Sunday, March 14, 2010
ನೆನಪಿನಂಗಳ - ಶಾಲೆಯ ಮೊದಲ ದಿನ
ಅದು ಜೂನ್ ತಿಂಗಳು. ಮಳೆಗಾಲದ ಸಮಯ. ಅದೂ ಮಲೆನಾಡಿನ ಮಳೆ. ಹಿಡಿದರೆ ಬಿಡುವ ಪ್ರಶ್ನೆ ಇರಲಿಲ್ಲ. ಮುಂಜಾನೆಂದಲೇ ಮಳೆ ಆರಂಭವಾಗಿತ್ತು. ೯.೩೦ರ ಹೊತ್ತಿಗೆ ತಂದೆ ನನ್ನನ್ನು ಮನೆಯ ಸಮೀಪದಲ್ಲಿಯೇ ಇದ್ದ ಶಾಲೆಗೆ ಕರೆದುಕೊಂಡು ಹೋದರು. ಪ್ರವೇಶಾತಿಯ ಪ್ರಕ್ರಿಯೆಗಳನ್ನು ಮುಗಿಸಿ ಶನಿವಾರ ಬರುತ್ತೇನೆ ಎಂದು ತಂದೆ ಮರೆಯಾದರು. ನಾನು ಶಾಲೆಯ ಕಟ್ಟೆಯ ಮೇಲೆ ನಿಂತು ಅವರು ನನಗೆ ಬೆನ್ನುಹಾಕಿ ಹೋಗುವುದನ್ನು ನೋಡುತ್ತಾ ನಿಂತಿದ್ದೆ. ಕಣ್ಣಂಚಿನಲ್ಲಿ ನೀರು ಧಾರಾಕಾರವಾಗಿ ಇಳಿಯುತ್ತಿತ್ತು.
ತಂದೆ ಮರೆಯಾಗುತ್ತಿದ್ದಂತೆ ಅಧ್ಯಾಪಕರು ಬಂದು ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಹಲಗೆ ಮಣೆಯ ಮೇಲೆ ಕೂರಿಸಿದರು. ಒಂದರಿಂದ ನಾಲ್ಕನೆಯ ತರಗತಿಯವರೆಗೆ ಸುಮಾರು ಇಪ್ಪತ್ತು ಮಕ್ಕಳಿದ್ದೆವು. ಒಬ್ಬ ಅಧ್ಯಾಪಕರಿದ್ದರು. ಬರೆಯಲು ತಂದ ಸ್ಲೇಟಿನ ಮೇಲೆ ಅಕ್ಷರವನ್ನು ಬರೆದು ತಿದ್ದಲು ಹೇಳಿದರು. ನಾನು ನನಗೆ ಕಂಡಹಾಗೆ ತಿದ್ದಿದೆ. ಮಧ್ಯಾಹ್ನ ಊಟಕ್ಕೂ ಹೋಗಿಬಂದೆ. ಮಧ್ಯಾಹ್ನದ ನಂತರ ನನಗೇಕೋ ಈ ವ್ಯವಸ್ಥೆ ಸರಿಹೊಂದುವುದಿಲ್ಲ ಎಂಬ ಭಾವನೆ ಬರತೊಡಗಿತು. ಅನಾಥ ಪ್ರಜ್ಞೆ, ಏಕಾಕಿತನ ಮನಸ್ಸನ್ನು ಆವರಿಸತೊಡಗಿತು. ಸಂಜೆ ಶಾಲೆ ಬಿಡುವ ಹೊತ್ತಿಗೆ ಈ ಭಾವನೆ ತೀವ್ರ ಸ್ವರೂಪವನ್ನು ಪಡೆದುಕೊಂಡು ಇಲ್ಲಿಂದ ಹೊರಟು ಬಿಡಬೇಕು ಎಂಬ ತೀರ್ಮಾನಕ್ಕೆ ಬಂದೆ. ಶಾಲೆ ಬಿಡುತ್ತಿದ್ದಂತೆ ಅಜ್ಜನ ಮನೆಗೆ ಹೋಗಿ ಸ್ಲೇಟನ್ನು ಒಂದು ಮೂಲೆಯಲ್ಲಿಟ್ಟೆ. ಅಜ್ಜಿ ತಿನ್ನಲು ಬೆಳಿಗ್ಗೆ ಮಾಡಿಟ್ಟಿದ್ದ ದೋಸೆಯನ್ನು ಕೊಟ್ಟರು. ತಿಂಡಿ ತಿಂದು ಹೊರಗೆ ಬಂದವನೇ ಮತ್ತೊಮ್ಮೆ ಯೋಚಿಸಿದೆ. ಅಜ್ಜನ ಮನೆಯಿಂದ ನಮ್ಮ ಮನೆರುವ ಸ್ಥಳ ಮುಂಡಿಗೆಹಳ್ಳಕ್ಕೆ ಸುಮಾರು ಮೂರು ಮೈಲಿ ದೂರ. ನಡೆದುಕೊಂಡು ಹೋಗಲು ಮುಕ್ಕಾಲು ಘಂಟೆಂದ ಒಂದು ಘಂಟೆ ಬೇಕು. ನಡುವೆ ಎರಡು ಹೊಳೆ. ನಿರ್ಜನ ಪ್ರದೇಶ. ಒಬ್ಬನೇ ಹೋಗಬಹುದೆಂದು ತೀರ್ಮಾನಿಸಿ ನನ್ನ ಕೊಡೆ ಹಿಡಿದುಕೊಂಡು ಯಾರಿಗೂ ಕಾಣದಂತೆ ಮನೆ ಬಿಟ್ಟೆ.
