Sunday, September 26, 2010

1
ಕಾಯಕಯೋಗಿ ಲಿಂಗಪ್ಪಣ್ಣನ ನೆನಪು೧೯೯೨ರ ಹೊತ್ತಿಗೆ ಪುತ್ತೂರಿನ ವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಜೀವಶಾಸ್ತ್ರ ವಿಭಾಗದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಲಿಂಗಪ್ಪಣ್ಣನ ಪರಿಚಯ ಇರದಿರಲು ಸಾಧ್ಯವೇ ಇಲ್ಲ ! ಏಕೆಂದರೆ ಅವರು ಸಸ್ಯಶಾಸ್ತ್ರ ವಿಭಾಗದ ಅವಿಭಾಜ್ಯ ಅಂಗವಾಗಿದ್ದರು. ಕಾಲೇಜಿನ ಆರಂಭದಿಂದಲೂ ಇಲ್ಲಿ ನೌಕರರಾಗಿದ್ದ ಅವರು ಇತ್ತೀಚೆಗೆ ನಿಧನರಾದರು. ಅವರಿಗಿದು ಶ್ರದ್ಧಾಂಜಲಿ.

ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಪಿ. ಲಿಂಗಪ್ಪಗೌಡರು. ಅವರ ಕಣ್ಣಮುಂದೆ ಕಲಿತುಹೋದ ಅನೇಕ ಕಿರಿಯರಿಗೆ ಅವರು ಲಿಂಗಪ್ಪಣ್ಣ ಎಂದೇ ಜನಪ್ರಿಯ. ತುಸು ಪಾಚಿ ಬಣ್ಣದ ಅರ್ಧತೋಳಿನ ಅಂಗಿ, ಎಣ್ಣೆಹಾಕಿ ಹೊಳೆಯುವ, ಹಿಂದಕ್ಕೆ ಬಾಚಿದ ಗುಂಗುರು ಕೂದಲು, ಎರಡೂ ಕಿವಿಗಳಲ್ಲಿ ದೇಸೀ ಸೊಗಸಿನ ಕಡಕು, ಬಹುತೇಕ ಎಡಭಾಗದಲ್ಲಿ ಜೋತುಬಿದ್ದ ಖಾಕಿ ಬಟ್ಟೆಯ ಚೀಲ, ಅದರ ತುಂಬ ಸಸ್ಯಶಾಸ್ತ್ರದ ಪ್ರಯೋಗಾಲಯಕ್ಕೆ ಬೇಕಾಗುವ ಹೂ, ಗಿಡ, ಕಾ, ಬಳ್ಳಿಗಳ ಸಂಗ್ರಹ.
ಪ್ರತಿದಿನ ದೂರದ ಬಲ್ನಾಡಿನಿಂದ ನಡೆದುಕೊಂಡೇ ಬಂದರೂ ಸಮಯಕ್ಕೆ ಮೊದಲೇ ಬರುವ ಲಿಂಗಪ್ಪಣ್ಣನದು ಆರೋಗ್ಯ ಪೂರ್ಣ ವ್ಯಕ್ತಿತ್ವ. ಈ ಲಿಂಗಪ್ಪಣ್ಣ ಸದಾ ಹಸನ್ಮುಖಿ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಲಿಂಗಪ್ಪಗೌಡರ ತಂದೆ ಪೊಕುಳ ಗೌಡ. ತಾ ಕೊರಪೊಳು ಗ್ರಾಮೀಣ ಬದುಕಿನ ಪ್ರತಿರೂಪದಂತೆ ಇದ್ದವರು. ಇವರ ಮೂವರು ಮಕ್ಕಳಲ್ಲಿ ಲಿಂಗಪ್ಪಗೌಡರು ಹಿರಿಯ ಮಗ. ಇವರ ತಮ್ಮ ಸಂಕಪ್ಪಗೌಡ ಮತ್ತು ತಂಗಿ ಸುಶೀಲ. ದಿನಾಂಕ ೧೧.೦೨.೧೯೩೫ರಲ್ಲಿ ಹುಟ್ಟಿದ ಇವರು ಉಜ್ರುಪಾದೆಯ ಬಲ್ನಾಡು ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯವರೆಗೆ ಅಭ್ಯಾಸ ಮಾಡಿದರು. ೨೦.೦೬.೧೯೬೫ರಲ್ಲಿ ವಿವೇಕಾನಂದ ಕಾಲೇಜಿಗೆ ಸಹಾಯಕರಾಗಿ ಸೇರ್ಪಡೆ. ನಿವೃತ್ತಿಯ ಹೊತ್ತಿಗೆ ದ್ವಿತೀಯ ದರ್ಜೆ ಗುಮಾಸ್ತನ ಹುದ್ದೆಯನ್ನು ಪಡೆದಿದ್ದರು. ಹೀಗಾಗಿ ಬಹುತೇಕ ವಿವೇಕಾನಂದ ಕಾಲೇಜು ಆರಂಭವಾಗುವುದರ ಜೊತೆಗೆ ಲಿಂಗಪ್ಪಣ್ಣನ ವೃತ್ತಿ ಬದುಕೂ ಆರಂಭವಾಗುತ್ತದೆ.
