು. ಈ ನಡುವೆ ೧೯೬೭ರಲ್ಲಿ ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಎಂ.ಎ. ಸ್ನಾತಕೋತ್ತರ ಪದವಿ. ವಿದ್ಯಾರ್ಥಿ ದೆಸೆಯಲ್ಲಿ ನಿರಂತರ ಕಲಿಕೆ. ಅಧ್ಯಯನದ ಹಂಬಲ. ಹೀಗಾಗಿ ಕಲಿಕೆಯಲ್ಲಿ ಅವರು ಒಮ್ಮೆಯೂ ಹಿಂದಿರುಗಿ ನೋಡಿದ್ದಿಲ್ಲ. ಒಂದು ಸ್ನಾತಕೋತ್ತರ ಪದವಿಯನ್ನು ಪಡೆಯುವುದಕ್ಕೆ ಹರಸಾಹಸ ಪಡಬೇಕಾಗಿದ್ದ ಕಾಲವದು. ಆದರೆ ಅಪ್ಪನವರ ಕಿಸೆಯಲ್ಲಿ ಎರಡು ಸ್ನಾತಕೋತ್ತರ ಪದವಿಗಳಿದ್ದವು. ಪ್ರೊ. ಎಂ.ಪಿ.ಎಲ್. ಶಾಸ್ತ್ರಿ, ಪ್ರೊ. ಬಿ. ಆರ್. ಸುಬ್ಬರಾವ್, ಪ್ರೊ. ಎಚ್ಚೆಸ್ಕೆ, ಪ್ರೊ. ರಾಮಸ್ವಾಮಿ ಮೊದಲಾದವರ ಗರಡಿಯಲ್ಲಿ ಪಳಗಿದ ಅಸಾಧಾರಣ ಪ್ರತಿಭಾವಂತ. ೧೯೬೫ ರಿಂದ ೧೯೭೩ರ ವರೆಗೆ ಎಂ.ಇ.ಎಸ್. ಕಾಲೇಜಿನಲ್ಲಿ ಕೆಲಸ ಮಾಡಿದ ಅಪ್ಪನವರು ೧೯೭೩ ಮೇ ೩೧ರಂದು ಎಂ.ಇ.ಎಸ್ ಕಾಲೇಜಿನ ರೀಡರ್ ಹುದ್ದೆಗೆ ರಾಜೀನಾಮೆ ನೀಡಿದರು. ಪುತ್ತೂರಿನ ಕಡೆಗೆ ಮುಖ ಮಾಡಿದರು.