ಸಾಲೆಕೊಪ್ಪ ಊರು ಕಳೆಯುತ್ತಿದ್ದಂತೆ ಮೊದಲ ಹೊಳೆ ಸಿಗುತ್ತದೆ. ಇದನ್ನು ದಾಟಲು ಆಗ ಸೇತುವೆ ಇರಲಿಲ್ಲ. (ಈಗ ಸೇತುವೆಯಿದೆ) ಹೊಳೆಯ ಬುಡಕ್ಕೆ ಬಂದು ನೋಡಿದರೆ ಸಾಕಷ್ಟು ನೀರು ತುಂಬಿ ಹರಿಯುತ್ತಿತ್ತು. ನನಗೆ ಅದನ್ನು ನೋಡಿ ನಿಜಕ್ಕೂ ಭಯವಾಯಿತು. ಸ್ವಲ್ಪದೂರ ಹೊಳೆಯಲ್ಲಿ ನಿಧಾನವಾಗಿ ಹೋದೆ. ಹೊಳೆಯ ನಡುವೆ ಬಂದಾಗ ಸೆಳವು ತೀವ್ರವಾಗಿತ್ತು. ಕಾಲಕೆಳಗಿನ ಮರಳು ಬಿರುಸಿನಿಂದ ನೀರಿನೊಡನೆ ಕೊಚ್ಚಿಹೋಗುತ್ತಿತ್ತು. ನಾನು ಹೊಳೆಯಲ್ಲಿ ತೇಲಿ ಹೋಗುತ್ತೇನೆ ಎನಿಸಿತು. ಆದರೂ ಹಿಂದಕ್ಕೆ ಮರಳುವ ಆಲೋಚನೆ ಬರಲೇ ಇಲ್ಲ. ಏನಾದರಾಗಲಿ ಎಂದು ನಿಧಾನವಾಗಿ ಸಾವರಿಸಿಕೊಳ್ಳುತ್ತ ಒಂದೊಂದೇ ಹೆಜ್ಜೆಯನ್ನಿಟ್ಟು ಮುಂದುವರಿದೆ. ಆತಂಕಗಳ ನಡುವೆ ಮೊದಲ ಕಂಟಕ ಮುಗಿದಿತ್ತು. ನಾನು ಸಾಲೆಕೊಪ್ಪದ ಹೊಳೆಯನ್ನು ದಾಟಿದ್ದೆ.
ಈಗ ಮತ್ತೊಮ್ಮೆ ಆಲೋಚನೆಗಿಟ್ಟುಕೊಂಡಿತು. ಮುಂದೆ ಸಿಗುವ ಹೊಳೆ ಇದಕ್ಕಿಂತ ದೊಡ್ಡದು. ನೀರೂ ಹೆಚ್ಚಿರುತ್ತದೆ ಎಂಬ ಆಲೋಚನೆ ಬಂತು. ತಕ್ಷಣ ನನ್ನ ದಾರಿಯನ್ನು ಬದಲಾಸಿದೆ. ಮೊದಲಿನ ಯೋಜನೆಯ ಪ್ರಕಾರ ಪುರ ಎಂಬ ಊರಿನ ಮೂಲಕ ನಾನು ಮುಂಡಿಗೆಹಳ್ಳದ ಹೊಳೆಯನ್ನು ದಾಟಿ ಮನೆ ಸೇರಬೇಕಾಗಿತ್ತು. ಆದರೆ ಮುಂಡಿಗೆ ಹಳ್ಳದ ಹೊಳೆಗೆ ಹೆದರಿ ದಾರಿಯನ್ನು ಬದಲಾಸಿದೆ. ಇದು ಸುತ್ತುಬಳಸಿನ ದಾರಿ. ಸಮಯವೂ ಹೆಚ್ಚು ಬೇಕು. ಆದರೆ ಧೈರ್ಯಮಾಡಿ ಹೊಸದಾರಿಯನ್ನು ಹಿಡಿದೆ. ನನ್ನ ಜೊತೆಗೆ ಇದ್ದದ್ದು ಒಂದು ಕೊಡೆ ಮಾತ್ರ.
