Thursday, June 2, 2011

1

ನೆನಪಿನಂಗಳ - ದೊಡ್ಡಮ್ಮನ ಮನೆಯಿಂದ ಶಾಲೆಗೆ ಪಯಣ

 • Thursday, June 2, 2011
 • ಡಾ.ಶ್ರೀಧರ ಎಚ್.ಜಿ.
 • Share
 • ನನ್ನ ಅಮ್ಮನ ಒಬ್ಬಳು ಅಕ್ಕನ ಹೆಸರು ಗೌರಿ. ಇವರನ್ನು ಹೆಗ್ಗೋಡಿನ ಸಮೀಪದ ಹೊನ್ನೇಸರದ ತಿಮ್ಮಣ್ಣ ಭಟ್ಟರ ಮಗ ಸುಬ್ಬಾಭಟ್ಟರಿಗೆ ವಿವಾಹ ಮಾಡಿಕೊಟ್ಟಿದ್ದರು. ಇವರು ಸ್ವಲ್ಪ ಸಮಯದ ನಂತರ ಗಡಿಕಟ್ಟೆಯಿಂದ ತುಸು ಮುಂದೆ ಬರುವ ಹಿರೇಮನೆ ಎಂಬಲ್ಲಿ ವಾಸಮಾಡಲು ತೊಡಗಿದರು. ನನ್ನ ಹೊಳೆದಾಟುವ ಸಾಹಸವನ್ನು ಅರಿತ ಈ ದೊಡ್ಡಮ್ಮ ತಮ್ಮ ಮನೆಯಿಂದ ಶಾಲೆಗೆ ಹೋಗಲು ಸೂಚಿಸಿದರು. ನನ್ನ ಮನೆಯಲ್ಲಿಯೂ ಇದಕ್ಕೆ ಒಪ್ಪಿಗೆ ಸಿಕ್ಕಿತು. ನನ್ನನ್ನು ಮೂರನೆಯ ತರಗತಿಗೆ ಪುರಪ್ಪೆಮನೆಯಲ್ಲಿದ್ದ ಸರ್ಕಾರಿ ಶಾಲೆಗೆ ಸೇರಿಸಿದರು

  ಸುಬ್ಬಾಭಟ್ಟರು ತೀರಾ ಶ್ರೀಮಂತರಲ್ಲದಿದ್ದರೂ ಬಡವರಾಗಿರಲಿಲ್ಲ. ಒಂದಷ್ಟು ಅಡಿಕೆ ತೋಟವಿತ್ತು. ಭತ್ತಬೆಳೆಯುವ ಗದ್ದೆಯಿತ್ತು. ಆರ್ಥಿಕವಾಗಿ ತಮ್ಮ ಸಂಸಾರದ ಖರ್ಚನ್ನು ಸರಿದೂಗಿಸಿಕೊಂಡು ಹೋಗುವಷ್ಟು ಸಂಪತ್ತು ಅವರಿಗಿತ್ತು. ಗೌರಿ ದೊಡ್ಡಮ್ಮನಿಗೆ ಮೂವರು ಗಂಡುಮಕ್ಕಳು. ಒಬ್ಬಳು ಮಗಳು. ಮಹಾಬಲೇಶ್ವರ ಭಟ್, ತಿಮ್ಮಣ್ಣ ಭಟ್, ಶ್ರೀಕಾಂತ ಮತ್ತು ಮಮತ ಎಂದು ಅವರ ಮಕ್ಕಳ ಹೆಸರುಗಳು. ನಾನು ಹೋಗುತ್ತಿದ್ದ ಶಾಲೆಗೆ ಇವರೂ ಹೋಗುತ್ತಿದ್ದರು. ನನಗೆ ನೆನಪಿರುವಂತೆ ಮಹಾಬಲೇಶ್ವರ ಏಳನೆಯ ತರಗತಿಗೆ, ತಿಮ್ಮಣ್ಣ ಐದನೆಯ ತರಗತಿಗೆ ಹೋಗುತ್ತಿದ್ದರು. ಶ್ರೀಕಾಂತ ಎರಡನೆಯ ತರಗತಿ. ಮಮತ ಬಹುತೇಕ ಒಂದನೆ ತರಗತಿಯಲ್ಲಿದ್ದಳೆಂದು ತೋರುತ್ತದೆ. ಪುರಪ್ಪೆಮನೆ ಶಾಲೆ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು. ತುಸು ಕಾಡಿನ ದಾರಿಯಲ್ಲಿ ಹೋಗಬೇಕಿತ್ತು. ಹೀಗಾಗಿ ಶಾಲೆಗೆ ನಾವೆಲ್ಲರೂ ಒಟ್ಟಿಗೆ ಹೋಗುತ್ತಿದ್ದೆವು.