    ಅದು ೧೯೭೩ನೆಯ ಇಸವಿ. ವಿವೇಕಾನಂದ ಕಾಲೇಜಿಗೆ ಒಬ್ಬ ಸಮರ್ಥ ಪ್ರಿನ್ಸಿಪಾಲರಿಗಾಗಿ ಆಗಿನ ಸಂಚಾಲಕರಾದ ಶ್ರೀ ಕೆ. ರಾಮಭಟ್ ಶೋಧನೆಯಲ್ಲಿ ತೊಡಗಿದ್ದ ಸಮಯ. ಹಾಗೆ ಬರುವವರು 'ನಮ್ಮ ವೈಚಾರಿಕ ಚಿಂತನೆಗೆ ಹತ್ತಿರವಾಗಿರಬೇಕು' ಎಂಬ ಆಂತರಂಗಿಕ ತುಡಿತ ಸಂಚಾಲಕರಿಗಿತ್ತು. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಮಧ್ವರಾಯರ ಮೂಲಕ ಪರಿಚಯವಾಗಿ ಇಲ್ಲಿಗೆ ಬಂದವರು ಪ್ರೊ. ಎಂ. ಎಸ್. ಅಪ್ಪ್ಪನವರು. ೧೯೭೩ರ ಜೂನ್ ೦೧ ರಂದು ಅವರು ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲರಾಗಿ ಅಧಿಕಾರ ಸ್ವೀಕರಿಸಿದರು. ಎಂ.ಎಸ್. ಅಪ್ಪನವರು ಇಲ್ಲಿಗೆ ಬಂದ ಅನಂತರ ರಾಮಭಟ್ ಮತ್ತು ಅವರ ಜುಗಲ್‌ಬಂಧಿಯ ಆರಂಭ. ಕಾಲೇಜಿನ ಪ್ರಗತಿಗೆ ಒಂದು ನಿರ್ದಿಷ್ಟ ಕಲ್ಪನೆ ಸಿಕ್ಕಿತು; ಸಂಸ್ಥೆಗೆ ಜೀವಕಳೆ ತುಂಬಿತು. ೧೯೬೫ರಲ್ಲಿ ಆರಂಭವಾದ ವಿವೇಕಾನಂದ ಕಾಲೇಜು ಈ ವೇಳೆಗೆ ದಶಮಾನೋತ್ಸವದ ಹೊಸ್ತಿಲಿಗೆ ಬಂದು ನಿಂತಿತ್ತು. ಇದರೊಂದಿಗೆ ಅಭಿವೃದ್ಧಿಯ ಕಡೆಗೆ ಹೆಜ್ಜೆಗಳನ್ನಿಡುತ್ತಿದ್ದ ಸಂಸ್ಥೆಯ ಮುಂದೆ ಹಲವು ಸವಾಲುಗಳಿದ್ದವು. ಹೀಗಾಗಿ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರದು ನಿರಂತರ ದುಡಿತ. ಕಾಲೇಜಿಗೆ ಬರುವ ಅಂಚೆ ಕಾಗದಗಳನ್ನು ತರಲು ಪ್ರತಿದಿನ ಒಬ್ಬರು ಪೇಟೆಗೆ ಹೋಗಬೇಕಾಗಿತ್ತು. ಹೀಗಾಗಿ ನೆಹರುನಗರದಲ್ಲಿ ಅಂಚೆಕಛೇರಿಯ ಕೇಂದ್ರವನ್ನು ಸತತ ಪ್ರಯತ್ನದ ಮೂಲಕ ಆರಂಭಿಸಿದ ಯಶಸ್ಸು ಅವರದು. ಒಂದು ರೀತಿಯಲ್ಲಿ ನೆಹರುನಗರದ ಅಂಚೆ ಕಛೇರಿ, ಅವರ ತಂದೆಯ ನೆನಪಿನ ಕೊಡುಗೆಯಂತಿದೆ. ಇದೇ ರೀತಿ ಕಾಲೇಜಿನ ಪರಿಸರದಲ್ಲಿ ಕಾರ್ಪೊರೇಶನ್ ಬ್ಯಾಂಕಿನ ಶಾಖೆಯೊಂದನ್ನು ಆರಂಭಿಸುವಲ್ಲಿ ಅವರು ವಿಶೇಷ ಶ್ರಮವಹಿಸಿದ್ದರು. ಇದರಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಅನುಕೂಲವಾಗಿತ್ತು. ಸಂಸ್ಥೆಯ ದಶಮಾನೋತ್ಸವ, ಗ್ರಂಥಾಲಯ ನಿರ್ಮಾಣ, ತುರ್ತುಪರಿಸ್ಥಿತಿಯ ಬಿಕ್ಕಟ್ಟು, ಕಾಲೇಜಿನ ಕಟ್ಟಡ ವಿಸ್ತರಣೆ, ಬಿ.ಬಿ.ಎಂ., ಜೆಒಸಿ, ಕನ್ನಡ ಐಚ್ಚಿಕ ಹೀಗೆ ಅಧ್ಯಯನದ ಸಲುವಾಗಿ ವಿವಿಧ ವಿಷಯಗಳ ಸೇರ್ಪಡೆ, ಕಾನೂನು ಕಾಲೇಜಿನ ಸ್ಥಾಪನೆ, ವಿದ್ಯಾರ್ಥಿಗಳ ಶಿಸ್ತು, ಉಪನ್ಯಾಸಕರ ಕಾರ್ಯವೈಖರಿ ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ಸಂಚಾಲಕರಾದ ಶ್ರೀ ರಾಮಭಟ್ ಮತ್ತು ಎಂ.ಎಸ್. ಅಪ್ಪನವರದು ಅಪೂರ್ವ ಸಾಂಗತ್ಯ. ತಾಳತಪ್ಪದ ನಡಿಗೆ. ಆಡಳಿತಾತ್ಮಕವಾಗಿ ಸಣ್ಣಪುಟ್ಟ ವ್ಯತ್ಯಾಸ, ಭಿನ್ನಾಭಿಪ್ರಾಯಗಳು ಬಂದರೂ ಸಂಸ್ಥೆಯ ಗೌರವ ಮತ್ತು ಅಭಿವೃದ್ಧಿಯ ಮುಂದೆ ಉಳಿದೆಲ್ಲ ಸಂಗತಿಗಳು ಗೌಣ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅವರು ತೋರಿಸಿದ ಸಮಯಪ್ರಜ್ಞೆ, ಪರಿಸ್ಥಿತಿಯನ್ನು ಎದುರಿಸಿ ನಿಭಾಸಿದ ರೀತಿ ಊಹೆಗೆ ನಿಲುಕದ ಸಂಗತಿ.
    ಇದೇ ರೀತಿ ಅವರು ವಿವೇಕಾನಂದ ಕಾಲೇಜು ಮತ್ತು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ನಡುವೆ ಸ್ನೇಹ ಸೇತುವೆಯನ್ನು ಕಟ್ಟುವಲ್ಲಿ ವಹಿಸಿದ ಪಾತ್ರ, ಪರಸ್ಪರ ಗೌರವಿಸುವ ಮನೋಧರ್ಮವನ್ನು ರೂಪಿಸುವಲ್ಲಿ ಅವರು ನಡೆಸಿದ ಪ್ರಯತ್ನ ಅನನ್ಯವಾದುದು. ಪುತ್ತೂರಿನ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆದ ಸಂಗತಿಯಿದು. ಎಂ.ಎಸ್. ಅಪ್ಪ ಇಲ್ಲಿಗೆ ಬಂದ ಆರಂಭದ ವರ್ಷವೇ ಉಪ್ಪಿನಂಗಡಿ ಪೇಟೆ ಪ್ರವಾಹದಿಂದ ತತ್ತರಿಸಿ ಹೋಗಿತ್ತು. ಆಗ ಅವರು ವಿದ್ಯಾರ್ಥಿಗಳ ತಂಡವನ್ನು ರಚಿಸಿ ನೆರೆ ಸಂತ್ರಸ್ತರಿಗೆ ನೆರವು ನೀಡಿದ್ದು, ಹಲವರ ಮನಸ್ಸಿನಲ್ಲಿ ಈಗಲೂ ಉಳಿದಿದೆ. ರಾಮಕೃಷ್ಣ ಸೇವಾಸಮಾಜಕ್ಕೆ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ದೇಣಿಗೆ ಸಂಗ್ರಹ, ಕಾಲೇಜಿನಲ್ಲಿ ಆರಂಭಿಸಿದ 'ಅನ್ನದಾಸೋಹ' ಮಧ್ಯಾಹ್ನದ ಊಟದ ಯೋಜನೆ, ಕಾಲೇಜಿನ ಶುಲ್ಕ ನೀಡಲು ಸಾಧ್ಯವಾಗದವರಿಗೆ ನೆರವಾಗುವ ಔದಾರ್ಯ, ಸಾಹಿತಿ ಶಿವರಾಮು ಕುಟುಂಬಕ್ಕೆ ಅವರು ಆಸರೆಯನ್ನು ಕಲ್ಪಿಸಿದ್ದು,ಪ್ರತಿಭಾವಂತ ವಿದ್ಯಾರ್ಥಿಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದ ವಿಧಾನ, ಸಹೋದ್ಯೋಗಿಗಳ ನೇಮಕಾತಿ ಅಥವಾ ಪದೋನ್ನತಿಯಲ್ಲಿ ಎದುರಾದ ಸಮಸ್ಯೆಗಳನ್ನು ಅವರು ಪರಿಹರಿಸಿದ ರೀತಿ, ಯಾವ ವ್ಯಕ್ತಿಯನ್ನಾದರೂ ಎದುರಿಸಿ ಮಾತನಾಡಿಸುವ ಧೈರ್ಯ, ಉನ್ನತ ವ್ಯಾಸಂಗ ಮಾಡುವ ಹಂಬಲವುಳ್ಳ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಗೆ ಅವರು ನೀಡಿದ ಬೆಂಬಲ, ವಿದ್ಯಾರ್ಥಿ ನಿಲಯಗಳ ವಿಸ್ತರಣೆ, ವಿದ್ಯಾರ್ಥಿಗಳ ಸ್ಟೇಷನರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಗಡಿಯನ್ನು ಕೋ-ಆಪರೇಟಿವ್ ಸೊಸೈಟಿಯಾಗಿ ಪರಿವರ್ತಿಸಿದರು. ಆ ಕಾಲದಲ್ಲಿ ೪೦ ಹಸುಗಳ ಡೈರಿಯೊಂದು ಕಾಲೇಜಿನಲ್ಲಿತ್ತು. ಇದರ ಮುಂದುವರಿಕೆಯಾಗಿ ಗೋಬರ್ ಗ್ಯಾಸ್ ಸ್ಥಾವರವನ್ನು ಸ್ಥಾಪಿಸಿದ್ದರು. ಹೀಗೆ ಪ್ರತಿಯೊಂದು ಸಂದರ್ಭವೂ ಉಪಕೃತರ ನೆನಪಿನಲ್ಲಿದೆ. ಸಮಾಜದ ವಿವಿಧ ಜನಸಮುದಾಯದೊಂದಿಗೆ ಅವರದು ನಿಕಟ ಬಾಂಧವ್ಯ. ನಿರಂತರ ಸಂಪರ್ಕ. ಸಾರ್ವಜನಿಕ ಕ್ಷೇತ್ರದಲ್ಲಿ ಅವರದು ಸರ್ವಜನಾದರಣೀಯ ವ್ಯಕ್ತಿತ್ವ. ಮನವೀಯತೆ, ಅನುಕಂಪ ಅವರ ವ್ಯಕ್ತಿತ್ವದ ಅಂತ:ಸ್ಸತ್ವ.
    ೧೯೮೩-೮೪ರಲ್ಲಿ ಕೆನರಾಸ್ಟಾಕ್ ಎಕ್ಸ್‌ಛೇಂಜ್ ಸ್ಥಾಪಿಸುವಲ್ಲಿ ಅವರು ಮಾಡಿದ ಕೆಲಸ ಅವಿಸ್ಮರಣೀಯವಾದುದು. ಕರಾವಳಿಯ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆದ ಸಂಸ್ಥೆದು. ಇದರ ಸ್ಥಾಪಕ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ ಹಿರಿಮೆ ಅವರದು. ಅನಂತರ ಕೆಂದ್ರ ಸರಕಾರದ ವಿತ್ತ ಮಂತ್ರಾಲಯದಿಂದ ಮೂರು ವರ್ಷಗಳವರೆಗೆ ಸ್ಟಾಕ್ ಎಕ್ಸ್‌ಛೇಂಜ್ ನಿರ್ದೇಶಕ ಮಂಡಳಿಗೆ ಸದಸ್ಯನಾಗಿ ನೇಮಕಗೊಂಡರು. ಅವರು ನಿವೃತ್ತರಾದಾಗ ಮಂಗಳೂರಿನ ಮೋತಿಮಹಲ್‌ನಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಿ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಿದರು. ಮುಂಬು ಸ್ಟಾಕ್ ಎಕ್ಸ್‌ಛೇಂಜ್‌ನ ಎಂ.ಆರ್. ಮಯ್ಯ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
    ವಿದ್ಯಾರ್ಥಿಗಳಿಗೆ ಅವರ ತರಗತಿಯೆಂದರೆ ಅಚ್ಚುಮೆಚ್ಚು. ಅವರ ಪಾಠವೆಂದರೆ ನೀರಸ ಥಿಯರಿಯಲ್ಲ; ಅದೊಂದು ಜೀವಂತ ಅನುಭವಗಳನ್ನು ನೀಡುವ ಪ್ರಾಕ್ಟಿಕಲ್ ತರಗತಿ. ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್, ಸೆನೆಟ್, ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ, ಪ್ರಿನ್ಸಿಪಾಲರ ಸಂಘಟನೆ- ಹೀಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಗಣನೀಯ. ಯುಜಿಸಿ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಪ್ಪನವರ ಮಾತಿಗೆ ವಿಶೇಷ ಗೌರವ. ತಮ್ಮ ಅಚ್ಚುಕಟ್ಟಾದ ಪತ್ರವ್ಯವಹಾರದ ಮೂಲಕವೇ ಕಾಲೇಜಿಗೆ ಇಲಾಖೆಗಳಿಂದ ಆಗಬೇಕಾದ ಕೆಲಸಗಳನ್ನು ಮುಗಿಸುತ್ತಿದ್ದರು. ಹೆಚ್ಚೆಂದರೆ ಪತ್ರದ ಮೇಲೊಂದು ದೂರವಾಣಿ ಮಾಡಿದರೆ ಕೆಲಸ ಮುಗಿದ ಹಾಗೆ. ತಮ್ಮ ಕೊನೆಯ ದಿನಗಳವರೆಗೂ ಅವರು ಪತ್ರವ್ಯವಹಾರವನ್ನು ಉಳಿಸಿಕೊಂಡಿದ್ದರು. ಅಂಚೆ ಕಾರ್ಡಿನಲ್ಲಿ ಅವರು ಬರೆಯುತ್ತಿದ್ದ ವಿಧಾನ 'ಅಪ್ಪನವರ ಶೈಲಿ' ಎಂದೇ ಇಂದಿಗೂ ಜನಪ್ರಿಯ. ಸಾಹಿತ್ಯ, ಸಂಸ್ಕೃತಿಪರ ವಿಷಯದಲ್ಲಿ ಅಪ್ಪನವರಿಗೆ ವಿಶೇಷ ಕಾಳಜಿ. ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ನೂರಾರು ಮಂದಿಯ ಪರಿಚಯ ಅವರಿಗಿತ್ತು. ಹಾಗೆಯೇ ಅವರಿಗೂ ಎಂ.ಎಸ್. ಅಪ್ಪನವರಲ್ಲಿ ವಿಶ್ವಾಸ, ಗೌರವ. ಹೀಗಾಗಿ ಅವರ ಆಡಳಿತದ ಅವಧಿಯಲ್ಲಿ ನಾಡು, ನುಡಿಗಾಗಿ ಸೇವೆ ಸಲ್ಲಿಸಿದ ಅನೇಕರನ್ನು ಅವರು ಕಾಲೇಜಿಗೆ ಕರೆಸಿದ್ದರು.
    ಹಾಗೆಯೇ ಪುತ್ತೂರಿನ ಮಾರ್ಗವಾಗಿ ಹಾದುಹೋಗುವಾಗ ಅನೇಕ ಹಿರಿಯ ವ್ಯಕ್ತಿಗಳು ಅರೆಗಳಿಗೆ ಕಾಲೇಜಿಗೆ ಭೇಟಿ ನೀಡಿ ಹೋಗುತ್ತಿದ್ದರು. ಜಾನಪದ ಕಲಾವಿದ ಹುಕ್ಕೇರಿ ಬಾಳಪ್ಪ, ವಿದ್ವಾಂಸರಾದ ಗೊ.ರು. ಚನ್ನಬಸಪ್ಪ, ಪ್ರೊ. ಅ.ರಾ. ಮಿತ್ರ, ಡಾ. ಜಿ.ಎಸ್. ಶಿವರುದ್ರಪ್ಪ, ಪ್ರೊ. ಎಂ. ಮರಿಯಪ್ಪ ಭಟ್ಟ, ಪ್ರೊ. ಎಚ್ಚೆಸ್ಕೆ, ಡಾ. ಶ್ರೀನಿವಾಸ ಹಾವನೂರು, ಡಾ. ಯು.ಆರ್. ಅನಂತಮೂರ್ತಿ ಮೊದಲಾದವರನ್ನು ಅವರು ಕಾಲೇಜಿಗೆ ಕರೆಸಿದ್ದರು. ಒಮ್ಮೆ ಪುತ್ತೂರಿನ ಮಾರ್ಗವಾಗಿ ಮೈಸೂರಿಗೆ ಹೋಗುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಮುಂಜಾನೆ ೯ ಗಂಟೆಗೆ ಕಾಲೇಜಿಗೆ ಬಂದವರು ೧೧ ಗಂಟೆಯವರೆಗೂ ಇದ್ದರು. ಪ್ರಾಥಮಿಕ ಶಿಕ್ಷಣದ ಬಗೆಗಿನ ತಮ್ಮ ಕನಸುಗಳನ್ನು ಹಿರಣ್ಣಯ್ಯ ಪ್ರೊ. ಅಪ್ಪನವರಲ್ಲಿ ಹಂಚಿಕೊಂಡಿದ್ದರು. ಇನ್ನೊಮ್ಮೆ ಸುಪ್ರಸಿದ್ಧ ಸಂಗೀತ ವಿದ್ವಾಂಸ ಆರ್. ಕೆ. ಶ್ರೀಕಂಠನ್ ಮುಂಜಾನೆ ೭.೩೦ರ ವೇಳೆಗೆ ಕಾಲೇಜಿಗೆ ಭೇಟಿನೀಡಿ ಉಪಾಹಾರ ಸ್ವೀಕರಿಸಿ ತಮ್ಮ ಪ್ರಯಾಣವನ್ನು ಮುಂದುವರಿಸಿದ ನೆನಪಿದೆ. ಮತ್ತೊಮ್ಮೆ ಸುಪ್ರಸಿದ್ಧ ನೃತ್ಯಕಲಾವಿದರಾದ ಶ್ರೀ ಯು.ಆರ್. ಕೃಷ್ಣರಾವ್ ಮತ್ತು ಶ್ರೀಮತಿ ಚಂದ್ರಭಾಗಾದೇವಿ ತಮ್ಮ ಪ್ರಯಾಣದ ನಡುವೆ ಕಾಲೇಜಿಗೆ ಬಂದಿದ್ದರು. ಹೀಗೆ ನೆನಪುಗಳನ್ನು ಕೆದಕಿದರೆ ಈ ಪಟ್ಟಿ ಇನ್ನಷ್ಟು ಬೆಳೆಯುತ್ತದೆ. ಇವರೆಲ್ಲ ಸಂಸ್ಥೆಗೆ ಭೇಟಿ ನೀಡಲು ಪ್ರೊ. ಅಪ್ಪನವರಲ್ಲಿದ್ದ ಪ್ರೀತಿ ಮತ್ತು ವಿಶ್ವಾಸವೇ ಕಾರಣ.
    ಪ್ರೊ. ಎಂ.ಎಸ್. ಅಪ್ಪನವರೊಂದಿಗಿನ ನನ್ನ ನೆನಪುಗಳಿಗೆ ಇನ್ನೊಂದು ಸ್ತರವಿದೆ. ನಾನು ೧೯೮೭ರ ಜುಲೈ ೦೧ ರಂದು ಕಾಲೇಜಿಗೆ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲೆಂದು ಪುತ್ತೂರಿಗೆ ಬಂದೆ. ನೇಮಕಾತಿ ಪತ್ರವನ್ನು ಕೊಡುವಾಗ ಅವರು ಹೇಳಿದ ಮಾತು " ನೋಡಿ, ಇಲ್ಲಿ ಅಧ್ಯಯನ, ಸಂಶೋಧನೆಗೆ ಬೇಕಾದಷ್ಟು ಅವಕಾಶವಿದೆ. ಉತ್ತಮವಾದ ಗ್ರಂಥಾಲಯವಿದೆ. ನಿಮ್ಮ ಉತ್ತಮ ಫಲಿತಾಂಶ, ನಿಮ್ಮ ಬರವಣಿಗೆ ಮತ್ತು ಸಂಶೋಧನಾ ಲೇಖನಗಳೇ ನಿಮ್ಮ ಆಯ್ಕೆಗೆ ಕಾರಣ. ಈ ಹವ್ಯಾಸವನ್ನು ಮುಂದುವರಿಸಿ" ಎಂದಿದ್ದರು. ನಾನು ಸಂದರ್ಶನಕ್ಕೆ ಬಂದ ಸಂದರ್ಭದಲ್ಲಿಯೇ ಅವರು ನನ್ನ ಆಸಕ್ತಿಯನ್ನು ಗುರುತಿಸಿದ್ದರು. ಅಲ್ಲಿಂದ ಮುಂದೆ ಬರವಣಿಗೆಯ ಕ್ಷೇತ್ರದಲ್ಲಿನ ನನ್ನ ಆಸಕ್ತಿಗೆ ಅವರು ಸಾಕಷ್ಟು ಬೆಂಬಲ ನೀಡಿದರು. ಡಾಕ್ಟರೇಟ್ ಅಧ್ಯಯನಕ್ಕೆ ನೊಂದಾವಣೆ ಮಾಡಿಸುವಾಗಲೂ ಮರುಮಾತಿಲ್ಲದೆ ನಿರಪೇಕ್ಷಣಾ ಪತ್ರವನ್ನು ನೀಡಿದ್ದರು. ೧೧.೦೯.೧೯೮೭ರಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಕಾಲೇಜಿನ ಹಾಸ್ಟೆಲ್‌ಗೆ ನಿಲಯಪಾಲಕನನ್ನಾಗಿ ನೇಮಿಸಿದರು. ನನಗೆ ಸಿಕ್ಕಿದ ಈ ಹೆಚ್ಚುವರಿ ಹೊಣೆಗಾರಿಕೆ ಪ್ರೊ. ಅಪ್ಪನವರನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸಿತು. ವೈಯಕ್ತಿಕವಾಗಿ ನನಗೆ ಇದರಿಂದ ನೂರಾರು ಮಂದಿ ಹೆತ್ತವರ ನಿಕಟ ಸಂಪರ್ಕವೊದಗಿತು. ನಾನು ಹಾಸ್ಟೆಲ್‌ನಲ್ಲಿ ಕೆಲಸ ಮಾಡಿದ ೧೫ ವರ್ಷಗಳು, ನನಗೆ ಮರೆಯಲಾಗದ ಅಪೂರ್ವ ಅನುಭವಗಳನ್ನು ನೀಡಿದೆ; ಮರೆಯಲಾಗದ ನೆನಪುಗಳನ್ನು ಉಳಿಸಿದೆ.