ಸಂಜೆಯಾಗತೊಡಗಿತ್ತು. ಮಳೆಗಾಲವಾದ್ದರಿಂದ ಕತ್ತಲಾಗುವುದು ತುಸು ಬೇಗ. ಹೀಗಾಗಿ ನಡೆಯುವುದನ್ನು ಬಿಟ್ಟು ಅಷ್ಟಷ್ಟು ದೂರ ಓಡತೊಡಗಿದೆ. ಗಾಡಿಗೆರೆ, ಕಲ್ಮಕ್ಕಿಯನ್ನು ದಾಟಿ ಹುಳೆಗಾರು ದೇವಸ್ಥಾನದ ಹತ್ತಿರ ಬರುವಾಗ ಅಲ್ಲಿ ನನ್ನ ತಾಯಿಯ ಮನೆಯ ಪಕ್ಕದ ರಾಮಣ್ಣ ಮತ್ತು ಇತರರು ವಾಲಿಬಾಲ್ ಆಡುತ್ತಿದ್ದರು. ಅವರಿಗೆ ಕಾಣಬಾರದೆಂದು ಕೊಡೆಯನ್ನು ಬಿಡಿಸಿ ಅವರಿಗೆ ಮುಖ ಕಾಣದಂತೆ ಮಾಡಿಕೊಂಡು ದೇವಸ್ಥಾನದ ಸಮೀಪ ಎಡಕ್ಕೆ ತಿರುಗಿ ಕಾಲುದಾರಿಯನ್ನು ಹಿಡಿದೆ. ನಿರ್ಜನ ಪ್ರದೇಶ. ಕಾಡುಬೇರೆ. ಇಲ್ಲಿನ ಕಾಡು ಕಳೆಯುವವರೆಗೆ ಓಡಿದೆ. ಕತ್ತಲಾಗುವ ಹೊತ್ತಿಗೆ ಮನೆ ಸೇರಿದೆ. ನನ್ನನ್ನು ನೋಡಿ ಅಮ್ಮನಿಗೆ ಆಶ್ಚರ್ಯ ಮತ್ತು ಗಾಬರಿ ! ಈ ಮಳೆಯಲ್ಲಿ ಹೇಗೆ ಬಂದೆ ಎಂದು ಕೇಳಿದರು. ತಂದೆ ಹೊರಗೆ ಹೋಗಿದ್ದವರು ಮನೆಗೆ ಬಂದರು. ನನ್ನನ್ನು ನೋಡಿ ಅವರಿಗೂ ಆಶ್ಚರ್ಯ. ಇವನು ಹೊಳೆ ದಾಟಿ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರದು. ಮನೆಯಲ್ಲಿ ಹೇಳಿ ಬಂದಿದ್ದೀಯ ಎಂದು ಕೇಳಿದರು. ನಾನು ಮಾತನಾಡಲಿಲ್ಲ. ನಕಾರಾತ್ಮಕವಾಗಿ ತಲೆಯಾಡಿಸಿದೆ. ಇದನ್ನು ನೋಡಿ ಅವರಿಗೂ ಕಳವಳ ಆರಂಭವಾಯಿತು. ಬೆಳಿಗ್ಗೆಯೇ ಎದ್ದು ಸಾಲೆಕೊಪ್ಪಕ್ಕೆ ಹೋಗಿ ಹೇಳಿ ಬರಬೇಕು ಎಂದು ನಿರ್ಧರಿಸಿದರು. ಈಗಿನ ಹಾಗೆ ಸಂಪರ್ಕಿಸುವುದಕ್ಕೆ ದೂರವಾಣಿಗಳು ಇಲ್ಲದ ಕಾಲವದು. ರಾತ್ರಿ ಊಟವಾಗುವ ಹೊತ್ತಿಗೆ ಚಿಕ್ಕಪ್ಪ ಸಾಲೆಕೊಪ್ಪದಿಂದ ನನ್ನನ್ನು ಹುಡುಕಿಕೊಂಡು ಬಂದರು. ಎಲ್ಲರೂ ಒಟ್ಟು ಸೇರಿ ನನ್ನನ್ನು ಗದರಿದರು. ನಾನು ಅಳುತ್ತ ನಿಂತಿದ್ದೆ. ಚಿಕ್ಕಪ್ಪ ರಾತ್ರಿ ಉಳಿದುಕೊಂಡು ಬೆಳಿಗ್ಗೆ ಹಿಂದಿರುಗಿ ಹೋದರು.
