Saturday, February 27, 2010

0

ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ - ಡಾ. ಪಿ.ವಿ. ನಾರಾಯಣ

  • Saturday, February 27, 2010
  • ಡಾ.ಶ್ರೀಧರ ಎಚ್.ಜಿ.
  • ಫೆಬ್ರವರಿ ೨೭ : ಪ್ರಾಚೀನ ಕಾಲದಿಂದಲೂ ಅನ್ಯಭಾಷೆಯ ಆಕ್ರಮಣ, ದೌರ್ಜನ್ಯಗಳನ್ನು ಮೀರಿ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳೆದುಬಂದಿದೆ. ಜನಸಾಮಾನ್ಯರ ಸಂವಹನ ಮಾಧ್ಯಮವಾಗಿ ಉಳಿದು ಬಂದಿದೆ. ಸಿದ್ದಮಾದರಿಗಳನ್ನು ಒಡೆದು, ಪರಂಪರೆಯ ಸತ್ವವನ್ನು ಹೀರಿ ಕನ್ನಡತನ ಶತಮಾನಗಳಿಂದ ಉಳಿದು ಬಂದಿದೆ. ಹೀಗಾಗಿ ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ. ತಂತ್ರಜ್ಞಾನವನ್ನು ಪಳಗಿಸುವ ಮೂಲಕ ಕನ್ನಡ ಬೆಳೆಯಬೇಕು. ಹೀಗಾಗಿ ಐ.ಟಿ. ಯುಗದಲ್ಲಿಯೂ ಕನ್ನಡಕ್ಕೆ ಯಾವುದೇ ತೊಂದರೆಯಾಗದು. ಹಳೆಯದನ್ನು ಉಳಿಸಿಕೊಂಡು ಹೊಸದನ್ನು ಕಟ್ಟುವ ಸವಾಲು ನಮ್ಮ ಮುಂದಿದೆ ಎಂದು ಡಾ. ಕೆ.ವಿ. ನಾರಾಯಣ ಹೇಳಿದರು.
    ಅವರು ಕರ್ನಾಟಕ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಒಂಬತ್ತು ದಿನಗಳ ಸಾಹಿತ್ಯ ಕಲಾಕುಶಲೋಪರಿ ಸಂಸ್ಕೃತಿ ಸಲ್ಲಾಪ ೨೦೧೦ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಕಲಿಕೆಗೆ ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿವಾಣ ಹಾಕುತ್ತಿದೆ. ಅಭಿವೃದ್ಧಿ ಎಂಬುದು ಭಾಷೆ ಮತ್ತು ಸಂಸ್ಕೃತಿಯಿಂದ ಹೊರತಾಗಿಲ್ಲ. ಭಾಷೆಯ ವಿಶಯದಲ್ಲಿ ಮಿಶ್ರಸಂಸ್ಕೃತಿಯುಳ್ಳ ತುಳುನಾಡಿನಲ್ಲಿ ಕನ್ನಡದ ಕೆಲಸ ಸಾಕಷ್ಟು ಆಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸುರೇಂದ್ರರಾವ್ ಹೇಳಿದರು.
    ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಆರ್. ವೇದವ್ಯಾಸ ಶುಭಾಶಯದ ಮಾತುಗಳನ್ನು ಹೇಳೆದರು.
    ಕಾರ್ಯಕ್ರಮದ ಆರಂಭದಲ್ಲಿ ಪಾವನಗಂಗಾ ಪ್ರಾರ್ಥಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ವಂದಿಸಿದರು. ಡಾ. ಶ್ರೀಧರ ಎಚ್. ಜಿ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
    Read more...
    0