    ವಿದ್ಯಾರ್ಥಿಗಳ ಬಗೆಗೆ ಅವರಿಗೆ ಅತ್ಯಂತ ಕಾಳಜಿತ್ತು. ಹಾಸ್ಟೆಲ್‌ನಲ್ಲಿ ಸಮಸ್ಯೆಗಳು ಎದುರಾದಾಗ ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಿದರೂ ತಕ್ಷಣ ಬರುತ್ತಿದ್ದರು. ಇದರಲ್ಲಿ ಹಗಲು ರಾತ್ರಿಯ ವ್ಯತ್ಯಾಸವಿರಲಿಲ್ಲ. ವಿದ್ಯಾರ್ಥಿನಿಯರ ವಿವಿಧ ಸಮಸ್ಯೆಗಳನ್ನು ನಿಭಾಸುವಲ್ಲಿ ಅವರು ನೀಡುತ್ತಿದ್ದ ಮಾರ್ಗದರ್ಶನ ನನಗೆ ಹಲವು ಪಾಠಗಳನ್ನು ಕಲಿಸಿದೆ. ಅದರಲ್ಲಿಯೂ ತೀವ್ರಸ್ವರೂಪದ ಕೌಟುಂಬಿಕ ಸಮಸ್ಯೆಂದ ಬಳಲುತ್ತಿದ್ದ ವಿದ್ಯಾರ್ಥಿನಿಯರ ಮನೆಗೇ ಹೋಗಿ ಅವರ ಹೆತ್ತವರಲ್ಲಿ ಮಾತನಾಡಿ ಬಿಕ್ಕಟ್ಟನ್ನು ಬಗೆಹರಿಸಿದ್ದೂ ಇದೆ. "ಎಲ್ಲ ಸಮಸ್ಯೆಗಳಿಗೂ ಕಾಲದಲ್ಲಿ ಪರಿಹಾರವಿದೆ. ಅಲ್ಲಿಯವರೆಗೆ ನಾವು ತಾಳ್ಮೆಂದ ಕಾಯಬೇಕು" ಎಂಬುದು ಅವರ ಬದುಕಿನ ಮೂಲಮಂತ್ರವಾಗಿತ್ತು.
    ಸಾಮಾನ್ಯವಾಗಿ ಅವರು ಮುಂಜಾನೆ ೬.೩೦ರ ಹೊತ್ತಿಗೆ ಕಾಲೇಜಿಗೆ ಬರಿಗಾಲಿನಲ್ಲಿ ನಡೆದುಕೊಂಡೇ ಬರುತ್ತಿದ್ದರು. ಕಛೇರಿಗೆ ಹೋಗಿ ತುರ್ತಾಗಿ ಹೋಗಬೇಕಾದ ಒಂದಷ್ಟು ಕಾಗದಗಳನ್ನು ಸ್ವತ: ಟೈಪ್ ಮಾಡಿ, ಪೂಜೆಗೆ ಒಂದಷ್ಟು ಹೂಗಳನ್ನು ಕೊಯ್ದುಕೊಂಡು, ಹಾಸ್ಟೆಲ್ ಮತ್ತು ಮೆಸ್‌ಗೆ ಭೇಟಿ ನೀಡಿ ಎದುರಿಗೆ ಸಿಕ್ಕ ವಿದ್ಯಾರ್ಥಿಗಳ ಕುಶಲವನ್ನು ವಿಚಾರಿಸಿ ಕೊನೆಯದಾಗಿ ನನ್ನ ನಿವಾಸಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಅವರು ಇಲ್ಲಿಯೇ ಸ್ನಾನ ಮಾಡಿ ಮನೆಗೆ ಹೋಗಿ ಪೂಜೆ ಮಾಡಿ ೮.೪೫ರ ವೇಳೆಗೆ ಕಾಲೇಜಿಗೆ ಬರುತ್ತಿದ್ದರು. ನಾನು ಹಾಸ್ಟೆಲಿನಲ್ಲಿದ್ದ ಸಮಯದಲ್ಲಿ ನನ್ನೊಂದಿಗೆ ಕಾನೂನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಪ್ರೊ. ಕೆ.ಜಿ. ತಂತ್ರಿಯವರಿದ್ದರು. ಅವರು ನಿರಂತರವಾಗಿ ಓದುತ್ತಿದ್ದರು. ಇದರ ನಡುವೆ ಪ್ರೊ. ಅಪ್ಪ ಬಂದರೆ ಯಾವುದಾದರೂ ವರ್ತಮಾನದ ವಿಷಯದ ಎಳೆಯನ್ನು ಹಿಡಿದು ಚರ್ಚೆ ಆರಂಭವಾಗುತ್ತಿತ್ತು. ಮುಂಜಾನೆ ಮತ್ತು ಸಂಜೆ ಇಬ್ಬರು ಪ್ರಾಜ್ಞರ ನಡೆಯುತ್ತಿದ್ದ ಈ ಚರ್ಚೆ ಅರ್ಥಪೂರ್ಣವಾಗಿರುತ್ತಿತ್ತು. ಸದ್ಯದ ರಾಜಕೀಯ ಪರಿಸ್ಥಿತಿ, ಶೈಕ್ಷಣದ ಸಮಸ್ಯೆಗಳು,ಕಾಲೇಜಿನ ಸಮಸ್ಯೆಗಳು, ಚರ್ಚೆಯಲ್ಲಿ ಬರುತ್ತಿತ್ತು. ಸಂಜೆ ನಾವು ಮೂವರೂ ಕಾಲೇಜಿನ ಪರಿಸರದಲ್ಲಿ ವಾಕಿಂಗ್ ಹೋಗುವುದಿತ್ತು. ಅವರು ಹಾಸ್ಟೆಲ್‌ನಲ್ಲಿ ಯಾವುದೇ ಕಾರಣಕ್ಕೆ ಊಟ, ತಿಂಡಿ ಮಾಡಿದರೆ ಅದಕ್ಕೆ ಹಣ ಪಾವತಿ ಮಾಡುತ್ತಿದ್ದರು.
    ಕನ್ನಡದ ಕೆಲಸವೆಂದರೆ ಪ್ರೊ. ಅಪ್ಪನವರಿಗೆ ವಿಶೇಷ ಕಾಳಜಿ. ಕಾಲೇಜಿನಲ್ಲಿ ಕನ್ನಡ ಐಚ್ಛಿಕವನ್ನು ಬಿ.ಎ. ತರಗತಿಯಲ್ಲಿ ಅಧ್ಯಯನಕ್ಕೆ ಅಳವಡಿಸುವಲ್ಲಿ ಅವರು ತೋರಿಸಿದ ಕಾಳಜಿ ಸದಾ ನೆನಪಿನಲ್ಲಿರುತ್ತದೆ. ವಿಶ್ವವಿದ್ಯಾಲಯದಿಂದ ಇದಕ್ಕೆ ಸಕಾಲದಲ್ಲಿ ಅನುಮತಿ ಬರದೇ ಇದ್ದಾಗ ಸ್ವತ: ಮೈಸೂರಿಗೆ ಹೋಗಿ ಕುಲಪತಿಗಳಾಗಿದ್ದ ಪ್ರೊ. ದೇ. ಜವರೇಗೌಡರಿಂದ ಅನುಮತಿ ಪತ್ರವನ್ನು ಪಡೆದು ಬಂದವರು. ಇಡೀ ಘಟನೆಯನ್ನು ಅವರು 'ನೆನಪು ಸಿಹಿ ಎರಡು ದಶಕ' ಕೃತಿಯಲ್ಲಿ ಅತ್ಯಂತ ರೋಚಕವಾಗಿ ವರ್ಣಿಸಿದ್ದಾರೆ. ಸುಮಾರು ಎರಡು ವರ್ಷದ ಹಿಂದೆ ಕಾಶಿಗೆ ಹೋಗಿದ್ದಾಗ ಅಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿರುವ ಕನ್ನಡ ವಿಭಾಗ ಅಧ್ಯಾಪಕರಿಲ್ಲದೆ ಅನಾಥವಾಗಿದೆ ಎಂಬ ಅಂಶ ಅವರ ಗಮನಕ್ಕೆ ಬಂದಿತ್ತು. ಅಲ್ಲಿನ ಕನ್ನಡ ವಿಭಾಗಕ್ಕೆ ಕನ್ನಡ ಉಪನ್ಯಾಸಕರ ನೇಮಕಾತಿಗಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಸರ್ಕಾರದೊಂದಿಗೆ ಪತ್ರವ್ಯವಹಾರವನ್ನು ನಡೆಸಿದ್ದರು. ಈ ಪ್ರಕ್ರಿಯೆ ಕೊನೆ ಮುಟ್ಟುವುದಕ್ಕೆ ಮೊದಲೇ ಅವರು ನಿಧನ ಹೊಂದಿದ್ದು ಕನ್ನಡಕ್ಕಾದ ನಷ್ಟವೇ ಸರಿ.
    ನಮ್ಮ ಕನ್ನಡ ಸಂಘದ ಪ್ರಕಟಣೆ 'ಕರ್ಲಮಂಗಲಂ ಶ್ರೀಕಂಠಯ್ಯನವರ ಲೇಖನಗಳು' ಕೃತಿಯನ್ನು ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ಪ್ರೊ. ಅಪ್ಪನವರು ಬೆನ್ನೆಲುಬಾಗಿ ನಿಂತಿದ್ದರು. ಶ್ರೀಕಂಠಯ್ಯನವರ ಅಪ್ರಕಟಿತ ಲೇಖನಗಳನ್ನು ಒದಗಿಸಿ ಕೊಟ್ಟು, ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಆ ಕೃತಿ ಬಿಡುಗಡೆಯಾಗಲು ಅವರೇ ಕಾರಣ. ಇದೇ ರೀತಿ ಪ್ರೊ. ರಾಮಸ್ವಾಮಿಯವರ ಮಿಡಿತ' ಕವನ ಸಂಕಲನ ಮೈಸೂರಿನಲ್ಲಿ ಬಿಡುಗಡೆಯಾಗಲು ಅವರ ಆಸಕ್ತಿಯೇ ಕಾರಣ. ಇದರಿಂದಾಗಿ ವಿವೇಕಾನಂದ ಕಾಲೇಜಿನ ಕನ್ನಡ ಸಂಘಕ್ಕೆ ಹೊರಜಗತ್ತಿನಲ್ಲಿ ವಿಶೇಷವಾದ ಮನ್ನಣೆ ದೊರೆತು. ನನಗೊಮ್ಮೆ ಕರ್ಲಮಂಗಲಂ ಶ್ರೀಕಂಠಯ್ಯನವರ ಮೂಲಮನೆಯನ್ನು ನೋಡುವ ಅಪೇಕ್ಷೆತ್ತು. ಆಗ ನನ್ನೊಂದಿಗೆ ಡಾ. ವಿಜಯ ದಬ್ಬೆಯವರೂ ಸೇರಿಕೊಂಡರು. ನಮಗೆ ಮಾಗಡಿ ಸಮೀಪದ ಕರ್ಲಮಂಗಲಂಗೆ ಹೋಗಿಬರಲು ವ್ಯವಸ್ಥೆ ಮಾಡಿದ್ದು ಮಾತ್ರವಲ್ಲ, ಇಡೀ ದಿನ ಅವರು ನಮ್ಮೊಂದಿಗಿದ್ದರು.
    ನಿವೃತ್ತಿಯ ನಂತರ ಅವರು ಸ್ಕೌಟ್ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ೧೯೯೩ರಲ್ಲಿ ಸ್ಕೌಟ್ ಸಂಸ್ಥೆಯ ರಾಜ್ಯಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅನಂತರ ಈ ಸಂಸ್ಥೆಯ ರಾಜ್ಯ ಕೋಶಾಧಿಕಾರಿಯೂ ಆಗಿದ್ದರು. ಅವರು ಸ್ಕೌಟ್ ಸಂಘಟನೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ೧೯೯೯ರಲ್ಲಿ ಅವರಿಗೆ ರಾಷ್ಟ್ರಪತಿಗಳಿಂದ ದೆಹಲಿಯಲ್ಲಿ ಅತ್ಯುನ್ನತ ಸೇವಾಪಕದ 'ಸಿಲ್ವರ್ ಎಲಿಫೆಂಟ್ ಪ್ರಶಸ್ತಿ'ಯ ಗೌರವ ದೊರೆತು. ಸ್ಕೌಟ್‌ನ ಅತ್ಯುನ್ನತ ಪ್ರಶಸ್ತಿಯಾದ ಇದನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದ ಹೆಗ್ಗಳಿಕೆ ಅವರದು. ಈ ಬಗೆಗೆ ಪ್ರೊ. ಎಚ್ಚೆಸ್ಕೆ ಸುಧಾ ವಾರ ಪತ್ರಿಕೆಯ ವಾರದ ವ್ಯಕ್ತಿ ಅಂಕಣದಲ್ಲಿ ಲೇಖನವನ್ನು ಬರೆದಿದ್ದರು. ಗುರು ಶಿಷ್ಯನ ಸಾಧನೆಯನ್ನು ಮೆಚ್ಚಿ ಕೊಂಡಾಡಿದ ಅಪರೂಪದ ಸಂಗತಿದು.
    ಬೆಂಗಳೂರಿನ ಬಡಗನಾಡು ಬ್ರಾಹ್ಮಣ ಸಂಘ, ಕಾಶಿಶೇಷಶಾಸ್ತ್ರಿ ಚಾರಿಟೇಬಲ್ ಟ್ರಸ್ಟ್‌ನ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 'ನೆನಪುಸಿಹಿ ಎರಡು ದಶಕ' ಕೃತಿ ಒಂದು ಅಪರೂಪದ ಅಪೂರ್ವ ದಾಖಲೆ. ಕೃತಿಯ ಹೆಸರೇ ಸೂಚಿಸುವಂತೆ ಇಲ್ಲಿ ಅವರು ಕಹಿಯನ್ನು ಗೌಣವಾಗಿಸಿ ಸಿಹಿಯನ್ನು ಹಂಚಿದ್ದಾರೆ. ಇದು ಅವರ ಮನೋಧರ್ಮದ ದ್ಯೋತಕವೂ ಹೌದು. ಈ ವರ್ಗದಲ್ಲಿ ಶ್ರೀಮತಿ ಚಿ.ನ. ಮಂಗಳಾ ಅವರ ಒಂದು ಕೃತಿ ಸಿಗುತ್ತದೆ. ಮುಂದಿನ ತಲೆಮಾರಿನಲ್ಲಿ ಇಷ್ಟೊಂದು ದೀರ್ಘಕಾಲ ಒಂದು ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸುವ ಅವಕಾಶ ಸಿಗುವುದು ಅನುಮಾನ. ಹೀಗಾಗಿ ವಿವೇಕಾನಂದ ಕಾಲೇಜಿನ ದೃಷ್ಟಿಯಿಂದ ಇದೊಂದು ಚಾರಿತ್ರಿಕ ದಾಖಲೆ. ಇದರಲ್ಲಿ ಕಾಲೇಜಿನ ಪ್ರಗತಿಯ ಚಿತ್ರದೊಂದಿಗೆ ಪುತ್ತೂರಿನ ಸಾಂಸ್ಕೃತಿಕ ಚರಿತ್ರೆಯೂ ತೆರೆದುಕೊಳ್ಳುತ್ತಾ ಹೊಗುತ್ತದೆ. ಲವಲವಿಕೆಯ ಬರವಣಿಗೆ ಕೃತಿಯನ್ನು ಓದಿಸಿಕೊಂಡು ಹೋಗುತ್ತದೆ. ಇತ್ತೀಚಿಗೆ ಇದು ಮರುಮುದ್ರಣವಾಗಿರುವುದು ಗಮನಾರ್ಹ ಅಂಶ. ನೆನಪು ಸಿಹಿ ಎರಡು ದಶಕದ ಇಂಗ್ಲಿಷ್ ಆವೃತ್ತಿಯೂ ಸಿದ್ಧವಾಗಿ ಸಪ್ಟಂಬರ್ ೫ ರಂದು ಹುಬ್ಬಳ್ಳಿಯಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿದೆ. ಮಂಗಳೂರಿನ ರೋಶನಿ ನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಲಕ್ಷ್ಮೀನಾರಾಯಣ ಭಟ್ಟ ಇದನ್ನು 'With young minds - A memoir' ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಡಾ. ಭಟ್ಟರು ಅಪ್ಪನವರ ಪ್ರಿಯ ಶಿಷ್ಯರಲ್ಲಿ ಒಬ್ಬರು. ಅಪ್ಪನವರ ಮೇಲೆ ಅಪಾರ ಗೌರವವುಳ್ಳವರು. ಇದಕ್ಕಿಂತ ಮಿಗಿಲಾಗಿ ಅಪ್ಪನವರಿಂದಾಗಿ ಅವರಿಗೆ ಪದವಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಯಿತೆಂಬ ಭಾವನಾತ್ಮಕ ಸಂಬಂಧವನ್ನು ಇನ್ನೂ ಉಳಿಸಿಕೊಂಡಿರುವ ವ್ಯಕ್ತಿ. ಹಾಗೆಯೇ ಈ ಕೃತಿಯನ್ನು ಪ್ರೊ. ಅಪ್ಪನವರ ಮೇಲಿನ ಗೌರವದಿಂದ ಕಲಾವಿದ ಮೋನಪ್ಪನವರು ಪ್ರಕಟಿಸಿದ್ದಾರೆ. ಒಬ್ಬ ಅಧ್ಯಾಪಕನಿಗೆ ಇಂತಹ ಶಿಷ್ಯರು ಸಿಗುವುದೂ ಭಾಗ್ಯವೇ ಸರಿ. ಪ್ರೊ. ಅಪ್ಪನವರು ಪ್ರಿನ್ಸಿಪಾಲರಾಗಿರುವುದಕ್ಕಿಂತ ಮಿಗಿಲಾಗಿ ಓರ್ವ ಮನುಷ್ಯರಾಗಿದ್ದರು. ಅವರಲ್ಲಿದ್ದ ಈ ಮನುಷ್ಯತ್ವದ ನೆಲೆಯಿಂದಾಗಿ ನೂರಾರು ಮಂದಿ ವಿದ್ಯಾರ್ಥಿಗಳು ಶಿಕ್ಷಣದ ಬೆಳಕನ್ನು ಕಂಡಿದ್ದಾರೆ.
    ಮೇ ೩೧, ೧೯೯೩ ರಂದು ಅವರು ವೃತ್ತಿಂದ ನಿವೃತ್ತರಾದರು. ಎರಡು ದಶಕದ ಕಾಲ ಅವರು ಕಾಲೇಜಿನ ಉನ್ನತಿಗಾಗಿ ಶ್ರಮಿಸಿದ್ದರು. ವಿವೇಕಾನಂದ ಕಾಲೇಜು ಎಂದರೆ ಎಂ.ಎಸ್. ಅಪ್ಪ ಎಂಬಷ್ಟರ ಮಟ್ಟಿಗೆ ಒಂದು ಐಡೆಂಟಿಟಿ ಪ್ರಾಪ್ತವಾಗಿತ್ತು. ಶಿವರಾಮಕಾರಂತರು ಬಾಳಿಬದುಕಿದ ಊರು ಎಂಬ ಆಕರ್ಷಣೆಯೊಂದಿಗೆ ಅವರು ಪುತ್ತೂರಿಗೆ ಬಂದರು. ಇಲ್ಲಿನ ಶೈಕ್ಷಣಿಕ ಬದುಕಿಗೆ ಮೆರುಗು ನೀಡಿದರು; ಮನ್ನಣೆಯನ್ನು ಕಲ್ಪಿಸಿದರು. ಬದುಕಿನ ಕೊನೆಯವರೆಗೂ ಅವರಿಗೆ ಪುತ್ತೂರಿನ ಬಗೆಗೆ ವಿಶೇಷ ವ್ಯಾಮೋಹವಿತ್ತು. ಇಲ್ಲಿಗೆ ಬರುವ ಸಣ್ಣ ಅವಕಾಶವನ್ನೂ ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. 'ಪ್ರಿನ್ಸಿಪಾಲರು' ಎಂಬ ಪದವಿಗೆ ಅವರು ಒಂದು ರೂಪಕವಾಗಿದ್ದರು. ಅವರ ಅಗಾಧ ವ್ಯಕ್ತಿತ್ವವನ್ನು ಅಕ್ಷರದಲ್ಲಿ ಹಿಡಿಯುವುದು ಅಸಾಧ್ಯ. ಬರೆದಷ್ಟಿದೆ. ; ಬೆಟ್ಟದಷ್ಟಿದೆ. ಹಿಡಿದ ಕೆಲಸವನ್ನು ಸಾಧಿಸುವ ಛಲಗಾರ. ದೈವಭಕ್ತ, ಕ್ರೀಡಾಭಿಮಾನಿ. ಭಾರತೀಯ ಪರಂಪರೆಯನ್ನು ಗೌರವಿಸುವ, ಅದರಲ್ಲಿ ಸದಾ ನಂಬಿಕೆದ್ದ ವಿನಯವಂತ. ಅಸಾಧಾರಣ ನೆನಪಿನ ಶಕ್ತಿ. ಎಲ್ಲದರಲ್ಲೂ ಆಸಕ್ತಿ. ಅರಿಯುವ ಕುತೂಹಲ. ಸದಾವ್ಯಾಸಂಗಪ್ರಿಯ. ಬದುಕಿನಲ್ಲಿ ಅವರು ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ತಿರುಗಿ ನೀಡಿದ್ದಾರೆ.
    ಇಲ್ಲಿ ಒಂದು ಸಂದರ್ಭವನ್ನು ನೆನಪಿಸಿಕೊಳ್ಳಬೇಕು. ಪ್ರೊ. ಅಮೃತ ಸೋಮೇಶ್ವರ ಅವರು ನಿವೃತ್ತರಾದಾಗ 'ಯಜ್ಞರಕ್ಷಣೆ' ಎಂಬ ಯಕ್ಷಗಾನವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿ ಪ್ರದರ್ಶನ ಮಾಡಿದ್ದೆವು. ನಾನು ಅದರಲ್ಲಿ ಬ್ರಾಹ್ಮಣ ವಟುವಿನ ಪಾತ್ರವನ್ನು ಮಾಡಿದ್ದೆ. ಪ್ರೊ. ಅಪ್ಪನವರು ಅದರಲ್ಲಿ ಗುರುವಿನ ಪಾತ್ರವನ್ನು ಮಾಡಿದ್ದರು. ರಂಗದ ಮೇಲೆ ಯಜ್ಞ ಆರಂಭವಾತು. ಭಾಗವತರು ಪದ ಹೇಳುತ್ತಿದ್ದರು. ಅವರ ಪದ ಮುಗಿಯುವಾಗ ಅಪ್ಪನವರ ಯಜ್ಞವೂ ಮುಗಿದು ಹೋಗಿತ್ತು. ಅನಂತರ ಏನು ಮಾಡುವುದೆಂದು ಗೊತ್ತಾಗದೆ ಮತ್ತೊಮ್ಮೆ ಯಜ್ಞವನ್ನು ಮೊದಲಿನಿಂದ ಆರಂಭಿಸಿದ್ದರು.