ಇದಾಗಿ ಒಂದು ವಾರದ ನಂತರ ನನ್ನನ್ನು ಮನೆಯಿಂದ ಒಂದೂವರೆ ಮೈಲಿ ದೂರದಲ್ಲಿದ್ದ ಆಲಳ್ಳಿ ಶಾಲೆಗೆ ಸೇರಿಸಿದರು. ಇದು ಬಟಾಬಯಲಿನಲ್ಲಿ ಇದ್ದ ಶಾಲೆ. ಮಧ್ಯಾಹ್ನಕ್ಕೆ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆ. ಮಳೆಗಾಲದಲ್ಲಿ ನೀರು ಕಡಿಮೆ ಇದ್ದರೆ ಮನೆಯ ಸಮೀಪದಲ್ಲಿ ಹರಿಯುತ್ತಿದ್ದ ಮುಂಡಿಗೆ ಹಳ್ಳದ ಹೊಳೆಯನ್ನು ಅಪ್ಪ ದಾಟಿಸುತ್ತಿದ್ದರು. ಆಲಳ್ಳಿ ಗುಡ್ಡದಲ್ಲಿ ಕಾಲ್ದಾರಿಯಲ್ಲಿ ನುಸುಳಿ ಶಾಲೆ ಸೇರುತ್ತಿದ್ದೆ. ಮಾರ್ಗದಲ್ಲಿ ಬೇಕಾದಷ್ಟು ಹೊಳೆದಾಸವಾಳ ಹಣ್ಣು ತಿನ್ನಲು ಸಿಗುತ್ತಿತ್ತು. ಹೊಳೆ ತುಂಬಿದ್ದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಇಲ್ಲಿ ನನಗೆ ಈಶ್ವರನಾಯ್ಕ ಎಂಬ ಅಧ್ಯಾಪಕರಿದ್ದರು. ಇದು ಏಕೋಪಾಧ್ಯಾಯ ಶಾಲೆಯಾದ್ದರಿಂದ ಗುರುಗಳು ಬಂದ ನಂತರ ಬಾಗಿಲು ತೆರೆಯುತ್ತಿತ್ತು. ತರಗತಿಯ ಕಸ ಹೊಡೆಯುವುದು, ಬೆಲ್ ಹೊಡೆಯುವುದು ನೀರು ತಂದಿಡುವುದು ಮುಂತಾದ ಕೆಲಸವನ್ನು ನಾವೇ ಮಾಡಬೇಕಾಗಿತ್ತು. ಆಲಳ್ಳಿಯ ಈ ಶಾಲೆಯಲ್ಲಿ ನಾನು ಎರಡು ವರ್ಷ ಕಲಿತೆ. ಆದರೂ ಇದರಲ್ಲಿ ಒಂದು ಸಂತೋಷವಿತ್ತು. ಅಪ್ಪ, ಅಮ್ಮನ ಸಾಮೀಪ್ಯದ ಸುಖವಿತ್ತು. ಇಲ್ಲಿಂದ ಮುಂದೆ ಶಾಲೆ ನನಗೆ ಯಾವಾಗಲೂ ಬೇಸರ ತರಿಸಿದ್ದಿಲ್ಲ.
Saturday, February 27, 2010
ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ - ಡಾ. ಪಿ.ವಿ. ನಾರಾಯಣ
ಅವರು ಕರ್ನಾಟಕ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಒಂಬತ್ತು ದಿನಗಳ ಸಾಹಿತ್ಯ ಕಲಾಕುಶಲೋಪರಿ ಸಂಸ್ಕೃತಿ ಸಲ್ಲಾಪ ೨೦೧೦ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲಿಕೆಗೆ ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿವಾಣ ಹಾಕುತ್ತಿದೆ. ಅಭಿವೃದ್ಧಿ ಎಂಬುದು ಭಾಷೆ ಮತ್ತು ಸಂಸ್ಕೃತಿಯಿಂದ ಹೊರತಾಗಿಲ್ಲ. ಭಾಷೆಯ ವಿಶಯದಲ್ಲಿ ಮಿಶ್ರಸಂಸ್ಕೃತಿಯುಳ್ಳ ತುಳುನಾಡಿನಲ್ಲಿ ಕನ್ನಡದ ಕೆಲಸ ಸಾಕಷ್ಟು ಆಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸುರೇಂದ್ರರಾವ್ ಹೇಳಿದರು.
ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಆರ್. ವೇದವ್ಯಾಸ ಶುಭಾಶಯದ ಮಾತುಗಳನ್ನು ಹೇಳೆದರು.
ಕಾರ್ಯಕ್ರಮದ ಆರಂಭದಲ್ಲಿ ಪಾವನಗಂಗಾ ಪ್ರಾರ್ಥಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ವಂದಿಸಿದರು. ಡಾ. ಶ್ರೀಧರ ಎಚ್. ಜಿ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಹೊಸಬಗೆಯ ಸವಾಲುಗಳಿಗೆ ವಿದ್ಯಾರ್ಥಿಗಳು ಸಜ್ಜಾಗಬೇಕು- ಪ್ರೊ.ಎಂ.ಎನ್. ಚೆಟ್ಟಿಯಾರ್
ಅವರು ವಿವೇಕಾನಂದ ಕಾಲೇಜಿನ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯು.ಜಿ.ಸಿ. ನೆಟ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅನ್ಯಶಿಸ್ತುಗಳ ಅರಿವು, ಶೈಕ್ಷಣಿಕ ಬರವಣಿಗೆಯಲ್ಲಿನ ಸಾಂದ್ರ ಅನುಭವ, ವಿಭಿನ್ನ ರೀತಿಯ ಬರವಣಿಗೆಯ ಶೈಲಿ ವಿದ್ಯಾರ್ಥಿಗಳನ್ನು ಯಶಸ್ಸಿನ ಕಡೆಗೆ ಮುನ್ನಡೆಸಬಲ್ಲದು ಎಂದು ತರಬೇತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ಡಾ. ಕಲ್ಯಾಣಿ ವಲ್ಲತ್ಸ್, ತಿರುವನಂತಪುರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಎ.ವಿ.ನಾರಾಯಣ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ. ಬಾಲಕೃಷ್ಣ ನಾಯರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಎಚ್. ಮಾಧವ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಪ್ನ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು. ವಲ್ಲತ್ಸ್ ಟೋಟಲ್ ಇಂಗ್ಲಿಷ್ ಸಲ್ಯೂಶನ್ಸ್ ತಿರುವನಂತಪುರ ಕಾರ್ಯಾಗಾರವನ್ನು ನಡೆಸಿಕೊಟ್ಟರು.
Thursday, February 18, 2010
ಡಾ.ಯು.ಪಿ.ಉಪಾಧ್ಯಾಯರಿಗೆ ಶಂಕರ ಸಾಹಿತ್ಯ ಪ್ರಶಸ್ತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ವಹಿಸಲಿದ್ದಾರೆ. ಹಿರಿಯಡ್ಕ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ, ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣುಭಟ್ಟ ನುಡಿಗೌರವ ಸಲ್ಲಿಸಲಿದ್ದಾರೆ.
ಡಾ.ಪದ್ಮನಾಭ ಉಪಾಧ್ಯಾಯರು ೧೯೩೨ರಲ್ಲಿ ಜನಿಸಿದರು. ತಂದೆ ಸೀತಾರಾಮ ಉಪಧ್ಯಾಯ, ತಾಯಿ ಶ್ರೀಮತಿ ಜಲಜಾಕ್ಷಿ ಅಮ್ಮ. ಸಂಸ್ಕೃತ ವೈದಿಕ ವಿದ್ವಾಂಸರ ಮನೆತನ ಇವರದು. ೧೯೫೩ರಲ್ಲಿ ಮದ್ರಾಸ್ ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆ ಹೊಂದಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ವ್ಯಾಸಂಗ ಮಾಡಿದರು. ೧೯೫೫ರಲ್ಲಿ ಮದರಾಸಿನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಬಿ.ಎ. ಆನರ್ಸ್ ಮುಗಿಸಿ ಎಂ.ಎ. ಪದವಿಯನ್ನು ಪಡೆದರು. ಖಾಸಗಿಯಾಗಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದರು. ೧೯೫೯ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಂಸ್ಕೃತ -ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು.