    ಹೊಸಬಗೆಯ ಸವಾಲುಗಳಿಗೆ ವಿದ್ಯಾರ್ಥಿಗಳು ಸಜ್ಜಾಗಬೇಕು- ಪ್ರೊ.ಎಂ.ಎನ್. ಚೆಟ್ಟಿಯಾರ್

  • ಡಾ.ಶ್ರೀಧರ ಎಚ್.ಜಿ.
  • ಫೆಬ್ರವರಿ ೨೧ : ಇಂದಿನದು ಸ್ಪರ್ಧಾತ್ಮಕ ಯುಗ. ಸಾಂಪ್ರದಾಕ ಪದವಿಯೊಂದಿಗೆ ವಿಷಯಕ್ಕೆ ಪೂರಕವಾದ ಹೆಚ್ಚುವರಿ ಮಾಹಿತಿಯನ್ನು ಇಂದಿನ ವಿದ್ಯಾರ್ಥಿಗಳು ಪಡೆಯುವ ಅಗತ್ಯವಿದೆ. ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ತರಬೇತಿಯ ಅಗತ್ಯವಿದೆ. ಹೊಸ ಬಗೆಯ ಸವಾಲುಗಳಿಗೆ ಇಂದಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಎನ್. ಚೆಟ್ಟಿಯಾರ್ ಹೇಳಿದರು.

    ಅವರು ವಿವೇಕಾನಂದ ಕಾಲೇಜಿನ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯು.ಜಿ.ಸಿ. ನೆಟ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಅನ್ಯಶಿಸ್ತುಗಳ ಅರಿವು, ಶೈಕ್ಷಣಿಕ ಬರವಣಿಗೆಯಲ್ಲಿನ ಸಾಂದ್ರ ಅನುಭವ, ವಿಭಿನ್ನ ರೀತಿಯ ಬರವಣಿಗೆಯ ಶೈಲಿ ವಿದ್ಯಾರ್ಥಿಗಳನ್ನು ಯಶಸ್ಸಿನ ಕಡೆಗೆ ಮುನ್ನಡೆಸಬಲ್ಲದು ಎಂದು ತರಬೇತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ಡಾ. ಕಲ್ಯಾಣಿ ವಲ್ಲತ್ಸ್, ತಿರುವನಂತಪುರ ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಎ.ವಿ.ನಾರಾಯಣ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ. ಬಾಲಕೃಷ್ಣ ನಾಯರ್ ಉಪಸ್ಥಿತರಿದ್ದರು.

    ಕಾರ್ಯಕ್ರಮದ ಆರಂಭದಲ್ಲಿ ಡಾ. ಎಚ್. ಮಾಧವ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಪ್ನ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು. ವಲ್ಲತ್ಸ್ ಟೋಟಲ್ ಇಂಗ್ಲಿಷ್ ಸಲ್ಯೂಶನ್ಸ್ ತಿರುವನಂತಪುರ ಕಾರ್ಯಾಗಾರವನ್ನು ನಡೆಸಿಕೊಟ್ಟರು.
    Read more...