    ಪ್ರಿನ್ಸಿಪಾಲರೆಂದರೆ ನಮ್ಮಲ್ಲಿ ಕೆಲವರಿಗೆ ಈಗಲೂ ನೆನಪಾಗುವುದು ಪ್ರೊ. ಎಂ.ಎಸ್. ಅಪ್ಪ ಮಾತ್ರ. ಅವರ ಬದುಕು, ಆದರ್ಶ, ಜೀವನೋತ್ಸಾಹ ನಮ್ಮೊಳಗೆ ಮರುಹುಟ್ಟು ಪಡೆಯಲಿ ಎಂಬ ಹಾರೈಕೆ ನನ್ನದು. ದಿನಾಂಕ ೦೮.೦೪.೨೦೧೦ ರಂದು ನಮ್ಮನ್ನಗಲಿದ ಹಿರಿಯ ಚೇತನಕ್ಕೆ ಅಕ್ಷರ ರೂಪದ ಶ್ರದ್ಧಾಂಜಲಿದು.

    ಮುಗಿಸುವ ಮುನ್ನ . . . . .
    ಪ್ರೊ. ಅಪ್ಪ ಒಮ್ಮೆ ಪುತ್ತೂರಿಗೆ ಬಂದಿದ್ದಾಗ ನಿಮ್ಮ ವಿವರವಾದ ಬಯೋಡೇಟಾ ಇದ್ದರೆ ಬೇಕಿತ್ತು ಎಂದು ಕೇಳಿದ್ದೆ. ಅವರು ಕಳಿಸುತ್ತೇನೆ ಎಂದಿದ್ದರು. ಅವರು ೨೪.೦೭.೨೦೦೯ರಂದು ವಿವರಗಳನ್ನು ನೀಡಿ ಬರೆದ ಕಾಗದವನ್ನು ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇನೆ. ಇದು, ಅವರು ಕಾಗದ ಬರೆಯುವ ಶೈಲಿಯೂ ಹೌದು.
    ಪ್ರಿಯ ಬಂಧು ಡಾ. ಎಚ್. ಜಿ. ಶ್ರೀಧರ ಅವರಿಗೆ
    1. ಸಪ್ರೇಮ ನಮಸ್ಕಾರಗಳು. ನಿಮಗೂ ನಿಮ್ಮ ಕುಟುಂಬಕ್ಕೂ.
    ೨. ನಿಮ್ಮ ಆಶಯದಂತೆ ಈ ನನ್ನ "ಬೈಯ್ಯೋ ಡೇಟಾ" ರವಾನಿಸುತ್ತೇನೆ. ಸ್ವೀಕರಿಸಿ.
    ೩. ಇನ್ನೂ ಹೆಚ್ಚಿನ "ಬೈಯ್ಯೋ ಡೇಟಾ" ನಿಮ್ಮಲ್ಲಿ ಲಭ್ಯವಿದ್ದಲ್ಲಿ ಸೇರಿಸಿ-ಅಳವಡಿಸಿ.
    ೪. ಪ್ರಪಂಚದಲ್ಲಿ ಈ ಹುಚ್ಚು ಯಾವಾಗ ಕೊನೆಗೊಳ್ಳುತ್ತದೋ !!!
    ೫. ಬರೆಯಲಾದವರು ಎಷೊಂದು ಸಾಧನೆಗಳನ್ನು ಮಾಡಿರುತ್ತಾರೆ ! ಅವರ ಸಾಧನೆಗಳನ್ನು ಕಾಲಗರ್ಭದಲ್ಲಿ ಅಪರಿಚಿತವಾಗಿ ಲೀನವಾಗಿ ಹೋಗುತ್ತವಲ್ಲವೇ ?
    ೬. ಸಮಾಜಕ್ಕೆ ಮಾಡಿದ ಕಿಂಚಿತ್ ಸೇವೆಗೆ ಢಂಗುರಬೇಕೇ ?
    ೭. ನಾವೂ ಪ್ರವಾಹ ಪತಿತರು - ತೇಲಿಹೋಗುತ್ತೇವೆ !!!
    ೮. ಅತಿಯಾತಲ್ಲವೇ ?
    ೯. ನಮಸ್ಕಾರಗಳುಬೆಂಗಳೂರು ಇಂತು ಶ್ರೇಯೋಕಾಂಕ್ಷಿ
    ಎಂ.ಎಸ್. ಅಪ್ಪ
    ೨೪.೦೭.2009