  ಗೌರಿ ದೊಡ್ಡಮ್ಮನದು ತುಂಬಾ ಒಳ್ಳೆಯ ಮನಸ್ಸು. ನನ್ನನ್ನು ಅವರು ತಮ್ಮ ಮಗನಂತೆಯೇ ನೋಡಿಕೊಂಡಿದ್ದರು. ದೊಡ್ಡಪ್ಪ ತುಂಬಾ ಬುದ್ದಿವಂತರಲ್ಲ. ಆದರೆ ಅವರಿಗೆ ಬೇಕಾದಷ್ಟು ವ್ಯವಹಾರ ಜ್ಞಾನವಿತ್ತು. ಸಂಸಾರವನ್ನು ತಾವೇ ನಿಭಾಯಿಸಿಕೊಂಡು ಹೋಗುತ್ತಿದ್ದರು. ಅವರು ತಪ್ಪು ಮಾಡಿದಾಗ ಅಜ್ಜ ತಿಮ್ಮಣ್ಣ ಭಟ್ಟರು ’ಭೂಂಭಾರ್ಕ’ ಎಂಬ ಪದವನ್ನು ಬಳಸಿ ಬೈಯ್ಯುತ್ತಿದ್ದರು. ನಮಗೆ ಅಜ್ಜನ ಬಾಯಲ್ಲಿ ಈ ಶಬ್ದವನ್ನು ಕೇಳುವುದೆಂದರೆ ಏನೋ ಒಂದು ರೀತಿಯ ಮೋಜು.
  ಮುಂಜಾನೆ ಬೇಗ ಎದ್ದು ಬಚ್ಚಲಿಗೆ ಬೆಂಕಿ ಹಾಕುವುದು, ಕೊಟ್ಟಿಗೆ ಸಗಣಿ ತೆಗೆಯುವುದು, ದೇವರಿಗೆ ಹೂ ಕೊಯ್ಯುವುದು, ದೇವರಪೂಜೆ ಮಾಡುವುದು, ಅಡಿಕೆ ಕೊಯ್ಯುವ ಸಂದರ್ಭದಲ್ಲಿ ಅಡಿಕೆ ಹೆಕ್ಕುವುದು, ಸುಲಿದ ಹಸಿಅಡಿಕೆಯಲ್ಲಿರುವ ಗೋಟನ್ನು ಆರಿಸುವುದು, ಅನಂತರ ಇದನ್ನು ಅಜ್ಜ ತಿಮ್ಮಣ್ಣ ಭಟ್ಟರ ನೇತೃತ್ವದಲ್ಲಿ ಅದನ್ನು ಚಾಕುವಿನಿಂದ ಕೆತ್ತುವುದು, ಮುಂಜಾನೆ ಬೇಯಿಸಿದ ಅಡಿಕೆಯನ್ನು ತಟ್ಟಿಯಲ್ಲಿ ಹರಗುವುದು, ಸಮಯ ಬಂದರೆ ದೊಡ್ಡಮ್ಮನಿಗೆ ಅಡಿಗೆಗೆ ಸಹಾಯ ಮಾಡುವುದು, ಹಸು ಅಥವಾ ಎಮ್ಮೆ ಕರೆಯುವುದು ಹೀಗೆ ಕೆಲಸ ಮಾಡಬೇಕಿತ್ತು. ಮನೆಯಿಂದ ದೂರವಿದ್ದು ಗೊತ್ತಿಲ್ಲದ ನಾನು ಆರಂಭದಲ್ಲಿ ಇಲ್ಲಿಗೆ ಹೊಂದಿಕೊಳ್ಳುವುದಕ್ಕೆ ತುಂಬಾ ಕಷ್ಟಪಟ್ಟೆ.