    Thursday, February 18, 2010

    0

    ಡಾ.ಯು.ಪಿ.ಉಪಾಧ್ಯಾಯರಿಗೆ ಶಂಕರ ಸಾಹಿತ್ಯ ಪ್ರಶಸ್ತಿ

  • Thursday, February 18, 2010
  • ಡಾ.ಶ್ರೀಧರ ಎಚ್.ಜಿ.
  • ಸಿದ್ದಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ, ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಕೊಡಮಾಡುವ ಶಂಕರ ಸಾಹಿತ್ಯ ಪ್ರಶಸ್ತಿಗೆ ಸಂಶೋಧಕ, ಭಾಷಾ ಶಾಸ್ತ್ರಜ್ಞ ಡಾ.ಯು.ಪಿ.ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಮಾ.06ರಂದು ಅಪರಾಹ್ನ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ವಹಿಸಲಿದ್ದಾರೆ. ಹಿರಿಯಡ್ಕ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ, ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣುಭಟ್ಟ ನುಡಿಗೌರವ ಸಲ್ಲಿಸಲಿದ್ದಾರೆ.
    ಡಾ.ಪದ್ಮನಾಭ ಉಪಾಧ್ಯಾಯರು ೧೯೩೨ರಲ್ಲಿ ಜನಿಸಿದರು. ತಂದೆ ಸೀತಾರಾಮ ಉಪಧ್ಯಾಯ, ತಾಯಿ ಶ್ರೀಮತಿ ಜಲಜಾಕ್ಷಿ ಅಮ್ಮ. ಸಂಸ್ಕೃತ ವೈದಿಕ ವಿದ್ವಾಂಸರ ಮನೆತನ ಇವರದು. ೧೯೫೩ರಲ್ಲಿ ಮದ್ರಾಸ್ ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆ ಹೊಂದಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ವ್ಯಾಸಂಗ ಮಾಡಿದರು. ೧೯೫೫ರಲ್ಲಿ ಮದರಾಸಿನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಬಿ.ಎ. ಆನರ್ಸ್ ಮುಗಿಸಿ ಎಂ.ಎ. ಪದವಿಯನ್ನು ಪಡೆದರು. ಖಾಸಗಿಯಾಗಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದರು. ೧೯೫೯ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಂಸ್ಕೃತ -ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು.
    ಇಲ್ಲಿಂದ ಮುಂದೆ ಅವರು ಭಾಷಾವಿಜ್ಞಾನ, ಬುಡಕಟ್ಟು ಭಾಷಾಅಧ್ಯಯನ, ಕುರುಬ ಎಂಬ ಹೊಸ ಭಾಷೆಯ ಶೋಧನೆ ನಡೆಸಿದರು. ಈ ನಡುವೆ ಸ್ವಲ್ಪ ಸಮಯ ವೈಲಿನ್ ಅಭ್ಯಾಸವನ್ನೂ ಮಾಡಿದ್ದಿದೆ. ಕನ್ನಡ ಉಪಭಾಷೆಗಳ ತೌಲನಿಕ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಉಪಾಧ್ಯಾಯರು ೧೯೬೯ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ದಕ್ಷಿಣ ಭಾರತ ಭಾಷಾಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದ ಡಕಾರ್ ವಿಶ್ವವಿದ್ಯಾಲಯದಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ಇವರದು. ಲಂಡನ್, ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ ಆರು ತಿಂಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇದರೊಂದಿಗೆ ಸಿದ್ಧಸಮಾದಿ ಯೋಗ ಶಿಕ್ಷಕನಾಗಿ ೧೫೦ ಯೋಗ ಶಿಕ್ಷಣ ಶಿಬಿರಗಳನ್ನು ನಿರ್ವಹಿಸಿದ ಹಿರಿಮೆ ಇವರದು.
    ಉಡುಪಿ ಜಿಲ್ಲೆಯ ಕಾಪು್ವಿನ ಸಮೀಪದವರಾದ ಡಾ.ಉಳಿಯೂರು ಪದ್ಮನಾಭ ಉಪಾಧ್ಯಾಯ ಸಂಸ್ಕೃತ, ಕನ್ನಡ, ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳೊಂದಿಗೆ ಭಾಷಾಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ಪಡೆದವರು. ಅಲ್ಲದೆ ತುಳು, ಇಂಗ್ಲಿಷ್, ಆಫ್ರಿಕನ್, ಫ್ರೆಂಚ್ ಮೊದಲಾದ ಭಾಷೆಗಳಲ್ಲೂ ನುರಿತವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ವಿದ್ವತ್ಪೂರ್ಣ ಕೃತಿಗಳನ್ನು ಪ್ರಕಟಿಸಿದ್ದಾರೆ. ೧೮ ವರ್ಷಗಳ ಸತತ ಪರಿಶ್ರಮದೊಂದಿಗೆ ೬ ಸಂಪುಟಗಳ ವಿಶ್ವಕೋಶ ಮಾದರಿಯ ತುಳು ನಿಘಂಟು ಸಂಪಾದಿಸಿದ್ದು ಅನರ್ಘ್ಯ ಸಾಧನೆ.
    ಅನೇಕ ಭಾಷಾ ಬೋಧನಾ ಮಾಲಿಕೆಗಳನ್ನು, ಜಾನಪದ ಸಂಬಂಧೀ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಹಲವೆಡೆ ಅವರ ವೈಚಾರಿಕ ಲೇಖನಗಳು ಪ್ರಕಟವಾಗಿವೆ. ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಭಾ ಜೋಶಿ ಪ್ರಶಸ್ತಿ, ತಿರುವನಂತಪುರದ ಗುಂಡರ್ಟ್ ಪ್ರಶಸ್ತಿ, ತುಳುಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಮೊದಲಾದ ಹತ್ತುಹಲವು ಹಿರಿಮೆಗಳನ್ನು ಮುಡಿಗೇರಿಸಿಕೊಂಡ ಡಾ.ಉಪಾಧ್ಯಾಯರನ್ನು ಇದೀಗ ಪ್ರತ್ಠಿತ ಶಂಕರ ಸಾಹಿತ್ಯ ಪ್ರಶಸ್ತಿಯೂ ಅರಸಿಕೊಂಡು ಬಂದಿದೆ.
    ಡಾ. ಉಪಾಧ್ಯಾಯರು ಹಲವರಿಗೆ ಪಿಎಚ್.ಡಿ ಪದವಿಗಾಗಿ ಮಾರ್ಗದರ್ಶನ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪ್ರಭಾಕರ ಜೋಶಿ, ರಾಘವ ನಂಬಿಯಾರ್, ಎಸ್.ಡಿ. ಶೆಟ್ಟಿ, ಬಿ. ಜನಾರ್ದನ ಭಟ್ ಮೊದಲಾದವರು ಪಿಎಚ್.ಡಿ ಪದವಿಯನ್ನು ಗಳಿಸಿದ್ದಾರೆ. ಅಲ್ಲದೆ ಹಲವರು ವಿವಿಧ ವಿಷಯಗಳಿಗೆ ಇವರಿಂದ ಸಲಹೆ, ಸೂಚನೆಗಳನ್ನು ಪಡೆದು ಉಪಕೃತರಾಗಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು 06.೦3.2010ರಂದು ನಡೆಯಲಿದೆ.
    Read more...