    Read more...

    Friday, September 10, 2010

    1

    ವಾಕಿಂಗ್ ಸ್ಟಿಕ್ ಬಿಟ್ಟದ್ದು . . . .

  • Friday, September 10, 2010
  • ಡಾ.ಶ್ರೀಧರ ಎಚ್.ಜಿ.
  • ಇಲ್ಲಿರುವುದು ಆಸ್ಪತ್ರೆಯಿಂದ ಮನೆಗೆ ಬಂದ ಕ್ಷಣದ ಭಾವಚಿತ್ರ.
    ನಾನು ಜುಲೈ ೧೪ರಿಂದ ಕಾಲೇಜಿಗೆ ಹೋಗಲು ಆರಂಭಿಸಿದ್ದರೂ ಕಾಲು ಸಂಪೂರ್ಣ ಗುಣವಾಗಿರಲಿಲ್ಲ. ನಮಗೆ ಅವರಸರವಿದೆಯೆಂದು ರೋಗ ಗುಣವಾಗುತ್ತದೆಯೇ? ಅದಕ್ಕೆ ಅದರದ್ದೇ ಆದ ಸಮಯ ಹಿಡಿಯುತ್ತದೆ. ನಾನು ಹೋದ ದ್ವಿತೀಯ ಮತ್ತು ತೃತೀಯ ಪದವಿ ತರಗತಿಗಳಲ್ಲಿ ನನ್ನ ಕಾಲಿನ ಬಗೆಗೆ ವಿವರಣೆ ಕೊಡುವುದು ಅನಿವಾರ್ಯವಾಗಿತ್ತು. ಆದರೆ ಪ್ರಥಮ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನನ್ನ ಪರಿಚಯವಿಲ್ಲದ್ದರಿಂದ ಅವರಿಗೂ ಈ ಬಗೆಗೆ ವಿವರಿಸಬೇಕಾಯ್ತು. ಮೊದಲ ಒಂದು ವಾರ ಸಂಜೆಯಾಗುವಾಗ ಕಾಲಿಗೆ ವಿಪರೀತ ಆಯಾಸವಾಗುತ್ತಿತ್ತು.
    ಆದರೆ ನಿರಂತರವಾಗಿ ನಿಂತು ಪಾಠಮಾಡುವುದು ಅನಿವಾರ್ಯವೂ ಆಗಿತ್ತು. ತರಗತಿಗಳಲ್ಲಿ ಕುಳಿತು ಪಾಠಮಾಡುವುದಕ್ಕೆ ಸ್ವತ: ನನಗೇ ಕಿರಿಕಿರಿಯಾಗುತ್ತಿತ್ತು. ಇನ್ನು ಕುಳಿತುಕೊಳ್ಳಲು ಬೇಕಾದ ಸಾಧನವೂ ಇರಲಿಲ್ಲ. ಭಾಷಾ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಕುಳಿತರೆ ಹಿಂದಿನವರಿಗೆ ಕಾಣುವುದೂ ಇಲ್ಲ. ಹೀಗಾಗಿ ನಿಂತು ಪಾಠ ಮಾಡುವುದು ಒಂದು ಸಮಸ್ಯೆಯಾಗಿ ಕಾಡತೊಡಗಿತು. ಇದರ ಗೊಡವೆಯೇ ಬೇಡವೆಂದು ರಜೆ ಹಾಕುವ ಯೋಚನೆಯೂ ಬಂದಿತ್ತು. ಆದರೆ ಹಾಗೆ ಮಾಡಿದರೆ ಸೆಮಿಸ್ಟರ್ ವ್ಯವಸ್ಥೆಯಲ್ಲಿ ಪಾಠ ಮಾಡಿ ಮುಗಿಸುವುದಾದರೂ ಹೇಗೆ ? ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.
    ಒಂದು ವಾರವಾಗುವಾಗ ಅಭ್ಯಾಸವಾಗಿ ಕಾಲು ಸಹಕರಿಸಿತು. ಆದರೆ ಮೆಟ್ಟಿಲು ಹತ್ತಿ ಇಳಿಯುವುದೇ ಒಂದು ಸಾಹಸವಾತು. ನಮ್ಮ ಕನ್ನಡ ವಿಭಾಗವು, ನೆಲದಿಂದ ಸ್ವಲ್ಪದೂರ ಆಕಾಶಕ್ಕೆ ತುಸು ಹತ್ತಿರ ಎಂಬಂತಿರುವ ನಡುವಣ ಮಹಡಿಯಲ್ಲಿದೆ. ಈ ವಿಭಾಗದ ವಿಶೇಷವೆಂದರೆ ನಾನು ಸೇರಿದ ಮೇಲೆ ಇದು ನಾಲ್ಕನೆಯ ಸ್ಥಳ. ೧೯೮೭ರಲ್ಲಿ ನಾನು ಕಾಲೇಜಿಗೆ ಸೇರಿದಾಗ ವಿಭಾಗವು ನೆಲ ಮಹಡಿಯಲ್ಲಿತ್ತು. ಅನಂತರ ಅಲ್ಲಿ ಸ್ಥಳ ಕಿರಿದಾತೆಂದು ಕಾಲೇಜಿನ ಪ್ರವೇಶದ್ವಾರಕ್ಕೆ ಗೋಡೆ ಕಟ್ಟಿ ಅಲ್ಲಿಗೆ ವರ್ಗಾಸಲಾಯಿತು. ಇಲ್ಲಿ ನಾಲ್ಕಾರು ವರ್ಷ ಕಳೆದ ನಂತರ ಪ್ರವೇಶ ದ್ವಾರಕ್ಕೆ ಗೋಡೆ ಕಟ್ಟಿದ್ದು ಸರಿಯಲ್ಲ, ಇದು ವಾಸ್ತುದೋಷಕ್ಕೆ ಕಾರಣವಾಗಿದೆ ಎಂದು ಗೋಡೆಯನ್ನು ತೆಗೆದು ನಮ್ಮನ್ನು ತಾತ್ಕಾಲಿಕ ನೆಲೆಯಲ್ಲಿ ಸಸ್ಯಶಾಸ್ತ್ರ ವಿಭಾಗಕ್ಕೆ ಕಳಿಸಿದರು. ಅಲ್ಲಿ ಎರಡು ವರ್ಷ ಕಳೆದಮೇಲೆ ಈಗ ಪ್ರವೇಶದ್ವಾರದ ಮೇಲ್ಗಾಗದಲ್ಲಿ ಒಂಡು ಕೊಠಡಿಯಲ್ಲಿ ಠಿಕಾಣಿ ಹೂಡಿದ್ದೇವೆ. [ಈ ಕೊಠಡಿ ಒಂದು ಕಾಲದಲ್ಲಿ (ಸುಮಾರು ೨೦ ವರ್ಷದ ಹಿಂದೆ) ಮಹಿಳೆಯರ ವಿರಾಮದ ಕೊಠಡಿ ಮತ್ತು ಶೌಚಾಲಯವಾಗಿತ್ತು] ನಮ್ಮೊಂದಿಗೆ ಹಿಂದಿ, ಸಂಸ್ಕೃತ ಮತ್ತು ಪತ್ರಿಕೋದ್ಯಮ ವಿಭಾಗವೂ ಅಲ್ಲಿಯೇ ಇದೆ.
    ಹೀಗಾಗಿ ಒಂದೆರಡು ಸಣ್ಣ ತರಗತಿಗಳನ್ನು ನನ್ನ ವಿಭಾಗಕ್ಕೆ ಹತ್ತಿರವಿರುವ ಕೊಠಡಿಗಳಿಗೆ ವರ್ಗಾಯಿಸಿದೆ. ಆದರೂ ನೆಲ ಅಂತಸ್ತಿನಲ್ಲಿ ಮತ್ತು ಮೇಲಿನ ಮಹಡಿಯಲ್ಲಿ (ಇದನ್ನು ಸ್ವರ್ಗವೆಂದು ಕರೆಯುವ ಪದ್ಧತಿದೆ) ನಡೆಯುವ ತರಗತಿಗಳಿಗೆ ನಾನು ಹತ್ತಿ ಇಳಿಯದೆ ನಿರ್ವಾಹವಿರಲಿಲ್ಲ. ಇದಕ್ಕೆ ಮೆಟ್ಟಿಲು ಹತ್ತಿ ಇಳಿಯುವುದೆಂದರೆ ಪ್ರಾಣಕ್ಕೆ ಬರುತ್ತಿತ್ತು. ಆಗಸ್ಟ್ ೨೫ರವರೆಗೂ ವಾಕಿಂಗ್ ಸ್ಟಿಕ್ ಬಳಸಿ ಓಡಾಡುವುದು ಅನಿವಾರ್ಯವಾಗಿತ್ತು. ಅನಂತರ ಸಮತಟ್ಟಾದ ಪ್ರದೇಶದಲ್ಲಿ ನಡೆಯುವಾಗ ವಾಕಿಂಗ್ ಸ್ಟಿಕ್ ಬಳಸುವುದನ್ನು ಬಿಟ್ಟೆ. ಮೆಟ್ಟಿಲು ಇರುವಲ್ಲಿ ಮಾತ್ರ ಇದರ ನೆರವು ಪಡೆಯುತ್ತಿದ್ದೆ. ಸಪ್ಟಂಬರ್ ಒಂದರಿಂದ ಸಂಪೂರ್ಣವಾಗಿ ಸ್ಟಿಟ್ ಬಿಟ್ಟು ನಡೆಯಲು ಪ್ರಯತ್ನಿಸಿದೆ.
    ಹೀಗೆ ಯಾವುದೇ ನೆರವಿಲ್ಲದೆ ನಡೆದುಕೊಂಡು ಅಂತಿಮ ಬಿ.ಎ. ತರಗತಿಗೆ ಹೋದಾಗ ಮೊದಲ ಸಲ ಹೋದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆ ಕ್ಷಣದಲ್ಲಿ ಅವರು ನನ್ನ ಮೇಲಿಟ್ಟಿರುವ ಪ್ರೀತಿಗೆ ತುಸು ಬಾವುಕನಾದೆ. ಉಳಿದಂತೆ ಹಲವು ವಿದ್ಯಾರ್ಥಿಗಳು ಸ್ಟಿಕ್ ಬಿಡುವುದು ಯಾವಾಗ ಎಂದು ವಿಚಾರಿಸುತ್ತಲೇ ಇದ್ದರು. ಹೀಗೆ ಆರಂಭದಲ್ಲಿ ಕೇವಲ ಕೋಲಿನ ನೆರವಿನಿಂದ, ಅನಂತರ ಕಾಲು ಮತ್ತು ಕೋಲಿನ ಸಹಾಯದಿಂದ ನಡೆದ ನಾನು, ನನ್ನದೇ ಕಾಲಿನಲ್ಲಿ ಸ್ವತಂತ್ರವಾಗಿ ನಡೆಯಲು ಆರಂಭಿಸಿದಾಗ ವಿಚಿತ್ರ ಸಂತೋಷವಾಗತೊಡಗಿತು. ಎಲ್ಲರಂತೆಯೇ ನನಗೂ ನಡೆಯಲು ಸಾಧ್ಯ ಎಂಬ ಆತ್ಮವಿಶ್ವಾಸ ಮನಸ್ಸಿನಲ್ಲಿ ಮೂಡತೊಡಗಿತು. ಆರಂಭದಲ್ಲಿ ನೂರಕ್ಕೆ ನೂರು ಕೋಲು, ಅನಂತರದ ದಿನಗಳಲ್ಲಿ ಕೋಲು ಐವತ್ತು ಮತ್ತು ಕಾಲು ಐವತ್ತು, ದಿನಕಳೆದಂತೆ ಕಾಲು ಎಪ್ಪತ್ತೈದು ಕೋಲು ಇಪ್ಪತ್ತೈದು ಎಂಬ ಮಾಪನದಲ್ಲಿ ಕಾಲು ಮತ್ತು ಕೋಲಿನ ಸಾಂಗತ್ಯವಿತ್ತು. ಮೆಟ್ಟಿಲನ್ನು ಹತ್ತಿ ಇಳಿಯುವಾಗ ಮೊಳಕಾಲಿನಲ್ಲಿ ತುಸು ನೋವು ಕಾಣಿಸಿಕೊಂಡಿತು. ಮೆಟ್ಟಿಲ ಪಕ್ಕದಲ್ಲಿರುವ ದಂಡೆ ಅಥವಾ ಸರಳನ್ನು ಆಧಾರಕ್ಕೆ ಬಳಸಿದೆ. ಇದರಿಂದ ಶ್ರಮ ತುಸು ಕಡಿಮೆಯಾತು.

