Thursday, February 18, 2010

0

ಡಾ.ಯು.ಪಿ.ಉಪಾಧ್ಯಾಯರಿಗೆ ಶಂಕರ ಸಾಹಿತ್ಯ ಪ್ರಶಸ್ತಿ

  • Thursday, February 18, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಸಿದ್ದಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ, ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಕೊಡಮಾಡುವ ಶಂಕರ ಸಾಹಿತ್ಯ ಪ್ರಶಸ್ತಿಗೆ ಸಂಶೋಧಕ, ಭಾಷಾ ಶಾಸ್ತ್ರಜ್ಞ ಡಾ.ಯು.ಪಿ.ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಮಾ.06ರಂದು ಅಪರಾಹ್ನ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ವಹಿಸಲಿದ್ದಾರೆ. ಹಿರಿಯಡ್ಕ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ, ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣುಭಟ್ಟ ನುಡಿಗೌರವ ಸಲ್ಲಿಸಲಿದ್ದಾರೆ.
    ಡಾ.ಪದ್ಮನಾಭ ಉಪಾಧ್ಯಾಯರು ೧೯೩೨ರಲ್ಲಿ ಜನಿಸಿದರು. ತಂದೆ ಸೀತಾರಾಮ ಉಪಧ್ಯಾಯ, ತಾಯಿ ಶ್ರೀಮತಿ ಜಲಜಾಕ್ಷಿ ಅಮ್ಮ. ಸಂಸ್ಕೃತ ವೈದಿಕ ವಿದ್ವಾಂಸರ ಮನೆತನ ಇವರದು. ೧೯೫೩ರಲ್ಲಿ ಮದ್ರಾಸ್ ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆ ಹೊಂದಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ವ್ಯಾಸಂಗ ಮಾಡಿದರು. ೧೯೫೫ರಲ್ಲಿ ಮದರಾಸಿನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಬಿ.ಎ. ಆನರ್ಸ್ ಮುಗಿಸಿ ಎಂ.ಎ. ಪದವಿಯನ್ನು ಪಡೆದರು. ಖಾಸಗಿಯಾಗಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದರು. ೧೯೫೯ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಂಸ್ಕೃತ -ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು.
    ಇಲ್ಲಿಂದ ಮುಂದೆ ಅವರು ಭಾಷಾವಿಜ್ಞಾನ, ಬುಡಕಟ್ಟು ಭಾಷಾಅಧ್ಯಯನ, ಕುರುಬ ಎಂಬ ಹೊಸ ಭಾಷೆಯ ಶೋಧನೆ ನಡೆಸಿದರು. ಈ ನಡುವೆ ಸ್ವಲ್ಪ ಸಮಯ ವೈಲಿನ್ ಅಭ್ಯಾಸವನ್ನೂ ಮಾಡಿದ್ದಿದೆ. ಕನ್ನಡ ಉಪಭಾಷೆಗಳ ತೌಲನಿಕ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಉಪಾಧ್ಯಾಯರು ೧೯೬೯ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ದಕ್ಷಿಣ ಭಾರತ ಭಾಷಾಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದ ಡಕಾರ್ ವಿಶ್ವವಿದ್ಯಾಲಯದಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ಇವರದು. ಲಂಡನ್, ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ ಆರು ತಿಂಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇದರೊಂದಿಗೆ ಸಿದ್ಧಸಮಾದಿ ಯೋಗ ಶಿಕ್ಷಕನಾಗಿ ೧೫೦ ಯೋಗ ಶಿಕ್ಷಣ ಶಿಬಿರಗಳನ್ನು ನಿರ್ವಹಿಸಿದ ಹಿರಿಮೆ ಇವರದು.
    ಉಡುಪಿ ಜಿಲ್ಲೆಯ ಕಾಪು್ವಿನ ಸಮೀಪದವರಾದ ಡಾ.ಉಳಿಯೂರು ಪದ್ಮನಾಭ ಉಪಾಧ್ಯಾಯ ಸಂಸ್ಕೃತ, ಕನ್ನಡ, ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳೊಂದಿಗೆ ಭಾಷಾಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ಪಡೆದವರು. ಅಲ್ಲದೆ ತುಳು, ಇಂಗ್ಲಿಷ್, ಆಫ್ರಿಕನ್, ಫ್ರೆಂಚ್ ಮೊದಲಾದ ಭಾಷೆಗಳಲ್ಲೂ ನುರಿತವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ವಿದ್ವತ್ಪೂರ್ಣ ಕೃತಿಗಳನ್ನು ಪ್ರಕಟಿಸಿದ್ದಾರೆ. ೧೮ ವರ್ಷಗಳ ಸತತ ಪರಿಶ್ರಮದೊಂದಿಗೆ ೬ ಸಂಪುಟಗಳ ವಿಶ್ವಕೋಶ ಮಾದರಿಯ ತುಳು ನಿಘಂಟು ಸಂಪಾದಿಸಿದ್ದು ಅನರ್ಘ್ಯ ಸಾಧನೆ.
    ಅನೇಕ ಭಾಷಾ ಬೋಧನಾ ಮಾಲಿಕೆಗಳನ್ನು, ಜಾನಪದ ಸಂಬಂಧೀ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಹಲವೆಡೆ ಅವರ ವೈಚಾರಿಕ ಲೇಖನಗಳು ಪ್ರಕಟವಾಗಿವೆ. ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಭಾ ಜೋಶಿ ಪ್ರಶಸ್ತಿ, ತಿರುವನಂತಪುರದ ಗುಂಡರ್ಟ್ ಪ್ರಶಸ್ತಿ, ತುಳುಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಮೊದಲಾದ ಹತ್ತುಹಲವು ಹಿರಿಮೆಗಳನ್ನು ಮುಡಿಗೇರಿಸಿಕೊಂಡ ಡಾ.ಉಪಾಧ್ಯಾಯರನ್ನು ಇದೀಗ ಪ್ರತ್ಠಿತ ಶಂಕರ ಸಾಹಿತ್ಯ ಪ್ರಶಸ್ತಿಯೂ ಅರಸಿಕೊಂಡು ಬಂದಿದೆ.
    ಡಾ. ಉಪಾಧ್ಯಾಯರು ಹಲವರಿಗೆ ಪಿಎಚ್.ಡಿ ಪದವಿಗಾಗಿ ಮಾರ್ಗದರ್ಶನ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪ್ರಭಾಕರ ಜೋಶಿ, ರಾಘವ ನಂಬಿಯಾರ್, ಎಸ್.ಡಿ. ಶೆಟ್ಟಿ, ಬಿ. ಜನಾರ್ದನ ಭಟ್ ಮೊದಲಾದವರು ಪಿಎಚ್.ಡಿ ಪದವಿಯನ್ನು ಗಳಿಸಿದ್ದಾರೆ. ಅಲ್ಲದೆ ಹಲವರು ವಿವಿಧ ವಿಷಯಗಳಿಗೆ ಇವರಿಂದ ಸಲಹೆ, ಸೂಚನೆಗಳನ್ನು ಪಡೆದು ಉಪಕೃತರಾಗಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು 06.೦3.2010ರಂದು ನಡೆಯಲಿದೆ.

    0 Responses to “ಡಾ.ಯು.ಪಿ.ಉಪಾಧ್ಯಾಯರಿಗೆ ಶಂಕರ ಸಾಹಿತ್ಯ ಪ್ರಶಸ್ತಿ”

    Subscribe