    Saturday, February 6, 2010

    0

    ಕವನ : ನನ್ನಾಕೆಯ ಮನಸು

  • Saturday, February 6, 2010
  • ಡಾ.ಶ್ರೀಧರ ಎಚ್.ಜಿ.
  • ನನ್ನಾಕೆಯ ಮನಸು
    ಹೂತೋಟದ ಹಾಗೆ
    ನನ್ನಾಕೆಯ ಮಾತು
    ಮೊಗ್ಗರಳಿದ ಹಾಗೆ
    ಬಣ್ಣಬಣ್ಣದ ಹೂವು
    ಬಣ್ಣದ ಕೊಡೆ ಹಿಡಿದು
    ಮುದಗೊಳಿಸುವ ಹಾಗೆ
    ನನ್ನಾಕೆಯ ಮನಸು
    ತಂಗಾಳಿಗೆ ತಲೆದೂಗಿ
    ಪರಿಮಳವನು ಹರಡಿ
    ನಕ್ಕ ಮಲ್ಲಿಗೆಯ ಹಾಗೆ
    ನನ್ನಾಕೆಯ ಮನಸು
    ಹಸಿರಲ್ಲಿದೆ ಬದುಕು
    ಹಸಿರಿಲ್ಲದೆ ಕೊರಗು
    ಗಿಡವೆಂದರೆ ಮುಗ್ದತೆಯೆ
    ಮೈವೆತ್ತ ಮಕ್ಕಳ ಹಾಗೆ
    Read more...
    0

    ಶಬ್ದವಿಹಾರ :

  • ಡಾ.ಶ್ರೀಧರ ಎಚ್.ಜಿ.
  • ಅಳ್ಳಟ್ಟೆ : ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಕಾಣುವ ಒಂದು ಸಾಮಾನ್ಯ ದೃಶ್ಯ ಆಲೆಮನೆ. ಇಂದು ಅವುಗಳನ್ನು ನೋಡುವುದು ಅಪರೂಪವಾಗುತ್ತಿದೆ. ಆಲೆಕಣೆಗೆ ಕಬ್ಬನ್ನು ಕೊಟ್ಟು ರಸವನ್ನು ತೆಗೆದ ನಂತರ ಉಳಿಯುವ ಕಬ್ಬಿನ ಸಿಪ್ಪೆಯನ್ನು ಅಳ್ಳಟ್ಟೆ ಎಂದು ಕರೆಯುತ್ತಾರೆ.
    Read more...
    0

    ಹಸಿರು ಚಿಗುರು ಕಾದಂಬರಿಯ ಜೊತೆಗೆ . . .