  ಆ ಕಾಲಕ್ಕೆ ನಮ್ಮೂರಿನಿಂದ ದೊಡ್ಡಮ್ಮನ ಮನೆಗೆ ನೇರವಾಗಿ ಹೋಗುವುದಕ್ಕೆ ಗಜಾನನ ಕಂಪನಿಯ ಮಹೇಶ ಎಂಬ ಒಂದು ಬಸ್ಸಿತ್ತು. ಇದನ್ನು ಹತ್ತಿಕೊಂಡು ಮುಂಡಿಗೆ ಹಳ್ಳಕ್ಕೆ ಹೋಗಿಬಿಡಲೇ ಎಂಬಷ್ಟು ಮನಸ್ಸು ಹಪಹಪಿಗೆ ಒಳಗಾದ ದಿನಗಳೂ ಇದ್ದವು. ಒಮ್ಮೆ ಪುರಪ್ಪೆಮನೆ ಅಂಚೆಕಛೇರಿಯಲ್ಲಿ ಒಂದು ಮೂರು ಪೈಸೆಗೆ ದೊರೆಯುತ್ತಿದ್ದ ಒಂದು ಅಂಚೆಕಾರ್ಡನ್ನು ಖರೀದಿಸಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಅಮ್ಮನಿಗೆ ಒಂದು ಪತ್ರವನ್ನು ಬರೆದಿದ್ದೆ. ಅಂಚೆಯ ಡಬ್ಬಕ್ಕೆ ಹಾಕಿದರೆ ಮನೆಗೆ ತಲುಪಲು ತಡವಾಗುತ್ತದೆ ಎಂದು ಯೋಚಿಸಿ ಮಹೇಶ ಬಸ್ಸು ಬರುವುದನ್ನು ಕಾದು ಅದರ ಡ್ರೈವರನಲ್ಲಿ ಕಾಗದವನ್ನು ಕೊಟ್ಟು, ಸಿರಿವಂತೆ ಅಂಚೆಕಛೇರಿಯ ಡಬ್ಬಕ್ಕೆ ಹಾಕುವಂತೆ ವಿನಂತಿ ಮಾಡಿದ್ದೆ. ಆತ ಅದನ್ನು ಹಾಕಿದನೋ ಇಲ್ಲವೋ ಗೊತ್ತಿಲ್ಲ. ಮನೆಯಿಂದ ಯಾರೂ ಬರಲೂ ಇಲ್ಲ. ಅಲ್ಲಿಗೆ ಮನೆಗೆ ಹಿಂದಿರುಗಿ ಬರುವ ನನ್ನ ಪ್ರಯತ್ನ ಬಹುತೇಕ ನಿಂತಿತು.
  ಮುಂದುವರಿಯುವುದು

  1 Responses to “ನೆನಪಿನಂಗಳ - ದೊಡ್ಡಮ್ಮನ ಮನೆಯಿಂದ ಶಾಲೆಗೆ ಪಯಣ”

  Ramachandra Deva said...
  June 2, 2011 at 9:10 PM

  ಇಲ್ಲಿ ನಮ್ಮ ಕಡೆ ಮಾತಿನಲ್ಲಿ ಅನ್ನ ದಂಡಕ್ಕೆ ಭೂಮಿ ಭಾರಕ್ಕೆ ಎಂಬ ಗಾದೆಯಿದೆ. ನಿಮ್ಮ ಭೂಂಬಾರ್ಕ ಕೇಳಿದಾಗ ಇದು ನೆನಪಾಯಿತು. ನಾನು ನನ್ನ ತಂದೆಯಿಂದ ಈ ಬೈಗುಳ ಸಾಕಷ್ಟು ಸಲ ಕೇಳಿದ್ದೇನೆ.
  ರಾಮಚಂದ್ರ ದೇವ


  Subscribe