ಇಲ್ಲಿಂದ ಮುಂದೆ ಅವರು ಭಾಷಾವಿಜ್ಞಾನ, ಬುಡಕಟ್ಟು ಭಾಷಾಅಧ್ಯಯನ, ಕುರುಬ ಎಂಬ ಹೊಸ ಭಾಷೆಯ ಶೋಧನೆ ನಡೆಸಿದರು. ಈ ನಡುವೆ ಸ್ವಲ್ಪ ಸಮಯ ವೈಲಿನ್ ಅಭ್ಯಾಸವನ್ನೂ ಮಾಡಿದ್ದಿದೆ. ಕನ್ನಡ ಉಪಭಾಷೆಗಳ ತೌಲನಿಕ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಉಪಾಧ್ಯಾಯರು ೧೯೬೯ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ದಕ್ಷಿಣ ಭಾರತ ಭಾಷಾಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದ ಡಕಾರ್ ವಿಶ್ವವಿದ್ಯಾಲಯದಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ಇವರದು. ಲಂಡನ್, ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ ಆರು ತಿಂಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇದರೊಂದಿಗೆ ಸಿದ್ಧಸಮಾದಿ ಯೋಗ ಶಿಕ್ಷಕನಾಗಿ ೧೫೦ ಯೋಗ ಶಿಕ್ಷಣ ಶಿಬಿರಗಳನ್ನು ನಿರ್ವಹಿಸಿದ ಹಿರಿಮೆ ಇವರದು.
ಉಡುಪಿ ಜಿಲ್ಲೆಯ ಕಾಪು್ವಿನ ಸಮೀಪದವರಾದ ಡಾ.ಉಳಿಯೂರು ಪದ್ಮನಾಭ ಉಪಾಧ್ಯಾಯ ಸಂಸ್ಕೃತ, ಕನ್ನಡ, ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳೊಂದಿಗೆ ಭಾಷಾಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ಪಡೆದವರು. ಅಲ್ಲದೆ ತುಳು, ಇಂಗ್ಲಿಷ್, ಆಫ್ರಿಕನ್, ಫ್ರೆಂಚ್ ಮೊದಲಾದ ಭಾಷೆಗಳಲ್ಲೂ ನುರಿತವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ವಿದ್ವತ್ಪೂರ್ಣ ಕೃತಿಗಳನ್ನು ಪ್ರಕಟಿಸಿದ್ದಾರೆ. ೧೮ ವರ್ಷಗಳ ಸತತ ಪರಿಶ್ರಮದೊಂದಿಗೆ ೬ ಸಂಪುಟಗಳ ವಿಶ್ವಕೋಶ ಮಾದರಿಯ ತುಳು ನಿಘಂಟು ಸಂಪಾದಿಸಿದ್ದು ಅನರ್ಘ್ಯ ಸಾಧನೆ.
ಅನೇಕ ಭಾಷಾ ಬೋಧನಾ ಮಾಲಿಕೆಗಳನ್ನು, ಜಾನಪದ ಸಂಬಂಧೀ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಹಲವೆಡೆ ಅವರ ವೈಚಾರಿಕ ಲೇಖನಗಳು ಪ್ರಕಟವಾಗಿವೆ. ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಭಾ ಜೋಶಿ ಪ್ರಶಸ್ತಿ, ತಿರುವನಂತಪುರದ ಗುಂಡರ್ಟ್ ಪ್ರಶಸ್ತಿ, ತುಳುಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಮೊದಲಾದ ಹತ್ತುಹಲವು ಹಿರಿಮೆಗಳನ್ನು ಮುಡಿಗೇರಿಸಿಕೊಂಡ ಡಾ.ಉಪಾಧ್ಯಾಯರನ್ನು ಇದೀಗ ಪ್ರತ್ಠಿತ ಶಂಕರ ಸಾಹಿತ್ಯ ಪ್ರಶಸ್ತಿಯೂ ಅರಸಿಕೊಂಡು ಬಂದಿದೆ.
ಡಾ. ಉಪಾಧ್ಯಾಯರು ಹಲವರಿಗೆ ಪಿಎಚ್.ಡಿ ಪದವಿಗಾಗಿ ಮಾರ್ಗದರ್ಶನ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪ್ರಭಾಕರ ಜೋಶಿ, ರಾಘವ ನಂಬಿಯಾರ್, ಎಸ್.ಡಿ. ಶೆಟ್ಟಿ, ಬಿ. ಜನಾರ್ದನ ಭಟ್ ಮೊದಲಾದವರು ಪಿಎಚ್.ಡಿ ಪದವಿಯನ್ನು ಗಳಿಸಿದ್ದಾರೆ. ಅಲ್ಲದೆ ಹಲವರು ವಿವಿಧ ವಿಷಯಗಳಿಗೆ ಇವರಿಂದ ಸಲಹೆ, ಸೂಚನೆಗಳನ್ನು ಪಡೆದು ಉಪಕೃತರಾಗಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು 06.೦3.2010ರಂದು ನಡೆಯಲಿದೆ.