  • ಡಾ.ಶ್ರೀಧರ ಎಚ್.ಜಿ.
  • ಶ್ರೀಮತಿ ಎ.ಪಿ. ಮಾಲತಿ ಕನ್ನಡದ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬರು. ಸಣ್ಣಕಥೆ, ಕಾದಂಬರಿ, ಕವನ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಇವರು ತಮ್ಮ ಪರಿಸರದ ಸಾಮಾಜಿಕ ಬಿಕ್ಕಟ್ಟುಗಳಿಗೆ ತಮ್ಮದೇ ರೀತಿಯಲ್ಲಿ ಧ್ವನಿ ನೀಡಿದವರು. ಅರ್ಧಾಂಗಿ, ಆಘಾತ, ಅನಿಶ್ಚಯ, ಹೊಸಹೆಜ್ಜೆ, ಮಿನುಗದ ಚುಕ್ಕೆ, ಸರಿದ ತೆರೆ, ಬದಲಾಗದವರು, ಸುಖದ ಹಾದಿ, ದೇವ, ತಿರುಗಿದ ಚಕ್ರ, ಪುನರ್ಮಿಲನ ಇತ್ಯಾದಿ ಇಪ್ಪತ್ತಕ್ಕಿಂತ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಮಾಲತಿಯವರು ಮೂಲತ: ಉತ್ತರ ಕನ್ನಡದ ಭಟ್ಕಳದವರು. ಪುತ್ತೂರಿನ ಕೃಷಿಕ ಕುಟುಂಬವನ್ನು ಸೇರಿದರೂ ಬರೆಯುವ ಆಸಕ್ತಿಯನ್ನು ಉಳಿಸಿಕೊಂಡವರು.
    ಇವರ ಬರವಣಿಗೆಯ ಹಾದಿಯನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೀವಮಾನದ ಸಾಧನೆಗೆ ನೀಡುವ `ಗೌರವ ಪ್ರಶಸ್ತಿ' ಮಾಲತಿಯವರ ಮುಡಿಗೇರಿದೆ. ಅಲ್ಲದೆ ಇವರ ಸುಖದಹಾದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಇದರೊಂದಿಗೆ ಭಾರ್ಗವಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ ಇತ್ಯಾದಿ ಹಲವು ಗೌರವ, ಪ್ರಶಸ್ತಿಗಳು ಇವರ ವಿವಿಧ ಕಾದಂಬರಿಗಳಿಗೆ ಬಂದಿವೆ. ದೇವ ಕಾದಂಬರಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವೂ ಆಗಿತ್ತು. ಇವರ ಕಥೆಗಳು ಧಾರವಾಹಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೂ ಇದೆ.