ಕಾಲೇಜಿನ ಆರಂಭದ ದಿನಗಳನ್ನು, ಸಂಸ್ಥೆಯ ಬೆಳವಣಿಗೆಯ ಹಂತಗಳನ್ನು ಅವರು ಕಣ್ಣಾರೆ ಕಂಡವರು. ಬಯಲು ಆಲಯವಾಗಿ ರೂಪಾಂತರಗೊಳ್ಳುವಾಗ ಲಿಂಗಪ್ಪಣ್ಣ ಕಲ್ಲುಗಳನ್ನು ಎತ್ತಿ ಇಟ್ಟಿದ್ದಾರೆ. ಸಿಮೆಂಟು ಹೊತ್ತಿದ್ದಾರೆ. ಅದೆಷ್ಟೋ ರಾತ್ರಿಗಳನ್ನು ಏಕಾಂಗಿ ಕಾವಲುಗಾರನಾಗಿ ಇಲ್ಲಿ ಕಳೆದಿದ್ದಾರೆ. ಕಾಲೇಜಿನ ಅಭಿವೃದ್ಧಿಯಲ್ಲಿ ಇವರ ಶ್ರಮದ ಕೊಡುಗೆ ಸಣ್ಣದಲ್ಲ. ನಿಜವಾದ ಅರ್ಥದಲ್ಲಿ ಕಾಯಕಯೋಗಿಯ ವ್ಯಕ್ತಿತ್ವ ಅವರದು. ಕಾಲೇಜಿನ ಅಭಿವೃದ್ಧಿಯನ್ನು ಕಂಡು ಸಂತಸಪಟ್ಟ ಹಿರಿಯರು. ಲಿಂಗಪ್ಪಗೌಡ ಎಂದರೆ ಸಸ್ಯಶಾಸ್ತ್ರ ಪ್ರಯೋಗಾಲಯ ಎಂಬಷ್ಟು ಅವಿನಾಭಾವ ಸಂಬಂಧವೊಂದು ರೂಪುಗೊಂಡಿತ್ತು. ಅದು ಅವರ ಮನೆಯಾಗಿತ್ತು. ಸ್ವಚ್ಚ, ಸುಂದರ ಪರಿಸರ. ಎಲ್ಲೆಡೆ ಅಚ್ಚುಕಟ್ಟು. ಪ್ರಯೋಗವನ್ನು ಆರಂಭಿಸುವುದಕ್ಕೆ ಮೊದಲು ಹೊತ್ತು ತಂದ ಸಸ್ಯರಾಶಿಯನ್ನು ಜೋಡಿಸಿ ಉಪನ್ಯಾಸಕರ ಕೆಲಸವನ್ನು ಹಗುರ ಮಾಡುತ್ತಿದ್ದರು. ಮಾತ್ರವಲ್ಲ, ತಂದ ನೂರಾರು ಸಸ್ಯಗಳ ಸಸ್ಯಶಾಸ್ತ್ರೀಯ ಹೆಸರುಗಳು ಅವರ ಸ್ಮರಣೆಯಲ್ಲಿದ್ದವು. ವಿದ್ಯಾರ್ಥಿಗಳಿಗೆ ಇದು ಚೋದ್ಯದ ಸಂಗತಿ.