    ಮೆಡಿಕ್ಲೈಮ್ ಮಾಯೆ . . .
    ಹಿಂದೆ ನಾನು ಮೆಡಿಕ್ಲೈಮ್ ಮಾಡಿಸಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದೆ. ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಕ್ರೋಢೀಕರಿಸಿ ಪಟ್ಟಿಯನ್ನು ತಯಾರಿಸಿದೆ. ನಮ್ಮ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿರುವ ಶ್ರೀ ಶಂಕರನಾರಾಯಣ ಭಟ್ಟರು ಈ ವಿಷಯದಲ್ಲಿ ನನಗೆ ಸೂಕ್ತ ಮಾರ್ಗದರ್ಶನವನ್ನು ಮಾಡಿದರು. ಪ್ರತಿಯೊಂದು ರಶೀದಿಗೂ ಡಾಕ್ಟರ್ ಬರೆದುಕೊಟ್ಟ ಚೀಟಿ ಕಡ್ಡಾಯವಾಗಿರಬೇಕು. ಇದಕ್ಕನುಗುಣವಾಗಿ ಒಂದೊಂದಾಗಿ ಜೋಡಿಸತೊಡಗಿದಾಗ ಕೆಲವು ಬಿಲ್‌ಗಳಿಗೆ ಡಾಕ್ಟರ್ ಬರೆದುಕೊಟ್ಟ ಚೀಟಿ ಇಲ್ಲದಿರುವುದು ಪತ್ತೆಯಾತು. ಆಸ್ಪತ್ರೆಗೆ ಹೋಗಿ ಬಿಲ್‌ಗಳಿಗೆ ಅನುಗುಣವಾಗಿ ಡಾಕ್ಟರ್ ಚೀಟಿಯನ್ನು ಬರೆಸಿಕೊಂಡು ಬಂದು ಜೋಡಿಸಲಾಯ್ತು. ಇದನ್ನು ಮೆಡಿಕ್ಲೈಮ್ ಅರ್ಜಿಯಲ್ಲಿ ತುಂಬಿ ಅಗತ್ಯ ದಾಖಲೆಗಳ ಮೂಲಪ್ರತಿಗಳನ್ನು ಜೊತೆಯಲ್ಲಿಟ್ಟು ಕಳಿಸಲಾಯ್ತು. ಎಕ್ಸ್‌ರೇ ಪ್ರತಿಯನ್ನೂ ನೀಡಬೇಕೆಂಬ ಬೇಡಿಕೆ ಪುತ್ತೂರು ಕಛೇರಿಂದ ಬಂತು. ನನ್ನಲ್ಲಿ ಆಪರೇಷನ್‌ಗಿಂತ ಮೊದಲು ತೆಗೆದ ಎಕ್ಸ್‌ರೇ ಮಾತ್ರವಿತ್ತು. ಆಪರೇಷನ್ ನಂತರ ತೆಗೆದ ಎರಡು ಎಕ್ಸ್‌ರೇಗಳು ವೈದ್ಯರ ಬಳಿತ್ತು. ಅವರು ಅದನ್ನು ಶೈಕ್ಷಣಿಕ ಉದ್ದೇಶದಿಂದ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು. ಯಾವುದಾದರೂ ಸೆಮಿನಾರ್‌ಗಳಲ್ಲಿ ಪ್ರಬಂಧವನ್ನು ಮಂಡಿಸಲು ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ನನ್ನಲ್ಲಿ ಇರುವ ಒಂದು ಪ್ರತಿಯನ್ನು ಕಳಿಸಿದೆ.
    ಇದಾಗಿ ಒಂದು ವಾರದಲ್ಲಿ ಬೆಂಗಳೂರಿನ ಮೆಡಿಕ್ಲೈಮ್ ಕಛೇರಿಂದ ಎರಡು ಪ್ರಶ್ನೆಗಳನ್ನು ಕೇಳಿ ಒಂದು ಕಾಗದ ಬಂತು! ಅದರಲ್ಲಿ ಮೊದಲ ಪ್ರಶ್ನೆಗೆ ಅಪಘಾತವಾದಾಗ ನಾನು ಯಾವುದೇ ರೀತಿಯ ಆಲ್ಕೊಹಾಲ್ ಸೇವಿಸಿರಲಿಲ್ಲವೆಂದು ವೈದ್ಯರ ಪ್ರಮಾಣಪತ್ರವನ್ನು ನೀಡಬೇಕಾಗಿತ್ತು. ಎರಡನೆಯ ಪ್ರಶ್ನೆಗೆ ಇದು ಪೋಲೀಸ್ ಕೇಸ್ ಅಲ್ಲದ ಅಪಘಾತವೆಂದು ವೈದ್ಯರು ದೃಢೀಕರಣ ನೀಡಬೇಕಾಗಿತ್ತು. ನಾನು ಕುಡಿದಿರಲಿಲ್ಲ ಎಂಬ ಸರ್ಟಿಫಿಕೇಟನ್ನು ನಾನೇ ನೀಡುವಂತೆ ಆದುದು ಒಂದು ವೈಚಿತ್ರ್ಯವೇ ಸರಿ. ಈ ಬಗೆಯ ಪಾಲಿಸಿಗಳನ್ನು ಮಾಡುವಾಗ ಅತ್ಯಂತ ಸರಳ ಮಾದರಿ. ಯಾವುದೇ ತರ್ಲೆಗಳಿಲ್ಲ ಎಂದು ಬಣ್ಣದ ಮಾತುಗಳಲ್ಲಿ ಪ್ರತಿನಿಧಿಗಳು ಹೇಳುವಾಗ ನಾವು ಮರುಳಾಗುತ್ತೇವೆ. ಅನಂತರ ಒಂದೊಂದೆ ಕಿರಿಕ್ಕುಗಳನ್ನು ಆರಂಭಿಸುತ್ತಾರೆ. ಇನ್ನಾವ ಪ್ರಶ್ನೆಯನ್ನು ಕೇಳುವರೆಂದು ಕಾಯುತ್ತಿದ್ದೇನೆ.
    ವೈದ್ಯೋ ನಾರಾಯಣೋ ಹರಿ: . . . .
    ಒಟ್ಟಿನಲ್ಲಿ ಒಂದು ಅಪೂರ್ವ ಅನುಭವವನ್ನು ಈ ಅಪಘಾತ ನೀಡಿದೆ. ಆಸ್ಪತ್ರೆಯ ಬದುಕಿನ ಒಳನೋಟವನ್ನು ಪಡೆಯಲು ನನಗೆ ಇದರಿಂದ ಸಾಧ್ಯವಾಯಿತು. ಮುಂಜಾನೆಯಿಂದ ರಾತ್ರಿಯವರೆಗೆ ಕೆಲಸ ಮಾಡುವ ವೈದ್ಯರು, ನರ್ಸ್‌ಗಳ ಶ್ರಮದಾಯಕ ಕೆಲಸದ ಅರಿವು ನನ್ನಲ್ಲಿ ಮೂಡಿತು. ಇಷ್ಟಾಗಿಯೂ ಅವರು ಎಲ್ಲಾ ರೋಗಿಗಳಲ್ಲಿ ಅತ್ಯಂತ ಸಮಾಧಾನದಿಂದ ಮಾತನಾಡುವುದು, ಅವರಿಗೆ ಸಾಂತ್ವನ ಹೇಳುವುದು ನಿಜಕ್ಕೂ ಒಂದು ಅದ್ಭುತವೇ ಸರಿ. ಆದ್ದರಿಂದ ವೈದ್ಯಕೀಯ ಜಗತ್ತನ್ನು ವೃತಿಯಾಗಿ ಆರಿಸಿಕೊಳ್ಳಲು ಬಯಸುವವರಿಗೆ ಅಪಾರವಾದ ತಾಳ್ಮೆ, ಶ್ರದ್ಧೆ, ರೋಗಿಗಳ ಮನಸ್ಸನ್ನು ಅರ್ಥಮಾಡಿಕೊಂಡು ವ್ಯವಹರಿಸುವ ಜಾಣ್ಮೆ ಇರುವುದು ಅನಿವಾರ್ಯ. ಇದಿಲ್ಲದಿದ್ದವರು ಅನಂತರ ರೂಢಿಸಿಕೊಳ್ಳುವುದು ಅತ್ಯಗತ್ಯ. ಹೀಗಿರುವವರಿಗೆ ವೈದ್ಯೋ ನಾರಾಯಣೋ ಹರಿ: ಎಂಬ ಮಾತು ಸರಿಯಾಗಿ ಅನ್ವಯವಾಗುತ್ತದೆ.
    ಆಸ್ಪತ್ರೆಯ ದಿನಗಳನ್ನು ನನ್ನ ಅನುಭವದ ಹಿನ್ನೆಲೆಯಲ್ಲಿ ಇಲ್ಲಿ ಒಂದಷ್ಟು ದಾಖಲಿಸಿದ್ದೇನೆ. ಇದನ್ನು ಎಷ್ಟು ಜನ ಓದುತ್ತಾರೆ ಎಂಬ ಅರಿವು ನನಗಿರಲಿಲ್ಲ. ಮೊದಲ ಎರಡು ಕಂತನ್ನು ಪ್ರಕಟಿಸಿದಾಗ, ಅದಕ್ಕೆ ಪ್ರತಿಕ್ರಿಯೆ ಬಂದಾಗ ಕೆಲವರಾದರೂ ಓದುಗರಿದ್ದಾರೆ ಎಂಬ ವಿಶ್ವಾಸ ಬಂತು. ಕಳೆದ ವಾರ ನನ್ನ ವಿದ್ಯಾರ್ಥಿ ಸುಶಾಂತ್ ಬನಾರಿ ಇದಕ್ಕೊಂದು ಸಂಖ್ಯಾಮಾಪಕವನ್ನು ಅಳವಡಿಸಿದ್ದರಿಂದ ಇದನ್ನು ಓದುವವರಿದ್ದಾರೆ ಎಂಬ ಭರವಸೆ ಮೂಡಿತು.
    ಕಳೆದವಾರ ಮಡಿಕೇರಿಯ ನನ್ನ ವಿದ್ಯಾರ್ಥಿನಿ ಶ್ರೀಧನ್ಯ ದೂರವಾಣಿಯಲ್ಲಿ ಸಂಪರ್ಕಿಸಿ ನನ್ನ ಆರೋಗ್ಯವನ್ನು ವಿಚಾರಿಸಿದರು. "ನಾವೆಲ್ಲ ನಿಮ್ಮ ನೆರಳಿನಲ್ಲಿ ಬೆಳೆದಿದ್ದೇವೆ ಸರ್, ನೀವು ಆದಷ್ಟು ಬೇಗ ಗುಣವಾಗಬೇಕು" ಎಂಬ ಮಾತನ್ನು ಶ್ರೀಧನ್ಯ ಹೇಳಿದಾಗ ನನ್ನಲ್ಲಿ ನಿಜಕ್ಕೂ ಧನ್ಯತೆಯ ಭಾವ ಮೂಡಿತು. ವಿದ್ಯಾರ್ಥಿಗಳಿಗೆ ಇನ್ನೂ ನನ್ನ ನೆನಪಿದೆಯಲ್ಲಾ ಎಂಬ ಭಾವದಿಂದ ಮನಸ್ಸು ತುಂಬಿ ಬಂತು. ಆಕೆ ಕಳೆದ ಕೆಲವು ಸಮಯದಿಂದ ಸಂಪರ್ಕದಲ್ಲಿ ಇರಲಿಲ್ಲ. ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದರಿಂದ ಸಂಪರ್ಕದ ಕೊಂಡಿ ಕಳಚಿ ಹೋಗಿತ್ತು.
    ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಇದನ್ನು ಓದುತ್ತಿದ್ದರೆ ದಯವಿಟ್ಟು ಸಂಪರ್ಕದಲ್ಲಿರಿ. ಕಾಲೇಜಿಗೆ ನ್ಯಾಕ್ ಬರುವ ದಿನಗಳು ಹತ್ತಿರದಲ್ಲಿದೆ. ಆ ಸಂದರ್ಭದಲ್ಲಿ ನಿಮ್ಮ ಉಪಸ್ಥಿತಿ ಸಂಸ್ಥೆಗೆ ತುಂಬಾ ಅಗತ್ಯ.
    ಕೆಲವರು ನೆನಪಿನಂಗಳವನ್ನು ಮುಂದುವರಿಸಿ ಎಂದು ಕೇಳಿದ್ದಾರೆ. ಅದು ಮುಂದಿನ ದಿನಗಳಲ್ಲಿ ಮುಂದುವರಿಯುತ್ತದೆ. ಹಾಗೆಯೇ ಕನ್ನಡದಲ್ಲಿ ಲೇಖಕಿಯೊಬ್ಬರು ಬರೆದ ಮೊದಲ ಕಾದಂಬರಿ 'ಸದ್ಗುಣಿ ಕೃಷ್ಣಾಬಾಯಿ' ಕಾದಂಬರಿಯ ಬಗೆಗೆ ಲೇಖನವೊಂದು ಇಷ್ಟರಲ್ಲಿಯೇ 'ಸಿರಿಮನೆ'ಯನ್ನು ಅಲಂಕರಿಸಲಿದೆ. ಶಬ್ದವಿಹಾರ ಮತ್ತೆ ಆರಂಭವಾಗಲಿದೆ. ಓದುಗರಾದ ನಿಮ್ಮ ಬೆಂಬಲ, ಹಾರೈಕೆ, ಹೀಗೇ ಇರಲಿ. 'ಸಿರಿಮನೆ'ಗೆ ಭೇಟಿ ನೀಡುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳು.
    ನನ್ನ ಈ ಮೇಲ್ ವಿಳಾಸ sreedharahg63@gmail.com ಗೂ ನೀವು ಪ್ರತಿಕ್ರಿಯೆಯನ್ನು ಕಳಿಸಬಹುದು. ಹಾಗೆಯೇ ಬರೆಯಲಾಗದವರು ದೂರವಾಣಿ ೦೮೨೫೧-೨೩೪೩೪೨ಗೆ ಮಾತನಾಡಿ ಸಂಪರ್ಕವನ್ನು ಬೆಳೆಸಬಹುದು. ಗುರುತಿನವರಾದರೆ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಸಾಧ್ಯ. ಸ್ಥಿರ ದೂರವಾಣಿಗೆ ಮಾತನಾಡುವವರು ಸಂಜೆ ೮ ಗಂಟೆಯ ನಂತರ ಮಾತನಾಡಬೇಕಾಗಿ ವಿನಂತಿ.
    ವಾಹನಗಳನ್ನು ಜಾಗರೂಕತೆಯಿಂದ ನಡೆಸಿ. ನಿಮ್ಮ ಹಿಂದಿನವರಿಗೂ ಜಾಗರೂಕತೆಯಿಂದ ವಾಹನ ಚಲಾಯಿಸಲು ಭಗವಂತ ಬುದ್ದಿಕೊಡಲಿ.
    ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು
    Read more...