Saturday, February 6, 2010
ಕವನ : ನನ್ನಾಕೆಯ ಮನಸು
ಹೂತೋಟದ ಹಾಗೆ
ನನ್ನಾಕೆಯ ಮಾತು
ಮೊಗ್ಗರಳಿದ ಹಾಗೆ
ಬಣ್ಣಬಣ್ಣದ ಹೂವು
ಬಣ್ಣದ ಕೊಡೆ ಹಿಡಿದು
ಮುದಗೊಳಿಸುವ ಹಾಗೆ
ನನ್ನಾಕೆಯ ಮನಸು
ತಂಗಾಳಿಗೆ ತಲೆದೂಗಿ
ಪರಿಮಳವನು ಹರಡಿ
ನಕ್ಕ ಮಲ್ಲಿಗೆಯ ಹಾಗೆ
ನನ್ನಾಕೆಯ ಮನಸು
ಹಸಿರಲ್ಲಿದೆ ಬದುಕು
ಹಸಿರಿಲ್ಲದೆ ಕೊರಗು
ಗಿಡವೆಂದರೆ ಮುಗ್ದತೆಯೆ
ಮೈವೆತ್ತ ಮಕ್ಕಳ ಹಾಗೆ
ಶಬ್ದವಿಹಾರ :
ಹಸಿರು ಚಿಗುರು ಕಾದಂಬರಿಯ ಜೊತೆಗೆ . . .
ಶ್ರೀಮತಿ ಎ.ಪಿ. ಮಾಲತಿ ಕನ್ನಡದ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬರು. ಸಣ್ಣಕಥೆ, ಕಾದಂಬರಿ, ಕವನ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಇವರು ತಮ್ಮ ಪರಿಸರದ ಸಾಮಾಜಿಕ ಬಿಕ್ಕಟ್ಟುಗಳಿಗೆ ತಮ್ಮದೇ ರೀತಿಯಲ್ಲಿ ಧ್ವನಿ ನೀಡಿದವರು. ಅರ್ಧಾಂಗಿ, ಆಘಾತ, ಅನಿಶ್ಚಯ, ಹೊಸಹೆಜ್ಜೆ, ಮಿನುಗದ ಚುಕ್ಕೆ, ಸರಿದ ತೆರೆ, ಬದಲಾಗದವರು, ಸುಖದ ಹಾದಿ, ದೇವ, ತಿರುಗಿದ ಚಕ್ರ, ಪುನರ್ಮಿಲನ ಇತ್ಯಾದಿ ಇಪ್ಪತ್ತಕ್ಕಿಂತ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಮಾಲತಿಯವರು ಮೂಲತ: ಉತ್ತರ ಕನ್ನಡದ ಭಟ್ಕಳದವರು. ಪುತ್ತೂರಿನ ಕೃಷಿಕ ಕುಟುಂಬವನ್ನು ಸೇರಿದರೂ ಬರೆಯುವ ಆಸಕ್ತಿಯನ್ನು ಉಳಿಸಿಕೊಂಡವರು.
ಇವರ ಬರವಣಿಗೆಯ ಹಾದಿಯನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೀವಮಾನದ ಸಾಧನೆಗೆ ನೀಡುವ `ಗೌರವ ಪ್ರಶಸ್ತಿ' ಮಾಲತಿಯವರ ಮುಡಿಗೇರಿದೆ. ಅಲ್ಲದೆ ಇವರ ಸುಖದಹಾದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಇದರೊಂದಿಗೆ ಭಾರ್ಗವಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ ಇತ್ಯಾದಿ ಹಲವು ಗೌರವ, ಪ್ರಶಸ್ತಿಗಳು ಇವರ ವಿವಿಧ ಕಾದಂಬರಿಗಳಿಗೆ ಬಂದಿವೆ. ದೇವ ಕಾದಂಬರಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವೂ ಆಗಿತ್ತು. ಇವರ ಕಥೆಗಳು ಧಾರವಾಹಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೂ ಇದೆ.