ಕರ್ತವ್ಯದ ಸಮಯದಲ್ಲಿ ಪ್ರಯೋಗಾಲಯ ಅವರ ಪಾಲಿಗೆ ದೇವಾಲಯ. ಇವರ ಸರಳತೆ ವಿದ್ಯಾರ್ಥಿಗಳಿಗೊಂದು ಆದರ್ಶ. ಆದ್ದರಿಂದ ಸದಾ ಮುಗುಳ್ನಗುವ ಲಿಂಗಪ್ಪಣ್ಣನೆಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಯಾವುದೇ ಕೆಲಸವನ್ನು ಹೇಳಿದರೂ ಇಲ್ಲವೆನ್ನದೆ ಮಾಡುವ ಕಾಯಕ ನಿಷ್ಠೆ ಇವರದು. ಕಾಡುಹರಟೆ ಅವರ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಭಾನುವಾರ ಮತ್ತು ಇತರೆ ರಜಾದಿನಗಳಲ್ಲಿ ಕಾಲೇಜಿಗೆ ಬರುವ ಪರಿಪಾಟವನ್ನು ಲಿಂಗಪ್ಪಣ್ಣ ಇಟ್ಟುಕೊಂಡಿದ್ದರು. ಹೀಗೆ ಬರುವಾಗ ಚೀಲದಲ್ಲಿ ಸಸ್ಯಗಳು ಇರುತ್ತಿರಲಿಲ್ಲ. ಬದಲಾಗಿ ಕಾಲೇಜಿನ ಮತ್ತು ಹಾಸ್ಟೆಲ್‌ನ ದಿನಪತ್ರಿಕೆಗಳನ್ನು ಹೊತ್ತು ಬರುತ್ತಿದ್ದರು. ಸುಮಾರು ಹನ್ನೊಂದು ಗಂಟೆಗೆ ಬಂದವರು ಮಧ್ಯಾಹ್ನದವರೆಗೂ ಇದ್ದು ಹೋಗುತ್ತಿದ್ದರು. ಅವರದು ತುಸು ಸಂಕೋಚ ಪ್ರವೃತ್ತಿ. ಒತ್ತಾಯ ಮಾಡಿದರೆ ಊಟ ಮಾಡುತ್ತಿದ್ದರು; ಕಾಫಿ ಅಥವಾ ಟೀ ಕುಡಿಯುತ್ತಿದ್ದರು. ಪ್ರೊ. ಎಂ.ಎಸ್. ಅಪ್ಪನವರಿಗೂ ಲಿಂಗಪ್ಪಣ್ಣನಿಗೂ ಬಿಡಿಸಲಾಗದ ಸಂಬಂಧ. ಅವರಿಗೆ ಬೇಕಾದ ಕಜೆ ಅಕ್ಕಿಯನ್ನು ಲಿಂಗಪ್ಪಣ್ಣ ತಂದು ಕೊಡುತ್ತಿದ್ದರು. ಪ್ರೊ. ಅಪ್ಪನವರು ನಿವೃತ್ತಿಯ ನಂತರ ಬೆಂಗಳೂರಿಗೆ ಹೋದರು. ಅವರು ಪುತ್ತೂರಿಗೆ ಬರುವ ದಿನಾಂಕವನ್ನು ಮೊದಲೇ ತಿಳಿದುಕೊಂಡು ಲಿಂಗಪ್ಪಣ್ಣ ಹಾಜರಿರುತ್ತಿದ್ದರು. ಬರುವಾಗ ಅಪ್ಪನವರಿಗೆ ಕೊಡಲೆಂದು ಅವರ ಕೈಚೀಲದಲ್ಲಿ ಪುತ್ತೂರಿನ ಜೇನು ಸದಾ ಇರುತ್ತಿತ್ತು.