    Monday, September 6, 2010

    3

    ಮನೆಗೆ ಬರುವ ಸಂಭ್ರಮ

  • Monday, September 6, 2010
  • ಡಾ.ಶ್ರೀಧರ ಎಚ್.ಜಿ.
  • ಜೂನ್ ಒಂದರಂದು ಸಂಜೆ ನನ್ನ ವಿದ್ಯಾರ್ಥಿ (ಹಿಂದಿನ)ಮನೋಜ್ ಮಹಾವೀರದಲ್ಲಿ ಓಡಾಡುತ್ತಿರುವುದು ಸವಿತಳ ಕಣ್ಣಿಗೆ ಬಿತ್ತು. ಏನೆಂದು ವಿಚಾರಿಸಿದಳು. ದೊಡ್ಡಪ್ಪನಿಗೆ ಅನಾರೋಗ್ಯವಾಗಿ ಬಂದಿರುವುದಾಗಿ ತಿಳಿಸಿದ. ಆಗಲೇ ನಾನಲ್ಲಿರುವುದು ಗೊತ್ತಾಗಿ ನನ್ನ ಕೊಠಡಿಗೆ ಬಂದ. ಹೋಗುವಾಗ ನನ್ನ ಮೇಲಿನ ಪ್ರೀತಿಂದ ' ಸರ್, ನಿಮಗೆ ಓಡಾಡಲು ಭುಜಕ್ಕೆ ಆನಿಸಿಕೊಂಡು ಹೋಗುವ ಸ್ಟಿಕ್ ನನ್ನಲ್ಲಿದೆ. ಬೇಕಿದ್ದರೆ ಹೇಳಿ. ತಂದು ಕೊಡುತ್ತೇನೆ' ಎಂದ. ಮರುದಿನ ಅದನ್ನು ನನ್ನ ಮನೆಗೇ ತಂದು ಕೊಟ್ಟ.!

    ಆಸ್ಪತ್ರೆಯಲ್ಲಿ ಮೊದಲ ಮೂರು ದಿನ ನನ್ನ ಭಾವ ನನ್ನೊಂದಿಗೆ ರಾತ್ರಿ ಆಸ್ಪತ್ರೆಯಲ್ಲಿದ್ದರು. ಹಗಲು ನನ್ನ ಮನೆಯಾಕೆ ಇರುತ್ತಿದ್ದಳು. ಮೂರನೆಯ ದಿನ ನಾನೇ ಭಾವನನ್ನು ಊರಿಗೆ ಕಳಿಸಿದೆ. ಆತನೂ ಮನೆಯಲ್ಲಿ ಒಬ್ಬನೇ ಇರುವುದು. ಹೊಲ ಮನೆ ಎಂದು ಸಾಕಷ್ಟು ಕೆಲಸವಿರುತ್ತದೆಯಲ್ಲಾ ! ನನ್ನ ಒತ್ತಾಯಕ್ಕೆ ಅವರು ಸಾಗರಕ್ಕೆ ಮರಳಿ ಹೋದರು.

    ಅಂದು ಮೇ ೩೧. ಸಂಜೆಯಾಗುತ್ತಿದ್ದಂತೆ ರಾತ್ರಿ ನನ್ನೊಂದಿಗೆ ಇರುವುದು ಯಾರು ಎಂಬ ಸಮಸ್ಯೆ ನಿಧಾನವಾಗಿ ಆಕಾರ ಪಡೆಯತೊಡಗಿತು. ಆ ದಿನ ಸಂಜೆಯಿಂದ ಹೊರಗೆ ಕಾಲಿಡಲಾಗದಷ್ಟು ವಿಪರೀತ ಮಳೆ. ಸಂಜೆ ಹೊಡೆದ ಸಿಡಿಲಿಗೆ ಮೊಬೈಲ್ ಟವರ್‌ಗಳು ಮಲಗಿದ್ದವು. ಹೊರಜಗತ್ತನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನನ್ನಲ್ಲಿದ್ದ ಮೊಬೈಲು ಮೌನವಾಗಿತ್ತು. ಕಷ್ಟದಿಂದ ವಿನಯ ಭಟ್ಟರನ್ನು ಸಂಪರ್ಕಿಸಿದೆ. ಬಿರುಸಿನಿಂದ ಸುರಿಯುತ್ತಿದ್ದ ಮಳೆಯಲ್ಲಿಯೇ ವಿನಯ ಭಟ್ಟರು ಆಸ್ಪತ್ರೆಗೆ ಬಂದರು. ಅಂದು ರಾತ್ರಿಡೀ ಮಳೆ ಸುರಿಯುತ್ತಲೇ ಇತ್ತು.