ಎ.ಪಿ.ಮಾಲತಿಯವರ ಇತ್ತೀಚಿನ ಕೃತಿ `ಹಸಿರು ಚಿಗುರು' ಇಂದು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾದಂಬರಿ ಎಳೆಯ ತಲೆಮಾರಿನ ಮನೋಧರ್ಮದಲ್ಲಿ ಆಗುತ್ತಿರುವ ಬದಲಾವಣೆ, ಹಿರಿಯ ತಲೆಮಾರಿನೊಂದಿಗೆ ಹೊಂದಿಕೊಳ್ಳಲಾಗದ ಅವರ ಮನಸ್ಥಿತಿ, ನಗರ ಸಂಸ್ಕೃತಿಯ ಕಡೆಗೆ ಮುಖ ಮಾಡಿರುವ ತರುಣ ಜನಾಂಗದ ಚಿತ್ರ, ವಿಶೇಷ ಆರ್ಥಿಕವಲಯ, ಔದ್ಯೋಗೀಕರಣದ ಸಂದರ್ಭದಲ್ಲಿ ತಲ್ಲಣ, ಆತಂಕಗಳನ್ನು ಎದುರಿಸುತ್ತಿರುವ ಹಳ್ಳಿಗಳ ಬದುಕು, ಕಳೆದು ಹೋಗುತ್ತಿರುವ ಹಸಿರಿನ ನಡುವೆ ಬದುಕಿನ ಬೇರುಗಳನ್ನು ಅರಸಬೇಕೆಂಬ ಕಾದಂಬರಿಯ ಆಶಯ ಸಮಕಾಲೀನವಾದುದು. ಇದರೊಂದಿಗೆ ತಂದೆ, ಮಗ, ಸೊಸೆಯ ನಡುವೆ ಸಿಲುಕಿ ಮೂರಾಬಟ್ಟೆಯಾಗುತ್ತಿರುವ ಕೌಟುಂಬಿಕ ರಚನೆಯ ಕಡೆಗೆ ಕಾದಂಬರಿ ನಮ್ಮನ್ನು ಎಚ್ಚರಿಸುತ್ತದೆ. ಇವುಗಳ ನಡುವೆ ಕಿರಿಯ ತಲೆಮಾರು ತನ್ನ ಬೇರುಗಳನ್ನರಸಿ ಗ್ರಾಮೀಣ ಬದುಕಿನ ಕಡೆಗೆ ಮುಖಮಾಡಿ ನಿಲ್ಲುವ ಚಿತ್ರ ಅರ್ಥಪೂರ್ಣವಾಗಿದೆ. ಈ ದೃಷ್ಟಿಯಿಂದ ಕಿರಿಯ ತಲೆಮಾರಿನ ಶಶಾಂಕನ ಪಾತ್ರ ತೆಗೆದುಕೊಳ್ಳುವ ನಿರ್ಧಾರ ಕೃಷಿ ಸಂಸ್ಕೃತಿಪರವಾಗಿದೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗುತ್ತಿದೆ ಎಂಬುದೇ ಆತಂಕದ ವಿಷಯ.
ಈ ಹಿನ್ನೆಲೆಯಲ್ಲಿ `ಹಸಿರು ಚಿಗುರು` ಕಾದಂಬರಿ ನಮ್ಮೊಳಗಿನ ಹಸಿರು ಸಂಸ್ಕೃತಿಯ ಚಿಗುರನ್ನು ಉಳಿಸಲು ಎಚ್ಚರಿಸುತ್ತದೆ. ನಗರ ಸಂಸ್ಕೃತಿಯ ಕಡೆಗೆ ವಲಸೆ ಹೋದವರು ಅಂತಿಮವಾಗಿ ಹಸಿರನ್ನರಸಿ ಹೋಗುವ ಅನಿವಾರ್ಯತೆಯನ್ನು ಕಾದಂಬರಿ ಗುರುತಿಸಿದೆ. ವಿಶ್ವದಾದ್ಯಂತ ಜಾಗತಿಕ ತಾಪಮಾನ, ಹಸಿರುಮನೆಯ ಬಗೆಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಹಿರಿಯರಾದ ಶ್ರೀಮತಿ ಎ.ಪಿ. ಮಾಲತಿಯವರ 'ಹಸಿರುಚಿಗುರು' ಕಾದಂಬರಿ ಬಂದಿರುವುದು ವರ್ತಮಾನದ ಚರ್ಚೆಗೆ ಹೊಸ ಆಯಾಮವನ್ನು ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ಹರಡಿಕೊಳ್ಳುವ ಅಗತ್ಯವಿದೆ.
ಕರಾವಳಿಯ ಲೇಖಕಿ ಮತ್ತು ವಾಚಕಿಯರ ಸಂಘ ಈ ಕಾರ್ಯಕ್ರಮಕ್ಕೆ ಸಹಕರಿಸಿತ್ತು.