೨೮.೦೨.೧೯೯೩ರಂದು ಲಿಂಗಪ್ಪಣ್ಣ ವೃತ್ತಿಯಿಂದ ನಿವೃತ್ತರಾದರು. ಆದರೆ ಆ ಶೈಕ್ಷಣಿಕ ವರ್ಷದ ಎಲ್ಲಾ ಕೆಲಸಗಳನ್ನು ಅವರು ನಿರ್ವಹಿಸಿದ್ದರು. ಕುತೂಹಲದ ವಿಷಯವೆಂದರೆ ಪ್ರೊ ಅಪ್ಪ ಮತ್ತು ಲಿಂಗಪ್ಪಣ್ಣ ಒಂದೇ ವರ್ಷ ನಿವೃತ್ತರಾದರು ; ಇಬ್ಬರೂ ಒಂದೇ ವರ್ಷ ವಿಧಿವಶರಾದರು. ಇದು ಆಕಸ್ಮಿಕವೋ, ಸಂಬಂಧದ ಬೆಸುಗೆಯೋ ಅರ್ಥವಾಗುವುದಿಲ್ಲ. ಇಲ್ಲದ್ದಕ್ಕಾಗಿ ಹಂಬಲಿಸುವ ವ್ಯಕ್ತಿತ್ವ ಅವರದಲ್ಲ. ಉದಯಕೃಷ್ಣ, ಕುಸುಮಾವತಿ ಮತ್ತು ಜಯಚಂದ್ರ ಅವರ ಮಕ್ಕಳು. ಸಂತೃಪ್ತ ಬದುಕು ಅವರದು. ಕರ್ತವ್ಯವೇ ದೇವರೆಂದು ನಂಬಿದ ಲಿಂಗಪ್ಪಣ್ಣ ೨೧.೦೬.೨೦೧೦ರಂದು ನಮ್ಮನ್ನು ಅಗಲಿದ್ದಾರೆ. ಆದರೆ ನಮ್ಮೆಲ್ಲರ ಮನದ ಮೂಲೆಯಲ್ಲಿ ಲಿಂಗಪ್ಪಣ್ಣನ ಬೆಚ್ಚನೆಯ ನೆನಪಿದೆ. ಅಗಲಿದ ಹಿರಿಯ ಜೀವಕ್ಕೆ ಇದು ಅಕ್ಷರ ನಮನ.

1 Responses to “ ”

Anonymous said...
October 1, 2010 at 9:38 PM

ಹೌದು , ಆ ಲಿಂಗಪ್ಪಣ್ಣರನ್ನು ನಾನು ನಾಲ್ಕೈದನೇ ಕ್ಲಾಸಲ್ಲಿರುವಾಗಲೇ( ಸುಮಾರು ೧೯೮೦) ಮಂಜಲ್ಪಡ್ಪುವಿನ ಮೂಲಕ ಹೋಗುತ್ತಿದ್ದ ರಸ್ತೆ ಮೂಲಕ ಸಿಂಗಾಣಿಯೆಂಬ ಜಾಗದ ಮೂಲಕ ಒಳದಾರಿಯಾಗಿ ಬಲ್ನಾಡಿಗೆ ನಡೆದು ಹೋಗುತ್ತಿದ್ದುದನ್ನು ನೋಡಿದ್ದೇನೆ ಎಷ್ಟೋಬಾರಿ. ಅವರು ವಿವೇಕಾನಣ್ದದಲ್ಲಿ ಇರುವುದು ಅಂತ ಕೂಡ ನನಗೆ ಆಗ ಗೊತ್ತಿತ್ತು. ಅವರೆಗೂದಲು ಮಾತ್ರ ಆಗ ಕಪ್ಪಿತ್ತು , ಉಳಿದಂತೆ ಈ ಪಟದಲ್ಲಿರುವಂತೆಯೇ ಇದ್ದರು.ಒಳ್ಳೆ ಲೇಖನ. - ಅಜಕ್ಕಳ ಗಿರೀಶ.


Subscribe