    ಜೂನ್ ೧ ರಂದು ರಾತ್ರಿಯ ಪಾಳಿಗೆ ನಮ್ಮ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಆಡುವ ಪ್ರಕಾಶ್ ಕುಮಾರ್ ಬಂದರು. ಜೂನ್ ೨ ರಂದು ರಾತ್ರಿಗೆ ಮತ್ತೊಮ್ಮೆ ಅರುಣ ಪ್ರಕಾಶ್ ನೆರವಿಗೆ ಬಂದರು.

    ಜೂನ್ ೨ ರಂದು ನನಗೆ ಆಸ್ಪತ್ರೆಂದ ಬಿಡುಗಡೆಯಾಗುವ ಸಂಭ್ರಮ. ಅಂದಿನ ಸೂರ್ಯೋದಯ ನನ್ನಲ್ಲಿ ಹೆಚ್ಚು ಉಲ್ಲಾಸವನ್ನು ಮೂಡಿಸಿತ್ತು. ಸುರಿಯುವ ಮಳೆ ವಿಶೇಷ ಕಳೆಯನ್ನು ತಂದಿತ್ತು. ನಾನು ಸುಮಾರು ೧೧ ಗಂಟೆಗೆಲ್ಲ ಮನೆಗೆ ಹೋಗಬಹುದು ಎಂಬ ಉತ್ಸಾಹದಲ್ಲಿದ್ದೆ. ಆದರೆ 'ಬಿಲ್ಲಹಬ್ಬ' ತುಂಬಾ ತಡವಾತು. ಎಲ್ಲವನ್ನೂ ಮುಗಿಸಿ ಹೊರಟಾಗ ೨ ಗಂಟೆ ಕಳೆದಿತ್ತು. ಆಸ್ಪತ್ರೆಂದ ಹೊರಗೆ ಕಾಲಿಟ್ಟಾಗ ಮನಸ್ಸಿಗೆ ಏನೋ ಒಂದು ನಿರಾಳ ಭಾವ. ಏನೆಲ್ಲ ಸೌಕರ್ಯವಿದ್ದರೂ ಅಸ್ಪತ್ರೆ ಆಸ್ಪತ್ರೆಯೇ !

    ಗೆಳೆಯ ಡಾ. ಶ್ರೀಧರ ನಾಯಕ್ ತಮ್ಮ ವಾಹನವನ್ನು ತಂದಿದ್ದರಿಂದ ಮನೆಗೆ ಬರಲು ಅನುಕೂಲವಾತು. ಪುತ್ತೂರಿನಲ್ಲಿದ್ದೂ ನಾನು ಒಂದು ವಾರಕಾಲ ಯಾವಾಗಲೂ ಈ ರೀತಿ ಮನೆಂದ ಹೊರಗಿರಲಿಲ್ಲ. ಹೀಗಾಗಿ ನನ್ನ ಮಟ್ಟಿಗೆ ಇದೊಂದು ದಾಖಲೆ.

    ಇಲ್ಲಿಂದ ಮುಂದೆ ನನ್ನ ನಿಜವಾದ ಅಜ್ಞಾತ ವಾಸದ ಆರಂಭ. ಮುಂದಿನ ಒಂದೂವರೆ ತಿಂಗಳು ಮನೆಂದ ಹೊರಗೆ ಬರದ ಸ್ಥಿತಿ. ಕಾಲನ್ನು ನೆಲಕ್ಕೆ ಊರುವಂತಿಲ್ಲ; ಬಗ್ಗಿಸುವಂತಿಲ್ಲ. ಸರಿಯಾಗಿ ಮಲಗಲೂ ಆಗುತ್ತಿರಲಿಲ್ಲ. ಮೊದಲಿನ ಒಂದು ವಾರ ಒಂದಷ್ಟು ನೋವು, ಕಿರಿಕಿರಿ. ನಿಧಾನವಾಗಿ ಇದು ಕಡಿಮೆಯಾಗುವಾಗ ನಾನು ಬರವಣಿಗೆ ಮತ್ತು ಓದಿನ ಕಡೆ ಮನಸ್ಸನ್ನು ತಿರುಗಿದೆ. ಭಾರತೀಸುತರ ಬಗೆಗೆ ಕಳೆದ ವರ್ಷ ಒಂದು ಸೆಮಿನಾರ್ ಮಡಿಕೇರಿಯಲ್ಲಿ ಆಗಿತ್ತು. ಅದನ್ನು ಸಾಹಿತ್ಯ ಅಕಾಡೆಮಿಗೆ ಪುಸ್ತಕ ರೂಪದಲ್ಲಿ ಮಾಡಿಕೊಡಬೇಕಿತ್ತು. ಇದನ್ನು ಸಂಪೂರ್ಣ ಮಾಡಿದೆ. ಹಾಗೆಯೇ ಒಂದಷ್ಟು ಕಾದಂಬರಿಗಳು ಓದಲು ಬಾಕಿಯಾಗಿತ್ತು. ಇದರಲ್ಲಿ ನಾ. ಮೊಗಸಾಲೆಯವರ ಉಲ್ಲಂಘನೆಯೂ ಒಂದು. ಇದೇ ಹೊತ್ತಿಗೆ ಬೈರಪ್ಪನವರ ಕವಲು ಮಾರುಕಟ್ಟೆಗೆ ಬಂತು. ಹೀಗೆ ಓದಿನ ಭರದಲ್ಲಿ ದಿನಗಳು ಹೇಗೆ ಉರುಳಿದವು ಎಂಬುದು ಗೊತ್ತೇ ಆಗಲಿಲ್ಲ.

    ಈ ನಡುವೆ ಒಂದೆರಡು ಸಲ ವೈದ್ಯರ ಭೇಟಿಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೇ ಹೊರಜಗತ್ತಿನೊಂದಿಗಿನ ನನ್ನ ಸಂಪರ್ಕ ಎನ್ನಬೇಕು. ಈ ಅವಧಿಯಲ್ಲಿ ಪತ್ರಿಕೆ, ಪುಸ್ತಕ ಮತ್ತು ಟಿ.ವಿ. ನನ್ನ ಸಂಗಾತಿಗಳು. ನಾನಿರುವಲ್ಲಿಗೇ ನನ್ನ ಮನೆಯಾಕೆ ಅತ್ಯಂತ ಶ್ರದ್ಧೆಯಿಂದ ಊಟ, ಉಪಹಾರವನ್ನು ಸರಬರಾಜು ಮಾಡುತ್ತಿದ್ದರಿಂದ ನಾನು ಮನೆಯಲ್ಲಿಯೂ ಸೀಮಿತ ವಲಯದಲ್ಲಿ ಚಲಿಸುತ್ತಿದ್ದೆ. ಈ ದಿನಗಳಲ್ಲಿ ಕೆಲವು ಮಂದಿ ನನ್ನ ಅಭಿಮಾನಿ ವಿದ್ಯಾರ್ಥಿಗಳು ಮನೆಗೂ ಬಂದು ಮಾತನಾಡಿಸಿ, ಒಂದಷ್ಟು ಹರಟೆ ಹೊಡೆದು ನನ್ನ ಬೇಸರವನ್ನು ಹೋಗಲಾಡಿಸಿದ್ದಿದೆ.

    ಜುಲೈ ೭ರಂದು ಎಕ್ಸ್‌ರೇ ತೆಗೆದು ಪರಿಶೀಲನೆ ನಡೆಸಿದ ಡಾ. ಪ್ರದೀಪರು ಶೇಕಡಾ ೫೦ರಷ್ಟು ಭಾರವನ್ನು ಕಾಲಿನ ಮೇಲೆ ಹಾಕಿ ನಡೆಯಲು ಸೂಚಿಸಿದ್ದು ನನ್ನಲ್ಲಿ ಒಂದಷ್ಟು ಆತ್ಮವಿಶ್ವಾಸವನ್ನು ಮೂಡಿಸಿತು. ಇದಾಗಿ ಒಂದು ವಾರದ ನಂತರ ೭೫ ಕಾಲು ೨೫ ಕೋಲು ಎಂಬ ಅನುಪಾತದಲ್ಲಿ ನಡೆಯಲು ಸೂಚಿಸಿದರು. ಜುಲೈ ೨೦ರ ಹೊತ್ತಿಗೆ ಎಲ್ಲವೂ ಸರಿಯಾಗುತ್ತದೆ ಎಂಬ ಅವರ ಮಾತು ನನಗೆ ಅಮೃತ ಸಮಾನವಾಗಿತ್ತು.

    ಈ ನಡುವೆ ಜುಲೈ ೧೪ರಿಂದ ನಾನು ಕಾಲೇಜಿಗೆ ಪಾಠ ಮಾಡಲು ಹೋಗುವುದೆಂದು ಸಂಕಲ್ಪ ಮಾಡಿದ್ದೆ. ಹಾಗೆ ಹೋಗುವುದಕ್ಕೆ ನನಗೊಂದು ವಾಕಿಂಗ್ ಸ್ಟಿಕ್ ಬೇಕಿತ್ತು. ಆಗ ಪಕ್ಕನೆ ನೆನಪಾದವರೇ ಕೆ. ಎನ್. ಶರ್ಮರು. ನನ್ನ ಪತ್ನಿಯ ತಂಗಿ ಶರ್ಮರ ಸೊಸೆ. ಹೀಗಾಗಿ ಬಾಂಧವ್ಯದ ಎಳೆಯೊಂದು ನಮ್ಮ ನಡುವಿದೆ.
    ಮೂಲತ: ಪುತ್ತೂರಿನವರಾಗಿದ್ದು ಈಗ ಸಾಗರದಲ್ಲಿರುವ ಕೆ.ಎನ್. ಶರ್ಮರು ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಪುತ್ತೂರಿಗೆ ಬರುವವರಿದ್ದರು. ಅವರು ಇತ್ತೀಚೆಗೆ ಅಮೆರಿಕದಿಂದ ಬರುವಾಗ ನಾಲ್ಕಾರು ವಾಕಿಂಗ್ ಸ್ಟಿಕ್ ತಂದಿರುವುದಾಗಿ ನನ್ನಲ್ಲಿ ಹೇಳಿದ್ದರು. ಅವರಲ್ಲಿದ್ದ ಹೆಚ್ಚುವರಿ ಸ್ಟಿಕ್‌ನ ಮೇಲೆ ನನ್ನ ಕಣ್ಣು ಬಿತ್ತು. ಅವರು ಅತ್ಯಂತ ಪ್ರೀತಿಂದ ಅದನ್ನು ಮನೆಗೆ ತಂದು ಕೊಟ್ಟರು. ಇದರಿಂದ ಕಾಲೇಜಿಗೆ ಹೋಗಿ ಬರಲು ಅನುಕೂಲವಾಯಿತು.

    ಆಸ್ಪತ್ರೆಗೆ ಗೋಪಾಲಕೃಷ್ಣ ಕುಂಟಿನಿಯವರೊಂದಿಗೆ ಬಂದಿದ್ದ ಬಿ.ಟಿ.ರಂಜನ್, ಮತ್ತೊಮ್ಮೆ ಸಂಜೆಯ ಹೊತ್ತು ದೂರವಾಣಿಯಲ್ಲಿ ಒಂದಷ್ಟು ಹರಟಿ, ಜೋಕ್ಸ್ ಹೇಳಿ ನಗಿಸಿದ್ದರು. ಜುಲೈ ೧೨ ರಂದು ಮನೆಗೂ ಬಂದರು. ಈ ಬಗೆಯ ಭೇಟಿಗಳು ನಮ್ಮ ನಡುವಣ ಮಾನವ ಸಂಬಂಧಗಳನ್ನು ಬೆಸೆಯುತ್ತದೆ. ನನಗೀಗ ಅನಿಸುತ್ತಿದೆ ; ಅಪಘಾತ ನನ್ನ ಋಣಭಾರವನ್ನು ಹೆಚ್ಚಿಸಿದೆ.
    Read more...

    Subscribe