    ಎ.ಪಿ.ಮಾಲತಿಯವರ ಇತ್ತೀಚಿನ ಕೃತಿ `ಹಸಿರು ಚಿಗುರು' ಇಂದು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾದಂಬರಿ ಎಳೆಯ ತಲೆಮಾರಿನ ಮನೋಧರ್ಮದಲ್ಲಿ ಆಗುತ್ತಿರುವ ಬದಲಾವಣೆ, ಹಿರಿಯ ತಲೆಮಾರಿನೊಂದಿಗೆ ಹೊಂದಿಕೊಳ್ಳಲಾಗದ ಅವರ ಮನಸ್ಥಿತಿ, ನಗರ ಸಂಸ್ಕೃತಿಯ ಕಡೆಗೆ ಮುಖ ಮಾಡಿರುವ ತರುಣ ಜನಾಂಗದ ಚಿತ್ರ, ವಿಶೇಷ ಆರ್ಥಿಕವಲಯ, ಔದ್ಯೋಗೀಕರಣದ ಸಂದರ್ಭದಲ್ಲಿ ತಲ್ಲಣ, ಆತಂಕಗಳನ್ನು ಎದುರಿಸುತ್ತಿರುವ ಹಳ್ಳಿಗಳ ಬದುಕು, ಕಳೆದು ಹೋಗುತ್ತಿರುವ ಹಸಿರಿನ ನಡುವೆ ಬದುಕಿನ ಬೇರುಗಳನ್ನು ಅರಸಬೇಕೆಂಬ ಕಾದಂಬರಿಯ ಆಶಯ ಸಮಕಾಲೀನವಾದುದು. ಇದರೊಂದಿಗೆ ತಂದೆ, ಮಗ, ಸೊಸೆಯ ನಡುವೆ ಸಿಲುಕಿ ಮೂರಾಬಟ್ಟೆಯಾಗುತ್ತಿರುವ ಕೌಟುಂಬಿಕ ರಚನೆಯ ಕಡೆಗೆ ಕಾದಂಬರಿ ನಮ್ಮನ್ನು ಎಚ್ಚರಿಸುತ್ತದೆ. ಇವುಗಳ ನಡುವೆ ಕಿರಿಯ ತಲೆಮಾರು ತನ್ನ ಬೇರುಗಳನ್ನರಸಿ ಗ್ರಾಮೀಣ ಬದುಕಿನ ಕಡೆಗೆ ಮುಖಮಾಡಿ ನಿಲ್ಲುವ ಚಿತ್ರ ಅರ್ಥಪೂರ್ಣವಾಗಿದೆ. ಈ ದೃಷ್ಟಿಯಿಂದ ಕಿರಿಯ ತಲೆಮಾರಿನ ಶಶಾಂಕನ ಪಾತ್ರ ತೆಗೆದುಕೊಳ್ಳುವ ನಿರ್ಧಾರ ಕೃಷಿ ಸಂಸ್ಕೃತಿಪರವಾಗಿದೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗುತ್ತಿದೆ ಎಂಬುದೇ ಆತಂಕದ ವಿಷಯ.
    ಈ ಹಿನ್ನೆಲೆಯಲ್ಲಿ `ಹಸಿರು ಚಿಗುರು` ಕಾದಂಬರಿ ನಮ್ಮೊಳಗಿನ ಹಸಿರು ಸಂಸ್ಕೃತಿಯ ಚಿಗುರನ್ನು ಉಳಿಸಲು ಎಚ್ಚರಿಸುತ್ತದೆ. ನಗರ ಸಂಸ್ಕೃತಿಯ ಕಡೆಗೆ ವಲಸೆ ಹೋದವರು ಅಂತಿಮವಾಗಿ ಹಸಿರನ್ನರಸಿ ಹೋಗುವ ಅನಿವಾರ್ಯತೆಯನ್ನು ಕಾದಂಬರಿ ಗುರುತಿಸಿದೆ. ವಿಶ್ವದಾದ್ಯಂತ ಜಾಗತಿಕ ತಾಪಮಾನ, ಹಸಿರುಮನೆಯ ಬಗೆಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಹಿರಿಯರಾದ ಶ್ರೀಮತಿ ಎ.ಪಿ. ಮಾಲತಿಯವರ 'ಹಸಿರುಚಿಗುರು' ಕಾದಂಬರಿ ಬಂದಿರುವುದು ವರ್ತಮಾನದ ಚರ್ಚೆಗೆ ಹೊಸ ಆಯಾಮವನ್ನು ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ಹರಡಿಕೊಳ್ಳುವ ಅಗತ್ಯವಿದೆ.
    ಕರಾವಳಿಯ ಲೇಖಕಿ ಮತ್ತು ವಾಚಕಿಯರ ಸಂಘ ಈ ಕಾರ್ಯಕ್ರಮಕ್ಕೆ ಸಹಕರಿಸಿತ್ತು.


    Read more...

    Subscribe